advertise here

Search

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ?

ksrtc shivamogga corruption

ಶಿವಮೊಗ್ಗ: ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಯಲ್ಲಿ ಪಾರದರ್ಶಕ ಆಡಳಿತದ ಭರವಸೆ ನೀಡುವ ಅಧಿಕಾರಿಗಳೇ, ತಮ್ಮ ಆಪ್ತ ಚಾಲಕರ ಮೂಲಕ ಭ್ರಷ್ಟಾಚಾರದ ಜಾಲ ಹೆಣೆದಿದ್ದಾರೆ ಎಂಬ ಗಂಭೀರ ಆರೋಪವೊಂದು ಶಿವಮೊಗ್ಗ ವಿಭಾಗದಲ್ಲಿ ಕೇಳಿಬಂದಿದೆ. ಸಂಸ್ಥೆಯ ನೌಕರ ಮಹೇಶ್ವರಪ್ಪ ಅವರು ಸಲ್ಲಿಸಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ತನಿಖಾ ವರದಿಯು ಇದೀಗ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ: ಏನಿದು ಆರೋಪ?

ಶಿವಮೊಗ್ಗ ವಿಭಾಗದ ಡಿಟಿಓ (DTO) ದಿನೇಶ್ ಕುಮಾರ್ ಚೆನ್ನಗಿರಿ ಅವರು, ತಮ್ಮ ಆಪ್ತ ಚಾಲಕರಾದ ಮಂಜುನಾಥ (ಚಾಲಕ ಸಂಖ್ಯೆ: 3280) ಮತ್ತು ಗೋವಿಂದಪ್ಪ ಡಿ. ಹೊಸಮನಿ (ಚಾಲಕ ಸಂಖ್ಯೆ: 1827) ಅವರ ಮೂಲಕ ಸಿಬ್ಬಂದಿಗಳ ವರ್ಗಾವಣೆ ಹಾಗೂ ಇತರ ಸೇವಾ ಸಂಬಂಧಿತ ಕೆಲಸಗಳಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಚಾಲಕರು ಅಧಿಕಾರಿಗಳ ಪರವಾಗಿ ‘ಮಧ್ಯವರ್ತಿಗಳಾಗಿ’ (Brokers) ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ದೂರಿನ ಮುಖ್ಯ ಸಾರಾಂಶವಾಗಿದೆ.

ಈ ದೂರಿನ ಗಂಭೀರತೆಯನ್ನು ಅರಿತ ಕೇಂದ್ರ ಕಚೇರಿಯು, ಹಾಸನ ವಿಭಾಗದ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಪ್ರಸನ್ನ ಜೆ.ಬಿ. ಅವರಿಗೆ ಕೂಲಂಕಷ ತನಿಖೆಗೆ ಆದೇಶಿಸಿತ್ತು.

ತನಿಖೆಯ ಫಲಿತಾಂಶ: ಪ್ರಸನ್ನ ಜೆ.ಬಿ. ಅವರು ನಡೆಸಿರುವ ‘ಪಿನ್-ಟು-ಪಿನ್’ ತನಿಖೆಯ ವರದಿಯು ದಿನಾಂಕ 12/08/2025 ರಂದು ಸಲ್ಲಿಕೆಯಾಗಿದೆ. ತನಿಖಾ ವರದಿಯ ಪ್ರಕಾರ, ಆರೋಪಿತ ಚಾಲಕರು ಸಿಬ್ಬಂದಿಗಳ ವರ್ಗಾವಣೆಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವುದು ಗೌಪ್ಯ ಮಾಹಿತಿಯಿಂದ ದೃಢಪಟ್ಟಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸಾಮಾನ್ಯ ನೌಕರರಿಗೆ ಶಿಕ್ಷೆ, ಪ್ರಭಾವಿಗಳಿಗೆ ರಕ್ಷಣೆಯೇ?

