ಮನುಷ್ಯತ್ವ..ಮಾನವ ಸಂಬಂಧ ಸಾವನ್ನೂ ಮೀರಿದ್ದು.. ಅದೇ ಸತ್ಯ..ಅದೇ ಅಂತಿಮ.


ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮರ ಸಾವಿನಲ್ಲಿ ಪತ್ರಕರ್ತನಿಗೆ ಗೋಚರಿಸಿದ ಕಟು ಸತ್ಯ..!

ಮನುಷ್ಯ ಹುಟ್ಟತ್ತಲೇ ಮಾನವತವಾದಿ. ಮನುಷ್ಯನಿಗೆ ಮನುಷ್ಯತ್ವ ಕಲಿಯಲು ಯಾವುದೇ ಧರ್ಮ ಗ್ರಂಥಗಳು ಬೇಕಿಲ್ಲ. ಅದು ಹುಟ್ಟತ್ತಲೇ ಸಿಗುವ ಮೂಲಗುಣ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಮನುಷ್ಯ ತನ್ನ ಸ್ವಾರ್ಥ ಗುಣಕ್ಕಾಗಿ ಮರಕ್ಕೆ ಬಳ್ಳಿಗಳು ಬೆಳದಂತೆ ಅಡ್ಡಾದಿಡ್ಡಿಯಾಗಿ ಯೋಚಿಸಲು ಆರಂಭವಿಸುವಲ್ಲಿ ನಾವು ಇವತ್ತು ಕೇಳುವ, ಓದುವ, ನೋಡುವ ವಾದಗಳು ಹುಟ್ಟಿಕೊಂಡಿದೆ.

ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಅಟ್ರಾಸಿಟಿ ನಡೆದರೂ ಇನ್ನೆಲ್ಲೋ ಕೂತು ಅದಕ್ಕೆ ಮರುಕಪಡಬಹುದು. ಹಾಗೊಂದು ತೀವ್ರವಾದ ನಂಟು ಈ ಜಗತ್ತಿನ ಜೊತೆಗೆ ಪ್ರತಿಯೊಬ್ಬ ಮನುಷ್ಯನೂ ಇಟ್ಟುಕೊಂಡಿರುತ್ತಾನೆ. ಆದರೆ ಅಲ್ಲೊಂದು ತಿದ್ದುವಿಕೆ ಇದೆ. ಏನೆಂದರೆ ಅದು ಆತನಿಗೆ ನೇರವಾಗಿ ಸಂಪರ್ಕ ಕಲ್ಪಿಸುವುದಿಲ್ಲ ಎನ್ನುವುದು. ಒಂದೊಮ್ಮೆ ಆ ಅಟ್ರಾಸಿಟಿ ಆತನಿಗೆ ನೇರವಾಗಿ ಕನೆಕ್ಟ್ ಆದರೆ ಆತ ಅದರ ಪರ ಅಥವಾ ವಿರೋಧವಾಗಿ ನಿಲ್ಲಲು ಶುರುಮಾಡುತ್ತಾನೆ. ಅಲ್ಲಿಗೆ ಆ ಮನುಷ್ಯನ ಮೂಲಗುಣ ಮಾಸುತ್ತದೆ. ಈಗಿನ ಜಗತ್ತು ಹೀಗೆ ನಡೆಯಲು ಇದೇ ಪ್ರಮುಖ ಕಾರಣ.

