SUPER EXCLUSIVE: GBA ಅಂಗಳದಲ್ಲಿ ಸ್ಪೋಟಕ ಬೆಳವಣಿಗೆ.. ರದ್ದಾಗಲಿದೆಯೇ 5 ಪಾಲಿಕೆ.. 2 ಸಾಕೆನ್ನುತ್ತಿದೆಯೇ ಸಮಿತಿ..!?


ಬೆಂಗಳೂರು:ಇದು ಎಷ್ಟರ ಮಟ್ಟಿಗೆ ನಿಜನೋ ಗೊತ್ತಿಲ್ಲ..ಆದರೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(GREATER BENGALURU AUTHORITY) ದ ಅಂಗಳದಲ್ಲಿ ಸ್ಪೋಟಕ ವಿದ್ಯಾಮಾನವೊಂದು ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಡಳಿತಾತ್ಮಕವಾಗಿ ವ್ಯವಸ್ಥೆ ಸರಿ ಹೋಗಬೇಕೆನ್ನುವ ಉದ್ದೇಶದಲ್ಲಿ ಸರ್ಕಾರ ತೂಗಿ ಅಳೆದು ಅಖಂಡವಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು  ಐದು ಪಾಲಿಕೆಗಳನ್ನಾಗಿ ವಿಭಜಿಸಿತ್ತು.ಆದರೆ ಅದರಿಂದ ಸರಿ ಹೋಗಬೇಕಿದ್ದ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ ಎನ್ನುವ ವಿಚಾರ ಸರ್ಕಾರದ ನಿದ್ದೆಗೆಡಿಸಿದೆಯಂತೆ.ಹಾಗಾಗಿಯೇ ಐದು ಪಾಲಿಕೆಗಳ ವ್ಯವಸ್ಥೆಯನ್ನು ರದ್ದು ಮಾಡಿ ಎರಡು ಪಾಲಿಕೆಗಳನ್ನಾಗಿ ಮಾಡಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆಯಂತೆ.ಸರ್ಕಾರದ ಮಟ್ಟದಲ್ಲಿರುವ ತಜ್ಞರ ಸಮಿತಿಯೂ ಇಂತದ್ದೊಂದು ಅಭಿಪ್ರಾಯ ಸಲ್ಲಿಸಿದೆ ಎನ್ನುವ ಮಾತಿದೆ.ಸರ್ಕಾರಕ್ಕೂ ತಜ್ಞರ ಸಮಿತಿ ನೀಡಿದೆ ಎನ್ನಲಾಗುತ್ತಿರುವ ಸಲಹೆ-ಅಭಿಪ್ರಾಯಗಳು ಸೂಕ್ತ ಎಂದೆನಿಸಿರುವ ಹಿನ್ನಲೆಯಲ್ಲಿ ಐದು ಇರುವ ಪಾಲಿಕೆಗಳ ವ್ಯವಸ್ಥೆಯನ್ನು ಎರಡಾಗಿ ಒಗ್ಗೂಡಿಸಿದ್ರೆ ಹೇಗಿರುತ್ತೆ ಎನ್ನುವ ಆಲೋಚನೆ ಸುತ್ತ ಚರ್ಚೆ ಮಾಡುತ್ತಿದೆ ಎನ್ನಲಾಗುತ್ತಿದೆ.

