
ರಾಜಧಾನಿ ಬೆಂಗಳೂರಿನಲ್ಲಿ ಕೊಲೆ ಸುಲಿಗೆ ದರೋಡೆಗಿಂತ ಹೆಚ್ಚು ಆತಂಕ ಮೂಡಿಸಿರುವುದು ಡ್ರಗ್ಸ್ ಮಾಫಿಯಾ.ಏರಿಯಾಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇವತ್ತು ಡ್ರಗ್ಸ್ ಮಾರಾಟದ ಜಾಲ ಸಿಗಬಹುದೇನೋ..? ಮಾದಕ ದ್ರವ್ಯದ ವ್ಯಸನಕ್ಕೆ ಸಿಲುಕಿ ಮುಗ್ದ ಮಕ್ಕಳು ತಮ್ಮ ಆರೋಗ್ಯದೊಂದಿಗೆ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ತಿದಾರೆ.ಡ್ರಗ್ಸ್ ದಂಧೆ ಹಿಂದೆಂದಿಗಿಂತ ಇಂದು ಅಪಾಯಕಾರಿ ಮಟ್ಟದಲ್ಲಿ ಆಕ್ಟೀವ್ ಆಗೊಕ್ಕೆ ಕಾರಣವೇ ಆ ಏರಿಯಾದಲ್ಲಿನ ಪೊಲೀಸ್ ಹಾಗೂ ರಾಜಕಾರಣದ ವ್ಯವಸ್ಥೆ. ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿರುವ ಸಾಕಷ್ಟು ಪೊಲೀಸರಿಗೆ ಇವತ್ತು ಹಣ ಮಾಡೊಕ್ಕೆ ಸಹಕಾರಿ ಆಗುತ್ತಿರುವುದೇ ಈ ಡ್ರಗ್ಸ್ ಮಾಫಿಯಾ ಅಂತೆ.ಇದರ ಲಾಭವನ್ನು ಆ ಏರಿಯಾದ ಪುಡಿ ರಾಜಕಾರಣಿಗಳು ಪಡೆದುಕೊಳ್ಳುತ್ತಿದ್ದಾರೆನ್ನುವುದು ಕೂಡ ಸತ್ಯ. ಪೊಲೀಸರ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ಸಪೋರ್ಟ್ ನಿಂದಲೇ ಡ್ರಗ್ಸ್ ಮಾಫಿಯಾ ಆಕ್ಟೋಪಸ್ ನಂತೆ ಬಹುದೊಡ್ಡ ಸಮುದಾಯವನ್ನು ಆಪೋಷನ ತೆಗೆದುಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ ನಿತ್ಯ ವರದಿಯಾಗುವ ಅಪರಾಧದ ಪ್ರಕರಣಗಳಲ್ಲಿ ಶೇಕಡಾ 20 ರಷ್ಟು ಪ್ರಕರಣಗಳು ಡ್ರಗ್ಸ್ ಗೆ ಸಂಬಂಧಿಸಿದವು ಎನ್ನುವುದು ಅಪಾಯಕಾರಿ.ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಹಿವಾಟು ರಾಜಧಾನಿಯಲ್ಲಿ ನಿತ್ಯವೂ ನಡೆಯುತ್ತಿದೆ ಎನ್ನುವುದನ್ನು ಪೊಲೀಸ್ ವರದಿಗಳೇ ಸಾರಿ ಹೇಳ್ತಿವೆ.