
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ನಿರ್ದೇಶಕ ಹಾಗೂ ತಂತ್ರಜ್ಞ ವಿ. ರವಿಚಂದ್ರನ್ ಅವರಿಗೆ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶಗಳು ದಟ್ಟವಾಗಿವೆ. ಕಾಂಗ್ರೆಸ್ ಹೈಕಮಾಂಡ್ ರವಿಚಂದ್ರನ್ ಅವರ ನಾಮನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಇನ್ನಿಬ್ಬರಿಗೂ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ಬಹುತೇಕ ನಿಕ್ಕಿಯಾಗಿದೆಯಂತೆ.
ಇತ್ತೀಚೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರವಿಚಂದ್ರನ್ ಅವರ ನಡುವೆ ಒಂದಷ್ಟು ಸುತ್ತಿನ ಮಾತುಗಳು ಮಾತುಕತೆಗಳು ನಡೆದಿದ್ದರ ಇಂದಿನ ರಹಸ್ಯವೇನು ಎನ್ನುವುದು ಈ ನಾಮನಿರ್ದೇಶನದಿಂದ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಾಲ್ಯ ಸ್ನೇಹಿತ ಹಾಗೂ ಸಹಪಾಠಿಯು ಆಗಿರುವ ರವಿಚಂದ್ರನ್ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವ ಇಂಗಿತವನ್ನು ಈ ಹಿಂದೆಯೇ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದ್ದರಂತೆ. ಆದರೆ ಅಧಿಕಾರ ಹಾಗೂ ಸ್ಥಾನಮಾನಗಳ ಬಗ್ಗೆ ಯಾವತ್ತು ತಲೆಕೆಡಿಸಿಕೊಳ್ಳದೆ, ತಾನಾಯ್ತು ,ತನ್ನ ಚಿತ್ರಗಳಾಯ್ತು ಎಂದು ನಿರ್ಲಿಪ್ತ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ ರವಿಚಂದ್ರನ್ ಅವರು ಡಿಕೆ ಶಿವಕುಮಾರ್ ಅವರ ಪ್ರಸ್ತಾವನೆಯನ್ನು ಹಾಗೂ ಆಸೆಗೆ ಸೊಪ್ಪಾಕಿರಲಿಲ್ಲವಂತೆ.

ಆದರೂ ಕನ್ನಡ ಚಿತ್ರರಂಗ ಇಂದು ಎದುರಿಸುತ್ತಿರುವ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ ಸಾಮರ್ಥ್ಯ ಇರುವ ನಟರಲ್ಲಿ ನೀವು ಕೂಡ ಒಬ್ಬರು ಯಾವುದೇ ಕಾರಣಕ್ಕೂ ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಡಿ ಎಂದು ಡಿಕೆ ಶಿವಕುಮಾರ್ , ರವಿಚಂದ್ರನ್ ಅವರನ್ನು ಮನವೊಲಿಸಿದ್ದರಂತೆ. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ರವಿಚಂದ್ರ ಕೊನೆಗೂ ಪರಿಷತ್ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಜಲಂತ ಸಮಸ್ಯೆಗಳನ್ನು ಪರಿಷತ್ತಿನಲ್ಲಿ ಪ್ರತಿನಿಧಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಿ ಕೊಡುವಂತ ಪ್ರಾಮಾಣಿಕ ಪ್ರಯತ್ನವನ್ನು ಅವರಿಂದ ನಿರೀಕ್ಷಿಸಬಹುದು ಎನ್ನುವ ಅಭಿಪ್ರಾಯ ಕನ್ನಡ ಚಿತ್ರರಂಗದ್ದು. ಹಾಗಾಗಿ ರವಿಚಂದ್ರನ್ ಅವರ ನೇಮಕ ಪ್ರಸ್ತುತ ಹಾಗೂ ಅರ್ಹ ಎಂದು ಹೇಳಲಾಗುತ್ತಿದೆ.
ಇನ್ನುಳಿದ ಎರಡು ಸ್ಥಾನಗಳಿಗೆ ಕಾಂಗ್ರೆಸ್ ನ ಹಿರಿಯ ಮಹಿಳಾ ಮುಖಂಡರು ಹಾಗೂ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಮಂಜುಳಾ ನಾಯ್ಡು ಅವರನ್ನು ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುವ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯತೆ ಸಿಗುವ ವಿಚಾರದಲ್ಲಿ ಮಂಜುಳಾ ನಾಯ್ಡು ಮಾಡಿರುವ ಕೆಲಸವನ್ನು ಹೈಕಮಾಂಡ್ ಪರಿಗಣಿಸಿ ಅವರ ನಾಮ ನಿರ್ದೇಶನದ ಪ್ರಸ್ತಾವನೆಯನ್ನು ಪುರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಹಿರಿಯ ಪತ್ರಕರ್ತ ಕೆವಿ ಪ್ರಭಾಕರ್ ಅವರಿಗೂ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ಬಳಗದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿದ್ದ ಕೆ ವಿ ಪ್ರಭಾಕರ್, ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಜಾತಿವಾರು ವಿಚಾರದಲ್ಲಿ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಕೆವಿ ಪ್ರಭಾಕರ್ ಅವರನ್ನು ನಾಮನಿರ್ದೇಶನ ಮಾಡುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ನಿರ್ಣಾಯಕ ಅಂತ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶೀಘ್ರವೇ ತೆರವಾಗಲಿರುವ ಮೂರು ಸ್ಥಾನಗಳಿಗೆ ಈ ಮೂವರನ್ನು ನಾಮನಿರ್ದೆಶನ ಮಾಡುವ ಹೆಬ್ಬಯಕೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎನ್ನಲಾಗುತ್ತಿದ್ದು, ಘೋಷಣೆಯೊಂದೇ ಬಾಕಿ ಇದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತದೆ.
