ದೂರು ಕೊಟ್ಟರೂ ಎಫ್ ಐ ಆರ್ ದಾಖಲಾಗಿಲ್ಲ, ದೂರುದಾರರ ವಿರುದ್ಧವೇ ಕ್ರಮ ಜಾರಿ..ಇದೆಂಥಾ ಕಾನೂನು :ನೈಜ ಹೋರಾಟಗಾರರ ವೇದಿಕೆ ಪ್ರಶ್ನೆ
ಬೆಂಗಳೂರು/ತುಮಕೂರು: ಗುರುತರ ಹಾಗೂ ಗಂಭೀರವಾದ ಆರೋಪ ಎದುರಿಸುತ್ತಿರುವ ಅಧಿಕಾರಿ ಎಷ್ಟೇ ದೊಡ್ಡವನಾಗಿರಲಿ,ಪ್ರಭಾವಿಯಾಗಿರಲಿ,ಬಲಾಢ್ಯನಾಗಿರಲಿ ಆತ ತಪ್ಪಿತಸ್ಥ ಮಾತ್ರ. ಹುದ್ದೆಯ ಯೋಗ್ಯತೆ ಹಾಗೂ ಘನತೆಗೆ ಸಂಪೂರ್ಣ ಚ್ಯುತಿ ತಂದಿರುವವರನ್ನು ಜಾತಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವುದು,ಮಾಡಿರೋದು ತಪ್ಪೇ ಅಲ್ಲ ಎನ್ನುವಂತೆ ಬೆಂಬಲಕ್ಕೆ ನಿಲ್ಲುವುದನ್ನು ಯಾರೇ ಮಾಡಲಿ,ಅದು ನಾಗರಿಕ ನಡೆಯಲ್ಲ..ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಅವರ ವಿಚಾರದಲ್ಲಿ ನಡೆಯುತ್ತಿರುವುದು ಇಂತದ್ದೇ ತಪ್ಪು.ಜಿಲ್ಲಾಧಿಕಾರಿನೇ ತಪ್ಪಿತಸ್ಥ ಸ್ಥಾನದಲ್ಲಿ ನಿಂತಿರುವಾಗ ಅವರು ನಮ್ಮ ಜಾತಿ/ಕುಲ/ಸಮುದಾಯದವರೆನ್ನುವ ನೆಪ ಮುಂದೊಡ್ಡಿ ಇಡೀ ಪ್ರಕರಣವನ್ನೇ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವವರಿಗೆ ಧಿಕ್ಕಾರವಿರಲಿ..
ಜಿಲ್ಲಾಧಿಕಾರಿ ಶ್ರೀನಿವಾಸ್ ಅವರನ್ನು ಬೆಂಬಲಿಸುತ್ತಿರುವವರಿಗೆ ಬಹುಷಃ ಅವರ ಮೇಲಿರುವ ಆಪಾದನೆ ಎಂತದ್ದೆನ್ನುವ ಮಾಹಿತಿ ಇದ್ದಂತಿಲ್ಲ ಎನಿಸುತ್ತೆ.ಓರ್ವ ಜಿಲ್ಲಾಧಿಕಾರಿಯಾಗಿ ಅವರು ತಮ್ಮ ಹೊಣೆಗಾರಿಕೆಗೆ ವ್ಯತಿರಿಕ್ತವಾಗಿ ನಡೆದುಕೊಂಡು ನಾಗರಿಕ ಸಮಾಜವೇ ತಲೆತಗ್ಗಿಸುವ ಕೃತ್ಯ ಎಸಗಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ ಇಲ್ಲ,ಅವರು ಮಾಡಿದ್ದೇ ಸರಿ ಎನ್ನುವಂತೆ ವಾದ ಮಂಡಿಸುತ್ತಿರುವವರ ಜ್ಞಾನಕ್ಕೆ ಏನನ್ನಬೇಕೋ ಗೊತ್ತಾಗುತ್ತಿಲ್ಲ.ಶ್ರೀನಿವಾಸ್ ಅವರನ್ನು ಬೆಂಬಲಿಸುತ್ತಿರುವವರು ಕೂಡ ನೈತಿಕವಾಗಿ ಅವರಷ್ಟೇ ತಪ್ಪಿತಸ್ಥರೆಂದು ಅನಿವಾರ್ಯವಾಗಿ ಹೇಳಬೇಕಾಗುತ್ತದೆ.
