
ಬೆಂಗಳೂರು:ಕಾಂಗ್ರೆಸ್ ಒಂದೇ ಅಲ್ಲ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಅವುಗಳ ಹಣೆಬರಹವೇ ಹೀಗೆ…ದಕ್ಷ-ಪ್ರಾಮಾಣಿಕ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿ,ಅವರಿಗೆ ನೀಡುವ ಹುದ್ದೆಗಳದ್ದೇ ಒಂದು ಕಥೆ..ಇವತ್ತಿಗೂ ಪ್ರಾಮಾಣಿಕ ರೆನಿಸಿಕೊಂಡವರಿಗೆ ಸೂಕ್ತ ಹುದ್ದೆಗಳು ಸಿಗ್ತಿಲ್ಲ,ಇನ್ನು ಅಧಿಕಾರವುಳ್ಳವರಿಗೆ ಬಹುಪರಾಖ್ ಹೇಳಿಕೊಂಡಿರುವವರಿಗೆ ನಿಭಾಯಿಸ್ಲಿಕ್ಕೆ ಆಗದಷ್ಟು ಹುದ್ದೆ-ಜವಾಬ್ದಾರಿಗಳನ್ನು ನೀಡಲಾಗ್ತದೆ.ಸರ್ಕಾರದ ಮಟ್ಟದಲ್ಲಿರುವ ಬೆರಳೆಣಿಕೆಯ ಕೆಎಎಸ್ ಗಳಲ್ಲಿ ಒಬ್ಬರಾದ ಹಿರಿಯ ಮಹಿಳಾ ಕೆಎಎಸ್ ಅಧಿಕಾರಿಯ ಕಥೆನೂ ಹೀಗೇನೇ ಆಗಿದೆ. ಐದಾರು ತಿಂಗಳು ಕಳೆಯುವುದರೊಳಗೆ ಎರಡ್ಮೂರು ಟ್ರಾನ್ಸ್ ಫರ್ ಗೆ ಒಳಗಾಗಿ ಕೆಲಸ ಮಾಡ್ಲಿಕ್ಕೆ ನಿಯೋಜನೆಗೊಂಡ ಇಲಾಖೆಯಲ್ಲಿ ಕೆಲಸ ಮಾಡುವ ಮನೆ ಹಾಳಾಗಿ ಹೋಗಲಿ, ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯೂ ಇಲ್ಲದೆ ತ್ರಿಶಂಕು ಸ್ಥಿತಿಗೆ ಸಿಲುಕಿರುವ ಆ ಕೆಎಎಸ್ ಅಧಿಕಾರಿಯೇ ಆಶಾ ಪರ್ವಿನ್.
ಆಶಾ ಪರ್ವಿನ್ ಅವರ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾಗಿಲ್ಲ.ಕೆಲಸ ಮಾಡಿದೆಡೆಯಲ್ಲೆಲ್ಲಾ ಪ್ರಾಮಾಣಿಕತೆ-ದಕ್ಷತೆ-ನಿಷ್ಟೆಯಿಂದ ಹೆಸರು ಮಾಡಿದವರು.ಅನ್ಯಾಯ-ಅಕ್ರಮ ನಡೆಸುವವರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದವರು.ಸರ್ಕಾರಕ್ಕೆ ಯೋಜನೆ ಗಳಿಂದ ಆಗಬಹುದಾಗಿದ್ದ ನೂರಾರು ಕೋಟಿ ನಷ್ಟವನ್ನು ತಮ್ಮ ನಿಷ್ಟೂರ ವರದಿಗಳಿಂದ ತಪ್ಪಿಸಿದವರು…ಆದರೆ ದುರಂತ ಏನ್ ಗೊತ್ತಾ,ಅದೇ ಅಧಿಕಾರಿಗೆ ಸೂಕ್ತ ಸ್ಥಾನಮಾನ ನೀಡದೆ ಅಲೆಸುತ್ತಲೇ ಇದೆ ಸರ್ಕಾರ.ಅವರ ಹಿರಿತನಕ್ಕೆ, ಅವರ ದಕ್ಷತೆಗೆ ಕೆಲಸ ಮಾಡಲು ಹತ್ತಾರು ಇಲಾಖೆಗಳಿದ್ದರೂ ಅತ್ಯಂತ ಡಮ್ಮಿ ಎನಿಸಿಕೊಳ್ಳುವ ಇಲಾಖೆಗಳಲ್ಲಿ ಪೋಸ್ಟಿಂಗ್ ನೀಡ್ತಾ ಬರಲಾಗಿದೆ.ಸಧ್ಯಕ್ಕೆ ಅವರನ್ನು ಜಲಮಂಡಳಿಯ ಆಡಳಿತಾಧಿಕಾರಿ ಹುದ್ದೆಗೆ ಸರ್ಕಾರ ನಿಯೋಜಿಸಿದ್ದರೂ ಅಲ್ಲಿ ಕುಳಿತುಕೊಳ್ಳಲು ಖುರ್ಚಿಯನ್ನೂ ನೀಡದೆ ಅವಮಾನಿಸಲಾಗಿದೆ ಎನ್ನುವುದು ಅಲ್ಲಿನ ಚಿತ್ರಣಕ್ಕೆ ಸಾಕ್ಷಿಯಾದವರ ಮಾತು.

