

ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯೇನೋ ಆಗಿದೆ.ಆದರೆ ಆರ್ಥಿಕ ಹೊರೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಯೋಜನೆಗೆ ಅಗತ್ಯವಿರುವ ಅನುದಾನವನ್ನು ಕಾಲಕಾಲಕ್ಕೆ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ ಎನ್ನುವುದು ದಾಖಲೆಗಳಿಂದಲೇ ಬಯಲಾಗಿದೆ.ರಾಜ್ಯ ಸರ್ಕಾರದ ಮಾತು ಕೇಳಿ ಸೇವೆ ಒದಗಿಸಿದ್ದ ಸಾರಿಗೆ ನಿಗಮಗಳು ತಮ್ಮ ಮೇಲೆ ಸೃಷ್ಟಿಯಾಗಿರುವ ಆರ್ಥಿಕ ಹೊರೆ ಸಹಿಸಿಕೊಳ್ಳಲಿಕ್ಕಾಗದೆ ಕುಗ್ಗಿ ಹೋಗಿದೆ.ನೀವು ನಮಗೆ ಬರಬೇಕಿರುವ ಬಾಕಿಯನ್ನು ಪಾವತಿಸದಿದ್ದರೆ ಸೇವೆ ಮುಂದುವರೆಸುವುದು ಕಷ್ಟ ಎನ್ನುವ ದಾಟಿಯಲ್ಲಿ ಅನುದಾನಕ್ಕೆ ಮೊರೆ ಹೋಗಿದೆ. ಕೆಎಸ್ ಆರ್ ಟಿಸಿ ಮುಖ್ಯಸ್ಥರ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.ಈ ಪತ್ರದ ಪ್ರತಿ “ಕನ್ನಡ ಫ್ಲ್ಯಾಶ್ ನ್ಯೂಸ್” ಗೆ ಲಭ್ಯವಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಅನುಷ್ಟಾನಗೊಂಡ ರಾಜ್ಯ ಸರ್ಕಾರದ ಶಕ್ತಿ ಯೋಜನೆ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿದೆಯೇನೋ ನಿಜ.ಆದರೆ ಯಾವ ಸರ್ಕಾರವನ್ನು ನಂಬಿಕೊಂಡು ನಾಲ್ಕು ಸಾರಿಗೆ ನಿಗಮಗಳು ನಿರಂತರ ಸೇವೆ ನೀಡುತ್ತಾ ಬಂದಿದ್ದವೋ ಅವು ಮಾತ್ರ ಆರ್ಥಿಕ ಹೊರೆಯಿಂದ ಕುಗ್ಗಿ ಹೋಗಿದೆ.ಅನುದಾನದ ನಿರೀಕ್ಷೆಯಲ್ಲೇ ಚಾತಕ ಪಕ್ಷಿಯಂತಾಗಿದ್ದ ನಿಗಮಗಳಿಗೆ ಸರ್ಕಾರದಿಂದ ಈವರೆಗೂ ಸಿಗುತ್ತಿರುವುದು ಕೇವಲ ಭರವಸೆಯೇ ಹೊರತು ಇನ್ನೇನು ಇಲ್ಲವಾಗಿದೆ.
