

ಬೆಂಗಳೂರು: ಬಿಎಂಟಿಸಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಪತ್ತೆಯಾಗಿದೆ. ಬಿಡಿಭಾಗಗಳ ಖರೀದಿಯಲ್ಲಿ ಕೋಟ್ಯಾಂತರ ಅಕ್ರಮ ನಡೆದಿರುವುದು ದೃಢಪಟ್ಟಿರುವುದರಿಂದ ಉಗ್ರಾಣ ವಿಭಾಗದ 8 ಅಧಿಕಾರಿ-ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಶಿಸ್ತುಪಾಲನಾಧಿಕಾರಿಯೂ ಆಗಿರುವ ಕೆಎಸ್ ಆರ್ ಟಿಸಿ ಎಂಡಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಕಣ್ಣಾಯಿಸಿದೆಡೆಯಲ್ಲೆಲ್ಲಾ ಅಕ್ರಮವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಸಾಲು ಸಾಲು ಅಕ್ರಮಗಳಲ್ಲಿ ಇಲ್ಲಿನ ಅಧಿಕಾರಿ ಸಿಬ್ಬಂದಿ ಶಾಮೀಲು ಆಗಿರುತ್ತಾರೆ.ಸುಳ್ಳು ಲೆಕ್ಕ ಕೊಟ್ಟು ನಿಗಮಕ್ಕೆ ಪಂಗನಾಮ ಹಾಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ತಮ್ಮ ವಂಚನೆಯಿಂದಲೇ ಕೋಟ್ಯಾಂತರ ಹಣ ಕಮಾಯಿಸುತ್ತಿದ್ದಾರೆ.ಇವರ ಅಕ್ರಮಗಳಿಂದ ನಷ್ಟದಲ್ಲಿರುವ ನಿಗಮಕ್ಕೆ ಮತ್ತಷ್ಟು ನಷ್ಟ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ..ಇದು ಗೊತ್ತಿದ್ರೂ ಮತ್ತೊಂದು ಅಕ್ರಮ ನಡೆಸಿರುವುದು ದೃಢಪಟ್ಟಿದೆ.
ಬಿಎಂಟಿಸಿಗೆ ಬಿಡಿಭಾಗಗಳನ್ನು ಪೂರೈಸುವ ಏಜೆನ್ಸಿಗಳಲ್ಲಿ ಒಂದಾದ ಬನಿ ಆಟೋ ಇಂಡಸ್ಟೀಸ್ ಸಂಸ್ಥೆ ಜತೆ ಉಗ್ರಾಣ ವಿಭಾಗದಲ್ಲಿರುವ ಕೆಲವು ಭ್ರಷ್ಟರೆ ಶಾಮೀಲಾಗಿ ಕೋಟ್ಯಾಂತರ ಅಕ್ರಮ ನಡೆಸಿದ್ದಾರೆ.ಅಂದ್ಹಾಗೆ ಇದು ಕೇಂದ್ರೀಯ ಕಾರ್ಯಾಗಾರ-1ರಲ್ಲಿ ನಡೆದಿರುವ ಅಕ್ರಮವಾಗಿದೆ.ಸ್ಟೋರ್ಸ್ ಗೆ ಬಿಡಿಭಾಗಗಳು ಸ್ವೀಕೃತವಾಗದಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಈ ಅಕ್ರಮ ನಡೆಸಲಾಗಿದೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಫೇಕ್ ಬಿಲ್ಸ್ ಕ್ರಿಯೇಟ್ ಮಾಡಲಾಗಿದೆ ಎನ್ನುವುದೆಲ್ಲಾ ತನಿಖೆ ವೇಳೆ ಸಾಬೀತಾಗಿದೆ. ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ ಇದರಲ್ಲಿ ಶಾಮೀಲಾದ ಎಲ್ಲರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು)ನಿಯಮ-19(2) ಅನ್ವಯ ಸಸ್ಪೆಂಡ್ ಮಾಡಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
“ಶಿವಕುಮಾರ್ ಬಂದಾಗಿನಿಂದಲೂ ಬಿಎಂಟಿಸಿನೂ ಕ್ಲೀನ್ -ಭ್ರಷ್ಟರ ಎದೆಯಲ್ಲಿಯೂ ನಡುಕ….. ಕೆಎಸ್ ಆರ್ ಟಿಸಿ ಎಂಡಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಶಿವಕುಮಾರ್ ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಅವರು ತಂದಿರುವ ಸುಧಾರಣೆಗಳೇ ಸಾಕ್ಷಿ.ಬಿಎಂಟಿಸಿಯಲ್ಲಿ ಬಿಡಿಭಾಗಗಳ ಖರೀದಿ ಎನ್ನುವುದು ಭ್ರಷ್ಟಾಚಾರದ ಗೂಡಾಗಿದೆ ಎನ್ನುವುದರ ಮಾಹಿತಿ ದೊರೆತ ತಕ್ಷಣ ಕೆಎಸ್ ಆರ್ ಟಿಸಿಯ ಶಿಸ್ತುಪಾಲನಾಧಿಕಾರಿ ಯೂ ಅಗಿರುವ ಶಿವಕುಮಾರ್ ತಡಮಾಡದೆ ತನಿಖಾ ಸಮಿತಿ ರಚಿಸಿ ವರದಿಯನ್ನು ನೀಡುವಂತೆ ಸೂಚಿಸಿದ್ದರು.
ತನಿಖಾ ಸಮಿತಿ ಕೂಡ ತಡಮಾಡದೆ ಶೀಘ್ರವೇ ವರದಿ ನೀಡಿದೆ. 8 ಅಧಿಕಾರಿ ಸಿಬ್ಬಂದಿಯ ಶಾಮೀಲಾತಿ ಸ್ಪಷ್ಟವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.ತಕ್ಷಣಕ್ಕೆ ಅವರನ್ನು ಅಮಾನತು ಮಾಡಿದ್ದಾರೆ.ಅಲ್ಲದೇ ಅಕ್ಟೋಬರ್ ಒಳಗೆ ಅಂತಿಮ ವರದಿ ನೀಡುವಂತೆ ಸೂಚಿಸಿದ್ದಾರೆ.
ಕೇವಲ ಬಿಡಿಭಾಗಗಳಷ್ಟೇ ಅಲ್ಲ ನಿಗಮದ ಯಾವುದೇ ವಿಭಾಗದಲ್ಲೇ ಅಕ್ರಮ ಪತ್ತೆಯಾದ್ರೂ ಅದರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.ಶಿವಕುಮಾರ್ ಅವರ ಈ ಆದೇಶದಿಂದ ನಿಗಮದ ಎಲ್ಲಾ ವಿಭಾಗಗಳಲ್ಲೂ ಇರಬಹುದಾದ ಕೆಲವು ಭ್ರಷ್ಟರ ಎದೆಯಲ್ಲಿ ನಡುಕ ಶುರುವಾಗಿದೆ”
