ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಇತ್ತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಯುದ್ಧದ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಹೊಸದೊಂದು ರಾಜತಾಂತ್ರಿಕ ದಾಳ ಉರುಳಿಸಿದ್ದಾರೆ. ಇರಾನ್ ವಿರುದ್ಧದ ಈ ಯುದ್ಧದ ವೆಚ್ಚವನ್ನು ಅರಬ್ ರಾಷ್ಟ್ರಗಳೇ ಭರಿಸಬೇಕು ಎಂದು ಅಮೆರಿಕ ಈಗ ಪಟ್ಟು ಹಿಡಿದಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. “ಇರಾನ್ ಯುದ್ಧದ ವೆಚ್ಚವನ್ನು ಭರಿಸುವಂತೆ ಅರಬ್ ರಾಷ್ಟ್ರಗಳಿಗೆ ಕರೆ ನೀಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೆಚ್ಚಿನ ಆಸಕ್ತಿ ಇದೆ. ಈ ಪ್ರಾದೇಶಿಕ ಭದ್ರತೆಯ ಲಾಭ ಪಡೆಯುವ ರಾಷ್ಟ್ರಗಳು ಅದರ ಆರ್ಥಿಕ ಜವಾಬ್ದಾರಿಯನ್ನೂ ಹೊರಬೇಕು ಎಂಬುದು ಅಮೆರಿಕದ ಸ್ಪಷ್ಟ ನಿಲುವಾಗಿದೆ” ಎಂದು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಉಕ್ರೇನ್ ಮತ್ತು ಇಸ್ರೇಲ್‌ಗೆ ಶತಕೋಟಿ ಡಾಲರ್ ಸಹಾಯ ನೀಡಿರುವ ಅಮೆರಿಕದ ಬೊಕ್ಕಸ ಈಗ ಸಂಕಷ್ಟದಲ್ಲಿದೆ. ಅಮೆರಿಕದ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ದೇಶದ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಟ್ರಂಪ್ ಅವರು “ಅಮೆರಿಕಾ ಫಸ್ಟ್” (America First) ನೀತಿಯನ್ನು ಅನುಸರಿಸುತ್ತಿದ್ದಾರೆ. ಅರಬ್ ರಾಷ್ಟ್ರಗಳು, ವಿಶೇಷವಾಗಿ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಂತಹ ಶ್ರೀಮಂತ ರಾಷ್ಟ್ರಗಳು ತಮ್ಮ ಪ್ರದೇಶದ ಸ್ಥಿರತೆಗಾಗಿ ಹಣ ಹೂಡಿಕೆ ಮಾಡಬೇಕು ಎಂಬುದು ಟ್ರಂಪ್ ವಾದಗಿದೆ ಎನ್ನಲಾಗುತ್ತಿದೆ.
ಮಧ್ಯ ಪ್ರಾಚ್ಯದಲ್ಲಿ ಹೆಚ್ಚಿದ ಆತಂಕ
ಫೆಬ್ರವರಿ 28 ರಿಂದ ತೀವ್ರಗೊಂಡಿರುವ ಈ ಯುದ್ಧದಲ್ಲಿ ಅಮೆರಿಕ ನೇರವಾಗಿ ಇರಾನ್ ವಿರುದ್ಧ ಕಾರ್ಯಾಚರಣೆಗೆ ಇಳಿದರೆ, ಅದಕ್ಕೆ ತಗುಲುವ ಬಿಲಿಯನ್ ಡಾಲರ್ ವೆಚ್ಚವನ್ನು ಭರಿಸಲು ತಾನು ಸಿದ್ಧವಿಲ್ಲ ಎಂದು ಅಮೆರಿಕ ಪರೋಕ್ಷವಾಗಿ ಸಂದೇಶ ರವಾನಿಸಿದೆ. ಈ ಬೆಳವಣಿಗೆಯು ಅರಬ್ ರಾಷ್ಟ್ರಗಳಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆಯಿದೆ. ಏಕೆಂದರೆ, ಇರಾನ್ ವಿರುದ್ಧದ ಯುದ್ಧಕ್ಕೆ ಹಣ ನೀಡಿದರೆ ಅದು ಇರಾನ್‌ನ ನೇರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತದೆ ಎಂಬ ಆತಂಕ ಈ ರಾಷ್ಟ್ರಗಳಲ್ಲಿದೆ.
ಇದನ್ನೂ ಓದಿ | ಆರ್‌ಸಿಬಿ ಮ್ಯಾಚ್ ನಡುವೆ ಮೊಬೈಲ್ ಲೂಟಿ: ಕಿಲಾಡಿ ಅಂತರರಾಜ್ಯ ಗ್ಯಾಂಗ್ ಪೊಲೀಸ್ ಬಲೆಗೆ!
ಟ್ರಂಪ್ ಅವರ ಈ ನಡೆ ಜಗತ್ತಿಗೆ ಒಂದು ಸಂದೇಶವನ್ನು ನೀಡುತ್ತಿದೆ: “ಇನ್ನು ಮುಂದೆ ಅಮೆರಿಕ ಉಚಿತವಾಗಿ ಯಾರ ರಕ್ಷಣೆಯನ್ನೂ ಮಾಡುವುದಿಲ್ಲ”. ಇದು ಒಂದು ರೀತಿಯ ‘ವ್ಯಾಪಾರ ರಾಜತಾಂತ್ರಿಕತೆ’ಯಂತೆ ಕಾಣುತ್ತಿದೆ. ಅರಬ್ ರಾಷ್ಟ್ರಗಳು ಈ ಒತ್ತಾಯಕ್ಕೆ ಮಣಿಯುತ್ತವೆಯೇ? ಅಥವಾ ಚೀನಾ ಮತ್ತು ರಷ್ಯಾದಂತಹ ಪರ್ಯಾಯ ಶಕ್ತಿಗಳತ್ತ ಮುಖ ಮಾಡುತ್ತವೆಯೇ? ಎಂಬುದು ಮುಂದಿನ ದಿನಗಳಲ್ಲಿ ದೃಢಪಡಲಿದೆ. ಭಾರತದ ಪಾಲಿಗೆ ಇದು ತೈಲ ಬೆಲೆ ಏರಿಕೆಯ ಭೀತಿಯನ್ನು ಹೊತ್ತು ತಂದಿದೆ.










