“ರಿಪಬ್ಲಿಕ್‌ ಕನ್ನಡ”ದಿಂದ “ಮಾದ್ಯಮಮಿತ್ರ”ರಿಗೆ “ಗೇಟ್‌ ಪಾಸ್”!-ಆರ್ಥಿಕ ಹಿಂಜರಿತಕ್ಕೆ ಬೀದಿಗೆ ಬಿದ್ದವಾ “ಬದುಕು”ಗಳು…!?


ರಿಪಬ್ಲಿಕ್‌ ಕನ್ನಡ ಸುದ್ದಿಮನೆಯಿಂದ  ಅಘಾತಕಾರಿ ಸುದ್ದಿ ಹೊರಬಿದ್ದಿದೆ. ರಿಪಬ್ಲಿಕ್‌ ಕನ್ನಡದ ಇಲ್ಲಿನ ಆಡಳಿತ ತೆಗೆದುಕೊಂಡ ನಿರ್ದಾರದಿಂದ ,”ಕಾರ್ಪೊರೇಟ್‌” ಚಾನೆಲ್‌ ಗಳೆಲ್ಲಾ ಸೇಫ್‌ ಅಲ್ಲ ಎನ್ನುವ ಸಂದೇಶ ರವಾನೆ ಯಾಗಿದೆ. ಇದು ಆ ಚಾನೆಲ್‌ ನ ಸಿಬ್ಬಂದಿಗಷ್ಟೇ ಅಲ್ಲ, ಕನ್ನಡದ ಎಲ್ಲಾ ಮಾದ್ಯಮಗಳಲ್ಲೂ ಕೆಲಸ ಮಾಡುವ ಸುದ್ದಿಮಿತ್ರರಿಗೂ ಅಘಾತ ಮೂಡಿಸಿದೆ..ಮುಂದಿನ ಸರದಿ ನನ್ನದಾ ಎಂದು ಆತಂಕಪಡುವಂತಾಗಿದೆ. ಗೊತ್ತಿಲ್ಲ…ಆದರೆ ಯಾವ್‌ ಕ್ಷಣದಲ್ಲಿ ಏನ್‌ ಬೇಕಾದ್ರೂ ಆಗಬಹುದು,ಇಲ್ಲಿ ಯಾವುದು ಸ್ಥಿರವಲ್ಲ..ಬೆಳಗ್ಗೆ ಕಚೇರಿಗೆ ಹೋಗಿ ಸಂಜೆ ವಾಪಸ್ಸಾದ್ರೆ ಅವತ್ತಿಗಷ್ಟೇ ಜೀವನ ಸೇಫ್‌..ನಾಳೆ ಎನ್ನುವುದಕ್ಕೆ ಭರವಸೆಯಿಲ್ಲ ಎನ್ನುವ ಮಟ್ಟಕ್ಕೆ ಮಾದ್ಯಮ ಮಿತ್ರರ ಬದುಕನ್ನು ಅಭದ್ರ-ಅತಂತ್ರಗೊಳಿಸಿವೆ ಮಾದ್ಯಮಗಳು.‌( ಸ್ಪಷ್ಟನೆ: ಇದು  ರಿಪಬ್ಲಿಕ್‌ ಕನ್ನಡ ಸಂಸ್ಥೆಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಬರೆಯುತ್ತಿರುವ ಸುದ್ದಿ.ವ್ಯಕ್ತಿಗತವಾಗಿ ಆ ಸಂಸ್ಥೆ ಬಗ್ಗೆ ಗೌರವವಿದೆ.)

ಯೆಸ್…ರಿಪಬ್ಲಿಕ್‌ ಕನ್ನಡ ಚಾನೆಲ್‌ ನಿಂದ ಸುಮಾರು 20 ಸುದ್ದಿಮಿತ್ರರು ಹೊರಬಿದ್ದಿದ್ದಾರಂತೆ(ಅವರುಗಳ ಹೆಸರುಗಳು ಲಭ್ಯವಾಗಿದ್ದರೂ ಇಲ್ಲಿ ಹೇಳುತ್ತಿಲ್ಲ ಅಷ್ಟೆ..ಶಿಷ್ಟಾಚಾರದ ಕಾರಣ ಅಷ್ಟೆ..).. ಅಂದರೆ ಅವರನ್ನೆಲ್ಲಾ ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ.ಓರ್ವ ಸೀನಿಯರ್‌ ಆಂಕರ್‌ ಸೇರಿದಂತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಮೂವರು ಆಂಕರ್ಸ್, ಇನ್‌ ಪುಟ್‌ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪ್ರಮುಖರು ಮತ್ತು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ಸುಮಾರು  15 ಕ್ಯಾಮೆರಾಮನ್‌ ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ. ಒಂದು ಅಂದಾಜಿನ ಪ್ರಕಾರ ಸುಮಾರು  20 ಮಾದ್ಯಮಮಿತ್ರರ ಬದುಕುಗಳು ಬೀದಿಗೆ ಬಿದ್ದಿವೆ.ಅವರನ್ನು ನಂಬಿಕೊಂಡ ಜೀವ-ಜೀವನಗಳು ಅಕ್ಷರಶಃ ಅತಂತ್ರಗೊಂಡಿವೆ.

ಕೆಲಸ ಸಿಗೋದೇ ಕಷ್ಟ ಎನಿಸುವ ಮಟ್ಟಕ್ಕೆ ಮಾದ್ಯಮಗಳ ಸ್ಥಿತಿ ತಲುಪಿರುವ ಸನ್ನಿವೇಶದಲ್ಲಿ ಕೆಲಸ ಕಳೆದುಕೊಂಡ ನಈ ಎಲ್ಲಾ ಮಾದ್ಯಮ ಮಿತ್ರರ ಕಥೆ ಏನಾಗಬೇಡ..  ಅವರಿಗೆ ಆಕಾಶವೇ ಕಳಚಿಬಿದ್ದ ಅನುಭವ.ನಾಳೆಯಿಂದ ನಾಔೆಲ್ಲಾ ನಿರುದ್ಯೋಗಿಗಳು.ಎನ್ನುವ ಸತ್ಯವನ್ನು ಹೇಗೆ ಅರಗಿಸಿಕೊಳ್ಳಬೇಕೆಂದು ತೋಚದೆ ಒದ್ದಾಡುತ್ತಿದ್ದಾರೆ. ಆ ಮಾದ್ಯಮಮಿತ್ರರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಲೇ ರಿಪಬ್ಲಿಕ್‌ ಕನ್ನಡ ಯಾಕೆ ಇವರ ವೃತ್ತಿಬದುಕನ್ನು ಆಪೋಷನ ತೆಗೆದುಕೊಳ್ತು ಎನ್ನುವುದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಕನ್ನಡ ಫ್ಲ್ಯಾಶ್‌ ನ್ಯೂಸ್.

ಯಾರೇ ಕೆಲಸ ಕಳೆದುಕೊಳ್ಳಲಿ ..ಯಾರನ್ನೇ ಕೆಲಸದಿಂದ ತೆಗೆದರೂ ಅಲ್ಲಿ ಲೋಗೋ-ಕ್ಯಾಮೆರಾ ಹಿಡಿದು ನಿಂತು ಅನ್ಯಾಯಕ್ಕೀಡಾದವರ ಬೆನ್ನಿಗೆ ನಿಂತು ಅನ್ಯಾಯವನ್ನು ಪ್ರಶ್ನಿಸುವ ಕೆಲಸ ಮಾಡುತ್ತೇವಲ್ವಾ ನಾವು.ಆದರೆ ನಮ್ಮಲ್ಲಿನ ಮಾದ್ಯಮ ಮಿತ್ರರೇ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರೆ ಅದನ್ನು ಯಾರು ಪ್ರಶ್ನಿಸ್ತಾರೆ..ಯಾರು ಅವರ ಪರವಾಗಿ ನಿಲ್ಲುತ್ತಾರೆ..ಹೋರಾಟದ ಮೂಲಕ ನ್ಯಾಯ ಕೊಡಿಸುತ್ತಾರೆ..ಇವತ್ತಿಗೂ ಉತ್ತರ ಸಿಗದಂತಾಗಿರುವ ಪ್ರಶ್ನೆಗಳಿವು. ರಿಪಬ್ಲಿಕ್‌ ಕನ್ನಡದಿಂದ ಕೆಲಸ ಕಳೆದುಕೊಂಡು ಹೊರಬಿದ್ದಿರುವ ಸಿಬ್ಬಂದಿಯ ಕಥೆಯೂ ಹೀಗೆಯೇ ಆಗಿದೆ.