ಪದ್ಮನಾಭನಗರದ ಎರಡನೇ ಮುಖ್ಯ ರಸ್ತೆಯಲ್ಲಿರುವ ದೇವೇಗೌಡರ ಮನೆ ಇವತ್ತು ಅತ್ಯಂತಕ ಭಾವುಕವಾಗಿ ಕಂಡಿತ್ತು. ಮನೆಯೊಡತಿ ಕಳಕೊಂಡಿದ್ದು ಒಂದು ಕಡೆಯಾದರೆ ಮತ್ತೊಂದು ರಾಜಕಾರಣಿಗಳು ತಮ್ಮ ರಾಜಕಾರಣ ಬಿಚ್ಚಿಟ್ಟು ನಿಂತಿದ್ದು. ಸಾವೇ ಹಾಗೆ ನಮ್ಮನ್ನು ಆಗಾಗ್ಗೆ ಮನುಷ್ಯರಾಗಲು ಪ್ರೇರೇಪಿಸುತ್ತದೆ. ವಿಪರ್ಯಾಸ ಏನು ಎಂದರೆ ನಾವು ಮನುಷ್ಯರಾಗಲು ಹೀಗೆ ಸಾವು ಬರಬೇಕು ಎನ್ನುವುದು.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮಾ ಸಾವಿಗೆ ಮೊದಲೇ ಸಂತಾಪಗಳು. ಆದರೆ ಚೆನ್ನಮ್ಮ ಅಂತಿಮ ದರ್ಶನ ಪಡೆಯಲು ದೇವೇಗೌಡರ ಮನೆಗೆ ಬಂದ ಸಾಲು ಸಾಲು ಗಣ್ಯರು ಅದರಲ್ಲೂ ರಾಜಕಾರಣಿಗಳ ನಡವಳಿಕೆ ಜನರಲ್ಲಿ ಒಂದು ರೀತಿಯ ನಿಷ್ಕಂಳಕ‌ ಭಾವನೆ ಹುಟ್ಟಿಸಿದೆ. ಯಾಕೆ ನಿಷ್ಕಳಂಕ ಎಂದರೆ ಅದನ್ನು ವಿರೋಧಿಸಲೂ ಬಾರದೆ ಅತ್ತ ಮರುಗಳಿಗೆ ಅದನ್ನು ಒಪ್ಪಿಕೊಳ್ಳಲೂ ಆಗದೆ ಜನರು ನಿಷ್ಕಳಂಕರಂತೆ ನಡೆದುಕೊಂಡಿದ್ದು.

ರಾಜಕರಣ ನಿಂತ ನೀರಲ್ಲ ಎನ್ನುವುದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಯಾರು ಯಾರಿಗೆ ಬೇಕಿದ್ದರೂ ಗೆಳಯರಾಗಬಹುದು, ಅದೇ ಮರುಘಳಿಗೆಯಲ್ಲಿ ಶತ್ರುಗಳೂ ಆಗಬಹುದು. ಸೂತಕದ ಮನೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಕೈ ಕುಲುಕಿ ಸಿಎಂ ಡಿಕೆ ಶಿವಕುಮಾರ್ ಸಾಂತ್ವನ ಹೇಳಿದರು. ಸಾವಿನ ವಿಷಯ ತಿಳಿದು ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜಕೀಯವಾಗಿ ಕಟುವಾಗಿ ಟೀಕಿಸುವ ದೇವೇಗೌಡರ ಪಕ್ಕದಲ್ಲೇ ಅವರ ಕೈ ಹಿಡಿದು ಕೂತು ಸಂತೈಸಿದರು. ಒಂದು ಕಾಲದಲ್ಲಿ ಎರಡು ದೇಹ ಒಂದು ಆತ್ಮದಂತಿದ್ದ ಜಮೀರ್ ಹಾಗೂ ಕುಮಾರಸ್ವಾಮಿ ಪಕ್ಷದಿಂದ ದೂರ ಆದಮೇಲೆ ಮಾಡಿಕೊಂಡ ಮಾತಿನ ಅವಾಂತರಗಳಿಗೆ ಎಲ್ಲೆ ಇರಲಿಲ್ಲ. ತೀರಾ ಇತ್ತೀಚೆಗೂ ಕುಮಾರಸ್ವಾಮಿ, ಜಮೀರ್ ಮಾತನಾಡಿಕೊಂಡಿದ್ದು ಅಸಹನೀಯ. ಇಂಥಿಪ್ಪ ಇಬ್ಬರು ಇವತ್ತು ಅಕ್ಕಪಕ್ಕ ನಿಂತು ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡಿದ್ದಾರೆ. ಚೆನ್ನಮ್ಮರ ಕೈ ತುತ್ತು ತಿಂದ ಋಣ ಜಮೀರ್ ರ ಮೇಲಿದ್ದಕ್ಕೆ ಇರಬೇಕು. ಬಹಳ ಮರುಗಿದಂತೆ ಕಂಡರು.

ALSO READ :  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ ಅರೆಸ್ಟ್: ಎಂಪಿ ಸೀಟು ಕೊಡಿಸ್ತೀನಿ ಅಂತ 2 ಕೋಟಿ ವಂಚನೆ!

ಇದೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವುದೇ ಸೋಜಿಗ. ರಾಜಕೀಯ ಒಂದು ಭಿನ್ನಾಭಿಪ್ರಾಯವಾಗಿ ಮಾತ್ರ ಉಳಿದುಕೊಂಡರೆ ಅದರಾಚೆಗೂ ಮನುಷ್ಯ ಸಂಬಂಧಗಳನ್ನು ಹೀಗೆ ಉಳಿಸಿಕೊಳ್ಳಬಹುದು. ಆದರೆ ಅದೊಂದು ಇಸಂ ಆಗಿ ಪರಿವರ್ತನೆಯಾದರೆ ಇಂಥದ್ದೆಲ್ಲವನ್ನು ನಾವು ಇನ್ನೆಚ್ಚು ಕಾಲ ನೋಡುವುದಿಲ್ಲ. ನಡೆದು ಚಪ್ಪಲಿ ಸವೆದಂತೆ ಅಲ್ಪಸ್ವಲ್ಪ ಅಲ್ಲಲ್ಲಿ ಉಳಿದುಕೊಂಡಿರುವ ಮನುಷ್ಯತದ ಗುಣವೂ ಸವೆದು ಹೋಗಲಿದೆ.

ಕಣ್ಣೆದುರು ನಡೆಯುವ ಸಾವುಗಳು ನಿಂತು ‌ನೋಡಿದವರ ಎದೆಗೆ ಚೂರಿಯಂತೆ ಹದವಾಗಿ ತಿವಿದು ಬಿಡುತ್ತದೆ. ಅದು ಉಂಟು ಮಾಡುವ ತಳಮಳಕ್ಕೆ ಎಂಥಾ ಗಟ್ಟಿ ಮನುಷ್ಯನು ಕ್ಷಣ ಕಾಲ ಹೀಗೆ ಎಲ್ಲವನ್ನೂ ಬದಿಗಿಟ್ಟು ಅಪ್ಪಟ್ಟ ಮನುಷ್ಯನಾಗಿ ಬದುಕಬೇಕಾಗುತ್ತದೆ. ಆದರೆ ಅದರ ಆಯಸ್ಸು ಬಹಳ‌ ಕಡಿಮೆ. ಅದನ್ನು ಜೀವನ ಪೂರ್ತಿ ಎದೆಯಲ್ಲಿ ಜತನ ಮಾಡಿಕೊಂಡರೆ ಇವತ್ತು ನಾವು ಕಾಣುವ ರಾಜಕೀಯಕ್ಕೆ ಮಸಾಲೆಯ ಮಜಾ ಇರುವುದಿಲ್ಲ. ಅಸಹ್ಯದ ಪರಮಾವಧಿಗೆ ಇಲ್ಲಿ ಯಾವ ರಾಜಕೀಯವೂ ತಲುಪುವುದಿಲ್ಲ.

ಇದೊಂದು ನೆಪಮಾತ್ರ. ನಾಳೆ ಮತ್ತೆ ರಾಜಕೀಯ ಶುರುವಾಗುತ್ತೆ ಎನ್ನುವುದು ವಾಸ್ತವ. ನಾವು ನೀವು ಒಂದಿಲ್ಲೊಂದು ಪಾಳಯದಲ್ಲಿ ಗುರುತಿಸಿಕೊಳ್ಳಬೇಕು. ಒಂದಿಲ್ಲೊಂದು ವಾದಿಗಳಾಗಬೇಕಾದ ಜರೂರತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಅದರಾಚೆಗೆ ಕನಿಷ್ಠ ನಾವು ನಾವಾಗೇ ಉಳಿದುಕೊಳ್ಳಲು ಸಾಧ್ಯವೇ ಎಂಬುವುದಕ್ಕೆ ಪ್ರಯತ್ನಪಡಬೇಕಿದೆ. ಮತ್ತೆ ನೆನಪಿಸತ್ತೇನೆ ಮನುಷ್ಯತ್ವಕ್ಕಾಗಿ ನಾವು ಯಾವುದೇ ಧರ್ಮ ಗ್ರಂಥಗಳ ಪುಟ ತಿರುವುವ ಅಗತ್ಯವಿಲ್ಲ. ಮನುಷ್ಯರಾಗಿ ಬಾಳೋಣ.


Leave a Comment