“ಡಿಸಿ ವಿರುದ್ಧ ಕ್ರಮ ಏಕೆ ತೆಗೆದುಕೊಳ್ಳೊಕ್ಕಾಗೊಲ್ಲ..”
“ನಮ್ಮದು ಪ್ರಜಾಪ್ರಭುತ್ವವಲ್ವಾ.ಇಲ್ಲಿ ಯಾರೇ ತಪ್ಪು ಮಾಡಿದ್ರೂ ಅವರಿಗೆ ಸಮಾನವಾದ ಶಿಕ್ಷೆ ಎನ್ನುವ ನಿಯಮವಿದೆ.ಆದ್ರೆ ತುಮಕೂರು ಘಟನೆಯಲ್ಲಿ ಅದೇಕೋ ಸುಳ್ಳಾಗುವಂತೆ ಕಾಣ್ತಿದೆ. ಮೇಲ್ನೋಟಕ್ಕೆ ಡಿಸಿ ಮಾಡಿದ್ದು ಅಕ್ಷಮ್ಯ ಎನ್ನುವುದು ಕಣ್ಣಿಗೆ ರಾಚುವಂತಿದೆ.ಮಾದ್ಯಮಗಳು ಕೂಡ ಇದನ್ನು ಬಿಂಬಿಸಿವೆ.ಸಾಮಾಜಿಕ ಜಾಲತಾಣಗಳಲ್ಲಂತೂ ಇದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟೊಂದು ಸರವತ್ತಿನಲ್ಲಿ ಡಿಸಿ ಸಾಹೇಬರು ಅಲ್ಲಿಗೆ ಹೋಗುವಂಥ ಕಾರಣವೇನಿತ್ತೋ ಎನ್ನುವುದ ನ್ನು ಅವರೇ ಸ್ಪಷ್ಟಪಡಿಸಬೇಕಿದೆ.ಹಾಗೆ ಹೋದರೂ ಅದು ತಪ್ಪು..ಯಾಕೆ ಎನ್ನುವುದು ಜಿಲ್ಲಾಧಿಕಾರಿಗೇನೆ ಗೊತ್ತಿದೆ.ಅದನ್ನು ನಾವು ಮತ್ತೆ ಹೇಳಬೇಕಿಲ್ಲ.ಈ ಪ್ರಕರಣ ದಲ್ಲಿ ಡಿಸಿ ವಿರುದ್ಧ ಎಫ್ ಐಆರ್ ಆಗಲೇಬೇಕು.ತನಿಖೆ ನಡೆಯಲೇಬೇಕು.ಆದರೆ ಅವರನ್ನು ಬೆಂಬಲಿಸುವ ಕೆಲಸ ಕೆಲವರಿಂದ ನಡೆಯುತ್ತಿರುವುದು ದುರಾದೃಷ್ಟಕರ .ಯಾರು ಏನೇ ಅಂದರೂ ನೈಜ ಹೋರಾಟಗಾರರ ವೇದಿಕೆ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಹೋರಾಟ ಕೈಬಿಡುವುದಿಲ್ಲ”–ಎಚ್.ಎಂ.ವೆಂಕಟೇಶ್-ನೈಜ ಹೋರಾಟಗಾರರ ವೇದಿಕೆ ಸಂಚಾಲಕ
ತುಮಕೂರಿನ ಗೆದ್ದಲಹಳ್ಳಿಯ ಹಾಸ್ಟೆಲ್ ನಲ್ಲಿ ನಡೆದ ಘಟನೆ..ಅದರಲ್ಲಿ ಹೊಣೆಗಾರಿಕೆ ಮರೆತು ವರ್ತಿಸಿದರೆನ್ನುವ ಜಿಲ್ಲಾಧಿಕಾರಿ ವಿರುದ್ಧದ ಆಪಾದನೆ,ಆನಂತರ ಆ ಬಗ್ಗೆ ವ್ಯಕ್ತವಾದ ಪ್ರತಿಭಟನೆ,ಡಿಸಿ ಧೋರಣೆ ಖಂಡಿಸಿ ರಾಜ್ಯಾದ್ಯಂತ ವ್ಯಕ್ತವಾದ ಆಕ್ರೋಶ…ಈ ಎಲ್ಲಾ ಬೆಳವಣಿಗೆಗಳು ಇಡೀ ರಾಜ್ಯಕ್ಕೆ ಗೊತ್ತಿದೆ.