ಪತ್ರಿಕಾ ಸ್ವಾತಂತ್ರ್ಯ( ಅಭಿವ್ಯಕ್ತಿ ಸ್ವಾತಂತ್ರ್ಯ)ವನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಯಾವ ರೀತಿಯ ವಿರೋಧ ವ್ಯಕ್ತವಾಗಬೇಕಿತ್ತೋ,? ಅಷ್ಟು ತೀವ್ರವಾದ ಆಕ್ಷೇಪ-ಅಸಮಾಧಾನ ಮಾದ್ಯಮಗಳಿಂದಲೇ ಕೇಳಿಬರ್ತಿಲ್ಲ ಎನ್ನುವುದು ಆಶ್ಚರ್ಯದಷ್ಟೇ ಅಘಾತಕಾರಿ ಕೂಡ ಹೌದು.
ಈ ಬಗ್ಗೆ ವಿಧಾನಸೌಧದ ಕ್ಯಾಂಪಸ್ ನಲ್ಲಿ ಒಂದಷ್ಟು ಪ್ರತಿಭಟನೆಗಳು, ಪತ್ರಕರ್ತರ ಗುಂಪಿನೊಳಗೆ ಒಂದಷ್ಟು ಮಾತುಕತೆ. ಪ್ರೆಸ್ ಕ್ಲಬ್ ನಂಥ ತಾಣದಲ್ಲಿ ಕುಡಿಯಲು ಕೂರುವವರ( ಎಲ್ಲರಿಗೂ ಅಲ್ಲ..ಹಾಗೆ ಮಾಡುವವರಿಗೆ ಮಾತ್ರ) ಅಮಲೇರಿದ ಆಕ್ರೋಶದಲ್ಲಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ವಿರುದ್ಧದ ಆಕ್ರೋಶದ ವಾತಾವರಣ ಕಂಡುಬರುತ್ತಿದೆಯೇ ವಿನಃ..ಒಂದು ಸಂಘಟಿತವಾದ ದೊಡ್ಡ ದ್ವನಿಯೇ ಪ್ರತಿದ್ವನಿಸಲಿಲ್ಲ ಸರ್ಕಾರದ ಸೊಕ್ಕನ್ನು ಅಡಗಿಸಲೇ ಇಲ್ಲ..
ಇಡೀ ಸಮಾಜದಲ್ಲಿ ಯಾರ ವಿಷಯದಲ್ಲಿ ಏನೇ ಅನ್ಯಾಯಗಳಾದ್ರೂ ನೊಂದವರ ಪರ ಅಲ್ಲೊಂದು ದೊಡ್ಡ ಧ್ವನಿಯಾಗಿ ಮಾದ್ಯಮಗಳಿರುತ್ತವೆ. ಆದರೆ ದುರಂತ ನೋಡಿ, ಇವತ್ತು ಮಾದ್ಯಮಗಳ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಕೆಲಸ ಸರ್ಕಾರಗಳಿಂದಲೇ ಆಗುತ್ತಿದ್ದರೂ, ಈ ವಿಷಯದಲ್ಲಿ ಮಾದ್ಯಮಗಳು ಅನ್ಯಾಯವಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರೂ ಮಾದ್ಯಮಗಳ ಪರ ದ್ವನಿ ಎತ್ತುವವರು, ಬೆಂಬಲಕ್ಕೆ ನಿಲ್ಲುವವರೇ ಇಲ್ಲವಾಗಿದೆ. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಈ ಬಗ್ಗೆ ಮಾತನಾಡಿ ಕೊಳ್ಳುತ್ತಿದ್ದರೂ ಅದರ ಹಿಂದೆ ರಾಜಕೀಯ ಇರುವುದು ಕೂಡ ಸ್ಪಷ್ಟ. ಎಲ್ಲರ ಪರವಾಗಿ ನೀವು ದ್ವನಿ ಎತ್ತುತ್ತೀರಿ, ಆದ್ರೆ ಅನ್ಯಾಯವಾಗಿದೆ ಎಂದು ನೀವೇ ಬಾಯಿ ಬಡಿದುಕೊಳ್ಳುತ್ತಿದ್ದರೂ ನಿಮ್ಮ ಪರವಾಗಿ ನಿಲ್ಲುವವರೇ ಇಲ್ಲವಾಯ್ತಲ್ಲ ಎಂದು ಜನ ಆಡಿಕೊಂಡು ಮಾತನಾಡುವಂತಾಗಿದೆ.
