
ಬೆಂಗಳೂರು:ಭಿನ್ನಮತ-ಅಸಮಾಧಾನ-ಅತೃಪ್ತಿಯ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್ ನ ಮುಖಂಡರುಗಳು ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ.ಈಗ ಅದರ ಸರದಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರದು.ಶಾಸಕರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಗಂಭೀರ ಆಪಾದನೆ ಕೇಳಿಬಂದಿದ್ದು ತಮ್ಮ ಸುಪರ್ದಿಯಲ್ಲಿರುವ ಆಸ್ತಿ ವಿವರಗಳನ್ನೇ ಶಾಸಕರು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಡ್ ನಲ್ಲಿ ಮರೆ ಮಾಚಿದ್ದಾರೆ ಎನ್ನುವುದು ಅವರ ವಿರುದ್ಧದ ಆರೋಪ.ಈ ಆರೋಪದ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ಕೂಡ ದಾಖಲಾಗಿದೆ.

ಅಂದ್ಹಾಗೆ ಮೈಸೂರಿನಲ್ಲಿರುವ ಎರಡು ಸ್ವತ್ತುಗಳ ಮಾಲೀಕರು ರಮೇಶ್ ಬಂಡಿಸಿದ್ದೇಗೌಡ ಅವರೇ ಆಗಿದ್ದರೂ, 2023ರ ಚುನಾವಣೆಯಲ್ಲಿ ಸ್ಪರ್ದಿಸುವ ವೇಳೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಸಾಕಷ್ಟು ಸತ್ಯಾಂಶ ಮರೆ ಮಾಡಿದ್ದರು ಎನ್ನುವುದು ದೂರುದಾರರ ಆಪಾದನೆ.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಗಾದಿಯಲ್ಲಿರುವ ಒಂದು ಆಸ್ತಿಯು 2007 ರಿಂದಲೂ ಶಾಸಕರ ಸ್ವಾಧೀನದಲ್ಲೇ ಇದೆ.ಆದರೂ ಅದರ ಉಲ್ಲೇಖವನ್ನು ಅವರು ಮಾಡಿಯೇ ಇಲ್ಲವಂತೆ. ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125(ಎ) ಪ್ರಕಾರ ಇದು ಅಕ್ಷಮ್ಯ ಅಪರಾಧವಾಗಿದೆ ಎಂಬುದು ದೂರುದಾರರ ಆಪಾದನೆ.

ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತರಾದ ಆದಿ ಸಾಗರ್ ಎನ್ನುವವರು ಇಂದು ವಕೀಲರಾದ ಉಮಾಪತಿ, ಸುಧಾ ಕಾಟ್ವಾ ಮತ್ತು ಸಾಮಾಜಿಕ ಕಾರ್ಯಕರ್ತರಾದ ನರಸಿಂಹಮೂರ್ತಿ ಅವರ ನೆರವಿನಿಂದ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.ಶಾಸಕರು ಮರೆ ಮಾಚಿರುವ ಆ ಎರಡು ಪ್ರಾಪರ್ಟಿಗಳ ಮಾರುಕಟ್ಟೆ ಮೌಲ್ಯ ಇವತ್ತಿಗೆ ಬರೋಬ್ಬರಿ 15 ಕೋಟಿ ಎಂದು ಹೇಳಲಾಗುತ್ತಿದೆ.ಇದಿಷ್ಟೇ ಅಲ್ಲ ಅವರ ಅಕ್ರಮ-ಭ್ರಷ್ಟಾಚಾರದ ಆಪಾದನೆಗಳು ಕೂಡ ಕೇಳಿಬಂದಿದ್ದು ಇದರ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಇದಕ್ಕೆ ಚುನಾವಣಾಧಿಕಾರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಉಮಾಪತಿ ಹೇಳಿದ್ದಾರೆ.ಇದರ ಬಗ್ಗೆ ತನಿಖೆ ನಡೆಯದಿದ್ದಲ್ಲಿ ಕೇಂಧ್ರ ಚುನಾವಣಾ ಆಯೋಗ ಹಾಗೂ ಕೋರ್ಟ್ ನ ಆಶ್ರಯ ಪಡೆಯಬೇಕಾಗ್ತದೆ ಎಂದು ಎಚ್ಚರಿಸಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ಆದಿಸಾಗರ್,ರಮೇಶ್ ಬಂಡಿಸಿದ್ದೇಗೌಡ ಅವರು ಜನಪ್ರತಿನಿಧಿಯಾಗಿ ಹೀಗೆ ನಡೆದುಕೊಂಡಿರುವುದು ಸರಿಯಲ್ಲ.ತಮ್ಮ ಸುಪರ್ದಿಯಲ್ಲಿ ಆಸ್ತಿಗಳಿದ್ದರೂ ಅದಕ್ಕೂ ನನಗೂ ಸಂಬಂಧವೇ ಇಲ್ಲದಂತಿದ್ದಾರೆ.ಬೇನಾಮಿಯೋರ್ವರ ಮೂಲಕ ಅದನ್ನು ಎಂಜಾಯ್ ಮಾಡುತ್ತಿದ್ದಾರೆ.ಅಕ್ರಮವಾಗಿ ಆ ಸ್ವತ್ತಿಗೆ ಖಾತೆಯನ್ನು ಮಾಡಿಸಿಕೊಂಡಿದ್ದಾರೆ.ಮೂಡಾ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.ಅಷ್ಟೇ ಅಲ್ಲ ಶಾಸಕರ ಅಕ್ರಮ ಸಂಪಾದನೆಯ ಸಾಕಷ್ಟು ಮಾಹಿತಿಗಳು ನಮಗೆ ಲಭ್ಯವಾಗಿದ್ದು ಅದರ ಸಮಗ್ರ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಯಲು ಮಾಡುವುದಾಗಿ ಹೇಳಿದ್ದಾರೆ.

ಆದರೆ ಶಾಸಕರು ತಮ್ಮ ಆಪ್ತ ವಲಯದಲ್ಲಿ ಇದನ್ನೆಲ್ಲಾ ನಿರಾಕರಿಸಿದ್ದಾರೆ.ನಾನು ಯಾವುದೇ ಆಸ್ತಿ ವಿವರವನ್ನು ಮರೆ ಮಾಚಿಲ್ಲ.ಈ ಬಗ್ಗೆ ಎಂಥಾ ತನಿಖೆಯಾದರೂ ಅದನ್ನು ಎದುರಿಸಲು ಸಿದ್ದ ಎಂದಿದ್ದಾರಂತೆ.ಅದೇನೇ ಆಗಲಿ ಕೈ ಶಾಸಕರ ವಿರುದ್ಧದ ಈ ಆಪಾದನೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿರುವುದಂತೂ ಸತ್ಯ.ಈ ಬಗ್ಗೆ ರಾಜ್ಯನಾಯಕರು ವಿವರಣೆ ಕೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