ಒಂದು ಸಣ್ಣ ಸೂಚನೆಯನ್ನೂ ಕೊಡದೆ  ನಾಳೆಯಿಂದ ನಿಮ್ಮ ಸೇವೆ ಅವಶ್ಯಕತೆಯಿಲ್ಲ ಎಂದು ಎಚ್‌ ಆರ್‌ ವಿಭಾಗದಿಂದ  ನೀಡಲಾದ ಸಂದೇಶ ೨೦ ಮಾದ್ಯಮ ಮಿತ್ರರನ್ನು ಅಘಾತಕ್ಕೀಡು ಮಾಡಿದೆಯಂತೆ. ಕಾರಣ ಏನು ಎಂದು ಕೇಳಲಿಕ್ಕೂ ಅವಕಾಶ ಕೊಡದೆ ಕರೆ ಕಟ್‌ ಮಾಡಿದೆಯಂತೆ ಎಚ್‌ ಆರ್‌ ವಿಭಾಗ. ನಾವು ಮಾಡಿದ ತಪ್ಪಾದ್ರೂ ಏನು..? ಏನೂ ಕಾರಣ ಹೇಳದೆ ಹೀಗೆ ಇದ್ದಕ್ಕಿದ್ದಂತೆ ನಾಳೆಯಿಂದ ಕೆಲಸ ಮಾಡಬೇಡಿ ಎಂದು ಹೇಳಿದ್ರೆ ಏನರ್ಥ..ನಾವು ಎಲ್ಲಿ ಹೋಗಬೇಕು..ನಮ್ಮನ್ನ ನಂಬಿಕೊಂಡವರನ್ನು ಏನ್‌ ಮಾಡಬೇಕು ಎಂದು ಕೇಳ್ತಿದ್ರೂ ಅದಕ್ಕೆ ಸಮರ್ಪಕ ಉತ್ತರ ಸಿಗುತ್ತಿಲ್ಲವಂತೆ.ಬೆಂಗಳೂರಿನ ಕಚೇರಿಗೆ ಕರೆ ಮಾಡಿ ಆಂತರ್ಯ ಕೇಳಿದ್ರೆ ಇದೆಲ್ಲಾ ಆರ್ಥಿಕ ಹೊರೆ ತಗ್ಗಿಸುವ ಪ್ರಯತ್ನದ ಭಾಗ ಇರಬಹುದು ಎಂಬಷ್ಟೇ ಉತ್ತರ ಸಿಗುತ್ತಿದೆಯಂತೆ..ವರ್ಷಗಳ ಕಾಲ ಸಂಸ್ಥೆಯನ್ನು ತನ್ನ ಸ್ವಂತ ಕುಟುಂಬದಂತೆ ಭಾವಿಸಿದ್ದ ಆ ಎಲ್ಲಾ ೨೦ ಮಾದ್ಯಮಮಿತ್ರರು ಇವತ್ತು ಅನಪೇಕ್ಷಿತರಾಗಿಬಿಟ್ಟರು.ಎಂಥಾ ವಿಪರ್ಯಾಸ ಅಲ್ವಾ.!?

ಕೆಲಸದಿಂದ ಯಾರನ್ನೇ ತೆಗೆಯುವ ಮುನ್ನ ಮುನ್ನೆಚ್ಚರಿಕೆ ರೂಪದಲ್ಲಿ ನೊಟೀಸ್‌ ನೀಡುವುದು, ಮುಂಗಡವಾಗಿ 1-3 ತಿಂಗಳ ಸಂಬಳ ಕೊಡುವುದು ಕಂಪೆನಿಗಳ ನಿಯಮ- ಸಂಪ್ರದಾಯ.ಕಾರ್ಮಿಕ ಕಾನೂನು ಹೇಳುವುದು ಕೂಡ ಇದನ್ನೇ..ಆದರೆ ಬಹುತೇಕ ಮಾದ್ಯಮ ಸಂಸ್ಥೆಗಳ ವಿಚಾರದಲ್ಲಿ  ಇದು ಪಾಲನೆಯೇ ಆಗಿಲ್ಲ..ಆಗುತ್ತಿಲ್ಲ..ನಮ್ಮನ್ನ್ಯಾರು ಪ್ರಶ್ನೆ ಮಾಡ್ತಾರೆ.ಪ್ರಶ್ನೆ ಮಾಡಿ ಯಾರು ಉಳಿದುಕೊಂಡಿದ್ದಾರೆ ಎಂಬ ಅಹಂಭಾವದಲ್ಲೇ ಅನೇಕ ಸಂಸ್ಥೆಗಳು ನಿರ್ದಯಿಯಾಗಿ ಕೆಲಸಗಾರರನ್ನು ತೆಗೆದಿದ್ದಿದೆ.( ಆದರೆ ಕೆಲವು ಮಾದ್ಯಮ ಸಂಸ್ಥೆಗಳು ಕಾರ್ಮಿಕ ಕಾನೂನಿನ ಅನ್ವಯವೇ  ಕೆಲಸದಿಂದ ತೆಗೆಯಲ್ಪಡುವ ಉದ್ಯೋಗಿಗಳಿಗೆ ಎಲ್ಲಾ ಸೌಲಭ್ಯ ಕೊಡುತ್ತಿವೆ). ರಿಪಬ್ಲಿಕ್‌ ಕನ್ನಡದಲ್ಲಿ ಆಗಿರುವುದು ಇದೇ..ಯಾವುದೇ ತಿಳಿವಿನ ನೊಟೀಸ್‌ ನೀಡಿಲ್ಲ..ಮುಂಗಡ ಸಂಬಳವನ್ನೂ ನೀಡಿಲ್ಲ.ಅದನ್ನು ಕೆಲವರು ಕೇಳಿದ್ರೆ ಅದರ ಬಗ್ಗೆ ಮ್ಯಾನೇಜ್ಮೆಂಟ್‌ ನಿಂದ ನಿರ್ದೇಶನವಿಲ್ಲ ಎಂಬಷ್ಟೇ ಉತ್ತರ ಸಿಗುತ್ತಿದೆಯಂತೆ. ಅಂದರೆ ಯಾವುದೇ ನೊಟೀಸ್‌ ನೀಡದೆ, ಮುಂಗಡ ಪರಿಹಾರವನ್ನೂ ನೀಡದೆ ಆ ಎಲ್ಲಾ ೨೦ ಮಾದ್ಯಮ ಮಿತ್ರರಿಗೆ ಗೇಟ್‌ ಪಾಸ್‌ ಕೊಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾದಂತಾಯಿತು.ಅಂದ್ಹಾಗೆ ಇದು ಕಾರ್ಮಿಕ ಕಾನೂನಿನ ಸ್ಪಷ್ಟ ಉಲ್ಲಂಘನೆಯಲ್ಲವೇ..? ಇದಕ್ಕೆ ಆಡಳಿತವೇ ಉತ್ತರಿಸಬೇಕು.

ರಿಪಬ್ಲಿಕ್‌ ಕನ್ನಡದ ಸುದ್ದಿವಿಭಾಗದ ಮುಖ್ಯಸ್ಥ ಶಿವಶಂಕರ್‌
ರಿಪಬ್ಲಿಕ್‌ ಕನ್ನಡದ ಸುದ್ದಿವಿಭಾಗದ ಮುಖ್ಯಸ್ಥ ಶಿವಶಂಕರ್‌

