ಬೆಂಗಳೂರು(ದೊಡ್ಡಬಳ್ಳಾಪುರ): ಕ್ರಮ ಕೈಗೊಳ್ಳಲು ಸಾಕ್ಷ್ಯಗಳನ್ನು ಕೇಳುತ್ತಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡರ ಮುಂದೆ ಈಗ ಎಲ್ಲಾ ಸಾಕ್ಷ್ಯಗಳಿವೆ..ಆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯೇ..? ಇದು ಕನ್ನಡ ಫ್ಲ್ಯಾಶ್ ನ್ಯೂಸ್ ಸಚಿವರಿಗೆ ಹಾಕುತ್ತಿರುವ ನೇರ ಪ್ರಶ್ನೆ..
ಏಕಂದ್ರೆ ದೊಡ್ಡ ಬಳ್ಳಾಪುರದ ದೊಡ್ಡಬೆಳವಂಗಲ ಗ್ರಾಮದ ಹುಲಿಕುಂಟೆಯ ಸರ್ವೆ ನಂಬರ್ 150ರಲ್ಲಿ ಖಾಸಗಿ ಬಿಲ್ಡರ್ಸ್ ಗಳ ಲಾಭಿಗೆ ಒಳಗಾಗಿ ಖಾತೆ ವರ್ಗಾವಣೆ ಮಾಡಿದ ಆರೋಪಕ್ಕೆ ತುತ್ತಾಗಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ ಹಾಗೂ ತಹಸಿಲ್ದಾರ್ ವಿಭಾ ರಾಠೋಡ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳು ಲಭ್ಯವಾಗಿವೆ.ಇದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ನಿಟ್ಟಿನಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.ಭ್ರಷ್ಟಾಚಾರ-ಲಂಚಗುಳಿತನದ ಆರೋಪದ ಹಿನ್ನಲೆಯಲ್ಲಿ ಅದೇ ದೊಡ್ಡಬಳ್ಳಾಪುರ ಎಸಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಎಲ್ಲಾ ಸಾಕ್ಷ್ಯಗಳ ಹೊರತಾಗಿಯೂ ಇಬ್ಬರ ವಿರುದ್ದ ಕ್ರಮವನ್ನೇಕೆ ಕೈಗೊಳ್ಳುತ್ತಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಎನ್.ಶಿವಶಂಕರ್ ಅವರಿಗೆ ದಿನಾಂಕ: 06-01-20ಡ25 ರಂದು ಪತ್ರ ಬರೆದು ಬಿಲ್ಡರ್ಸ್ ಗಳ ಬೆನ್ನಿಗೆ ನಿಂತು ಅವರ ಪರವಾಗಿ ಖಾತೆ ವರ್ಗಾವಣೆ ಮಾಡಿದ್ದಾರೆನ್ನಲಾದ ಎನ್.ದುರ್ಗಶ್ರೀ ಹಾಗೂ ತಹಸಿಲ್ದಾರ್ ವಿಭಾ ರಾಠೋಡ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಈ 5 ಪುಟಗಳ ಪತ್ರದಲ್ಲಿ ಘಟನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ದಿನೇಶ್ ಕಲ್ಲಹಳ್ಳಿ, ಪಲ್ವಿತ್ ಡೆವಲಪರ್ಸ್ ಎನ್ನುವ ಬಿಲ್ಡರ್ಸ್ ಗಳ ಲಾಭಿಗೆ ಒಳಗಾಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ಇವರಿಬ್ಬರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ರ ಕಲಂ 13(1) ಸಿ ಮತ್ತು ನ್ಯಾಯ ಸಂಹಿತೆ (ಬಿಎನ್ ಎಸ್) ಕಲಂ 336(2),336(3),340(2) ರ ಅನ್ವಯ ಪ್ರಕರಣ ದಾಖಲಿಸುವಂತೆಯು ಮನವಿ ಮಾಡಿದ್ದಾರೆ.