ಹಾಗಾದ್ರೆ ಇದರ ಮೂಲದ ಮಾಹಿತಿ ಪೊಲೀಸ್ ಗೆ ಇರುವುದಿಲ್ಲವೇ..? ಹಾಗಿದ್ದಾಗ್ಯೂ ಏಕೆ ಮಾಫಿಯಾವನ್ನು ಸದೆಬಡಿಯೋ ಕೆಲಸ ಆಗುತ್ತಿಲ್ಲ ಎನ್ನುವ ಪ್ರಶ್ನೆ ಮೂಡೋದು ಸಹಜ.ಪೊಲೀಸ್ ವ್ಯವಸ್ಥೆ ಮನಸು ಮಾಡಿದ್ರೆ ಇದನ್ನು ತಡೆಯೋದು ಎಷ್ಟೊತ್ತಿನ ಕೆಲಸ.ಆದರೆ ಅವರು ಅದನ್ನು ಮಾಡುತ್ತಿಲ್ಲ ಎನ್ನುವುದೇ ಕಟುವಾಸ್ತವ.ಏಕೆಂದರೆ ಬಹುತೇಕ ಪೊಲೀಸರಿಗೆ ಬಹುದೊಡ್ಡ ಆದಾಯದ ಮೂಲಗಳಲ್ಲಿ ಇವತ್ತಿಗೆ ಡ್ರಗ್ಸ್ ಮಾಫಿಯಾ ಕೂಡ ಒಂದಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಏರಿಯಾದಲ್ಲಿ ಪೊಲೀಸರು ಕಟ್ಟುನಿಟ್ಟಾಗಿದ್ದರೆ,ಜತೆಗೆ ರಾಜಕಾರಣಿಗಳು ಜನಪರವಾಗಿದ್ದರೆ ಡ್ರಗ್ಸ್ ಮಾಫಿಯಾವಾಗಿ ಬೆಳೆಯೊಕ್ಕೆ ಚಾನ್ಸೇ ಇರೊಲ್ಲ ಎನ್ನುವುದು ಜಗಜ್ಜಾಹೀರಾದ ಸತ್ಯ.ಡ್ರಗ್ಸ್ ಮಾಫಿಯಾ ವ್ಯಾಪಕವಾಗಿರುವ ಏರಿಯಾಗಳಲ್ಲಿ ಒಮ್ಮೆ ಸುತ್ತಿ ನೋಡಿದ್ರೂ ಇದರ ಅನುಭವ ಆಗದೆ ಇರೊಲ್ಲ.ಆದರೆ ಇಲ್ಲೊಂದು ಏರಿಯಾದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧವೇ ರಾಜಕಾರಣಿಯೊಬ್ಬರು ತೊಡೆ ತಟ್ಟಿನಿಂತಿದ್ದಾರೆ ಎನ್ನುವುದೇ ವಿಶೇಷ. ತಾನಿರುವ ಏರಿಯಾ ಡ್ರಗ್ಸ್ ಮುಕ್ತವಾಗಬೇಕೆನ್ನುವ ಸಂಕಲ್ಪದಲ್ಲಿ ಕೆಲಸ ಮಾಡುತ್ತಿದ್ದಾರೆ.ತಮ್ಮ ಸುತ್ತಮುತ್ತಲ ಏರಿಯಾಗಳಲ್ಲಿ ಎಲ್ಲೇ ಡ್ರಗ್ಸ್ ಮಾಫಿಯಾದ ಸುಳಿವು ಸಿಕ್ಕರೂ ಅದನ್ನು ಪತ್ತೆ ಮಾಡಿ ಪೊಲೀಸರ ಗಮನಕ್ಕೆ ತಂದು ಅದರ ವಿರುದ್ದ ಕಾರ್ಯಾಚರಣೆ ಆಗುವಂತೆ ಮಾಡ್ತಿದ್ದಾರೆ.ಡ್ರಗ್ ಮಾಫಿಯಾ ಪಾಲಿಗೆ ಸಿಂಹಸ್ವಪ್ನವಾಗಿರುವ ಆ ವ್ಯಕ್ತಿಯೇ ಬಿ.ಕೆ ಅಲ್ತಾಫ್ ಖಾನ್.