ಹೌದು..ಖಚಿತ ಮೂಲಗಳ ಪ್ರಕಾರ ಸುಮಾರು 20 ಸಿಬ್ಬಂದಿಗೆ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ.(ಎರಡನೇ ಹಂತದಲ್ಲಿ ಇನ್ನೂ ಒಂದಷ್ಟು ಸಿಬ್ಬಂದಿ ಯೂ ಗೇಟ್‌ ಪಾಸ್‌ ಪಡೆಯುವ ಸಾಧ್ಯತೆಗಳಿವೆಯಂತೆ).ಇದಕ್ಕೆ ಕೊಡಲಾಗಿರುವ ಕಾರಣ ಆರ್ಥಿಕ ಹಿಂಜರಿತವಂತೆ.ಆದರೆ ಕೆಲಸ ಕಳೆದುಕೊಂಡ ಮಾದ್ಯಮ ಮಿತ್ರರ ಪ್ರಕಾರ ಇದು ಸತ್ಯ ಅಲ್ಲವಂತೆ..!  ಏಕೆಂದರೆ ಆರ್ಥಿಕ ಹೊಡೆತಕ್ಕೆ ಸಿಲುಕಿದ ಅದೆಷ್ಟೋ ಸನ್ನಿವೇಶಗಳಲ್ಲಿಯೇ ಚಾನೆಲ್‌ ಮುಚ್ಚುವ ಮಾತನ್ನಾಡದ  ಅರ್ನಾಬ್‌ ಎನ್ನುವ ಮಾದ್ಯಮ ದಿಗ್ಗಜನ ರಿಪಬ್ಲಿಕ್‌ ಕನ್ನಡ ೨೦ ಜನರನ್ನು ಆ ಕಾರಣಕ್ಕೆ ತೆಗದು ಹಾಕುವಂತೆ ನಿರ್ದೇಶನ ಕೊಡುತ್ತದೆ ಎಂದು ನಮಗನ್ನಿಸುವುದೇ ಇಲ್ಲ.ಅಲ್ಲದೆ ಕೆಲವರು ವ್ಯವಸ್ಥೆ  ಹಾಳು ಮಾಡಿದ್ದಾರೆನ್ನೋದನ್ನು ಬಿಟ್ಟರೆ  ಚಾನೆಲ್‌ ನ ಆರ್ಥಿಕತೆಗೇನು ತೊಂದರೆಯಿಲ್ಲ..ಇದು ಇಲ್ಲಿನ ಮ್ಯಾನೇಜ್ಮೆಂಟ್‌ ಕೇವಲ ಸೃಷ್ಟಿಸುತ್ತಿರುವ ಕಥೆ ಅಷ್ಟೇ..ತಾವು, ತಮ್ಮವರನ್ನು ಬಚಾವು ಮಾಡಿಕೊ‍ಳ್ಳಲಿಕ್ಕೆ ನಮ್ಮನ್ನು ಮುಗಿಸಲು ರೂಪಿಸಿದ ಷಡ್ಯಂತ್ರ ಎನ್ನುವುದು ನೊಂದವರ ಆಪಾದನೆ..ಮೇಲ್ನೋಟಕ್ಕೆ ಇದು ಸತ್ಯವೂ ಇರಬಹುದೇನೋ..?

ರಿಪಬ್ಲಿಕ್ ಕನ್ನಡದ ಬೆಳವಣಿಗೆ ಬಗ್ಗೆ ಅರ್ನಾಬ್‌ ಅವರಿಗೆ ಕೆಂಡದಂಥ ಕೋಪ,ಅಸಹನೆ ಇರುವುದೆಲ್ಲಾ ನಿಜ.ಅದು ಎಲ್ಲರಿಗೂ ಗೊತ್ತಿದೆ.ವ್ಯವಸ್ಥೆ ಸರಿಪಡಿಸಿ ಕೊಳ್ಳಿ,ಇಲ್ಲವಾದಲ್ಲಿ ನಾನು ನಿರ್ದಾರ ಮಾಡಬೇಕಾಗ್ತದೆ ಎಂದು ಎಂದಿನಂತೆ ಈ ಬಾರಿಯೂ ಎಚ್ಚರಿಸಿರಬೇಕು.ಆದರೆ ಆ ಎಚ್ಚರಿಕೆಯನ್ನು ಇಲ್ಲಿ ಕುಳಿತ ವರು, ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಅರ್ಥ ಮಾಡಿಕೊಂಡು,ಅದಕ್ಕೆ  ಆ  ೨೦ ಸಿಬ್ಬಂದಿಗೆ ಗೇಟ್‌ ಪಾಸ್‌ ಕೊಡುವುದೇ ಸೂಕ್ತ ಪರಿಹಾರ ಎಂದುಕೊಂಡು ಬಿಡ್ತಾ..? ಗೊತ್ತಿಲ್ಲ…ಆದರೆ ಎಲ್ಲರನ್ನು ಬಿಟ್ಟು ಈ ೨೦ ಸಿಬ್ಬಂದಿಯನ್ನೇ ಲೀಸ್ಟ್‌ ಮಾಡಿ,ಅವರನ್ನು ತೆಗೆದರೆ ಎಲ್ಲಾ ಸರಿ ಹೋಗುತ್ತೆ.ಆರ್ಥಿಕ ಹಿಂಜರಿತವೂ ತಗ್ಗುತ್ತದೆ ಎಂದೇನಾದ್ರೂ ಆಲೋಚಿಸಿ ಕ್ರಮ ಕೈಗೊಂಡಿದ್ದರೆ ಅದರಷ್ಟು ಮೂರ್ಖತನ ಮತ್ತೊಂದಿಲ್ಲ ಎಂದೆನಿಸುತ್ತದೆ.ಏಕೆಂದರೆ ಕೆಲಸ ಕಳೆದುಕೊಂಡ ಈ ಇಪ್ಪತ್ತು ಸಿಬ್ಬಂದಿಯಲ್ಲಿ ಒಬ್ಬ ಕೂಡ ಟಿಆರ್‌ ಪಿ ತರುವ ಸೆಕ್ಷನ್‌ ಗಾಗಲಿ,, ರೆವಿನ್ಯೂ ತರುವಂತ ವಿಭಾಗಕ್ಕೆ ಸಂಬಂಧಪಡದವರೇ ಅಲ್ಲ. ಅವರೆಲ್ಲಾ ಸುದ್ದಿಮನೆಯಲ್ಲಿ ತಮ್ಮ ಪಾಡಿಗೆ ಕೆಲಸ ಮಾಡುವ ನಿರುಪದ್ರವಿಗಳು.ಆದರೆ ಅವರೇ ಮ್ಯಾನೇಜ್ಮೆಂಟ್‌ ಕೆಂಗ‍ಣ್ಣಿಗೆ ಗುರಿಯಾದದ್ದು ಮಾತ್ರ ವಿಪರ್ಯಾಸ.

ಕೆಲಸ ಕಳೆದುಕೊಂಡವರೆಲ್ಲಾ  ಅಮಾಯಕರು-ನಿಷಾಪಿಗಳು  ಕಣ್ರಿ..ರಿಪಬ್ಲಿಕ್‌ ಕನ್ನಡದ ಆಡಳಿತದ ಅತ್ಯಂತ ಕೆಟ್ಟ ನಿರ್ದಾರದಿಂದ ಕೆಲಸ ಕಳೆದುಕೊಂಡಿರುವ ಮಾದ್ಯಮ ಮಿತ್ರರೆಲ್ಲಾ ಅಮಾಯಕರು-ನಿಷ್ಪಾಪಿಗಳು.ಕೆಲಸದ ವಿಷಯಕ್ಕೆ ಬಂದರೆ ಸತ್ಯ-ನಿಷ್ಟೆ-ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದವರು.ಕೆಲಸ ಬಿಟ್ಟರೆ ಬೇರೇನೋ ಗೊತ್ತಿರದ ಶ್ರಮಿಕರು.ಸುದ್ದಿಮನೆ ಹೊರಗೆ ಕೆಲಸ ಮಾಡುವ ಸಿಬ್ಬಂದಿಯ ಪೈಕಿ ಹಲವರ ಬಗ್ಗೆ ಇರುವ ಎಕ್ಸ್‌ ಟ್ರಾ ದುಡಿಮೆ ಸೋಂಕನ್ನು-ಕಳಂಕವನ್ನು ಅಂಟಿಸಿಕೊಳ್ಳದವರು.( ಮಾದ್ಯಮ ಸಂಸ್ಥೆಗಳ ಆಡಳಿತಗಳು ಇದ್ದಕ್ಕಿದ್ದಂತೆ ಕೇರ್‌ ಆಫ್‌ ಪುಟ್ಪಾತ್‌ ಮಾಡುವ ಹೀನ ಸಂಸ್ಕ್ರತಿ ಅನುಸರಿಸುತ್ತಿರುವ ಸನ್ನಿವೇಶದಲ್ಲಿ ಸುದ್ದಿಮಿತ್ರರು ಬದುಕನ್ನು ಕಟ್ಟಿಕೊಳ್ಳಲು ಎಕ್ಸ್‌ ಟ್ರಾ ದುಡಿಮೆಯತ್ತ ಗಮನ ಹರಿಸುವುದರಲ್ಲಿಯೂ ತಪ್ಪೇನಿಲ್ಲ ಎಂದೆನಿಸುತ್ತದೆ ಬಿಡಿ..)..

