EXCLUSIVE.. ಸರ್ಕಾರಿ ಕಚೇರಿಯಲ್ಲೇ “ಪರಿಸರಾಧಿಕಾರಿ”ಯ ಭರ್ಜರಿ ಬಾಡೂಟ..!-ನಿವೃತ್ತಿ ವೇಳೆಯಲ್ಲೇ “ಕಂಟಕ” ಮೈಮೇಲೆ ಎಳೆದುಕೊಂಡ ಮಂಜುನಾಥ್..?


****ರಾಮನಗರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಕಚೇರಿಯಲ್ಲಿಯೇ ಮಟ ಮಟವೇ ಮದ್ಯಾಹ್ನ ಭರ್ಜರಿ ಬಾಡೂಟ  ****ರಾಮನಗರ ಪರಿಸರಾಧಿಕಾರಿ ಮಂಜುನಾಥ್‌ ಅವರಿಗೆ ಸಿಬ್ಬಂದಿಗೆ ಮಾಂಸದೂಟ 

****ಸರ್ಕಾರಿ ಕಚೇರಿಯಲ್ಲಿ ಖಾಸಗಿ ಉದ್ದೇಶದ ಕಾರ್ಯಕ್ರಮ-ಸಂಭ್ರಮಾಚರಣೆಗೆ ಅವಕಾಶವಿಲ್ಲ ಎನ್ನುತ್ತೆ ಸರ್ಕಾರದ ಸುತ್ತೋಲೆ  ****ನಿಯಮ ಉಲ್ಲಂಘಿಸಿದ್ರೆ ಆಗುವ ದುಷ್ಪರಿಣಾಮಗಳ ಮಾಹಿತಿಯಿದ್ದಾಗ್ಯೂ ನಿರ್ಲಕ್ಷ್ಯ ವಹಿಸಿದ್ರಾ ಮಂಜುನಾಥ್‌

****ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ “ಆಡಳಿತ”ವನ್ನೇ “ಮ್ಯಾನೇಜ್‌” ಮಾಡುವುದಾಗಿ ಆತ್ಮೀಯರ ಬಳಿ ಹೇಳಿಕೊಂಡಿದ್ದಾರಾ ಮಂಜುನಾಥ್‌..!?  ****ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆಯೇ  ದಕ್ಷ ಐಎಫ್‌ ಎಸ್‌ ಅಧಿಕಾರಿ ಗೋಕುಲ್‌    

ರಾಮನಗರ ವಲಯ ಪರಿಸರಾಧಿಕಾರಿ ಮಂಜುನಾಥ್‌
ರಾಮನಗರ ವಲಯ ಪರಿಸರಾಧಿಕಾರಿ ಮಂಜುನಾಥ್‌
ಅರಣ್ಯ-ಪರಿಸರ ಸಚಿವ ರಾಮಲಿಂಗಾರೆಡ್ಡಿ
ಅರಣ್ಯ-ಪರಿಸರ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು(ರಾಮನಗರ): ಈ ಸರ್ಕಾರಿ ಅಧಿಕಾರಿ ನಿವೃತ್ತಿ ವೇಳೆಯಲ್ಲೇ ಕಂಟಕವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಯಾವ ಕೆಲಸವನ್ನು ಮಾಡಬಾರದೆಂದು ಸರ್ಕಾರಿ ಆದೇಶ ಕಟ್ಟಪ್ಪಣೆ ಮಾಡಿದೆಯೋ ಅದನ್ನೇ ಉಲ್ಲಂಘಿಸಿ ವಿವಾದಕ್ಕೆ ತುತ್ತಾಗಿದ್ದಾರೆ.ನಿವೃತ್ತಿ ಖುಷಿಯಲ್ಲಿ ನೀಡಿದ ಭರ್ಜರಿ ಬಾಡೂಟ ಪಾರ್ಟಿಯೇ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ.ಅಂದ್ಹಾಗೆ ಇದೆಲ್ಲಾ ನಡೆದಿರುವುದು ರಾಮನಗರ ವಲಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ. ಸ್ವಯಂಕೃತಾಪರಾಧದಿಂದಲೇ ಸಂಕಷ್ಟ ಮೈ ಮೇಲೆ ಎಳೆದುಕೊಂಡಿರುವ ಅಧಿಕಾರಿಯ ಹೆಸರು ಮಂಜುನಾಥ್.‌ ಸರ್ಕಾರಿ ಕಚೇರಿಯಲ್ಲಿ ಯಾವುದೇ ರೀತಿಯ ವೈಯುಕ್ತಿಕ ಸಂಭ್ರಮಾಚರಣೆ ಮಾಡಿಕೊಳ್ಳಬಾರದೆನ್ನುವ ನಿಯಮವಿದ್ದಾಗ್ಯೂ..ಅದನ್ನು ಪಾಲಿಸಬೇಕೆನ್ನುವ ಪರಿಜ್ಞಾನ ಇದ್ದಾಗ್ಯೂ ಅದ್ಯಾವುದನ್ನು ಪರಿವಿಗೆ ತೆಗೆದುಕೊಳ್ಳದೆ ಹೀಗೊಂದು ಭರ್ಜರಿ ಬಾಡೂಟವನ್ನು ಉಣಬಡಿಸಿದ ಮಂಜುನಾಥ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಪರಿಸರವಾದಿಗಳು ನಿರ್ದರಿಸಿದ್ದಾರೆನ್ನಲಾಗಿದೆ.

