ಕಿದ್ವಾಯಿ ಆಡಳಿತಕ್ಕೇ ಕ್ಯಾನ್ಸರ್..!? ಕಿದ್ವಾಯಿಯಲ್ಲಿ ಕೆಎಎಸ್ ಗಳಿಗೇಕೆ ಅಲ್ಪಾಯುಷ್ಯ..!


ಅಧಿಕಾರ ನೀಡೋದು ಸರ್ಕಾರನೇ..ಮೊಟಕುಗೊಳಿಸಿರೋದು ಸರ್ಕಾರನೇ.?

ಬೆಂಗಳೂರು: ಸರ್ಕಾರದ ಪ್ರತಿಷ್ಟಿತ ಆರೋಗ್ಯ ಸಂಸ್ಥೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಕೂಡ ಒಂದು.ಕ್ಯಾನ್ಸರ್‌ ವಿಷಯಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ-ಉಪಚಾರಕ್ಕೆ ಇರೋ ಏಕೈಕ ಆಸರೆ ಹಾಗೂ ಆಶಾಕಿರಣ ಎಂದರೆ ಅದು ಕಿದ್ವಾಯಿ ಮಾತ್ರ. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿದೆಯಾ..? ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿತೋ ಆ ಉದ್ದೇಶ ಈಡೇರುತ್ತಿದೆಯಾ.? ಸರ್ಕಾರದ ಸೌಲಭ್ಯಗಳು ಕ್ಯಾನ್ಸರ್‌ ಪೀಡಿತರಿಗೆ ಸಿಗುತ್ತಿದೆಯಾ ಎಂದುನೋಡಿದ್ರೆ ಸಿಗೋ ಉತ್ತರ ಶೂನ್ಯ ಅಂತೆ..ಯಾಕಂದ್ರೆ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಬೇಕಿದ್ದ ಕಿದ್ವಾಯಿ ಅಲ್ಲಿ ತಾಂಡವವಾಡುತ್ತಿರುವ ಅವ್ಯವಸ್ಥೆ, ಅಕ್ರಮ, ಭ್ರಷ್ಟಾಚಾರ,ಗುಂಪುಗಾರಿಕೆಯಿಂದಲೇ ಆಗಾಗ ಮುನ್ನಲೆಗೆ ಬರುತ್ತಿದೆ.ಇಲ್ಲಿನ ಅವ್ಯವಸ್ಥೆ ಸರಿಪಡಿಸ್ಲಿಕ್ಕೆಂದೇ ಇರುವ ಆಡಳಿತಾಂಗದ ಅಧಿಕಾರ-ಸ್ವಾಯತ್ತತೆಯನ್ನು  ಸಂಪೂರ್ಣ ಕಸಿದುಕೊಂಡಿರುವುದೇ ಇದೆಲ್ಲಕ್ಕೂ ಕಾರಣ ಎನ್ನಲಾಗುತ್ತಿದೆ.