ಆದರೆ ಘಟನೆ ನಂತರ ಪಡೆದುಕೊಂಡ ತಿರುವುಗಳಿವೆಯೆಲ್ಲಾ ಅದು ಮಾತ್ರ ಆತಂಕಕಾರಿ.ಜಿಲ್ಲಾಧಿಕಾರಿ ಶ್ರೀನಿವಾಸ್ ಮಾಡಿದ್ದು ತಪ್ಪೇ ಅಲ್ಲ ಎನ್ನುವಂತೆ ಬಿಂಬಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದು ದುರಂತ.ಅಲ್ಲಿ ಅನ್ಯಾಯವಾಗಿದ್ದು ಬಡ-ಅಮಾಯಕ-ನಿಷ್ಪಾಪಿ ಹೆಣ್ಣುಮಕ್ಕಳಿಗೆ ಅಂಥ ಗೊತ್ತಿದ್ದರೂ ಅವರೊಂದಿಗೆ ಏನೂ ನಡೆಯಲಿಲ್ಲ ಎನ್ನುವಂತೆ ಸಮರ್ಥಿಸಿಕೊಂಡವರಲ್ಲಿ ಅನೇಕರು ತಮಗೂ ಹೆಣ್ಣುಮಕ್ಕಳಿವೆ ಎನ್ನುವುದನ್ನು ಮರೆತಂತಿದ್ದರೇನೋ ಎಂದೆನಿಸಿದ್ದು ಸುಳ್ಳಲ್ಲ.
ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಯುವತಿಯರ ಹಾಸ್ಟೆಲ್ ಗೆ ಜಿಲ್ಲಾಧಿಕಾರಿ ಎನಿಸಿಕೊಂಡವರು ತಡರಾತ್ರಿ ತೆರಳಿದ್ದು ಸರಿನಾ.?ಹೆಣ್ಣು ಮಕ್ಕಳಿರುವ ಹಾಸ್ಟೆಲ್ ಗೆ ಆ ಸರಹೊತ್ತಿನಲ್ಲಿ ಹೋಗುವಂತ ದರ್ದಾದ್ರೂ ಜಿಲ್ಲಾಧಿಕಾರಿಗೆ ಏನಿತ್ತು..? ತುರ್ತು ಸನ್ನಿವೇಶವನ್ನು ಬಿಟ್ಟರೆ ಹಾಗೆ ದಿಢೀರ್ ಹೋಗೊಕ್ಕೆ ಕಾನೂನು ಅವರಿಗೆ ಅವಕಾಶ ಮಾಡಿಕೊಡುತ್ತಾ..? ಹಾಗೇನಾದ್ರೂ ಹೋಗುವಾಗ ಮಹಿಳಾ ಅಧಿಕಾರಿ ಎನಿಸಿಕೊಂಡವರನ್ನು ಜತೆಗಿಟ್ಟುಕೊಳ್ಳಬೇಕೆನ್ನುವ ಸಾಮಾನ್ಯ ಜ್ಞಾನ ಜಿಲ್ಲಾಧಿಕಾರಿಗೆ ಇಲ್ಲವಾಯದೆ ಹೋಯ್ತಾ ಎನ್ನುವುದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕೆನ್ನುವ ಉದ್ದೇಶದಲ್ಲಿ ಹೋರಾಟ ನಡೆಸುತ್ತಿರುವ ನೈಜ ಹೋರಾಟಗಾರರ ವೇದಿಕೆಯ ಪ್ರಶ್ನೆ.