ವೈಯುಕ್ತಿಕ ಬದುಕಿನ ಆಸೆ-ಆಕಾಂಕ್ಷೆ-ಸಂತೋಷಗಳನ್ನೆಲ್ಲಾ ಉಳಿದವರಂತೆ ನಿರ್ದಿಷ್ಟ ಸನ್ನಿವೇಶಗಳಲ್ಲಿ  ರಜೆ ಪಡೆಯದೆ ಕೆಲಸ ಮಾಡುತ್ತಿದ್ದವರು.ಅದಕ್ಕಾಗಿ ಮನೆಮಂದಿ-ಸ್ನೇಹಿತರು-ಆತ್ಮೀಯರಿಂದ ಬೈಸಿಕೊಂಡವರು.ಆದರೂ ಅದಕ್ಕಾಗಿ ತಲೆಕೆಡಿಸಿಕೊ‍ಳ್ಳದ ಸ್ಥಿತಪ್ರಜ್ಞರು…ಇಂಥಾ ಮಾದ್ಯಮ ಮಿತ್ರರನ್ನು ಎಷ್ಟೊಂದು ನಿಕೃಷ್ಟವಾಗಿ-ನಿಷ್ಕರುಣಿಯಾಗಿ ನಡೆಸಿಕೊಂಡು, ನಾಳೆಯಿಂದ ನಿಮ್ಮ ಸೇವೆ ಅಗತ್ಯವಿಲ್ಲ ಎಂದು ಹೇಳಿ ಅವರೊಂದಿಗಿನ ವರ್ಷಗಳ ನಂಟನ್ನು-ಕರುಳಬಳ್ಳಿಯ ಸಂಬಂಧವನ್ನು ಕಡಿದುಕೊಂಡು ಬಿಟ್ಟರೆ ಹೇಗೆ ಹೇಳಿ..ನೋವಾಗುತ್ತದಲ್ಲವೇ.? ಅನುಭವಿಸಲಿಕ್ಕೆ ಹಿಂಸೆ ಆಗುತ್ತದೆಯಲ್ಲವೇ..? ಇದನ್ನು ಇಲ್ಲಿ ಚಾನೆಲ್‌ ನ ಉಸ್ತುವಾರಿ ವಹಿಸಿಕೊಂಡವರು ಅರ್ಥ ಮಾಡಿಕೊಳ್ಳಬೇಕಿತ್ತಲ್ಲವೇ..? ಚಾನೆಲ್‌ ನ್ನು ಅರ್ನಾಬ್‌ ಗೋಸ್ವಾಮಿ ಎನ್ನುವ ದಿಗ್ಗಜನ ನಿರೀಕ್ಷೆಗೆ ತಕ್ಕಂತೆ ನಡೆಸಲಿಕ್ಕಾಗದಿರುವುದು ಈ ಮಾದ್ಯಮ ಸಿಬ್ಬಂದಿಗಳ ತಪ್ಪಾ.? ಚಾನೆಲ್‌ ಎನ್ನುವ ಶಿಪ್‌ ನ ಕ್ಯಾಪ್ಟನ್‌ ದ್ದಲ್ಲವೇ..? ತಮ್ಮ ಸೋಲು-ವೈಫಲ್ಯವನ್ನು ಮರೆ ಮಾಚಲಿಕ್ಕೆ ತಮ್ಮ ಕೆಳಹಂತದ ಮಾದ್ಯಮ ಮಿತ್ರರನ್ನು ಬಲಿ ಹಾಕಿ ಅವರ ಬದುಕುಗಳನ್ನೆಲ್ಲಾ ಬೀದಿಗೆ ತಂದಿದ್ದು ಎಷ್ಟರ ಮಟ್ಟಿಗೆ ಸರಿ..? ಅಲ್ಲವಾ..?

ಏಕೆಂದರೆ ಕೆಲಸ ಕಳೆದುಕೊಂಡು ಬೀದಿಗೆ ಬಂದು ನಿಂತಿರುವ ಪ್ರತಿ ಮಾದ್ಯಮ ಮಿತ್ರರದ್ದು ಒಂದೊಂದು ನೋವಿನ ಕಥೆ..ಒಬ್ಬನ ಹೆಂಡ್ತಿ ಗರ್ಭಿಣಿ..ಕೈ ತುಂಬಾ ಖರ್ಚು,ಬರೋ ತಿಂಗಳ ಸಂಬಳದಿಂದ ಅದನ್ನು ನಿಭಾಯಿಸಲಿಕ್ಕಾಗದ ಸ್ಥಿತಿ.ಆದರೂ ಕೆಲಸವೊಂದಿದೆ..ತಿಂಗಳು ಒಂದುನಿರ್ದಿಷ್ಟ ದಿನಾಂಕದಂದು ಅಕೌಂಟ್‌ ಗೆ ಬಂದು ಬೀಳುತ್ತದೆ..ಅದನ್ನು ನಂಬಿ ಹತ್ತಾರು ಕಡೆ ಸಾಲ ಮಾಡಿಕೊಂಡು,ಕಂತುಗಳನ್ನು ಸರಿಯಾಗಿ ಕಟ್ಟಲಿಕ್ಕಾಗದಿದ್ದರೂ ಏನೇನೋ ನೆವಗಳನ್ನು ಹೇಳಿಕೊಂಡು ತೀರಿಸಿದರಾಯ್ತು ಬಿಡು ಎಂಬ ಧೈರ್ಯದಲ್ಲಿದ್ದ ಆತನ ಸ್ತಿತಿ ಈಗ ಏನಾಗಬೇಡ…

ನಾಳೆ ಮಗುವಿನ ಹುಟ್ಟುಹಬ್ಬ. ಅದಕ್ಕಾಗಿ ತನ್ನ ಸಾಮರ್ಥ್ಯಕ್ಕನುಗುಣವಾಗಿ ಒಂದು ಸಣ್ಣ ಪುಟ್ಟ ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತಿದ್ದಾತನಿಗೆ ನಾಳೆಯಿಂದ ನೀವು ಕೆಲಸ ಮಾಡುವುದು ಬೇಡ ಎಂದು ಕರೆ ಮಾಡಿಬಿಟ್ಟರೆ ಹೇಗಾಗಬೇಡ ಹೇಳಿ..ಎಷ್ಟೇ ಕಷ್ಟಗಳಿದ್ದರೂ ಕೆಲಸವೊಂದಿದೆ..ಹೇಗಾದ್ರೂ ಬದುಕಬಲ್ಲೆ ಎಂಬ ಧೈರ್ಯವೊಂದನ್ನು ನೀಡಿದ ಜೀವನಾಧಾರ ಮೂಲವೇ ಹೋದರೆ ಆತನನ್ನು ನಂಬಿಕೊಂಡ ಜೀವ-ಜೀವನಗಳು, ಜೀವನ ನಿರ್ವಹಣೆಗೆ ಆತ ಮಾಡಿಕೊಂಡ ಹತ್ತಾರು ಕಮಿಟ್ಮೆಂಟ್‌ ಗಳ ಕಥೆ ಏನಾಗಬೇಡ..ಪಾಪಒಬ್ಬೊಬ್ಬರ ಕಥೆ ಕೇಳಿದಾಗಲೂ ಕರುಳು ಚುರುಕ್‌ ಎನ್ನುತ್ತಿತ್ತು.ಆದರೆ ಮ್ಯಾನೇಜ್ಮೆಂಟ್‌ ಮಾತ್ರ, ಸಂಸ್ಥೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ನಿಮ್ಮಗಳನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಎಚ್‌ ಆರ್‌ ವಿಭಾಗದವರ ಮೂಲಕ ಹೇಳಿಸಿ ಕಾರಣ ಕೇಳಲಿಕ್ಕೂ ಅವಕಾಶ ಕೊಡದೆ ಕರೆ ಕಟ್‌ ಮಾಡಿಸಿದ್ರೆ ಕೇಳಿಸಿಕೊಂಡವರು ಪಾತಾಳಕ್ಕೆ ಕುಸಿಯದೆ ಇನ್ನೇನಾದೀತು..

