ಮರುಸರ್ವೆಗೆ ಮನಿಷ್ ಮೌದ್ಗಿಲ್ ಸೂಚನೆ-ಮೂರು ಪ್ರತ್ಯೇಕ ತಂಡ ರಚನೆ-ಫೆಬ್ರವರಿ 15 ರೊಳಗೆ ಫೈನಲ್ ವರದಿ ಸಲ್ಲಿಸುವಂತೆ ಆದೇಶ..
ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಎಂ.ಎಸ್ ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆ ವಿರುದ್ಧ ಆಸ್ತಿ ತೆರಿಗೆ ನಿಗಧಿ ಹಾಗೂ ಪಾವತಿಗೆ ಸಂಬಂಧಿಸಿದಂತೆ ವ್ಯಾಪಕ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಆಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.ಆಸ್ತಿ ತೆರಿಗೆ ನಿಗಧಿ ಸಂಬಂಧ ಕಂದಾಯ ಸಿಬ್ಬಂದಿ ಜತೆ ಶಿಕ್ಷಣ ಸಂಸ್ಥೆಗಳ ಸುತ್ತಳತೆಯನ್ನು ಮಾಪನ ಮಾಡಲು ಎಂಜಿನಿಯರಿಂಗ್ ವಿಭಾಗದ ಜಂಟಿ ತಂಡವನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ಎಂ.ಎಸ್ .ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಆಸ್ತಿ ತೆರಿಗೆ ನಿಗಧಿಯಲ್ಲಷ್ಟೇ ಅಲ್ಲ ಪಾವತಿಯಲ್ಲೂ ಬಹಳ ವ್ಯತ್ಯಾಸವಾಗಿದೆ.ವಾಸ್ತವದಲ್ಲಿ ಇರುವ ಚಿತ್ರಣವೇ ಬೇರೆ..ಆದ್ರೆ ಬಿಬಿಎಂಪಿ ದಾಖಲೆಗಳಲ್ಲಿ ನಮೂದಾಗಿರುವುದೇ ಬೇರ ಎನ್ನುವ ಆಪಾದನೆಯನ್ನು ಮಾಡಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಅವರು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಯೋಗೇಶ್ ಅವರಿಗೆ ದೂರು ನೀಡಿದ್ದರು.
ದೂರು ನೀಡಿದ ಹೊರತಾಗ್ಯೂ ಪರಿಷ್ಕರಣೆಗಾಗಲಿ, ಬಾಕಿ ಉಳಿದಿರುವ ತೆರಿಗೆ ಸಂಗ್ರಹಕ್ಕೆ ಆಸಕ್ತಿ ತೋರಲೇ ಇಲ್ಲ.( ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯಲ್ಲಿರುವ ಕೆಲವರು ರಾಜಕೀಯದಲ್ಲಿ ಸಕ್ರೀಯರಾಗಿರುವುದರಿಂದ ಪರಿಷ್ಕರಣೆಗೆ ಅವಕಾಶ ನೀಡದಂತೆ ತಡೆಯುತ್ತಿದ್ದಾರೆ ಎಂದು ಕಂದಾಯ ವಿಭಾಗದ ಕೆಲ ಅಧಿಕಾರಿಗಳೇ ಆಪಾದನೆ ಮಾಡಿದ್ದರು).ಈ ಕಾರಣದಿಂದ ಬಿಬಿಎಂಪಿಯ ಕಂದಾಯ ವಿಭಾಗದ ಸಿಬ್ಬಂದಿ ಕೂಡ ಎಂ.ಎಸ್ ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯತ್ತ ಸುಳಿಯುವ ದೈರ್ಯವನ್ನೂ ತೋರಲಿಲ್ಲ..
ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆ ಉಳಿಸಿಕೊಂಡ ಆಸ್ತಿ ತೆರಿಗೆ ಬಾಕಿ ಎಷ್ಟು ಗೊತ್ತಾ..?
