ಇದು… ಕನ್ನಡ ಸುದ್ದಿ ಚಾನೆಲ್ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್ ಚಾನೆಲ್ ವೊಂದರ ಬೆಳವಣಿಗೆ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯ ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ ಸುದ್ದಿಜಗತ್ತಿನಲ್ಲಿ ಪಸರ್ ಆಗಿದೆ.

ಆರ್ಥಿಕವಾಗಿ ಆ ಡಿಜಿಟಲ್ ಚಾನೆಲ್ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. ನೀಯತ್ತಾಗಿ ಮಾಡಿದ ಕೆಲಸಕ್ಕೆ ಕೂಲಿ ಕೊಡದೆ ಸತಾಯಿಸುತ್ತಿದೆ ಎನ್ನಲಾಗಿರುವ ಆಡಳಿತ ಮಂಡಳಿ ಕ್ರಮದ ವಿರುದ್ದ ನೊಂದ ಸಿಬ್ಬಂದಿ “ದೊಡ್ಡವರ” ಬಳಿ ತಮ್ಮ ಅಳಲು ತೋಡಿಕೊಳ್ಳಲು ನಿರ್ದರಿಸಿದ್ದಾರೆನ್ನುವ ವರ್ತಮಾನವಿದೆ.
ಯೆಸ್…ಕನ್ನಡ ಫ್ಲ್ಯಾಶ್ ನ್ಯೂಸ್ ಹೇಳಲು ಹೊರಟಿರುವ ಸುದ್ದಿ “ಸಂಪೂರ್ಣ” ಎನ್ನುವ ಡಿಜಿಟಲ್ ಚಾನೆಲ್ ಬಗ್ಗೆ….ಮಹಿಳೆಯೋರ್ವರು ನಡೆಸುತ್ತಿರುವ ಮೊದಲ ಚಾನೆಲ್ ಎನ್ನುವ ಹೆಗ್ಗಳಿಕೆ ಹೊಂದಿರುವ ಈ ಚಾನೆಲ್ ನ ಮುಖ್ಯಸ್ಥೆ ಸಂಪೂರ್ಣಗೌಡ.ಒಂದಷ್ಟು ಪಾಸಿಟಿವ್ ಆದ ಅಭಿಪ್ರಾಯಗಳು ಚಾನೆಲ್ ಬಗ್ಗೆ ಇವೆ.ದೊಡ್ಡವರೊಬ್ಬರ ಶ್ರೀರಕ್ಷೆ ಸಿಕ್ಕಮೇಲಂತೂ ಅತ್ಯದ್ಭುತವಾಗಿ ಮೂಡಿಬರುತ್ತಿದೆ ಎನ್ನುವ ಪಾಸಿಟಿವ್ ಟಾಕ್ಸ್ ಬಂದದ್ದು ಸುಳ್ಳಲ್ಲ..

ಅವರ ಸಹಾಯದಿಂದಲೇ ಸಂಪೂರ್ಣ ಇನ್ನೇನು ಸ್ಯಾಟಲೈಟ್ ಚಾನೆಲ್ ಆಗಿ ಹೊರಹೊಮ್ಮುತ್ತೆ ಎನ್ನುವ ಮಾತುಗಳಿದ್ವು.ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದ್ದವಂತೆ.ಡೇಟ್ ಕೂಡ ಫಿಕ್ಸ್ ಮಾಡಿಕೊಳ್ಳಲಾಗಿತ್ತಂತೆ.ಈ ಎಲ್ಲಾ ವಿಚಾರಗಳ ನಡುವೆಯೇ ಒಂದಷ್ಟು ಮಾದ್ಯಮ ಮಿತ್ರರು ನಮ್ಮ ಸಂಬಳ ತಡೆಹಿಡಿಯಲಾಗಿದೆ ಎನ್ನುವ ವರಾತ ತೆಗೆದಿದ್ದಾರಂತೆ.. ನಿಮ್ಮ ಸಹವಾಸವೇ ಬೇಡ, ನಮ್ಮ ಸಂಬಳ ಕೊಟ್ಟುಬಿಡಿ ಎಂದು ಮ್ಯಾನೇಜ್ಮೆಂಟ್ ಜತೆ ವಾಗ್ವಾದಕ್ಕಿಳಿದಿದ್ದಾರೆನ್ನುವ ಮಾತುಗಳಿವೆ.