ಸರ್ಕಾರಿ ಅಧಿಕಾರಿಗಳ ಮೋಜು ಮಸ್ತಿಗೆ ಕಡಿವಾಣ ಹಾಕಲು..ಆಡಳಿತಾಂಗದಲ್ಲಿ ಶಿಸ್ತು ಮೂಡಿಸಲು ಸರ್ಕಾರ  ಅನೇಕ ನಿಯಮಗಳನ್ನು ರೂಪಿಸಿದೆ.ಅದಕ್ಕಾಗಿ ಸುತ್ತೋಲೆ  ಹೊರಡಿಸಿದೆ. ಅದನ್ನು ಪಾಲಿಸುವುದು ಕಡ್ಡಾಯ ಎನ್ನುವ ವಿವೇಕದ ಜತೆಗೆ ಅದನ್ನು ಪಾಲಿಸದಿದ್ದರೆ ಶಿಕ್ಷೆ-ದಂಡನೆ ಕಡ್ಡಾಯ ಎನ್ನುವುದರ ಅರಿವು ಎರಡೂ ಇದ್ದಾಗ್ಯೂ ಇವತ್ತಿಗೂ ನಿಯಮಗಳನ್ನು ಉಲ್ಲಂಘಿಸುವ ಕೆಲಸ ಒಂದಷ್ಟು ಅಧಿಕಾರಿ ಸಿಬ್ಬಂದಿಯಿಂದ ನಡೆಯುತ್ತಲೇ ಬಂದಿದೆ.ಇದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಮನಗರ ವಲಯದ ಪರಿಸರಾಧಿಕಾರಿ ಮಂಜುನಾಥ್‌ ಕೂಡ ಹೊರತಾಗಿಲ್ಲ.ಇತ್ತೀಚೆಗಷ್ಟೇ ನಿವೃತ್ತರಾದ ಸನ್ಮಾನ್ಯ ಮಂಜುನಾಥ್‌ ಅವರು ಸಹಜ ಪ್ರಕ್ರಿಯೆ ಅಡಿಯಲ್ಲೇ ಎಲ್ಲವನ್ನು ಮುಗಿಸಿಕೊಂಡಿದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ.ಅವರ ಬಗ್ಗೆ ಮಾದ್ಯಮಗಳು ಸುದ್ದಿ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.ಆದರೆ ತನ್ನ ಕೆಪಾಸಿಟಿ ಏನು ಎನ್ನುವುದನ್ನು ಶೋ ಆಫ್‌ ಮಾಡಿಕೊಳ್ಳುವ ಆತರು-ಭರಾಟೆಯಲ್ಲಿ ಮಂಜುನಾಥ್‌ ಲಕ್ಷಾಂತರ ಖರ್ಚು ಮಾಡಿ ಸರ್ಕಾರಿ ಕಚೇರಿಯಲ್ಲೇ ಊಟ ಹಾಕಿಸಿದ್ದಾರೆ.ಅದು ಕೂಡ ಮಾಂಸಹಾರ..ಅಲ್ಲೇ ಇದ್ದವರಲ್ಲಿ ಯಾರೋ ಒಬ್ಬರು ಅದನ್ನೆಲ್ಲಾ ಸೆರೆಹಿಡಿದು ಮಾದ್ಯಮಗಳಿಗೆ ನೀಡಿದ್ದಾರೆ. ಮಂಜುನಾಥ್‌ ಏನೇನೋ ಸಮರ್ಥಿಸಿಕೊಳ್ಳಲು ಹೋಗಿ ಮಹಾ ಎಡವಟ್ಟನ್ನೇ ಮೈ ಮೇಲೆ ಎಳೆದುಕೊಂಡು ಈಗ ಕಾನೂನಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪರಿಸರಾಧಿಕಾರಿ ಮಂಜುನಾಥ್‌ ಅವರ ಬೀಳ್ಕೊಡುಗೆಯ ನಾನ್‌ ವೆಜ್‌ ಪಾರ್ಟಿಯಲ್ಲಿ ಮಾಂಸಹಾರ ಸೇವನೆ
ಪರಿಸರಾಧಿಕಾರಿ ಮಂಜುನಾಥ್‌ ಅವರ ಬೀಳ್ಕೊಡುಗೆಯ ನಾನ್‌ ವೆಜ್‌ ಪಾರ್ಟಿಯಲ್ಲಿ ಮಾಂಸಹಾರ ಸೇವನೆ

