ದಸರಾ ವೇಳೆ ಕನ್ನಡದ ದಕ್ಷ IPS ರಿಷ್ಯಂತ್‌ ನಿಜಕ್ಕೂ ಶಿಕ್ಷಿಸುವಂಥ ತಪ್ಪು ಮಾಡಿದ್ರಾ..!


ಬೆಂಗಳೂರಿನಿಂದ  ಮೈಸೂರಿಗೆ ಹೋಗಿ ಹೀಗೆ ಯಡವಟ್ಟು ಮಾಡಿಕೊಳ್ಳಬೇಕಿತ್ತಾ..? ಸರ್ಕಾರದ ಕೆಂಗಣ್ನಿಗೆ ಹೀಗೆಲ್ಲಾ ಗುರಿಯಾಗಬೇಕಿತ್ತಾ.? ಸಚಿವರನ್ನು ತಡೆದು ಸಮಸ್ಯೆಯನ್ನು ಮೈಮೇಲೆ ಎಳೆದುಕೊ ಳ್ಳುವ ಅವಶ್ಯಕತೆಯಾದ್ರೂ ಏನಿತ್ತು..? ಏನಾದ್ರೂ ಆಗಿ ಹಾಳಾಗಿ ಹೋಗಲಿ ಎಂದು ಅವರನ್ನೆಲ್ಲಾ ಬಿಟ್ಟು ಸುಮ್ಮನಿರಬಹುದಿತ್ತಲ್ಲ..?ಯಾರಿಗೂ ಇಲ್ಲದಿರುವ ಉಸಾಬರಿ ಇವರಿಗೇನು ಬೇಕಿತ್ತು..? ವೃತ್ತಿಜೀವನದುದ್ದಕ್ಕೂ ದಕ್ಷತೆ-ನಿಷ್ಟೆ-ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಾ  ಬಂದಿರುವ ಖಡಕ್‌ ಐಪಿಎಸ್‌ ಸಿ.ಬಿ .ರಿಷ್ಯಂತ್‌ ಅವರನ್ನು ಎಡೆಬಿಡದೆ ಕಾಡುತ್ತಿರುವ ಪ್ರಶ್ನೆಗಳು.

ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡಿ.. ಯಾಮಾರಿದ್ರೆ ಏನ್‌ ಬೇಕಾದ್ರೂ ಆಗಬಹುದು..ಕಾನೂನು ಸುವ್ಯವಸ್ಥೆ ಮುಂದೆ ಎಲ್ಲರೂ ಒಂದೇ,..ಏನೇ ತೊಂದರೆಗಳಾದ್ರೂ ಅದಕ್ಕೆ ನೀವೇ ಹೊಣೆ…ನೀವೇ ಬೆಲೆ ತೆರಬೇಕಾಗುತ್ತದೆ ಎಂದೆಲ್ಲಾ ಹೇಳಿಕೊಟ್ಟ ತನ್ನ ಪೊಲೀಸ್‌ ಇಲಾಖೆಯ ಮಾತನ್ನು ಪಾಲಿಸಲು ಹೋಗಿ ರಿಷ್ಯಂತ ಇವತ್ತು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೆಯೇ  ರಾಜಕಾರಣಿಗಳೆನ್ನದೆ ಕರ್ತವ್ಯಪಾಲನೆ ಮಾಡಿದ ಕಾರಣಕ್ಕೆ ಹಲವು  ಜನರ ದೃಷ್ಟಿಯಲ್ಲಿ ಅವರು ಹೀರೋ ಕೂಡ..ಆದ್ರೆ ಸನ್ನಿವೇಶವನ್ನು ಯಾವ್‌ ರೀತಿ ಫೇಸ್‌ ಮಾಡಬೇಕೆನ್ನುವುದು ಸಧ್ಯ ರಿಷ್ಯಂತ್‌ ಅವರಲ್ಲಿನ ಗೊಂದಲ.