ಶ್ರೀಮತಿ ಸಂಪೂರ್ಣಗೌಡ ನೇತೃತ್ವದಲ್ಲಿ ಮೂಡಿಬರುತ್ತಿರುವ ಡಿಜಿಟಲ್ ಚಾನೆಲ್‌ಗೆ ಬಹುತೇಕ. ಒಳ್ಳೆಯ ಸಂಬಳ ಕೊಟ್ಟು ಮಾದ್ಯಮ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು.ಒಂದಷ್ಟು ತಿಂಗಳು ನಿಯತವಾಗಿಯೇ ಸಂಬಳ ಕೊಡಲಾಗ್ತಿತ್ತಂತೆ.ಸಿಬ್ಬಂದಿ ಕೂಡ ಖುಷಿ ಖುಷಿಯಿಂದಲೇ ಕೆಲಸ ಮಾಡ್ತಿದ್ದರಂತೆ.ಸ್ಯಾಟಲೈಟ್ ಚಾನೆಲ್ ಆಗಿ ಬಿಡ್ತದೆ ಎನ್ನುವ ಸುದ್ದಿ ಹಬ್ಬಿದಾಗಿನಿಂದಲಂತೂ ಕೆಲಸಗಳು ಚುರುಕಾಗಿ ನಡೆಯುತ್ತಿದ್ದವಂತೆ.ಇದಕ್ಕಾಗಿ ಎಲ್ಲಾ ಸಿದ್ದತೆಗಳು ಬಿರುಸಿನಿಂದಲೇ ನಡೆಯುತ್ತಿದ್ದವಂತೆ. ಸ್ಯಾಟಲೈಟ್ ಆದ್ಮೇಲೆ ಎಲ್ಲರ ಸಂಬಳಗಳು ಹೆಚ್ಚಾಗಲಿವೆ ಎಂದು ಹೇಳಲಾಗಿತ್ತಂತೆ.ಆದರೆ ಇದೀಗ ಶಾಕಿಂಗ್ ಎನ್ನುವಂತೆ, ಮಾದ್ಯಮ ಸಿಬ್ಬಂದಿಗೆ ಕಳೆದ ತಿಂಗಳ ಸಂಬಳವನ್ನೇ ನೀಡಲಾಗಿಲ್ಲ ಎನ್ನುವ ಅಘಾತಕರ ಸುದ್ದಿ ಹೊರಬಿದ್ದಿದೆ.ಸ್ಯಾಟಲೈಟ್ ಗಿಂತ ಮುನ್ನವೇ ಈ ಹಣೆಬರಹ, ಸ್ಯಾಟಲೈಟ್ ಆದ್ಮೇಲೆ ಇನ್ನೇನೋ ಎಂದು ಅನೇಕ ಸಿಬ್ಬಂದಿ ಮಾತನಾಡಿಕೊಳ್ತಿದಾರಂತೆ.

ಯಾವುದೇ ಮ್ಯಾನೇಜ್ಮೆಂಟ್ ಬಗ್ಗೆ ಎಲ್ಲಾ ಚಾನೆಲ್ ಗಳಲ್ಲಿನ ಸಿಬ್ಬಂದಿಯ ಮನಸ್ತಿತಿ “ಮ್ಯಾನೇಜ್ಮೆಂಟ್ ಎನಿಸಿಕೊಂಡವು ಏನೇ ಮಾಡಿಕೊಳ್ಳಲಿ,ಹೇಗೆ ಬೇಕಾದ್ರೂ ಚಾನೆಲ್ ನಡೆಸಲಿ, ಯಾವ್ ಮೂಲಗಳಿಂದ ಬೇಕಾದ್ರೂ ದುಡ್ಡು ಮಾಡಿಕೊಳ್ಳಲಿ,ಅದು ನಮಗೆ ಅಪ್ರಸ್ತುತ.ನಮಗೆ ಬೇಕಿರುವುದು ನಮ್ಮ ದುಡಿಮೆಯ ಸಂಬಳ.ಸುದ್ದಿಮನೆಗಳಲ್ಲಿ ಕುತ್ಕೊಂಡು ನಿಗಧಿಗಿಂತ ಹೆಚ್ಚು ಸಮಯ ಕೆಲಸ ಮಾಡುವ ನಮಗೆ ನಮ್ಮ ಬೆವರಿನ ಸಂಬಳವನ್ನು ನಿರ್ದಿಷ್ಟ ದಿನಾಂಕದಂದು ಕೊಟ್ಟುಬಿಡಿ ಎನ್ನುವಂತಿರುತ್ತದೆ.ಇದು ಸತ್ಯವೂ ಬಿಡಿ,
