

ರಾಜಕೀಯವೇ ಹಾಗೆ..ಇಲ್ಲಿ ಎಲ್ಲವೂ ಹೀಗೆಯೇ ನಡೆಯುತ್ತೆ ಎಂದು ಹೇಳೊಕ್ಕೆ ಸಾಧ್ಯವೇ ಇಲ್ಲ…ಈಗ ಇದ್ದ ಸ್ಥಿತಿ ಮರುಕ್ಷಣ ಇರೊಲ್ಲ..ಈಗಿನ ಶತೃ ಮರುಕ್ಷಣ ಮಿತ್ರನಾಗುತ್ತಾನೆ..ಮಿತ್ರ ಮರುಕ್ಷಣದಲ್ಲಿ ಶತೃವಾಗಿಬಿಡುತ್ತಾನೆ…ಶತೃವಿನ ಶತೃ..ಮಿತ್ರನಾಗಿಬಿಡ್ತಾನೆ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ರಾಜಕೀಯ ಪ್ರಹಸನ ಈ ಬಗ್ಗೆ ಬರೆಯುವಂತೆ ಮಾಡಿದೆ.ತನ್ನ ರಾಜಕೀಯ ಚಾಣಾಕ್ಷತನದಿಂದ ಆರ್.ಅಶೋಕ್ ತನ್ನ ರಾಜಕೀಯ ಭವಿಷ್ಯಕ್ಕೆ ಸವಾಲಾಗಬಹುದಾಗಿದ್ದ ಸಮಸ್ಯೆಯೊಂದನ್ನು ಅನಾಯಾಸವಾಗಿ ಬಗೆಹರಿಸಿಕೊಂಡಿದ್ದಾರೆ. ಅದ್ಹೇಗೆ ಅನ್ತೀರಾ.. ಅದರ ರೋಚಕ ಕಥಾನಕ ನೀವೇ ಓದ್ಬಿಡಿ..
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರಹಸನ ನಡೆದೋಗಿದೆ.ಆರ್ ಅಶೋಕ್ ಸಮ್ಮುಖದಲ್ಲಿ ಬಿಜೆಪಿ ತೊರೆದು ಹೋಗಿದ್ದವರನ್ನು ಮತ್ತೆ ಬರ ಮಾಡಿಕೊಳ್ಳುವ ಕಾರ್ಯಕ್ರಮ ಅದು.ಅದರಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ನಾರಾಯಣ್( ಹೊಸಕೆರೆ ಹಳ್ಳಿ ವಾರ್ಡ್ ನ ಮಾಜಿ ಸದಸ್ಯ), ಸುರೇಶ್( ಕುಮಾರಸ್ವಾಮಿ ಲೇ ಔಟ್ ವಾರ್ಡ್ ನ ಮಾಜಿ ಸದಸ್ಯ) ಪಕ್ಷ ಸೇರ್ಪಡೆಯಾದರು.ಅದೇ ವೇದಿಕೆಯಲ್ಲಿ ಮತ್ತೋರ್ವ ಯುವ ಯುವ ಮುಖಂಡ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಯಾದರು.
ಅದೇ ಆ ಕಾರ್ಯಕ್ರಮದ ಹೈಲೈಟ್ ನೋಡಿ..ಹಾಗೆ ಸೇರ್ಪಡೆಯಾದ ಆ ಯುವಕ ಮತ್ತ್ಯಾರು ಅಲ್ಲ,ಆರ್. ಅಶೋಕ್ ಅವರ ರಾಜಕೀಯ ಎದುರಾಳಿ ಎಲ್ ಶ್ರೀನಿವಾಸ್ ಅವರ ಸುಪುತ್ರ ಪ್ರಮೋದ್ ಶ್ರೀನಿವಾಸ್.ವಿಚಿತ್ರ ಏನ್ ಗೊತ್ತಾ,ಇದೇ ಪ್ರಮೋದ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರ್. ಅಶೋಕ್ ಅವರ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಪದ್ಮನಾಭನಗರಾದ್ಯಂತ ಪಸರ್ ಆಗಿತ್ತು.ಪ್ರಮೋದ್ ಕೂಡ ತಂದೆಯ ಮಾರ್ಗದರ್ಶನದಲ್ಲಿ ಇದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದರೆನ್ನುವುದು ಅವರ ಅತ್ಯಾಪ್ತ ಮೂಲಗಳ ಮಾಹಿತಿ.
ಎಲ್ ,ಶ್ರೀನಿವಾಸ್ ಹಾಗೂ ಆರ್ ಅಶೋಕ್ ಅವರದು ಹಾಲು ಜೇನಿನ ಸಂಬಂಧ.ಗಳಸ್ಯ ಕಂಠಸ್ಯ ಎನ್ನುವಂತಿದ್ದ ಆತ್ಮೀಯತೆ.ಕೆಲವರು ಹೇಳುವಂತೆ ಅವರಿಬ್ಬರು ಸಮಕಾಲೀನರಂತೆ. ಸ್ವಲ್ಪ ಹಿಂದೆ ಮುಂದೆ ಎನ್ನಬಹುದಾದ್ರೂ ರಾಜಕೀಯವಾಗಿ ಒಂದೇ ಕಾಲಘಟ್ಟದವರು.ಅಶೋಕ್ ಅದೃಷ್ಟ ಚೆನ್ನಾಗಿತ್ತು.ರಾಜಕೀಯವಾಗಿ ಬೆಳೆದರು.ಆದರೆ ಎಲ್ ಶ್ರೀನಿವಾಸ್ ಹಿಂದುಳಿದಿಬಿಟ್ಟರು.ಒಳಗೊಳಗೆ ಅಸಮಾಧಾನವಿದ್ದರೂ ರಾಜಕೀಯ ಅಸ್ಥಿತ್ವಕ್ಕಾಗಿ ಕಾಂಪ್ರಮೈಸ್ ಮಾಡಿಕೊಂಡು ಕಾರ್ಪೊರೇಟರ್ ಆದವರು.ಆದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಮೇಲೆ ಯಾವ ಕಾರಣಕ್ಕೆ ಮುನಿಸಿಕೊಂಡರೋ ಗೊತ್ತಿಲ್ಲ.ಪಕ್ಷವನ್ನೇ ತೊರೆದು ಕಾಂಗ್ರೆಸ್ ಗೆ ಬಂದರು.ಪಕ್ಷದೊಳಗೆ ಹೇಳಿಕೊಳ್ಳುವಂತ ಜವಾಬ್ದಾರಿಯನ್ನೇನೂ ನೀಡಲಿಲ್ಲ.ಪದ್ಮನಾಭನಗರ ಕ್ಷೇತ್ರದ ಉಸ್ತುವಾರಿ ನೀಡಿ ಮುಂದಿನ ಚುನಾವಣೆಯಲ್ಲಿ ನೋಡೋಣ ಎನ್ನುವ ಭರವಸೆ ಸಿಕ್ಕಿತ್ತಂತೆ.ಅದನ್ನು ನಂಬಿಕೊಂಡ ಶ್ರೀನಿವಾಸ್ ತನಗಿಂತ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಆತನನ್ನು ಅಶೋಕ್ ಮುಂದೆ ನಿಲ್ಲಲು ಬೇಕಾದ ರಾಜಕೀಯ ವೇದಿಕೆಯೊಂದನ್ನು ಅಣಿಗೊಳಿಸುವಲ್ಲಿ ನಿರತರಾದರೆನ್ನುವುದು ಇಡೀ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದವರಿಗೆ ಗೊತ್ತಿದ್ದ ವಿಷಯ.
