ಪಬ್ಲಿಕ್ ಟಿವಿ ಶಿವಮೊಗ್ಗ ವರದಿಗಾರ ಶಶಿಧರ್ ಇನ್ನು ಕೇವಲ ನೆನಪು-ಗೆಳೆಯನ ಅಗಲಿಕೆಗೆ ಮಾದ್ಯಮ ಸ್ನೇಹಿತರ ಕಂಬನಿ
ಶಿವಮೊಗ್ಗ: ಕೆಲವರ ಸಾವುಗಳು ಅತೀವವಾಗಿ ಕಾಡುತ್ತವೆ. ನಮ್ಮಲ್ಲೇ ನಮ್ಮವರಾಗಿದ್ದ, ಹೃದಯಕ್ಕೆ ತೀರಾ ಹತ್ತಿರವಾಗಿದ್ದ ಜೀವವೊಂದು ದೂರವಾದಂತ ನೋವನ್ನು ಕೊಡುತ್ತವೆ. ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಸಾವು ಕೂಡ ಪತ್ರಕರ್ತರಾದಿಯಾಗಿ ಅವರೊಂದಿಗೆ ಒಡನಾಟ ವಿಟ್ಟುಕೊಂಡಿದ್ದವರನ್ನು ಶೋಕದ ಸಾಗರದಲ್ಲಿ ಮುಳುಗಿಸಿದೆ. ಕೆಲವೇ ವರ್ಷಗಳಲ್ಲಿ ಶಿವಮೊಗ್ಗದವರೇ ಆಗೋಗಿದ್ದ ಸ್ನೇಹಿತ-ಆತ್ಮೀಯ ಶಶಿಧರ್ ಗೆ ಕಣ್ಣೀರಾಕದವರೇ ಇಲ್ಲ.
ಶಿವಮೊಗ್ಗ ಮಾದ್ಯಮ ಲೋಕದಲ್ಲಿ ಅತ್ಯಂತ ಸ್ನೇಹಪರ ಜೀವಿ ಎಂದೇ ಕರೆಯಿಸಿಕೊಂಡಿದ್ದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ಇಂದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಧರ್ ಮನೆಯಲ್ಲಿದ್ದಾಗಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.ಮನೆಯವರಿಗೆ ವಿಷಯ ತಿಳಿದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶಿಕ್ಷಕಿಯಾಗಿರುವ ಪತ್ನಿ ಸೇರಿದಂತೆ ಅಪಾರ ಬಂಧುಬಳಗ,ಸ್ನೇಹಿತರನ್ನು ಶಶಿಧರ್ ಶಾಶ್ಚತಕ್ಕೂ ಅಗಲಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಜಾವಗಲ್ ಸಮೀಪದ ಕಲ್ಲಹಳ್ಳಿ ಗ್ರಾಮದ 39 ವರ್ಷದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೂ ಆಗದ,ಸಾವನ್ನು ಅರಗಿಸಿಕೊಳ್ಳಲೂ ಆಗದ ಸಂದಿಗ್ಧ ಪರಿಸ್ತಿತಿಯಲ್ಲಿದ್ದಾರೆ ಶಿವಮೊಗ್ಗದ ಮಾದ್ಯಮ ಮಿತ್ರರು.ಇದಕ್ಕೆಲ್ಲಾ ಮುಖ್ಯ ಕಾರಣ,ಶಿವಮೊಗ್ಗದಲ್ಲಿ ಕಳೆದ 6 ವರ್ಷದಿಂದ ಕೆಲಸ ಮಾಡುತ್ತಿದ್ದ ಶಶಿಧರ್ ಅವರ ವ್ಯಕ್ತಿತ್ವ,ಸ್ವಭಾವ.ಶಿವಮೊಗ್ಗದ ಮಾದ್ಯಮಮಿತ್ರರ ಪಾಲಿಗೆ ಶಶಿಧರ್ ಅಜಾತಶತೃ,ಅತ್ಯಂತ ಸಹೃದಯಶೀಲ ಆತ್ಮೀಯರಾಗಿದ್ದರು.ಒಬ್ಬ ಪತ್ರಕರ್ತ ಹೀಗೊಂದು ವ್ಯಕ್ತಿತ್ವ ರೂಪಿಸಿಕೊಳ್ಳುವುದು ಇತ್ತೀಚಿನ ಮಾದ್ಯಮ ದಿನಗಳಲ್ಲಿ ಅತ್ಯಂತ ಅಪರೂಪ.
