ಖ್ಯಾತ ವಿಜ್ಞಾನಿ,ಸಾಹಿತಿ ಪ್ರಸನ್ನ ಸಂತೆಕಡೂರು ಗೆ ವಿಶ್ವದ ಐವರು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಸ್ಥಾನ


ಸಂಶೋ‍ಧಕನಾಗಷ್ಟೇ ಸೀಮಿತಗೊಳ್ಳದೆ ಸಾಹಿತ್ಯಕ್ಕೂ ತನ್ನನ್ನು ತೆರೆದುಕೊಂಡು ಯಶಸ್ವಿಯಾದ ಪ್ರಸನ್ನ ಸಂತೆಕಡೂರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ

ಖ್ಯಾತ ಸಂಶೋಧಕ..ವಿಜ್ಞಾನಿ…ಶಿವಮೊಗ್ಗ ಮೂಲದ ಪ್ರತಿಭಾನ್ವಿತ ಪ್ರಸನ್ನ ಸಂತೆಕಡೂರು ಅವರಿಗೆ ವಿಶ್ವದ ಅಗ್ರಗಣ್ಯ ಐವರು ವಿಜ್ಞಾನಿಗಳ ಪಟ್ಟಿಯಲ್ಲಿ ಒಬ್ಬರಾಗಿ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಆತ್ಮೀಯ ಸ್ನೇಹಿತ ಪ್ರಸನ್ನ ಸಂತೆಕಡೂರು ಅವರಿಗೆ ಅಭಿನಂದನೆಗಳು..ಅವರ ಸಾಧನೆ ಬಗ್ಗೆ ಬರೆಯಲೇಬೇಕಿದೆ. ನಾವೆಲ್ಲಾ ಒಂದಷ್ಟು ಸಾವಿರಗಳಷ್ಟು ಸಂಬಳದ ಉದ್ಯೋಗ ಸಿಕ್ಕರೆ ಸಾಕಪ್ಪಾ..ಲೈಫ್ ಸೆಟ್ಲಾದಂತೆ ಎಂದು ಕಂಫರ್ಟ್ ಝೋನ್ ಕಂಡುಕೊಳ್ಳುವ ಯತ್ನದಲ್ಲಿದ್ದಾಗ ಪ್ರಸನ್ನ ಪ್ರಯೋಗಾಲಯಗಳಲ್ಲಿ ಸೆಲ್ಸು….ಝೀನ್ಸ್…ಇವುಗಳ ಸುತ್ತಲೇ ಪ್ರಯೋಗಶೀಲನಾಗಿದ್ದ…ಆಗಲೇ ಅನ್ನಿಸಿತ್ತು..ಈತ ಬೆಳೆದು ಏನೋ ಆಗುತ್ತಾನೆ ಎಂದು..ಅದನ್ನು ಆತ ಮಾಡಿ ತೋರಿಸಿ ಎಷ್ಟೋ ವರ್ಷಗಳಾಗಿವೆ..ಅದನ್ನು ಮೀರಿ ಆತ ಬೆಳೆದಿದ್ದಾನೆ.ಅದಕ್ಕೆ ಸಾಕ್ಷಿಯೇ ವಿಶ್ವಮಾನ್ಯ ಸರ್ವಶ್ರೇಷ್ಟ 5 ವಿಜ್ಞಾನಿಗಳ ಸಾಲಿನಲ್ಲಿ ಗೆಳೆಯ ಪಡೆದಿರುವ ಸ್ಥಾನ..

ಆತ ಇದ್ದಿದ್ದೇ ಹಾಗೆ ಬಿಡಿ..ಉಳಿದವರಂತೆ ಆತ ಪುಸ್ತಕದ ಹುಳು ಅಲ್ಲವೇ ಅಲ್ಲ..ಆತ ಯಾವಾಗ ಓದುತ್ತಾನೆ ಎನ್ನೋದೇ ಗೊತ್ತಾಗದಂತೆ ನಡೆದುಕೊಳ್ಳುತ್ತಿದ್ದ.ಓದುವ ವರ್ಗದ ಹುಡುಗರ ನಡುವೆ ಒಂದಷ್ಟು ಕಾಲ ಇದ್ದುಉಳಿದ ಸಮಯವನ್ನೆಲ್ಲಾ ಸಾಹಿತ್ಯ,…ಹರಟೆ….ಚರ್ಚೆ…ಹೀಗೆ ಕಳೆದುಬಿಡುತ್ತಿದ್ದ.ನಾನು ಆತನೊಂದಿಗೆ ಮಾತನಾಡುವಾಗಲೆಲ್ಲಾ ನಮ್ಮ ನಡುವೆ ಚರ್ಚೆ ಆಗುತ್ತಿದ್ದ ವಿಷಯ ಕೇವಲ ಸಾಹಿತ್ಯ ಮಾತ್ರ..ಆತನಲ್ಲಿ ಸಾಹಿತ್ಯದ ಬಗ್ಗೆ ಎಂಥಾ ಉತ್ಕಟವಾದ ಆಸಕ್ತಿ-ಅದಮ್ಯ ಉತ್ಸಾಹವಿತ್ತು ಎಂದರೆ ಓದಿನ ಪುಸ್ತಕಗಳಿಗಿಂತ ಹೆಚ್ಚು ಆಧ್ಯಯನವನ್ನು ಸಾಹಿತ್ಯದ ಬಗ್ಗೆ ಮಾಡಿದ್ದ.ಕಾಲೇಜ್ ದಿನಗಳಲ್ಲೇ ಆತ ಬಹಳಷ್ಟು ಸಾಹಿತಿ-ಕವಿ-ಕಾದಂಬರಿಕಾರರನ್ನು ಓದಿಕೊಂಡುಬಿಟ್ಟಿದ್ದ.ಅವರ ಬಗ್ಗೆ ಮಾತನಾಡುವಾಗಲೆಲ್ಲಾ ನಿಬ್ಬೆರಗಾಗಿ ನೋಡುತ್ತಿದ್ದ ಕಾಲವದು..

ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದ ಕೆಲವರು ಅದನ್ನು ಒಂದು ಕಾಲಮಾನದವರೆಗೆ ಕೊಂಡೊಯ್ಯುವುದನ್ನು ನೋಡಿದ್ದೇವೆ.ಬದುಕೇ ಮುಖ್ಯವಾದಾಗ ಸಾಹಿತ್ಯ ನಗಣ್ಯವಾಗಿಬಿಡುತ್ತದೆ.ಎರಡನ್ನೂ ತೂಗಿಸಿಕೊಂಡು ಹೋಗೋರು ಕಡಿಮೆ.ಆದರ ಪ್ರಸನ್ನ ಹಾಗಲ್ಲವೇ ಅಲ್ಲ..ಆತ ಶೈಕ್ಷಣಿಕ ಪಠ್ಯದ ಜತೆಜತೆಗೇ ಸಾಹಿತ್ಯವನ್ನು ಚೆನ್ನಾಗಿ ತೂಗಿಸಿಕೊಂಡು ಹೋದ .ಹಾಗಾಗಿನೇ ಎರಡರಲ್ಲೂ ಸಮತೋಲನದ ಜತೆಗೆ ಸಾಧನೆಯನ್ನು ಮಾಡಿದ.ಹಾಗಾಗಿನೇ ಸಂಶೋಧನೆ ಕ್ಷೇತ್ರದಲ್ಲಿ ಮೈಲಿಗಲ್ಲಾಗುವ ಸಾಧನೆ ಮಾಡಿದ್ದರ ಜತೆಗೆ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಬರೆದು ಲೇಖಕ-ಕಾದಂಬರಿಕಾರ-ವಿಮರ್ಷಕ..ಹೀಗೆ ಹಲವು ಆಯಾಮಗಳನ್ನು ಪಡೆದುಕೊಂಡ.

ALSO READ :  EXCLUSIVE...ARNAB, "KARNATAKA WANTS TO kNOW" ಏನಾಗಲಿದೆ ಕರ್ನಾಟಕದಲ್ಲಿ "ರಿಪಬ್ಲಿಕ್ ಕನ್ನಡ"  ಭವಿಷ್ಯ..!?