ಅವ್ಯವಹಾರ ಮುಚ್ಚಿಹಾಕಲು ಮಾಡಲಾದ ನಿರ್ಬಂಧವಾ?
ಮಾದ್ಯಮಗಳಿಗೆ ಇನ್ಮುಂದೆ ವಿಧಾನಸೌಧದೊಳಗೆ “ನೋ ಎಂಟ್ರಿ” ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು ಮಾದ್ಯಮ ವಲಯದಲ್ಲಿ ಆತಂಕದೊಂದಿಗೆ ಅಘಾತದ ಛಾಯೆ ಆವರಿಸಿದ್ದು ಸತ್ಯ. ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ಕಂಡುಬಂದಿತೆನ್ನಲಾದ ಅವ್ಯವಹಾರ ವೊಂದಕ್ಕೆ ಸಂಬಂಧಿಸಿದಂತೆ ಮಾದ್ಯಮಗಳು ಮಾಡಿದ ವರದಿಯೇ ನಿರ್ಬಂಧಕ್ಕೆ ಕಾರಣವಾಯಿತೆನ್ನಲಾಗಿದೆ. ಇದನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕಿದ್ದ ಸರ್ಕಾರ ತನ್ನ ಸಚಿವನೊಬ್ಬನ ಕಚೇರಿಯ ಕರ್ಮಕಾಂಡವನ್ನು ಮುಚ್ಚಿಹಾಕುವುದಕ್ಕೆ ಮಾದ್ಯಮಗಳ ಮೇಲೆ ನಿರ್ಬಂಧ ಎನ್ನುವ ಅಸ್ತ್ರ ಪ್ರಯೋಗಿಸಿದ್ದು ಮಾತ್ರ ದುರಂತ, ವಿಪರ್ಯಾಸ ಮತ್ತು ನಾಚಿಕೆಗೇಡಿತನದ ಪರಮಾವಧಿ.

ವಿಧಾನಸೌಧದೊಳಗೆ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ವಾಕ್ಯಗಳನ್ನು, ಮೂಟೆ ಕಟ್ಟಿ ಮೂಲೆಗೆ ಬಿಸಾಕಿ ಎಷ್ಟೋ ವರ್ಷಗಳೇ ಆಗಿವೆ ಬಿಡಿ. ಪಾಪ ಪುಣ್ಯಾತ್ಮ ಕೆಂಗಲ್ ಹನುಮಂತಯ್ಯ ಅವರಿಗೆ ತಾನು ನಿರ್ಮಿಸಲಿರುವ ವಿಧಾನಸೌಧ ಅಕ್ರಮ-ಅವ್ಯವಹಾರ-ಭ್ರಷ್ಟಾಚಾರ-ಅಧಿಕಾರದ ಹಪಾಹಪಿತನ-ಸ್ವಜನ ಪಕ್ಷಪಾತದಂಥ ಕೆಟ್ಟ ಪದಗಳಿಗೆ ಬಲಿಯಾಗುತ್ತೆನ್ನುವ ಸತ್ಯ ಅವತ್ತೇ ಗೊತ್ತಿದ್ದರೆ ಅವರು ವಿಧಾನಸೌಧ ಕಟ್ಟುವ ಗೋಜಲಿಗೇ ಹೋಗುತ್ತಿರಲಿಲ್ಲ ಎನ್ನಿಸುತ್ತೆ. ಮಾದ್ಯಮಗಳು ನಿಷ್ಪಕ್ಷಪಾತವಾಗಿ, ದಿಟ್ಟತೆಯಿಂದ ಕೆಲಸ ಮಾಡಿದ್ದರೆ ಇಂಥಾ ವಿಧಾನಸೌಧದಲ್ಲಿ ದಿನಕ್ಕೆ ಅದೆಷ್ಟು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹಗರಣ-ಭ್ರಷ್ಟಾಚಾರ ಬಯಲಿಗೆ ಬರುತ್ತಿತ್ತೋ ಯಾರಿಗೆ ಗೊತ್ತು..?