ಅಲ್ತಾಫ್ ಖಾನ್ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡ್ತಿದಾರೆ.ನಿಗಮದ ಅಭಿವೃದ್ಧಿ ಕೆಲಸಗಳ ಜತೆ ಜತೆಗೇನೆ ತಾವು ವಾಸವಿರುವ ಮತ್ತು ರಾಜಕೀಯವಾಗಿ ಪ್ರತಿನಿಧಿಸುವ ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದ ಜಗಜೀವನ್ ರಾಮ್ ನಗರ ಮತ್ತು ಸುತ್ತಮುತ್ತಲ ಏರಿಯಾಗಳಲ್ಲಿನ ಡ್ರಗ್ಸ್-ಮಟ್ಕಾ ದಂಧೆ ವಿರುದ್ಧ ಸಮರ ಸಾರುತ್ತಿದ್ದಾರೆ.ಈಗಾಗಲೇ ಹಲವು ಕೇಸ್ ಗಳನ್ನು ಕೂಡ ಠಾಣೆಯಲ್ಲಿ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಬೇರೆ ಯಾವುದೇ ಏರಿಯಾಗಳಲ್ಲಿ ಡ್ರಗ್ಸ್ ಮಾಫಿಯಾ ಹರಡೊಕ್ಕೆ,ಬೆಳೆಸೊಕ್ಕೆ ಪೆಡ್ಲರ್ ಗಳು ಯತ್ನಿಸಬಹುದು,ಆದರೆ ಚಾಮರಾಜಪೇಟೆಯಲ್ಲಿ ಕಾಲಿಡಲಿಕ್ಕೂ ಹಿಂದೆ ಮುಂದೆ ನೋಡುವಂತೆ ಮಾಡಿದ್ದಾರೆ.ಅದಕ್ಕೆಲ್ಲಾ ಕಾರಣವೇ ಅಲ್ತಾಫ್ ಖಾನ್.

ಯಾರು ಈ ಬಿ.ಕೆ ಅಲ್ತಾಫ್ ಖಾನ್.. ಬೆಂಗಳೂರಿನ ಅಪರಾಧ ಜಗತ್ತು ಮತ್ತು ರಾಜಕಾರಣವನ್ನು ಚೆನ್ನಾಗಿ ಬಲ್ಲವರಿಗೆ ಅಲ್ತಾಫ್ ಖಾನ್ ಹೆಸರು ಚಿರಪರಿಚಿತ.ಅಪರಾಧ ಜಗತ್ತಿನ ಆಳ-ಅಗಲ, ಒಳ ಹೊರಗನ್ನು ತೀರಾ ಹತ್ತಿರದಿಂದ ನೋಡಿದ ಕಾರಣಕ್ಕೆ ಅದು ಎಷ್ಟೊಂದು ಅಪಾಯಕಾರಿ ಎನ್ನುವುದು ಗೊತ್ತಿದೆ.ಹಾಗಾಗಿನೇ ಹೆಚ್ಚು ವ್ಯಾಪಕವಾಗಿರುವ ಡ್ರಗ್ಸ್ ದಂಧೆಯನ್ನು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂಲೋತ್ಪಾಟನೆ ಮಾಡಬೇಕೆನ್ನುವುದು ಅವರ ಕಾಳಜಿ ಹಾಗೂ ಉದ್ದೇಶ.ಈ ಕಾರಣದಿಂದಲೇ ತಮ್ಮ ಬೆಂಬಲಿಗರನ್ನು ಇದಕ್ಕಾಗಿಯೇ ಸಜ್ಜುಗೊಳಿಸಿದ್ದಾರೆ.