ಇದು ಸತ್ಯವೇ ಆಗಿದ್ದರೆ.ಇದಕ್ಕಿಂತ ಸ್ಪೋಟಕವಾದ ಸುದ್ದಿ ಮತ್ತೊಂದಿರಲಾರದೇನೋ..? ಐದು ಪಾಲಿಕೆಗಳ ಸಧ್ಯದ ವ್ಯವಸ್ಥೆಯನ್ನು ಎರಡಾಗಿ ಮಾಡಿ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆಯೊಂದು ನಡೆಯುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.ಯಾವ ಉದ್ದೇಶ-ಗುರಿಯನ್ನಿಟ್ಟುಕೊಂಡು ಐದು ಪಾಲಿಕೆಗಳನ್ನು ಮಾಡಲಾಗಿತ್ತೋ..ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲವಾದ್ದರಿಂದ ಒಂದಷ್ಟು ಪರಿಷ್ಕರಣೆ ಜತೆ ಹಳೆಯ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ ಆಲೋಚನೆ ನಡೆಯುತ್ತಿದೆಯಂತೆ.ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ತಜ್ಷರ ಸಮಿತಿ ಕೂಡ ಇಂತದ್ದೇ ಅಭಿಪ್ರಾಯದಲ್ಲಿ ಕೆಲಸ ಮಾಡುತ್ತಿದೆಯಂತೆ.ಇನ್ನಷ್ಟು ಅಧ್ಯಯನ ಮಾಡಿದ ತರುವಾಯ ಒಂದು ಬೇಡ..ಎರಡು ಸಾಕೆನ್ನುವ ಅಭಿಪ್ರಾಯ ಮೂಡಿದರೆ ಅದೇ ನಿಟ್ಟಿನಲ್ಲಿ ನಿರ್ದಾರ ಕೈಗೊಳ್ಳುವ ಆಲೋಚನೆಯೂ ಸರ್ಕಾರಕ್ಕಿದೆ ಎನ್ನಲಾಗ್ತಿದೆ.

ಐದು ಏಕೆ ಬೇಡ…ಎರಡು ಏಕೆ ಸಾಕು..?: ಅಖಂಡವಾಗಿದ್ದ ಕಾರ್ಪೊರೇಷನ್‌ ನ್ನು  ಐದು ಪಾಲಿಕೆಗಳನ್ನಾಗಿ ಮಾಡಿದ ಉದ್ದೇಶವೇ, ಆಡಳಿತ ನಿರ್ವಹಣೆ ಸರಿಯಾಗುತ್ತಿಲ್ಲ.ಜನರ ಬವಣೆ-ಕುಂದುಕೊರತೆ ನೀಗುತ್ತಿಲ್ಲ.ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ನಿರೀಕ್ಷಿತವಾಗಿ ಆಗುತ್ತಿಲ್ಲ ಎನ್ನುವ ಕಾರಣ.ಆ ವೇಳೆ ಬೇಡ ಪಾಲಿಕೆಯನ್ನು  ಹೋಳು ಮಾಡುವುದು ಬೇಡ..ಮತ್ತಷ್ಟು ಸುಧಾರಣೆಯೊಂದಿಗೆ ವ್ಯವಸ್ಥೆಯನ್ನು ಸರಿ ಮಾಡೋಣ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.ಆದರೆ ಹಠಕ್ಕೆ ಬಿದ್ದ ಕಾಂಗ್ರೆಸ್‌ ಸರ್ಕಾರ ಐದು ಪಾಲಿಕೆಗಳನ್ನು ಮಾಡಿಯೇ ತೀರಿತು.ಹೋಗಲಿ ಐದು ಪಾಲಿಕೆಗಳನ್ನಾಗಿ ಮಾಡಿದ ಮೇಲಾದ್ರೂ ಈ ಪರಿಷ್ಕ್ರತ ವ್ಯವಸ್ಥೆಗೆ ಪೂರಕವಾದ ಸಂಪನ್ಮೂಲಗಳನ್ನು ನೀಡಿತಾ..? ಖಂಡಿತಾ ಇಲ್ಲ..ಹೊಸದಾಗಿ ರಚನೆಯಾದ ಐದು ಪಾಲಿಕೆಗಳಿಗೆ ಸೂಕ್ತ ಕಚೇರಿಯನ್ನು ಒದಗಿಸುವ ಕೆಲಸವನ್ನೂ ಸರ್ಕಾರ ಮಾಡಲಿಲ್ಲ.ಅಗತ್ಯ ಸಿಬ್ಬಂದಿ, ಸಂಪನ್ಮೂಲ ಕ್ರೋಢೀಕರಣಕ್ಕೂ ಯಾವುದೇ ವ್ಯವಸ್ಥೆ ಮಾಡಲಿಲ್ಲ.ಇವತ್ತಿಗೂ ಐದು ಪಾಲಿಕೆಗಳ ವ್ಯವಸ್ಥೆ ಸ್ವಲ್ಪವೂ ಸುಧಾರಣೆಯಾಗಿಲ್ಲ.