ಅಕ್ರಮ ನಡೆದಿದ್ದು ಹೇಗೆ: ಬಿಡಿಭಾಗಗಳನ್ನು ಸಂಗ್ರಹಿಸಲಾಗುತ್ತಿರುವ ಉಗ್ರಾಣದಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎನ್ನುವ ಶಂಕೆ ಅಧಿಕಾರಿಗಳಿಗೆ ಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟವರಿಗೆ ಸೂಚಿಸಲಾಗಿತ್ತಂತೆ. ಉಗ್ರಾಣ ಸೇರಬೇಕಿದ್ದ ಬಸ್ ಗಳ ಬಿಡಿಭಾಗಗಳು ಅಲ್ಲಿ ಸೇರದೆ ಅದರ ಹೆಸರಲ್ಲಿ ಹಣ ಇಲ್ಲಿನ ಅಧಿಕಾರಿ ಸಿಬ್ಬಂದಿ ಜೇಬು ಸೇರುತ್ತಿತ್ತಂತೆ. ಬಿಡಿಭಾಗ ಖರೀದಿಗೆಂದೇ ಕೋಟ್ಯಾಂತರ ಖರ್ಚು ಮಾಡುವ ನಿಗಮ ಇದರಿಂದ ತಲೆಕೆಡಿಸಿಕೊಂಡು ತಪಾಸಣೆ ನಡೆಸಲಾಗಿದೆ.ಈ ವೇಳೆಯೇ ಅಧಿಕಾರಿ ಸಿಬ್ಬಂದಿ ನಡೆಸುತ್ತಾ ಬಂದಿದ್ದ ಗೋಲ್ಮಾಲ್ ಪತ್ತೆಯಾಗಿದೆ.ಕೇಂದ್ರಿಯ ಉಗ್ರಾಣ-1ರ ಅಧಿಕಾರಿ ಸಿಬ್ಬಂದಿ ಎಷ್ಟು ಖತರ್ನಾಕ್ ಆದ ಕೆಲಸ ಮಾಡುತ್ತಿದ್ದರೆಂದರೆ ಬಿಡಿಭಾಗ ಉಗ್ರಾಣ ತಲುಪದಿದ್ರೂ ಸುಳ್ಳು ಸಾಕ್ಷ್ಯ ಸೃಷ್ಟಿಸುತ್ತಿದ್ದರಂತೆ.ಬಿಡಿಭಾಗ ಸ್ವೀಕರಿಸಲಾಗಿದೆ ಎಂದು ಸಹಿ ನಮೂದನೆ ಮಾಡುತ್ತಿದ್ದರಂತೆ.
ಪತ್ತೆ ಮಾಡಿದ್ದು ಹೇಗೆ:? ಉಗ್ರಾಣದಲ್ಲಿ ಬಿಡಿಭಾಗ ಕೊರತೆ ಸೃಷ್ಟಿಯಾಗುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನಲೆಯಲ್ಲಿ ರಚನೆಯಾದ ತಂಡ ಉಗ್ರಾಣದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಅವಲೋಕಿಸಲು ಶುರುಮಾಡಿದೆ. ದಾಖಲೆಗಳಲ್ಲಿ ಅಪಾರ ಮೊತ್ತದ ಬಿಡಿಭಾಗ ಖರೀದಿ ಉಲ್ಲೇಖವಾಗಿದ್ರೆ,ವಾಸ್ತವದಲ್ಲಿ ಅವ್ಯಾವು ಉಗ್ರಾಣ ಸೇರುತ್ತಿರಲಿಲ್ಲವಂತೆ.ಬಿಡಿಭಾಗ ಪೂರೈಕೆಯಾದ್ರೂ ನಿರಂತರ ಕೊರತೆ ಸೃಷ್ಟಿಯಾದ ಬಗ್ಗೆ ಅನುಮಾನದ ಹಿನ್ನಲೆಯಲ್ಲಿ ತನಿಖಾ ತಂಡ ಆಪರೇಷನ್ ಗೆ ಇಳಿದು ಎಲ್ಲವನ್ನು ಪತ್ತೆ ಮಾಡಿದೆ. ಯಾರ ಗಮನಕ್ಕೂ ಬಾರದೆ ಗೌಪ್ಯವಾಗಿ ಎಲ್ಲದರ ಪರಿಶೀಲನೆ ಮಾಡಿ ಅಕ್ರಮವನ್ನು ಪತ್ತೆ ಮಾಡಿದೆ.
