ಕನ್ನಡ ಚಿತ್ರರಂಗವನ್ನು ಅಗಲಿದ ಕನ್ನಡ ಚಿತ್ರರಂಗದ ವರನಟಿ  ಡಾ.ಲೀಲಾವತಿ  ಅವರ ಬದುಕು ಯಾವ ಸಂಘರ್ಷಕ್ಕಿಂತಲೂ ಕಡಿಮೆ ಇಲ್ಲ. ಯಾವ ಸಿನಿಮಾಕಥೆಗಿಂತಲೂ ಕಡ್ಮೆಯಾದ ರೋಚಕತೆ ಹೊಂದಿರ್ಲಿಲ್ಲ ಎನ್ನುವುದು ಅವರ ಜೀವನಗಾಥೆ ನೋಡಿದಾಗ ಅರ್ಥವಾಗುತ್ತದೆ.ಏಕೆಂದರೆ ಹುಟ್ಟಿದಾಗಲೇ ಮನೆಯಲ್ಲಿ ಕಿತ್ತು ತಿನ್ನುವ ಬಡತನ.ಜೀವನ ನಡೆಸೋದೇ ಕಷ್ಟಕರ ಎನ್ನುವಂತ ವಾತಾವರಣ.ಸಣ್ಣ ಮಗುವಿನಿಂದಲೇ ಶುರುವಾದ ಅವರ ಸಂಘರ್ಷದ ಜೀವನ ಚಿತ್ರರಂಗ ಪ್ರವೇಶಿಸಿದ ಮೇಲೆಯೂ ಮತ್ತೊಂದು ಮಗ್ಗುಲನ್ನು ಪಡೆದಿದ್ದು ಇತಿಹಾಸ.ಅವರ ಜೀವನದ ಬಗ್ಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿ ಕನ್ನಡ ಪ್ಲ್ಯಾಶ್‌ ನ್ಯೂಸ್‌ ನಲ್ಲಿ ನಿಮಗಾಗಿ0

ಡಾ.ಲೀಲಾವತಿ ಅವರದು ಮೊದಲೇ ಹೇಳಿದಂತೆ  ಬಡತನವನ್ನೇ ಉಂಡು ಬೆಳೆದ ಸಾಧನೆಯ ಬದುಕು. ತುಂಬಾ ಜನಕ್ಕೆ ಗೊತ್ತಿರದ ವಿಷಯ ಏನ್‌ ಗೊತ್ತಾ ಖುದ್ದು  ಲೀಲಾವತಿ ಅವರಿಗೇನೆ ತಾವು ಹುಟ್ಟಿದ ದಿನ ಸ್ಪಷ್ಟತೆ ಇರಲಿಲ್ಲ. ಲೀಲಮ್ಮ ನೀನು ಹುಟ್ಟಿದ್ದು ಯಾವಾಗ ನೆನಪಿದ್ಯಾ ಎಂದು ಕೇಳಿದಾಗಲೆಲ್ಲಾ ಚಳಿ ಇತ್ತು..ಅದರ ಹಿಂದೆಮುಂದೆ ಕ್ರಿಸ್ಮಸ್‌ ಇತ್ತುಎನ್ನುತ್ತಿದ್ದರಷ್ಟೇ.ಅವರು ಹುಟ್ಟಿದ್ದು 1938 ಆದ್ರೂ ದಿನಾಂಕದ  ಬಗ್ಗೆ ಮಾತ್ರ ಖಚಿತತೆ ಇಲ್ಲ.ಅವರು ಹುಟ್ಟಿದ ದಿನ ಎನ್ನಲಾಗುವ  ಡಿಸೆಂಬರ್‌ 24 ಕೂಡ ಅವರೇ ಇಟ್ಟುಕೊಂಡ ಜನ್ಮದಿನಾಂಕ ಎನ್ನುವುದು ಅವರ ಕುಟುಂಬಗಳ ಮಾತು.

ಅಂದ್ಹಾಗೆ ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಗ್ರಾಮ ಗೊತ್ತಿಲ್ಲ.ತನ್ನ ಒಡಹುಟ್ಟಿದವರ ಬಗ್ಗೆಯೂ ಲೀಲಮ್ಮಗೆ ಮಾಹಿತಿ ಇಲ್ಲ. ಹುಟ್ಟುವಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇತ್ತಂತೆ. ಲೀಲಾವತಿ ಅವರ  ಮೂಲ ಹೆಸರು ಕಿರಣ್‌ ಎನ್ನಲಾಗ್ತಿದೆ.ಆಶ್ಚರ್ಯ ಎಂದ್ರೆ ಲೀಲಾವತಿ ಅವರದು ಮೂಲತಃ  ಕ್ರೈಸ್ತ ಧರ್ಮ ಎನ್ನುವ ಮಾತಿದೆ.