1988 ರಿಂದ 2026ರ ಈ ಅವಧಿವರೆಗೆ 33 ಮುಖ್ಯ ಆಡಳಿತಾಧಿಕಾರಿಗಳನ್ನು ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಕಂಡಿದೆ.ಅಂದ್ರೆ 38 ವರ್ಷಗಳಲ್ಲಿ 33 ಆಡಳಿತಾಧಿಕಾರಿಗಳು ಎಂದಾಯ್ತು.ಇಷ್ಟೊಂದು ಸಂಖ್ಯೆಯಲ್ಲಿ ಆಡಳಿತಾಧಿಕಾರಿಗಳನ್ನು ನಿರಂತರವಾಗಿ ಬದಲಿಸುತ್ತ ಹೋದರೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸುಧಾರಣೆ ತರಲಿಕ್ಕಾಗುತ್ತಾ..? ಸಾಧ್ಯವೇ ಇಲ್ಲ. ದುರಂತ ಹಾಗೂ ವಿಪರ್ಯಾಸ ಅಂದ್ರೆ ಇದರ ಸಂಪೂರ್ಣ ಮಾಹಿತಿ ಇದ್ದಾಗ್ಯೂ ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಾಲಯವಾಗಲಿ, ಅಧಿಕಾರಿಶಾಹಿಯಾಗಲಿ ಇದನ್ನು ಸರಿಪಡಿಸುವ ಕೆಲಸಕ್ಕೆ ಹೋಗಿಯೇ ಇಲ್ಲ.ಮನಸಿಗೆ ಬಂದಾಗಲೆಲ್ಲಾ ಕೆಎಎಸ್‌ ಅಧಿಕಾರಿಗಳನ್ನು ನಿರಂತರವಾಗಿ ಬದಲಿಸುವ ಕೆಟ್ಟ ಹಾಗೂ ಹೀನಮನಸ್ತಿತಿಯನ್ನು ಸರ್ಕಾರ ಪ್ರದರ್ಶಿಸುತ್ತಲೇ ಬಂದಿದೆ.ಈ ಕಾರಣದಿಂದಲೇ ಬರುವಂತವರು ವ್ಯವಸ್ಥೆ ಅರ್ಥಮಾಡಿಕೊಳ್ಳುವ ಮೊದಲೇ ವರ್ಗವಾಗಿ ರುತ್ತಾರೆ.ಪರಿಸ್ತಿತಿ ಈ 389 ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬಂದಿದೆ ಎನ್ತಾರೆ ಕಿದ್ವಾಯಿಯ ಹಿರಿಯ ಸಿಬ್ಬಂದಿ.

ಕಿದ್ವಾಯಿ ಆರೋಗ್ಯಸಂಸ್ಥೆ ಅಕ್ರಮ-ಭ್ರಷ್ಟಾಚಾರ-ಹಗರಣದ ಕೂಪವಾಗ್ಹೋಗಿದೆ ಎನ್ನುವ ಆರೋಪ ಇವತ್ತಿನದಂತೂ ಅಲ್ಲವೇ ಅಲ್ಲ..ಆಸ್ಪತ್ರೆಯ ಉದ್ದಾರಕ್ಕಾಗಿ,ರೋಗಿಗಳ ಚಿಕಿತ್ಸೆ-ಆರೈಕೆಗಾಗಿ ಬಿಡುಗಡೆಯಾಗುವ ನೂರಾರು ಕೋಟಿ ಅನುದಾನ ಇಲ್ಲಿರುವ ಕೆಲವು ಭ್ರಷ್ಟ ತಿಮಿಂಗಲಗಳ ಪಾಲಾಗುತ್ತಿದೆ.ಟೆಂಡರ್‌ ಗಳಲ್ಲಿ, ಖರೀದಿಯಲ್ಲಿ.. ನಡೆಯುವ ಭ್ರಷ್ಟಾಚಾರದಲ್ಲಿ ಸಿಗೋ ಕಿಕ್‌ ಬ್ಯಾಕೇ ಎಷ್ಟೋ ಕೋಟಿಗಳದ್ದೆನ್ನುವ ಮಾತಿದೆ. ಇದನ್ನೆಲ್ಲಾ ಪತ್ತೆ ಮಾಡಿ ಇದರ ವಿರುದ್ದ ಕ್ರಮ ಕೈಗೊಳ್ಳಬೇಕಾದ ಹೊಣೆ ಆಡಳಿತ ವಿಭಾಗದ ಮುಖ್ಯಸ್ಥರಿಗೆ ಎನ್ನಲಾಗುತ್ತದೆಯೇ ಹೊರತು ಅದಕ್ಕೆ ಬೇಕಾದ ಅಧಿಕಾರವನ್ನಾಗಲಿ,ತಾಕತ್ತನ್ನಾಗಲಿ ಅವರಿಗೆ ನೀಡಿಯೇ ಇಲ್ಲವಂತೆ.