ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಆವರಿಸಿದೆ. ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕುರಿತಾದ ದಶಕಗಳ ಬಿಕ್ಕಟ್ಟು ಇದೀಗ ನೇರ ಮಿಲಿಟರಿ ಸಂಘರ್ಷಕ್ಕೆ ತಿರುಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಘೋಷಿಸಿದಂತೆ, “ಇಸ್ರೇಲ್ ರಾಜ್ಯಕ್ಕೆ ಎದುರಾಗಿರುವ ಬೆದರಿಕೆಗಳನ್ನು ನಿವಾರಿಸಲು” ಈ ಮುನ್ನೆಚ್ಚರಿಕಾ (Pre-emptive) ದಾಳಿಯನ್ನು ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ತೆಹರಾನ್‌ನ ಆಕಾಶದಲ್ಲಿ ಭಾರಿ ಸ್ಫೋಟಗಳ ಸದ್ದು ಕೇಳಿಬಂದಿದ್ದು, ನಗರದಾದ್ಯಂತ ಕಪ್ಪು ಹೊಗೆ ಆವರಿಸಿದೆ. ವರದಿಗಳ ಪ್ರಕಾರ, ಈ ದಾಳಿಯು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪದಲ್ಲಿ ನಡೆದಿದೆ. ಘಟನೆಯ ತೀವ್ರತೆಯನ್ನು ಗಮನಿಸಿ, ಖಮೇನಿ ಅವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ತೆಹರಾನ್ ಮಾತ್ರವಲ್ಲದೆ, ಇರಾನ್‌ನ ಇಸ್ಫಹಾನ್, ಕರಾಜ್ ಮತ್ತು ಖೊಮ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್‌ನೊಂದಿಗೆ ಈ ಯುದ್ಧದಲ್ಲಿ ಅಮೇರಿಕಾ ಭಾಗಿ
ಈ ಆಪರೇಷನ್‌ನಲ್ಲಿ ಅಮೆರಿಕದ ನೇರ ಭಾಗವಹಿಸುವಿಕೆ ಕಂಡುಬಂದಿದ್ದು, ಇಸ್ರೇಲಿ ಪಡೆಗಳೊಂದಿಗೆ ಸೇರಿ ಈ ಯೋಜಿತ ದಾಳಿಯನ್ನು ನಡೆಸಲಾಗಿದೆ. ಇರಾನ್‌ನ ಕ್ಷಿಪಣಿ ಉತ್ಪಾದನಾ ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳೇ ಮುಖ್ಯ ಗುರಿಯಾಗಿದ್ದವು ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದ್ದು, ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಇದನ್ನೂ ಓದಿ | ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ಹಣಕ್ಕಾಗಿ ಮುಗಿಬಿದ್ದ ಜನ!
ಅಮೆರಿಕದ ಮಿಲಿಟರಿ ಉಪಸ್ಥಿತಿ ಮತ್ತು ಇಸ್ರೇಲ್‌ನ ಈ ದಿಟ್ಟ ಕ್ರಮವು ಇರಾನ್‌ಗೆ ದೊಡ್ಡ ಆಘಾತ ನೀಡಿದೆ. ಪರಮಾಣು ಒಪ್ಪಂದದ ಕುರಿತು ದೀರ್ಘಕಾಲದಿಂದ ನಡೆಯುತ್ತಿದ್ದ ರಾಜತಾಂತ್ರಿಕ ಮಾತುಕತೆಗಳು ವಿಫಲವಾದ ಬಳಿಕ, ಇಸ್ರೇಲ್ ಈ ಕಠಿಣ ನಿರ್ಧಾರ ಕೈಗೊಂಡಿದೆ.