ಪರಿಶೀಲನೆ ಭಾಗವಾಗಿ ಯಾವ್ಯಾವ ಅವಧಿಯಲ್ಲಿ ಎಷ್ಟೆಷ್ಟು ಬಿಡಿಭಾಗ ಬಂದಿದೆ ಎಂದು ಅವಲೋಕಿಸಿದೆ. ಅನೇಕ ತಿಂಗಳ ದಾಖಲೆ ಪರಿಶೀಲನೆ ವೇಳೆ ಪತ್ತೆಯಾದ ಕೋಟ್ಯಾಂತರ ಅಕ್ರಮಕ್ಕೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅಧಿಕಾರಿ ಸಿಬ್ಬಂದಿ ವಿಚಾರಣೆಗೊಳಪಡಿಸಿದಾಗ ರಹಸ್ಯ ಬಯಲಾಗಿದೆ.ಅನೇಕ ತಿಂಗಳಿಂದಲೂ ನಿರಂತರ ಅಕ್ರಮ ನಡೆಸುತ್ತಿರುವುದಾಗಿ ಭ್ರಷ್ಟರು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.ಅದೆಲ್ಲವನ್ನು ಕ್ರೋಢೀಕರಿಸಿ ಆಡಳಿತ ಮಂಡಳಿಗೆ ವರದಿ ಸಲ್ಲಿಸಲಾಗಿತ್ತು.ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಎಲ್ಲ 8 ಅಧಿಕಾರಿ ಸಿಬ್ಬಂದಿ ಅಮಾನತು ಮಾಡಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಅಮಾನತ್ತಾದ ಅಧಿಕಾರಿ ಸಿಬ್ಬಂದಿಗಳು ಇವರೇ: -ಎಂ.ಆರ್ ಬಂಟನೂಕರ್.-ಸಹಾಯಕ ಉಗ್ರಣಾಧಿಕಾರಿ, ,ಉಗ್ರಾಣ ಅಧೀಕ್ಷಕಿ,, ಛಾಯಾ , ಶಿಲ್ಪ, -ಸಹಾಯಕ ಉಗ್ರಾಣ ಪಾಲಕಿ, ನಾಗರಾಜ್,-ಸಹಾಯಕ ಉಗ್ರಾಣ ಪಾಲಕ, ಅಶೋಕ್,- ಹಿರಿಯ ಸಹಾಯಕ , ರೂಪಾ ಎಸ್.- ಸಹಾಯಕ ಉಗ್ರಾಣ ಪಾಲಕಿ, ಪ್ರೇಮಾ ನರಿಯಣ್ಣನವರ್-ಸಹಾಯಕ ಉಗ್ರಾಣ ಪಾಲಕಿ, ರವೀಶ್ ಎಸ್ ಕೆ-ಕುಶಲಕರ್ಮಿ ಇವರುಗಳೇ ಉಗ್ರಾಣದಲ್ಲಿ ನಡೆದ ಕೋಟ್ಯಾಂತರ ಅಕ್ರಮದಲ್ಲಿ ತಮ್ಮ ಆಸೆ ಬುಡುಕತನ, ಕರ್ತವ್ಯಲೋಪ,ಅಧಿಕಾರ ದುರುಪಯೋಗದ ಕಾರಣಕ್ಕೆ ಅಮಾನತ್ತಾಗಿದ್ದಾರೆ.

ಯಾರ ವಿರುದ್ದ ಏನೆಲ್ಲಾ ಆಪಾದನೆಗಳಿದ್ದವು: ಕಿರಿಯ ಸಹಾಯಕ ಅಶೋಕ್ ಎನ್ ವಿರುದ್ದ ಹಣ ದುರುಪಯೋಗದ ಆರೋಪವಿದೆ. ಇನ್ನು ಶಿಲ್ಪ, ಸಹಾಯಕ ಉಗ್ರಾಣ ರಕ್ಷಕಿ ಮೇಲೂ ಇದೇ ಆರೋಪವಿದೆ.ಹಾಗೆಯೇ ಸಹಾಯಕ ಉಗ್ರಾಣಾಧಿಕಾರಿ ಭಂಟನೂರ್ ಕರ್ ವಿರುದ್ದ ಕರ್ತವ್ಯಲೋಪ ಆಪಾದನೆ ಹಾಗೂ ನಿಗಮದ 71,500 ಹಣವನ್ನು ಸ್ವಂತ ಖಾತೆಗೆ ಜಮೆ ಮಾಡಿಸಿಕೊಂಡ ಆರೋಪವಿದೆ. ಮೆಸಸ್ ಜಿಎಸ್ ಕಂಪೆನಿ ಸರಬರಾಜು ಮಾಡಿದ್ದ ಮಾಸ್ಕಿಂಗ್ ಟೇಪ್ ನ್ನು ಖರೀದಿಗೆ ಶಿಫಾರಸ್ಸು ಮಾಡಿದ ಆಪಾದನೆ ಹಿನ್ನಲೆಯಲ್ಲಿ ರವೀಶ್ ಎಸ್ ಕೆ ಕುಶಲಕರ್ಮಿ ,ರೂಪ ಎಸ್,ಉಗ್ರಾಣ ರಕ್ಷಕಿ,ಪ್ರೇಮಾ ಸರಿಯಣ್ಣನವರ್ ಸಹಾಯಕ ಉಗ್ರಾಣ ರಕ್ಷಕಿವಿರುದ್ಧವೂ ಇದೇ ಆಪಾದನೆಯಿದೆ.
