ಬೆಂಗಳೂರು: ಪ್ರಸ್ತುತ ಜಾಗತಿಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಪರ್ಯಾಯ ಇಂಧನವಾಗಿ ಸೌದೆಯನ್ನು ಅವಲಂಬಿಸುವಂತಾಗಿದೆ. ಈ ಪರಿಸ್ಥಿತಿಯು ರಾಜ್ಯದ ಅರಣ್ಯ ಸಂಪತ್ತಿನ ಮೇಲೆ ನೇರವಾದ ಒತ್ತಡವನ್ನು ಉಂಟುಮಾಡುತ್ತಿದ್ದು, ಮರಗಳ ಅಕ್ರಮ ಕಡಿತ ತಡೆಯಲು ಅರಣ್ಯ ಇಲಾಖೆ ಈಗ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ.
ಅಧಿಕಾರಿಗಳೇ ನೇರ ಹೊಣೆ: ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. “ಗ್ಯಾಸ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜನರು ಅಥವಾ ಉದ್ಯಮಿಗಳು ಕಾಡಿನ ಮರಗಳನ್ನು ಕಡಿಯುವುದು ಅಕ್ಷಮ್ಯ. ಒಂದು ವೇಳೆ ಅಕ್ರಮವಾಗಿ ಮರ ಕಡಿಯುವ ಪ್ರಕರಣಗಳು ಕಂಡುಬಂದಲ್ಲಿ, ಆಯಾ ವ್ಯಾಪ್ತಿಯ ವಲಯ ಅರಣ್ಯಾಧಿಕಾರಿಗಳು (RFO) ಮತ್ತು ಸಿಬ್ಬಂದಿಯನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ.
ಅರಣ್ಯದ ಅಂಚಿನಲ್ಲಿರುವ ಗ್ರಾಮಗಳು, ಸರ್ಕಾರಿ ಭೂಮಿಗಳು ಮತ್ತು ರಸ್ತೆ ಬದಿಯ ಪ್ಲಾಂಟೇಶನ್‌ಗಳಲ್ಲಿ ಅಕ್ರಮ ಮರ ಕಡಿತದ ಸಾಧ್ಯತೆ ಹೆಚ್ಚಿರುವುದರಿಂದ, ಅರಣ್ಯ ಇಲಾಖೆಯ ಮೊಬೈಲ್ ಸ್ಕ್ವಾಡ್‌ಗಳು ಮತ್ತು ಗಸ್ತು ತಂಡಗಳನ್ನು ಚುರುಕುಗೊಳಿಸಲಾಗಿದೆ. ಅರಣ್ಯದ ಗಡಿ ಭಾಗಗಳಲ್ಲಿ ದಿನದ 24 ಗಂಟೆಯೂ ನಿಗಾ ಇರಿಸಲು ಸೂಚಿಸಲಾಗಿದೆ. ಸೌದೆಯನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ತಪಾಸಣೆ ಮತ್ತು ಶಂಕಿತ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್‌ಗಳಿಗೆ ಕಟ್ಟುನಿಟ್ಟಿನ ಆದೇಶ ರವಾನಿಸಲಾಗಿದೆ.
ವಾಣಿಜ್ಯ ಸಂಸ್ಥೆಗಳ ಮೇಲೆ ನಿಗಾ
ನಗರ ಪ್ರದೇಶದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅನಿಲ ಅಭಾವದಿಂದ ಸೌದೆಯ ಮೊರೆ ಹೋಗುತ್ತಿರುವುದು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಸೌದೆಯ ಬೇಡಿಕೆ ಹೆಚ್ಚಾದಂತೆ ಕಾಡುಗಳ ಮೇಲೆ ದಾಳಿ ನಡೆಯುವ ಸಂಭವವಿದೆ. ಹೀಗಾಗಿ, ಸೌದೆಯನ್ನು ಪೂರೈಸುವ ಮೂಲಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ | ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ
ಇಂಧನದ ಬಿಕ್ಕಟ್ಟು ಪರಿಸರ ನಾಶಕ್ಕೆ ಕಾರಣವಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಸಾರ್ವಜನಿಕರು ಸಹ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ.










