ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್


ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ ಮುಂದುವರೆದ ಸಾಹಸವೇ ಪೊಲಿಟಿಕಲ್ 360 ಮ್ಯಾಗಝೀನ್.

ಇವತ್ತಿಗೂ ಪತ್ರಿಕೋದ್ಯಮದಲ್ಲಿ, ಸಂಪೂರ್ಣ ಹಾಗು ಸಮಗ್ರ ರಾಜಕೀಯ ವಿದ್ಯಾಮಾನಗಳನ್ನು ಹೊತ್ತ ಪತ್ರಿಕೆ-ಮ್ಯಾಗಝೀನ್ ಗಳ ಕೊರತೆಯಿದೆ.ರಾಜಕೀಯ ಯಾವಾಗ್ಲೂ ರೋಚಕ ಹಾಗೂ ಕುತೂಹಲಕರವಾದ ಕ್ಷೇತ್ರವಾಗಿರುವುದರಿಂದ ಅಲ್ಲಿ ವ್ಯಕ್ತಿ ಹಾಗೂ ವಿದ್ಯಾಮಾನಗಳು ಸದಾ ಕೌತುಕವನ್ನು ಹಿಡಿದಿಟ್ಟುಕೊಂಡಿರುತ್ತವೆ.ಅಲ್ಲಿ ನಡೆಯುವ ವಿದ್ಯಾಮಾನ ಹಾಗೂ ಬೆಳವಣಿಗೆಗಳನ್ನು ಝಲಕ್ ಆಗಿ ತೋರಿಸಿ ಸುಮ್ಮನಾಗುವ ಸ್ಥಿತಿ ಮಾದ್ಯಮಗಳಲ್ಲಿರುವ ಸನ್ನಿವೇಶದಲ್ಲಿ, ರಾಜಕೀಯಕ್ಕೆಂದೇ ಪ್ರತ್ಯೇಕ ಹಾಗೂ ನಿರ್ದಿಷ್ಟವಾಗಿ ಒಂದು ಮ್ಯಾಜಗೀನ್ ತರುವ ಪ್ರಯತ್ನಗಳಾಗಿದ್ದು ತೀರಾ ಕಡಿಮೆ.ಅದರಲ್ಲೂ ಓದುಗರ ಮನಸ್ಥಿತಿಯ ಮಾತು ಹಾಳಾಗಿ ಹೋಗ್ಲಿ, ಪತ್ರಕರ್ತರಲ್ಲೇ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆ ಆಗಿರುವ ಸಂದರ್ಭದಲ್ಲಿ ಆ ನಿರ್ವಾತವನ್ನು ತುಂಬುವ ನಿರ್ದಾರ-ಸಂಕಲ್ಪದ ಭಾಗವಾಗಿ ಪತ್ರಕರ್ತ ಪುಟ್ಟಪ್ಪ ಪೊಲಿಟಿಕಲ್-360 ಮ್ಯಾಗಝೀನ್ ಹೊರತರೊಕ್ಕೆ ಮುಂದಾಗಿದ್ದಾನೆ.

ಪತ್ರಿಕೋದ್ಯಮದಲ್ಲಿ ಏನಾದರೊಂದು ಹೊಸತನ್ನು ಮಾಡಬೇಕೆನ್ನುವ ತುಡಿತವಿರುವ ಪುಟ್ಟಪ್ಪ ಕಸ್ತೂರಿ ಚಾನೆಲ್ ನ್ನು ರೀ ಲಾಂಚ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದ.ಆತ ಯಾರನ್ನು ನಂಬಿದ್ನೋ ಅವರು ಈತನಿಗೆ ಸಂಪೂರ್ಣವಾದ ಸಹಕಾರ ಕೊಟ್ಟಿದ್ದರೆ ಇವತ್ತು ಆ ಚಾನೆಲ್ ಜೀವಂತವಾಗಿರುತ್ತಿತ್ತೇನೋ ಗೊತ್ತಿಲ್ಲ.ಕಸ್ತೂರಿ ಕಟ್ಟೊಕ್ಕೆ ಈತನನ್ನು ಬಳಸಿಕೊಂಡವರೆನ್ನಲಾದವ್ರು ಕೈ ಕೊಟ್ಟಾಗ ಅನಿವಾರ್ಯವಾಗಿ ತನ್ನದೇ ಬ್ರ್ಯಾಂಡ್ ಪೊಲಿಟಿಕಲ್-360 ಯನ್ನೇ ಚಾನೆಲ್ ಮಾಡ್ಲಿಕ್ಕೆ ಹೋದ.ಆದ್ರೆ ಅನುಭವದ ಕೊರತೆ ಆತನ ಕೈ ಕಚ್ಚಿತು.ಅದು ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಿತ್ತು.ಆ ದಿನಗಳಲ್ಲಿ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಇದರ ಬಗ್ಗೆ ಸುದ್ದಿ ಮಾಡಿತ್ತು.ಅದು ಕೊಟ್ಟ ಕೆಟ್ಟ ಅನುಭವ ಮರೆಯೊಕ್ಕೆ ಅಜ್ನಾತವಾಗುಳಿಯಬೇಕಾಗಿ ಬಂತು.ಆದರೆ ಸುಮ್ಮನೆ ಕೂರದೆ ಕಳೆದುಕೊಂಡಲ್ಲಿಯೇ ಹುಡುಕಿ ದಕ್ಕಿಸಿಕೊಳ್ಳಬೇಕೆನ್ನುವ ಛಲದಲ್ಲಿ ಒಂದಷ್ಟು ತಿಂಗಳು ಹೋಂವರ್ಕ್ ಮಾಡಿ ಪೊಲಿಟಿಕಲ್ 360 ಹೆಸರಿನಲ್ಲೇ ಮಾಸಿಕ ಮ್ಯಾಗಝೀನ್ ನೊಂದಾಯಿಸಿ ಅದನ್ನು ಲಾಂಚ್ ಮಾಡ್ಲಿಕ್ಕೆ ಮುಹೂರ್ತವನ್ನು ಫಿಕ್ಸ್ ಮಾಡಿಯೇ ತೀರಿದ್ದಾನೆ.ಆತನ ಛಲ-ಆತ್ಮವಿಶ್ವಾಸಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.

