advertise here

Search

ಮಠದ ಶ್ರೀಮಂತಿಕೆ ಬಡವನಿಗೆ ಶಾಪವಾಯಿತೇ? – ಓದಿ ಕೆ.ಎಂ. ಶಿವಪ್ರಸಾದ್ ಅವರ ವಿಶೇಷ ಲೇಖನ!

adichunchanagiri math controversy

ಧರ್ಮ ಮತ್ತು ಸಮಾಜದ ಕೊಂಡಿಯಾಗಬೇಕಿದ್ದ ಮಠಗಳು ಇಂದು ಕೇವಲ ಉಳ್ಳವರ ಆಸರೆ ತಾಣಗಳಾಗುತ್ತಿದ್ದಾವೆಯೇ? ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯ ಕಟ್ಟುತ್ತಿರುವ ಮಠಾಧೀಶರಿಗೆ, ಮಠದ ಏಳಿಗೆಗಾಗಿ ಬೆವರು ಸುರಿಸಿದ ಸಾಮಾನ್ಯ ಭಕ್ತನ ಕಣ್ಣೀರು ಕಾಣಿಸುತ್ತಿಲ್ಲವೇ? ಇತ್ತೀಚೆಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ನಡೆ ಕುರಿತು ಕೇಳಿಬರುತ್ತಿರುವ ಪ್ರಶ್ನೆಗಳು ಈಗ ಕೇವಲ ಟೀಕೆಯಾಗಿ ಉಳಿದಿಲ್ಲ, ಅದೊಂದು ಸಮುದಾಯದ ಒಳಗಿನ ಬಂಡಾಯದ ಧ್ವನಿಯಾಗಿ ಮಾರ್ಪಡುತ್ತಿದೆ.

ಪತ್ರಕರ್ತ ಮತ್ತು ಅಂಕಣಕಾರರಾದ ಕೆ.ಎಂ. ಶಿವಪ್ರಸಾದ್ ಅವರು ಬರೆದಿರುವ ಮುಕ್ತ ಪತ್ರವು ಇಂದು ನಾಡಿನಾದ್ಯಂತ ಸಂಚಲನ ಮೂಡಿಸಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಆಕ್ರೋಶವಲ್ಲ, ಬದಲಿಗೆ ಮಠದ ಭಕ್ತಿಯ ನೆರಳಿನಲ್ಲಿ ಬೆಳೆದು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಕ್ಷಾಂತರ ಬಡ ಒಕ್ಕಲಿಗರ ಮನದಾಳದ ಕಿಚ್ಚಾಗಿದೆ.

ಪೀಠದ ಘನತೆ ಮತ್ತು ಸಾಮಾನ್ಯನ ಅಂತರ: ಸನ್ಯಾಸತ್ವಕ್ಕೆ ಯಾವುದು ಶೋಭೆ?

ಒಬ್ಬ ಸನ್ಯಾಸಿಗೆ ಸರ್ವರೂ ಸಮಾನರು ಎಂಬುದು ದಾರ್ಶನಿಕ ಸತ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆದಿಚುಂಚನಗಿರಿ ಮಠದ ಕಾರ್ಯಕ್ರಮಗಳು ಕೇವಲ ರಾಜಕಾರಣಿಗಳು, ಬೃಹತ್ ಉದ್ಯಮಿಗಳು ಮತ್ತು ಪ್ರಭಾವಿ ಅಧಿಕಾರಿಗಳ “ವೈಯಕ್ತಿಕ ಸಮಾರಂಭ”ಗಳಿಗೆ ಸೀಮಿತವಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.

ವರ್ಷದ 300 ದಿನಗಳನ್ನು ಉಳ್ಳವರಿಗಾಗಿ ಮೀಸಲಿಡುವ ಶ್ರೀಗಳು, ಕನಿಷ್ಠ 65 ದಿನಗಳನ್ನಾದರೂ ಹಳ್ಳಿಗಳ ಕಡೆಗೆ ಮುಖ ಮಾಡಿ ಸಾಮಾನ್ಯ ಭಕ್ತರಿಗಾಗಿ ಮೀಸಲಿಡಬಾರದೇಕೆ?.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಮಾತುಗಳಲ್ಲಿ ಬಳಕೆಯಾದ ಪದಗಳು ಕಠಿಣವಾಗಿರಬಹುದು, ಆದರೆ ಅದರ ಹಿಂದಿರುವ ನೋವು ಮಾತ್ರ ಅಪ್ಪಟ ಸತ್ಯ. “ಉಳ್ಳವರ ಸ್ವಾಮೀಜಿ” ಎಂಬ ಹಣೆಪಟ್ಟಿ ಪೀಠದ ಘನತೆಗೆ ತಕ್ಕುದಲ್ಲ.

