ಟಿ20 ವಿಶ್ವಕಪ್ ಸೂಪರ್-8: ಇಂದು ಜಿಂಬಾಬ್ವೆ ವಿರುದ್ಧ ಭಾರತದ ‘ಮಡು ಇಲ್ಲವೇ ಮಡಿ’ ಹೋರಾಟ!


ಚೆನ್ನೈ: ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ, ಇದೀಗ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಇಂದು ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಯುತ್ತಿದೆ. ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.

ದಕ್ಷಿಣ ಆಫ್ರಿಕಾ ಜಯ: ಭಾರತಕ್ಕೆ ನಿರಾಳತೆ!

ಇನ್ನೊಂದೆಡೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ನಾಯಕ ಏಡನ್ ಮಾರ್ಕ್ರಾಮ್ ಅಜೇಯ 82 (46 ಎಸೆತ) ಮತ್ತು ರಿಯಾನ್ ರಿಕೆಲ್ಟನ್ ಅಜೇಯ 45 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಫಲಿತಾಂಶ ಭಾರತಕ್ಕೆ ಒಂದು ರೀತಿಯಲ್ಲಿ ವರದಾನವಾಗಿದೆ. ದಕ್ಷಿಣ ಆಫ್ರಿಕಾದ ದೊಡ್ಡ ಗೆಲುವಿನಿಂದಾಗಿ ಭಾರತಕ್ಕೆ ಈಗ ನೆಟ್ ರನ್-ರೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಸೆಮಿಫೈನಲ್ ಪ್ರವೇಶಿಸಲು ಭಾರತ ತನ್ನ ಮುಂದಿನ ಉಳಿದ ಪಂದ್ಯಗಳನ್ನು ಗೆದ್ದರೆ ಸಾಕು.

ALSO READ :  ಖಾಸಗಿ ಸಂಸ್ಥೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಆದೇಶ

ಚೆಪಾಕ್‌ನಲ್ಲಿ ಜಿಂಬಾಬ್ವೆ ಸವಾಲು

ದಕ್ಷಿಣ ಆಫ್ರಿಕಾ ಎದುರಿನ ಸೋಲಿನಿಂದ ಕಂಗೆಟ್ಟಿರುವ ಸೂರ್ಯಕುಮಾರ್‌ ಯಾದವ್‌ ಪಡೆಗೆ ಇಂದಿನ ಪಂದ್ಯ ಸತ್ವಪರೀಕ್ಷೆಯಾಗಿದೆ. ಜಿಂಬಾಬ್ವೆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಏಕೆಂದರೆ ಈ ಹಂತದಲ್ಲಿ ಪ್ರತಿ ಪಂದ್ಯವೂ ಸೆಮಿಫೈನಲ್ ಸಮೀಕರಣವನ್ನು ಬದಲಿಸಬಲ್ಲದು.

ಸ್ಥಳ: ಎಂ.ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ.

ಸಮಯ: ಇಂದು ಸಂಜೆ 7:00 ಗಂಟೆಗೆ (ಭಾರತೀಯ ಕಾಲಮಾನ).

ಪಿಚ್ ವರದಿ: ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಭಾರತದ ಸ್ಪಿನ್ ಜೋಡಿಗಳು ಪಂದ್ಯದ ಗತಿಯನ್ನು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ | ಹ್ಯಾರಿ ಬ್ರೂಕ್ ಶತಕದ ಆರ್ಭಟ: ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

ಭಾರತಕ್ಕೆ ಗೆಲುವು ಅನಿವಾರ್ಯ

ಮೊದಲ ಪಂದ್ಯದ ಸೋಲಿನ ನಂತರ ಭಾರತ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿ ಲಯಕ್ಕೆ ಮರಳುವುದು ಟೀಂ ಇಂಡಿಯಾದ ಮೊದಲ ಗುರಿಯಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಕ್ರಮಾಂಕದ ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಇಂದಿನ ಪಂದ್ಯದಲ್ಲಿ ಹಿರಿಯ ಆಟಗಾರರು ಜವಾಬ್ದಾರಿಯುತ ಆಟವಾಡಬೇಕಿದೆ.


Leave a Comment