“ಜಿಲ್ಲಾಧಿಕಾರಿ ಎಂದ್ರೆ ಜಿಲ್ಲೆಯ ಮೊದಲ ಕೂಲಿಕಾರ…”
“ಇದು ಅನೇಕರಿಗೆ ಗೊತ್ತೇ ಇಲ್ಲ ಎನಿಸುತ್ತೆ.ಹಾಗಾಗಿನೇ ಜಿಲ್ಲಾಧಿಕಾರಿಗಳೆಂದರೆ ಅವರನ್ನು ದೇವರೆಂದು ನೋಡುವ ಮನಸ್ಥಿತಿಗೆ ನಮ್ಮ ಜನ ತಲುಪಿದ್ದಾರೆ.ಆದರೆ ವಾಸ್ತವ ಅದಲ್ಲ.ಯಾರೇ ಡಿಸಿ ಜಿಲ್ಲೆಗೆ ಬರಲಿ,ಅವರು ಮೊದಲ ಕೂಲಿಕಾರ.ನಮ್ಮ ತೆರಿಗೆ ಹಣದಲ್ಲಿ ಅವರಿಗೆ ಸಂಬಳ-ಭತ್ಯೆ ಕೊಡುತ್ತೇವೆ.ಪರಿಸ್ತಿತಿ ಹಾಗಿರಬೇಕಾದರೆ ಜಿಲ್ಲಾಧಿಕಾರಿ ಎನಿಸಿಕೊಂಡವರು ಸ್ವೇಚ್ಛಾಚಾರದಿಂದ ನಡೆದುಕೊಳ್ಳಬಹುದಾ..? ತುಮಕೂರು ಪ್ರಕರಣದಲ್ಲಿ ಶ್ರೀನಿವಾಸ್ ನಡೆದುಕೊಂಡಿರುವುದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳಂಕ ತರುವಂತಿದೆ.ಈ ಪ್ರಕರಣವನ್ನು ಮುಚ್ಚಾಕುವ ಯತ್ನವೂ ನಡೆಯುತ್ತಿದೆ.ಆದರೆ ಇದಕ್ಕೆ ಸರ್ಕಾರ ಅವಕಾಶ ಕೊಡದೆ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆ ಕೊಡಬೇಕು.ಜಿಲ್ಲಾಧಿಕಾರಿನೇ ತಪ್ಪಿತಸ್ಥ ಎಂದು ಪ್ರೂವ್ ಆಗಿ ಶಿಕ್ಷೆಯಾದರೆ ಇತರೆ ಜಿಲ್ಲಾಧಿಕಾರಿಗಳ ನಡೆಯಲ್ಲಿ ಬದಲಾವಣೆ ಬರುವ ಸಾಧ್ಯತೆ ಇದೆ..ಹಾಗಾಗಿ ಸರ್ಕಾರ ಪ್ರಕರಣ ಮುಚ್ಚಾಕುವ ಬದಲು ಗಂಭೀರವಾಗಿ ಪರಿಗಣಿಸಬೇಕಿದೆ”–ಮಲ್ಲಿಕಾರ್ಜುನ್ ಭಟ್ರಳ್ಳಿ- ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ,ಸಾಮಾಜಿಕ ಹೋರಾಟಗಾರ