ಎಲ್ಲೇ ಡ್ರಗ್ಸ್- ಮಟ್ಕಾ ಜೂಜು ಸೇರಿದಂತೆ ಅಪರಾಧ ಚಟುವಟಿಕೆಗಳ ಮಾಹಿತಿ ಸಿಕ್ಕರೂ ತಕ್ಷಣಕ್ಕೆ ಪೊಲೀಸರ ನೆರವು ಪಡೆದು ಅದಕ್ಕೆ ಕಡಿವಾಣ ಹಾಕಿಸುವ ಕೆಲಸ ಮಾಡ್ತಿದಾರೆ.ತಮ್ಮ ಕಸುಬಿಗೆ ಅಡ್ಡ ಬರುತ್ತಿದ್ದಾರೆನ್ನುವ ಕಾರಣಕ್ಕೆ ಅನೇಕರ ವಿರೋಧಕ್ಕೂ ತುತ್ತಾಗಿದ್ದಾರೆ.ಆದರೆ ಕ್ಷೇತ್ರದ ಯುವ ಸಮುದಾಯದ ಜೀವನ,ಆರೋಗ್ಯ,ಭವಿಷ್ಯಕ್ಕಾಗಿ ಎಂಥಾ ಲೈಫ್ ರಿಸ್ಕನ್ನು ಬೇಕಾದ್ರೂ ತೆಗೆದುಕೊಳ್ಳೊಕ್ಕೆ ನಾನು ಸಿದ್ದ ಎನ್ನುತ್ತಾರೆ.ಅವರ ಕೆಲಸವನ್ನು ಸಚಿವ ಜಮೀರ್ ಅಹಮದ್ ಮೆಚ್ಚಿ ಅವರಿಗೆ ಎಲ್ಲಾ ರೀತಿಯ ಬೆಂಬಲ ಘೋಷಿಸಿದ್ದಾರೆ.ಪೊಲೀಸರಿಗೂ ಸಹಕರಿಸುವಂತೆ ಸೂಚಿಸಿದ್ದಾರೆ.ಬಹುತೇಕ ರಾಜಕಾರಣಿಗಳೇ ಡ್ರಗ್ಸ್ ಮಾಫಿಯಾಕ್ಕೆ ಕುಮ್ಮಕ್ಕು ನೀಡುತ್ತಿದ್ದರೆ, ತಮ್ಮ ಕ್ಷೇತ್ರದಲ್ಲಿ ಅದಕ್ಕೆ ಕಡಿವಾಣ ಹಾಕೊಕ್ಕೆ ಅಲ್ತಾಫ್ ಖಾನ್ ಪ್ರಯತ್ನಿಸುತ್ತಿರುವುದು ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಚಾಮರಾಜಪೇಟೆಯಲ್ಲಿ ಆಕ್ಟೀವ್ ಆಗಿರುವ ಡ್ರಗ್ಸ್ ಮಾಫಿಯಾ: ಯೆಸ್…ಬಿ.ಕೆ ಅಲ್ತಾಫ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಡ್ರಗ್ಸ್ ಮುಕ್ತ ಕ್ಷೇತ್ರವನ್ನಾಗಿಸುವ ಕೆಲಸದಲ್ಲಿ ತೊಡಗಿದ್ದಾರೆ.ಅದಕ್ಕಾಗಿ ತಮ್ಮ ಅಧಿಕಾರವನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ.ಬಹುತೇಕ ಶ್ರಮಿಕ ಹಾಗೂ ಹಿಂದುಳಿದ ಸಮುದಾಯದವರೇ ಹೆಚ್ಚಾಗಿರುವ ಚಾಮರಾಜಪೇಟೆಯಲ್ಲಿ ಅವ್ಯಾವಹತವಾಗಿರುವ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕುವುದರಲ್ಲಿ ಪೊಲೀಸರ ಜತೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ.ಡ್ರಗ್ಸ್ ದಂಧೆಯ ಸುಳಿವು ಕ್ಷೇತ್ರದಲ್ಲಿ ಎಲ್ಲೇ ಸಿಕ್ಕರೂ ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ಕೊಟ್ಟು ಹೆಡೆಮುರಿ ಕಟ್ಟಿಸುವ ಕೆಲಸ ಮಾಡ್ತಿದಾರೆ.ಚಾಮರಾಜಪೇಟೆಯಲ್ಲಿ ಡ್ರಗ್ಸ್ ಮಾಫಿಯಾದ ಪಾಲಿಗೆ ಅಲ್ತಾಫ್ ಖಾನ್ ಸಿಂಹಸ್ವಪ್ನವಾಗಿಬಿಟ್ಟಿದ್ದಾರೆ.ಕ್ಷೇತ್ರದ ಮುಗ್ದ ಜನ ಅದರಲ್ಲೂ ಯುವ ಸಮುದಾಯ ಡ್ರಗ್ಸ್ ನ ಕಬಂಧ ಬಾಹುಗಳಲ್ಲಿ ಸಿಲುಕಿ ಬದುಕನ್ನು ಬರ್ಬಾದ್ ಮಾಡಿಕೊಳ್ಳಬಾರದೆನ್ನುವ ಕಾರಣಕ್ಕೆ ಇಡೀ ಮಾಫಿಯಾದ ವಿರುದ್ದವೇ ತೊಡೆ ತಟ್ಟಿ ನಿಂತಿದ್ದಾರೆ.ಅಲ್ತಾಫ್ ಖಾನ್ ಎಂದರೆ ಡ್ರಗ್ ಮಾಫಿಯಾಗಳು ಮಚ್ಚು ಮಸೆಯುವ ಮಟ್ಟಿಗೆ ಅವರ ವಿರೋಧ ಕಟ್ಟಿಕೊಂಡಿದ್ದಾರೆ ಎಂದರೆ ಸಾಮಾನ್ಯ ಮಾತಾ..ನೋ ಚಾನ್ಸ್.


ಬಹುತೇಕ ಏರಿಯಾಗಳಲ್ಲಿ ಅಲ್ಲಿನ ಸ್ಥಳೀಯ ರಾಜಕಾರಣಿಗಳೇ ಹಣಕ್ಕೋಸ್ಕರ ಜನರ ಹಿತಾಸಕ್ತಿ ಬಲಿಗೊಟ್ಟು ಡ್ರಗ್ ಮಾಫಿಯಾಕ್ಕೆ ಸಾಥ್ ಕೊಡ್ತಿರುವ ಬಗ್ಗೆ ದೂರುಗಳಿವೆ.ಡ್ರಗ್ಸ್ ದಂಧೆ ವ್ಯವಸ್ತಿತವಾಗಿ, ನಿರ್ಭೀತವಾಗಿ ನಡೆಯೊಕ್ಕೆ ಅವರೇ ಶ್ರೀರಕ್ಷೆಯಾಗಿರುವ ಮಾಹಿತಿಗಳಿವೆ. ಪೊಲೀಸರನ್ನು ಅವರೇ ಅಡ್ಜೆಸ್ಟ್ ಮಾಡಿಸುವ ಹೀನ ಕೃತ್ಯ ಎಸಗುತ್ತಿದ್ದಾರೆನ್ನುವ ಆಪಾದನೆ ಉಂಟು.ಲೆಕ್ಕಾಚಾರ ತಲೆಕೆಳಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣ ಪತ್ತೆಯಾದ್ರೆ ಅದನ್ನು ಹಿಡಿಸಿಕೊಟ್ಟಿದ್ದೇ ತಾವು ಎನ್ನುವ ರೀತಿಯಲ್ಲಿ ಶೋ ಅಪ್-ಬಿಲ್ಡಪ್ಪು ಕೊಡುವ ಕೆಲಸವನ್ನೂ ಅವರೇ ಮಾಡ್ತಿದ್ದಾರೆ.ಆದರೆ ಇದೆಲ್ಲಕ್ಕಿಂತ ಭಿನ್ನವಾಗಿರುವ ಅಲ್ತಾಫ್ ಖಾನ್, ಜನರ ಜೀವನ,ಆರೋಗ್ಯ,ಭವಿಷ್ಯಕ್ಕಾಗಿ ಇಡೀ ಮಾಫಿಯಾವನ್ನೇ ಎದುರಾಕಿಕೊಂಡು ಅದರ ವಿರುದ್ದ ಕಾನೂನಾತ್ಮಕ ಸಮರ ಸಾರುತ್ತಿದ್ದಾರಂತೆ.