ಆಗಿದ್ದಿಷ್ಟು..: ರಾಮನಗರ ವಲಯ ಕಚೇರಿಯಲ್ಲಿ ಪರಿಸರಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ ಅವರು ನಿವೃತ್ತರಾದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಗೆ ಲಘು ಉಪಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಘೋಷಿಸಿದ್ದರು.ಅವರ ಆಹ್ವಾನದ ಮೇರೆಗೆ ಎಲ್ಲಾ ಸಿಬ್ಬಂದಿ ಆಗಮಿಸಿದ್ದರು.ಎಲ್ಲರೂ ಯಾವುದಾದ್ರೂ ಖಾಸಗಿ ಹೊಟೇಲ್‌ ನಲ್ಲಿ ಕಾರ್ಯಕ್ರಮ ಇರಬಹುದೆಂದೇ ಭಾವಿಸಿದ್ದರು.ಆದರೆ ರಾಮನಗರ ಪರಿಸರ ಮಾಲಿನ್ಯ ನಿಯತ್ರಣ ಮಂಡಳಿ ಕಚೇರಿಯಲ್ಲೇ ಪಾರ್ಟಿ ಎಂದಾಗ ಸರ್ಕಾರಿ ರೂಲ್ಸ್‌ ಬಗ್ಗೆ ತಿಳಿದಿರುವ ಒಂದಷ್ಟು ಸಿಬ್ಬಂದಿ ಎಚ್ಚರಿಸುವ ಕೆಲಸ ಮಾಡಿದ್ದಾರೆ.ಇನ್ನು ಕೆಲವರು ಪಾರ್ಟಿಯಲ್ಲಿ ಕಾಣಿಸಿಕೊಂಡ್ರೆ ನಮ್ಮ ಬುಡಕ್ಕೆ ಬರಬಹುದೆನ್ನುವ ಆತಂಕದಿಂದ ಬಂದೇ ಇರಲಿಲ್ಲ.ಸರ್ಕಾರಿ ರೂಲ್ಸ್‌ ಬಗ್ಗೆ ತಿಳಿದಿದ್ದ ಹಿರಿಯ ಅಧಿಕಾರಿ ಮಂಜುನಾಥ್‌ ಎಚ್ಚೆತ್ತುಕೊಂಡು ಆ ಪಾರ್ಟಿಯನ್ನು ಬೇರೆಲ್ಲಾದ್ರೂ ಆಯೋಜನೆ ಮಾಡಬಹುದಿತ್ತೇನೋ.? ಆದರೆ ಇಲ್ಲಿ ಮಾಡಿದ್ರೆ ಅದೇನ್‌ ಆಗಿಬಿಡ್ತದೋ ನಾನು ನೋಡ್ಕೋತೀನಿ ಎಂದು ಹುಬ್ಬೇರಿಸಿದ್ದಾರೆ.ಒಂದು ಹೆಜ್ಜೆ ಮುಂದ್ಹೋಗಿ ನಾನ್‌ ವೆಜ್‌ ಪಾರ್ಟಿಯನ್ನು ಮಾಡಿದ್ದಾರೆ.ಸಂಜೆವರೆಗೂ ನಡೆದ ಆ ಪಾರ್ಟಿಯಲ್ಲಿ ನೂರಾರು ಜನ ಉಂಡೆದ್ದು ಹೋಗಿದ್ದಾರೆ.ಅದರಲ್ಲಿ ಬಹುತೇಕ ರಾಮನಗರ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳ ಮಾಲೀಕರೆನ್ನುವುದು ವಿಶೇಷ.( ಇದೆಲ್ಲಕ್ಕೂ ಕೈಗಾರಿಕೆಗಳ ಮಾಲೀಕರೇ ಪ್ರೀತಿ-ವಿಶ್ವಾಸದಿಂದ ಹೂಡಿಕೆ ಮಾಡಿದ್ದಾರೆ.ಇದು ನನ್ನ ಪಾರ್ಟಿಯಲ್ಲ..ಅವರು ಪ್ರೀತಿಯಿಂದ ಆಯೋಜಿಸಿದ್ದ ಪಾರ್ಟಿ ಎಂದು ಮಂಜುನಾಥ್‌ ಅವರೇ ಅನೇಕರ ಬಳಿ ಹೇಳಿಕೊಂಡಿದ್ದಾರಂತೆ)

ಪರಿಸರಾಧಿಕಾರಿ ಮಂಜುನಾಥ್‌ ಅವರ ಬೀಳ್ಕೊಡುಗೆಯ ನಾನ್‌ ವೆಜ್‌ ಪಾರ್ಟಿಯಲ್ಲಿ ಮಾಂಸಹಾರ ಸೇವನೆ
ಪರಿಸರಾಧಿಕಾರಿ ಮಂಜುನಾಥ್‌ ಅವರ ಬೀಳ್ಕೊಡುಗೆಯ ನಾನ್‌ ವೆಜ್‌ ಪಾರ್ಟಿಯಲ್ಲಿ ಮಾಂಸಹಾರ ಸೇವನೆ