“ದೂರುದಾರ ಮಂಜುನಾಥ್ ಅವರು ಮಾಡಿದ ಆಪಾದನೆ ಮೇರೆಗೆ ನೋಡುವುದಾದರೆ ನೂರಾರು ಕೋಟಿಗಳಲ್ಲಿ ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆಯಂತೆ. ಅಷ್ಟೇ ಅಲ್ಲ,ಸಂಸ್ಥೆಯ ಕಾಂಪೌಂಡ್ ನಲ್ಲಿ ಇರುವ ಕಟ್ಟಡಗಳ ನೈಜ ಸಂಖ್ಯೆಯನ್ನೇ ಮುಚ್ಚಿಟ್ಟು ಆಸ್ತಿ ತೆರಿಗೆ ವಂಚಿಸಲಾಗುತ್ತಿತ್ತಂತೆ.ಇದರ ಬಗ್ಗೆ ಪ್ರಶ್ನಿಸದಂತೆ ಬಿಬಿಎಂಪಿ ಕಂದಾಯ ವಿಭಾಗವನ್ನೇ ಮ್ಯಾನೇಜ್ ಮಾಡಲಾಗ್ತಿತ್ತಂತೆ.(ಈ ಮ್ಯಾನೇಜ್ ಯಾವ್ ರಿತಿಯದು ಎನ್ನುವುದು ಗೊತ್ತಾಗಿಲ್ಲ). ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆ ಆಡಳಿತಕ್ಕೆ ಹೆದರಿ ಬಿಬಿಎಂಪಿ ಅಧಿಕಾರಿಗಳು ಕಟ್ಟಡದ ಬಳಿ ಸುಳಿಯುವ ಧೈರ್ಯವನ್ನು ಮಾಡಿರಲಿಲ್ವಂತೆ.ಆದರೆ ಅಂಥಾ ಧೈರ್ಯವನ್ನು ಇದೀಗ ಮನಿಷ್ ಮೌದ್ಗಿಲ್ ಮಾಡಿದ್ದಾರೆ.”
ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಬೇಸತ್ತ ಮಂಜುನಾಥ್ ನೇರವಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅವರನ್ನು ಸಂಪರ್ಕಿಸಿ ಗಮನಸೆಳೆದರು.ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಮೌದ್ಗಿಲ್ ಅವರು ಜಂಟಿ ಆಯುಕ್ತ ಯೋಗೇಶ್ ಅವರಿಗೆ ತತ್ ಕ್ಷಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಮನಿಷ್ ಮೌದ್ಗಿಲ್ ಅವರ ಆದೇಶದ ಮೇರೆಗೆ 03-02-2024 ರಂದು ವಿಶೇಷ ಸಭೆ ನಡೆಸಿದ ಜಂಟಿ ಆಯುಕ್ತ ಯೋಗೇಶ್ ಮಲ್ಲೇಶ್ವರಂ ಸಹಾಯಕ ಕಂದಾಯ ಅಧಿಕಾರಿ,ಕಾರ್ಯಪಾಲಕ ಅಭಿಯಂತರರು,ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರನ್ನು ಒಳಗೊಂಡ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.
ಜತೆಗೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕೂಡ ಸರ್ವೆಯಲ್ಲಿ ಸಮನ್ವಯ ಸಾಧಿಸಿ ಕೆಲಸ ಮಾಡಬೇಕೆಂದು ಆದೇಶಿಸಿರುವ ಯೋಗೇಶ್, ಕಟ್ಟಡದ ಸಮಗ್ರ ಸರ್ವೆ ಹಾಗೂ ಕಂದಾಯ ಪರಿಷ್ಕರಣೆಯನ್ನು 15-02-2024 ರೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.ಮನಿಷ್ ಮೌದ್ಗಿಲ್ ಅವರ ಕಾರ್ಯತತ್ಪರತೆ ಹಾಗೂ ಸಮಯಪ್ರಜ್ನೆಯಿಂದಾಗಿ ಕೈ ತಪ್ಪಬಹುದಾಗಿದ್ದ ಬಹುದೊಡ್ಡ ಮೊತ್ತದ ಆಸ್ತಿ ತೆರಿಗೆ ಪರಿಷ್ಕ್ರತಗೊಂಡು ಸರ್ಕಾರದ ಬೊಕ್ಕಸ ಸೇರುವಂತಾಗಿದೆ.