ಪಲ್ಮಿತ್ ಡೆವಲಪರ್ಸ್ ಗೆ ಅನುಕೂಲ ಮಾಡಿಕೊಡಲಿಕ್ಕಾಗಿ ಈ ಇಬ್ಬರು ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿ ಸುಳ್ಳು ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಸಲ್ಲಿಸಿ ನಿಯಮಬಾಹಿರಬಾಗಿ ಸರ್ಕಾರದ ಜಮೀನು ದುರಸ್ತಿ ಪೋಡಿ ಮಾಡಿ, ಪಹಣಿ ಇಂಡಿಕರಣ ಮಾಡಿ ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ,.ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಪಲ್ವಿತ್ ಡೆವಲಪರ್ ಸಂಸ್ಥೆಯು ಸರ್ಕಾರದ ಹಲವಾರು ಎಕರೆ ಜಮೀನನ್ನ ಹುಲಿಕುಂಟೆ ಗ್ರಾಮದ ವಿವಿಧ ಜಮೀನಿನ ಪೋಡಿ ದುರಸ್ತಿ ಮಾಡಿಸಿಕೊಂಡಿದೆ, ಇದರಲ್ಲಿ ಕೆಲವು ಅಧಿಕಾರಿಗಳು ಕೈಜೋಡಿಸಿದ್ದಾರೆ. ಅವರ ವಿರುದ್ಧವು ಕ್ರಮ ಜರುಗಿಸಿ ಸದರಿ ಸರ್ಕಾರದ ಸರ್ವೇ ನಂಬರ್ ದುರಸ್ತಿ ದಾಖಲೆಗಳನ್ನು ಹಾಗೂ ಚಾಲ್ತಿಯಲ್ಲಿರುವ ಪಹಣಿಗಳನ್ನು ರದ್ದು ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಈ ಅಂಶಗಳನ್ನು ಪರಿಗಣಿಸಿ 1964ರ ಕರ್ನಾಟಕ ಭೂ ಕಂದಾಯ ಕಾಯ್ದೆ 136(3) ಭೂ ಮಾಲೀಕತ್ವ ನಿರ್ಧರಿಸುವ ಬಗ್ಗೆ ವಿಚಾರ ನಡೆಸಬೇಕಿದೆ. ಯಾವುದೇ ಭೂದಾಖಲೆಗಳ ಪೋಡಿ ದುರಸ್ತಿಗೆ ಮೂಲ ಮಂಜೂರಾತಿ ಆದೇಶ ಸಾಗುವಳಿ ಚೀಟಿ ಮಂಜುರಾರಿ ಕಾಲದಲ್ಲಿ ತಯಾರಿಸಿದ ನಕ್ಷೆ ಪೋಡಿ ಮಂಜೂರಿಗೆ ಹಕ್ಕು ಬದಲಾವಣೆ ಮಾಡಲಾಗಿದೆ. ಪ್ರಮುಖ ದಾಖಲೆಗಳು ಇಲ್ಲದೆ ಗೋಮಾಳ ಜಮೀನಿನ ಪೋಡಿ ದುರಸ್ತಿ ಮಾಡಿರುವುದು ಸಾಬೀತಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಮ್ಮ 5 ಪುಟಗಳ ದೂರಿನಲ್ಲಿ ವಿವರಿಸಿದ್ದಾರೆ.