ಅಲ್ತಾಫ್ ಕೆಲಸಕ್ಕೆ ಸಚಿವ ಝಮೀರ್ ಬೆಂಬಲ: ಮೊದಲೇ ಹೇಳಿದಂತೆ ಚಾಮರಾಜಪೇಟೆಯಲ್ಲಿ ಡ್ರಗ್ ದಂದೆ ಅವ್ಯಾವಹತವಾಗಿ ನಡೆಯುತ್ತಿದೆ.ಅಸಂಖ್ಯಾತ ಪ್ರಮಾಣದಲ್ಲಿ ಡ್ರಗ್ ಪೆಡ್ಲರ್ ಗಳು ಆಕ್ಟೀವ್ ಆಗಿದ್ದಾರೆ.ಇದಕ್ಕೆ ಸ್ಥಳೀಯ ರಾಜಕಾರಣಿಗಳಲ್ಲಿ ಕೆಲವರ ಕೃಪಕಟಾಕ್ಷವೂ ಇದೆ.ಕೆಲ ಪೊಲೀಸ್ ಅಧಿಕಾರಿಗಳ ಜೇಬು ತುಂಬಿಸುತ್ತಿರುವುದು ಕೂಡ ಇದೇ ಎನ್ನಲಾಗ್ತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿಯೇ ಅಲ್ತಾಫ್ ಖಾನ್ ಅನೇಕ ವರ್ಷಗಳಿಂದ ಇದರ ವಿರುದ್ದ ಹೋರಾಡ್ತಾ ಬಂದಿದ್ದಾರೆ.ಇದಕ್ಕೆ ತಮ್ಮ ಕ್ಚೇತ್ರ ಶಾಸಕ ಝಮೀರ್ ಅಹ್ಮದ್ ಅವರ ನೆರವನ್ನೂ ಪಡೆದಿದ್ದಾರೆ.ಕ್ಷೇತ್ರದ ಜನರು ಅದರಲ್ಲೂ ಯುವ ಸಮುದಾಯ ಡ್ರಗ್ಸ್ ಮಾಫಿಯಾಕ್ಕೆ ಸಿಲುಕಿ ನಲುಗುತ್ತಿರುವುದನ್ನು ತೀರಾ ಹತ್ತಿರದಿಂದ ಗಮನಿಸಿರುವ ಝಮೀರ್ ಕೂಡ ತುಂಬಾ ಒಳ್ಳೆಯ ಕೆಲಸ ಮಾಡ್ತಿದಿರಾ ಮಾಡಿ..ನನ್ನ ಬೆಂಬಲ ಸದಾ ನಿಮಗಿದೆ ಎಂದು ಬೆನ್ನು ತಟ್ಟಿದ್ದಾರಂತೆ.ಅವರ ಸಹಕಾರ ಹಾಗೂ ಬೆಂಬಲ ಇಲ್ಲದಿದ್ದರೆ ಇಷ್ಟೆಲ್ಲಾ ಮಾಡೊಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಅಲ್ತಾಫ್ ಖಾನ್ ತಿಳಿಸಿದ್ದಾರೆ.