ಇದೆಲ್ಲಕ್ಕಿಂತ ಹೆಚ್ಚಾಗಿ ಮೊದಲು ಕಾರ್ಪೊರೇಷನ್‌  ಅಖಂಡವಾಗಿದ್ದಾಗ ಆರ್ಥಿಕ ಸಂಪನ್ಮೂಲ ಒಂದೆಡೆ ಕ್ರೋಢೀಕರಣವಾಗುತ್ತಿತ್ತು.ಆ ಹಣ ಎಲ್ಲಾ ವಲಯಗಳಿಗೆ ಅಗತ್ಯಕ್ಕೆ ತಕ್ಕಂತೆ ವಿಕೇಂಧ್ರೀಕರಣ ವಾಗುತ್ತಿತ್ತು.ಆದರೆ ಐದು ಪಾಲಿಕೆಗಳಾದ ಮೇಲೆ ಹೆಚ್ಚು ಆದಾಯವಿರುವ ಕಾರ್ಪೊರೇಷನ್‌ ಗಳಲ್ಲೇ ಸಂಗ್ರಹವಾಗಿ ಅಲ್ಲೇ ಅದರ ವಿನಿಯೋಗ ಆಗುತ್ತಿದೆ.ಆದರೆ ವಾಣಿಜ್ಯಿಕವಾಗಿ ಸದೃಢವಲ್ಲದಿರುವ ಪಾಲಿಕೆಗಳಲ್ಲಿ ತೆರಿಗೆ ರೂಪದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗದೆ ಸಿಬ್ಬಂದಿಗೆ ಕೊಡಲಿಕ್ಕೆ ಸಂಬಳವೂ ಇಲ್ಲದಂತಾಗಿದೆಯಂತೆ.ಪಶ್ಚಿಮ ನಗರ ಪಾಲಿಕೆ ಹಾಗೂ ಕೇಂದ್ರ ನಗರ ಪಾಲಿಕೆಗಳಲ್ಲಿ ಇಂಥದ್ದೊಂದು ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ ಎನ್ನುವುದು ಅಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಿಬ್ಬಂದಿಯ ಆರೋಪ ಹಾಗೂ ಅಳಲು.

ALSO READ :  ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ "ಸಾಮ್ರಾಟ್‌" ಚಾನೆಲ್‌ "ಚೀಫ್‌-ಎಡಿಟರ್‌"..