ಏಕೆಂದ್ರೆ ಫೀಲ್ಡ್ ನಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರದು ಒಂದ್ ರೀತಿ ಬವಣೆಯಾದ್ರೆ ಸುದ್ದಿಯನ್ನು ರೂಪಿಸಿ ಅದನ್ನು ವೀಕ್ಷಕರಿಗೆ ತಲುಪಿಸುವ ಸುದ್ದಿಮನೆಯೊಳಗಿನ ಸುದ್ದಿಮಿತ್ರರ ಕಷ್ಟ ಇನ್ನೊಂದ್ ರೀತಿಯದಿರುತ್ತೆ.ಆದ್ರೆ ಎಲ್ಲಾ ಮಾಡೋದು ಕೂಡ ತಿಂಗಳ ದುಡಿಮೆಗೆ ಅಲ್ವೇ..ಅದನ್ನು ನೀಡಬೇಕಿರುವುದು ಮ್ಯಾನೇಜ್ಮೆಂಟ್ ಗಳ ಕರ್ತವ್ಯ, ಹೊಣೆಗಾರಿಕೆ ಹಾಗೆಯೇ ಬದ್ದತೆ ಕೂಡ.ಆದರೆ ಸಂಬಳ ಕೊಡಲು ಸತಾಯಿಸುವುದು ಅಮಾನವೀಯ ಅಷ್ಟೇ ಅಲ್ಲ ಅನಾಗರಿಕತೆಯೂ ಹೌದು.
ಆರ್ ಟಿ ನಗರದ ಮೇಕ್ರಿ ಸರ್ಕಲ್ ವ್ಯಾಪ್ತಿಯಲ್ಲಿ ಸಂಪೂರ್ಣ ಟಿವಿ ಕೆಲಸ ಮಾಡುತ್ತಿದೆ.ಆರಂಭದಲ್ಲಿ 60 ಜನ ಕೆಲಸ ಮಾಡುತ್ತಿದ್ದರಂತೆ.ಈಗ ಅದರ ಸಂಖ್ಯೆ 20ಕ್ಕೆ ಕುಸಿದಿದೆ.ಈ ಕುಸಿತಕ್ಕೆ ಕಾರಣವೇ ಸಂಬಳ ಎನ್ನಲಾಗುತ್ತಿದೆ.ಕಷ್ಟಪಟ್ಟು ದುಡಿವ ಸಿಬ್ಬಂದಿಗೆ ಸಂಬಳ ಕೊಡುವ ವಿಷಯದಲ್ಲಿ ಇತ್ತೀಚೆಗಂತೂ ಸಿಕ್ಕಾಪಟ್ಟೆ ಪರದಾಡಿಸಲಾಗುತ್ತಿದೆ ಎನ್ನುವ ಆರೋಪವಿದೆ.ಕೆಲಸ ಬಿಟ್ಟ ಸಿಬ್ಬಂದಿಯೇ ಇಂತದ್ದೊಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಇದು ತಪ್ಪಲ್ಲ,ಅವರಿಗೆ ಸಹಜವಾಗಿಯೇ ಆಗಿರುವ ನೋವು. ಕೆಲಸ ಬಿಟ್ಟವರಿಗೂ ಸಂಬಳ ನೀಡಲಾಗಿಲ್ಲವಂತೆ.2 ತಿಂಗಳವರೆಗೆ ಸಂಬಳ ಪೆಂಡಿಂಗ್ ಇರೋರು ಕೆಲಸ ಬಿಟ್ಟರೆ ಅದೂ ಸಿಗೊಲ್ವೇನೋ ಎನ್ನುವ ಹೆದರಿಕೆಗೆ ಒಲ್ಲದ ಮನಸಿನಿಂದಲೇ ಕೆಲಸ ಮಾಡ್ತಿದ್ದಾರಂತೆ.ಪೆಂಡಿಂಗ್ ಇರುವ ಸಂಬಳ ಕೊಟ್ಟರೆ ಇನ್ನೊಂದಷ್ಟು ಸಿಬ್ಬಂದಿ ಕೆಲಸ ಬಿಡೋ ಸಿದ್ದತೆಯಲ್ಲಿದ್ದಾರೆನ್ನುವ ಮಾತಿದೆ.