ವ್ಯಾಪಾರೀಕರಣದ ಕಪಿಮುಷ್ಠಿಯಲ್ಲಿ ಅಕ್ಷರ ಮತ್ತು ಆರೋಗ್ಯ ದಾಸೋಹ ?

ಬಡ ಒಕ್ಕಲಿಗ ಮತ್ತು ಹಿಂದುಳಿದ ವರ್ಗದ ಜನರ ದಾನ-ಧರ್ಮದ ಹೆಸರಿನಲ್ಲಿ ನಿರ್ಮಾಣವಾದ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇಂದು ಅದೇ ಸಮುದಾಯದ ಬಡವನಿಗೆ “ಗಗನಕುಸುಮ”ವಾಗಿವೆ.

ಬಿಜಿಎಸ್ ಮತ್ತು ಮಠದ ಅಡಿಯಲ್ಲಿರುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಡ ರೈತನ ಮಕ್ಕಳಿಗೆ ಎಷ್ಟು ಸೀಟುಗಳು ಉಚಿತವಾಗಿ ಸಿಗುತ್ತಿವೆ? ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಲು ಸಾಧ್ಯವಾಗದ ಬಡವನಿಗೆ ಮಠದ ಸಂಸ್ಥೆಗಳು ಬಾಗಿಲು ಮುಚ್ಚುತ್ತಿವೆಯೇ?

ಅತ್ಯಾಧುನಿಕ ಆಸ್ಪತ್ರೆಗಳನ್ನು ಕಟ್ಟಿದರೂ, ಅಲ್ಲಿ ಚಿಕಿತ್ಸೆ ಪಡೆಯಲು ಸಾಮಾನ್ಯ ಒಕ್ಕಲಿಗ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ರೋಗಿಗಳಿಂದ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುವ ಮಠದ ಆಸ್ಪತ್ರೆಗಳು “ಸೇವೆ” ಎಂಬ ಪದದ ಅರ್ಥವನ್ನೇ ಮರೆತಿವೆಯೇ ಎಂಬ ಪ್ರಶ್ನೆ ಎದ್ದಿದೆ.

ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮಠದ ಪ್ರತಿಕ್ರಿಯೆ ಹೇಗಿರುತ್ತದೆ? ಎಷ್ಟು ರೈತ ಕುಟುಂಬಗಳಿಗೆ ಮಠದಿಂದ ಆರ್ಥಿಕ ನೆರವು ಹರಿದುಬಂದಿದೆ?

ALSO READ :  ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ: ವಿವಾದಿತ ಪಠ್ಯಪುಸ್ತಕ ಮಾರುಕಟ್ಟೆಯಿಂದ ಔಟ್

ಜಿಲ್ಲಾ ಕೇಂದ್ರಗಳಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಯುಪಿಎಸ್‌ಸಿ, ಕೆಪಿಎಸ್‌ಸಿ ಅಥವಾ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಮಠ ಯಾಕೆ ಆಸಕ್ತಿ ತೋರುತ್ತಿಲ್ಲ?. ನಗರಗಳಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಮತ್ತು ಸಣ್ಣ ಉದ್ಯೋಗಸ್ಥರಿಗೆ ಮಠದ ವತಿಯಿಂದ ಕೈಗೆಟಕುವ ದರದಲ್ಲಿ ಹಾಸ್ಟೆಲ್ ನಿರ್ಮಿಸಿಕೊಡುವ ಅಗತ್ಯವಿದೆ.

ಗ್ಲೋಬಲ್ ಮಠ… ಲೋಕಲ್ ದಾರಿದ್ರ್ಯ!

ವಿದೇಶಗಳಲ್ಲಿ ಶಾಖೆಗಳನ್ನು ತೆರೆಯುವ, ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಮಾಡುವ ಶ್ರೀಗಳಿಗೆ, ತಮ್ಮದೇ ಮೂಲ ಕ್ಷೇತ್ರವಾದ ಆದಿಚುಂಚನಗಿರಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲದಿರುವುದು ವಿಪರ್ಯಾಸ.

ಪ್ರತಿ ಭಾನುವಾರ ಲಕ್ಷಾಂತರ ಭಕ್ತರು ಭೇಟಿ ನೀಡುವ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲೇ ಗತಿಯಾಗಿರುವುದು “ದರಿದ್ರ ವ್ಯವಸ್ಥೆ”ಗೆ ಸಾಕ್ಷಿಯಾಗಿದೆ.

ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ಮಾಡುವ ಸಂಸ್ಥೆ, ಭಕ್ತರಿಗೆ ಕನಿಷ್ಠ ಸೌಲಭ್ಯ ನೀಡಲು ಯಾಕೆ ಮೀನಾಮೇಷ ಎಣಿಸುತ್ತಿದೆ? ಕೋಟಿಗಟ್ಟಲೆ ಆದಾಯವಿರುವ ಕ್ಷೇತ್ರದಲ್ಲಿ ಗಲೀಜು ಮುಕ್ತ ವಾತಾವರಣ ನಿರ್ಮಿಸಲು ವಿಫಲವಾಗಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಬದಲಾವಣೆಗೆ ಲೇಖಕರ ಆಯ್ದ ಹಕ್ಕೊತ್ತಾಯಗಳು:

ಲೇಖಕ ಕೆ.ಎಂ. ಶಿವಪ್ರಸಾದ್ ಅವರು ಸ್ವಾಮೀಜಿಗಳ ಮುಂದೆ ಕೆಲವು ಕ್ರಾಂತಿಕಾರಿ ಬೇಡಿಕೆಗಳನ್ನು ಇಟ್ಟಿದ್ದಾರೆ:

ಗ್ರಾಮೀಣ ಶಿಕ್ಷಣ: ಉಳ್ಳವರಿಂದ ಶುಲ್ಕ ವಸೂಲಿ ಮಾಡಿ, ಆದರೆ ರೈತರ ಮಕ್ಕಳಿಗೆ ಅತ್ಯುತ್ತಮ ದರ್ಜೆಯ ಶಿಕ್ಷಣವನ್ನು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನೀಡಿ.

ತಾಲ್ಲೂಕು ಭೇಟಿ: ತಿಂಗಳಿಗೆ ಕನಿಷ್ಠ ಎರಡು ದಿನ ವಿವಿಐಪಿಗಳಿಂದ ದೂರವಿದ್ದು, ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸಿ.

ರೈತರಿಗೆ ರಕ್ಷಾಕವಚ: ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಘೋಷಿಸಿ.

ಸರ್ಕಾರ ಮತ್ತು ಜನರ ನಡುವೆ ಕೊಂಡಿ: ಸರ್ಕಾರಗಳಿಂದ ಸೌಲಭ್ಯಗಳನ್ನು ಕೊಡಿಸುವಲ್ಲಿ ಮಠ ಕೇವಲ ರಾಜಕಾರಣಿಗಳ ಪರವಾಗಿರದೆ, ಜನರ ಪರವಾಗಿ ಧ್ವನಿ ಎತ್ತಲಿ.

ಇದನ್ನೂ ಓದಿ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕನಿಂದ ಭೂ ಅಕ್ರಮ!

“ಸ್ವಾಮೀಜಿಗಳು ದಾರಿ ತಪ್ಪಿದ್ದಾರೆ ಅಂತಲ್ಲ, ಆದರೆ ಅವರು ತುಳಿಯುತ್ತಿರುವ ಈ ದಾರಿ ಸರಿಯಲ್ಲ.” ಶ್ರೀಮಂತಿಕೆಯ ಅಮಲು ಮತ್ತು ಅಧಿಕಾರ ಕೇಂದ್ರಗಳ ವ್ಯಾಮೋಹ ಮಠವನ್ನು ಭಕ್ತರಿಂದ ದೂರ ಮಾಡಬಾರದು. ಭಕ್ತರ ಹುಂಡಿಯಲ್ಲಿ ಬೀಳುವ ಪ್ರತಿಯೊಂದು ರೂಪಾಯಿಯೂ ಮನುಕುಲದ ಉದ್ಧಾರಕ್ಕೆ ಬಳಕೆಯಾಗಬೇಕು. ಆದಿಚುಂಚನಗಿರಿ ಎನ್ನುವುದು ಕೇವಲ ಕಲ್ಲಿನ ಕಟ್ಟಡವಲ್ಲ, ಅದು ಲಕ್ಷಾಂತರ ರೈತರ ನಂಬಿಕೆಯ ಶಕ್ತಿಪೀಠ. ಈ ಶಕ್ತಿಪೀಠದ ಕೀರ್ತಿ ಉಳಿಯಬೇಕಾದರೆ, ಗುರುಗಳು ಉಳ್ಳವರ ಹಿತವನ್ನಷ್ಟೇ ಕಾಯುವುದನ್ನು ಬಿಟ್ಟು, ಇಲ್ಲದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.



Political News

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ 

ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ

ಅಡುಗೆ ಅನಿಲ ಬಿಕ್ಕಟ್ಟು: ಬಿಜೆಪಿ ಸಂಸದರ ಮೌನ ಖಂಡಿಸಿ, ಸಂಸತ್ತಿನಲ್ಲಿ ಧ್ವನಿ ಎತ್ತಲು ಡಿಕೆಶಿ ಆಗ್ರಹ!

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ‘ಗ್ರೀನ್ ಸಿಗ್ನಲ್’ ಕೊಟ್ಟ ಇರಾನ್!

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

Scroll to Top