ಮೈಸೂರು ದಸರಾ ಮಹೋತ್ಸವದ  ವಿಶೇಷ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಣೆ  ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆ ತೆರಳುತ್ತಿದ್ದ  ಸಚಿವರಾದ ಶಿವರಾಜ್ ತಂಗಡಗಿ, ಕೆ.ಎಸ್. ಬಸವಂತಪ್ಪ ಮತ್ತು ಪಿ.ಎಂ. ನರೇಂದ್ರ ಸ್ವಾಮಿ ಅವರನ್ನು ರಿಷ್ಯಂತ್  ತಡೆದಿದ್ದರು.ಆದರೆ ಸಿಎಂ ಸೂಚನೆ ಮೇರೆಗೆ ಅವರನ್ನು ಮತ್ತೆ ಒಳ ಬಿಡಲಾಗಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆದ ಈ ಸುದ್ದಿ ಬೆಳಕು ಹರಿಯುವುದರೊಳಗೆ ರಾಜ್ಯಾದ್ಯಂತ ರಿಷ್ಯಂತ್‌ ಬಗ್ಗೆ ಎರಡು ರೀತಿಯ ಅಭಿಪ್ರಾಯ ಮೂಡುವಂತೆ ಮಾಡಿತ್ತು.ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ಖಂಡಿಸಿದ್ರೆ ರಾಜ್ಯದ ಜನರು  ವಿವಿಐಪಿ ಪ್ರೋಟೋಕಾಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕರ್ತವ್ಯನಿಷ್ಟೆ ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ  ತಮ್ಮನ್ನು ವಿವಿಐಪಿ ಪ್ರೋಟೋಕಾಲ್‌ ನೆವದಲ್ಲಿ ತಡೆದು ಅವಮಾನಿಸಲಾಗಿದೆ.ನಮಗೆ ಮುಜುಗರವಾಗಿದೆ..ಇದಕ್ಕೆ ನೀವು ಏನಾದರೂ ಮಾಡಬೇಕು.ಇಲ್ಲವಾದಲ್ಲಿ ಅಧಿಕಾರಿಗಳ ಮುಂದೆ ನಾವೆಲ್ಲಾ ಡಮ್ಮಿ ಆಗಿಬಿಡ್ತೇವೆ ಎಂದು ಅವರೆಲ್ಲಾ  ಒತ್ತಡ ಹಾಕಿದ ಹಿನ್ನಲೆಯಲ್ಲಿ ಸಿಎಂ ಇದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿವಂತೆ ಸೂಚಿಸಿದ್ದಾರೆನ್ನಲಾಗಿದೆ.ವಾಸ್ತವದಲ್ಲಿ ಮೇಲ್ಕಂಡ ಪ್ರಕರಣ ನಡೆದ ಸನ್ನಿವೇಶದಲ್ಲಿ ಸಿಎಂ ಡಿಕೆ ಶಿವಕುಮಾರ್‌ ಇದನ್ನು ಒಂದು ಮಾಮೂಲು ಘಟನೆ ಎನ್ನುವಂತೆ ರಿಯಾಕ್ಟ್‌ ಮಾಡಿದ್ದನ್ನು, ಎಸ್ಪಿಗೆ ಹೇಳಿ ಅವರನ್ನು ಒಳಬಿಡಿಸಿದ್ದನ್ನು ಇಡೀ ರಾಜ್ಯದ ಜನತೆ ಗಮನಿಸಿದ್ದಾರೆ. ಅಂದರೆ ಡಿಕೆ ಶಿವಕುಮಾರ್‌ ಅವರಿಗೂ ವಿವಿಐಪಿ ಪ್ರೋಟೋಕಾಲ್ ನಿಯಮಗಳ ಅನ್ವಯವೇ ಎಸ್ಪಿ ರಿಷ್ಯಂತ್‌ ಹೀಗೆ ಮಾಡಿರಬಹುದು ಎಂದು ಮನವರಿಕೆ ಆಗಿರಬೇಕು..ಹಾಗಾಗಿ ಅವರನ್ನು ಆ ಘಟನೆ ಸಂಬಂಧ ರಿಯಾಕ್ಟ್‌ ಮಾಡಿರಲಿಲ್ಲ ಎನ್ನುವುದು ಕೂಡ ಸತ್ಯನೇ..?