ಸಚಿವರ ಕಚೇರಿಗಳು ಅಕ್ರಮ-ಭ್ರಷ್ಟಾಚಾರ-ಕಮಿಷನ್ ದಂಧೆಯ ತಾಣಗಳಾಗುತ್ತಿವೆ ಎನ್ನುವುದನ್ನು ಪುಷ್ಟೀಕರಿಸುವ ರೀತಿಯಲ್ಲಿ ಅಂದು ನಡೆದ ಘಟನೆಯೊಂದರ ಬಗ್ಗೆ ಮಾದ್ಯಮಗಳು ಕಪೋಲಕಲ್ಪತವಾಗಿ ಸುದ್ದಿ ಮಾಡಿದಿದ್ದರೆ ಅದನ್ನು ವಿರೋಧಿಸಲು-ಖಂಡಿಸಲು ಕಾರಣವಿರುತ್ತಿತ್ತು. ಆದರೆ ನಡೆದಿದ್ದನ್ನೇ ಎಲ್ಲಾ ಮಾದ್ಯಮಗಳು ಯಥಾವತ್ತಾಗಿ ವರದಿ ಮಾಡಿದ್ವು. ಸಮಾಜವಾದಿ ಸಿದ್ದಾಂತದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದಾರ, ವಿಶಾಲ ಮನಸ್ಥಿತಿಯಲ್ಲಿ ಇದನ್ನು ಅವಲೋಕಿಸಿದ್ರೆ ಸಮಸ್ಯೆಯೇ ಆಗುತ್ತಿರಲಿಲ್ಲವೇನೋ..? ಆದರೆ ಅದ್ಯಾವ ಕೆಟ್ಟ ಮೂಡ್ ನಲ್ಲಿದ್ದರೋ ಮುಖ ಸಿಂಡಿರಿಸಿಕೊಂಡು ದಿಢೀರ್ ಯಾವ್ ಮಾದ್ಯಮಗಳನ್ನು ವಿಧಾನಸೌಧದ ಒಳಗೆ ಬಿಟ್ಕೋಬೇಡ್ರಿ.. ಇದು ನನ್ನ ಆರ್ಡರ್ ಎಂದು ಹೇಳಿದ್ದಷ್ಟೆ ಯಾವ್ ಮಿನಿಸ್ಟರ್, ಎಮ್ಮೆಲ್ಲೆನೂ ಮಾದ್ಯಮಗಳವರ ಜತೆ ಮೂವ್ ಮಾಡ್ಬೇಡ್ರಿ ಎಂದು ಫರ್ಮಾನ್ ಹೊರಡಿಸಿಯೇಬಿಟ್ರಂತೆ.
ಮಾದ್ಯಮಗಳನ್ನು ವಿಧಾನಸೌದದೊಳಗೆ ಬಿಟ್ಟುಕೊಳ್ಳಲು ನಿಯಮವೇನಾದರೂ ಇದೆಯಾ?
ಮಾದ್ಯಮಗಳ ಮೇಲೆ ಎಷ್ಟೇ ಮುನಿಸಿಕೊಂಡ್ರೂ ಅವರೊಂದಿಗೆ ಆತ್ಮೀಯವಾದ ಸಲಿಗೆಯನ್ನೇ ಹೊಂದಿರುವ ಸಿದ್ದರಾಮಯ್ಯ ಹೀಗೆ ಮಾಡಿದ್ದು ಆಶ್ಚರ್ಯದೊಂದಿಗೆ ಅಘಾತ ಮೂಡಿಸಿದ್ದು ಸುಳ್ಳಲ್ಲ. ಹಾಗೆ ನೋಡಿದ್ರೆ ಮಾದ್ಯಮಗಳನ್ನು ವಿಧಾನಸೌದದೊಳಗೆ ಬಿಟ್ಟುಕೊಳ್ಳಲೇಬೇಕೆನ್ನುವ ನಿಯಮಗಳೇನೂ ಇಲ್ಲ. ದೇಶದ ಶೇಕಡಾ 90ರಷ್ಟು ರಾಜ್ಯಗಳಲ್ಲಿ ಈ ಸಂಪ್ರದಾಯವಿಲ್ಲ. ಕರ್ನಾಟಕದಲ್ಲಿ ಮಾತ್ರ ಇಂತದ್ದೊಂದ್ ಸಂಪ್ರದಾಯವಿದೆ. ವಿಧಾನಸೌದದಲ್ಲಿ ಓಡಾಡಿಕೊಂಡಿರಲು, ಸಿಎಂ, ಸ್ಪೀಕರ್ ಸೇರಿದಂತೆ ಎಲ್ಲರ ಕಚೇರಿಗಳಿಗೂ ಅನುಮತಿಯಿಲ್ಲದೆ ಪ್ರವೇಶಿಸುವ, ಅವರನ್ನು ಮಾತನಾಡಿಸುವ, ಹೇಳಿಕೆ ಪಡೆಯಲು ಅವಕಾಶವಿದೆ. ಹಾಗೆಂದು ಮಾದ್ಯಮಗಳು ಕೂಡ ತಮಗೆ ಕೊಟ್ಟ ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಯಾವತ್ತೂ ಮಿಸ್ಯೂಸ್ ಮಾಡಿಕೊಂಡಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಆಡಳಿತ ಯಂತ್ರದಿಂದ ತಪ್ಪು ನಡೆದಾಗ, ಚುನಾಯಿತರು ದಾರಿ ತಪ್ಪಿದ ಸನ್ನಿವೇಶಗಳನ್ನು ಯಥಾವತ್ತಾಗಿ ತೋರಿಸಿ, ಅವರ ಕಿವಿ ಹಿಂಡುವ ಕೆಲಸವನ್ನಷ್ಟೇ ಮಾದ್ಯಮಗಳು ಮಾಡಿವೆ. ಅದನ್ನು ಬಿಟ್ಟರೆ ತಮ್ಮ ಇತಿಮಿತಿಗಳನ್ನು ಮೀರಿ, ನಿಯಮಗಳ ಬ್ಯಾರಿಕೇಡನ್ನು ದಾಟುವ ದುಸ್ಸಾಹವನ್ನಾಗಲಿ, ಧೈರ್ಯವನ್ನಾಗಲಿ ಮಾಡಿಲ್ಲ, ಮಾಡುವುದು ಇಲ್ಲ.
ಮಾದ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾವಲು ನಾಯಿಗಳಂತೆ ಕೆಲಸ ಮಾಡಬೇಕು. ಇದನ್ನು ನಿಜವಾಗಿಯೂ ಮಾದ್ಯಮಗಳು ಮಾಡುತ್ತಿವೆಯಾ..? ರಾಜಕಾರಣಿಗಳನ್ನು ಕೇವಲ ಸಂಪರ್ಕವೆನ್ನುವ ಬ್ಯಾರಿಕೇಡ್ ನಲ್ಲಿಟ್ಟು ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕಿದ್ದ ಮಾದ್ಯಮಗಳು ಇವತ್ತೇನಾಗಿವೆ. ಅವರೊಂದಿಗೆ ಸಂಬಂಧ ಬೆಳೆಸಿಕೊಂಡು ತಮ್ಮ ಹಿತಾಸಕ್ತಿಯ ಬೇಳೆ ಬೇಯಿಸಿಕೊಳ್ಳುವ ಗುಲಾಮಗಿರಿ ಮಾಡ್ತಿವೆ. ಕನ್ನಡ ಮಾದ್ಯಮಗಳ ಬಗ್ಗೆ ಹಿಂದೆ ಇದ್ದಂತ ಗೌರವಪೂರಿತ ಅಂಜಿಕೆ ಇವತ್ತು ರಾಜಕಾರಣಿಗಳಿಗೆ ಇಲ್ಲವೇ ಇಲ್ಲವಾಗಿದೆ.

ಇವತ್ತಿನ ವರದಿಗಾರರು ಹೇಗಾಗಿದ್ದಾರೆ?
