
ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ ತಂದುಕೊಂಡಿದ್ದಾರೆ. ಪಕ್ಷದಲ್ಲಿ ಗಟ್ಟಿಗಿತ್ತಿ ಎಂದೇ ಕರೆಯಿಸಿಕೊಳ್ಳುವ ದೀಪಿಕಾ ರೆಡ್ಡಿ ತನ್ನ ಅಸಹನೆ-ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಮಂಜುನಾಥ ಗೌಡ ಅವರದು,ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಕಿಡಿಕಾರಿದ್ದಾರೆ..!

ಮಂಜುನಾಥ ಗೌಡ ಜತೆಗಿನ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಪ್ರೆಸ್‌ನೋಟ್ ಬಿಡುಗಡೆ ಮಾಡಿರುವ ದೀಪಿಕಾ ರೆಡ್ಡಿ, ತಮ್ಮ ಹುದ್ದೆಯನ್ನು ತಡೆಹಿಡಿದಿರುವ ಕ್ರಮ ಕಾನೂನುಬಾಹಿರ ಹಾಗೂ ಪ್ರತೀಕಾರದ ರಾಜಕೀಯದ ಭಾಗ ಎಂದು ಆರೋಪಿಸಿದ್ದಾರೆ. “ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯಕ್ಕೆ ನಾನು ಮೌನವಾಗುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಮ್ಮ ಮೇಲಿನ ವೈಯುಕ್ತಿಕ ದ್ವೇಷಕ್ಕೆ ಯುವ ಅಧ್ಯಕ್ಷರು ಹೀಗೆ ಮಾಡುತ್ತಿದ್ದಾರೆ.ಆದರೆ ಇದನ್ನು ತಾನು ಸಹಿಸುವುದಿಲ್ಲ.ಪಕ್ಷದ ಚೌಕಟ್ಟಿನಲ್ಲೇ ಇದರ ವಿರುದ್ಧ ಹೋರಾಡುವುದಾಗಿ ಸವಾಲೆಸೆದಿದ್ದಾರೆ.
ತಾನೇನು ಪಕ್ಷಕ್ಕೆ ಹೊಸಬಳಲ್ಲ.ಅಲ್ಲದೆ ಯಾರ ಬೆಂಬಲವೂ ಇಲ್ಲದೆ ಪಕ್ಷದ ಪ್ರಮುಖ ಚುಕ್ಕಾಣಿ ಹಿಡಿದವಳಲ್ಲ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಾವು 2.95 ಲಕ್ಷ ಮತಗಳನ್ನು ಪಡೆದಿದ್ದು, ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬಳಾಗಿದ್ದೇನೆ.ಇಂಥಾ ಪರಿಸ್ಥಿತಿಯಲ್ಲಿ ತನ್ನ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿರುವ ಮಂಜುನಾಥ ಗೌಡ ವಿರುದ್ಧ ಪಕ್ಷದ ವರಿಷ್ಟರ ಬಳಿ ದೂರು ತೋಡಿಕೊಳ್ಳಲು ನಿರ್ದರಿಸಿರುವುದಾಗಿಯೂ ದೀಪಿಕಾ ರೆಡ್ಡಿ ಹೇಳಿದ್ದಾರೆ..

ನಾನು ಸಮಾಜವನ್ನು ಹತ್ತಿರದಿಂದ ನೋಡಿಕೊಂಡು ಬೆಳೆದವಳು.ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಹೋರಾಟ ನಡೆಸಿ ಬೆಳೆದಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಆದರೆ ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಾಗುವುದು ಎಂದು ದೀಪಿಕಾ ರೆಡ್ಡಿ ತಿಳಿಸಿದ್ದಾರೆ..!

ಮಂಜುನಾಥ ಗೌಡ ಯಾಕೆ ದೀಪಿಕಾ ರೆಡ್ಡಿ ಅವರ ಹರಿಹಾಯುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೌಪ್ಯವಾಗಿದೆ.ರಾಜಕೀಯ ಎನ್ನುವ ಕಾರಣಗಳ ಆಚೆ ಬೇರೆ ಏನಾದರೂ ಹಿತಾಸಕ್ತಿ-ಉದ್ದೇಶಗಳು ಕೆಲಸ ಮಾಡುತ್ತಿವೆಯಾ ಗೊತ್ತಿಲ್ಲ.ಆದರೆ ಮಂಜುನಾಥ ಗೌಡ ವಿರುದ್ಧ ಯುವ ಘಟಕದಲ್ಲೆ ಸಾಕಷ್ಟು ಆಪಾದನೆಗಳು ಕೇಳಿಬಂದಿವೆ.ಡಿಕೆ ಶಿವಕುಮಾರ್ ಹೆಸರನ್ನು ಮುಂದಿಟ್ಟುಕೊಂಡು ಎಲ್ಲರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಮಂಜುನಾಥ ಗೌಡ ಅವರು ಮಾಡುತ್ತಿದ್ದಾರೆ ಎನ್ನುವ ಮಾತುಗಳಿವೆ.ಅದೇನೇ ಆದರೂ ಲಕ್ಷಾಂತರ ಮತ ಪಡೆದು ಗಮನ ಸೆಳೆದಿರುವ ದೀಪಿಕಾ ರೆಡ್ಡಿ ಅವರನ್ನು ಮೂಲೆಗುಂಪು ಮಾಡಲು ಮಂಜುನಾಥ ಗೌಡ ಪ್ರಜ್ನಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನುವುದೇ ಸತ್ಯವಾದಲ್ಲಿ ಅವರ ವಿರುದ್ಧವೇ ಕ್ರಮ ಜಾರಿಯಾಗಬೇಕಿದೆ.ಇಲ್ಲವಾದಲ್ಲಿ ಕಾಂಗ್ರೆಸ್ ನಲ್ಲೇ ಸ್ತ್ರೀಶಕ್ತಿ-ಮಹಿಳಾ ಸಬಲೀಕರಣ ಎನ್ನುವ ಪದಗಳಿಗೆ ಅರ್ಥವಿಲ್ಲವಾ ಎಂಬುದು ಸಾಬೀತಾಗಬಹುದೇನೋ..?
