ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ನ ನಿರ್ದೇಶಕರಲ್ಲಿ ಒಬ್ಬರೆನ್ನಲಾಗಿದ್ದ ಹರಿಪ್ರಕಾಶ್ ಕೋಣೆಮನೆ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರೂ ಆಗಿರುವ ಮೈಸೂರು ಮರ್ಕಂಟೈಲ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರು ದೂರು ನೀಡಿದ್ದಾರೆನ್ನಲಾಗಿದ್ದು,ಅನುಮತಿ ಇಲ್ಲದೆ ಕಂಪೆನಿಯ ಷೇರುಗಳನ್ನು ಹಸ್ತಾಂತರಿಸಿದ್ದಾರೆನ್ನುವುದು ಕೋಣೆಮನೆ ಮೇಲೆ ಕೇಳಿಬಂದಿರುವ ಆಪಾದನೆ.
ಅನುಮತಿ ಇಲ್ಲದೆ ಷೇರುಗಳನ್ನು ಇನ್ನೊಬ್ಬರಿಗೆ ಮಾರಬಾರದೆನ್ನುವುದು ಕಂಪೆನಿ ರೂಲ್ಸ್.ಆದರೆ ಕೋಣೆಮನೆ ಅವರು ನಿಯಮಗಳನ್ನು ಉಲ್ಲಂಘಿಸಿ ಕಂಪೆನಿ ಷೇರುಗಳನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ಆಪಾದಿಸಲಾಗಿದೆ. ಅಷ್ಟೇ ಅಲ್ಲ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಖಾತೆ, ಪಂಡ್,ಆಸ್ತಿ.ಹೂಡಿಕೆಗಳನ್ನೆಲ್ಲಾ ಜಪ್ತಿ ಮಾಡುವಂತೆಯೂ ದೂರಿನಲ್ಲಿ ಮನವಿ ಮಾಡಲಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಕಂಪೆನಿ ಲಾ ಟ್ರಿಬ್ಯೂನಲ್ ಕಂಪೆನಿಯ ಸ್ವತ್ತುಗಳನ್ನೆಲ್ಲಾ ಜಪ್ತಿ ಮಾಡಿದೆ ಎಂದು ವರದಿಯಾಗಿದೆ.
ಹರಿಪ್ರಕಾಶ್ ಕೋಣೆಮನೆ ಅವರಷ್ಟೇ ಅಲ್ಲ ಕಂಪೆನಿ ಜತೆ ಗುರುತಿಸಿಕೊಂಡಿರುವ ಸಾಕಷ್ಟು ಪಾಲುದಾರರ ಖಾಸಗಿ ಸ್ವತ್ತು ಹಾಗು ಬ್ಯಾಂಕ್ ಅಕೌಂಟ್ ಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ಈ ರೀತಿ ಜಪ್ತಿ ಮಾಡಿರುವುದು ತೀರಾ ಅಪರೂಪದ ಪ್ರಕರಣ ಎನ್ನಲಾಗಿದೆ.ಸಹಜವಾಗಿ ಈ ರೀತಿಯ ಸನ್ನಿವೇಶಗಳು ನಡೆಯುವುದಿಲ್ಲ.ಆದರೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಇಂತದ್ದೊಂದು ಆದೇಶ ನೀಡಿರುವುದರಿಂದ ವಿಸ್ತಾರ ಚಾನೆಲ್ ನ ಅನೇಕ ನಿರ್ದೇಶಕರಿಗೆ ತೀವ್ರ ಹಿನ್ನಡೆ ಹಾಗು ಮುಜುಗರ ಉಂಟಾಗಿದೆ.
