ವಿಶ್ವವಿಖ್ಯಾತ “ಉರಗ” ಸಂಶೋಧಕ ಡಾ.ಗೌರಿಶಂಕರ್‌ ಗೆ “ಹೈಕೋರ್ಟ್‌” ಕ್ಲೀನ್‌ಚಿಟ್..


ವಿಶ್ವವಿಖ್ಯಾತ ಉರಗ ಸಂಶೋಧಕ ಡಾ. ಪಿ. ಗೌರಿಶಂಕರ್
ವಿಶ್ವವಿಖ್ಯಾತ ಉರಗ ಸಂಶೋಧಕ ಡಾ. ಪಿ. ಗೌರಿಶಂಕರ್

ಶಿವಮೊಗ್ಗ / ಬೆಂಗಳೂರು: ಕಾಳಿಂಗ ಸರ್ಪದ ಫೋಟೋ ತೆಗೆದಿದ್ದೇ ಈ ವಿಶ್ವವಿಖ್ಯಾತ ಉರಗ ಸಂಶೋಧಕನ ಬದುಕಿಗೆ ಮುಳುವಾಗಿಬಿಡ್ತಾ..?ಅವರ ವಿರುದ್ದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ರಿಮಿನಲ್ ಕೇಸ್‌ ದಾಖ ಲಿಸೊಕ್ಕೆ  ಕಾರಣವಾಗಿತ್ತಾ? ಆದರೆ ಕೊನೆಗೂ ನ್ಯಾಯವೇ ಗೆಲ್ಲುವುದು ಎನ್ನುವುದಕ್ಕೆ ಈ ಪ್ರಕರಣ ಜೀವಂತ ನಿದರ್ಶನ ಎನ್ನಬಹುದು.

ಹೌದು, ವಿಶ್ವವಿಖ್ಯಾತ ಉರಗ ಸಂಶೋಧಕ ಡಾ. ಪಿ. ಗೌರಿಶಂಕರ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ಫುಲ್ ಸ್ಟಾಪ್ ಇಟ್ಟಿದೆ. ಉರಗ ಸಂಶೋಧಕನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನಿರಾಧಾರ ಎಂದು ಕೊನೆಗೊಳಿಸಿದೆ.ಅವರ ವಿರುದ್ಧ ಮಾಡಲಾಗಿದ್ದ ಆಪಾದನೆ ಗಳೆಲ್ಲವೂ ಸುಳ್ಳು ಎಂದು ತಿಳಿಸಿದೆ. ಈ ಮೂಲಕ ಗೌರಿಶಂಕರ್‌ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

ಅಂದಹಾಗೆ ಇಡೀ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣವಿದು.ಕಾಳಿಂಗ ಸರ್ಪವನ್ನು ಸೆರೆಹಿಡಿದು ಬಂಧನದಲ್ಲಿರಿಸಿ, ಫೋಟೋ ತೆಗೆದಿದ್ದಾರೆ ಎಂಬ ಆರೋಪದ ಮೇಲೆ ಅರಣ್ಯ ಇಲಾಖೆ ಡಾ.ಪಿ ಗೌರಿಶಂಕರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಫೋಟೋ ಮತ್ತು ವಿಡಿ ಯೋಗಳನ್ನೇ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿತ್ತು. ಆದರೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ದೋಷಾರೋಪಣಾ ಪಟ್ಟಿಯ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠಕ್ಕೆ ಮಹತ್ವದ ಅಂಶ ಕಂಡು ಬಂದಿದೆ. ಗೌರಿಶಂಕರ್ ಕಾಳಿಂಗ ಸರ್ಪವನ್ನು ಬಂಧನದಲ್ಲಿಟ್ಟಿದ್ದರು ಅಥವಾ ಅದಕ್ಕೆ ಹಾನಿ ಮಾಡಿದ್ದರು ಎಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಹೀಗಾಗಿ ನವೆಂಬರ್ 2ರಂದು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಕೇವಲ ಫೋಟೋ ಮತ್ತು ವಿಡಿಯೋಗಳ ಆಧಾರದಲ್ಲಿ ಅಪರಾಧ ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ. 

 ಈ ಬಗ್ಗೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೌರಿಶಂಕರ್‌ ಅವರನ್ನು ಮಾತನಾಡಿಸಿತು.ಈ ವೇಳೆ ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನಗೆ ಮಹತ್ವದ ಜಯ ಸಿಕ್ಕಿದೆ.ನ್ಯಾಯಾಲಯ ನನ್ನ ಅಹವಾಲನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. ನನ್ನ ವಿರುದ್ಧ ನಡೆದಿದ್ದು ಕೇವಲ ಷಡ್ಯಂತ್ರ ಎನ್ನುವುದನ್ನು ಸಾಕ್ಷ್ಯಗಳ ಮೂಲಕ  ನ್ಯಾಯಾಲಯದ ಗಮನಕ್ಕೆ ತಂದಿದ್ದೆವು.ಅವೆಲ್ಲಾ ಕೋರ್ಟ್‌ ಗೆ ಜಿನೈನ್‌ ಎನಿಸಿದೆ.ಹಾಗಾಗಿ ನನ್ನ ವಿರುದ್ಧದ ಆಪಾದೆನಗಳೆಲ್ಲವೂ ಸತ್ಯಕ್ಕೆ ದೂರ ಎಂದು ತೀರ್ಮಾನಿಸಿ ನನಗೆ ನ್ಯಾಯವನ್ನು ಕೋರ್ಟ್‌ ನೀಡಿದೆ.ಇದು ನನ್ನ ದಶಕಗಳವರೆಗಿನ ಬದ್ಧತೆಯ ಕೆಲಸಕ್ಕೆ ಸಿಕ್ಕಿರುವ ಫಲ ಎಂದುಕೊಳ್ಳುತ್ತೇನೆ. ಯಾರು ಏನೇ ಷಡ್ಯಂತ್ರ ಮಾಡಿದ್ರೂ ಅಂತಿಮವಾಗಿ ಗೆಲ್ಲೋದು ನ್ಯಾಯ ಮಾತ್ರ..ನನ್ನ ವಿರುದ್ಧ ಯಾರೆಲ್ಲಾ ತೇಜೋವಧೆಗೆ ಪ್ರಯತ್ನಿಸಿದ್ರೋ ಅವರಿಗೆಲ್ಲಾ ಒಳ್ಳೆಯದಾಗಲಿ…ನನ್ನ ಕಾಯಕ ಎಂದಿನಂತೆ ಮುಂದುವರೆಯಲಿದೆ.ಜತೆಗೆ  ಅನ್ಯಾಯದ ವಿರುದ್ದದ ನನ್ನ ಹೋರಾಟ ಮುಂದುವರೆಯಲಿದೆ ಎಂದರು.ʼ

ಇನ್ನು  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುರ್ಚಿಹಕ್ಕಲು, ಗುಡ್ಡೆಕೆರೆ ಅಂಚೆ ವ್ಯಾಪ್ತಿಯ ಕಾಳಿಂಗ ಮನೆ ನಿವಾಸಿ ಡಾ. ಪಿ. ಗೌರಿಶಂಕರ್ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸು ವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದ ಪ್ರಕರಣದ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ವಿವಾದವೇನು..? ಗೌರಿಶಂಕರ್‌ ವಿರುದ್ಧದ ಆಪಾದನೆಯೇನು,.? ಅನೇಕ ವರ್ಷಗಳಿಂದಲೂ  ಕಾಳಿಂಗಸ ರ್ಪಗಳ ವಿಷಯದಲ್ಲಿ ವ್ಯಾಪಕ ಅಧ್ಯಯನ-ಸಂಶೋಧನೆ ನಡೆಸುತ್ತಿರುವ ಗೌರಿಶಂಕರ್‌ ವಿರುದ್ಧ  ಸರ್ಪ ವನ್ನು ಸೆರೆಹಿಡಿದು ಬಂಧನದಲ್ಲಿರಿಸಿ ಛಾಯಾಚಿತ್ರ ತೆಗೆದಿದ್ದಾರೆ ಅಷ್ಟೇ ಅಲ್ಲ  ಅದರ ಫೋಟೊ ತೆಗೆಯಲು ಅವಕಾಶ ಕಲ್ಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.2025ರ ಸೆಪ್ಟೆಂಬರ್ 26ರಂದು ಆಗುಂಬೆ ವಲಯದ ಮೇಗರವಳ್ಳಿ ಅರಣ್ಯಾಧಿಕಾರಿಗಳು ಈ ಎಲ್ಲಾ ಆಪಾದನೆಗಳ ಹಿನ್ನೆಲಯಲ್ಲಿ ಡಾ. ಪಿ. ಗೌರಿಶಂಕರ್ ವಿರುದ್ಧ  ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 2(1)(16), 9, 50, 51, 55 ಮತ್ತು 57ರ ಅಡಿಯಲ್ಲಿ ಪ್ರಕರಣ ದೂರು ದಾಖಲಿಸಿದ್ದರು.  ತೀರ್ಥಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ  ವಿಚಾರಣೆಗೆ ಬಂದಿತ್ತು.

ಆ ಪ್ರಕರಣದಲ್ಲಿ ಮೂರನೇ  ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ವಿಡಿಯೊದಲ್ಲಿ ಗೌರಿಶಂಕರ್ ಕಾಣಿಸಿಕೊಂಡಿದ್ದರು. ಇದನ್ನೇ  ಈ  ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಾಗಿ ಪರಿಗಣಿಸ ಲಾಗಿತ್ತು. ಆದರೆ ಇದರ ಅಸಲಿಯತ್ತನ್ನು ಪ್ರಶ್ನಿಸಿ ಡಾ. ಪಿ. ಗೌರಿಶಂಕರ್, ದೋಷಾರೋಪಣಾ ಪಟ್ಟಿಯಲ್ಲಿ ರುವ ಯಾವುದೇ ದಾಖಲೆ ತಾವು ಕಾಳಿಂಗ ಸರ್ಪವನ್ನು ಬೇಟೆಯಾಡಿರುವುದನ್ನಾಗಲಿ, ಅಕ್ರಮವಾಗಿ ಸೆರೆಹಿಡಿದಿರುವುದನ್ನಾಗಲಿ ದೃಢಪಡಿಸುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ALSO READ :  ತಲಕಾವೇರಿಯಲ್ಲಿ ಉದ್ಭವಿಸಿದ ಕಾವೇರಿ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ

ಗೌರಿಶಂಕರ್‌ ಪರ ವಕೀಲರ ವಾದ ಏನಾಗಿತ್ತು.ಗೌರಿಶಂಕರ್ ಪರ ವಾದ ಮಂಡಿಸಿದ ವಕೀಲ ಅಕ್ಷಯ್ ಸ್ವಾಮಿ, ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿ ರುವ ಛಾಯಾಚಿತ್ರ ಪರಿಶೀಲಿಸಿದರೆ ಆ ಕಾಳಿಂಗ ಸರ್ಪ ವು ತೆರೆದ ಅರಣ್ಯ ಪ್ರದೇಶದಲ್ಲಿ ಇರುವುದು ಕಂಡು ಬರುತ್ತದೆ. ಆ ಹಾವನ್ನು ಪಂಜರದಲ್ಲಿ ಅಥವಾ ಬೇರೆ  ರೀತಿಯ ಬಂಧನದಲ್ಲಿ ಇರಿಸಲಾಗಿತ್ತು ಎಂಬುದನ್ನು ಇದು ಪುಷ್ಟೀಕರಿಸುವುದಿಲ್ಲ ಎಂದು ವಾದಿಸಿದ್ದರು.