ಆಡಳಿತ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ ಬಂದಿರುವ ಎಲ್ಲಾ ಕೆಎಎಸ್‌ ಗಳ ಅಸಹಾಯಕತೆಯೂ ಇದೇ ಆಗಿದೆ. ಕಣ್ಣೆದುರಿಗೆ ನಡೆಯುತ್ತಿರುವ ಅಕ್ರಮ-ಭ್ರಷ್ಟಾಚಾರದ ಬಗ್ಗೆ ಕೆಂಡದಂಥ ಕೋಪ,ಆಕ್ರೋಶವಿದ್ದರೂ ತಾಂತ್ರಿಕವಾಗಿ ಅವರ ವಿರುದ್ದ ಏನೂ ಕ್ರಮ ಕೈಗೊಳ್ಳಲಾಗದ ಹೀನ ಹಾಗೂ ಶೋಚನೀಯ ಸ್ಥಿತಿ ಅವರದು.ಈ ಹಿಂದೆ ಇದ್ದಂತ ಮುಖ್ಯ ಆಡಳಿತಾಧಿಕಾರಿಗಳು ಇಲ್ಲಿಂದ ತೆರಳುವ ಮುನ್ನ ಇದರ ವಿರುದ್ದ ಗುಡುಗಿದ್ದರು.ಆದರೆ ಅದರಿಂದ ನಯಾಪೈಸೆ ಬದಲಾವಣೆ ಆಗಲೇ ಇಲ್ಲ.ಭ್ರಷ್ಟಾಚಾರ-ಹಗರಣದ ಕೂಪವಾಗ್ಹೋಗಿದೆಯಾ ಕಿದ್ವಾಯಿ:  “ಕಿದ್ವಾಯಿ ಆಸ್ಪತ್ರೆಯಲ್ಲಿ ಆರ್ಥಿಕ ನಿರ್ವಹಣೆ ಮಾಡುವ ವಿಭಾಗದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆಪಾದನೆಯಿದೆ.ದುರಂತ ಎಂದರೆ ಯಾವುದೇ ಹಣ ಬಿಡುಗಡೆ-ಮಂಜೂರಾತಿಗೂ ಅಡಳಿತಾಧಿಕಾರಿಗಳ ಕಚೇರಿಯ ಸಹಿ-ಅನುಮತಿಯೇ ಬೇಡವಂತೆ.ಅಂದರೆ ಆರ್ಥಿಕ ವಿಭಾಗವೇ ಏಕಪಕ್ಷೀಯವಾಗಿ ಇದರ ಬಗ್ಗೆ ನಿರ್ದಾರ ಕೈಗೊಳ್ಳಬಹುದಾಗಿದೆಯಂತೆ. ಆಡಳಿತ ವಿಭಾಗಕ್ಕೂ,ಆರ್ಥಿಕ ವಿಭಾಗಕ್ಕೂ ಎಲ್ಲೆಡೆ ಸಮನ್ವಯ ಇದ್ದರೆ ಇಲ್ಲಿ ಮಾತ್ರ ಪರಸ್ಪರ ವಿರುದ್ಧ ದಿಕ್ಕುಗಳಾಗಿವೆಯಂತೆ. ಯಾವುದೇ ವಿಚಾರದಲ್ಲೂ ಆಡಳಿತಾಧಿಕಾರಿಗಳ ಸಲಹೆ-ಮಾರ್ಗದರ್ಶನವನ್ನೇ  ಆರ್ಥಿಕ ವಿಭಾಗ ಪಡೆಯುವುದಿಲ್ಲವಂತೆ.ಅವರಿಗೆ ಇಷ್ಟಬಂದಂತೆ ಆಡಳಿತ ಮತ್ತು ಹಣ ಬಿಡುಗಡೆ ಮಾಡುವ ಕೆಟ್ಟ ಹಾಗೂ ವಿಚಿತ್ರ ಸಂಪ್ರದಾಯವಿದೆಯಂತೆ. ಬಹುಷಃ ಆಸ್ಪತ್ರೆಯಲ್ಲಿ ಕಂಡುಬರುತ್ತಿರುವ ಆರ್ಥಿಕ ಅಶಿಸ್ತು ಮತ್ತು ಅದರ ಪರಿಣಾಮವಾಗಿರುವ ಅಕ್ರಮ-ಭ್ರಷ್ಟಾಚಾರದ ಮೂಲವೇ ಆರ್ಥಿಕ ವಿಭಾಗವಾಗಿರಬಹುದಾ..? ಗೊತ್ತಿಲ್ಲ..ಬಹುಷಃ ತನಿಖೆ ನಡೆದರೆ ಸತ್ಯ ಗೊತ್ತಾಗಬಹುದೇನೋ..?”