ತೆರಿಗೆ ರೂಪದಲ್ಲಿ ಸಂಗ್ರಹ ಮಾಡುತ್ತಿರುವ ಆರ್ಥಿಕ ಸಂಪನ್ಮೂಲದ ಹಂಚಿಕೆ ಕಾರ್ಪೊರೇಷನ್‌ ಗಳ ನಡುವೆ ವಿತರಣೆ ಆಗುವುದಕ್ಕೆ ಹೊಸ ವ್ಯವಸ್ಥೆಯಲ್ಲಿ ಅವಕಾಶವಿಲ್ಲ.ಅಲ್ಲಿ ಸಂಗ್ರಹವಾಗುವ ತೆರಿಗೆ ಅದೇ ಕಾರ್ಪೊರೇ಼ಷನ್‌ ಗೆ ಸೀಮಿತವಾಗಬೇಕು ಎನ್ನುವುದೇ ಇದಕ್ಕೆ ಕಾರಣ. ಮಹಾದೇವಪುರ, ಕೆ.ಆರ್‌ ಪುರಂನಲ್ಲಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲಕ್ಕೂ ಪಶ್ಚಿಮ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಮಹಾದೇವಪುರದಲ್ಲಿ ನೂರಾರು ಕೋಟಿಗಳಲ್ಲಿ ತೆರಿಗೆ ಸಂಗ್ರಹವಾದ್ರೆ ಪಶ್ಚಿಮ-ಕೇಂದ್ರ ಪಾಲಿಕೆಗಳಲ್ಲಿ ಸಂಗ್ರಹವಾಗುವ ತೆರಿಗೆ ಕಚೇರಿಗಳ  ನಿರ್ವಹಣೆಗೂ ಸಾಕಾಗುತ್ತಿಲ್ಲ.ಬೇರೆ ಕಾರ್ಪೊರೇಷನ್‌ ಗಳಿಂದ ಎರವಲು ಪಡೆಯುವ ಅವಕಾಶವೂ ಇಲ್ಲದಿರುವುದರಿಂದ ಬಹುದೊಡ್ಡ ತಾರತಮ್ಯ ಸೃಷ್ಟಿಯಾಗಿದೆ.ಇದು ಸರ್ಕಾರವನ್ನು ಕಂಗೆಡಿಸಿದೆಯಂತೆ.ಒಂದೊಂದು ಕಾರ್ಪರೇಷನ್‌ ನಲ್ಲೂ ಒಂದೊಂದು ರೀತಿಯ ಸ್ಥಿತಿಯಿದೆ.ಅಸಮಾನತೆ ನಿರ್ಮಾಣವಾಗಿದೆ.ಮೊದಲೆಲ್ಲಾ ಎಲ್ಲಾ ಕಾರ್ಪೊರೇಷನ್‌ ಉದ್ಯೋಗಿಗಳಿಗೆ ಏಕಕಾಲಕ್ಕೆ ಸಂಬಳವಾಗುತ್ತಿತ್ತು.ಆದರೆ ಈಗ ಒಂದು ಕಾರ್ಪೊರೇಷನ್‌ ಗೆ ಸಂಬಳವಾದ್ರೆ ಇನ್ನುಳಿದ  ಕಾರ್ಪೊರೇಷನ್‌  ನೌಕರ ಸಿಬ್ಬಂದಿಗೆ ನಿಯತವಾಗಿ ಸಂಬಳವೇ  ಆಗುತ್ತಿಲ್ಲವಂತೆ.ಈ ಅಸಮಾನತೆ ಐದು ಕಾರ್ಪರೇಷನ್‌ ಗಳ ವರ್ಗೀಕರಣದಿಂದ ಸೃಷ್ಟಿಯಾದ ಬಹುದೊಡ್ಡ ಸಮಸ್ಯೆ ಎನ್ನುವುದನ್ನು ಸಮಿತಿ ಸರ್ಕಾರದ ಗಮನಕ್ಕೆ ತಂದಿದೆಯಂತೆ.

