ಪರೀಕ್ಷೆಯ ದಿನವೇ ಹೃದಯಾಘಾತಕ್ಕೆ ಪಿಯು ವಿದ್ಯಾರ್ಥಿನಿ ಸಾವು!


ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದೆ. ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಭೂಮಿಕಾ ಕರೆಪ್ಪ ಮಾಳಿಂಗೆ (17) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಗಳ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಕುಟುಂಬಕ್ಕೆ ಈ ಘಟನೆ ಅತೀವ ಆಘಾತವನ್ನು ತಂದಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಪರೀಕ್ಷೆಯ ಹಿನ್ನೆಲೆಯಲ್ಲಿ ಭೂಮಿಕಾ ನಸುಕಿನ ಜಾವ 3 ಗಂಟೆಯಿಂದಲೇ ಎದ್ದು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಬೆಳಗ್ಗೆ 6 ಗಂಟೆಯವರೆಗೆ ಓದಿದ ನಂತರ ಸ್ವಲ್ಪ ವಿಶ್ರಾಂತಿ ಪಡೆದ ಅವರು, ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಿದ್ಧರಾಗಿ ಸ್ನಾನಕ್ಕೆಂದು ಹೋಗಿದ್ದರು. ಆದರೆ, ಸ್ನಾನ ಮುಗಿಸಿ ಹೊರಬರುತ್ತಿದ್ದಂತೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿಯೇ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ALSO READ :  ಖ್ಯಾತ ವಿಜ್ಞಾನಿ,ಸಾಹಿತಿ ಪ್ರಸನ್ನ ಸಂತೆಕಡೂರು ಗೆ ವಿಶ್ವದ ಐವರು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಸ್ಥಾನ

ಪರೀಕ್ಷೆಯ ಮೊದಲ ದಿನವೇ ಇಂತಹ ಘಟನೆ ಸಂಭವಿಸಿರುವುದು ಇಡೀ ಗ್ರಾಮದಲ್ಲಿ ಶೋಕದ ಮಡುಗಟ್ಟುವಂತೆ ಮಾಡಿದೆ. ಒಂದು ಕಡೆ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತಿದ್ದರೆ, ಇನ್ನೊಂದು ಕಡೆ ಭೂಮಿಕಾಳ ಕುಟುಂಬ ಆಕ್ರಂದನದಲ್ಲಿ ಮುಳುಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.


Leave a Comment