ಏರಿಯಾದಲ್ಲಿ ಸಣ್ಣಪುಟ್ಟ ಕಿರಿಕ್ ಗಳಾದ್ರೆ ನೆರವು ಕೋರಿ ಸ್ಥಳೀಯ ರಾಜಕಾರಣಿಗಳ ಬಳಿ ಹೋಗೋದು ಕಾಮನ್. ಡ್ರಗ್ಸ್ ವಿಷಯದಲ್ಲಿ ಸಿಕ್ಕಾಕೊಂಡಾಗಲೂ ಸಾಕಷ್ಟು ರಾಜಕಾರಣಿಗಳು ತಮ್ಮವರಿಗೆ ಸಹಾಯ ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರುವುದು ಸಾಮಾನ್ಯ.ಆದರೆ ಸಚಿವ ಝಮೀರ್ ಅಹ್ಮದ್ ಮಾತ್ರ ಈ ವಿಷಯದಲ್ಲಿ ಕಂಪ್ಲೀಟ್ ಡಿಫರೆಂಟ್ ಅಂತೆ. ಡ್ರಗ್ಸ್ ಕೇಸ್ ಗಳಲ್ಲಿ ಸಿಕ್ಕಾಕೊಂಡ ಯಾರೊಬ್ಬ ಕೂಡ ತನ್ನ ಬಳಿ ನೆರವು ಕೇಳಿಕೊಂಡು ಬರುವಂತಿಲ್ಲ. ಅಂಥವರಿಗೆ ನನ್ನ ಮನೆ ಮತ್ತು ಕಚೇರಿ ಯಾವತ್ತಿಗೂ ತೆರೆಯೊಲ್ಲ ಎಂಬ ಫರ್ಮಾನ್ ಹೊರಡಿಸಿದ್ದಾರಂತೆ.ತಾನು ಹೇಳಿದೆ ಎಂದು ಯಾರಾದರೂ ತನ್ನ ಹೆಸರನ್ನು ಬಳಸಿಕೊಂಡ್ರೆ ಅದಕ್ಕೆ ಅವಕಾಶ ನೀಡಬಾರದು.ಇದರ ಹೊರತಾಗ್ಯೂ ಪೊಲೀಸರು ಏನಾದರೂ ತಲೆ ಪ್ರತಿಷ್ಟೆ ಮಾಡಿದ್ರೆ ಅದರ ಪರಿಣಾಮವನ್ನು ಅವರೇ ಎದುರಿಸಬೇಕಾಗ್ತದೆ ಎಂದು ಸೂಚಿಸಿಬಿಟ್ಟಿದ್ದಾರಂತೆ.ಹಾಗಾಗಿ ಡ್ರಗ್ಸ್ ವಿಷಯದಲ್ಲಿ ಸಿಲುಕಿಕೊಂಡ ಯಾರೊಬ್ಬರೂ ಝಮೀರ್ ಮನೆ-ಕಚೇರಿ ಬಳಿ ಹೋಗಿ ನೆರವು ಕೋರುವುದಿರಲಿ,ಅವರನ್ನು ನೆನಪಿಸಿಕೊಳ್ಳುವ ದುಸ್ಸಾಹಸಕ್ಕೂ ಕೈ ಹಾಕುವುದಿಲ್ಲವಂತೆ. ಚಾಮರಾಜಪೇಟೆಯನ್ನು ಡ್ರಗ್ಸ್ ಮುಕ್ತ ಮಾಡುವುದಕ್ಕೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಘೋಷಿಸಿಬಿಟ್ಟಿದ್ದಾರೆ ಎಂದು ಹೇಳ್ತಾರೆ ಅಲ್ತಾಫ್ ಖಾನ್.