ಇನ್ನು ಲೀಲಾವತಿ ಅವರ ಬಾಲ್ಯ ಕಡುಬಡತನದಿಂದ ಕೂಡಿತ್ತೆನ್ನುವುದು ಅವರೇ ಹೇಳಿದ ಮಾತು. ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆತಿಕ್ಕಿದ್ದರಂತೆ ಲೀಲಮ್ಮ. ಓದಲು ಬೆಟ್ಟದಷ್ಟು ಆಸೆ ಇದ್ದರೂ ಬಡತನದಿಂದಾಗಿ 2ನೇ ತರಗತಿವರೆಗೆ ಮಾತ್ರ ಓದಲು ಸಾಧ್ಯವಾಯ್ತಂತೆ.ನಂತರ ಮೈಸೂರಿಗೆ ವಲಸೆ ಹೋಗ್ತಾರೆ.ಸಹಜವಾಗೇ ಅವರಿಗೆ ಕಲೆಯ ಪ್ರೀತಿ-ಹುಚ್ಚು ಹುಟ್ಟಿದ್ದೇ ಮೈಸೂರಿನಲ್ಲಿ ಎಂದು ಲೀಲಾವತಿ ಎಷ್ಟೋ ಬಾರಿ ಹೇಳಿದ್ದುಂಟು.

ಅಂದ್ಹಾಗೆ  12ನೇ ವಯಸ್ಸಿಗೆ ಬಣ್ಣ ಹಚ್ಚಿದರಂತೆ ಲೀಲಾವತಿ.ಮೊದಲು ನಾಟಕಗಳಲ್ಲಿ ನಟಿಸಿದ ಅವರಿಗೆ ಚಿತ್ರರಂಗಕ್ಕೆ ಪ್ರವೇಶ ಸಿಕ್ಕಿದ್ದು ಕೂಡ ಒಂದು ಅಚ್ಚರಿನೇ. 1949 ರಲ್ಲಿ ನಾಗಕನ್ನಿಕಾ ಚಿತ್ರದ ಮೂಲಕ ನಟನೆ ಮಾಡಿದರು.ಆ ಚಿತ್ರದಲ್ಲಿ ನಾಯಕಿಯ ಸಖಿಯಾಗಿ ಪಾತ್ರ ನಿರ್ವಹಣೆ ಮಾಡಿದ್ರು.ಅಲ್ಲಿಂದ ಆರಂಭವಾದ ಅವರ ಸಿನಿಜರ್ನಿ 5-6 ದಶಕಗಳವರೆಗೆ ಮುಂದುವರೆಯಿತು.

ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟನೆ ಮಾಡಿದ್ದ ಲೀಲಾವತಿ ಅವರಿಗೆ ಅದೃಷ್ಟದ ಬಾಗಿಲು ತೆರೆಸಿದ್ದು ಅವರ ಗಾಡ್‌ ಫಾದರ್‌ ಎನ್ನಲಾಗುವ ಮಹಾಲಿಂಗ ಭಾಗವತರು( ಅವರೇ ಲೀಲಾವತಿ ಅವರ ಪತಿ ಎನ್ನುವ ಮಾತು ಕೂಡ ಇದೆ).ಅವರ ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಮಾಂಗಲ್ಯಯೋಗ ಚಿತ್ರದ ಮೂಲಕ ನಾಯಕಿಯಾಗಿ ಭಡ್ತಿ ದೊರೆಯಿತು.ಅದೇ ಕೊನೇ ಲೀಲಾವತಿ ಹಿಂದಿರುಗಿ ನೋಡಲೇ ಇಲ್ಲ.