ಬೀಳ್ಕೊಡುಗೆ ಸಮಾರಂಭಕ್ಕೆ ಅನುಮತಿ ಕೊಟ್ಟವರ್ಯಾರು..ಅಸಲಿಗೆ ಪರ್ಮಿಷನ್‌ ಕೊಡಲಿಕೆ ಅವಕಾಶ ಇದೆಯಾ..? ಅದರಲ್ಲೂ ನಾನ್‌ ವೆಜ್‌ ಪಾರ್ಟಿ ಮಾಡಲು ಅನುಮತಿ ಕೊಡಬಹುದಾ..? ಮೂಲಭೂತವಾಗಿ ಪ್ರಶ್ನೆ ಕಾಡುತ್ತಿರುವುದೇ ಇಲ್ಲಿ.. ಯಾವುದೇ ಸರ್ಕಾರಿ ಕಚೇರಿಯಲ್ಲಿ ಖಾಸಗಿ ಹಾಗೂ ತೀರಾ ವೈಯುಕ್ತಿಕ ಉದ್ದೇಶದ ಕಾರ್ಯಕ್ರಮ ಅಥವಾ ಸಂಭ್ರಮಾಚರಣೆಗೆ ಅವಕಾಶ ಇದೆಯಾ,,? ಎನ್ನುವುದು.ಕೆಸಿಎಸ್‌ ಆರ್‌ ನಿಯಾಮವಳಿಗಳಲ್ಲಿ ಇದಕ್ಕೆ ಅವಕಾಶ ನಿರಾಕರಿಸಲಾಗಿದೆ ಎನ್ನುವುದು ಇಲಾಖೆ ಮೂಲಗಳ ಹೇಳಿಕೆ.ಹಾಗಾದ್ರೆ ಇದರ ಅರಿವು ಮಂಜುನಾಥ್‌ ಅವರಿಗೆ ಇರಲಿಲ್ಲವೇ..? ಇಲ್ಲ ಎಂದರೆ ಅದು ಬಾಲಿಶತನದ ಹೇಳಿಕೆಯಾಗಬಹುದೇನೋ..? ಅವರಿಗೆ ಎಲ್ಲಾ ಮಾಹಿತಿ ಇದ್ದಾಗ್ಯೂ ಹೀಗೆ ಮಾಡಿದ್ದಾರೆಂದರೆ ಅದಕ್ಕೆ ಏನ್‌ ಬೇಕಾದ್ರೂ ಮಾಡಬಲ್ಲೆ..ಮೇಲಾಧಿಕಾರಿಗಳನ್ನು ಮ್ಯಾನೇಜ್ ಮಾಡಿ ಸಂಭಾಳಿಸಬಲ್ಲೆ..ಹೆಚ್ಚೆಂದರೆ ನಿವೃತ್ತಿ ಸೌಲಭ್ಯಗಳು ನಿಂತು ಹೋಗಬಹುದು ಅಷ್ಟೇ ಅಲ್ಲವೇ..ಅದೆಲ್ಲಾ ನನಗ್ಯಾವ ಲೆಕ್ಕ..ಎನ್ನುವ ಭಾವನೆಗಳಿಂದ ಮಂಜುನಾಥ್‌ ಹೀಗೆಲ್ಲಾ ಮಾಡಿರಬಹುದೆನ್ನುವುದು ರಾಮನಗರ ಕಚೇರಿಯಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಯ ಮಾತು. ಎಲ್ಲಾ ಗೊತ್ತಿದ್ದೂ ತಪ್ಪು ಮಾಡಿದ್ದಾರೆಂದರೆ ಮಂಜುನಾಥ್‌ ಮನಸ್ಥಿತಿ ಹೀಗೆಯೇ ಕೆಲಸ ಮಾಡಿರಬಹುದೋ ಎನ್ನುವ ಅನುಮಾನ ಕಾಡುವುದು ಸಹಜ. ಅಲ್ಲದೇ ಇದರ ಬಗ್ಗೆ ಮಂಡಳಿಯ ಉನ್ನತಾಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ಕಾರ್ಯಕ್ರಮ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ..ಹಾಗೆ ಮಾಡಿದ್ದರೆ ಅವರು ಎಂಥವರೇ ಇರಲಿ,ಅವರ ವಿರುದ್ದ ಕಠಿಣ ಕ್ರಮ ಜಾರಿಯಂತೂ ಖಂಡಿತಾ ಎಂದು ಹೇಳಿದ್ದಾರೆ.ಸೋ..ಈ ಬಗ್ಗೆ ಸಾಕ್ಷ್ಯ ಸಮೇತ ಗ್ರೀನ್‌ ಆರ್ಮಿ ಫೋರ್ಸ್‌ ದೂರು ನೀಡಲು ಸಿದ್ದವಾಗಿದೆ ಎಂದು ತಿಳಿದುಬಂದಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಬಾರ ಅಧ್ಯಕ್ಷ ಶ್ರೀನಿವಾಸಲು
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಬಾರ ಅಧ್ಯಕ್ಷ ಶ್ರೀನಿವಾಸಲು