ವಕೀಲರಾದ ಶ್ರೀನಿವಾಸ ಮೂರ್ತಿ ಎನ್ನುವವರು ಕಂದಾಯ ಆಯುಕ್ತರಿಗೆ ಮತ್ತೊಂದು ದೂರನ್ನು ಬರೆದಿದ್ದು ಪತ್ರದಲ್ಲಿ, ದೊಡ್ಡಬಳ್ಳಾಪುರ ತಾಲೂಕು ದೊಡ್ಡ ಬೆಳವಂಗಲ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150ರಲ್ಲಿ ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿ ಪಡೆದಂತಹ ಜಮೀನುಗಳಿಗೆ ಕಂದಾಯ ಪೋಡಿ ಹಾಗೂ ಹದ್ದುಬಸ್ತು ಆಗದೆ ಇರುವ ಮತ್ತು ಸರ್ವೇ ನಕ್ಷೆಯನ್ನು ತಯಾರಿಸದೆ ಅನಧಿಕೃತ ಜಿಪಿಎ ಮತ್ತು ಕ್ರಯ ಪತ್ರದ ನೋಂದಣಿ ಮಾಡಿರುವ ಉಪ ನೊಂದನಾಧಿಕಾರಿಯವರನ್ನು ಅಮಾನತುಗೊಳಿಸಿ ಸರ್ವೇ ನಂಬರ್ 150ಕ್ಕೆ ಸೇರಿದ ಜಮೀನನ್ನ ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಂದಾಯ ಇಲಾಖೆಯ ನಿಯಮಗಳ ಅನ್ವಯ ಸರ್ಕಾರಿ ಜಮೀನುಗಳಿಗೆ ಪೋ0ಡಿ ಮತ್ತು ಹದ್ದುಬಸ್ತು ಆಗದೆ, ಪ್ರತ್ಯೇಕ ನಕ್ಷ ತಯಾರಿಸದೆ ಪಹಣಿಯಲ್ಲಿ ಈ ಸಂಖ್ಯೆಯನ್ನು ತೆಗೆದು ಹಾಕದೆ ಇರುವಂತಹ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಬೇರೆ ಯಾರಿಗೂ ಅದನ್ನು ಮಾರಾಟ ಮಾಡುವಂತಿಲ್ಲ. ಹಾಗೆಯೇ ಖಾತ ಬದಲಾವಣೆ ಮಾಡುವಂತಿಲ್ಲ ಹಾಗೂ ಕಾನೂನು ಪ್ರಕಾರ ಜಿಪಿಎ ದಾರರಿಗೆ ಖಾತೆ ಬದಲಾಯಿಸುವಂತಿಲ್ಲ.
ಆದರೆ ಈ ಹಂತದಲ್ಲಿ ಪಲ್ವಿತ್ ಡೆವಲಪರ್ಸ್ ಅವರೊಂದಿಗೆ ಶಾಮಿಲಾಗಿ ಮೇಲ್ಕಂಡ ಜಮೀನನ್ನ ಕಾನೂನು ಬಾಹಿರವಾಗಿ ಮೂರನೆಯ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡಿರುವ ದೊಡ್ಡಬಳ್ಳಾಪುರ ತಾಲೂಕಿನ ನೋಂದಣಾಧಿಕಾರಿಗಳ ಮೇಲು ಕಾನೂನು ಕ್ರಮ ಜರುಗಿಸಬೇಕಿದೆ. ದಾಖಲೆಗಳಲ್ಲಿ ಆಗಿರುವ ಬದಲಾವಣೆಯನ್ನು ತೆರವುಗೊಳಿಸಿ ಸರ್ಕಾರಿ ಗೋಮಾಳವಾಗಿ ಅದನ್ನು ಮಾರ್ಪಾಡು ಮಾಡಬೇಕು. ನೋಂದರಾಧಿಕಾರಿಯವರ ಮೂಲಕ ಆಗಿರುವ ಎಲ್ಲಾ ನೋಂದಣಿಗಳನ್ನು ಅಮಾನತು ಪಡಿಸಬೇಕು.ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಮತ್ತು ಸಾರ್ವಜನಿಕರಿಗೆ ಮೀಸಲಾಗಿರುವ ಅರಣ್ಯ ಜಮೀನುಗಳನ್ನು ಒತ್ತುವರಿದಾರರಿಂದ ಜನರಿಗೇ ಸಿಗುವಂತೆ ಮಾಡಬೇಕೆಂದು ಶ್ರೀನಿವಾಸ್ ಮೂರ್ತಿ ತಮ್ಮ ಮನವಿಯಲ್ಲಿ ಕೋರಿದ್ದಾರೆ.