ಒಂದಷ್ಟು ವರದಿಗಾರರು ಒಬ್ಬೊಬ್ಬ ಸಚಿವ, ಶಾಸಕರ ಚೇಲಾಬಾಲಗಳಾಗಿಬಿಟ್ಟಿದ್ದಾರೆ., ಅವರುಗಳೇ ಅವರವರ ಪರ-ಬೇಡದವರ ವಿರುದ್ದ ಬ್ರೇಕಿಂಗ್- ಎಕ್ಸ್ ಕ್ಲ್ಯೂಸಿವ್ ಸುದ್ದಿಗಳನ್ನು ಕ್ರಿಯೇಟ್ ಮಾಡಿ ಅವನ್ನು ಹೈಪ್ ಮಾಡಿ ನಂತರ ಅದನ್ನು ಎನ್ ಕ್ಯಾಶ್-ವರ್ಕೌಟ್ ಮಾಡಿಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿವೆ. ತಮ್ಮ ಅತ್ಯಾಪ್ತ-ಆತ್ಮೀಯವಾದ ಸಚಿವರು, ಶಾಸಕರು, ವಿಪಕ್ಷಗಳ ನಾಯಕರುಗಳು ದಿನಬೆಳಗಾದ್ರೆ ಏನ್ ಹೇಳಬೇಕು. ಏನನ್ನು ಮಾತನಾಡಬೇಕು ಎನ್ನುವುದರಿಂದ ಹಿಡಿದು, ಹೀಗೆಯೇ ಮಾತನಾಡಬೇಕು ಎನ್ನುವುದರವರೆಗಿನ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆಂದ್ರೆ ಇವತ್ತಿನ ಪತ್ರಿಕೋದ್ಯಮ ಎಲ್ಲಿಗೆ ಬಂದು ತಲುಪಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ಹೇಳಿಕೆ, ಪ್ರತಿಕ್ರಿಯೆ, ಬೈಟ್ಸ್ ಗಳಿಗೆ ಇವತ್ತು ಗೋಗರೆಯಬೇಕಾದ, ಹಲ್ಲು ಕಿರಿಯಬೇಕಾದ, ಸನ್ನಿವೇಶ ಮಾದ್ಯಮಗಳಿಗೆ ಇದೆ. ಹಿಂದಿನ ಪತ್ರಕರ್ತರುಗಳೇ ವಿಧಾನಸೌಧದ ಪಡಸಾಲೆಯಲ್ಲಿ ಈ ಬಗ್ಗೆ ಹೇಳಿಕೊಂಡು ಅಡ್ಡಾಡುತ್ತಿದ್ದಾರಂತೆ. ನಮ್ಮ ಕಾಲದಲ್ಲೆಲ್ಲಾ ಹೀಗೆ ಇರಲಿಲ್ಲ ಬಿಡಿ. ರಾಜಕಾರಣಿಗಳೇ ಸರ್ ಒಂದು ಹೇಳಿಕೆ ತಗೊಳ್ಳಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದರು. ಪತ್ರಕರ್ತರು ಕೂಡ ಅಷ್ಟೇ ವೃತ್ತಿನಿಷ್ಟರಾಗಿದ್ದರು, ವಸ್ತುನಿಷ್ಟರಾಗಿದ್ದರು. ಓಲೈಕೆ ಇತ್ತಾದ್ರೂ ಇಷ್ಟೊಂದು ಅಪಾಯಕಾರಿ ಮಟ್ಟದಲ್ಲಿರಲಿಲ್ಲ.
ಪತ್ರಕರ್ತರು ಇಂದಿನಂತೆ ತಮ್ಮನ್ನು ಮಾರಿಕೊಂಡಿರಲಿಲ್ಲ. ಇವತ್ತು ನಮ್ಮ ಮಾದ್ಯಮ ಮಿತ್ರರ ಸ್ತಿತಿ ಎಷ್ಟು ಹೀನಾಯವಾಗಿದೆ. ಶೋಚನೀಯವಾಗಿದೆ ಎಂದ್ರೆ ಜನಪ್ರತಿನಿಧಿಗಳಿಗೆ ನೇರ-ನಿಷ್ಟೂರವಾಗಿ ಪ್ರಶ್ನೆ ಕೇಳುವವರಿಲ್ಲವಾಗಿದೆ. ಪ್ರಶ್ನೆ ಕೇಳಿದ್ರೆ ಅವರೆಲ್ಲಿ ಬೇಸರಿಸಿಕೊಳ್ಳುತ್ತಾರೆಂದು ಆಲೋಚಿಸಿ, ಅವರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಶ್ನೆ ಕೇಳುವ ಮಟ್ಟಕ್ಕೆ ಮಾದ್ಯಮಮಿತ್ರರು ಬಂದಿದ್ದಾರೆನ್ನುವುದು ದುರಂತವಷ್ಟೇ ಅಲ್ಲ ವಿಪರ್ಯಾಸ ಕೂಡ. ಪತ್ರಕರ್ತರು ಬಿಕರಿಯಾಗಿದ್ದಾರೆ, ಅವರನ್ನು ಮ್ಯಾನೇಜ್ ಮಾಡೋದು ಕಷ್ಟವೇ ಅಲ್ಲ ಎನ್ನುವ ಮನಸ್ಥಿತಿ ಬಹುತೇಕ ರಾಜಕಾರಣಿಗಳದ್ದಾಗಿರುವಾಗ ಮಾದ್ಯಮಗಳನ್ನು ವಿಧಾನಸೌಧದ ಒಳಗೆ ಬಿಟ್ಟುಕೊಳ್ಳದಂಥ ನಿರ್ದಾರ ಕೈಗೊಂಡಿರುವುದರಲ್ಲಿ ಆಶ್ವರ್ಯವಿಲ್ಲ ಅಲ್ವಾ..?!