ಪಾರ್ಟಿಗೆ ಖರ್ಚು ಮಾಡಲಾದ ಲಕ್ಷಾಂತರ ಹಣದ ಮೂಲ ಯಾವುದು..? ಖರ್ಚನ್ನು ಕೈಗಾರಿಕೆಗಳ ಮಾಲೀಕರು ಇನ್ವೆಸ್ಟ್‌ ಮಾಡಿದ್ರಾ..? ಪಾರ್ಟಿ ನಡೆಯುತ್ತಿರುವ ಸನ್ನಿವೇಶ ಗಮನಿಸಿದಾಗ ಕನಿಷ್ಟ ಎಂದರೂ ೧೦೦ ಕ್ಕೆ ಕಡಿಮೆ ಇಲ್ಲದಷ್ಟು ಜನ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದರೆನ್ನಬಹುದೇನೋ. ಅಷ್ಟೊಂದು ಜನರಿಗೆ ನಾನ್‌ ವೆಜ್‌ ಊಟ ಹಾಕಿಸುವುದೆಂದರೆ ಖರ್ಚು ಲಕ್ಷಗಳಲ್ಲಿ ಆಗಿರಲೇಬೇಕು.ಸರ್ಕಾರಿ ಅಧಿಕಾರಿಯಾಗಿ ಮಂಜುನಾಥ್‌ ಗೆ ತಿಂಗಳಿಗೆ ಸಂಬಳ ಎಷ್ಟು ಬರುತ್ತದೋ ಗೊತ್ತಿಲ್ಲ.ತಮ್ಮನ್ನು ಪ್ರಾಮಾಣಿಕ ಎಂದೆಲ್ಲಾ ಹೇಳಿಕೊಳ್ಳುವ ಮಂಜುನಾಥ್‌ ಅವರಿಗೆ ಇಷ್ಟೊಂದು ಮೊತ್ತ ಎಲ್ಲಿಂದ ಬಂತು..ಆ ಖರ್ಚಿನ ಮೂಲ ಯಾವುದು ಎನ್ನುವ ಪ್ರಶ್ನೆ ಸಹಜವಾಗೇ ಕಾಡುತ್ತದೆ.ಇಷ್ಟೊಂದು ಹಣವನ್ನು ಅವರು ತಮ್ಮ ಜೇಬಿನಿಂದಲೇ ಭರಿಸಿದ್ರಾ..( ಭರಿಸಿದ್ದರೆ ಅದರ ಮೂಲವನ್ನು ಇಲಾಖೆಗೆ ನೀಡಲೇಬೇಕು..ಬಿಲ್ಲುಗಳನ್ನು ನೀಡಬೇಕು)ಇದಕ್ಕೆ ಹಣ ಪಡೆದಿರಬಹುದಾದ ಅಥವಾ ಹಣ ನೀಡಿರಬಹುದಾದ ಕೈಗಾರಿಕೆಗಳ ಮಾಲೀಕರೇ ಸ್ಪಷ್ಟನೆ ನೀಡಬೇಕು.ಕೈಗಾರಿಕೆಗಳಿರುವ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಉಲ್ಲಂಘನೆಗಳನ್ನು ಊಫಿ ಮಾಡಿ ಅವರಿಗೆ ಪ್ರಯೋಜನ ಮಾಡಿಕೊಟ್ಟಿರಬಹುದಾದ ಮಂಜುನಾಥ್‌ ಅವರ ಋಣ ಸಂದಾಯಕ್ಕೆ ಕೈಗಾರಿಕೆಗಳ ಮಾಲೀಕರೇ ಬಾಡೂಟಕ್ಕೂ  ಪ್ರಾಯೋಜಕತ್ವ ವಹಿಸಿರಬಹುದೆನ್ನುವ ಅನುಮಾನಗಳನ್ನು ಅಲ್ಲಗೆಳೆಯುವಂತಿಲ್ಲ. ಮಂಜುನಾಥ್‌ ಹಣ ಖರ್ಚು ಮಾಡಿದ್ದರೆ ಅದಕ್ಕೆ ಎಲ್ಲಿಂದ ದುಡ್ಡು ಬಂತು ಎನ್ನುವುದು ಮೊದಲ ಪ್ರಶ್ನೆಯಾದರೆ, ಕೈಗಾರಿಕೆಗಳ ಮಾಲೀಕರೇ ಈ ಬಾಡೂಟಕ್ಕೆ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆನ್ನುವುದಾದ್ರೆ ಆ ಮಾಲೀಕರಿಗೂ ಮಂಜುನಾಥ್‌ ಗೂ ಎಲ್ಲಿಯ ಸಂಬಂಧ..ಅವರೇಕೆ ಮಂಜುನಾಥ್‌ ಅವರ ಖಾಸಗಿ ಕಾರ್ಯಕ್ರಮಕ್ಕೆ ಹಣ ಕೊಡಬೇಕೆನ್ನುವ ಪ್ರಶ್ನೆಯೂ ಕಾಡುತ್ತದೆ.ಕೈಗಾರಿಕೆಗಳ ಮಾಲೀಕರ ಜತೆಗಿನ ಮಂಜುನಾಥ್‌ ಸಂಬಂಧದ ಬಗ್ಗೆಯೂ ತನಿಖೆ ನಡೆಯಬೇಕಾಗುತ್ತದೆ.

