ರಾಜ್ಯದಲ್ಲಿ ಮುಂಗಾರು ಜೂನ್ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹಿರಿಯ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಮೇ 7 ರಿಂದ ಮೇ 13 ರವರೆಗೆ ಕರ್ನಾಟಕದ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಸಿ.ಎಸ್. ಪಾಟೀಲ್ ಅವರ ಪ್ರಕಾರ, ಮೇ 7 ರಿಂದ 13 ರವರೆಗೆ ರಾಜ್ಯದ ಶೇಕಡ 25ಕ್ಕಿಂತ ಕಡಿಮೆ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಇದೇ ಅವಧಿಯಲ್ಲಿ ರಾಜ್ಯದಲ್ಲಿ ಬಿಸಿಲಿನ ತಾಪಮಾನವೂ ಏರಿಕೆಯಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41 ರಿಂದ 43 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು.
ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ಹಾಗೂ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರದ ಗರಿಷ್ಠ ಉಷ್ಣಾಂಶ 34 ರಿಂದ 36 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಮಳೆ ಬೀಳುವ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇರುವುದರಿಂದ ಮೀನುಗಾರರು ಎಚ್ಚರದಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೇಸಿಗೆಯಲ್ಲಿ ಅಕಾಲಿಕ ಮಳೆಯೊಂದಿಗೆ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಾದರೆ ರೈತರಿಗೆ ತೊಂದರೆಯಾಗಬಹುದು ಎಂದು ಸಿ.ಎಸ್. ಪಾಟೀಲ್ ಹೇಳಿದ್ದಾರೆ. ಮಾವಿನ ಮರಗಳು ಹೂವು ಮತ್ತು ಕಾಯಿ ಬಿಡುವ ಹಂತದಲ್ಲಿರುವುದರಿಂದ ಅಂತಹ ಮಳೆ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟುಮಾಡಬಹುದು ಎಂದಿದ್ದಾರೆ.
ಮುಂಗಾರು ಆಗಮನದ ನಿರೀಕ್ಷೆ
- ಈ ವರ್ಷ ಮುಂಗಾರು ಮಳೆಯ ಆರಂಭಕ್ಕಾಗಿ ರಾಜ್ಯದ ರೈತರು ಕಾತರದಿಂದ ಕಾಯುತ್ತಿದ್ದಾರೆ.
- ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದರೂ, ಮುಂಗಾರಿನ ನಿಖರ ದಿನಾಂಕದ ಬಗ್ಗೆ ಒಂದಷ್ಟು ಗೊಂದಲಗಳಿದ್ದವು.
- ಹವಾಮಾನ ಇಲಾಖೆಯ ಈ ಮಾಹಿತಿಯಿಂದ ಗೊಂದಲಕ್ಕೆ ತೆರೆ ಬಿದ್ದಿದೆ.
ಹವಾಮಾನ ಇಲಾಖೆಯ ಎಚ್ಚರಿಕೆ
- ಸಮುದ್ರದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಾಧ್ಯತೆ ಇರುವುದರಿಂದ ಮೀನುಗಾರರು ಎಚ್ಚರ ವಹಿಸಬೇಕು ಎಂದು ಸಿ.ಎಸ್. ಪಾಟೀಲ್ ಸಲಹೆ ನೀಡಿದ್ದಾರೆ.
- ಕೇವಲ ಮಳೆಯಿಂದ ರೈತರಿಗೆ ಅಷ್ಟಾಗಿ ತೊಂದರೆ ಆಗುವುದಿಲ್ಲ, ಆದರೆ ಗಾಳಿ ಮತ್ತು ಆಲಿಕಲ್ಲು ಮಳೆ ತೋಟಗಾರಿಕಾ ಬೆಳೆಗಳಿಗೆ ಹಾನಿ ಮಾಡಬಹುದು ಎಂದಿದ್ದಾರೆ.
- ಮುಂದಿನ ಒಂದು ವಾರ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ.
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಮುಂದುವರೆಯಲಿದೆ.
- ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಬಗ್ಗೆ ಈಗ ಸ್ಪಷ್ಟ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ:
ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್