ನಿಮಗೆ ನೆನಪಿರಲಿ,ಪ್ರಮೋದ್ ಅವರ ಸ್ಪರ್ದೆಯಿಂದ ಆರ್. ಅಶೋಕ್ ವಿಚಲಿತವಾಗಿದ್ದುಂಟಂತೆ.ಕ್ಷೇತ್ರಾದ್ಯಂತ ಪ್ರಮೋದ್ ಸಂಚಾರ ಸಂಚಲನವನ್ನೇ ಸೃಷ್ಟಿಸಿತ್ತಂತೆ.ಇದನ್ನು ಖುದ್ದು ಅಶೋಕ್ ಅವರೇ ತಮ್ಮ ಆತ್ಮೀಯರ ಬಳಿ ಹೇಳಿಕೊಂಡಿದ್ದುಂಟಂತೆ. ಪ್ರಮೋದ್ ಅವರ ಕಾರ್ಯವೈಖರಿ ಗಮನಿಸಿ ಕಾಂಗ್ರೆಸ್ ಮುಖಂಡರು ಅವರನ್ನು ಗ್ಯಾರಂಟಿ ಜಾರಿ ಸಮಿತಿಗೆ ಅಧ್ಯಕ್ಷರನ್ನಾಗಿಯೂ ಮಾಡಿದ್ದರಂತೆ.ಪ್ರಮೋದ್ ಕೂಡ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದರಂತೆ.ಎಲ್,ಶ್ರೀನಿವಾಸ್ ತನ್ನ ಮಗನ ಫರ್ಫಾಮೆನ್ಸ್ ಗೆ ಖುಷ್ ಕೂಡ ಆಗಿದ್ದರಂತೆ.ಆದರೆ ಇದರ ನಡುವೆ ಏನಾಯ್ತೋ ಗೊತ್ತಿಲ್ಲ.ದಿಡೀರ್ ಪ್ರಮೋದ್ ಕಾಂಗ್ರೆಸ್ ನ ಜವಾಬ್ದಾರಿಗಳಿಗೆಲ್ಲಾ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ಮಾಜಿ ಕಾರ್ಪೊರೇಟರ್ ಗಳ ಜತೆಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಇದಕ್ಕೆ ತಂದೆ ಶ್ರೀನಿವಾಸ್ ಅವರ ಒಪ್ಪಿಗೆಯೂ ಇತ್ತೆನ್ನುವುದು ಸಧ್ಯದ ಮಾತು.ಕೆಲವು ದಿನಗಳಲ್ಲಿ ಶ್ರೀನಿವಾಸ್ ಕೂಡ ಮತ್ತೆ ಬಿಜೆಪಿ ಸೇರುತ್ತಾರೆನ್ನುವ ಮಾತುಗಳು ಕೂಡ ಇವೆ.
ಈ ಎಲ್ಲಾ ರಾಜಕೀಯ ತಂತ್ರಗಾರಿಕೆಯಲ್ಲಿ ಗೆದ್ದವರು ನಿಸ್ಸಂಶಯವಾಗಿ ಆರ್. ಅಶೋಕ್.ತನ್ನ ಎದುರಾಳಿಗಳನ್ನು ತಮ್ಮದೇ ಆದ ರೀತಿಯ ಚಾಣಾಕ್ಷ ನಡೆಯಿಂದ ಮಣಿಸಿ ತನ್ನ ಎದುರು ಎದೆಸೆಟೆದು ನಿಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಮುಂದಿನ ಚುನಾವಣೆಯಲ್ಲಿ ತನ್ನ ಎದುರಾಳಿಯಾಗಿ ನಿಲ್ಲೊಕ್ಕೆ ಸಿದ್ದವಾಗಿದ್ದ ಪ್ರಮೋದ್ ಅವರನ್ನು ಕಾಂಗ್ರೆಸ್ ನಿಂದ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.(ಯಾವುದಾದರೂ ವಾರ್ಡ್ ಗೆ ಕಾರ್ಪೊರೇಟರ್ ಮಾಡುವ ಭರವಸೆ ಕೊಟ್ಟಿದ್ದಾರೆನ್ನುವ ಮಾತಿದೆ..ಆದರೆ ಇಷ್ಟೆಲ್ಲಾ ಪ್ರಯತ್ನ ಪಟ್ಟಿದ್ದು ಕೇವಲ ಈ ಸ್ಥಾನಕ್ಕಾ..? ಎನ್ನೋದು ಅನೇಕರ ಪೃಶ್ನೆ).ಈ ಬಗ್ಗೆ ಅವರ ತಂದೆ ಎಲ್.ಶ್ರೀನಿವಾಸ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.