ALSO READ :  ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

ಅಕ್ರಮ ಸಹಿಸದ ದಕ್ಷ ಅಧಿಕಾರಿ ಗೋಕುಲ್‌ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ,,?ಒಂದೊಮ್ಮೆ ಮಾಹಿತಿ ಇದ್ದಿದ್ದೇ ಆದರೆ ಕ್ರಮಕ್ಕೇಕೆ ಮುಂದಾಗುತ್ತಿಲ್ಲ..!? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತುಂಬಾ ವರ್ಷಗಳಾದ ಮೇಲೆ ದಕ್ಷ ಸದಸ್ಯ ಕಾರ್ಯದರ್ಶಿ ಬಂದಿದ್ದಾರೆನ್ನುವುದರಲ್ಲಿ ಅನುಮಾನವಿಲ್ಲ. ಹಿಂದಿದ್ದ ಸದಸ್ಯ ಕಾರ್ಯದರ್ಶಿಗಳಲ್ಲಿ ಬಹುತೇಕರು ವ್ಯವಸ್ಥೆಯ ಅಡಿಯಾಳಾಗಿದ್ದರು,ಇಲ್ಲವೇ ಅಧ್ಯಕ್ಷರ ಅಣತಿ ತಕ್ಕಂತೆ ನಡೆಯುತ್ತಿದ್ದರೆನ್ನುವ ಆಪಾದನೆಗೆ ಸಿಲುಕಿದ್ದರು.ಆದರೆ ಇದೆಲ್ಲಕ್ಕೂ ಅಪವಾದ ಎನ್ನುವಂತೆ ಗೋಕುಲ್‌ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ದಕ್ಷತೆ ಹಾಗೂ ಖಡಕ್‌ ಆಗಿ  ಕೆಲಸ ಮಾಡುತ್ತಿದ್ದಾರೆ.ಮಂಡಳಿಯ ಆಡಳಿತ ಮಾಲಿನ್ಯ ಸ್ವಚ್ಛತೆಗಾಗಿ ದುಡಿಯುತ್ತಿದ್ದಾರೆ.ಆದರೆ ಅವರ ಕಣ್ತಪ್ಪಿಸಿ ಏನೇನೋ ನಡೆಯುತ್ತಿದೆ.ಹಾಗೆಂದಾಕ್ಷಣ ಗಮನಕ್ಕೆ ಬಂದಂಥ ಅಕ್ರಮಗಳ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎಂದೇನಲ್ಲ.ಯಾರ ಬಗ್ಗೆಯೇ ಆಪಾದನೆ ಬಂದರೂ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.ರಾಮನಗರದ ಈ ಅವತಾರ ಪುರುಷ-ಮರ್ಯಾದ ಪುರುಷೋತ್ತಮ ಮಂಜುನಾಥ ಅವರ ಕರ್ಮಕಾಂಡ-ಮೋಜು ಮಸ್ತಿ ಮಾಹಿತಿ ಬಹುಷಃ ಅವರಿಗೆ ಗೊತ್ತಿರಲಿಕ್ಕಿಲ್ಲವೇನೋ..ಗೊತ್ತಾಗಿದ್ದರೆ ಇಷ್ಟೊತ್ತಿಗಾಗಲೇ ಮಂಜುನಾಥ್‌ ವಿರು‍ದ್ದ ತನಿಖೆಗೆ ಆದೇಶಿಸಿಬಿಡುತ್ತಿದ್ದರೇನೋ.,.ಯಾರೊಬ್ಬರೂ ತಿಳಿಸದಿದ್ದರೂ ಪರ್ವಾಗಿಲ್ಲ..ಕನ್ನಡ ಫ್ಲ್ಯಾಶ್‌ ನ್ಯೂಸ್‌  ಗೋಕುಲ್‌ ಅವರ ಗಮನಕ್ಕೆ ಮೇಲ್ಕಂಡ ವಿಷಯವನ್ನು ತರುತ್ತಿದೆ.ತರುವುದಷ್ಟೇ ಅಲ್ಲ ಅದರ ಬಗ್ಗೆ ಕ್ರಮ ಆಗುವವರೆಗೂ ಸುಮ್ಮನೆ ಕೂರುವಂತೆ ಮಾಡೊಲ್ಲ.ಇದು ನಿಶ್ಚಿತ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಗೋಕುಲ್
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಗೋಕುಲ್