ಮಾದ್ಯಮಗಳು ಒಗ್ಗಟ್ಟಾದರೆ ಏನಾಗುತ್ತದೆ
ಮಾದ್ಯಮಗಳ ನಿರ್ಬಂಧದ ವಿಚಾರದಲ್ಲಿ ದೊಡ್ಡ ಮಟ್ಟದ ದ್ವನಿ ಇವತ್ತು ಮಾದ್ಯಮಗಳಿಂದ ವ್ಯಕ್ತವಾಗುತ್ತಿದೆ. ವಿಧಾನಸೌಧದ ಮುಂದೆ ಒಂದಷ್ಟು ಮಾದ್ಯಮಮಿತ್ರರು ಪ್ರತಿಭಟನೆ ಮಾಡಿದ್ದನ್ನು ಬಿಟ್ಟರೆ ಸರ್ಕಾರ ತನ್ನ ನಿರ್ದಾರ ಹಿಂಪಡೆಯುವಷ್ಟರ ಮಟ್ಟಿಗಿನ ಪ್ರೆಷರ್ ಕ್ರಿಯೇಟ್ ಆಗಿಲ್ಲ. ಮಾದ್ಯಮಗಳು ಮನಸ್ಸು ಮಾಡಿದ್ರೆ, ದಿಟ್ಟವಾದ ನಿರ್ದಾರ ಕೈಗೊಂಡ್ರೆ ಏನ್ ಬೇಕಾದ್ರೂ ಮಾಡಬಹುದೆನ್ನುವ ಆ ಮಾತು ಸಂಪೂರ್ಣ ಸುಳ್ಳಾಗಿದೆ. ಎಲ್ಲಾ ಮಾದ್ಯಮಗಳು ತಮ್ಮ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು ವೃತ್ತಿಮತ್ಸರವನ್ನು ಬದಿಗೊತ್ತಿ,ಒಂದಾದ್ರೆ ಸರ್ಕಾರ ತನ್ನ ನಿರ್ದಾರ ಹಿಂಪಡೆದು ಇಂಥಾ ನಿರ್ದಾರಕ್ಕೆ ಕ್ಷಮೆ ಕೋರುವುದು ಅಸಾಧ್ಯನಾ..? ಅದ್ಯಾವ ಕಷ್ಟದ ಮಾತ್ಹೇಳಿ..! ಆದರೆ ಮಾದ್ಯಮಗಳಲ್ಲೇ ಆ ಒಗ್ಗಟ್ಟು-ಐಕ್ಯತೆ-ಸಂಘಟನೆ ಇಲ್ಲವಾಗಿದೆ. ಇದು ನಮ್ಮನ್ನಾಳುವ ಸರ್ಕಾರಗಳಿಗೂ ಗೊತ್ತು, ಹಾಗಾಗಿನೇ ಮಾದ್ಯಮಗಳಲ್ಲೇ ಒಡಕು ಸೃಷ್ಟಿಸಿ ಪರಸ್ಪರರ ನಡುವೆ ಸಂಘರ್ಷಕಾರಿ ವಾತಾವರಣ ಜೀವಂತಗೊಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಗೇಮ್ ಪ್ಲೇ ಮಾಡ್ತಿದೆ ಸರ್ಕಾರ ಅನ್ನಿಸ್ತಿದೆ.