ಮೈಸೂರಿನಲ್ಲಿ ನಡೆದ ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ, ನಿಯಮ ಉಲ್ಲಂಘನೆಯ ಆರೋಪದಡಿ ಎಸ್ಪಿ  ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಖ್ಯಮಂತ್ರಿಗಳು ಮುಖ್ಯ ಕಾರ್ಯ ದರ್ಶಿಗೆ ಸೂಚನೆ ನೀಡುವ ಮಟ್ಟದಲ್ಲಿ ಸುದ್ದಿಯಾಯಿತು.ಆದರೆ ವಿವಿಐಪಿ ಪ್ರೋಟೋಕಾಲ್ ನಿಯಮಗಳನ್ನು ಪಾಲಿಸದೆ ಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಇತರೆ ಪ್ರಭಾವಿಗಳ ಹೆಸರನ್ನು ಹೇಳಿಕೊಂಡು ಬರುವವರನ್ನೆಲ್ಲಾ ಬಿಟ್ಟಿದ್ದೇ ಆದಲ್ಲಿ ಅದು ಕೂಡ ದೊಡ್ಡಮಟ್ಟದ ಸುದ್ದಿಯಾಗುತ್ತಿತ್ತು.ಎಸ್ಪಿ ರಿಷ್ಯಂತ್‌ ಅವರನ್ನು ಕರ್ತವ್ಯಲೋಪದ ಆಪಾದನೆ ಮೇಲೆ ವಿಲನ್‌ ಅನ್ನುವಂತೆ ಪ್ರೊಜೆಕ್ಟ್‌ ಮಾಡಲಾಗಿತ್ತು ಎನ್ನಿಸುತ್ತದೆ. ಮೇಲಾಧಿಕಾರಿಗಳ ಆದೇಶ ಪಾಲಿಸುವ ಅವಸರದಲ್ಲಿ ರಿಷ್ಯಂತ್‌ ಕರ್ತವ್ಯಪಾಲನೆ ಮಾಡಲು ಹೋಗಿ ಈಗ ಅದನ್ನು ಯಡವಟ್ಟು ಎನ್ನುವಂತೆ ಬಿಂಬಿಸಲಾಗ್ತಿದೆ ಅಷ್ಟೆ…

ರಿಷ್ಯಂತ್‌ ಬೇಕೆಂದೇ ಈ ರೀತಿ ಮಾಡಿದ್ರು ಎಂಬುದು ಅವಮಾನಿತಗೊಂಡವರು ಹಾಗೂ ಅವರ ಪರ ನಿಂತ ರಾಜಕಾರಣಿಗಳ ವಾದ.ತಮ್ಮನ್ನು ಅವಮಾನಿಸಿದ್ರೆ ದೊಡ್ಡ ಹೆಸರು ಪಡೆಯಬಹುದೆನ್ನುವ ಆಲೋಚನೆ-ಲೆಕ್ಕಾಚಾರ ರಿಷ್ಯಂತ್‌ ಅವರದ್ದಾಗಿತ್ತು..ಹಾಗಾಗಿ ಹಾಗೆ ಮಾಡಿದರೆಂದು ವಿಶ್ಲೇಷಿಸಲಾಗುತ್ತಿದೆ.ಇನ್ನೊಂದು ಹೆಜ್ಜೆ ಮುಂದ್ಹೋಗಿ ರಿಷ್ಯಂತ್‌ ಅವರ ಮಾವ( ಹೆಣ್ಣು ಕೊಟ್ಟ)ಮುನಿರತ್ನ ಬಿಜೆಪಿ ಯಲ್ಲಿದ್ದಾರೆ.ಅವರ ಮಾತನ್ನು ಕೇಳಿ ಹೀಗೆ ಮಾಡಿದರೆಂದು ಹೇಳುವವರೂ ಇದ್ದಾರೆ.( ತುಂಬಾ ಜನರಿಗೆ ರಿಷ್ಯಂತ್ ಅವರು ಮದುವೆ ಆಗಿರುವುದು ರಾಜರಾಜೇಶ್ವರಿ ನಗರದ ಬಿಜೆಪಿ ಎಮ್ಮೆಲ್ಲೆ ಮುನಿರತ್ನ ಅವರ ಮಗಳನ್ನು ಎನ್ನುವುದು ಗೊತ್ತಿಲ್ಲ..ರಿಷ್ಯಂತ್‌ ಕೂಡ ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ..ತನ್ನ ಮಾವನವರ ರಾಜಕೀಯವನ್ನು ತನ್ನ ಕೆಲಸದ ವಿಷಯದಲ್ಲಿ ಬಳಸಿಕೊಂಡಿಯೂ ಇಲ್ಲ).ಆದರೆ ಇದೆಲ್ಲಾ ಸುಳ್ಳು ಎನ್ನುವುದು ರಿಷ್ಯಂತ್‌ ಅವರನ್ನು ಹತ್ತಿರದಿಂದ ಕಂಡ,ಅವರ ಕೆಲಸವನ್ನು ಬಲ್ಲವರ,ಕರ್ತವ್ಯ ಎಂಬ ವಿಷಯ ಬಂದಾಗ ಅವರ ಪ್ರಾಮಾಣಿಕತೆ-ದಕ್ಷತೆ ಕಂಡವರ ಮಾತು.