ಸಚಿವ ರಾಮಲಿಂಗಾರೆಡ್ಡಿ ಅವರೇ ಮಂಡಳಿಯಲ್ಲಿ ಇಂಥ ಅನೇಕ ಅವ್ಯವಸ್ಥೆ-ಅಕ್ರಮಗಳಿವೆ..ಭ್ರಷ್ಟ ಅಧಿಕಾರಿ ಸಿಬ್ಬಂದಿಯಿದ್ದಾರೆ  ನೆನಪಿರಲಿ:ಸಚಿವ ರಾಮಲಿಂಗಾರೆಡ್ಡಿ ಅವರು ಅರಣ್ಯ ಹಾಗೂ  ಪರಿಸರ ಸಚಿವರಾಗುತ್ತಿದ್ದಂತೆ  ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ.ಬಹುಷಃ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಒಂದರಲ್ಲೇ ಸಾಲು ಸಾಲು ಹಗರಣಗಳು ಕಾಣಸಿಗಬಹುದೇನೋ..? ಆದರೆ ಯಾರೇ ಸಚಿವರಾಗಿ ಬರಲಿ, ಮೊದಲಿದ್ದ ಆಸಕ್ತಿ-ಕಾಳಜಿಯನ್ನು ನಂತರದ ದಿನಗಳಲ್ಲಿ ಮರೆತೇ ಬಿಡ್ತಾರೆ.ರಾಮಲಿಂಗಾರೆಡ್ಡಿ ಅಂಥವರ ಸಾಲಿಗೆ ಸೇರಿಬಿಡ್ತಾರಾ ಗೊತ್ತಿಲ್ಲ.. ಮಂಡಳಿಯಲ್ಲಿ ಅಕ್ರಮ-ಭ್ರಷ್ಟಾಚಾರ ತಾಂಡವವಾಡುತ್ತಿದೆ.ಕಮಿಷನ್-ಕಿಕ್‌ ಬ್ಯಾಕ್-ಪರ್ಸಂಟೇಜ್‌ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.ಕೆಲ ಅಧಿಕಾರಿಗಳು ಆಯಕಟ್ಟಿನ ಸ್ಥಳದಲ್ಲಿ ಅನೇಕ ವರ್ಷಗಳಿಂದ ಗೂಟಾ ಹೊಡೆದುಕೊಂಡಿದ್ದಾರೆ.ಅವರನ್ನು ಅಲುಗಾಡಿಸಲು ಆಗುತ್ತಲೇ ಇಲ್ಲ.ಅವರೆಲ್ಲಾ ಸಚಿವರು-ಅಧ್ಯಕ್ಷರು-ಸದಸ್ಯ ಕಾರ್ಯದರ್ಶಿಗಳನ್ನೇ ಮೆಂಟೇನ್‌ ಮಾಡುವಂಥ ಕೆಪಾಸಿಟಿ ಹೊಂದಿದ್ದಾರೆ.

ರಾಮಲಿಂಗಾರೆಡ್ಡಿ ಮಾಡಬೇಕಿರುವುದು ಅದನ್ನೇ..ಆದರೆ ಕೆಲವು ಪ್ರಾದೇಶಿಕ ಕಚೇರಿಗಳಲ್ಲಿರುವ ಮುಖ್ಯ ಪರಿಸರಾಧಿಕಾರಿ, ಪರಿಸರಾಧಿಕಾರಿಗಳು ಈಗಾಗಲೇ ರಾಮಲಿಂಗಾರೆಡ್ಡಿ ಅವರನ್ನು ಎಲ್ಲಿ ಮ್ಯಾನೇಜ್‌ ಮಾಡಬೇಕೋ ಅಲ್ಲಿ ಮ್ಯಾನೇಜ್‌ ಮಾಡಿದ್ದೇವೆ..ಅವರು ನಮ್ಮ ತಂಟೆಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರಂತೆ.ಹಿಂದಿದ್ದ ಕೆಲವರಿಗೆ ಮಂತ್ಲಿ…ಇಯರ್ಲಿ…ಮೀಟಿಂಗ್‌ ಆಧಾರದಲ್ಲಿ  ಸಲ್ಲಿಸಲಾಗುತ್ತಿದ್ದ ಕಪ್ಪವನ್ನೇ ರೆಡ್ಡಿ ಅವರಿಗೂ  ಸಲ್ಲಿಸುತ್ತೇವೆ ಅಂದ ಮೇಲೆ ಪ್ರಾಬ್ಲಮ್‌ ಏನು ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ.ಕೆಲವು ಖತರ್ನಾಕ್‌ ಅಧಿಕಾರಿಗಳು ಹೇಳುವಂತೆಯೇ ನಡೆದೋದ್ರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತ ಮತ್ತಷ್ಟು ಎಕ್ಕೂಟ್ಟಿ ಹೋಗುವುದರಲ್ಲಿಅನುಮಾನವಿಲ್ಲ..ರಾಮಲಿಂಗಾರೆಡ್ಡಿ ಹಿಂದೆಲ್ಲೂ ಹೀಗೆ ಹೆಸರು ಕೆಡಿಸಿಕೊಂಡವರಲ್ಲ..ಅವರಿಗೂ ಈ ಸೂಕ್ಷ್ಮಗಳು ಅರ್ಥವಾಗುವುದಿಲ್ಲ ಎಂದೇನಲ್ಲ.ಯಾರನ್ನು ಎಲ್ಲಿ ಇಡಬೇಕೋ..ಹೇಗೆ ನಡೆಸಿಕೊಳ್ಳಬೇಕೋ ಎನ್ನುವುದನ್ನು ಪೊಲಿಟಿಕಲ್‌ ಕೆರಿಯರ್‌ ನಲ್ಲಿ ಚನ್ನಾಗಿ ಕರಗತ ಮಾಡಿಕೊಂಡಿರುವುದರಿಂದ ಈ ಅಪಾಯ ಎದುರಾಗುವುದು ಸ್ವಲ್ಪ ಕಷ್ಟ ಎನಿಸುತ್ತಿದೆ.