28-09-2026 ರಂದು ಜಲಮಂಡಳಿಯ ಆಡಳಿತಾಧಿಕಾರಿಯಾಗಿ ಅವರನ್ನು ಸರ್ಕಾರ ನಿಯೋಜನೆ ಮಾಡಿ ಕಳುಹಿಸಿದೆ.ಆದೇಶದ ಪ್ರಕಾರವೇ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಹೋದರೆ ಅಲ್ಲಿ ಚೇಂಬರ್ರೂ ಇಲ್ಲ..ಖುರ್ಚಿನೂ ಇರಲಿಲ್ಲವಂತೆ.ಅವರ ಕೆಳಹಂತದ ಅಧಿಕಾರಿಗಳೇ ಎಸಿ-ಹೈಫೈ ಚೇಂಬರ್ ನಲ್ಲಿ ಕೆಲಸ ಮಾಡುತ್ತಿದ್ದರೆ ಸೌಜನ್ಯಕ್ಕೂ ಇವರಿಗೆ ಸೂಕ್ತ ವ್ಯವಸ್ಥೆಯನ್ನೇ ಕಲ್ಪಿಸಿಲ್ಲವಂತೆ.ಆ ವ್ಯವಸ್ಥೆ ಮಾಡಬೇಕಾದ ವಿಭಾಗವೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿಯೇ ಇಲ್ಲವಂತೆ. ಜಲಮಂಡಳಿಯ ಅಧ್ಯಕ್ಷರಾಗಿರುವ ಶ್ರೀಮತಿ ಮಂಜುಳಾ ಅವರಿಗೆ ಇದೆಲ್ಲದರ ಮಾಹಿತಿ ಇದ್ದಾಗ್ಯೂ ಅವರು ಕೂಡ ಇದರ ಬಗ್ಗೆ ಕಾಳಜಿ ವಹಿಸಲಿಲ್ಲವಂತೆ.ಬಹುಷಃ ರಾಜ್ಯದಲ್ಲಿ ಮೊದಲಿಂದಲೂ ಕೆಎಎಸ್ ಗಳನ್ನು ಕಂಡರೆ ಅದೇನೋ ನಿಗಿನಿಗಿ ಕೆಂಡವಾಗುವ ಮನಸ್ಥಿತಿಯ ಐಎಎಸ್ ಗಳ ಜಟಾಪಟಿ ಮನಸ್ಥಿತಿಯ ಮುಂದುವರೆದ ಭಾಗ ಎನ್ನುವಂತೆ ಮಂಜುಳಾ ಮೇಡಮ್ ಹೀಗೆ ನಡೆದುಕೊಂಡಿರಬಹುದೆನ್ನುವುದು ಹಿರಿಯ ಕೆಎಎಸ್ ಅಧಿಕಾರಿಯೊಬ್ಬರ ನೇರ ಮಾತು.