ಶಿವಮೊಗ್ಗದ ಸಂತೆಕಡೂರಿನಲ್ಲಿ ಹುಟ್ಟಿ ಬೆಳೆದ ಪ್ರಸನ್ನನ ಕೌಟುಂಬಿಕ ಹಿನ್ನಲೆ ತುಂಬಾ ದೊಡ್ಡದೇನಲ್ಲ .ಕಷ್ಟಪಟ್ಟೇ ಬೆಳೆದಾತ.ದೊಡ್ಡ ಮಟ್ಟಕ್ಕೆ ಬೆಳೆದುನಿಂತ.ಎಷ್ಟೇ ಬೆಳೆದರೂ ತನ್ನ ಮೂಲ ಅಸ್ಥಿತ್ವದ ಬೇರುಗಳನ್ನು ಆತ ಮರೆತೇ ಇಲ್ಲ.ಇವತ್ತಿಗೂ ಸಂತೆಕಡೂರು ಎಂದರೆ ಆತನಲ್ಲೇನೋ ಒಂದು ಪುಳಕ..ಆ ಮುಗ್ದತೆಯನ್ನು ಆತ ಇನ್ನೂ ಕಳೆದುಕೊಂಡೇ ಇಲ್ಲ..ಅದನ್ನು ಕಂಡಾಗ ಆತನ ಬಗ್ಗೆ ಇನ್ನಷ್ಟು ಪ್ರೀತಿ-ಹೆಮ್ಮೆಅಭಿಮಾನ ಮೂಡುತ್ತದೆ. ಎಷ್ಟೇ ಬೆಳೆದರೂ ತನ್ನ ಬದುಕಿಗೊಂದು ನೆಲೆ-ಸಾಧನೆಗೊಂದು ಗಮ್ಯ ದೊರಕಿಸಿಕೊಟ್ಟ ಸಂತೆಕಡೂರಿನ ಬಗ್ಗೆ ಅಭಿಮಾನ ಬಿಟ್ಟೇ ಇಲ್ಲ.
ಸಹ್ಯಾದ್ರಿ ಕಾಲೇಜಿನಲ್ಲಿ ತನ್ನ ವ್ಯಾಸಂಗ ಮಾಡಿ ಮುಗಿಸಿ ನಂತರ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಡೆದ ಪ್ರಸನ್ನ ನಂತರ ಮೈಸೂರಿನಲ್ಲಿ ಪಿಎಚ್ ಡಿ ಪಡೆದ.ಆತನ ಸಾಧನೆ ಗಮನಿಸಿ ಜೆಎಸ್ ಮಹಾವಿದ್ಯಾಲಯ ಅವನ ಸೇವೆ ತಮಗೆ ಬೇಕೇ ಬೇಕು ಎಂದು ಹಠಹಿಡಿದು ಆತನನ್ನು ಬೇರೆಲ್ಲೂ ಹೋಗದೆ ಬಿಟ್ಟಿಲ್ಲ.

ಈ ನಡುವೆಯೇ ಆತ ವಿದೇಶಗಳನ್ನು ಅಧ್ಯಯನದ ಕಾರಣಕ್ಕೆ ಪರ್ಯಟನೆ ಮಾಡಿ ಬಂದ..ಕ್ಯಾನ್ಸರ್ ಬಗೆಗಿನ ಆತನ ಸಂಶೋಧನೆ ಇವತ್ತಿಗೂ ಮೈಲಿಗಲ್ಲಿನ ಪರಿಹಾರವಾಗಿ ಪರಿಗಣಿಸಲ್ಪಡುತ್ತಿದೆ. ಸಂಶೋಧನಾ ಕ್ಷೇತ್ರದಲ್ಲಿ ನೀಡಲಾಗುವ ಸರ್ ಸಿವಿ ರಾಮನ್ ಕಿರಿಯ ವಿಜ್ಞಾನಿ ಪ್ರಶಸ್ತಿಯನ್ನೂ ಪಡೆದಿದ್ದಾನೆ. ಈ ನಡುವೆಯೇ ಸಾಹಿತ್ಯದಲ್ಲಿ ಒಂದಷ್ಟು ಕೃತಿಗಳನ್ನು ರಚಿಸಿ ಅತ್ಯದ್ಭುತ ಲೇಖಕನಾಗಿ ಬೆಳೆದಿದ್ದಾನೆ.ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾನೆ. ಸಾಹಿತ್ಯದ ಗೋಷ್ಟಿ-ಸಭೆಗಳಲ್ಲಿ ಮಾತನಾಡುತ್ತಿದ್ದಾನೆ.

ಸಂಶೋಧಕನಾಗಿ ಏನನ್ನಾದರೂ ಮಾಡಬೇಕೆನ್ನುವ ಹಿರಿದಾಸೆ ಇಟ್ಟುಕೊಂಡು ಅದರಲ್ಲಿ ಶೃದ್ಧೆ-ನಿಷ್ಟೆ-ಪ್ರಾಮಾಣಿಕತೆಯಿಂದ ಮಾಡಿದ ಪ್ರಯತ್ನದ ಫಲವಾಗಿ ಜಗತ್ತಿನ ಐವರು ಅಗ್ರಗಣ್ಯ ವಿಜ್ಞಾನಿಗಳ ಸಾಲಿನಲ್ಲಿ ತನ್ನನ್ನು ಒಬ್ಬನಾಗಿ ಗುರುತಿಸಿಕೊಂಡಿದ್ದಾನೆ.ಇದು ಅತ್ಯಂತ ಖುಷಿ-ಹೆಮ್ಮೆ-ಅಭಿಮಾನ ಪಡುವ ವಿಷಯ.ಇಂಥದ್ದೊಂದು ಮಹತ್ಸಾಧನೆ ಮಾಡಿದ ಗೆಳೆಯ ಪ್ರಸನ್ನ ಸಂತೆಕಡೂರುಗೆ ಅಭಿನಂದನೆಗಳು..ಹೃತ್ಪೂರ್ವಕ ಶುಭಾಷಯಗಳು..ಗೆಳೆಯ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ…ಎನ್ನೋದು ನಮ್ಮ ಹೃದಯಾಂತರಾಳದ ಹಾರೈಕೆ.


Leave a Comment