2 ವರ್ಷಗಳಲ್ಲಿ 23 ಕೇಸ್ ದಾಖಲು: ಡ್ರಗ್ಸ್ ಮಾಫಿಯಾ ವಿರುದ್ದ ತೊಡೆ ತಟ್ಟಿರುವ ಅಲ್ತಾಫ್ ಖಾನ್ ಹುಡುಗರ ಕೆಲಸ ಏರಿಯಾದಲ್ಲಿ ಎಲ್ಲೆಲ್ಲಿ ಡ್ರಗ್ಸ್ ಮಾಫಿಯಾ ತಲೆ ಎತ್ತುತ್ತಿದೆ..ಎಲ್ಲೆಲ್ಲಿ ಆಕ್ಟೀವ್ ಆಗಿದೆ ಎಂದು ಪತ್ತೆ ಮಾಡುವುದಂತೆ.ಬಾಸ್ ನೀಡಿದ ಆದೇಶದನ್ವಯ ಆಕ್ಟೀವ್ ಆಗಿ ಕೆಲಸ ಮಾಡುವ ಅವರ ಹುಡುಗರು ಸಣ್ಣ ಸುಳಿವು ಸಿಕ್ಕರೂ ಅದನ್ನು ಅಲ್ತಾಫ್ ಗೆ ಮುಟ್ಟಿಸುತ್ತಾರಂತೆ.ಪೂರ್ವಾಪರ ತಿಳಿದ ಮೇಲೆಯೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಸಾಕ್ಷ್ಯ ಸಮೇತ ಅದನ್ನು ತಾವೇ ಸೀಝ್ ಮಾಡಿಸಿ ಕೇಸ್ ಹಾಕಿಸ್ತಾರಂತೆ.ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಜೆಆರ್ ನಗರ ವಾರ್ಡ್ ಸುತ್ತಮುತ್ತಲಲ್ಲೇ 20-08-2023 ರಿಂದ 06-07-2025 ರ ಅವಧಿಯಲ್ಲಿ 23 ಕೇಸ್ ಗಳನ್ನು ಸ್ಥಳೀಯ ಜೆಜೆಆರ್ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಡಿಸಿದ್ದಾರೆ.ಇದು ಕಡಿಮೆ ಸಾಧನೆನಾ..ಸಾಧ್ಯವೇ ಇಲ್ಲ..ಹಾಗೆಯೇ 12-08-2023 ರಿಂದ 23-06-2025ರ ಅವಧಿಯಲ್ಲಿ ಮಟ್ಕಾ ಜೂಜಿಗೆ ಸಂಬಂಧಿಸಿದಂತೆ 15 ಪ್ರಕರಣ ದಾಖಲಾಗುವುದಕ್ಕೆ ಕಾರಣವಾಗಿದ್ದಾರೆ.ಜೆಜೆಆರ್ ನಗರದ ನರನಾಡಿಯನ್ನು ಚೆನ್ನಾಗಿ ಬಲ್ಲ ಅಲ್ತಾಫ್ ಗೆ ಅಲ್ಲಿ ಹುಲ್ಲು ಕಡ್ಡಿ ಅಲುಗಾಡಿದರೂ ಮಾಹಿತಿ ದೊರೆಯುತ್ತದೆ.ತನ್ನ ಈ ನೆಟ್ವರ್ಕ್ ನ್ನು ಬಳಸಿಕೊಂಡು ಡ್ರಗ್ಸ್ ಮತ್ತು ಜೂಜು ಮಟ್ಕಾ ದಂಧೆ ವಿರುದ್ದ ಕಾನೂನಾತ್ಮಕ ಸಮರವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿದ್ದಾರೆ.ಈ ಕಾರಣಕ್ಕೆ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.
ಅನೇಕ ರಾಜಕಾರಣಿಗಳು,ಅಧಿಕಾರ ಸಿಕ್ಕಿರುವುದೇ ಅನುಭವಿಸಲಿಕ್ಕೆ..ಹಣ ಮಾಡಿಕೊಳ್ಳಲಿಕ್ಕೆ ಎಂದು ಭಾವಿಸಿರುವ ಸನ್ನಿವೇಶದಲ್ಲಿ,ಅಲ್ತಾಫ್ ಖಾನ್ ಅದನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.ಡ್ರಗ್ ಮಾಫಿಯಾದಿಂದಲೇ ಅಪಾರ ಸಂಪತ್ತು ಮಾಡಿಕೊಳ್ಳುತ್ತಿರುವ ಅದೆಷ್ಟೋ ರಾಜಕಾರಣಿಗಳು ನಮ್ಮ ನಡುವಿರುವಾಗಲೇ ಅದರ ಮೂಲೋತ್ಪಾಟನೆಗೆ ಟೊಂಕಕಟ್ಟಿ ಕೆಲಸ ಮಾಡುತ್ತಿರುವ ಅಲ್ತಾಫ್ ಖಾನ್ ಅವರ ಕಾರ್ಯವನ್ನು ಎಂಥವರೂ ಮೆಚ್ಚಲೇಬೇಕಲ್ವಾ..