ಎಲ್ಲರ ಜತೆ ಆತ್ಮೀಯವಾಗೇ ಇರುತ್ತಿದ್ದರೂ ಶಶಿಧರ್ ಮಿತಭಾಷಿ.ಯಾರಾದ್ರೂ ಮಾತಿಗೆ ಎಳೆದುಕೊಂಡರಷ್ಟೇ ಮಾತನಾಡುತ್ತಿದ್ದರು.ಪಬ್ಲಿಕ್ ಟಿವಿಗೆ ಸೇರುವ ಮುನ್ನ ಸುವರ್ಣ ಟಿವಿಯಲ್ಲಿ ಕೆಲಸ ಮಾಡಿದ್ದರೆನ್ನುವುದನ್ನು ಬಿಟ್ಟರೆ ಅವರ ಪತ್ರಿಕೋದ್ಯಮ ಹಿನ್ನಲೆ ಬಗ್ಗೆ ತುಂಬಾ ಹೇಳಿಕೊಂಡವರಲ್ಲ.ಅಷ್ಟೇ ಅಲ್ಲ ಅವರ ವೈಯುಕ್ತಿಕ ವಿಚಾರಗಳನ್ನು ಹೆಚ್ಚಿಗೆ ಹಂಚಿಕೊಂಡವರಲ್ಲ.ದುರಂತ ಎಂದರೆ ಅವರು ಸಾವನ್ನಪ್ಪು ದಿನವೂ ಅಷ್ಟೇ.ತಮಗೆ ಆರೋಗ್ಯದಲ್ಲಿ ಏರುಪೇರಾದ್ರೂ ಯಾರೊಬ್ಬರ ಬಳಿಯು ಹೇಳಿಕೊಂಡಿರಲಿಲ್ಲವಂತೆ.
ಪ್ರತಿಷ್ಟಿತ ಚಾನೆಲ್ ನ ವರದಿಗಾರನಾಗಿದ್ದರೂ ಶಶಿಧರ್ ಎಂದೂ ಅಹಂ ಬೆಳಸಿಕೊಂಡವರಲ್ಲ.ಎಲ್ಲರೊಂದಿಗೆ ಸಹಜವಾಗಿಯೇ ಆತ್ಮೀಯತೆಯಿಂದ ಇರುತ್ತಿದ್ದರು.ಅನ್ನ ಕೊಡುವ ಸಂಸ್ಥೆಗೆ ಸಣ್ಣ ಕಳಂಕ ಬಾರದಂತೆ ಕೆಲಸ ಮಾಡುತ್ತಲೇ ವ್ಯಕ್ತಿ-ವ್ಯಕ್ತಿತ್ವವನ್ನು ಎಂದೂ ಕೊಳಕು ಮಾಡಿಕೊಳ್ಳದಂಗೆ ಬದುಕಿದ್ದವರು.ವೃತ್ತಿ ನಿಷ್ಟೆ ಎಂದರೆ ಶಶಿ ಎನ್ನುವಂತೆ ತಮ್ಮ ವೃತ್ತಿಪರತೆ ಮೆರೆದಿದ್ದರು.ಅನಾರೋಗ್ಯ ಕಾಡುತ್ತಿದ್ದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ಕೆಲಸ ಮಾಡುತ್ತಿದ್ದರು.