ತನಿಖಾ ಸಮಿತಿ ರಚನೆ ಆಗಿದ್ದು ಹೇಗೆ: ಯಾರೆಲ್ಲಾ ತಂಡದಲ್ಲಿದ್ದರು: ದೂರುಗಳು ಬಂದ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ ಶಿವಕುಮಾರ್ ಅವರು 27-03-2026 ರಂದು ತನಿಖೆಗೆ ಸಮಿತಿ ರಚಿಸಿದ್ದರು. ಪರಿಮಳಾ ನಾಯಕ್ ಹಾಗೂ ರಮ್ಯ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯಲ್ಲಿ ಮಬೀನ್ ತಾಜ್, ಆನಂದ ಪ್ರಸಾದ್,ಆನಂದ್ ಎನ್ ಅವರಿದ್ದರು.ತಂಡ ಹಗಲುರಾತ್ರಿ ಎನ್ನದೆ ತನಿಖೆ ನಡೆಸಿ ಕೆಲವೇ ತಿಂಗಳಲ್ಲಿ ಅಕ್ರಮವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. 23-04-2026, 30-04-2026 ರಂದು ಸಮಿತಿಗಳಿಂದ ಸಲ್ಲಿಕೆಯಾಗಿದ್ದ ವರದಿ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದ್ದು. ಅಕ್ಟೋಬರ್ 2026ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಎಂಡಿ ಸೂಚನೆ ನೀಡಿದ್ದಾರೆ.

“ಶಿವಕುಮಾರ್ ಬಂದಾಗಿನಿಂದಲೂ ಬಿಎಂಟಿಸಿನೂ ಕ್ಲೀನ್ -ಭ್ರಷ್ಟರ ಎದೆಯಲ್ಲಿಯೂ ನಡುಕ….. ಕೆಎಸ್ ಆರ್ ಟಿಸಿ ಎಂಡಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಶಿವಕುಮಾರ್ ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಅವರು ತಂದಿರುವ ಸುಧಾರಣೆಗಳೇ ಸಾಕ್ಷಿ.ಬಿಎಂಟಿಸಿಯಲ್ಲಿ ಬಿಡಿಭಾಗಗಳ ಖರೀದಿ ಎನ್ನುವುದು ಭ್ರಷ್ಟಾಚಾರದ ಗೂಡಾಗಿದೆ ಎನ್ನುವುದರ ಮಾಹಿತಿ ದೊರೆತ ತಕ್ಷಣ ಕೆಎಸ್ ಆರ್ ಟಿಸಿಯ ಶಿಸ್ತುಪಾಲನಾಧಿಕಾರಿ ಯೂ ಅಗಿರುವ ಶಿವಕುಮಾರ್ ತಡಮಾಡದೆ ತನಿಖಾ ಸಮಿತಿ ರಚಿಸಿ ವರದಿಯನ್ನು ನೀಡುವಂತೆ ಸೂಚಿಸಿದ್ದರು.