ದೂರುದಾರರ ಪ್ರಕಾರವೇ ಹರಿಪ್ರಕಾಶ್ ಕೋಣೆಮನೆ ಮಾಡಿದ್ದೇನು..? ಮೈಸೂರು ಮರ್ಕಂಟೈಲ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರ ದೂರಿನಲ್ಲಿ ಉಲ್ಲೇಖವಾಗಿರುವ ಸಂಗತಿಗಳ ಪ್ರಕಾರ ಹರಿಪ್ರಕಾಶ್ ಕೋಣೆಮನೆ ಮತ್ತು ಇತರರು ವಿಸ್ತಾರ ಕಂಪೆನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದರು.ಆದರೆ ಅವರೆಲ್ಲರು ಕಂಪೆನಿಯ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ.ಮೋಸದಿಂದ ಆಡಳಿತ ನಡೆಸುತ್ತಿದ್ದಾರೆ.ಆದಾಯ ಕರ ಇಲಾಖೆ ಮತ್ತು ಜಿಎಸ್ ಟಿ ಗೆ ಮಾಹಿತಿ ನೀಡದೆ ಹಣದ ವ್ಯವಹಾರದಲ್ಲಿ ತೊಡಗಿದ್ದರು.ತಮ್ಮ ಅವ್ಯವಹಾರ ಮುಚ್ಚಿಕೊಳ್ಳಲು ಆಡಿಟರ್ ಅಥವಾ ಸಿಎಸ್ ಅವರನ್ನು ನೇಮಿಸಿಕೊಂಡಿರಲಿಲ್ಲ ಹಾಗೆಯೇ ಷೇರುಗಳನ್ನು ಅಕ್ರಮವಾಗಿ ಬೇರೆಯವರಿಗೆ ಹಂಚಿದ್ದಾರೆ.ಇದೆಲ್ಲವೂ ಕಂಪೆನಿ ನಿಯಮಗಳಿಗೆ ವಿರುದ್ಧವಾಗಿ ನಡೆದಿರುವುದರಿಂದ ಹರಿಪ್ರಕಾಶ್ ಕೋಣೆಮನೆ ಹಾಗೂ ಇತರರ ಸ್ವತ್ತುಗಳನ್ನು ಜಪ್ತಿ ಮಾಡಬೇಕು.ಕಂಪೆನಿಯ ಸ್ವತ್ತುಗಳನ್ನು ಜಪ್ತಿ ಮಾಡಬೇಕು ಎಂದು ಮನವಿ ಮಾಡಿದ್ದರು.ಇದೆಲ್ಲದರ ಮೇರೆಗೆ ಟ್ರಿಬ್ಯೂನಲ್ ಕಠಿಣ ನಿರ್ದಾರಕ್ಕೆ ಬಂದು ಎಲ್ಲಾ ಸ್ವತ್ತುಗಳನ್ನು ಜಪ್ತಿ ಮಾಡಿದೆ.
ಈ ಬೆಳವಣಿಗೆಯಿಂದ ವಿಸ್ತಾರ ನ್ಯೂಸ್ ಪುನರ್ ಆರಂಭವಾಗಬಹುದೆನ್ನುವ ನಿರೀಕ್ಷೆಗಳಿಗೆ ತಣ್ಣೀರು ಬಿದ್ದಂತಾಗಿದೆ ಎನ್ನಲಾಗುತ್ತಿದೆ.ಉದ್ಯಮಿಯೊಬ್ಬರು ಚಾನೆಲ್ ನಡೆಸಲು ಮುಂದಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರೆನ್ನಲಾಗುತ್ತಿತ್ತು. ಕೆಲಸ ಕಳೆದುಕೊಂಡ ಮಾಜಿ ಉದ್ಯೋಗಿಗಳು ಮತ್ತೆ ಚಾನೆಲ್ ಆರಂಭವಾದ್ರೆ ಬದುಕುಗಳು ಮತ್ತೆ ಹಳಿಗೆ ಬರಬಹುದೇನೋ ಎನ್ನುವ ನಿರೀಕ್ಷೆಯಲ್ಲಿದ್ದರು.ಆದರೆ ಈ ಒಂದು ಬೆಳವಣಿಗೆಯಿಂದಾಗಿ ಆ ಎಲ್ಲಾ ನಿರೀಕ್ಷೆಗಳು ಬುಡಮೇಲಾದಂತಾಗಿವೆ. ವಿಸ್ತಾರ ಚಾನೆಲ್ ವಿಚಾರದಲ್ಲಿ ಎದುರಾಗಿರುವ ಕಾನೂನಾತ್ಮಕ ತೊಡಕುಗಳು ನಿವಾರಣೆ ಆಗುವವರೆಗೂ ಚಾನೆಲ್ ಪುನಾರಂಭ ಎನ್ನುವುದು ಕೇವಲ ಕನಸು ಎಂದೇ ವಿಶ್ಲೇಷಿಸಲಾಗುತ್ತಿದೆ.