ಕಾಳಿಂಗ ಸರ್ಪಗಳ ರಕ್ಷಣೆ, ಅಧ್ಯಯನ ಹಾಗೂ ಸಂಶೋಧನೆಯಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡು ಬಂದಿರುವ  ಗೌರಿಶಂಕರ್ ಅವರ ಹಿನ್ನಲೆಯನ್ನು  ಕೋರ್ಟ್‌ ನ ಗಮನಕ್ಕೆ ತಂದಿದ್ದ ವಕೀಲರು,    ಅನೇಕ ಸಂದರ್ಭಗಳಲ್ಲಿ ಕಾಳಿಂಗ ಸರ್ಪಗಳು ಹಾಗೂ ಇತರ ಹಾವುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಭಾಗವಹಿಸಿದ್ದಾರೆ. ಮನೆಗಳಿಗೆ ಪ್ರವೇಶಿಸಿದ ಹಾವುಗಳನ್ನು ರಕ್ಷಿಸುವ ಸಂದರ್ಭಗಳಲ್ಲಿಯೂ ಅವರ ನೆರವು ಪಡೆಯಲಾಗಿತ್ತು. ಇಂತಹ ಕಾರ್ಯಾಚರಣೆಗಳಲ್ಲಿ ರಕ್ಷಿಸಿದ ಹಾವುಗಳ ಕುರಿತು ಸಂಬಂಧಪಟ್ಟ ಅರಣ್ಯಾ ಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಬಗ್ಗೆ ಅರಣ್ಯಾಧಿಕಾರಿಗಳಿಂದ ಸ್ವೀಕೃತಿ ಪತ್ರಗಳನ್ನೂ ಪಡೆಯ ಲಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರಲ್ಲದೇ, ಗೌರಿಶಂಕರ್ ಅವರ ವಶದಿಂದ ಯಾವುದೇ ಕಾಳಿಂಗ ಸರ್ಪವನ್ನು ವಶಪಡಿಸಿಕೊಂಡಿಲ್ಲ. ಬದಲಿಗೆ ಹಾವುಗಳ ರಕ್ಷಣೆಗೆ ಬಳಸುವ ಸ್ನೇಕ್ ರೆಸ್ಕ್ಯೂ ಬ್ಯಾಗ್ ಮತ್ತು ರೆಸ್ಕ್ಯೂ ಹುಕ್ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಆದರೆ ಸರ್ಕಾರದ ವಾದ ಏನಾಗಿತ್ತು..!? ರಾಜ್ಯ ಸರ್ಕಾರದ ಪರ  ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಂ.ವಿ. ಅನೂಪ್ ಕುಮಾರ್‌ ,ದೋಷಾರೋಪಣಾ ಪಟ್ಟಿಯಲ್ಲಿರುವ ದಾಖಲೆಗಳು ಗೌರಿಶಂಕರ್ ಅವರು ಇತರರಿಗೆ ಕಾಳಿಂಗ ಸರ್ಪದ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿರುವುದನ್ನು ಸೂಚಿಸುತ್ತವೆ ಎಂದು ವಾದಿಸಿದ್ದರು. ಇಂತಹ ಕೃತ್ಯಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗುತ್ತವೆ ಎಂದು  ಪ್ರತಿಪಾದಿಸಿದ್ದರು.

ವಾದಪ್ರತಿವಾದ ಆಲಿಸಿದ ಹೈಕೋರ್ಟ್‌ ಹೇಳಿದ್ದೇನು..?! ಪ್ರಕರಣ ಸಂಬಂಧ ಮಂಡಿಸಲಾದ ವಾದ-ಪ್ರತಿವಾದ, ದಾಖಲೆಗಳನ್ನು ಪರಿಶೀಲಿಸಿದ  ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ, ಪ್ರಕರಣ ದಲ್ಲಿ ಗೌರಿಶಂಕರ್ ಅವರು ಕಾಳಿಂಗ ಸರ್ಪವನ್ನು ಬಂಧನದಲ್ಲಿ ಇರಿಸಿದ್ದರು ಎಂಬ ನಿರ್ದಿಷ್ಟ ಆರೋಪವಿ ಲ್ಲ ಎನ್ನುವುದನ್ನು ಗಮನಿಸಿದರು. ಅರ್ಜಿದಾರರು ಕಾಳಿಂಗ ಸರ್ಪವನ್ನು ಕೊಂದಿದ್ದಾರೆ ಅಥವಾ ಗಾಯ ಗೊಳಿಸಿದ್ದಾರೆ ಎಂಬ ಆರೋಪವೂ ಇಲ್ಲ. ಅದೇ ರೀತಿ ಕಾಳಿಂಗ ಸರ್ಪದ ಛಾಯಾಚಿತ್ರಗಳನ್ನು ಸ್ವತಃ ಗೌರಿಶಂಕರ್ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ.