ತನಿಖಾ ವರದಿಯಲ್ಲಿ ಆರೋಪಗಳು ಸಾಬೀತಾಗಿದ್ದರೂ, ಈವರೆಗೆ ಆರೋಪಿತರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲದಿರುವುದು ಸಂಸ್ಥೆಯ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ. ಸಣ್ಣಪುಟ್ಟ ತಪ್ಪುಗಳಿಗಾಗಿ ಕೆಳಹಂತದ ನೌಕರರನ್ನು ವಜಾ ಮಾಡುವಾಗ, ರಾಜಕೀಯ ಪ್ರಭಾವ ಹೊಂದಿರುವ ಅಧಿಕಾರಿಯನ್ನು ಉಳಿಸಿಕೊಂಡಿರುವುದು ಸರಿಯಲ್ಲ ಎಂದು ದೂರುದಾರರು ಪ್ರಶ್ನಿಸಿದ್ದಾರೆ. ದೂರುದಾರರ ಅಸಮಾಧಾನದ ಪ್ರಮುಖ ಅಂಶಗಳಿವು:

ALSO READ :  ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

ತಾರತಮ್ಯ: ಸಣ್ಣಪುಟ್ಟ ತಪ್ಪುಗಳಿಗಾಗಿ (ಉದಾಹರಣೆಗೆ: ಟಿಕೆಟ್ ರಹಿತ ಪ್ರಯಾಣಿಕರಿಗೆ ಸಂಬಂಧಿಸಿದ ವಿಷಯಗಳಲ್ಲಿ) ಸಾಮಾನ್ಯ ನಿರ್ವಾಹಕರನ್ನು ತಕ್ಷಣವೇ ಅಮಾನತ್ತು ಮಾಡುವ ಆಡಳಿತ ಮಂಡಳಿ, ಉನ್ನತ ಅಧಿಕಾರಿಗಳ ವಾಹನ ಚಾಲಕರ ವಿಚಾರದಲ್ಲಿ ಮೌನ ವಹಿಸಿರುವುದು ಯಾಕೆ?

ಸಾಕ್ಷ್ಯ ನಾಶದ ಭೀತಿ: ಆರೋಪಿತರನ್ನು ತಕ್ಷಣವೇ ಅಮಾನತ್ತು ಮಾಡದೆ ಕರ್ತವ್ಯದಲ್ಲಿ ಮುಂದುವರಿಸಿದರೆ, ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಪ್ರಭಾವ ಬಳಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸಂಸ್ಥೆಯ ಗೌರವ: ಇಂತಹ ಭ್ರಷ್ಟಾಚಾರದ ಚಟುವಟಿಕೆಗಳು ಕೆಎಸ್‌ಆರ್‌ಟಿಸಿಯಂತಹ ಪ್ರತಿಷ್ಠಿತ ಸಂಸ್ಥೆಯ ಗೌರವ ಮತ್ತು ಘನತೆಗೆ ಚ್ಯುತಿ ತರುತ್ತಿವೆ.

“ತಪ್ಪಿತಸ್ಥರು ಅಮಾನತ್ತು ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಿ ಅಥವಾ ತನಿಖೆಯಲ್ಲಿ ನಿರ್ದೋಷಿಗಳೆಂದು ಸಾಬೀತಾದರೆ ಮಾತ್ರ ಕರ್ತವ್ಯಕ್ಕೆ ಮರಳಲಿ, ಆದರೆ ತನಿಖಾ ವರದಿ ಬಂದಿದ್ದರೂ ಈವರೆಗೂ ಕ್ರಮ ಕೈಗೊಳ್ಳದಿರುವುದು ಆಡಳಿತ ವರ್ಗದ ಬದ್ಧತೆಯನ್ನೇ ಪ್ರಶ್ನಿಸುವಂತಿದೆ” ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು, ಕೂಡಲೇ ಸಂಬಂಧಪಟ್ಟ ಚಾಲಕರನ್ನು ಅಮಾನತ್ತುಗೊಳಿಸಿ, ಉನ್ನತ ಮಟ್ಟದ ಶಿಸ್ತುಕ್ರಮ ಕೈಗೊಳ್ಳಬೇಕೆಂಬುದು ಸಿಬ್ಬಂದಿಗಳ ಒತ್ತಾಯವಾಗಿದೆ.


Political News

ಯುದ್ಧಪೀಡಿತ ಪ್ರದೇಶಗಳಿಂದ ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ಕೇಂದ್ರದ ಸಿದ್ಧತೆ

ಕಚ್ಚಾ ತೈಲ ದರ ಏರಿಕೆ: ಭಾರತದ ಆರ್ಥಿಕತೆಗೆ ಎದುರಾಗಿರುವ ಸವಾಲುಗಳೇನು?

ಯುಎಇಯಲ್ಲಿ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ

ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಹೈಕಮಾಂಡ್ ಮಧ್ಯಪ್ರವೇಶಕ್ಕೆ ಸತೀಶ್ ಜಾರಕಿಹೊಳಿ ಆಗ್ರಹ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

Scroll to Top