ಆಶಾ ಪರ್ವಿನ್ ಅವರ ಕಾರ್ಯ ವೈಖರಿಯನ್ನು ಗಮನಿಸಿರುವವರೇ ಹೇಳುವಂತೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ವಿಕ್ಟೋರಿಯಾದ ನೆಫ್ರೋ ಯುರಾಲಜಿ ಆಸ್ಪತ್ರೆ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿರುವುದನ್ನು ಗಮನಿಸಿದ್ದೇವೆ. ಇಲ್ಲೆಲ್ಲಾ ಸರ್ಕಾರಕ್ಕೆ ಕೋಟಿಗಳಲ್ಲಿ ವಂಚನೆ ಮಾಡಿರುವವರ ಹಾಗೂ ವಂಚಿಸಲು ಪ್ಲ್ಯಾನ್ ಮಾಡಿಕೊಂಡಿದ್ದವರ ಷಡ್ಯಂತ್ರಕ್ಕೆ ಆಶಾ ಮೇಡಮ್ ಬ್ರೇಕ್ ಹಾಕಿದ್ದರು.ಈ ಬಗ್ಗೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಗಳು ಅಕ್ರಮ ನಡೆಸುವವರ ಪ್ಲ್ಯಾನನ್ನೇ ಪ್ಲಾಪ್ ಮಾಡಿದ್ವು.ಆದರೆ ದುರಾದೃಷ್ಟಕರ ಸಂಗತಿ ಎಂದರೆ ಸರ್ಕಾರಕ್ಕೆ ಸಹಾಯ ಮಾಡಿದ ಆಶಾ ಪರ್ವಿನ್ ಅವರನ್ನು ಗೌರವಿಸಬೇಕಿದ್ದ ಇದೇ ಸರ್ಕಾರ ಮತ್ತು ಇಲಾಖೆಗಳು ಮಾಡಿದ್ದು ಮಾತ್ರ ಟ್ರಾನ್ಸ್ ಫರ್.ವರದಿ ಸಲ್ಲಿಸಿದ ಅಲ್ಪ ಅವಧಿಯಲ್ಲಿ ಆಶಾ ಪರ್ವಿನ್ ಅವರ ಕೈ ಸೇರಿದ್ದು ವರ್ಗಾವಣೆ ಆದೇಶಗಳು..ಅವರ ವಿರುದ್ಧ ಷಡ್ಯಂತ್ರ ಮಾಡಿದ ಪಟ್ಟಭದ್ರ ಹಿತಾಸಕ್ತಿಗಳೇ ಈ ವಿಷಯದಲ್ಲಿ ಮೇಲುಗೈ ಸಾಧಿಸಿದ್ದು ದುರಾದೃಷ್ಟಕರ ಎಂದು ನೆನಪು ಮಾಡಿಕೊಳ್ಳುತ್ತಾರೆ.
ಈ ಹಿಂದೆ ಕೆಲಸ ಮಾಡಿದ್ದ ಕಿದ್ವಾಯಿಯಲ್ಲಿ ವೈದ್ಯರ ನೇಮಕ, ಸಿಬ್ಬಂದಿಯ ನಿಯೋಜನೆ, ಆಸ್ಪತ್ರೆಗೆ ಬರುವ ಅನುದಾನದಲ್ಲಿ ಬೋಗಸ್, ಸೆಕ್ಯೂರಿಟಿ ಏಜೆನ್ಸಿಗಳ ವಿಚಾರದಲ್ಲಿ ಲೂಟಿ…ಅಕ್ರಮ-ಅವ್ಯವಸ್ಥೆ, ದೇಣಿಗೆ ಹಣ ದುರ್ಬಳಕೆ, ಅಕ್ರಮದಲ್ಲಿ ಆಡಳಿತ ವಿಭಾಗದವ ಶಾಮೀಲಾತಿಯಂಥ ಹತ್ತಾರು ಅಕ್ರಮಗಳನ್ನು ಪತ್ತೆ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರದಿ ನೀಡಿದ್ದರು.ಇದರ ಬಗ್ಗೆ ಕ್ರಮ ಆಗಬಹುದು, ಭ್ರಷ್ಟಾಚಾರಿಗಳಿಗೆ ತಕ್ಕ ಶಾಸ್ತಿ ಆಗಬಹುದೆಂದೇ ಭಾವಿಸಿದ್ದರು.ಆದರೆ ಆದದ್ದು ಮಾತ್ರ ಉಲ್ಟಾಪಲ್ಟಾ.ವಿಕ್ಟೋರಿಯಾದ ನೆಫ್ರೋ ಯುರಾಲಜಿ ಸೆಕ್ಷನ್ ನಲ್ಲಿನ ಅಕ್ರಮದ ಬಗ್ಗೆ 32 ಪುಟಗಳ ವರದಿ ನೀಡಿದ್ದಕ್ಕೆ ಆದಂಥ ಟ್ರಾನ್ಸ್ ಫರ್ ಎನ್ನುವ ಶಿಕ್ಷೆಯೇ ಕಿದ್ವಾಯಿ ವಿಷಯದಲ್ಲೂ ರಿಪೀಟ್ ಆಯ್ತು.ವರದಿ ಕೊಟ್ಟ ಕೆಲ ದಿನಗಳಲ್ಲೇ ಅವರಿಗೆ ಸ್ಥಳ ತೋರಿಸದೆ ವರ್ಗ ಮಾಡಲಾಗಿತ್ತು.ಅನೇಕ ದಿನಗಳ ನಂತರ ಅವರ ಅದೃಷ್ಟಕ್ಕೆ ಜಲಮಂಡಳಿಯ ಜಾಗ ತೋರಿಸಲಾಯ್ತು.ಅಲ್ಲಿಯಾದ್ರೂ ಕೆಲಸ ಮಾಡೋಣ ಎಂದು ಬಂದ್ರೆ ಇಲ್ಲಿ ಚೇಂಬರ್ ಕೊಡುವ ಮಾತಿರಲಿ, ಮಂಜುಳಾ ಮೇಡಮ್ ಆಶಾ ಪರ್ವಿನ್ ಅವರಿಗೆ ಚೇರ್ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ ಎನ್ನುವುದು ಕಹಿಯಾದರೂ ಸತ್ಯವಂತೆ.