ಒಂದಷ್ಟು ಮಾದ್ಯಮಮಿತ್ರರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಗೋದೇ ಇಲ್ಲ, ಬಿಲ್ ಕುಲ್ ಇಲ್ಲ. ಸುತಾರಾಂ ಆಗೊಲ್ಲ ಎನ್ನುವ ಉತ್ತರವನ್ನು ಪಡೆದುಬಂದಿದ್ದಾರೆ ಎನ್ನುವುದನ್ನು ಬಿಟ್ಟರೆ ಪತ್ರಿಕೋದ್ಯಮದ ದಿಗ್ಗಜರೆನಿಸಿಕೊಳ್ಳುವ ಪಬ್ಲಿಕ್ ಟಿವಿ ರಂಗನಾಥ್, ಟಿವಿ9 ರಂಗನಾಥ ಭಾರದ್ವಜ್, ಸುವರ್ಣ ನ್ಯೂಸ್ ನ ರವಿ ಹೆಗ್ಗಡೆ, ಅಜಿತ್ ಹನುಮಕ್ಕನವರ್, ಶಶಿಧರ್ ಭಟ್, ವಿಶ್ವೇಶ್ವರ ಭಟ್, ಪ್ರಜಾವಾಣಿಯ ತಿಲಕ್ ಕುಮಾರ್, ರವೀಂದ್ರ ಭಟ್ಟ ಐನಕೈ, ವೈ.ಗ ಜಗದೀಶ್ ಸೇರಿದಂತೆ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುವ ನೂರಾರು ಪತ್ರಕರ್ತರು ಕೈ ಕಟ್ಟಿ ಸುಮ್ಮನೆ ಕೂತಿರುವುದು ಬೇಸರ ಮೂಡಿಸುತ್ತೆ. ಏಕೆ ತಮ್ಮ ಚಾನೆಲ್ ಪತ್ರಿಕೆಗಳ ವರದಿಗಾರರನ್ನು ಮುಂದೆ ಬಿಟ್ಟು ಅವರಿಗಾಗುವ ಅನ್ಯಾಯ-ಅವಮಾನ ನೋಡಿಕೊಂಡು ಅದರಿಂದ ಮಜಾ ಪಡೆಯುವುದಕ್ಕಷ್ಟೇನಾ ಇವರೆಲ್ಲಾ ಸೀಮಿತ. ಎಲ್ಲಿ ಹೋಯ್ತು ಅವರಲ್ಲಿನ ಕಿಚ್ಚು-ಸ್ವಾಭಿಮಾನ-ಅವಮಾನಕ್ಕೆ ತೆಗೆದುಕೊಳ್ಳಬೇಕಾದ ಪ್ರತೀಕಾರ. ಮಾದ್ಯಮಗಳಾಗಿ ನಾವೆಲ್ಲಾ ಪ್ರಶ್ನೆ ಮಾಡಬೇಕಿರುವುದು ಇದನ್ನು.
ಮಾದ್ಯಮಗಳೆಲ್ಲಾ ಒಟ್ಟಾದ್ರೆ ವಿಧಾನೌಧವನ್ನು ಶೇಕ್ ಮಾಡೋದು ಯಾವ ಕಷ್ಟದ ಕೆಲಸ ಹೇಳಿ..? ಸಿದ್ದರಾಮಯ್ಯ ಅವರನ್ನು ಮನವೊಲಿಸುವುದು ಕಷ್ಟದಾಯಕನಾ..? ಮನವೊಲಿಕೆಗೂ ಬಗ್ಗದಿದ್ದರೆ ಸರ್ಕಾರಕ್ಕೇನೆ ಬಹಿಷ್ಕಾರ ಹಾಕುವ (ಬಾಯ್ಕಾಟ್ ಮಾಡುವ) ನಿರ್ದಾರ ತೆಗೆದುಕೊಳ್ಳುವುದು ಕಷ್ಟನಾ..? ಮಾದ್ಯಮಗಳ ಒಗ್ಗಟ್ಟು-ಒತ್ತಡಕ್ಕೆ ಮಣಿಯದೆ ಇರುವವರು ಈ ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ..? ಆದರೆ ಆ ಒಗ್ಗಟ್ಟಿನ ಮಂತ್ರ ಪಠಣೆ ಆಗುತ್ತಿಲ್ಲ ಎನ್ನುವುದಷ್ಟೇ ದುರಂತ. ಇದೆಲ್ಲದನ್ನು ಲೀಡ್ ಮಾಡುವಂತ ಸಮರ್ಥ ನಾಯಕತ್ವ ಇಲ್ಲವಾಗಿರುವುದೇ ವಿಪರ್ಯಾಸ.