ಇದೆಲ್ಲದರ ನಡುವೆ ಅದು ಡಾ.ರಾಜ್‌ ಕುಮಾರ್‌ ಅವರ ಅಬ್ಬರದ ದಿನಗಳು.ಯಶಸ್ಸಿನ ಉತ್ತುಂಗದಲ್ಲಿದ್ದ ಡಾ.ರಾಜ್‌ ಅವರು ಇಷ್ಟ ಪಟ್ಟೇ ಲೀಲಾವತಿ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಲು ಹೇಳಿದ್ರಂತೆ.ಅವರ ಆಸೆಯಂತೆ ರಣಧೀರ ಕಂಠೀರವ ಚಿತ್ರದ ಮೂಲಕ ಡಾ.ರಾಜ್‌ ಜತೆ ನಟಿಸೊಕ್ಕೆ ಅವಕಾಶ ಮಾಡಿಕೊಟ್ಟರು.ಆ ಚಿತ್ರದ ಯಶಸ್ಸು ಡಾ.ರಾಜ್‌ ಜತೆಗೆ 30 ಚಿತ್ರಗಳಲ್ಲಿ ನಟಿಸಿ ಅವರಂತೆ ವರನಟಿಯಾಗಿ ಬೆಳಯೊಕ್ಕೆ ಕಾರಣವಾಯ್ತಂತೆ. ರಾಣಿ ಹೊನ್ನಮ್ಮ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ಮತ್ತೊಂದು ಚಿತ್ರ. ಡಾ.ರಾಜ್‌ ಜತೆ  30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೀಲಾವತಿ ಬದಲಾದ ಕಾಲಘಟ್ಟದಲ್ಲಿ ರಾಜ್‌ ಅವರ ಅಮ್ಮನಾಗಿಯೂ ನಟಿಸುವ ಸ್ಥಿತಿ ಎದುರಾಯ್ತು.ಅವರಷ್ಟೇ ಅಲ್ಲ ಎಷ್ಟೋ ಚಿತ್ರಗಳಲ್ಲಿ ನಾಯಕಿಯಾಗಷ್ಟೇ ಅಲ್ಲ ಪೋಷಕ ಪಾತ್ರಗಳಲ್ಲಿಯೂ ನಟನೆ ಮಾಡಿದ್ದಾರೆ.

ಚಿತ್ರಜೀವನದಲ್ಲಿ ಲೀಲಾವತಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳ  600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.ತಮ್ಮದೇ  ಅಷ್ಟಲಕ್ಷ್ಮಿ, ಲೀಲಾವತಿ ಕಂಬೈನ್ಸ್‌  ಮೂಲಕ ಚಿತ್ರ ನಿರ್ಮಾಣ ಮಾಡಿದ್ದಾರೆ.ಆ ಪೈಕಿ ಕಾಲೇಜ್‌ ಹೀರೋ, ಕನ್ನಡದ ಕಂದ,ಕೃಷ್ಣ ನೀ ಕುಣಿದಾಗ ಚಿತ್ರ ಪ್ರಮುಖವಾದಂತವು. ಇನ್ನು ಲೀಲಾವತಿ ಅವರ ಅತ್ಯದ್ಭುತ ನಟನೆಗೆ ಸಿಕ್ಕ ಗೌರವ,ಪ್ರಶಸ್ತಿ ಒಂದಾ ಎರಡಾ. ಮದುವೆ ಮಾಡಿ ನೋಡು,ಸಂತ ತುಕಾರಾಂ ಚಿತ್ರಗಳಲ್ಲಿನ  ನಟನೆಗೆ ರಾಷ್ಟ್ರಪ್ರಶಸ್ತಿ ದೊರೆಯಿತು.ಅಷ್ಟೇ ಅಲ್ಲ  ತುಂಬಿದ ಕೊಡ,ಮಹಾತ್ಯಾಗ,ಭಕ್ತ ಕುಂಬಾರ.ಸಿಪಾಯಿ ರಾಮು,ಗೆಜ್ಜೆ ಪೂಜೆ ಚಿತ್ರಗಳಲ್ಲಿನ ನಟನೆಗೆ ರಾಜ್ಯಪ್ರಶಸ್ತಿ ಪಡೆದಿದ್ದರು. ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್‌ ಫೇರ್‌ ಪ್ರಶಸ್ತಿ ದೊರೆಕಿದ್ದು ಕಡಿಮೆ ಸಾಧನೆಯೇನಲ್ಲ.

ಇನ್ನು ಚಿತ್ರಜೀವನದಲ್ಲಿ ಮಾಡಿದ ಗಣನೀಯ ಸಾಧನೆಗೆ  ಜೀವಮಾನಸಾಧನೆಯ 1999 ರಲ್ಲಿ ಡಾ.ರಾಜ್‌ ಪ್ರಶಸ್ತಿಗೆ ಭಾಜನರಾದ ಲೀಲಾವತಿ ಅವರಿಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಗೌರವ ಪ್ರಧಾನ ಮಾಡಲಾಗಿತ್ತೆನ್ನುವುದನ್ನು ಸ್ಮರಿಸಬಹುದು.

Spread the love

Leave a Reply

Your email address will not be published. Required fields are marked *