ಜಲಮಂಡಳಿಯಲ್ಲೂ ವ್ಯಾಪಕ ಭ್ರಷ್ಟಾಚಾರ-ಅಕ್ರಮಗಳಿವೆ.ಇದರ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದೇನೆ.ನನಗೆ ಎಲ್ಲೇ ಸರ್ಕಾರ ವರ್ಗ ಮಾಡಿದ್ರೂ ಪಡೆಯುವ ಸಂಬಳಕ್ಕೆ ನೀಯತ್ತಾಗೇ ಕೆಲಸ ಮಾಡ್ತೇನೆ..ಕೆಲಸ ಮಾಡುವವರಿಗೆ ಹುದ್ದೆ-ಅಧಿಕಾರದ ಅಗತ್ಯವಿಲ್ಲ.ನಾನೂ ಕೂಡ ಅದೇ ಮನಸ್ಥಿತಿಯವಳು,ಸರ್ಕಾರ ಈಗ ನನಗೆ ಜವಾಬ್ದಾರಿ ಕೊಟ್ಟಿದೆ.ಈ ಹಿಂದೆ ಮಾಡಿದ ಕೆಲಸವನ್ನೇ ಇಲ್ಲಿ ಮಾಡಲಿದ್ದೇನೆ.ನನ್ನ ಅವಧಿಯಲ್ಲಿ ಯಾರೇ ಅಕ್ರಮ-ಭ್ರಷ್ಟಾಚಾರ ಮಾಡಿದ್ರೂ ಸಹಿಸೊಲ್ಲ.ಸರ್ಕಾರಕ್ಕೆ ನೇರ ವರದಿ ಸಲ್ಲಿಸೋದೇ.. ಎಂದು ಆತ್ಮೀಯರ ಬಳಿ ಆಶಾ ಪರ್ವಿನ್ ಹೇಳಿಕೊಂಡಿದ್ದಾರಂತೆ.ಖುರ್ಚಿ ಸಿಗದಿದ್ದರೂ ಇವರಿಗೆ ಇದೆಂಥಾ ಅಹಂಕಾರ ಎಂದು ಹಲವರು ಮಾತನಾಡಿಕೊಂಡಿರುವುದು ಉಂಟಂತೆ.ಅದಕ್ಕೆ ಇದಕ್ಕೆಲ್ಲಾ ಡೋಂಟ್ ಕೇರ್ ಎನ್ನುವ ಆಶಾ ಪರ್ವಿನ್ ಜಲಮಂಡಳಿಯನ್ನೂ ಕಾಡುವ ಆತಂಕವಿರುವುದರಿಂದ ಅದಕ್ಕೆ ಅವಕಾಶ ನೀಡದಿರಲು ಅಲ್ಲಿನ ಆಡಳಿತವೇ ಇಂತದ್ದೊಂದು ಗೇಮ್ ಆಡುತ್ತಿರಬಹುದೆನ್ನುವುದು ಆಶಾ ಪರ್ವಿನ್ ಅವರ ಬೆನ್ನಿಗೆ ನಿಂತಿರುವ ಅನೇಕ ಹೋರಾಟಗಾರರ ಅಭಿಪ್ರಾಯ.
ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಖುದ್ದು ಆಶಾ ಪರ್ವಿನ್ ಅವರು ಸಂಪರ್ಕ ಮಾಡಿದಾಗ ಸರ್ಕಾರ ಎಲ್ಲಿ ಹೋಗಿ ಕೆಲಸ ಮಾಡಿ ಎನ್ನುತ್ತದೋ ಅಲ್ಲಿ ಕೆಲಸ ಮಾಡುತ್ತೇನೆ.ನಾನು ಸರ್ಕಾರದ ಉದ್ಯೋಗಿ.ಈಗ ಇಲ್ಲಿ ಮಾಡು ಎಂದಿದೆ ಅದಕ್ಕೆ ಬಂದಿದ್ದೀನಿ.ನನಗೆ ಕೆಲಸ ಮಾಡಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕಿರುವುದು ಇಲ್ಲಿನ ಆಡಳಿತದ ಜವಾಬ್ದಾರಿ.ಆದೇಶದಲ್ಲಿರುವಂತೆ ನಾನು ಕಾವೇರಿ ಭವನದಲ್ಲಿರುವ ಜಲಮಂಡಳಿಯ ಕೇಂದ್ರ ಕಚೇರಿಯಲ್ಲೇ ಆಡಳಿತಾಧಿಕಾರಿಯಾಗಿ ಕೆಲಸ ಮಾಡಬೇಕು.ಆದರೆ ನನಗೆ ಇಲ್ಲಿ ಅವಕಾಶವೇ ಇಲ್ಲ..ಕೇಳಿದರೆ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಸುವರ್ಣ ಸೌಧಕ್ಕೆ ಹೋಗಿ ಎನ್ನಲಾಗುತ್ತಿದೆ.ಅಲ್ಲಿ ಕೆಲವು ಎಂಜಿನಿಯರ್ ಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲ.ನಾನು ಅಲ್ಲಿಗೆ ಹೋಗಲು ಸಿದ್ದಳಿಲ್ಲ..ಹೋಗಲೂಬಾರದು.ಆಡಳಿತಾಧಿಕಾರಿಯಾಗಿ ಕೆಲಸ ಮಾಡಬೇಕಿರುವ ಸ್ಥಾನ ಬಿಟ್ಟು ಹೋಗುವುದು ಸರಿಯಲ್ಲ..ಆದರೆ ಇಲ್ಲಿನ ಸ್ಥಿತಿ ಗಮನಿಸಿದ್ರೆ ನನ್ನನ್ನು ದೂರಕ್ಕೆ ಕಳುಹಿಸಿ ಇಲ್ಲಿ ಏನೋ ನಡೆಸಲು ಹುನ್ನಾರ ನಡೆಯುತ್ತಿದೆಯೇನೋ ಅನ್ನಿಸುತ್ತಿದೆ.ಆದರೆ ಅದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ..ನನಗೆ ಚೇಂಬರ್ ಕೊಡದಿದ್ದರೆ ನಾನು ಆಫೀಸ್ ನಲ್ಲಿ ಖುರ್ಚಿ ಹಾಕಿಕೊಂಡು ಕೆಲಸ ಮಾಡುತ್ತೇನೆ..ಏಕಂದ್ರೆ ಸರ್ಕಾರ ನನಗೆ ನೀಡಿರುವ ಜವಾಬ್ದಾರಿಯೇ ಅಂತದ್ದು..ಅದನ್ನು ಮಾಡುತ್ತೇನೆ ಅಷ್ಟೇ ಎನ್ನುತ್ತಾರೆ.
ಅದೇನೇ ಆಗಲಿ ಆಶಾ ಪರ್ವಿನ್ ಅವರಂಥ ದಕ್ಷ-ಪ್ರಾಮಾಣಿಕ ಕೆಎಎಸ್ ಅಧಿಕಾರಿಯನ್ನು ಜಲಮಂಡಳಿಯ ಆಡಳಿತ ಇಷ್ಟೊಂದು ಅವಮಾನಕರವಾದ ರೀತಿಯಲ್ಲಿ ನಡೆಸಿಕೊಳ್ಳುವುದು ಸರಿಯಲ್ಲ.ಹಿರಿಯ ಐಎಎಸ್ ಆಗಿರುವ ಅಧ್ಯಕ್ಷೆ ಮಂಜುಳಾ ಮೇಡಮ್ ಅವರ ಘನತೆಗೂ ಇದು ತಕ್ಕದಾದ ವಿಚಾರವಲ್ಲ.ಸಮನ್ವಯ ಸಾಧಿಸಿಕೊಂಡು ಹೋಗಬೇಕಿರುವುದು ಹಿರಿಯರಾಗಿ ಅವರ ಹೊಣೆಗಾರಿಕೆ ಕೂಡ..ಇಲ್ಲವಾದಲ್ಲಿ ಇದು ಬೇರೆಯದೇ ತಿರುವು ಪಡೆದುಕೊಳ್ಳುವ ಸಾಧ್ಯತೆಯೇಕೋ ದಟ್ಟವಾದಂತೆ ಕಾಣ್ತಿದೆ.