ಇಷ್ಟವಿದ್ದೇ ಪ್ರಮೋದ್ ಬಿಜೆಪಿ ಸೇರಿದರಾ..? ಅವರು ಬಿಜೆಪಿ ಸೇರುವಲ್ಲಿ ತಂದೆಯ ಅನುಮತಿ ಸಿಕ್ಕಿತ್ತಾ..? ಅಥವಾ ಶ್ರೀನಿವಾಸ್ ಅವರನ್ನು ಎದುರಾಕಿಕೊಂಡು ಬಿಜೆಪಿ ಸೇರ್ಪಡೆಗೊಂಡರಾ ಎನ್ನುವ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಆದರೆ ಪ್ರಮೋದ್ ಜತೆ ಬಿಜೆಪಿ ಸೇರ್ಪಡೆಗೊಂಡ ಎಲ್ .ಶ್ರೀನಿವಾಸ್ ಅವರ ಜತೆಗಾರರಾದ ಮಾಜಿ ಕಾರ್ಪೊರೇಟರ್ ಗಳ ಪ್ರಕಾರ ಕಾಂಗ್ರೆಸ್ ನಿಂದ ಸರಿಯಾದ ಸ್ಪಂದನೆ ಈವರೆಗೂ ಇವರಿಗೆ ಸಿಕ್ಕಿರಲಿಲ್ಲವಂತೆ.ಕಾಂಗ್ರೆಸ್ ನಲ್ಲಿ ಅವರನ್ನು ಮೂಲೆಗುಂಪು ಮಾಡಲಾಗಿತ್ತಂತೆ.ರಾಜಕೀಯ ಅಸ್ಥಿತ್ವದ್ದೇ ದೊಡ್ಡ ಮಟ್ಟದ ಪ್ರಶ್ನೆಯಾಗಿತ್ತಂತೆ.ಅಲ್ಲದೇ ಪದ್ಮನಾಭನಗರ ಹೇಳಿಕೇಳಿ ಬಿಜೆಪಿಯ ಭದ್ರಕೋಟೆ.ಅವರೆಲ್ಲಾ ಗೆದ್ದು ಬರುತ್ತಿದ್ದುದೇ ಬಿಜೆಪಿ ಚಿಹ್ನೆಯಡಿಯಲ್ಲಿ.ಈ ಬಾರಿಯ ವಾತಾವರಣವೂ ಕೂಡ ಬಿಜೆಪಿಗೆ ಪೂರಕವಾಗಿದೆ.ಇಂಥಾ ಸನ್ನಿವೇಶದಲ್ಲಿ ಚುನಾವಣೆಯಲ್ಲಿ ಸೋತರೆ ತಮ್ಮ ರಾಜಕೀಯ ಭವಿಷ್ಯ ಸಂಪೂರ್ಣ ಮುಗಿದಂತೆ ಎನ್ನುವ ಮುಂದಾಲೋಚನೆಯಿಂದ ತಾವೆಲ್ಲರೂ ಮನೆಗೆ ಮರಳಿದ್ದೇವೆ.ಅಶೋಕ್ ಹಳೆಯ ಮುನಿಸನ್ನೆಲ್ಲಾ ಮರೆತು ತಮ್ಮನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.ಅಲ್ಲದೇ ಮುಂದಿನ ಚುನಾವಣೆಯಲ್ಲಿ ವಾರ್ಡ್ ಗಳನ್ನು ಸಿದ್ದಮಾಡಿಕೊಳ್ಳಿ ಎಂದು ಸೂಚನೆ ಕೂಡ ಕೊಟ್ಟಿದ್ದಾರಂತೆ.ಅದೆಲ್ಲಕ್ಕಿಂತ ಹೆಚ್ಚಾಗಿ ಕೆಲ ದಿನಗಳಲ್ಲಿ ಎಲ್ ಶ್ರೀನಿವಾಸ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲಿದ್ದಾರಂತೆ.ಆದರೆ ಇದನ್ನು ಶ್ರೀನಿವಾಸ್ ಖಚಿತಪಡಿಸಿಲ್ಲ.
ಅದೇನೇ ಆಗಲಿ, ಆರ್. ಅಶೋಕ್ ಯುವ ಮುಖಂಡ ಪ್ರಮೋದ್ ಅವರನ್ನು ಮನವೊಲಿಸಿ ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬಹುಷಃ ಪ್ರಮೋದ್ ಗೆ ಬೇಕಿದ್ದ ಪ್ರೋತ್ಸಾಹ-ಬೆಂಬಲ-ಸಹಕಾರವನ್ನು ಕಾಂಗ್ರೆಸ್ ಮುಖಂಡರು ನೀಡಿದ್ದರೆ ಇಂತದ್ದೊಂದು ಅಘಾತಕಾರಿ ಬೆಳವಣಿಗೆ ಪದ್ಮನಾಭನಗರದಲ್ಲಿ ನಡೆಯುತ್ತಿರಲಿಲ್ಲವೇನೋ..ರಾಜಕೀಯ ಕಾರಣಗಳಿಗಾಗಿ ಇದು ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ-ಶಾಕ್.ಈ ಬೆಳವಣಿಗೆಯಿಂದ ಆರ್.ಅಶೋಕ್ ಗೆ ಪದ್ಮನಾಭನಗರದಲ್ಲಿ ಎದುರಾಗಲಿದ್ದ ದೊಡ್ಡ ಸಮಸ್ಯೆಯ ಸುನಾಮಿಯೊಂದು ಅನಾಯಾಸವಾಗಿ ಮಾಯವಾದಂತಾಗಿದೆ ಎನ್ನೋದು ಮಾತ್ರ ಸತ್ಯ.