ಜಿಲ್ಲಾಧಿಕಾರಿ ಮಾಡಿದ್ದೇ ಸರಿ ಎನ್ನುವಂತೆ ಅವರನ್ನು ಸಮರ್ಥಿಸಿಕೊಳ್ಳುತ್ತಿರುವವರ ಮುಂದೆ ಸವಾಲಾಕಿ ಹೋರಾಟ ನಡೆಸುತ್ತಿರುವ ನೈಜ ಹೋರಾಟಗಾರರು ಡಿಸಿ ಕ್ರಮ ಪ್ರಶ್ನಿಸಿ ಮುಂದಿಟ್ಟಿರುವ ಪ್ರಶ್ನೆಗಳು ನಿಜಕ್ಕೂ ಮೌಲ್ಯಾಧಾರಿತವಾದಂತವು.ಹಾಸ್ಟೆಲ್ ಗೆ ಸರಹೊತ್ತಿನಲ್ಲಿ ತೆರಳಿದ ಜಿಲ್ಲಾಧಿಕಾರಿ ಶ್ರೀನಿವಾಸ್, ಅಸಂಬದ್ಧ ಅರ್ಥ ಕೊಡುವ ಕೆಲ ಸಿನಿಮಾ ಹಾಡುಗಳನ್ನು ಹಾಕಿಸಿದ್ದು, ಅದಕ್ಕೆ ಹದಿಹರೆಯದ ಯುವತಿಯರನ್ನು ಕುಣಿಯುವಂತೆ ಪ್ರಚೋದಿಸಿದ್ದು, ಸಾಲದ್ದಕ್ಕೆ ತಾನೊಬ್ಬ ಜಿಲ್ಲಾಧಿಕಾರಿ ಎನ್ನುವ ಪ್ರಜ್ಞೆ ಮರೆತು ಅವರೊಂದಿಗೆ ಕುಣಿದು ಕುಪ್ಪಳಿಸಿದ್ದು ಯಾವ ನಾಗರಿಕ ಸಮಾಜ ಒಪ್ಪುವಂತದ್ದು..ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಡಿಸಿ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿ ಹಾಗೇನು ನಡೆದೇ ಇಲ್ಲ ಎನ್ನುವಂತ ಕಥೆ ಕಟ್ಟುವ ಕೆಲಸ ನಡೆದಿದ್ದು ಸರಿನಾ ಎಂಬ ನೈಜ ಹೋರಾಟಗಾರರ ಪ್ರಶ್ನೆ ಇದೀಗ ವ್ಯಾಪಕ ಚರ್ಚೆಯನ್ನೇ ಹುಟ್ಟುಹಾಕಿದೆ ಎನ್ತಾರೆ ವೇದಿಕೆ ಸಂಚಾಲಕ ಎಚ್.ಎಂ.ವೆಂಕಟೇಶ್
ಹಾಸ್ಟೆಲ್ ನಲ್ಲಿ ಓದುತ್ತಿರುವ ಯುವತಿಯರದು ಆರ್ಥಿಕವಾಗಿ ತೀವ್ರ ಹಿಂದಿರುವ ಹಿನ್ನಲೆ ಎನ್ನುವ ಕಾರಣಕ್ಕೆ ಅವರೊಂದಿಗೆ ಮನಸೋಇಚ್ಛೆ ನಡೆದುಕೊಳ್ಳುವ ಕೆಲಸ ನಡೆಯಿತಾ..? ಅವರೊಂದಿಗೆ ಏನೇ ನಡುದ್ರೂ ಪೋಷಕರು ಪ್ರಶ್ನಿಸೊಲ್ಲ ಎನ್ನುವ ಉದ್ದೇಶದಲ್ಲಿ ಹೀಗೆ ಮಾಡಲಾಯಿತಾ..? ಬಡವರೆಂದಾಕ್ಷಣ ಅವರೊಂದಿಗೆ ಹೇಗೆ ಬೇಕಾದ್ರೂ ನಡೆದುಕೊಳ್ಳಬಹುದೆನ್ನುವ ಉಡಾಫೆ-ಉಢಾಳತನವಾ..? ಹೀಗೆ ನಾನಾ ಪ್ರಶ್ನೆಗಳನ್ನ ಮುಂದಿಟ್ಟಿುಕೊಂಡು ದೊಡ್ಡ ಮಟ್ಟದ ಹೋರಾಟವೇ ನಡೆಯುತ್ತಿದೆ.