ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವು ಟೂರ್ನಿಯ ಸೆಮಿಫೈನಲ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ.
ಸ್ಯಾಮ್ಸನ್ ಅಜೇಯ ಆಟ:
ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್‌ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿತು.
ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲಿ ಕೆಲವು ಆಘಾತಗಳಾದವು. ಆದರೆ, ಸಂಜು ಸ್ಯಾಮ್ಸನ್ (sanju samson) ಅವರ ಬ್ಯಾಟಿಂಗ್ ಪ್ರದರ್ಶನವು ಇಡೀ ಕ್ರೀಡಾಂಗಣದ ವಾತಾವರಣವನ್ನೇ ಬದಲಿಸಿತು. ಅತ್ಯಂತ ಜವಾಬ್ದಾರಿಯುತವಾಗಿ ಆಡಿದ ಸ್ಯಾಮ್ಸನ್, ಕೇವಲ 50 ಎಸೆತಗಳಲ್ಲಿ 97 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ ಸಿಡಿದ ಅಬ್ಬರದ ಸಿಕ್ಸರ್‌ಗಳು ಮತ್ತು ಬೌಂಡರಿಗಳು ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಕಂಗಾಲಾಗಿಸಿದವು. ಕೊನೆಯ ಓವರ್‌ನಲ್ಲಿ ಸ್ಯಾಮ್ಸನ್ ಬಾರಿಸಿದ ಬೌಂಡರಿಯು ಭಾರತಕ್ಕೆ 19.2 ಓವರ್‌ಗಳಲ್ಲೇ 199 ರನ್ ತಲುಪಿ, 5 ವಿಕೆಟ್‌ಗಳ ಗೆಲುವು ತಂದುಕೊಟ್ಟಿತು.
ಇದನ್ನೂ ಓದಿ | ಟಿ20 ವಿಶ್ವಕಪ್ 2026: ಸೆಮಿಫೈನಲ್ ಕನಸಿಗಾಗಿ ಪಾಕಿಸ್ತಾನಕ್ಕೆ ಇಂದು ‘ಡು ಆರ್ ಡೈ’
ಮುಂದಿನ ಹಾದಿ:
ಈ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿದ ನಾಲ್ಕನೇ ತಂಡವಾಗಿ ಭಾರತ ಹೊರಹೊಮ್ಮಿದೆ. ಈಗಾಗಲೇ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಹಂತಕ್ಕೆ ತಲುಪಿವೆ. ಮಾರ್ಚ್ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದ ಪಾಲಿಗೆ ಇದು ಆರನೇ ಟಿ20 ವಿಶ್ವಕಪ್ ಸೆಮಿಫೈನಲ್ ಆಗಿದೆ.