ALSO READ :  ಸರಿಯಾಗಿ ಬಟ್ಟೆ ಹಾಕದಿದ್ದರೆ ಆಸಿಡ್ ಹಾಕುವೆ ಎಂದು ಬೆದರಿಸಿದ್ದ ಬೆಂಗಳೂರಿನ ಉದ್ಯೋಗಿ ವಜಾ!

ಅಂದ್ಹಾಗೆ ನಾಳೆ ಸಂಜೆ 5 ಗಂಟೆಗೆ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ದಿ ಲಲಿತ್ ಅಶೋಕ್ ಹೊಟೇಲ್ ನ ದಿ ಗ್ರ್ಯಾಂಡ್ ಬಾಲ್ ರೂಮ್ ನಲ್ಲಿ ಮ್ಯಾಗಝೀನ್ ಲೋಕಾರ್ಪಣೆ ನಡೆಯಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮ್ಯಾಗಝೀನ್ ಲೋಕಾರ್ಪಣೆ ಮಾಡಲಿದ್ದಾರೆ.ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತರಿರಲಿದ್ದಾರೆ.ಇನ್ನುಳಿದಂತೆ ಮಾಜಿ ಸಚಿವ ಡಿ.ಟಿ ದೇವೇಗೌಡ,ಎಮ್ಮೆಲ್ಸಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್,ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವೇದಿಕೆಯಲ್ಲಿ ಇರಲಿದ್ದಾರೆ. ಪುಟ್ಟಪ್ಪನ ಆತ್ಮೀಯರಾದ ನಟ ಡಾಲಿ ಧನಂಜಯ್, ದುನಿಯಾ ವಿಜಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೋಲುಗಳು ಕಲಿಸಿಕೊಡುವ ಪಾಠಗಳು ಬದುಕನ್ನು ವ್ಯವಸ್ಥಿತ ಹಾಗೂ ಜಾಗರೂಕತೆಯಿಂದ ನಿರ್ವಹಿಸಲು ಕಲಿಸಿಕೊಡುತ್ತವೆ ಎನ್ನುವಂತೆ ಗೆಳೆಯ ಪುಟ್ಟಪ್ಪ ಕೂಡ ಸಾಕಷ್ಟು ನೋವು-ಸೋಲು-ಹತಾಷೆ ಅನುಭವಿಸಿ ಇದೀಗ ಅದು ಕಲಿಸಿಕೊಟ್ಟ ಪಾಠವನ್ನೇ ಗೆಲ್ಲೊಕ್ಕೆ ಅಸ್ತ್ರವಾಗಿ,ಮೆಟ್ಟಿಲನ್ನಾಗಿ ಬಳಸಿಕೊಳ್ಳಲು ಹೊರಟಿದ್ದಾನೆ.ಗೆಳೆಯನ ಈ ಪ್ರಯತ್ನಕ್ಕೆ ಒಂದು ಆಲ್ ದಿ ಬೆಸ್ಟ್..ನಾಳೆಯ ಕಾರ್ಯಕ್ರಮಕ್ಕೆ ಪತ್ರಕರ್ತ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಈ ಮೂಲಕ ಪುಟ್ಟಪ್ಪ ಮನವಿ ಮಾಡಿಕೊಂಡಿದ್ದಾನೆ. ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದೆ.


Leave a Comment