ALSO READ :  "ಸೆಂಚುರಿ ಕ್ಲಬ್ ಇನ್ಮುಂದೆ ಸಾರ್ವಜನಿಕ ಪ್ರಾಧಿಕಾರ" ಹೈ ಕೋರ್ಟ್ ಘೋಷಣೆ

ದಸರಾದಲ್ಲಿ ಏನಾದರು ಆಗಿಬಿಟ್ಟರೆ, ಎನ್ನುವ ಕಾಳಜಿ ಹಿನ್ನಲೆಯಲ್ಲಿ ಸಚಿವರನ್ನು ತಡೆದಿರಬಹುದೇ ವಿನಃ. ಬೇರೆ ಯಾವ ಉದ್ದೇಶಕ್ಕೂ ಅವರು ಹೀಗೆ ಮಾಡಿರಲು ಸಾಧ್ಯವೇ ಇಲ್ಲ ಎಂದು ಕಾನ್ಫಿಡೆಂಟಾಗಿ ಮಾತನಾಡುವವರು ಇಲಾಖೆಯಲ್ಲಿ ನೂರಾರು ಜನರಿದ್ದಾರೆ.ತಾವು ಸಚಿವರು ಎನ್ನುವುದನ್ನೂ ಕೇರ್‌ ಮಾಡದೆ ತಮ್ಮನ್ನು ತಡೆಯುವ ಮೂಲಕ ಕರ್ತವ್ಯನಿಷ್ಟೆ ಮೆರೆದಿದ್ದಾರೆ ಎಂದು ಅದೇ ಸಚಿವರುಗಳು ಮೆಚ್ಚುಗೆ ಮಾತನ್ನಾಡಿದ್ದರೆ ರಾಜ್ಯದ ಜನತೆ ಮುಂದೆ ಆ ಅವಮಾನಿತರಾದವರೆಲ್ಲಾ ದೊಡ್ಡವರಾಗಿ ಬಿಡುತ್ತಿದ್ದರೇನೋ..? ಎಂದೆನಿಸುತ್ತದೆ.