ಮುಖ್ಯ ಆಡಳಿತಾಧಿಕಾರಿಗಳ ಹುದ್ದೆ ಆಡಳಿತಾತ್ಮಕವಾಗಿ ತುಂಬಾ ಪವರ್‌ ಫುಲ್‌ ಎನಿಸಬಹುದು.ಆದರೆ ಪರಿಸ್ಥಿತಿ ನೈಜವಾಗಿ ಹಾಗಿಲ್ಲ.ಹೇಳಿಕೊಳ್ಳೊಕ್ಕಷ್ಟೇ ಅವರು ಕೆಎಎಸ್‌ ಅಧಿಕಾರಿಗಳು.ಎಲ್ಲಾ ರೀತಿಯ ಪ್ರಯೋಜನ-ಸೌಲಭ್ದ ದೊರೆಯುತ್ತದೆ.ಆದರೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗದಂಥೆ ಅವರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆಯಂತೆ .ಕೆಲವೊಂದು ಕಡತಗಳಿಗೆ ಸಹಿ ಹಾಕುವುದನ್ನು ಬಿಟ್ಟರೆ ಆಡಳಿತಾತ್ಮಕವಾಗಿ ಕೊಡಬೇಕಾದ ಸಂಪೂರ್ಣ ಸ್ವಾತಂತ್ರ್ಯವನ್ನು ಅವರಿಗೆ ನೀಡಿಯೇ ಇಲ್ಲ ಎನ್ನುವ ಮಾತುಗಳಿವೆ. ಹಾಗಾಗಿ ಭ್ರಷ್ಟಾಚಾರ ಮಾಡಿಕೊಂಡು ಬಂದಿರುವ ನಾಲಾಯಕ್‌ ಗಳಿಗೆ ಕಿದ್ವಾಯಿ ಎನ್ನುವುದು ಮೇಯೊಕ್ಕೆ ಫಲವತ್ತಾದ ಪಂಪಾಸ್‌ ಹುಲ್ಲುಗಾವಲಿನಂತಾಗಿದೆ.ಅಧಿಕಾರಿಗಳು ಮಾತ್ರ ಕಣ್ಣೆದುರಿಗೆ ಕೋಟಿಗಳಲ್ಲಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದ್ರೂ ಏನೂ ಕ್ರಮ ಕೈಗೊಳ್ಳಲಿಕ್ಕಾಗದೆ ಕೈ ಕೈ ಹಿಸುಕಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ.ಬಹುಷಃ ಇಲ್ಲಿನ ವ್ಯವಸ್ಥೆ ಸುಧಾರಣೆ ಆಗುವುದು ಸರ್ಕಾರಕ್ಕೂ ಬೇಡ ಎನಿಸುತ್ತೆ ಎನ್ನುತ್ತಾರೆ ಅನೇಕ ವರ್ಷಗಳ ಹಿಂದೆ ಮುಖ್ಯ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಕೆಎಎಸ್‌ ಅಧಿಕಾರಿ.

ALSO READ :  ಧಾರವಾಡದಲ್ಲಿ ಆಲಿಕಲ್ಲು ಮಳೆ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ಪೂರ್ವ ಮುಂಗಾರು!