ಸುದ್ದಿಮನೆ ಮಿತ್ರರೇ..ನೆನಪಿರಲಿ, ನಿಮ್ಮ ನೋವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಎನ್ನುವ ದಿಟ್ಟ ದ್ವನಿ ಇದೆ……… ಸ್ನೇಹಿತರೇ..ಕೇವಲ ಬೆಂಗಳೂರಲ್ಲ,,ರಾಜ್ಯದ ಯಾವುದೇ ಭಾಗದಲ್ಲಿ ಸುದ್ದಿ ಮನೆಗಳಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರಿಗೆ ಅನ್ಯಾಯಗಳಾದ್ರೂ ಅದನ್ನು ಪ್ರತಿನಿಧಿಸಲು ಕನ್ನಡ ಫ್ಲ್ಯಾಶ್ ನ್ಯೂಸ್,ಆತ್ಮಬಂಧುವಾಗಿ ಇರುತ್ತದೆ ಎನ್ನುವುದನ್ನು ಮರೆಯಬೇಡಿ..ಕಷ್ಟಪಟ್ಟು ದುಡಿದ ಹೊರತಾಗಿಯೂ ಆ ಬೆವರಿನ ಶ್ರಮಕ್ಕೆ ಬೆಲೆ ಸಿಗಲಿಲ್ಲ ಎಂದರೆ ಹೇಗ್ಹೇಳಿ..? ಅದನ್ನು ಪ್ರಶ್ನಿಸುವ ಕೆಲಸವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ನಿಮ್ಮ ಪ್ರತಿನಿಧಿಯಾಗಿ ಮಾಡುತ್ತಿದೆ.ನಮ್ಮ ಪ್ರಯತ್ನದಿಂದ ನಿಮ್ಮಸಮಸ್ಯೆಗೆ ಒಂದಷ್ಟು ಪರಿಹಾರ ಸಿಕ್ಕರಷ್ಟೇ ನಮಗೆ ಸಮಾಧಾನ..ನಿಮ್ಮಲ್ಲಿ ಏನೇ ಅನ್ಯಾಯವಾದ್ರೂ 9972570038, 9972570154 ನಂಬರ್ ಗೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ..ಎಲ್ಲರೂ ಒಗ್ಗೂಡಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ…ನೆನಪಿರಲಿ ನಿಮ್ಮ ಹೆಸರು,ಮಾಹಿತಿ ಎಲ್ಲವನ್ನೂ ಗೌಪ್ಯವಾಗಿಡಲಾಗುವುದು.ಅದರ ಬಗ್ಗೆ ಭಯಬೇಡ……… – …………………………………………………………………………………………………………………………………………………….ಸಂಪಾದಕೀಯ ಬಳಗ..
ಕೆಲಸ ಮಾಡುತ್ತಿರುವ ಎಲ್ಲರಿಗೂ ಸಂಬಳ ಆಗಿಲ್ವೇ..? ಎಲ್ಲರ ಸಂಬಳ ಪೆಂಡಿಂಗ್ ಉಳಿಸಿಕೊಳ್ಳಲಾಗಿದೆ ಯೇ ಎಂದು ನೋಡಿದ್ರೆ, ಪರಿಸ್ತಿತಿ ಹಾಗೇನಿಲ್ಲ.ಒಂದಷ್ಟು ಸಿಬ್ಬಂದಿಗೆ ಸಂಬಳ ಕೊಡಲಾಗಿದೆ.ಆದ್ರೆ ಇನ್ನೊಂದಷ್ಟು ಮಿತ್ರರಿಗೆ ಪೆಂಡಿಂಗ್ ಉಳಿಸಿಕೊಳ್ಳಲಾಗಿದೆ. ಸುದ್ದಿಮನೆ ಮಿತ್ರರು ವ್ಯಗ್ರವಾಗುವುದಕ್ಕೆ ಮೂಲ ಕಾರಣವೇ ಇದು..ಕೊಟ್ಟರೆ ಎಲ್ಲರಿಗೂ ಕೊಡಬೇಕು..ಇಲ್ಲದಿದ್ದರೆ ಎಲ್ಲರದ್ದನ್ನು ಹೋಲ್ಡ್ ಮಾಡಬೇಕು.ಒಂದಷ್ಟು ಜನರಿಗೆ ಕೊಟ್ಟು ಇನ್ನೊಂದಷ್ಟು ಜನರಿಗೆ ಪೆಂಡಿಂಗ್ ಇಡುವುದು ಯಾವ ನ್ಯಾಯ,,? ನಮ್ಮ ನಮ್ಮಲ್ಲೇ ಒಡೆದಾಳುವ ಪ್ರಯತ್ನವಲ್ವೇ ಎಂದು ಅನೇಕರು ಕೆಂಡಮಂಡಲವಾಗಿದ್ದಾರಂತೆ.