ಚಾನೆಲ್‌ನ ಇಂದಿನ  ಸ್ಥಿತಿಗೆ ಸಿಬ್ಬಂದಿ ಮಾತ್ರ ಹೊಣೆನಾ..? ಮುಖ್ಯಸ್ಥರ ಹೊಣೆಗಾರಿಕೆಯಿಲ್ಲವೇ..?: ಎತ್ತಿಗೆ ಜ್ವರ ಬಂದರ ಎಮ್ಮೆಗೆ ಬರೆ ಹಾಕಿದ್ರು ಎನ್ನುವ ಗಾಧೆ ನೆನಪಿಸುತ್ತದೆ ನೋಡಿ.ರಿಪಬ್ಲಿಕ್‌ ಕನ್ನಡದ  ಸ್ಥಿತಿ.ಕೆಲಸ ಕಿತ್ತುಕೊಳ್ಳಲಿಕ್ಕೆ ಕೊಟ್ಟ ಕಾರಣ ಕಂಪೆನಿಯ ಹದಗೆಟ್ಟ ಆರ್ಥಿಕತೆ.ಆದರೆ ಯಾರೊಬ್ಬರನ್ನು ಪರ್ಫಾಮೆನ್ಸ್‌ ನಿರೀಕ್ಷೆಯಂತಿಲ್ಲ ಎನ್ನುವ ಕಾರಣ ನೀಡಿಯೇ ಇಲ್ಲ.ಆದರೆ ಪ್ರಶ್ನೆ ಇರೋದು ಇದೆಲ್ಲಕ್ಕೂ ಕೆಲಸ ಕಳೆದುಕೊಂಡಿದ್ದಾರೆನ್ನಲಾಗುತ್ತಿರುವ ಆ15 ಕ್ಯಾಮೆರಾಮನ್ಸ್‌, 3 ಆಂಕರ್ಸ್‌, ಇಬ್ಬರು ಇನ್‌ ಪುಟ್‌ ನಲ್ಲಿರುವವರು ಕಾರಣನಾ..? ಹಾಗೆ ಅಲ್ಲಿನ ಮುಖ್ಯಸ್ಥರಾಗಿರುವ ಶಿವಶಂಕರ್‌ ಅವರಿಗೆ ಅನ್ನಿಸಿತೋ ಗೊತ್ತಾಗ್ತಿಲ್ಲ..ಅದಲ್ಲದೇ ಈ 20 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವುದೇ ಸಮಸ್ಯೆಗೆ ಅಲ್ಟಿಮೇಟ್‌ ಸೆಲ್ಯೂಷನ್‌ ಅಂಥ ಏಕೆ ಅವರಿಗೆ ಅನ್ನಿಸಿತು..? ತಿಳೀತಿಲ್ಲ.ಟಿವಿ9 ಕನ್ನಡದಂಥ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಗ್ರಣ್ಯರ ಸಾಲಿನಲ್ಲಿದ್ದ , ಟೈಮಗಸ್‌ ಆಫ್‌ ಇಂಡಿಯಾದಂಥ ನಂಬರ್‌ ಒನ್‌ ಸಂಸ್ಥೆಯಲ್ಲಿ ದುಡಿದಂಥ ಶಿವಶಂಕರ್‌ ಅವರಿಗೆ ಈ 20 ಮಂದಿಯನ್ನೇ ತೆಗೆಯಬೇಕೆಂದೆನಿಸಿದ್ದೇಕೆ..?ಇದಕ್ಕೆ ಉತ್ತರ ಕೊಡಬೇಕಾಗಿದೆ.(ಶಿವಶಂಕರ್‌ ಸರ್‌  ಅವರ ಬಗ್ಗೆ ವೈಯುಕ್ತಿಕವಾಗಿ ನಮಗೆ ಅಪಾರ ಗೌರವ ಇದೆ.. ಅವರು ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ಇದೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಅವರ ಬಗ್ಗೆ ಪಾಸಿಟಿವ್‌ ಆದ ವಿಚಾರಗಳನ್ನು ಇಟ್ಟುಕೊಂಡು ಸುದ್ದಿ ಮಾಡಿತ್ತು).

ALSO READ :  ಭ್ರಷ್ಟಾಚಾರದ ಮಾಹಿತಿ 'ಗೌಪ್ಯ'ವಲ್ಲ: ಅಧಿಕಾರಿಗಳ ಆಟಕ್ಕೆ ಹೈಕೋರ್ಟ್ ಬ್ರೇಕ್!

ಇದೆಲ್ಲಾ, ದೆಹಲಿನೋ ಅಥವಾ ಮುಂಬೈಯಲ್ಲಿರೋ ಸಂಸ್ಥೆಯ ಮುಖ್ಯ ಮ್ಯಾನೇಜ್ಮೆಂಟ್ ನ ನಿರ್ದಾರ  ಎಂದು ಅವರು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು..ಆದರೆ ಸಾವಿರಾರು ಕಿಲೋಮೀಟರ್‌ ದೂರದಲ್ಲಿ ಕೂತವರಿಗೆ ಈ 20 ಜನರನ್ನೇ ಟಾರ್ಗೆಟ್‌ ಮಾಡಬೇಕೆನ್ನುವುದು ಹೇಗೆ ಗೊತ್ತಿರುತ್ತೆ..? ಅಲ್ಲದೇ ಅರ್ನಾಬ್‌ ಗೋಸ್ವಾಮಿ ಅವರಂಥವರಿಗಾಗಲಿ,ಅಲ್ಲಿನ ಮ್ಯಾನೇಜ್ಮೆಂಟ್‌ ಗಾಗಲಿ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪರಿಚಯವೇ ಇರೊಲ್ಲ..ಇದೆಲ್ಲದರ ಹೊಣೆಯನ್ನು ಶಿವಶಂಕರ್‌ ಅಂಡ್‌ ಟೀಮ್‌  ಹೆಗಲಿಗೆ ಹಾಕಿರುತ್ತೆ.ಇಲ್ಲಿ ಯಾರು ಇರಬೇಕು..ಯಾರು ಹೋಗಬೇಕು..ಯಾರ ಅಗತ್ಯ ಚಾನೆಲ್‌ ಗಿದೆ..ಯಾರು ಯೋಗ್ಯರಲ್ಲ ಎನ್ನುವುದನ್ನೆಲ್ಲಾ ಡಿಸೈಡ್‌ ಮಾಡಿ, ಮ್ಯಾನೇಜ್ಮೆಂಟ್‌ ಗೆ ಲೀಸ್ಟ್‌ ಕಳುಹಿಸಬೇಕಾದವರು ಶಿವಶಂಕರ್‌ ಅಂಡ್‌ ಟೀಮ್‌ ಅಲ್ಲವೇ…?

ಪರಿಸ್ತಿತಿ ಹೀಗಿರುವಲ್ಲಿ ಅರ್ನಾಬ್‌ ಅವರ ಮೇಲಾಗಲಿ, ಅಲ್ಲಿನ ಮ್ಯಾನೇಜ್ಮೆಂಟ್‌ ಮೇಲಾಗಲಿ ಪಾಸ್‌ ದಿ ಬಾಲ್‌ ಎನ್ನುವಂತೆ ಈ ಜವಾಬ್ದಾರಿಯನ್ನು ಹೊರಿಸುವುದರಲ್ಲಿ ಅರ್ಥವಿಲ್ಲ.ಸಂಸ್ಥೆ ಮುಖ್ಯಸ್ಥರಾಗಿ ಶಿವಶಂಕರ್‌ ಅವರು ಯಾರು ಕೆಲಸಗಾರರು. ಯಾರು ಮೈಗಳ್ಳರು..ಯಾರು ತೆಗೆದುಕೊಳ್ಳುವ ಸಂಬಳಕ್ಕೆ ರಜೆಯನ್ನೂ ಸರಿಯಾಗಿ ಪಡೆಯದೆ, ಓವರ್‌ ಶಿಫ್ಟ್‌ ಗಳಲ್ಲಿ ದುಡಿಯುತ್ತಿದ್ದಾರೆ…ಯಾರೆಲ್ಲಾ ಕೇವಲ ಶೋ ಆಫ್…ಬಿಲ್ಡಪ್‌ ಕೊಟ್ಟುಕೊಂಡು, ದೊಡ್ಡವರಿಗೆ ಬಹುಪರಾಖ್‌ ಹಾಕ್ಕೊಂಡು ಬಕೆಟ್‌ ಸಿಂಟೆಕ್ಸ್‌ ಹಿಡಿದುಕೊಂಡು  ಹ್ಯಾಂಡ್ಸಮ್‌ ಸ್ಯಾಲರಿ ಪಡೆಯುತ್ತಿದ್ದಾರೆ..

