“ಯುವಕರೇ ದೇಶದ ಶಕ್ತಿ”, “ಜನಸಾಮಾನ್ಯರೇ ನಮ್ಮ ದೇವರು” ಎನ್ನುವ ಮಾತುಗಳು ಕೇವಲ ಭಾಷಣದ ವೇದಿಕೆಗಳಿಗೆ ಸೀಮಿತವೇ? ರಾಜ್ಯದ ಜನತೆ ಕುಡಿಯುವ ನೀರು, ರಸ್ತೆ, ಮೂಲಭೂತ ಸೌಕರ್ಯಗಳಿಗಾಗಿ ಕಛೇರಿಗಳಿಗೆ ಅಲಿದು ತಮ್ಮ ಚಪ್ಪಲಿಗಳೆ ಸವೆಸುತ್ತಿದ್ದರೂ ಕ್ಯಾರೆ ಎನ್ನದ ಈ ಸರ್ಕಾರ, ಶಾಸಕರ ಮೋಜು-ಮಸ್ತಿಗೆ ಮಾತ್ರ ಒಂದೇ ದಿನದಲ್ಲಿ ಸ್ಪಂದಿಸುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಐಪಿಎಲ್ ಕ್ರಿಕೆಟ್: ಜನರಿಗೆ ‘ಬ್ಲಾಕ್’ ದಂಧೆ, ಶಾಸಕರಿಗೆ ‘ಫ್ರೀ’ ಟಿಕೆಟ್ ಭಾಗ್ಯ!
ಕಳೆದ ಎರಡು ದಿನಗಳಿಂದ ವಿಧಾನಸಭೆಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೋ ಇಲ್ಲವೋ ಎಂಬ ಆತಂಕದ ನಡುವೆ, ಶಾಸಕರು ಮಾತ್ರ ಐಪಿಎಲ್ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು ವಿಪರ್ಯಾಸ. “ನಾವು ವಿಐಪಿಗಳು, ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ” ಎಂದು ಹಪಹಪಿಸುತ್ತಿದ್ದ ಶಾಸಕರ ಬೇಡಿಕೆಗೆ ಮಣಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸಭೆ ನಡೆಸಿ ತಲಾ 2 ಟಿಕೆಟ್ (1+1) ವ್ಯವಸ್ಥೆ ಮಾಡಿದ್ದಾರೆ.
ಜನಸಾಮಾನ್ಯರು ಒಂದು ಟಿಕೆಟ್‌ಗಾಗಿ ಹಗಲು ರಾತ್ರಿ ಪರದಾಡಿ, ಸಾವಿರಾರು ರೂಪಾಯಿ ತೆತ್ತು ‘ಬ್ಲಾಕ್’ನಲ್ಲಿ ಖರೀದಿಸುತ್ತಿದ್ದರೆ, ಜನಪ್ರತಿನಿಧಿಗಳಿಗೆ ಮಾತ್ರ ಒಂದೇ ಫೋನ್ ಕರೆಯಲ್ಲಿ ಕೆಲಸವಾಗಿದೆ. ಇಲ್ಲಿ ಪ್ರಶ್ನೆ ಏನೆಂದರೆ, ಜನರ ಕೆಲಸಕ್ಕಾಗಿ ಒಂದೇ ದಿನದಲ್ಲಿ ಇಂತಹ ಸ್ಪಂದನೆ ಈ ಸರ್ಕಾರದಿಂದ ಯಾಕೆ ಸಿಗುತ್ತಿಲ್ಲ?
ಯುವಕರ ಭವಿಷ್ಯದ ಜೊತೆ ಚೆಲ್ಲಾಟ: 3 ವರ್ಷವಾದರೂ ಇಲ್ಲ ಉದ್ಯೋಗದ ‘ಕಾಲ್‌ಫಾರ್ಮ್’
ಒಂದೆಡೆ ಶಾಸಕರ ಐಪಿಎಲ್ ಮೋಜು ಜೋರಾಗಿದ್ದರೆ, ಇನ್ನೊಂದೆಡೆ ನಾಳಿನ ಭಾರತದ ನಿರ್ಮಾತೃಗಳಾದ ಯುವಕರು ಬೀದಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ, ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಬೇಕಿದ್ದ ಯಾವುದೇ ದೊಡ್ಡ ಮಟ್ಟದ ನೇಮಕಾತಿ ಅಧಿಸೂಚನೆಗಳು (Notification) ಹೊರಬಿದ್ದಿಲ್ಲ.
- ವಯಸ್ಸು ಮೀರುತ್ತಿದೆ, ಭರವಸೆ ಸಾಯುತ್ತಿದೆ: ಲಕ್ಷಾಂತರ ಯುವಕರು ಹಳ್ಳಿ ಬಿಟ್ಟು ನಗರ ಸೇರಿ, ಸಾಲ ಮಾಡಿ ಲೈಬ್ರರಿ ಹಾಗೂ ಕೋಚಿಂಗ್ ಸೆಂಟರ್ಗಳಲ್ಲಿ ಹಗಲಿರುಳು ಓದುತ್ತಿದ್ದಾರೆ.
- ಖಾಲಿ ಹುದ್ದೆಗಳ ಸುರಿಮಳೆ, ಭರ್ತಿ ಮಾತ್ರ ಶೂನ್ಯ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2.65 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ನೇಮಕಾತಿ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿದೆ.
- ಸರ್ಕಾರದ ನೆಪಗಳು: ಹಿಂದಿನ ಸರ್ಕಾರದ ತಪ್ಪುಗಳು ಅಥವಾ ತಾಂತ್ರಿಕ ಕಾರಣಗಳನ್ನು ನೀಡಿ ಕಾಲಹರಣ ಮಾಡುತ್ತಿರುವ ಸರ್ಕಾರಕ್ಕೆ, ಶಾಸಕರ ಟಿಕೆಟ್ ವಿಚಾರದಲ್ಲಿ ಇರುವ “ವೇಗ” ಯುವಕರ ಉದ್ಯೋಗದ ವಿಚಾರದಲ್ಲಿ ಯಾಕಿಲ್ಲ?
ಶಾಸಕರಿಗೆ ವಿಐಪಿ ಸೀಟುಗಳನ್ನು ಕೊಡಿಸಲು ತೋರುವ ಆಸಕ್ತಿಯನ್ನು, ಅದೇ ವಿರೋಧ ಪಕ್ಷದವರ ಜೊತೆಗೂಡಿ ಉದ್ಯೋಗದ ಸಮಸ್ಯೆ ಬಗೆಹರಿಸಲು ಈ ಸರ್ಕಾರ ಯಾಕೆ ತೋರುತ್ತಿಲ್ಲ? ಐಪಿಎಲ್ ಟಿಕೆಟ್ ಪಡೆಯಲು ಇರುವ ‘ಹಕ್ಕು’ ಯುವಕರಿಗೆ ಉದ್ಯೋಗ ಕೇಳಲು ಇಲ್ಲವೇ?
ರಾಜಕಾರಣಿಗಳ ಐಷಾರಾಮಿ ಜೀವನಕ್ಕೆ ಬೆಲೆ ಕೊಡುವ ಸರ್ಕಾರ, ತಂದೆ-ತಾಯಿಯನ್ನು ಬಿಟ್ಟು ಬಂದು ಬೀದಿಯಲ್ಲಿ ಓದುತ್ತಿರುವ ಬಡ ಅಭ್ಯರ್ಥಿಗಳ ಕಣ್ಣೀರಿಗೆ ಯಾವಾಗ ಬೆಲೆ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.