ಇಷ್ಟೆಲ್ಲಾ ದಾಖಲೆಗಳಿಂದಾಗಿ ಅಕ್ರಮ ಕಣ್ಣಿಗೆ ರಾಚುವಂತೆ ಕಾಣುತ್ತಿದೆ.ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ ಹಾಗೂ ತಹಸಿಲ್ದಾರ್ ವಿಭಾ ರಾಠೋಡ್ ಪಲ್ಬಿತ್ ಡೆವಲಪರ್ಸ್ ಎನ್ನುವ ರಿಯಲ್ ಎಸ್ಟೇಟ್ ಮಾಲೀಕನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದಾರೆ.ಇದರ ಹಿಂದೆ ಮೇಲ್ಕಂಡ ಜಮೀನು ಕೆಐಎಡಿಬಿ ಸ್ವಾಧೀನಕ್ಕೆ ಒಳಪಟ್ಟಿರುವುದರಿಂದ ರಿಯಲ್ ಎಸ್ಟೇಟ್ ಲಾಭಿ ಹೆಡೆ ಎತ್ತಿರುವಂತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರು ಅಧಿಕಾರಿಗಳು ಬಿಲ್ಡರ್ಸ್ ಗೆ ಅನುಕೂಲ ಮಾಡಿಕೊಡುವ ಈ ದುರುದ್ದೇಶದ ಕಾರ್ಯದಿಂದ ಅಪಾರ ಪ್ರಮಾಣದ ಕಿಕ್ ಬ್ಯಾಕ್ ಪಡೆದಿರುವ ಸಾಧ್ಯತೆಗಳೂ ಗೋಚರಿಸುತ್ತಿವೆ.ಮೇಲ್ಕಂಡ ಪ್ರಕರಣದಲ್ಲಿ ಸಚಿವ ಕೃಷ್ಣಭೈರೇಗೌಡ ಯಾವ ರೀತಿ ಕಾರ್ಯಪ್ರವೃತ್ತ ರಾಗುತ್ತಾರೆನ್ನುವ ಕುತೂಹಲವಿದೆ.ಏಕೆಂದರೆ ಕೆಲವು ಮೂಲಗಳ ಪ್ರಕಾರ ದುರ್ಗಶ್ರೀ ಮೇಡಮ್ ಅವರ ಪತಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದಾರೆನ್ನುವ ಮಾತಿದೆ.ಅಲ್ಲದೇ ಸಿನೆಮಾ ನಿರ್ಮಾಪಕರೂ ಹೌದೆನ್ನಲಾಗುತ್ತಿದೆ.ಆದ್ದರಿಂದ ಸಹಜವಾಗಿ ಸಚಿವರ ಮೇಲೆ ಪ್ರಭಾವ ಬೀರಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ಆದರೆ ಅದೇನೇ ಇರಲಿ, ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ ಹಾಗೂ ತಹಸಿಲ್ದಾರ್ ವಿಭಾ ರಾಠೋಡ್ ಅವರು ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ದಾಖಲೆಗಳಿಂದಲೇ ಸಾಬೀತಾಗಿದೆ.ಹಾಗಾಗಿ ಯಾವುದೇ ಪ್ರಭಾವದ ಹೊರತಾಗಿಯೂ ತಪ್ಪಿತಸ್ಥರ ವಿರುದ್ದ ಕ್ರಮ ಜಾರಿಯಾಗಬೇಕಾಗುತ್ತದೆ.ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಭೇಟಿ ಕೊಟ್ಟಾಗ ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷಿ ಕೇಳಿದ್ದ ಸಚಿವರಿಗೆ ಈಗ ಎಲ್ಲಾ ಸಾಕ್ಷ್ಯ ಕಣ್ಮುಂದೆ ಸಿಕ್ಕಾಗಿದೆ.ಕ್ರಮ ಕೈಗೊಳ್ತಾರೋ…ಅಥವಾ ಪತಿ ಕಾಂಗ್ರೆಸ್ ಮುಖಂಡ ಎನ್ನುವ ಕಾರಣಕ್ಕೆ ದುರ್ಗಶ್ರೀ ಅವರ ಮಹಾಪ್ರಮಾದವನ್ನು ಮನ್ನಿಸ್ತಾರೋ ಕಾದುನೋಡಬೇಕಿದೆ.