ಸಂಸ್ಥೆಗೆ ಬಿಳಿಯಾನೆಗಳಂತಾಗಿದ್ದರೆ ಎನ್ನುವುದನ್ನು ಜಡ್ಜ್‌ ಮಾಡಿ  ಲೀಸ್ಟ್‌ ರೆಡಿ ಮಾಡಬೇಕಿರುವುದು ಶಿವಶಂಕರ್‌ ಹಾಗೂ ಟೀಮ್‌ ನ ಕೆಲಸ.ಅದನ್ನು ಅವರು ಸಮರ್ಥವಾಗಿ ಮಾಡಿಲ್ಲ ಎನ್ನುವುದು ಚಾನೆಲ್‌ ನಲ್ಲಿ ಕೆಲಸ ಮಾಡುತ್ತಿರುವ ಹಲವು ಮಾದ್ಯಮ ಮಿತ್ರರ ಸಾತ್ವಿಕ ಆರೋಪ. ಚಾನೆಲ್‌ ನಲ್ಲಿ ಇರೊಕ್ಕೆ ಯೋಗ್ಯತೆ ಇಲ್ಲದವರು..ಯಾರು ತುರ್ತಾಗಿ ಹೊರಬೇಕಾದವರು ಎನ್ನುವ ಮಾಹಿತಿ ಇದ್ದ ಹೊರತಾಗ್ಯೂ ಅವರನ್ನೆಲ್ಲಾ ಉಳಿಸಿಕೊಂಡು ಸುದ್ದಿಮನೆಗಳಲ್ಲಿ  ಪ್ರಾಮಾಣಿಕವಾಗಿ ಕೆಲಸ  ಮಾಡುತ್ತಿರುವ, ಜಿಲ್ಲೆಗಳಲ್ಲಿ ಹಗಲಿರುಳೆನ್ನದೆ ಕೆಲಸ ಮಾಡುತ್ತಿರುವ ಕ್ಯಾಮೆರಾಮನ್‌ ಗಳಿಗೆ ನಿರ್ಗಮನ ಹಾದಿ ತೋರಿಸಿರುವುದು ನಿಜಕ್ಕೂ ಸರಿಯಲ್ಲ..ನಮ್ಮಗಳ ಶಾಪ ಶಿವಶಂಕರ್‌ ಸರ್‌ ಹಾಗೂ ಅವರ ಟೀಮ್‌ ನ್ನು ತಟ್ಟದೆ ಇರೊಲ್ಲ ಎಂದು ಅನೇಕರು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಜತೆ ಅಳಲು-ಆಕ್ರೋಶ ತೋಡಿಕೊಂಡಿದ್ದಾರೆ.

ರಿಪಬ್ಲಿಕ್‌ ಸಂಸ್ಥೆ ಬಗ್ಗೆ ನಮಗೆ ಬೇಸರವಿಲ್ಲ ಸರ್.ಅರ್ನಾಬ್‌ ಗೋಸ್ವಾಮಿ ಅವರ ಮ್ಯಾನೇಜ್ಮೆಂಟ್‌ ಕೆಲಸಗಾರರನ್ನು ಯಾವತ್ತೂ ನಿಕೃಷ್ಟವಾಗಿ ನಡೆಸಿಕೊಳ್ಳುವುದಿಲ್ಲ.ಒಳ್ಳೆಯ ಕೆಲಸ ಮಾಡಿದಾಗ ನಮಗೇ ಎಷ್ಟೋ ಬಾರಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.ಆದರೆ ಬೆಂಗಳೂರು ಕಚೇರಿಯಲ್ಲಿ ಕುಳಿತುಕೊಂಡು ದರ್ಬಾರ್‌ ಮಾಡ್ತಾ ,ಚಾನೆಲ್‌ ಕ್ವಾಲಿಟಿ ಹಾಳು ಮಾಡ್ತಿರುವ ಕೆಲವರ ಮೇಲೆ ನಮಗೆ ಆಕ್ರೋಶ-ಅಸಹನೆಯಿದೆ.ಸಾಧ್ಯವಾದರೆ ನಾವೆಲ್ಲಾ ಅರ್ನಾಬ್‌ ಸರ್‌ ಅವರಿಗೆ ಇದನ್ನೆಲ್ಲಾ ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಎಲ್ಲ ತಪ್ಪನ್ನು ತಾವು ಮಾಡಿ,ಅದರಿಂದ ಬಚಾವಾಗಲು ಈಗ ಅರ್ನಾಬ್‌ ಗೋಸ್ವಾಮಿ ಹಾಗೂ ಅಲ್ಲಿನ ಮ್ಯಾನೇಜ್ಮೆಂಟ್‌ ನ್ನು ಗುರಿಯಾಗಿಸ್ತಿದ್ದಾರೆ ಅಷ್ಟೆ ಎನ್ನುವ ನೊಂದ ಮಾದ್ಯಮಮಿತ್ರರು, ಕೆಲಸ ಕಳೆದುಕೊಳ್ಳಬೇಕಾದವರ ಟಾಪ್‌ ಲೀಸ್ಟ್‌ ನಲ್ಲಿ ಅನೇಕ ಅಯೋಗ್ಯರಿದ್ದರೂ, ಕೆಲಸವನ್ನೇ ನಂಬಿಕೊಂಡು ಬದುಕುತ್ತಿರುವ ನಮ್ಮಂಥವರನ್ನೆಲ್ಲಾ ಬೀದಿಪಾಲು ಮಾಡಿದ ಶಿವಶಂಕರ್‌ ಸರ್‌ ಹಾಗೂ ಟೀಮ್‌ ನ ಬಂಡವಾಳ ದೊಡ್ಡವರಿಗೆ ಗೊತ್ತಾಗಲೇಬೇಕಿದೆ ಸರ್…ಅದನ್ನು ಮಾಡಿಯೇ ತೀರುತ್ತೇವೆ ಎಂದು ತಮ್ಮ ಅಳಲನ್ನು ಫ್ಲಾಷ್‌ ನ್ಯೂಸ್‌ ಜತೆ ತೋಡಿಕೊಂಡಿದ್ದಾರೆ.

ಹಾಗೆ ನೋಡಿದರೆ ಒಂದು ಚಾನೆಲ್‌ ನ ಮುಖ್ಯ‍ಸ್ಥರಾಗಿ ಶಿವಶಂಕರ್‌ ಅವರೇ ಏಳುಬೀಳುಗಳಿಗೆ ಕಾರಣವಾಗಿರುತ್ತಾರಲ್ಲವೇ..? ಚಾನೆಲ್‌ ಹೆಸರು ಮಾಡಿದ್ರೆ ಹೊಗಳಿಸಿಕೊಳ್ಳವವರು ಅವರೇ, ಚಾನೆಲ್‌ ಪಾತಾಳಮುಖಿಯಾದ್ರೆ ಅದಕ್ಕೆ ತಲೆ ಕೊಡಬೇಕಾದವ್ರು ಅವ್ರೇ..ಆದರೆ ಅವರ ಮನಸ್ತಿತಿ ಮೇಲ್ನೋಟಕ್ಕೆ ಗೆದ್ದರೆ ಆಡಲು ಬಂದಿದ್ದೆ..ಸೋತರೆ ನೋಡಲು ಬಂದಿದ್ದೆ ಎನ್ನುವಂತಿದೆ. ಅವರೇ ಕಾರಣ ನೀಡಿರುವಂತೆ ಚಾನೆಲ್‌ ಆರ್ಥಿಕವಾಗಿ ಸಮಸ್ಯೆಗೆ ಸಿಕ್ಕರೆ ಅದಕ್ಕೆ ನೈತಿಕ ಹೊಣೆ ಹೊರಬೇಕಾಗಿರುವುದು ಕ್ಯಾಪ್ಟನ್‌ ಆಫ್‌ ದಿ ಶಿಪ್‌ ಎನಿಸಿಕೊಂಡಿರುವ ಶಿವಶಂಕರ್‌ ಸರ್‌ ಅವರಲ್ಲವೇ..?ಆದರೆ ಈ ವೈಫಲ್ಯಕ್ಕೆ ತನ್ನ ಸಿಬ್ಬಂದಿಯೇ ಕಾರಣ ಎಂದು ಅವರನ್ನು ಬಲಿಪೀಠಕ್ಕೆ ತಳ್ಳಿ ಸೇಫ್‌ ಗೇಮ್‌ ಆಡುವಂತದ್ದು ನಿಜಕ್ಕೂ ಸರಿಯಲ್ಲ..ಸಿಬ್ಬಂದಿ ಆಪಾದಿಸುವಂತೆ ಅವರು ಮಾಡುತ್ತಿರುವುದು ಅದನ್ನೇ ಅಂತೆ..!