ಬರಬೇಕಿರುವ ಅನುದಾನಕ್ಕೆ ಬಿಕ್ಷೆ ಬೇಡುವಂತ ಪರಿಸ್ಥಿತಿ ನಿಗಮಗಳದ್ದಾಗಿದೆ.ನಿಗಮಗಳ ಆರ್ಥಿಕ ಲಾಭವನ್ನೆಲ್ಲಾ ನುಂಗಿ ಹಾಕಿರುವ ಶಕ್ತಿ ಯೋಜನೆ ಸರ್ಕಾರಕ್ಕೇನೋ ಲಾಭ ತಂದಿರಬಹುದು..ಆದರೆ ದಿನದ ಗಳಿಕೆಯನ್ನೇ ಅವಲಂಭಿಸಿರುವ ನಿಗಮಗಳನ್ನು ನಷ್ಟಕ್ಕೆ ದೂಡುತ್ತಿದೆ.ಜನರ ದೃಷ್ಟಿಯಲ್ಲಿ ಒಳ್ಳೆಯವರಾಗುವುದಕ್ಕಾಗಿ ನಿಗಮಗಳನ್ನು ಬಳಸಿಕೊಂಡ ಸರ್ಕಾರ ಅನುದಾನ ನೀಡುವ ವಿಚಾರದಲ್ಲಿ ನೆವಗಳನ್ನು ಹೇಳುತ್ತಲೇ ದಿನ ದೂಡುತ್ತಿದೆ ಎನ್ನಿಸುತ್ತಿದೆ.ಏಕೆಂದರೆ ನಡು ನಡುವೆ ಒಂದಷ್ಟು ಸಣ್ಣಪುಟ್ಟ ಅನುದಾನವನ್ನು ಬಿಟ್ಟರೆ ನಾಲ್ಕು ನಿಗಮಗಳಿಗೆ ಕೊಡದೆ ಬಾಕಿ ಉಳಿಸಿಕೊಂಡಿರುವ ಶಕ್ತಿಯ ಅನುದಾನವೇ 5,418 ಕೋಟಿಯಷ್ಟಿದೆ.ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಬರಬೇಕಿರುವ ಶಕ್ತಿ ಯೋಜನೆಯ ಬಾಕಿಹಣ ಎಷ್ಟು ಗೊತ್ತಾ..?ಕೇಳಿದ್ರೆ ಎಂಥವರು ಕೂಡ ಒಂದು ಕ್ಷಣ ಶಾಕ್ ಆಗದೆ ಇರರು. ಕೆಎಸ್ ಆರ್ ಟಿಸಿ ನಿರ್ದೇಶಕರು ಸಾರಿಗೆ ಇಲಾಖೆ ಪೃಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವಂತೆ 5,418 ಕೋಟಿ ಹಣವಂತೆ.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲೇ ಯಾವ್ಯಾವ ನಿಗಮಗಳಿಂದ ಎಷ್ಟೆಷ್ಟು ಬಾಕಿ ಬರಬೇಕೆನ್ನುವ ಮಾಹಿತಿಯನ್ನು ಕೂಡ ಉಲ್ಲೇಖಿಸಲಾಗಿದೆ.ಈ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ ಅತೀ ಹೆಚ್ಚಿನ ಬಾಕಿ ಕೆಎಸ್ ಆರ್ ಟಿಸಿಗೆ ಸರ್ಕಾರ ಕೊಡಬೇಕಿದೆ. ಕೆಎಸ್ ಆರ್ ಟಿಸಿಗೆ 2,943 ಕೋಟಿ ಬಾಕಿ ಕೊಡಬೇಕಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 999 ಕೋಟಿ, ಬಿಎಂಟಿಸಿ ಗೆ 1,019 ಕೋಟಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 1306 ಕೋಟಿ, ಬಾಕಿ ಕೊಡಬೇಕಿದೆ ಎನ್ನುವುದನ್ನು ನಿಗಮದ ಎಂಡಿ ಅವರೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಯಾರನ್ನೋ ಮೆಚ್ಚಿಸಲು ಶಕ್ತಿ ಯೋಜನೆ..