ತುಮಕೂರಿನಲ್ಲಿ ನಡೆದ ಘಟನೆಯನ್ನು ಮುಚ್ಚಾಕುವ ಯತ್ನ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ.ಕೆಲವು ಮಾದ್ಯಮಗಳ ಮೂಲಕ ಪ್ರಕರಣವನ್ನೇ ತಿರುಚುವ ಕೆಲಸ ಸರ್ಕಾರಿ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾಗಿದೆ.ಅಮಾಯಕರ ಮೇಲೆ ದೌರ್ಜನ್ಯ ನಡೆದಾಗ ಅದನ್ನು ಪೃಶ್ನಿಸಬೇಕಾದ ಮಾದ್ಯಮಗಳು ಹೊಣೆಗೇಡಿಗಳಂತೆ ಕೆಲಸ ಮಾಡಿದ್ದು ದುರಾದೃಷ್ಟಕರವೇ ಸರಿ ಎನ್ನುತ್ತಾರೆ ವೇದಿಕೆಯ ಹಂದ್ರಾಳ್ ನಾಗಭೂಷಣ್ .
ನವದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ನಂತರ ಅಪ್ರಾಪ್ತ ವಯಸ್ಸಿನ ಯುವತಿಯರ ಮೇಲೆ ನಡೆಯುವ ಯಾವುದೇ ದೋಷಾತ್ಮಕ ಅಪರಾಧ ಪ್ರಕರಣಗಳು ಕಂಡು ಬಂದ ತಕ್ಷಣ ಪೊಲೀಸರು ದೂರು ದಾಖಲಿಸಿಕೊಳ್ಳಬೇಕಾಗುತ್ತದೆ. ಆದರೆ ತುಮಕೂರಿನ ಪೊಲೀಸರು ಹಾಗೆ ಮಾಡಲೇ ಇಲ್ಲ.ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.ಅಲ್ಲಿ ಏನೂ ನಡೆಯಲೇ ಇಲ್ಲ ಎನ್ನುವಂತೆ ತಣ್ಣಗಿದ್ದರು.ಮಾದ್ಯಮಗಳಲ್ಲಿ ಬಂದರೂ ಅಧಿಕಾರಿಗಳ ಬೆನ್ನಿಗೆ ನಿಂತವರಂತೆ ನಡೆದುಕೊಂಡರು.ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವುದನ್ನು ಬಿಟ್ಟು ಹೊಣೆಗಾರಿಕೆ ಮರೆತವರಂತೆ ನಡೆದುಕೊಂಡರು.ಪೊಲೀಸರ ಮೌನ ಹಾಗೂ ನಿರ್ಲಕ್ಷ್ಯ ನೋಡಲಾಗದೆ ತುಮಕೂರು ಜಿಲ್ಲೆ ಮಧುಗಿರಿಯ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಹಂದ್ರಾಳ್ ನಾಗಭೂಷಣ್ ದೂರು ನೀಡಿದ್ರು.