ಪತ್ರಿಕೋದ್ಯಮವನ್ನು ಪ್ರೀತಿಸುವುದಷ್ಟೇ ಅದನ್ನು ಜೀವಿಸಿದ್ದ ಅಪರೂಪದ ಪತ್ರಕರ್ತ ಶಶಿಧರ್. ತಾನೇನಾದ್ರೂ ಆದ್ರೆ ಅದು ಪತ್ರಕರ್ತನೇ ಆಗಬೇಕೆನ್ನುವ ಅಗಾಧವಾದ ಆಸೆಯೊಂದಿಗೆ ಪತ್ರಿಕೋದ್ಯಮವನ್ನೇ ಆಯ್ದಕೊಂಡವರು. ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂಗೆ ಸೇರ್ಪಡೆಗೊಂಡರು. ಸ್ನಾತಕೋತ್ತರ ಪದವಿಯ ನಂತರ ಈಟಿವಿಯಲ್ಲಿ ವಿಜಯಪುರ ಜಿಲ್ಲೆಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ಚಾಮರಾಜನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ‘ಪಬ್ಲಿಕ್ ಟಿವಿ’ಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು ಎನ್ನುವುದು ಅವರ ಪತ್ರಿಕೋದ್ಯಮ ಇತಿಹಾಸ ಗಮನಿಸಿದಾಗ ಗೊತ್ತಾಗುತ್ತದೆ.
ಶಿವಮೊಗ್ಗಕ್ಕೆ ಬಂದ ಮೇಲೆ ತಮ್ಮ ವೃತ್ತಿನಿಷ್ಟೆಯಿಂದ ಕೆಲವೇ ದಿನಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತೆ ಕೆಲಸ ಮಾಡಿದರು.ವೃತ್ತಿಯಲ್ಲಿ ಬದ್ಧತೆ ಜತೆಗೆ ಸಮಾಜಮುಖಿ ಹಾಗೂ ಮಾನವಮುಖಿ ಸ್ವಭಾವ ರೂಢಿಸಿಕೊಂಡವರು.ಅನ್ಯಾಯವಾದ ಸ್ಥಳದಲ್ಲಿ ತಮ್ಮ ಗಟ್ಟಿದ್ವನಿಯಿಂದ ಅದನ್ನು ಖಂಡಿಸುತ್ತಿದ್ದರು. ರಾಜಕಾರಣಿಗಳ ಜತೆ ಸದಾ ಒಂದು ಅಂತರ ಕಾಯ್ದುಕೊಂಡ ಅಪರೂಪದ ಪತ್ರಕರ್ತರೆನಿಸಿಕೊಂಡಿದ್ದರು.ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಯಾರ ಮನಸನ್ನು ನೋಯಿಸದೆ ಎಲ್ಲರನ್ನು ಪ್ರೀತಿವಿಶ್ವಾಸದಿಂದ ಅಪ್ಪಿಕೊಳ್ಳುವ ವಿಶೇಷ ಗುಣ ಹೊಂದಿದ್ದರು.ಹಾಗಾಗಿನೇ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು.
ನಾಳೆ ಹುಟ್ಟೂರಿನಲ್ಲಿ ಶಶಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಶಶಿ ಅವರ ಸಾವಿಗೆ ಪಬ್ಲಿಕ್ ಟಿವಿ ಬಳಗ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ.ಪ್ರೆಸ್ ಕ್ಲಬ್ ಕೌನ್ಸಿಲ್ ಸೇರಿದಂತೆ ಪತ್ರಕರ್ತರ ಸಂಘಟನೆಗಳು ಕಂಬನಿ ಮಿಡಿದಿವೆ. ಶಶಿಧರ್ ಅವರಂಥ ಅಪ್ಪಟ ವೃತ್ತಿಪರ ಪತ್ರಕರ್ತನನ್ನು ಕಳೆದುಕೊಂಡ ಪತ್ರಿಕೋದ್ಯಮ ನಿಜಕ್ಕೂ ತಬ್ಬಲಿಭಾವ ಎದುರಿಸುವಂತಾಗಿದೆ.ಅವರ ಅಗಲಿಕೆಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ದೊರೆಯುವಂತಾಗಲಿ ಎನ್ನುವುದೇ ನಮ್ಮ ಆಶಯ.