ಹೆಚ್ಚೆಚ್ಚು ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗುತ್ತಿರುವ ಕಾರ್ಪೊರೇಷನ್‌ ಗಳಲ್ಲಿ ಆರ್ಥಿಕ ಅಶಿಸ್ತು ಕೂಡ ಕಾಣಸಿಗುತ್ತಿದೆ.ಅದನ್ನು ಸ್ಟ್ರೀಮ್‌ ಲೈನ್‌ ಗೆ ತರುವ ಪ್ರಯತ್ನ ಕೂಡ ಆಗುತ್ತಿಲ್ಲ.ಇದು ಅಕ್ರಮ-ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆಯಂತೆ.ಇದನ್ನು ಕೂಡ ಸಮಿತಿ ಸರ್ಕಾರದ ಗಮನಕ್ಕೆ ತಂದಿದೆಯಂತೆ.ಎಲ್ಲಕ್ಕಿಂತ ಹೆಚ್ಚಾಗಿ ಬಹುತೇಕ ಜನಪ್ರತಿನಿಧಿಗಳು ಕೂಡ ಐದು ಪಾಲಿಕೆಗಳಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ..ನಮಗೆ ಮೊದಲಿದ್ದ ಸ್ಥಿತಿಯೇ ಸರಿಯಾಗಿತ್ತು ಎನ್ನುವ ವಾದ ಮಂಡಿಸಿದ್ದಾರಂತೆ. ಸರ್ಕಾರದಲ್ಲಿರುವ ಪ್ರಭಾವಿ ಶಾಸಕರೊಬ್ಬರು ಸರ್ಕಾರಕ್ಕೆ ಈ ಬಗ್ಗೆ ಪತ್ರವನ್ನೂ ಬರೆದಿದ್ದಾರಂತೆ.ಹಳೇ ವ್ಯವಸ್ಥೆ ಬೇಡ..ಅದನ್ನು ಪರಿಷ್ಕರಿಸಿ ಒಂದರ ಬದಲು ಎರಡು ಪಾಲಿಕೆಗಳನ್ನಾಗಿ ಮಾಡಿ ಪರಿಸ್ತಿತಿ ಸುಧಾರಿಸಿ ಎಂದು ಪತ್ರದಲ್ಲಿ ವಿವರಿಸಿದ್ದಾರಂತೆ.

ಇನ್ನು ರಾಜಕೀಯವಾಗಿಯೂ ಕಾಂಗ್ರೆಸ್‌ ನ ಲೆಕ್ಕಾಚಾರ ನಿರೀಕ್ಷೆಯಂತೆ ಫಲಿಸಿಲ್ಲವಂತೆ.ಸಧ್ಯಕ್ಕೇನಾದ್ರೂ ಚುನಾವಣೆ ನಡೆದರೆ ಐದರಲ್ಲಿ ಕಾಂಗ್ರೆಸ್‌ ಗೆ ಗೆಲ್ಲೊಕ್ಕೆ ಅವಕಾಶವಿರುವುದು ಹೆಚ್ಚೆಂದರೆ ೨ ಪಾಲಿಕೆ ಮಾತ್ರವಂತೆ.ಪಾಲಿಕೆಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಮಾಡಿದ ಪ್ಲ್ಯಾನ್‌ ಕೈ ಕೊಡುವ ಸಾಧ್ಯತೆಗಳಿರುವುದರಿಂದ ಆ ಕಾರಣಕ್ಕೂ ಐದು ಪಾಲಿಕೆಗಳ ವ್ಯವಸ್ಥೆಯನ್ನು ಬದಲಿಸಿದರೆ ಹೇಗೆ ಎನ್ನುವ ನಿಟ್ಟಿನಲ್ಲೂ ಲೆಕ್ಕಾಚಾರ ಶುರುವಾಗಿದೆಯಂತೆ. ಇದರ ಜತೆಗೆ ಇನ್ನೂ ಅನೇಕ ಲೆಕ್ಕಾಚಾರಗಳು ಕೂಡ ಸರ್ಕಾರದ ಮಟ್ಟದಲ್ಲಿ ಪಾಲಿಕೆಗಳ ಸಂಖ್ಯೆಯ ಬದಲಾವಣೆ ನಿಟ್ಟಿನಲ್ಲಿ ನಡೆಯುತ್ತಿದೆ ಎನ್ನಲಾಗಿದೆ.ಇದೆಲ್ಲವನ್ನು ಗಮನಿಸಿದ್ರೆ ಭವಿಷ್ಯದ ದೃಷ್ಟಿಯಿಂದ ಐದು ಪಾಲಿಕೆಗಳು ಎರಡಾಗಿ  ಬದಲಾದ್ರೂ ಆಶ್ಚರ್ಯವಿಲ್ಲ.


Leave a Comment