ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ


ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷವು ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ 48ಕ್ಕೂ ಹೆಚ್ಚು ಉನ್ನತ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಫೆಬ್ರವರಿ 28ರಂದು ಆರಂಭವಾದ ಈ ಸೇನಾ ಕಾರ್ಯಾಚರಣೆಯನ್ನು ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಎಂದು ಹೆಸರಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫಾಕ್ಸ್ ನ್ಯೂಸ್‌ನೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ, “ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಈ ಕಾರ್ಯಾಚರಣೆಯಲ್ಲಿ ಸಾಧಿಸಿದ್ದೇವೆ. ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಅಳಿಸಿಹೋಗಿದ್ದಾರೆ,” ಎಂದು ತಿಳಿಸಿದ್ದಾರೆ. ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ನಿರ್ಣಾಮ ಮಾಡುವುದು ಮತ್ತು ಆ ದೇಶದ ನಾಯಕತ್ವವನ್ನು ಬದಲಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಪ್ರತೀಕಾರಕ್ಕೆ ಇರಾನ್ ಸಜ್ಜು:

ಈ ದಾಳಿಯ ನಂತರ ಇರಾನ್ ಸು ಮ್ಮನೆ ಕೂರದೆ, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದೆ. ಬೈತ್ ಶೆಮೆಶ್ ಮತ್ತು ಇಸ್ರೇಲ್‌ನ ಇತರ ಭಾಗಗಳಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಯಿಂದಾಗಿ ಅರಬ್ ರಾಷ್ಟ್ರಗಳು ಮತ್ತು ಇಡೀ ಜಾಗತಿಕ ಮಟ್ಟದಲ್ಲಿ ಆತಂಕ ಮನೆಮಾಡಿದೆ.

ALSO READ :  ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

ಇದನ್ನೂ ಓದಿ | ಇಸ್ರೇಲ್-ಇರಾನ್ ಸಂಘರ್ಷ: ವಾಯುಪ್ರದೇಶ ಮುಚ್ಚಿದ್ದರಿಂದ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ

ಜಾಗತಿಕ ಪ್ರತಿಕ್ರಿಯೆ:

ಅಮೆರಿಕ ಮತ್ತು ಇಸ್ರೇಲ್‌ನ ಈ ಕ್ರಮವನ್ನು ಹಲವು ದೇಶಗಳು ವಿರೋಧಿಸಿದ್ದರೆ, ಇರಾನ್‌ನೊಳಗಿನ ಕೆಲವರು ಬದಲಾವಣೆಯ ನಿರೀಕ್ಷೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇರಾನ್ ಈಗಾಗಲೇ ತನ್ನ ಆಂತರಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೊಸ ಮಧ್ಯಂತರ ನಾಯಕತ್ವವನ್ನು ರಚಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೂ, ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ವಿಮಾನಯಾನ ಸೇವೆಗಳ ಸ್ಥಗಿತ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಭಾರಿ ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದು ಇಡೀ ಜಗತ್ತಿನ ಕಳವಳಕ್ಕೆ ಕಾರಣವಾಗಿದೆ.


Leave a Comment