ಹಾಗೆ ನೋಡಿದ್ರೆ, ಸಂಪೂರ್ಣ ನ್ಯೂಸ್ ಎದುರು ಸೃಷ್ಟಿಯಾಗಿರುವ ಸಮಸ್ಯೆ ದೊಡ್ಡದಲ್ಲವೇ ಅಲ್ಲ..ಅದನ್ನು ಬಗೆಹರಿಸುವುದು ಅವರಿಗೆ ಚಿಟಿಕಿ ಹೊಡೆದಷ್ಟೇ ಅನಾಯಾಸದ ಕೆಲಸ. ಒಂದಷ್ಟು ಲಕ್ಷ ಖರ್ಚು ಮಾಡಿದ್ರೆ ಎಲ್ಲಾ ಸಮಸ್ಯೆ ಬಗೆಹರಿದು ಎಲ್ಲಾ ಸಿಬ್ಬಂದಿ ನಗುಮೊಗದಿಂದ, ಅತ್ಯುತ್ಸಾಹದಿಂದ ಇನ್ನಷ್ಟು ಚೇತೋಹಾರಿಯಾಗಿ ಕೆಲಸ ಮಾಡಲು ಸಾಧ್ಯವಿದೆ.ಏಕೆಂದರೆ ಬೆಂಗಳೂರಿನಂಥ ಅತ್ಯಂತ ದುಬಾರಿ ದುನಿಯಾದಲ್ಲಿ ಬಹುತೇಕ ಮಂದಿ ಅವಲಂಭಿತವಾಗಿರೋದೇ ತಿಂಗಳ ಸಂಬಳದ ಮೇಲೆ..ಆ ಸಂಬಳವನ್ನು ಆಧರಿಸಿಯೇ ಎಷ್ಟೊಂದು ಕಮಿಟ್ಮೆಂಟ್ ಮಾಡಿಕೊಂಡಿರುತ್ತಾರೆ.ಅವರ ಜೀವನವನ್ನೇ ನಿರ್ದರಿಸಬಲ್ಲಂತ ತಿಂಗಳ ಸಂಬಳ ಕೈಗೆ ಸಿಗದಿದ್ದರೆ ಆತ/ಆಕೆಯ ಪರಿಸ್ತಿತಿ ಏನಾಗಬೇಡ..ಊಹಿಸ್ಲಿಕ್ಕೂ ಸಾಧ್ಯವಿಲ್ಲ.
ಸಂಪೂರ್ಣ ನ್ಯೂಸ್ ನಲ್ಲಿ ಸಂಬಳವಿಲ್ಲದೆ ಒದ್ದಾಡುತ್ತಿದ್ದಾರೆನ್ನಲಾಗಿರುವ ಮಾದ್ಯಮಮಿತ್ರರ ಪರಿಸ್ತಿತಿಯೂ ಇದಕ್ಕೆ ಭಿನ್ನವಾಗಿರಲಿಕ್ಕಿಲ್ಲವೇನೋ..? ಹಾಗಾಗಿಯೇ ಕೆಲಸ ಬಿಡುವ.ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುವ ಕೆಲಸ ಮಾಡ್ತಿದ್ದಾರೆ ಅನ್ನಿಸುತ್ತೆ..ಇದ್ಯಾವುದಕ್ಕೂ ಆಸ್ಪದ ಆಗಬಾರದು ಎಂದರೆ ಚಾನೆಲ್ ಮುಖ್ಯಸ್ಥೆ ಸಂಪೂರ್ಣ ಗೌಡ ಕಷ್ಟವಲ್ಲದ ಈ ಸಮಸ್ಯೆಯನ್ನು ಬಗೆಹರಿಸಬೇಕು ಅಷ್ಟೆ…ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ, ನಿರೀಕ್ಷೆಯಂತೆ ಸಂಪೂರ್ಣ ನ್ಯೂಸ್ ಸ್ಯಾಟಲೈಟ್ ಚಾನೆಲ್ ಆಗಿ ಹೊರಹೊಮ್ಮಲಿ…ಎಲ್ಲರ ಮನೆ ಮನದಂಗಳ ಪ್ರವೇಶಿಸಲಿ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ಹಾರೈಕೆ.