ಮಂಜುನಾಥ್‌ ಗೆ ಮಂಡಳಿಯಲ್ಲಿದೆಯಂತೆ ಕೆಲವರ ಶ್ರೀರಕ್ಷೆ: ಮಂಜುನಾಥ್‌ ಅವರ ಭರ್ಜರಿ ಬಾಡೂಟದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭವಾದಾಗಿನಿಂದ ಮಾಡುತ್ತಿರುವ ಕೆಲಸ ಮಂಡಳಿಯಲ್ಲಿರುವ ಕೆಲವರ ಮ್ಯಾನೇಜ್‌.ತನ್ನ ವಿರುದ್ದ ಕ್ರಮ ಕೈಗೊಳ್ಳಲಿರುವ ವಿಭಾಗಗಳಲ್ಲಿರುವವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಶುರು ಮಾಡಿದ್ದಾರಂತೆ.ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳ ಕೆಂಗಣ್ಣಿನಿಂದ ಬಚಾವಾಗಲು ಪ್ರಯತ್ನ ಮಾಡ್ತಿದ್ದಾರಂತೆ.ಏಕೆಂದರೆ ಮಂಜುನಾಥ್‌ ವಿರುದ್ಧ ಭ್ರಷ್ಟಾಚಾರ-ಅಕ್ರಮದ ಸಾಕಷ್ಟು ಆಪಾದನೆ ಇರುವ ಹಿನ್ನಲೆಯಲ್ಲಿಯೇ ನಿವೃತ್ತಿ ದಿನದಂದೇ ಚಾರ್ಜ್‌ ಶೀಟ್‌ ಕೂಡ ನೀಡಿ ಇದಕ್ಕೆ ಸ್ಪಷ್ಟನೆ ನೀಡುವಂತೆಯೂ ಆದೇಶಿಸಲಾಗಿದೆಯಂತೆ.ತನ್ನ ಯಡವಟ್ಟುಗಳಿಂದಲೇ ಅಕ್ಷರಶಃ ಅಡಕತ್ತರಿಗೆ ಸಿಲುಕಿರುವ ಮಂಜುನಾಥ್‌ ತನ್ನ ಬೆನ್ನಿಗೆ ಅಧ್ಯಕ್ಷರಿದ್ದಾರೆ..ಸದಸ್ಯ ಕಾರ್ಯದರ್ಶಿಯಿದ್ದಾರೆ.ಅವರಿಗೆ ಯಾರಿಂದ ಹೇಳಿಸಬೇಕೋ ಅವರಿಂದಲೇ ಹೇಳಿಸುವ ಕೆಲಸ ಮಾಡುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರಂತೆ.ಇದರ ಬಗ್ಗೆಯೂ ಮಂಡಳಿಯ ಆಡಳಿತ ಎಚ್ಚೆತ್ತುಕೊಳ್ಳಲೇಬೇಕಿದೆ.

ಅದೇನೇ ಆಗಲಿ ಸರ್ಕಾರಿ ನಿಯಮಗಳನ್ನು ಪಾಲಿಸಬೇಕೆನ್ನುವ ವಿವೇಕ,ವಿವೇಚನೆ ಹಾಗೂ ಪರಿಜ್ಞಾನ ಎಲ್ಲವೂ ಹಿರಿಯ ಹಾಗೂ ಅನುಭವಿಯಾದ ಮಂಜುನಾಥ್‌ ಅವರಿಗೆ ಇರಬೇಕಿತ್ತು.ಒಂದು ವೇಳೆ ಪಾಲನೆಯಾಗದಿದ್ದರೆ ಅದರ ದುಷ್ಪರಿಣಾಮ ಏನಾಗಬಹುದೆನ್ನುವ ಸಣ್ಣ ಸೂಕ್ಷ್ಮವೂ ಅವರಿಗೆ ಇರಬೇಕಿತ್ತು.ಆದರೆ ಅದೇನ್‌ ಆಗ್ತದೋ ನಾನೂ ನೋಡಿಕೊಳ್ಳುತ್ತೇನೆ, ಯಾರನ್ನು ಮ್ಯಾನೇಜ್‌ ಮಾಡಬೇಕೋ..ಅವರನ್ನುಮ್ಯಾನೇಜ್‌ ಮಾಡ್ತೇನೆನ್ನುವಹುಂಭತನಕ್ಕೆ ಬಿದ್ದು ಈಗ ರಂಪ-ರಾಮಾಯಣ ಮಾಡಿಕೊಂಡಿದ್ದಾರೆ.ಈಗಾಗಲೇ ಕೆಲವು ಆಪಾದನೆಗಳಿಗಾಗಿ ಚಾರ್ಜ್‌ ಶೀಟ್‌ ಕೂಡ ಪಡೆದಿರುವ ಮಂಜುನಾಥ್‌ ಅವರಿಗೆ ಈ ಭರ್ಜರಿ ಬಾಡೂಟ ಮತ್ತೊಂದು ದೊಡ್ಡ ಸಂಕಷ್ಟ ಸೃಷ್ಟಿಸಿದ್ರೂ ಆಶ್ಚರ್ಯವಿಲ್ಲ.


Leave a Comment