ಪ್ರಕರಣದ ಗಂಭೀರತೆ ಅರಿತು ತತ್ ಕ್ಷಣಕ್ಕೆ ಪ್ರಥಮ ವರ್ತಮಾನ ವರದಿಯನ್ನು( FIR ) ದಾಖಲಿಸಿಕೊಳ್ಳಬೇಕಿದ್ದ ಪೊಲೀಸರು ಹಾಗೆ ಮಾಡಲೇ ಇಲ್ಲ.ಸುಮಾರು 5 ದಿನ ಕಳೆದರು ಸಹಾ FIR ದಾಖಲಿಸದ ಪೊಲೀಸರು, ಗೌರವಾನ್ವಿತ ಸುಪ್ರಿ೦ ಕೋರ್ಟ್ ಆದೇಶ ಲಲಿತಕುಮಾರಿ U/S ಯುನಿಯನ್ ಆಫ್ ಇಂಡಿಯಾ ಆದೇಶವನ್ನು ಸಂಪೂರ್ಣ ಉಲ್ಲಂಘಿಸಿದಂತಾಗಿದೆ.ಇದಕ್ಕೆ ಕಾರಣವಾದ ಕೊಡಿಗೇಹಳ್ಳಿ ಪೋಲೀಸರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ನೈಜ ಹೋರಾಟಗಾರರ ವೇದಿಕೆ ರಾಜ್ಯ ಪೊಲೀಸ್ ಮಹಾನಿರ್ದೆಶಕರಲ್ಲಿ ದೂರು ದಾಖಲಿಸಿ ಮನವಿ ಮಾಡಿದೆ.ಸಾಲದ್ದಕ್ಕೆ ಮಂಜುನಾಥ್, ಮಧುಗಿರಿ ಮಹೇಶ್, ಸತೀಶ್, ರಫಿಕ್ ಹಾಗೂ ಮಂಜುನಾಥ ತುಮಕೂರು’ ಶಿವಕುಮಾರ್ ಮಾಷ್ಟುಮನೆ ವಕೀಲರು, ಗಣೇಶ್ ವಕೀಲರು ಕುಣಿಗಲ್ ನರಸಿಂಹಮೂರ್ತಿ ಅವರನ್ನೊಳಗೊಂಡ ತಂಡ ಪ್ರತಿಭಟನೆಯನ್ನೂ ನಡೆಸಿದೆ.
ಅದೇನೇ ಆಗಲಿ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ನಡೆದುಕೊಂಡ ರೀತಿ ಹೆಣ್ಣುಮಕ್ಕಳನ್ನು ಗೌರವಿಸುವ ನಮ್ಮ ಸಮಾಜ ಒಪ್ಪುವಂತ ವಿಷಯವೇ ಅಲ್ಲ.ಒಂದ್ವೇಳೆ ಒಂದು ಹೆಣ್ಣುಮಗುವಿನ ತಂದೆಯಾಗಿದಿದ್ದರೆ ಬಹುಷಃ ಅವರೇ ಇದನ್ನು ಒಪ್ಪುತ್ತಿರಲಿಲ್ಲ ಎಂದೆನಿಸುತ್ತದೆ.ಮೇಲ್ಕಂಡ ಘಟನೆ ಹಿನ್ನಲೆಯಲ್ಲಿ ನೈತಿಕವಾಗಿ ಅವರು ತಪ್ಪೆಸಗಿರುವುದು ಬಹುತೇಕ ಸಾಬೀತಾಗಿದ್ದರೂ ಕಾನೂನು ಏನನ್ನು ನಿರ್ದರಿಸುತ್ತದೋ ಅದರ ಮೇಲೆ ಕ್ರಮ ಜಾರಿಯಾಗಲಿದೆ.ಆದ್ರೆ ನಮ್ಮ ಪೊಲೀಸರೇ ಅದಕ್ಕೆ ಮನಸು ಮಾಡಿದಂತಿಲ್ಲ ಎನಿಸುತ್ತೆ..ಹೀಗಿರುವಾಗ ನ್ಯಾಯದಾನದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದಾದರೂ ಹೇಗೆ..? ನಮ್ಮ ಪೊಲೀಸ್ ವ್ಯವಸ್ಥೆ ಇಷ್ಟೊಂದು ದುರ್ಬಲವಾದ್ರೆ,ಉಳ್ಳವರ ಪರವಾಗಿಬಿಟ್ರೆ ನ್ಯಾಯ ನಿರೀಕ್ಷೆ ಮಾಡುವುದಾದ್ರೂ ಹೇಗೆ..? ಹೀಗೊಂದು ಪ್ರಶ್ನೆ ಎಲ್ಲರನ್ನು ಕಾಡದೆ ಇರದು.