ಸಂಕಷ್ಟ ಮಾತ್ರ ನಮಗೆ.. ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 5,418 ಕೋಟಿಯಷ್ಟು ಹಣವನ್ನು ಶಕ್ತಿ ಯೋಜನೆಯ ಬಾಕಿ ಸ್ವರೂಪದಲ್ಲಿ ನೀಡಬೇಕೆನ್ನುವ ವಿಚಾರ ಸಾರಿಗೆ ಮುಖಂಡರನ್ನು ನಖಶಿಖಾಂತ ಉರಿಸಿದೆ. ಯಾರನ್ನೋ ಮೆಚ್ಚಿಸಲು ಇಡೀ ನಿಗಮವನ್ನು ನಷ್ಟಕ್ಕೆ ಸಿಲುಕಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಯೋಜನೆ ಆರಂಭಿಸುವ ವೇಳೆ ಸಕಾಲಕ್ಕೆ ಹಣ ನೀಡುವುದಾಗಿ ಹೇಳಿತ್ತು.ಆದರೆ ಇಷ್ಟೊಂದು ಪ್ರಮಾಣದ ಹಣ ಕೊಡದೆ ಸತಾಯಿಸುತ್ತಿರುವುದು ದುರಾದೃಷ್ಟಕರ.ಕೊಟ್ಟ ಮಾತನ್ನು ತಪ್ಪಿರುವ ಸರ್ಕಾರಕ್ಕೆ ಸಂಸ್ಥೆಯನ್ನು ಮುಳುಗಿಸಬೇಕೆನ್ನುವ ಉದ್ದೇಶ ಇದ್ದಂತಿದೆ.ಖಾಸಗಿಕರಣ ಮಾಡಿ ಈಗಾಗಲೇ ಸಂಸ್ಥೆಯನ್ನು ಮುಳುಗಿಸುತ್ತಿದೆ. ಶಕ್ತಿ ಯೋಜನೆಗೆ ನಿಗಮವನ್ನು ಅಡವಿಟ್ಟು ಬೀಗ ಹಾಕಿಸಲಿದೆಯೇ ಎನ್ನುವ ಶಂಕೆ ಕಾಡುತ್ತಿದೆ.ಪರಿಸ್ತಿತಿ ಹೀಗೆಯೇ ಮುಂದುವರೆದ್ರೆ ಎಲ್ಲಾ ನಾಲ್ಕು ನಿಗಮಗಳು ಬರ್ಬಾದ್ ಆಗಿ, ಸಂಸ್ಥೆಗೆ ಬೀಗ ಜಡಿಯಬೇಕಾಗಿ ಬರುತ್ತದೆಯೇನೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ”
ಕೆಎಸ್ ಆರ್ ಟಿಸಿ ಗೆ ಬರಬೇಕಿರುವ ಬಾಕಿ ಮೊತ್ತದ ವಿವರ
ವರ್ಷ ಬಾಕಿ ಬರಬೇಕಿರುವ ಮೊತ್ತ
2023-24 452 ಕೋಟಿ
2024-25 495 ಕೋಟಿ
2025-26 891 ಕೋಟಿ
2026-27 254.39 ಕೋಟಿ
ಒಟ್ಟು ಮೊತ್ತ 2,943 ಕೋಟಿ …ಅತೀ ಹೆಚ್ಚಿನ ಬಾಕಿಯನ್ನು ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೊಡಬೇಕಿದೆ. 2023-24 ರಲ್ಲ 452 ಕೋಟಿ,2024-25 ರಲ್ಲಿ495 ಕೋಟಿ 2025-26 ರಲ್ಲಿ 891 ಕೋಟಿ, 2026-27ರಲ್ಲಿ 254.39 ಕೋಟಿ ಬಾಕಿ ಕೊಡಬೇಕಿದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಕೆಎಸ್ ಆರ್ ಟಿಸಿಗೆ ರಾಜ್ಯ ಸರ್ಕಾರ ಬಾಕಿ ಕೊಡಬೇಕಿರುವ ಮೊತ್ತ ಬರೋಬ್ಬರಿ 2,943 ಕೋಟಿ ಆಗಿದೆ ಎನ್ನುವುದು ನಲ್ಲೇ ಬಹಿರಂಗವಾಗಿದೆ.

ವಾಯುವ್ಯ ಕರ್ನಾಟಕ ಸಾರಿಗೆಗೆ ಬಾಕಿ ನೀಡಬೇಕಿರುವ ಮೊತ್ತ
ವರ್ಷ ಬಾಕಿ ನೀಡಬೇಕಿರುವ ಮೊತ್ತ
2023-24 283 ಕೋಟಿ
2024-25 275 ಕೋಟಿ
2025-26 594 ಕೋಟಿ
2026-27 153 ಕೋಟಿ
ಒಟ್ಟು ಮೊತ್ತ 1306 ಕೋಟಿ…. ಹಾಗೆಯೇ ವಾಯುವ್ಯ ಕರ್ನಾಟಕ ಸಾರಿಗೆಗೆ ಸರ್ಕಾರದಿಂದ ಬರಬೇಕಿರುವ ಮೊತ್ತದ ವಿವರವನ್ನು ಗಮನಿಸುವುದಾದರೆ 2023-24 ರಲ್ಲಿ 283 ಕೋಟಿ ಬಾಕಿ ಬರಬೇಕಿದೆ.
2024-25 ರಲ್ಲಿ 275 ಕೋಟಿ, 2025-26 ರಲ್ಲಿ 594 ಕೋಟಿ ,2026-27 ರಲ್ಲಿ 153 ಕೋಟಿ ಬಾಕಿ ಬರಬೇಕಿದೆ. 2ರಿಂದ 2026 ರ ಜೂನ್ ಗೆ ಅನ್ವಯವಾಗುವಂತೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸರ್ಕಾರದಿಂದ ಬರಬೇಕಿರುವ ಮೊತ್ತ 1306 ಕೋಟಿಗಳಷ್ಟಿದೆ ಎನ್ನುವುದು ಬಹಿರಂಗವಾಗಿದೆ.
“ಶಕ್ತಿ ಯೋಜನೆಗಾಗಿ ನಮ್ಮನ್ನು ಬೀದಿ ಪಾಲು ಮಾಡುತ್ತಾ..? ..ಶಕ್ತಿ ಯೋಜನೆಗಾಗಿ ನಮ್ಮ ಬದುಕನ್ನೇ ಮುಡಿಪಾಗಿಟ್ಟು ದುಡಿಯುತ್ತಿದ್ದೇವೆ.ಈ ಯೋಜನೆಯಿಂ ದಾಗಿ ನಮ್ಮ ಬವಣೆ ಮತ್ತಷ್ಟು ಹೆಚ್ಚಿದೆ.ದುಡಿಮೆಯ ಅವಧಿ ಹೆಚ್ಚಾಗಿದೆ.ನಮ್ಮ ನೆಮ್ಮದಿ ಸಂಪೂರ್ಣ ಹಾಳಾಗಿ ಹೋಗಿದೆ.ಇಷ್ಟೆಲ್ಲಾ ಕಷ್ಟಪಟ್ಟು ಕೆಲಸ ಮಾಡುತ್ತಿರುವ ನಮಗೆ ನಮ್ಮ ವೇತನ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.ಸರ್ಕಾರ ನೀಡಬೇಕಿರುವ ಕನಿಷ್ಟ ಸೌಲಭ್ಯಗಳನ್ನು ಕೂಡ ಪಡೆಯಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿಗಾಗಿ ರಕ್ತ ಬೆವರು ಒಂದಾಗಿಸಿ ಕೆಲಸ ಮಾಡುತ್ತಿರುವ ನಮಗೆ ವರ್ಷಗಳಿಂದಲೂ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯ ದೊರೆಯದಂತಾಗಿದೆ.ಇದಕ್ಕಾಗಿ ಹೋರಾಟ ಮಾಡಬೇಕಾದ ಸ್ತಿತಿ ನಿರ್ಮಾಣವಾಗಿದೆ.ಸರ್ಕಾರ ಉಳಿಸಿಕೊಂಡಿರುವ ಇಷ್ಟೊಂದು ಮೊತ್ತದ ಬಾಕಿಯನ್ನು ನೀಡಿದರೆ ನಮ್ಮ ಬೇಡಿಕೆಗಳು ಈಡೇರಬಹುದೇನೋ..ಸರ್ಕಾರ ಈ ಕೂಡಲೇ ತಡಮಾಡದೆ ಬಾಕಿಯನ್ನು ಪಾವತಿಸಿ ಮುಳುಗುತ್ತಿರುವ ನಿಗಮಗಳನ್ನು ಉಳಿಸಲೇಬೇಕಿದೆ ಎನ್ನುವುದು ಸಾರಿಗೆ ಸಿಬ್ಬಂದಿಯ ಆಗ್ರಹ”
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಗೆ ರಾಜ್ಯ ಸರ್ಕಾರ ನೀಡಬೇಕಿರುವ ಬಾಕಿ ಮೊತ್ತ
ವರ್ಷ ಬಾಕಿ ನೀಡಬೇಕಿರುವ ಮೊತ್ತ
2023-24 238 ಕೋಟಿ
2024-25 204 ಕೋಟಿ
2025-26 419 ಕೋಟಿ
2026-27 135 ಕೋಟಿ
ಒಟ್ಟು 999 ಕೋಟಿ…..ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಗೆ ರಾಜ್ಯ ಸರ್ಕಾರದಿಂದ 2023-24 ರಲ್ಲಿ 238 ಕೋಟಿ, 2024-25 ರಲ್ಲಿ 204 ಕೋಟಿ, 2025-26 ರಲ್ಲಿ 419 ಕೋಟಿ,ಹಾಗೂ 2026-27ರ ಜೂನ್ ಗೆ ಅನ್ವಯವಾಗುವಂತೆ 135 ಕೋಟಿ ಬಾಕಿ ಕೊಡಬೇಕಿದೆ.ಅಂದ್ಹಾಗೆ ೪ ವರ್ಷಗಳ ಅವಧಿಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಒಟ್ಟು 999 ಕೋಟಿಗಳಷ್ಟು ಹಣವನ್ನು ಸರ್ಕಾರ ಕೊಡಬೇಕಿದೆ ಎನ್ನುವುದು ಬಹಿರಂಗವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ನೀಡಬೇಕಿರುವ ಬಾಕಿ ಮೊತ್ತ
ವರ್ಷ ಬಾಕಿ ಬರಬೇಕಿರುವ ಮೊತ್ತ
2023-24 205 ಕೋಟಿ
2024-25 194 ಕೋಟಿ
2025-26 496 ಕೋಟಿ
2026-27 122 ಕೋಟಿ
ಒಟ್ಟು 1,019 ಕೋಟಿ ರೂಗಳು,…ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸರ್ಕಾರದಿಂದ ಸಾವಿರಾರು ಕೋಟಿ ಬರಬೇಕಿದೆ. 2023-24 ರಲ್ಲಿ 205 ಕೋಟಿ ,2024-25 ರಲ್ಲಿ 194 ಕೋಟಿ, 2025-26 ರಲ್ಲಿ 496 ಕೋಟಿ,2026-27 ರಲ್ಲಿ 122 ಕೋಟಿ ಬರಬೇಕಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಬಿಎಂಟಿಸಿಗೆ ಸರ್ಕಾರದಿಂದ 1,019 ಕೋಟಿ ಬರಬೇಕಿದೆ ಎನ್ನುವುದು ತಿಳಿದುಬಂದಿದೆ.