ಆಸ್ಪತ್ರೆಯಲ್ಲಿನ ವ್ಯವಸ್ಥೆ ಸುಧಾರಣೆ ಆಗಬೇಕು.ಆಸ್ಪತ್ರೆಯಲ್ಲಿ ಅಕ್ರಮ-ಹಗರಣ ತಾಂಡವ ವಾಡುತ್ತಿದೆ.ಅದನ್ನು ಸರಿಪಡಿಸಬೇಕು ಎಂದು ಯಾವ ಕೆಎಎಸ್‌ ಅಧಿಕಾರಿಯನ್ನು ಕಳುಹಿಸಿಕೊಡಲಾಗುತ್ತೋ ಅವರಿಗೆ ಅಧಿಕಾರ ಚಲಾಯಿಸಲು ಸಂಪೂರ್ಣ ಸ್ವಾತಂತ್ರ್ಯವನ್ನೇ ಸರ್ಕಾರ ನೀಡಿಲ್ಲ ಎನ್ನುವುದು ದೌರ್ಭಾಗ್ಯಪೂರ್ಣ.ಆದರೆ ಆಶ್ಚರ್ಯ-ವಿಚಿತ್ರ ಏನಂದರೆ ಅಲ್ಲಿ ಏನೇ ವ್ಯತ್ಯಾಸಗಳಾದ್ರೂ ಅದಕ್ಕೆ ನೈತಿಕ ಹೊಣೆಯನ್ನಾಗಿಸುವುದು ಇದೇ ಕೆಎಎಸ್‌ ಅಧಿಕಾರಿಗಳನ್ನಂತೆ.ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಬಹುತೇಕ ಆಸ್ಪತ್ರೆಗಳಲ್ಲಿ ಮುಖ್ಯ ಅಡಳಿತಾಧಿಕಾರಿಗಳಿಗೆ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ-ಕ್ರಮ ಕೈಗೊಳ್ಳಲು ಅಧಿಕಾರ ನೀಡಿವೆ.ಆದರೆ ಕಿದ್ವಾಯಿಯಲ್ಲಿ ಮಾತ್ರ ಸಂಪೂರ್ಣ ಉಲ್ಟಾಪಲ್ಟಾ ಎನ್ನುವ ಮಾತಿದೆ. ಉಳಿದೆಲ್ಲಾ ಆಸ್ಪತ್ರೆಗಳಿಗಿಂತ ಹೆಚ್ಚು ಅನುದಾನ ಪಡೆಯುವ ಈ ಕೇಂದ್ರದಲ್ಲಿ ನಡೆದಿರುವ,ನಡೆಯುತ್ತಿರುವ  ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕಲು ಇಲ್ಲಿನ ಮುಖ್ಯ ಆಡಳಿತಾಧಿಕಾರಿಗೆ ಉಳಿದೆಲ್ಲಾ ಆಸ್ಪತ್ರೆಗಳ ಸಿಎಓ ಗಿಂತ ಹೆಚ್ಚಿನ ಪರಮಾಧಿಕಾರ ಕೊಡಬೇಕಾದ ಅಗತ್ಯವಿದೆ ಎನ್ತಾರೆ ಓರ್ವ ನಿವೃತ್ತ ಮುಖ್ಯ ಆಡಳಿತಾಧಿಕಾರಿ.