ಚಾನೆಲ್‌ ನ ಪರ್ಫಾಮೆನ್ಸ್‌ ಸರಿಯಾಗಿಲ್ಲ ..ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ನಿಮ್ಮನ್ನೇ ಟಾರ್ಗೆಟ್‌ ಮಾಡಬೇಕಾಗುತ್ತದೆ ಎಂದು ಬಂದಿರಬಹುದಾದ ಎಚ್ಚರಿಕೆ( ಚಾನೆಲ್‌ ಆರಂಭವಾದಾಗಿನಿಂದಲೂ ಇಂತದ್ದೊಂದು ಎಚ್ಚರಿಕೆ ಸಹಜವಾಗಿ ಅರ್ನಾಬ್‌ ಗೋಸ್ವಾಮಿ ಹಾಗೂ ಮ್ಯಾನೇಜ್ಮೆಂಟ್‌ ನಿಂದ ಬರುತ್ತಲೇ ಇದೆ..ಇದೇನು ಹೊಸ ವಿಚಾರವಲ್ಲ)ಗೆ ಶಿವಶಂಕರ್‌ ಅವರು ಬೇರೆಯದೇ ರೀತಿಯಲ್ಲಿ ರಿಯಾಕ್ಟ್‌ ಮಾಡಬಹುದಿತ್ತೇನೋ..? ಆದರೆ ಕೆಲವರ ಕೆಲಸವನ್ನು ಕಸಿದುಕೊಂಡರೆ ಎಲ್ಲಾ ಸರಿ ಹೋಗಬಹುದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದು ಸರಿಯಲ್ಲ ಎನಿಸುತ್ತದೆ..ಕೆಲಸದಿಂದ ತೆಗೆಯಬೇಕೆನ್ನುವ ನಿರ್ದಾರಕ್ಕೆ ಬಂದಿದ್ದು ಒಂದ್‌ ಹಂತದಲ್ಲಿ ಸರಿ ಎಂದೇ ಇಟ್ಟುಕೊಳ್ಳೋಣ,ಆದರೆ ಅದಕ್ಕಾಗಿ ಅವರು ಫೈನಲ್‌  ಮಾಡಬೇಕಿದ್ದ ಪಟ್ಟಿ..ಅದರಲ್ಲಿ ಇರಬೇಕಾಗಿದ್ದವರು ಎಂಥವರು..? ಚಾನೆಲ್‌ ಗೆ “ಬಿಳಿಯಾನೆ” ಯಂತಾಗಿರುವ, ವೃತ್ತಿಪರತೆ ಇಲ್ಲದವರನ್ನಲ್ವ.. ಆದರೆ ಅಂತದ್ದೊಂದು ಕೆಲಸವನ್ನು ಶಿವಶಂಕರ್‌ ಸರ್‌ ಮಾಡಲೇ ಇಲ್ಲ ಎನ್ನುವುದು ಅದೇ ಸಂಸ್ಥೆಯ ಅನೇಕ ಮಾದ್ಯಮಮಿತ್ರರ ಆರೋಪ.

ಕೆಲಸದಿಂದ ತೆಗೆದು ಹಾಕುವ ಗೋಜಿಗೆ ಹೋಗದೆ ಮ್ಯಾನೇಜ್ಮೆಂಟನ್ನು ಮನವೊಲಿಸಿ ಫರ್ಫಾಮೆನ್ಸ್‌ ಇಲ್ಲದವರನ್ನು ಪ್ರಾಮಾಣಿಕವಾಗಿ ಪಟ್ಟಿ ಮಾಡಿ ಅವರಿಗೆ ಎಚ್ಚರಿಕೆ ಕೊಡಬಹುದಿತ್ತು.ನಿರ್ದಿಷ್ಟ ಅವಧಿಯಲ್ಲಿ ಟಾರ್ಗೆಟ್‌ ರೀಚ್‌ ಮಾಡದವರನ್ನು ನಂತರ ಕೆಲಸದಿಂದ ತೆಗೆಯಬಹುದಿತ್ತು.ಆದರೆ ಅಂಥ ನಿಟ್ಟಿನಲ್ಲಿ ಆಲೋಚಿಸದೆ ಹೋದದ್ದೇ ಇವತ್ತು ಇಂತದ್ದೊಂದು ಘಟನೆ ನಡೆಯೊಕ್ಕೆ…ಅದಕ್ಕೆ ಅವರನ್ನೇ ಹೊಣೆ ಮಾಡುವುದಕ್ಕೆ ಕಾರಣವಾಯ್ತಾ ಎನ್ನಿಸುತ್ತಿದೆ.ಚಾನೆಲ್‌ ನ ಆರ್ಥಿಕ ಹಿಂಜರಿತಕ್ಕೆ ಶಿವಶಂಕರ್‌ ಅವರೂ ಹೊಣೆ ಎನ್ನುವುದನ್ನು ನೈತಿಕವಾಗಿ ಅವರೂ ಒಪ್ಪಬೇಕಾಗುತ್ತದೆ..ಆದರೆ ಅವರು ಒಪ್ಪುತ್ತಾರಾ..ಗೊತ್ತಿಲ್ಲ.ಅದು ಅವರ ವಿವೇಚನೆಗೆ ಬಿಟ್ಟ ವಿಚಾರ.

ಚಾನೆಲ್‌ ಹಾಳಾಗಲು ನೂರು ಕಾರಣಗಳಿವೆ.? : Nation wants to know…? ಎನ್ನುತ್ತಾ ಎಲ್ಲವನ್ನೂ ಪ್ರಶ್ನಿಸುತ್ತಾ ಕೆಲವೇ ವರ್ಷಗಳಲ್ಲಿ ಸ್ವಂತದ್ದೊಂದು ರಿಪಬ್ಲಿಕ್‌ ನೆಟ್ವರ್ಕ್‌  ಕಟ್ಟಿದ್ದು ಅರ್ನಾಬ್‌ ಅವರ ಕಡಿಮೆ ಸಾಧನೆಯೇನಲ್ಲ..ಇದು ಇವತ್ತಿಗೂ ಮಾದ್ಯಮ ಲೋಕ ಬೆರಗಿನಿಂದ ನೋಡುತ್ತದೆ.ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸನ್ನೆ ಕಾಣುತ್ತಾ ಬಂದು ಕೆಲ ರಾಜ್ಯಗಳಲ್ಲಿ ತನ್ನ ಮಾದ್ಯಮ ಜಗತ್ತನ್ನು ವಿಸ್ತರಿಸಿ ಗೆದ್ದ ಮಾದ್ಯಮ ದಿಗ್ಗಜ ಅರ್ನಾಬ್.ಕರ್ನಾಟಕದಲ್ಲೂ ರಿಪಬ್ಲಿಕ್‌ ಕಟ್ಟಿ ಬೆಳೆಸಬೇಕೆನ್ನುವುದು ಅವರ ಕನಸುಗಳಲ್ಲಿ ಒಂದಾಗಿತ್ತು.ಅದಕ್ಕೆ ಸಾಥ್‌ ಕೊಟ್ಟಿದ್ದು ಅವರ ಬಳಗ.ಆದರೆ ಆ ಪ್ರಯತ್ನ ಕರ್ನಾಟಕದಲ್ಲಿ ಯಶಸ್ವಿಯಾಗದೆ ಹೋದದ್ದು ಇವತ್ತಿಗೂ ಅರ್ನಾಬ್‌ ಅವರಿಗೆ ದೊಡ್ಡ ಅಘಾತ.ಅನೇಕ ಬಾರಿ ಕರ್ನಾಟಕದಲ್ಲಿ ಚಾನೆಲ್‌ ನ್ನೇ ಕ್ಲೋಸ್‌ ಮಾಡುವಂಥ ಕಠೋರವಾದ ಮಾತನ್ನು ಅವರು ಹೇಳಿದ್ರೂ ಇಂದಲ್ಲ ನಾಳೆ ಪರಿಸ್ತಿತಿ ಸುಧಾರಿಸಬಹುದೆನ್ನುವ ನಿರೀಕ್ಷೆಯಲ್ಲಿ ಆ ನಿರ್ದಾರವನ್ನು ಮುಂದೂಡುತ್ತಲೇ ಬಂದಿದ್ದಾರೆ( ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಬದುಕಿನ ಕಾಳಜಿಯೂ ಇದರಲ್ಲಿದೆ..ಏಕೆಂದರೆ ಕಾರಣವಿಲ್ಲದೆ ಯಾರೂ ಕೆಲಸ ಕಳೆದುಕೊಳ್ಳಬಾರದು ಎನ್ನುವ ಧ್ಯೇಯ ಅವರದು).

ಇಡೀ ಮಾದ್ಯಮ ಜಗತ್ತನ್ನೇ ಕಂಟ್ರೋಲ್‌ ಮಾಡುವ ಮಟ್ಟಕ್ಕೆ ಬೆಳೆದ ನಾನು ಕರ್ನಾಟಕದಲ್ಲಿ ರಿಪಬ್ಲಿಕ್‌ ಕಟ್ಟಿ ಬೆಳೆಸುವಲ್ಲಿ ಸೋತುಬಿಟ್ಟೆ ಎಂದು ಅನೇಕ ಬಾರಿ ಅವರು ಆತ್ಮೀಯರ ಬಳಿ ಹೇಳಿಕೊಂಡಿ ದ್ದುಂಟಂತೆ. ಇದಕ್ಕೆಲ್ಲಾ ಕಾರಣ ಕರ್ನಾಟಕದಲ್ಲಿ ಅವರಿಗೊಂದು ಸಮರ್ಥರ ತಂಡ ಸಿಗದೆ ಇರೋದು.ಮುಖ್ಯಸ್ಥರಾಗಿ ಬಂದ ಬಹುತೇಕರೆಲ್ಲಾ ಚಾನೆಲ್‌ ಬೆಳಸುವಲ್ಲಿ ಸೋತು ಹೋದ್ರು.ಇದಕ್ಕೆ ಗುಂಪುಗಾರಿಕೆ-ಪ್ರಾದೇಶಿಕತೆಯ ದುರಭಿಮಾನ,ಸ್ವ ಹಿತಾಸಕ್ತಿ, ಅರ್ಹರನ್ನು ಕಡೆಗಣಿಸುವ ಕೆಟ್ಟ ಸಂಪ್ರದಾಯಗಳೇ ಕಾರಣವಾಗಿದ್ವು.ಒಳ್ಳೆಯ ಕೆಲಸಗಾರರಿದ್ರೆ ಅವರ ಯೋಗ್ಯತೆಗೆ ತಕ್ಕಂತೆ ಕೆಲಸ ಕೊಡಿ, ಸಂಬಳ ಕೊಡಿ,ಅವಕಾಶ ಕೊಡಿ ಎಂದು ಕೇಂದ್ರದ ಮ್ಯಾನೇಜ್ಮೆಂಟ್‌ ಹೇಳಿದ್ರೂ ಅದಕ್ಕೆ ಬಹುತೇಕರು ಸೊಪ್ಪಾಕಲಿಲ್ಲ.ಹಾಗಾಗಿನೇ ರಿಪಬ್ಲಿಕ್‌ ಗೆ ಬೆಳೆಯುವ ಅವಕಾಶಗಳಿದ್ರೂ ಹತ್ತರಲ್ಲಿ ಹನ್ನೊಂದನೆ ಚಾನೆಲ್‌ ಆಗಿ ಉಳಿದುಬಿಡ್ತು ಇದು ಅರ್ನಾಬ್‌ ಗೋಸ್ವಾಮಿ ಅವರಿಗೂ ಗೊತ್ತು.

ಅಸಮರ್ಥರು,ಅಯೋಗ್ಯರೆನ್ನೆಲ್ಲಾ ತೆಗೆದು ಹಾಕಿ,ಕೆಲಸಗಾರರನ್ನು ಮಾತ್ರ ಇಟ್ಟುಕೊಳ್ಳಿ ಎಂದು ಪದೇಪದೇ ಮ್ಯಾನೇಜ್ಮೆಂಟ್‌ ಹೇಳ್ತಿದ್ರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ತಮ್ಮದೇ ದರ್ಬಾರ್‌ ನಡೆಸ್ತಾ ಬಂದ ಅನೇಕರ ಕಾರಣಕ್ಕೆ ಚಾನೆಲ್‌ ಬೆಳೆಯಲಿಲ್ಲ ಎನ್ನುವುದು ಮಾದ್ಯಮ ವಿಶ್ಲೇಷಕರ ಮಾತು. ಇವತ್ತಿಗೂ ಚಾನೆಲ್‌ ನಲ್ಲಿ ಒಳ್ಳೆಯ ಸಂಬಳ ತೆಗೆದುಕೊಂಡು, ಓತ್ಲಾ ಹೊಡೆದುಕೊಂಡು ಹೋಗುವ ಕೆಲವು ಅಯೋಗ್ಯರಿದ್ದಾರಂತೆ.ಅವರ ಅವಶ್ಯಕತೆ ನಿಜಕ್ಕೂ ಚಾನೆಲ್‌ ಗೆ ಇಲ್ಲ ಎನ್ನುವುದು ದೊಡ್ಡವರಿಗೂ ಗೊತ್ತಂತೆ.ಆದರೆ ಅಂಥವರನ್ನು ಟಚ್‌ ಮಾಡುವ ಗೋಜಿಗೂ ಅವರು ಹೋಗುತ್ತಿಲ್ಲವಂತೆ. ಯಾವಾಗಲೂ ಮೈಗೆ ಎಣ್ಣೆ ಹಚ್ಚಿಕೊಂಡೇ ಇರುವ ಅಂಥವರು ಇಂಥಾ ಸನ್ನಿವೇಶಗಳಲ್ಲಿ ನುಣುಚಿಕೊಂಡುಬಿಡ್ತಾರಂತೆ. ನಿಷ್ಪಾಪಿ ಕೆಲಸಗಾರರು ಖೆಡ್ಡಾಕ್ಕೆ ಬಿದ್ದು ಕೆಲಸ ಕಳೆದುಕೊಳ್ಳುತ್ತಿದ್ದಾರಂತೆ ಎನ್ನುವುದು ಅಲ್ಲಿ ಕೆಲಸ ಮಾಡುವವರ ಮಾತು.ಪ್ರತಿ ಬಾರಿಯ ಹಾವು ಏಣಿಯಾಟದಲ್ಲಿ ಆ ಮೈಗಳ್ಳರು-ಅಯೋಗ್ಯರೇ ಬಚಾವ್‌ ಆಗಿ ಕೆಲಸ ಉಳಿಸಿಕೊಳ್ಳುತ್ತಿದ್ದಾರಂತೆ.ಅಂದ್ಹಾಗೆ ಅವರೆಲ್ಲಾ ಯಾರು ಎನ್ನುವುದು ಶಿವಶಂಕರ್‌ ಸರ್‌ ಅವರಿಗೂ ಗೊತ್ತಂತೆ.

ಕೆಲಸ ಕಳೆದುಕೊಂಡವರಿಗೆಲ್ಲಾ ಮತ್ತೆ ಕೆಲಸ ಕೊಡುವ ನಿರೀಕ್ಷೆ ಮಾಡಲಿಕ್ಕಾಗೊಲ್ಲ ಸತ್ಯ ಹಾಗಂತ ಅವರನ್ನು ಬೀದಿಪಾಲು ಮಾಡುವುದು ಸರಿಯಲ್ಲ..ಇನ್ನೊಂದೆಡೆ ಕೆಲಸ ಸಿಕ್ಕು ಅಲ್ಲಿ ಸೆಟ್ಲ್‌ ಆಗುವವರೆಗೂ ಅವರುಗಳ ಜೀವನನಿರ್ವಹಣೆ ನಡೆಯೋದಾದ್ರೂ ಹೇಗೆ..ಇದನ್ನು ಇವರ ವಿಷಯದಲ್ಲಿ ನಿರ್ದಯಿಯಾಗಿ ವರ್ತಿಸಿದ ಮ್ಯಾನೇಜ್ಮೆಂಟ್‌ ಅರ್ಥ ಮಾಡಿಕೊಳ್ಳಬೇಕಿದೆ.ಅವರಿಗೆ ಬದುಕು ಕಟ್ಟಿಕೊಳ್ಳಲು ಬೇಕಾದ ಕನಿಷ್ಟ ಆರ್ಥಿಕ ಸಹಾಯವನ್ನು ನ್ಯಾಯಯುತವಾಗಿ ಸಿಗಬೇಕಾದ ಪರಿಹಾರದ ರೂಪದಲ್ಲಿ ಮಾಡಲೇಬೇಕಿದೆ.ಇದು ಸಾಧ್ಯವಾಗದಿದ್ದಲ್ಲಿ ಸಿಬ್ಬಂದಿ  ನಿರ್ದರಿಸಿದ್ದಾರೆಂದು ಹೇಳಲಾಗುತ್ತಿರುವ ಕಾನೂನಾತ್ಮಕ ಹೋರಾಟವನ್ನು ಎದುರಿಸಬೇಕಾಗುತ್ತದೆಯೇನೋ ಗೊತ್ತಿಲ್ಲ.ಸಂಘರ್ಷಕ್ಕೆ ಎಡೆಮಾಡಿಕೊಡದೆ ಸಮನ್ವಯಪೂರ್ಣವಾಗಿ ವಿವಾದ ಬಗೆಹರಿಯಬೇಕಿದೆ.ಅಲ್ವಾ..?!

 


Leave a Comment