ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ


ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಇಂದು ಉದ್ಯೋಗಾಕಾಂಕ್ಷಿಗಳ ಆಕ್ರೋಶದ ಕಟ್ಟೆ ಒಡೆದಿದೆ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ‘ಆಕ್ಸಾ’ (AXA) ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಸಾವಿರಾರು ಯುವಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪೊಲೀಸರ ಅನುಮತಿ ಇಲ್ಲದಿದ್ದರೂ ನಡೆದ ಈ ಬೃಹತ್ ಪ್ರತಿಭಟನೆಯಿಂದಾಗಿ ಇಡೀ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶ್ರೀನಗರ ವೃತ್ತದಲ್ಲಿ ಜನಸಾಗರ:

ಇಂದು ಬೆಳಿಗ್ಗೆಯಿಂದಲೇ ಧಾರವಾಡದ ಶ್ರೀನಗರ ವೃತ್ತದಲ್ಲಿ ಸಾವಿರಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಜಮಾಯಿಸಿದ್ದರು. ಅಲ್ಲಿಂದ ಜಿಲ್ಲಾಧಿಕಾರಿಗಳ (DC) ಕಚೇರಿಯತ್ತ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. “ನಮಗೆ ಕೆಲಸ ಬೇಕು”, “ಹುದ್ದೆಗಳನ್ನು ಭರ್ತಿ ಮಾಡಿ” ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಡಿಸಿ ಕಚೇರಿಯತ್ತ ಓಡೋಡಿ ಧಾವಿಸುತ್ತಿದ್ದರು. ಈ ಹಠಾತ್ ಬೆಳವಣಿಗೆಯಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಈ ಹೋರಾಟಕ್ಕೆ ಮೊದಲೇ ಅನುಮತಿ ನಿರಾಕರಿಸಲಾಗಿತ್ತು. ಆದರೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರಿಂದ ಪೊಲೀಸರು ಅವರನ್ನು ತಡೆಯಲು ಹರಸಾಹಸ ಪಟ್ಟರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಂತಕುಮಾರ್ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಪ್ರತಿಭಟನಾಕಾರರನ್ನು ಶ್ರೀನಗರ ವೃತ್ತದಲ್ಲೇ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ.

ALSO READ :  ತುಮಕೂರು DC ಶ್ರೀನಿವಾಸ್‌ ರನ್ನು ಸಮರ್ಥಿಸಿಕೊಳ್ಳುವುದೆಂದರೆ "ಅಸತ್ಯ-ಅನ್ಯಾಯ" ಬೆಂಬಲಿಸಿದಂತಲ್ವಾ..!?..ಅವರೇ "ಸರಿ" ಎನ್ನುವವರು,ಅವರಷ್ಟೇ ತಪ್ಪಿತಸ್ಥರಲ್ವಾ..!?.

ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಪ್ರತಿಭಟನಾಕಾರರ ಆಗ್ರಹವೇನು?

ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಇದರಿಂದಾಗಿ ಪದವಿ ಮುಗಿಸಿ ಕೆಲಸವಿಲ್ಲದೆ ಅಲೆಯುತ್ತಿರುವ ಯುವಕರ ಭವಿಷ್ಯ ಅಂಧಕಾರದಲ್ಲಿದೆ. ಸರ್ಕಾರವು ಪದೇ ಪದೇ ಭರವಸೆ ನೀಡುತ್ತಿದ್ದರೂ ಅಧಿಸೂಚನೆ ಹೊರಡಿಸುತ್ತಿಲ್ಲ ಎಂಬುದು ಅಭ್ಯರ್ಥಿಗಳ ಪ್ರಮುಖ ದೂರು. ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಆಕ್ಸಾ ಸಂಘಟನೆಯು ಎಚ್ಚರಿಕೆ ನೀಡಿದೆ.

ಪ್ರಸ್ತುತ ಶ್ರೀನಗರ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಅಲ್ಲಿಯೇ ಕುಳಿತು ತಮ್ಮ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.


Leave a Comment