ಹೊಸದಾಗಿ ಬಂದಿದ್ದೇನೆ..ಅರ್ಥ ಮಾಡಿಕೊಳ್ಳೊಕ್ಕೆ ಟೈಂ ಕೊಡಿ..ಆಶಾಪರ್ವಿನ್‌:  “ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ-ಅಕ್ರಮದ ಜತೆಗೆ  ಹಣಕಾಸಿನ ನಿರ್ವ ಹಣೆ ನಡೆಯುವ ಆರ್ಥಿಕ ವಿಭಾಗದಲ್ಲಂತೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎನ್ನುವ ಬಗ್ಗೆ ದೊರೆತ ಮಾಹಿತಿ ಹಿನ್ನಲೆಯಲ್ಲಿ ಮುಖ್ಯ  ಆಡಳಿತಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಹಿರಿಯ ಕೆಎಎಸ್‌ ಅಧಿಕಾರಿ ಆಶಾ ಪರ್ವಿನ್‌ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಸಂಪೆರ್ಕಿಸಿದಾಗ ನಾನು ಹೊಸದಾಗಿ ಬಂದಿರೋದು..ನನಗೆ ಇಲ್ಲಿನ ಆಡಳಿತ ಅರ್ಥ ಮಾಡಿಕೊಳ್ಳೊಕ್ಕೆ ಒಂದಷ್ಟು ಕಾಲಾವಕಾಶ ಬೇಕು.ಇಲ್ಲಿಗೆ ಬಂದ ಆರಂಭದಲ್ಲೇ ನನಗೆ ಇಲ್ಲಿರುವ ಸಿಬ್ಬಂದಿಯೇ ಸಾಕಷ್ಟು ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದಾರೆ. ಅದರಾಳಕ್ಕೆ ಇಳಿಯುವ ಪ್ರಯತ್ನದಲ್ಲಿದ್ದೇನೆ.ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ-ಅಕ್ರಮದ ಜತೆಗೆ  ಹಣಕಾಸಿನ ನಿರ್ವಹಣೆಯಲ್ಲೂ ಅಶಿಸ್ತಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಅದರ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಗಮನ ಸೆಳೆಯುತ್ತೇನೆ.ಸರ್ಕಾರ ನನಗೆ ವಹಿಸಿರುವ ಅಧಿಕಾರ ವ್ಯಾಪ್ತಿಯಲ್ಲಿ ಏನನ್ನು ಮಾಡ್ಲಿಕ್ಕೆ ಸಾಧ್ಯನೋ ಅಷ್ಟನ್ನು ಪ್ರಾಮಾಣಿಕವಾಗಿ ಮಾಡ್ತೇನೆ ಎಂದರು” 

ಕಿದ್ವಾಯಿ ಆಸ್ಪತ್ರೆಯಲ್ಲಿ ಈ ಹಿಂದೆ ನಡೆದಂತ ಅಕ್ರಮಗಳಿಗೆ ಸಂಬಂಧಿಸಿದಂತೆ ರಚಿಸಿದಂಥ ತನಿಖಾ ಸಮಿತಿಗಳು ಸಲ್ಲಿಸಿರುವ ವರದಿಗಳೇ ಇನ್ನೂ ಅನುಷ್ಟಾನಗೊಂಡಿಲ್ಲವಂತೆ. ಅಕ್ರಮದಲ್ಲಿ ಭಾಗಿಯಾದ ಎಷ್ಟೋ ವೈದ್ಯರು-ಸಿಬ್ಬಂದಿ ಇನ್ನೂ ರಾಜಾರೋಷವಾಗಿ ಕೆಲಸ ಮಾಡಿಕೊಂಡಿದ್ದಾರಂತೆ.ಆಪಾದಿತರ ವಿರು‍ದ್ದ ಆಯಾ ಕಾಲಘಟ್ಟದಲ್ಲಿ ಕ್ರಮಗಳಾಗಿಲ್ಲ ಎಂದರೆ ಅಲ್ಲಿ ಸುಧಾರಣೆ  ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕಿದ್ವಾಯಿ ಅಸ್ಪತ್ರೆಯ ಆಡಳಿತದಲ್ಲಿ ಸುಧಾರಣೆ ಬರಬೇಕಾದರೆ ಮೊದಲು ಆಡಳಿತ ನಿರ್ವಹಣೆ ಮಾಡುವ ಮುಖ್ಯ ಆಡಳಿತಾಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ-ಪರಮಾಧಿಕಾರ ನೀಡಲೇಬೇಕು.ಇದಕ್ಕೆ ಸರ್ಕಾರ ಮಮನಸು ಮಾಡಬೇಕಷ್ಟೆ..ಇಲ್ಲವಾದಲ್ಲಿ ಕಿದ್ವಾಯಿ ಆಡಳಿತದಲ್ಲಿ ಹಬ್ಬಿರುವ ಭ್ರಷ್ಟಾಚಾರದ ಕ್ಯಾನ್ಸರ್‌ ಇಡೀ ವ್ಯವಸ್ಥೆಯನ್ನೇ ಬಲಿಪಡೆಯೋದರಲ್ಲಿ ಅನುಮಾನವಿಲ್ಲ..


Leave a Comment