ಈ ಬಗ್ಗೆ ಮಾತನಾಡಿದ ಮಂಜುನಾಥ್,ನನ್ನ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.ಎಂ.ಎಸ್ ರಾಮಯ್ಯ ಕುಟುಂಬವನ್ನು ಟಚ್ ಮಾಡೊಕ್ಕೆ ಬಿಬಿಎಂಪಿ ಅಧಿಕಾರಿಗಳು ಹೆದರುತ್ತಿದ್ದರು.ಕಾಂಪೌಂಡ್ ಗೆ ಹೋಗಲೂ ಹೆದರುತ್ತಿದ್ದರು.ಜೀವಭಯದಿಂದ ಹೋಗಲು ಸಾಧ್ಯವಿಲ್ಲ ಎನ್ನುವ ನೆವ ಹೇಳುತ್ತಿದ್ದರು. ಬಿಬಿಎಂಪಿ ಪಶ್ಚಿಮ ವಿಭಾಗದ ಅಧಿಕಾರಿಗಳಿಂದ ಇದು ಆಗೊಲ್ಲ ಎಂದೆನಿಸಿದ ಮೇಲೆಯೇ ಮೌದ್ಗಿಲ್ ಅವರನ್ನು ಭೇಟಿ ಮಾಡಿ ವಿಷಯ ಮನವರಿಕೆ ಮಾಡಿಕೊಡಲಾಯಿತು.ನಮ್ಮ ಅಹವಾಲು ಕೇಳಿದಾಕ್ಷಣ ಕಂದಾಯ ಪರಿಷ್ಕರಣೆಗೆ ಸೂಚನೆ ನೀಡಿದ್ದಾರೆ.ಮೌದ್ಗಿಲ್ ಅವರ ಕಾರ್ಯವೈಖರಿಗೆ ಹ್ಯಾಟ್ಸಾಫ್ ಎಂದ್ರು. ಕೇವಲ ಎಂ.ಎಸ್ ರಾಮಯ್ಯ ಒಂದೇ ಅಲ್ಲ, ಇಂಥಾ ನೂರಾರು ಪ್ರಾಪರ್ಟಿಗಳು ಇವತ್ತು ಬಿಬಿಎಂಪಿಗೆ ಸುಳ್ಳು ಲೆಕ್ಕ ಕೊಟ್ಟು ಆಸ್ತಿ ತೆರಿಗೆ ವಂಚನೆ ಮಾಡುತ್ತಿವೆ.ಎಲ್ಲಾ ಆಸ್ತಿಗಳ ಪರಿಷ್ಕರಣೆಯಾಗಿ ಬಿಬಿಎಂಪಿ ಬೊಕ್ಕಸ ಸೇರುವಂತಾದ್ರೆ ಅದರ ಮೊತ್ತವೇ ಸಾವಿರಾರು ಕೋಟಿಗಳಲ್ಲಿರುತ್ತೆ.ಅವುಗಳಿಂದ ಆಸ್ತಿ ತೆರಿಗೆ ಪಾವತಿಸುವಂತೆ ಮಾಡುವುದೇ ನನ್ನ ಮುಂದಿನ ಹೋರಾಟ ಎಂದಿದ್ದಾರೆ.
ಅದೇನೆ ಆಗಲಿ,ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ಆಸ್ತಿ ತೆರಿಗೆ ಸಂಗ್ರಹ-ನಿರ್ದಿಷ್ಟ ಆಸ್ತಿ ತೆರಿಗೆ ನಿಗಧಿ ವಿಚಾರದಲ್ಲಿ ಈವರೆಗೆ ಸಾಧ್ಯವಾಗದಿದ್ದ ಕೆಲಸವನ್ನು ಮನಿಷ್ ಮೌದ್ಗಿಲ್ ಮಾಡಿರುವುದು ಸ್ವಾಗತಾರ್ಹ ಹಾಗೂ ಪ್ರಶಂಸನೀಯ.ಅವರಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತೆ.