
ಬೆಂಗಳೂರು:ಇದು ಪತ್ರಿಕೋದ್ಯಮದಲ್ಲಿ ಸ್ವಂತದ್ದಾಗಿ ಏನನ್ನಾದರೂ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ನಾಲ್ವರು ಮಾದ್ಯಮಮಿತ್ರರ ಹೊಸ ಕನಸಿನ ಕಥೆ..ಇವತ್ತಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಎನ್ನುವುದು ಬಹುತೇಕ ವ್ಯಾಪಾರೀಕರಣವಾಗಿರುವ, ಇನ್ನೊಬ್ಬರ ಓಲೈಕೆಗೆ ಸೀಮಿತವಾಗಿರುವ, ಸ್ವಂತಿಕೆ-ಬದ್ಧತೆ ಕಳೆದುಕೊಂಡಿರುವ ಸನ್ನಿವೇಶದಲ್ಲಿ ಆ ನಿರ್ವಾತವನ್ನು ದೂರ ಮಾಡುವ ಸಂಕಲ್ಪ ಮಾಡಿಕೊಂಡಿರುವ ಈ ನಾಲ್ವರ ಪ್ರಯತ್ನ ಎಲ್ಲರ ಗಮನ ಸೆಳೆಯುತ್ತಿದೆ.ಸದಾ ಹೊಸ ಪ್ರಯತ್ನಗಳಿಗೆ ತುಡಿಯುವ ಮಾದ್ಯಮ ಮನಸುಗಳನ್ನು ಪ್ರೋತ್ಸಾಹಿಸುವ ಕನ್ನಡ ಫ್ಲ್ಯಾಶ್ ನ್ಯೂಸ್ ಈ ನಾಲ್ವರು ಮಾದ್ಯಮ ಮಿತ್ರರನ್ನು ಪರಿಚಯಿಸಲು ಹೆಮ್ಮೆ ಪಡುತ್ತದೆ.
ಪತ್ರಿಕೋದ್ಯಮ ಸದಾ ಹರಿಯುವ ನೀರಿದ್ದಂತೆ..ಇಲ್ಲಿ ಎಲ್ಲವೂ ಹೀಗೆಯೇ ಇರಬೇಕೆಂದು ಹೇಳಲಾಗೊಲ್ಲ..ಸದಾ ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಇರಬೇಕು..ಹೊಸತನಗಳಿಗೆ ತೆರೆದುಕೊಳ್ಳುತ್ತಲೇ ಇರಬೇಕು.ಇಲ್ಲವಾದಲ್ಲಿ ಪತ್ರಿಕಾರಂಗ ಶೀಘ್ರವೇ ಮರೆತುಬಿಡುತ್ತದೆ.ಪತ್ರಕರ್ತರೂ ಔಟ್ ಡೇಟೆಡ್ ಆಗುತ್ತಿದ್ದಾರೆ. ಎಷ್ಟೇ ಪ್ರತಿಭೆ-ಸಾಮರ್ಥ್ಯ ಇದ್ದಾಗ್ಯೂ ಬಹುತೇಕ ಪತ್ರಕರ್ತರಿಗೆ ವಯಸ್ಸೇ ದೊಡ್ಡ ತೊಡಕು-ಮಾರಕವಾಗುತ್ತಿದೆ.ಇಂಥ ಸನ್ನಿವೇಶದಲ್ಲಿ ಇರುವ ಬುದ್ದಿವಂತಿಕೆ-ಪ್ರತಿಭೆ-ಪ್ರೌಢಿಮೆಯನ್ನು ಕೇವಲ ಒಂದು ಆಯಾಮಕ್ಕೆ ಸೀಮಿತಗೊಳಿಸದೆ ಅದಕ್ಕೊಂದು ಹೊಸ ತಿರುವು ನೀಡುವ ಕೆಲಸಕ್ಕೆ ನಾಲ್ವರು ಮಾದ್ಯಮಮಿತ್ರರು ಮುಂದಾಗಿದ್ದಾರೆ.ಡಿಜಿಟಲ್ ಮೀಡಿಯಾ ಪ್ರಪಂಚದಲ್ಲಿ ತಮ್ಮದೇ ಚಾನೆಲ್ ಗಳ ಮೂಲಕ ಮುನ್ನಲೆಯಲ್ಲಿರುವ ನಾಲ್ವರು ಒಗ್ಗೂಡಿ ಮಾದ್ಯಮ ಸಂಸ್ಥೆಯೊಂದನ್ನ ಫೋರ್ ಎವರ್( FOUREVER) ಹೆಸರಿನಲ್ಲಿ ನಡೆಸಲು ಮುಂದಾಗಿದ್ದಾರೆ.ಅವರ ಕಾರ್ಯ ಡಿಜಿಟಲ್ ದುನಿಯಾದಲ್ಲಿ ಕೆಲಸ ಮಾಡುತ್ತಿರುವ ಇತರರಿಗೂ ಮಾದರಿ ಆಗುವಂತದ್ದು. ನಾಳೆಯಿಂದಲೇ ಫೋರ್ ಎವರ್( FOUREVER) ಅಧೀಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.


ಕನ್ನಡದ ಡಿಜಿಟಲ್ ಮಾದ್ಯಮದಲ್ಲಿ ಸಧ್ಯ ಟ್ರೆಂಡ್ ಸೆಟ್ಟರ್ ಎನ್ನಬಹುದಾದ ವಾಹಿನಿಗಳಲ್ಲಿ ಪ್ರಶಾಂತ್ ಮೂಡಿಗೆರೆ ಸಾರಥ್ಯದ ಪಬ್ಲಿಕ್ ಇಂಪ್ಯಾಕ್ಟ್ ,ಯೋಗೇಶ್ ಮುಂದಾಳತ್ವದ ಕನೆಕ್ಟ್ ಕರ್ನಾಟಕ, ಯಶವಂತ್ ಮಾಲೀಕತ್ವದ ಒನ್ ಕನ್ನಡ ನ್ಯೂಸ್, ಅಕ್ಷಯ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಕ್ಷಣ ಕೂಡ ಹೆಸರಿಸಬಹುದಾಂಥವು.ಇವುಗಳ ಇಂಪ್ಯಾಕ್ಟ್ ತುಂಬಾ ದೊಡ್ಡ ಮಟ್ಟದಲ್ಲಿದೆ.ಎಲ್ಲಾ ನಾಲ್ವರು ತಮ್ ತಮ್ ಚಾನೆಲ್ ಗಳೆಂದುಕೊಂಡು ಕೆಲಸ ಮಾಡುತ್ತಿದ್ದರು.ಬಹುಷಃ ಅದರಲ್ಲಿ ಏಕತಾನತೆಯಿದೆ ಎಂದೆನಿಸಿದ ತಕ್ಷಣ ಎಲ್ಲಾ ನಾಲ್ವರು ಒಗ್ಗೂಡಿ ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದ್ರು.ಅದೇ ದಾವಣಗೆರೆ ಬೈ ಎಲೆಕ್ಷನ್ ಅಖಾಡ.ಎಲ್ಲರೂ ತಮ್ ತಮ್ಮ ಚಾನೆಲ್ ಎಂದುಕೊಂಡು ಕವರೇಜ್ ಮಾಡುವುದಕ್ಕಿಂತ ಎಲ್ಲಾ ನಾಲ್ವರು ಸೇರಿ ಒಂದು ವೇದಿಕೆಯಲ್ಲಿ ಕವರೇಜ್ ಮಾಡಿದ್ರೆ ಹೇಗಿರುತ್ತೆ ಎಂದುಕೊಂಡು ಮಾಡಿದ ಆ ಪ್ರಯತ್ನ ಆ ದಿನಮಾನಗಳಲ್ಲಿ ವಿನೂತನ ಎನಿಸಿದ್ದು ಸುಳ್ಳಲ್ಲ..ಅದನ್ನೆ ಮಾಡೆಲ್ ಆಗಿ ಇಟ್ಟುಕೊಂಡು ಇನ್ನೊಂದಷ್ಟು ಮಾದ್ಯಮಗಳು ಹಾಗೆ ಮಾಡಿ..ಯಶಸ್ವಿಯೂ ಆದ್ವು.
ಇಷ್ಟಕ್ಕೆ ಸೀಮಿತವಾಗದೆ ನಾಲ್ವರು ಸಮಾನಮನಸ್ಕರು ಏನಾದರೊಂದು ಹೊಸದನ್ನು ಡಿಜಿಟಲ್ ಮೀಡಿಯಾದಲ್ಲಿ ಮಾಡಬೇಕೆನ್ನುವ ತುಡಿತದಲ್ಲಿ ಈಗ ಬೆಂಗಳೂರಿನಲ್ಲಿ ಒಂದಾಗುತ್ತಿದ್ದಾರೆ.ಅದು “ಫೋರ್ ಎವರ್( FOUR EVER..ನಾಲ್ವರು ಎಂದೆಂದಿಗೂ”) ಎನ್ನುವುದು ಇದರ ತಾತ್ಪರ್ಯ.ತಮ್ಮ ಚಾನೆಲ್ ಗಳ ಜತೆಗೆ ಪ್ರಮುಖ ಸನ್ನಿವೇಶಗಳಲ್ಲಿ ಒಂದಾಗಿ ಕೆಲಸ ಮಾಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ.ಕೆಲವು ಸನ್ನಿವೇಶಗಳಲ್ಲಿ ಒಂಟಿ ದ್ವನಿಗೆ ಸಿಗೋ ಬೆಲೆಗಿಂತ ಸಂಘಟಿತ ಪ್ರತಿದ್ವನಿಗೆ ಸಿಗುವ ಬೆಲೆ ದೊಡ್ಡದು ಹಾಗೂ ಪರಿಣಾಮಕಾರಿಯಾದದು ಎನ್ನುವುದನ್ನು ಬಲವಾಗಿ ನಂಬಿರುವ ಈ ನಾಲ್ವರು ಮಾದ್ಯಮ ಸ್ನೇಹಿತರು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ.
ಅಂದ್ಹಾಗೆ “ಫೋರ್ ಎವರ್( FOUR EVER..ನಾಲ್ವರು ಎಂದೆಂದಿಗೂ”) ಮೀಡಿಯಾದ ಮೂಲಕ ಡಿಜಿಟಲ್ ದುನಿಯಾದಲ್ಲಿ ಕಂಪನ ಮೂಡಿಸಲು ಹೊರಟಿರುವ ಸ್ನೇಹಿತರ ಪ್ರಯತ್ನ ಐತಿಹಾಸಿಕ ಹಾಗೂ ಮೈಲಿಗಲ್ಲಿನ ಕೆಲಸ ಎಂದರೂ ತಪ್ಪಾಗಲಿಕ್ಕಿಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾದ್ಯಮಗಳು ಕೂಡ ಒಂದು ಕ್ಷಣ ಇವರತ್ತ ದೃಷ್ಟಿ ಕೇಂದ್ರೀಕರಿಸುವುದರಲ್ಲಿ ಅನುಮಾನವಿಲ್ಲ.ಇವರ ಪ್ರಯತ್ನ ಯಶಸ್ವಿಯಾಗಲಿ..ಅವರ ನಿರೀಕ್ಷೆಗಳು ಕೈಗೂಡಲಿ..ಕನಸುಗಳು ನನಸಾಗಲಿ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಶುಭ ಹಾರೈಸುತ್ತದೆ..ಆಲ್ ದಿ ಬೆಸ್ಟ್ ಫ್ರೆಂಡ್ಸ್.