“ನಾವು ಸರ್ಕಾರದ ಬಾಗಿಲನ್ನು ನಿರಂತರವಾಗಿ ತಟ್ಟುತ್ತಲೇ ಬಂದಿದ್ದೇವೆ.ಆದರೆ ಪ್ರತಿ ಬಾರಿ ನಿರಾಶೆಯೇ ಆಗುತ್ತಿದೆ. ಒಂದಲ್ಲಾ ಒಂದು ಕಾರಣ ಮುಂದಿಟ್ಟು ನಮ್ಮನ್ನು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಲೇ ಇದೆ.ನಾವು ಸರ್ಕಾರ ದಿಂದ ಇವತ್ತಲ್ಲ..ನಾಳೆ ಸಿಗಬಹುದೆನ್ನುವ ಭರವಸೆಯಲ್ಲೇ ದಿನ ಕಳೆಯುತ್ತಿದ್ದೇವೆ.ಆದರೆ ಈಗ ಅದರ ಮೊತ್ತ ೫ ಸಾವಿರ ಕೋಟಿ ಗಡಿ ದಾಟಿದೆ.ಇದೇ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವುದು ಇನ್ಮುಂದೆ ಅಸಾಧ್ಯವಾಗಬಹುದೇನೋ..? ಹಾಗಾಗಿ ಈ ಬಾರಿ ನಮ್ಮ ಎಂಡಿಗಳು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.ಇದರ ಗಂಭೀರತೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬಹುದೆನ್ನುವ ನಂಬಿಕೆ-ನಿರೀಕ್ಷೆ ನಮ್ಮದು.ಈ ಬಾರಿಯೂ ನಿರಾಶೆ ಉಂಟಾದ್ರೆ ಪರಿಸ್ತಿತಿ ವಿಷಮವಾಗಬಹುದೇನೋ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಸಾರಿಗೆ ಅಧಿಕಾರಿ”
ನಾಲ್ಕು ಸಾರಿಗೆ ನಿಗಮ ಬಾಕಿ ಬರಬೇಕಿರುವ ಮೊತ್ತ
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ 999 ಕೋಟಿ,
ಬೆಂಗಳೂರು ಮಹಾನಗರ ಸಾರಿಗೆ 1,019 ಕೋಟಿ,
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ 1306 ಕೋಟಿ,
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ 2,943 ಕೋಟಿ
ಒಟ್ಟು ಮೊತ್ತ 5,418 ಕೋಟಿ
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 999 ಕೋಟಿ, ಬೆಂಗಳೂರು ಮಹಾನಗರ ಸಾರಿಗೆಗೆ 1,019 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 1306 ಕೋಟಿ,ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ 2,943 ಕೋಟಿ ನೀಡಬೇಕಿರುವ ಎಲ್ಲಾ ಮೊತ್ತವನ್ನು ಕ್ರೋಢೀಕರಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಕೊಡಬೇಕಿರುವ ಮೊತ್ತ 5,418 ಕೋಟಿ ಎನ್ನುವುದು ಬಹಿರಂಗವಾಗಿದೆ.ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ಸಾರಿಗೆಯ ನಾಲ್ಕು ನಿಗಮಗಳ ಆರ್ಥಿಕ ಪರಿಸ್ತಿತಿ ಸುಧಾರಿಸಲು ಸರ್ಕಾರ ಬಾಕಿ ಅನುದಾನವನ್ನು ನೀಡಬೇಕಿದೆ.ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕವಿದೆ.ತಮ್ಮ ಬೇಡಿಕೆ ಈಡೇರಿಸಲು ಇಲ್ಲಸಲ್ಲದ ನೆವ-ಸಬೂಬು ಹೇಳುವ ಸರ್ಕಾರ,ಶಕ್ತಿ ಯೋಜನೆ ಸೇವೆ ನೀಡ್ತಾ ಬಂದಿರುವ ತಮಗೆ ನೀಡಬೇಕಾದ ಬಾಕಿ ನೀಡಲು ಸತಾಯಿಸುತ್ತಿರುವುದು ಅಮಾನವೀಯ ಹಾಗೂ ಅನ್ಯಾಯ.ಪರಿಸ್ತಿತಿ ಹೀಗೆಯೇ ಮುಂದುವರುದ್ರೆ ಶಕ್ತಿ ಕೈಬಿಡಿ..ನಮ್ಮಬೇಡಿಕೆ ಈಡೇರಿಸಿ ಎಂಬ ಘೋಷಣೆ ಅಡಿ ಹೋರಾಟಕ್ಕೆ ಮುಂದಾದ್ರೂ ಆಶ್ಚರ್ಯವಿಲ್ಲ ಎನಿಸುತ್ತದೆ.