ರಿಷ್ಯಂತ್‌ ಬಗ್ಗೆ ಒಂದಷ್ಟು.. ಕನ್ನಡದ ಹುಡುಗ ಸಿ. ಬಿ. ರಿಷ್ಯಂತ್ ಇಷ್ಟಪಟ್ಟೇ ಐಪಿಎಸ್‌ ಆಯ್ದುಕೊಂಡವರು. ಪೊಲೀಸ್‌ ಇಲಾಖೆಯಲ್ಲಿ ತನ್ನದೇ ಡಿಫರೆಂಟ್‌ ಸ್ಟೈಲ್‌ ನ ಕೆಲಸದ ಮೂಲಕ ವಿಶಿಷ್ಟ ಛಾಪು ಮೂಡಿಸಬೇಕೆನ್ನುವ ಕನಸು-ಮಹತ್ವಾಕಾಂಕ್ಷೆ ಇಟ್ಟುಕೊಂಡವರು.ಅದಕ್ಕಾಗಿಯೇ ಕಠಿಣ ಅಭ್ಯಾಸ ಮಾಡಿದ್ರು.ಬೆಂಗಳೂರಿನಲ್ಲಿ ಹುಟ್ಟಿ, ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ (Christ University) ವಾಣಿಜ್ಯ ಶಾಸ್ತ್ರದಲ್ಲಿ ಪದವಿ (B.Com) ಮುಗಿಸಿ ನಂತರ ಯುಪಿಎಸ್‌ ಸಿಗೆ ತಯಾರಿ ನಡೆಸಿ 2013ರಲ್ಲಿ ಸೇರ್ಪಡೆಯಾದರು. ಚಿಕ್ಕನಾಯಕನಹಳ್ಳಿಯಲ್ಲಿ ತರಬೇತಿ ಅವಧಿಯ ಕರ್ತವ್ಯ ಪೂರ್ಣಗೊಳಿಸಿದರು.  ಮಂಗಳೂರಿನಲ್ಲಿ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ ಇವರು, ನಂತರ ಬಾಗಲಕೋಟೆ, ಮೈಸೂರು, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ  ಕೆಲಸ ಮಾಡಿದ್ರು.ಕಾಕತಾಳೀಯ ಎಂದ್ರೆ ಇವರ ಮಾವ ಮುನಿರತ್ನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ದಾವಣಗೆರೆ ಉಸ್ತುವಾರಿಯಾಗಿದ್ದಾಗ ಅಲ್ಲಿ ಎಸ್ಪಿ ಆಗಿದ್ದವರು ಇದೇ ರಿಷ್ಯಂತ್.‌ಎಲ್ಲಾ ಕಡೆ ಕೆಲಸ ಮಾಡಿದ ಮೇಲೆ, ಜನವರಿ 2026 ರಿಂದ ಜಾರಿಗೆ ಬರುವಂತೆ ಇವರು ಬೆಂಗಳೂರಿನ ವೈರ್‌ಲೆಸ್ ವಿಭಾಗದ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕರ್ತವ್ಯನಿಷ್ಟೆಗೆ ನೂರು ನಿದರ್ಶನಗಳು: ತಮ್ಮ ಸೇವಾವಧಿಯಲ್ಲಿ ಅತ್ಯಂತ ದಕ್ಷ ಹಾಗೂ ನಿಷ್ಟೂರವಾಗಿ ಕೆಲಸ ಮಾಡಿದ ಹೆಗ್ಗಳಿಕೆ ರಿಷ್ಯಂತ್‌ ಅವರದು.ಪ್ರವಾಸಿ ತಾಣವಾದ ಮೈಸೂರು ಮತ್ತು ಸೂಕ್ಷ್ಮ ಪ್ರದೇಶವಾದ ಬಾಗಲಕೋಟೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಕಾಪಾಡಿದ ಕೀರ್ತಿ ಇವರಿಗಿದೆ.ಹಾಗೆಯೇ ರಾಜ್ಯದ ಪ್ರಮುಖ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಇವರನ್ನು ಆಯಕಟ್ಟಿನ ಮತ್ತು ಸೂಕ್ಷ್ಮ ಜಿಲ್ಲೆಗಳ ಜವಾಬ್ದಾರಿಗೆ ನಿಯೋಜಿಸಲಾಗಿತ್ತು.ಅಲ್ಲಿಯೂ ಸಮರ್ಥವಾಗಿ ಕೆಲಸ ಮಾಡಿ ಹೆಸರು ಮಾಡಿದರು.ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಭದ್ರತಾ ಲೋಪಗಳು ಮತ್ತು ಆಡಳಿತಾತ್ಮಕ ಹಗರಣಗಳ ತನಿಖೆಗಾಗಿ ರಚಿಸಲಾಗಿದ್ದ ಉನ್ನತ ಮಟ್ಟದ ವಿಶೇಷ ತನಿಖಾ ಸಮಿತಿಯ ಪ್ರಮುಖ ಸದಸ್ಯರಾಗಿ   ನೇಮಿಸಿದ್ದು ಅವರ ಇದೇ ಕಾರ್ಯದಕ್ಷತೆ ಕಾರಣಕ್ಕೆ..ಆ ತಂಡದಲ್ಲಿದ್ದು ಇವರು ಪತ್ತೆ ಮಾಡಿದ ಹಗರಣ ಹಾಗೂ ಅದಕ್ಕೆ ಪೂರಕವಾಗಿ ಸಂಗ್ರಹಿಸಿದ ಸಾಕ್ಷ್ಯಗಳ ಮೂಲಕವೇ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಾಗಿದ್ದು ಇವರ ಕರ್ತವ್ಯನಿಷ್ಟೆಗೆ ಸಾಕ್ಷಿ.ಯಾವ ಸರ್ಕಾರ ಇವರನ್ನು ಈ ಕಾರಣಕ್ಕೆಲ್ಲಾ ಹಾಡಿ ಹೊಗಳಿತ್ತೋ ಅದೇ ಸರ್ಕಾರದ ದೃಷ್ಟಿಯಲ್ಲಿ ಇವತ್ತು ರಿಷ್ಯಂತ್‌ ವಿಲನ್‌ ಆಗ್ಹೋಗಿದ್ದಾರೆ ಎನ್ನುವುದೇ ದುರಾದೃಷ್ಟಕರ.