ಇದನ್ನೂ ಓದಿ | ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ?
ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ-ಸಂಘಟನೆಗಳು ಗೆಣಸು ಕೆರೆಯುತ್ತಿವೆಯಾ..?!
ಮಾದ್ಯಮಗಳ ಮೇಲೆ ಸರ್ಕಾರ ಇಷ್ಟೊಂದು ನಿಷ್ಟೂರವಾದ ರೂಪದಲ್ಲಿ ನಿರ್ಬಂಧ ಹೇರಿರುವಾಗ ಪತ್ರಕರ್ತರನ್ನು ಪ್ರತಿನಿಧಿಸುವ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ನಂಥ ಪ್ರಾತಿನಿಧಿಕ ಸಂಸ್ಥೆಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಮೌನಕ್ಕೆ ಶರಣಾಗಿರುವುದು ಹೇಸಿಗೆ ತರಿಸುತ್ತದೆ. ಪತ್ರಕರ್ತರ ಹೆಸರಲ್ಲಿ ರಾಜಕೀಯ ಮಾಡೊಕ್ಕೆ. ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕಷ್ಟೇನಾ ಸಂಘಟನೆಗಳಿರುವುದು, ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ಸಂಘದ ಅಧ್ಯಕ್ಷರಾಗಿರುವ ಶಿವಾನಂದ ತಗಡೂರು ಅವರಂಥ ಮಹಾನುಭಾವನಿಗೆ ಈ ಪ್ರಶ್ನೆಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಧೈರ್ಯವಾಗಿ ಇಂತದ್ದೊಂದು ಪ್ರಶ್ನೆ ಮಾಡ್ತಿದೆ.

ಪ್ರೆಸ್ ಕ್ಲಬ್ ನಲ್ಲಿರುವ ಪದಾಧಿಕಾರಿಗಳಿಗೆ ದಿಟ್ಟವಾಗಿ ಪ್ರಶ್ನಿಸುತ್ತಿದ್ದೇವೆ. ನಿಮ್ಮ ಹಿತಾಸಕ್ತಿ-ಸ್ವಾರ್ಥಗಳಿಗೆ ಮಾತ್ರ ಸಂಘ-ಕ್ಲಬ್ ಗಳನ್ನು ಬಳಸಿಕೊಳ್ಳುತ್ತಿದ್ದಾರಾ..? ನಾಚಿಕೆ ಆಗುವಂತ ವಿಚಾರವಲ್ಲವೇ ಇದು.. ಮಾದ್ಯಮ ಮಿತ್ರರು ವಿಧಾನಸೌಧದೊಳಗೆ ಪ್ರವೇಶ ಪಡೆಯದೆ ಕೆಂಗಲ್ ಗೇಟ್ ನಲ್ಲಿ ಹೈರಾಣವಾಗಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಗೆ ನಿಮ್ಮಗಳ ನಿರ್ಲಕ್ಷ್ಯ-ಬೇಜವಾಬ್ದಾರಿತನ-ಹೊಣೆಗೇಡಿತನವೇ ಕಾರಣ ಅಲ್ವಾ..! ಮಾದ್ಯಮಮಿತ್ರರ ತಲೆಗಳನ್ನು ತೋರಿಸಿ ನಿಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ಕಡಿಮೆ ಮಾಡಿ. ನಿಮಗೆ ಅಧಿಕಾರ-ಅವಕಾಶ ನೀಡಿರುವುದು ಮಾದ್ಯಮಮಿತ್ರರು ಸಮಾಜದಲ್ಲಿ ಘನತೆಯಿಂದ ಬಾಳುವಂಥ ಸನ್ನಿವೇಶ ಸೃಷ್ಟಿ ಮಾಡಿ ಕೊಡಲು, ನಿಷ್ಪಕ್ಷಪಾತವಾಗಿ, ನಿರ್ಭಿಡೆಯಿಣದ ಕೆಲಸ ಮಾಡುವಂಥ ವಾತಾವರಣ ನಿರ್ಮಿಸಿಕೊಡಲು..ಅದನ್ನು ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಬರೋದೇ ಸೂಕ್ತ.