ಕಾಳಿಂಗ ಸರ್ಪವನ್ನು ಗೌರಿಶಂಕರ್ ನಿಜವಾಗಿಯೂ ಸೆರೆಹಿಡಿದಿದ್ದರು ಎಂಬುದನ್ನು ದೃಢಪಡಿಸಲು ಪ್ರಕರ ಣದಲ್ಲಿ ಸಾಧ್ಯವಾಗಿಲ್ಲ. ದೋಷಾರೋಪಣಾ ಪಟ್ಟಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳಲ್ಲಿ ಕಾಳಿಂಗ ಸರ್ಪವು ಅರಣ್ಯದ ತೆರೆದ ಪ್ರದೇಶದಲ್ಲಿರುವುದು ಕಂಡು ಬಂದಿದ್ದು, ಅದನ್ನು ಬಂಧನದಲ್ಲಿ ಇರಿಸಲಾಗಿರ ಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಈ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ ವಾಗಿದ್ದರೂ ಅವುಗಳನ್ನು ಗೌರಿಶಂಕರ್ ಅವ ರಿಂದ ವಶಪಡಿ ಸಿಕೊಂಡಿರುವುದಿಲ್ಲ ಎಂಬ ಅಂಶವನ್ನೂ ನ್ಯಾಯಪೀಠ ಗಮನಿಸಿತು.ಇದಲ್ಲದೆ, ಗೌರಿಶಂಕರ್ ಅವರು ಈ ಹಿಂದೆ ಅನೇಕ ಬಾರಿ ರಕ್ಷಿಸಿದ ಕಾಳಿಂಗ ಸರ್ಪಗಳ ಬಗ್ಗೆ ಸಂಬಂಧ ಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುವ ಅಂಶ ದೋಷಾರೋಪಣಾ ಪಟ್ಟಿಯಲ್ಲಿಯೇ ಕಂಡುಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಎಲ್ಲ ದಾಖಲೆ ಪರಿಗಣಿ ಸಿದ ನ್ಯಾಯಪೀಠ, ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸ ಲಾದ ಅಪರಾಧಗಳನ್ನು ಎಸಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿತು.

ತೀರ್ಥಹಳ್ಳಿ ನ್ಯಾಯಾಲಯದಲ್ಲಿದ್ದ ಪ್ರಕರಣ ರದ್ದು:  ಗೌರಿಶಂಕರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಲು ಆದೇಶಿಸಿದೆ. ಮಲೆನಾಡಿನ ಪ್ರಾಂತ್ಯದಲ್ಲಿರುವ ಕಾಳಿಂಗ ಸರ್ಪಗಳಂಥ ಪ್ರಬೇಧಗಳನ್ನು ಸಂರಕ್ಷಿಸುವ ಕೆಲಸದಲ್ಲಿ ತಮ್ಮ ನ್ನು ತೊಡಗಿಸಿಕೊಂಡಿರುವ ಗೌರಿಶಂಕರ್‌ ಕಾರ್ಯವನ್ನು ಕೂಡ  ಶ್ಲಾಘಿಸಿದೆ. ತಮ್ಮ ವೃತ್ತಿಪರ ಜೀವನವನ್ನು ಹೊಸಕಿ ಹಾಕುವ ಷಡ್ಯಂತ್ರ-ಹುನ್ನಾರ ನಡೆಸಿದವರಿಗೆ ಕಾನೂನೇ ಸರಿಯಾದ ಪಾಠ ಕಲಿಸಿದಂತಾಗಿದೆ.


Leave a Comment