ದಕ್ಷ ಹಾಗೂ ಪ್ರಾಮಾಣಿಕರಾಗಿರುವವರಿಗೆ ವ್ಯಕ್ತಿ ಹಾಗೂ ಅವರ ಸ್ಥಾನಮಾನಗಳಿಗಿಂತ ಇಲಾಖೆ ವಿಧಿಸುವ ಸೂಚನೆ-ನಿರ್ದೇಶನ-ಆದೇಶಗಳ ಪಾಲನೆಯೇ ಮುಖ್ಯವಾಗಿರುತ್ತವೆ.ರಿಷ್ಯಂತ್‌ ಅವರ ವಿಷಯ ದಲ್ಲಿ ಆಗಿದ್ದು ಕೂಡ ಇದೇ..ಹಾಗಂತ ಇದೊಂದೇ ಕಾರಣಕ್ಕೇ ಅವರನ್ನು ವಿಲನ್‌ ಅಂತೆ ಬಿಂಬಿಸುವುದು ತಪ್ಪು ಹಾಗೂ ಅನ್ಯಾಯ.ಕಾನೂನು ಪಾಲನೆ ಮುಂದೆ ಯಾರೂ ದೊಡ್ಡವರಲ್ಲ ಎನ್ನುವುದನ್ನು ನಮ್ಮ ವಿಷಯದಲ್ಲೇ  ಪ್ರೂವ್‌ ಮಾಡಿದ್ದೀರ ಎಂದು ಅವಮಾನಿತಗೊಂಡ ಸಚಿವರು ಹೇಳಿ ದೊಡ್ಡವರಾಗಬಹುದಲ್ವಾ..! ರಿಷ್ಯಂತ್‌ ಅವರ ಬೆನ್ನು ತಟ್ಟಬಹುದಿತ್ತಲ್ವಾ..! ರಿಷ್ಯಂತ್‌ ಮಾಡಿದ್ದು ಕಾನೂನು ಮತ್ತು ಶಿಷ್ಟಾಚಾರದ ವಿಚಾರದಲ್ಲಿ ಭಾರೀ ಪ್ರಮಾದವೇನು ಅಲ್ಲ..ಅವರಿಂದ ವಿವರಣೆ ಪಡೆದು ಬುದ್ದಿ ಮಾತು ಹೇಳಿ ಕಳುಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಅಷ್ಟೆ..ರಿಷ್ಯಂತ್‌ ಅವರಂಥ ದಕ್ಷ ಅಧಿಕಾರಿಯನ್ನು  ಶಿಕ್ಷಿಸುವ ಕೆಲಸವಾದಲ್ಲಿ ಅದು ಅವರಷ್ಟೇ ಅಲ್ಲ ಅವರಂಥ ಎಷ್ಟೋ ದಕ್ಷ ಹಾಗೂ ಖಡಕ್‌ ಅಧಿಕಾರಿಗಳಿಗೆ ಕೆಟ್ಟ ಸಂದೇಶವನ್ನು ರವಾನಿಸುವ ಆತಂಕವಿದೆ..ಅಲ್ವಾ..!

 


Leave a Comment