ನಡುರಾತ್ರಿ ಎರಡು ಗಂಟೆ ಸಮಯ: ತೀವ್ರ ನಿಗಾ ಘಟಕದ ಬಾಗಿಲ ಹೊರಗೆ ಲಕ್ಷ್ಮಿ ಕೂತಿದ್ದಳು. ಅವರ ಕೈಗಳು ವ್ರೈಬ್ರೇಟ್ ಆಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಅವರ ಅಂಗೈಯಲ್ಲಿ ನಡುಗುತ್ತಾ ಇದ್ದದ್ದು ಪುಟ್ಟ ಮೊಬೈಲ್ ಅಲ್ಲ; ಬದಲಿಗೆ ಬೆಟ್ಟದಷ್ಟು ಗಾತ್ರದ ಆಸ್ಪತ್ರೆಯ ಎಸ್ಟಿಮೇಟ್ ಬಿಲ್ – 6,75,000 ರೂಪಾಯಿ.
ಸಂಜೆವರೆಗೂ ಎಲ್ಲ ಸರಿ ಇತ್ತು. 8 ವರ್ಷದ ಮಗ ಮಂಚದಿಂದ ಬಿದ್ದ. ತಲೆಗೆ ಪೆಟ್ಟು. ಸ್ಕ್ಯಾನ್ ಮಾಡಿದಾಗ ಬ್ರೈನ್‌ನಲ್ಲಿ ರಕ್ತ ಹೆಪ್ಪುಗಟ್ಟಿದೆ ಅಂತ ಗೊತ್ತಾಯ್ತು. “ತಕ್ಷಣ ಆಪರೇಷನ್ ಮಾಡಬೇಕು, ಇಲ್ಲಾಂದ್ರೆ…” ಡಾಕ್ಟರ್ ಮಾತು ಮುಗಿಸಲಿಲ್ಲ. ಲಕ್ಷ್ಮಿ ಮತ್ತು ಗಂಡ ರವಿ ಇಬ್ಬರೂ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಾರೆ. ಇಬ್ಬರ ಸಂಬಳ ಒಟ್ಟಿಗೆ ಸೇರಿದರೆ ತಿಂಗಳಿಗೆ 35,000 ರೂಪಾಯಿ ಆಗುತ್ತದೆ.
“ಮೇಡಂ, ಹೆಲ್ತ್ ಇನ್ಶುರೆನ್ಸ್ ಇದ್ಯಾ?” ನರ್ಸ್ ಜಯಲಕ್ಷ್ಮಿ ಕೇಳಿದ ಪ್ರಶ್ನೆಗೆ ಉತ್ತರ “ಇಲ್ಲ” ಅನ್ನೋ ಒಂದೇ ಪದ. ಆ ಒಂದೇ ಪದ ಈಗ 6 ಲಕ್ಷ ರೂಪಾಯಿಯಷ್ಟು ಭಾರವಾಗಿ ಕುಳಿತಿದೆ.
ಆಸ್ಪತ್ರೆ: ದೇವಾಲಯವೋ, ಸಾಲದ ಶೂಲವೋ?
ನಮ್ಮ ದೇಶದಲ್ಲಿ ಯಾರೂ ಬೇಕು ಅಂತ ಆಸ್ಪತ್ರೆಯ ಮೆಟ್ಟಿಲು ಹತ್ತುವುದಿಲ್ಲ. ಕಾಯಿಲೆ, ಆಕ್ಸಿಡೆಂಟ್, ಹಾರ್ಟ್ ಅಟ್ಯಾಕ್ – ಇವು ಆಹ್ವಾನ ಕೊಟ್ಟು ಬರುವುದಲ್ಲ. ಅವು ಬಂದಾಗ ಜೀವ ಉಳಿಸಿಕೊಳ್ಳುವುದೇ ಮುಖ್ಯ. ಆ ಕ್ಷಣದಲ್ಲಿ “ದುಡ್ಡು ಎಷ್ಟಾಗುತ್ತೆ?” ಅಂತ ಕೇಳೋ ಧೈರ್ಯ ಯಾರಿಗೂ ಬರೋಲ್ಲ.
ಆದ್ರೆ ಟ್ರೀಟ್ಮೆಂಟ್ ಮುಗಿದ ಮೇಲೆ ಶುರುವಾಗುತ್ತೆ ನಿಜವಾದ ಯಾತನೆ. ಬಿಲ್ ಬಿಲ್ ಬಿಲ್! ಒಂದು ಕ್ಯಾನ್ಸರ್ ಕೀಮೋಗೆ 1.5 ಲಕ್ಷ ರೂಪಾಯಿ. ಒಂದು ಡೆಂಗ್ಯೂಗೆ ಐಸಿಯೂ ಘಟಕದಲ್ಲಿ 5 ದಿನಕ್ಕೆ 2 ಲಕ್ಷ ರೂಪಾಯಿ. ಒಂದು ಬೈಕ್ ಆಕ್ಸಿಡೆಂಟ್‌ಗೆ ಮಲ್ಟಿಪಲ್ ಫ್ರ್ಯಾಕ್ಚರ್ 4 ಲಕ್ಷ ರೂಪಾಯಿ.
ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತೆ: ಭಾರತದಲ್ಲಿ ಪ್ರತಿ ವರ್ಷ 5.5 ಕೋಟಿ ಜನ ಕೇವಲ ಮೆಡಿಕಲ್ ಬಿಲ್ ಕಟ್ಟೋಕೆ ಆಗದೆ ಬಡತನದ ರೇಖೆಗಿಂತ ಕೆಳಗೆ ಹೋಗ್ತಾರೆ. ಅಂದ್ರೆ ಪ್ರತಿ ನಿಮಿಷಕ್ಕೆ 100 ಕುಟುಂಬಗಳು. ಯಾಕೆ? ಯಾಕಂದ್ರೆ ನಮ್ಮಲ್ಲಿ 75 % ಜನ ತಮ್ಮ ಜೇಬಿಂದಲೇ ಆಸ್ಪತ್ರೆ ಖರ್ಚು ಭರಿಸ್ತಾರೆ. ವಿಮೆ ಮಾತ್ರ ತೆಗೆದುಕೊಂಡಿರುವುದಿಲ್ಲ.
20,000 ರೂ ಉಳಿಸೋಕೆ ಹೋಗಿ 20 ಲಕ್ಷ ಕಳ್ಕೊಂಡ ಕಥೆಗಳು!
ರವಿ 2 ವರ್ಷದ ಹಿಂದೆ ಒಬ್ಬ ವಿಮಾ ಏಜೆಂಟ್ ಬಂದಾಗ “ಸಾರ್, ಫ್ಯಾಮಿಲಿ ಫ್ಲೋಟರ್ ತಗೊಳ್ಳಿ. ವರ್ಷಕ್ಕೆ 22,000 ರೂಪಾಯಿ. 10 ಲಕ್ಷ ರೂಪಾಯಿ ಕವರ್ ಆಗುತ್ತದೆ” ಅಂದಿದ್ದ. ರವಿ ದೊಡ್ಡ ನಗೆ ನಕ್ಕಿದ್ದ: “ಅಣ್ಣಯ್ಯಾ, ತಿಂಗಳಿಗೆ 1,800 ರೂಪಾಯಿ ಕಂತು ಕಟ್ಟೋದಾ? ಸುಮ್ನೆ ವೇಸ್ಟ್. ನಾವೆಲ್ಲ ಗಟ್ಟಿಮುಟ್ಟಾಗಿದೀವಿ” ಎಂದು ಆತನನ್ನು ಸಾಗಹಾಕಿದ್ದ.
“ಈಗ ಅದೇ ರವಿ ಮಗನ ಜೀವ ಉಳಿಸಿಕೊಳ್ಳೋಕೆ ಮನೆಯ ಆಸ್ತಿ ಪತ್ರ ಅಡವಿಡೋಕೆ ರೆಡಿ ಆಗಿದ್ದಾನೆ. ಹೆಂಡತಿ ತಾಳಿ ಬಿಚ್ಚಿಟ್ಟಿದ್ದಾಳೆ. ಅಣ್ಣ-ತಮ್ಮಂದಿರ ಹತ್ತಿರ ಸಾಲ ಕೇಳಬೇಕು ಅಂದುಕೊಂಡಿದ್ದಾನೆ. ಆ ಕಾಲಕ್ಕೆ ಜಸ್ಟ್ ಅನ್ನಿಸುವ 22 ಸಾವಿರ ರೂಪಾಯಿ “ಉಳಿಸೋಕೆ” ಹೋಗಿ ಈಗ 6 ಲಕ್ಷ ರೂಪಾಯಿಯ ಸಾಲದ ಭಾರ. ಜೊತೆಗೆ ಬಡ್ಡಿ ಬಡ್ಡಿ ಬಡ್ಡಿ. ಹೆಚ್ಚು’ವರಿ’ಯಾಗಿ ಅವಮಾನ. ಜೊತೆಗೆ ನಿದ್ದೆಯಿಲ್ಲದ ಆತಂಕದ ರಾತ್ರಿಗಳು.
ಇದನ್ನೇ ಬಯಸದ ಯಾತನೆ ಅನ್ನುವುದು. ಕಾಯಿಲೆ ಒಂದ್ ಕಡೆ ದೇಹವನ್ನ ಸುಡುತ್ತೆ. ಬಿಲ್ ಇನ್ನೊಂದ್ ಕಡೆ ಮನಸ್ಸನ್ನ ಸುಡುತ್ತೆ. ರೋಗಿಯ ಎದುರು ಬಲವಂತವಾಗಿಯಾದರೂ ನಗಬೇಕು, ಮರುಕ್ಷಣವೇ ಹೊರಗೋಡಿ ಬಂದು ಬಿಕ್ಕಿ ಬಿಕ್ಕಿ ಅಳುವ ಪ್ರಸಂಗ. ಇದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಇದ್ಯಾ?
ವಿಮೆ ಅನ್ನೋದು ಖರ್ಚಲ್ಲ, ಅದು ‘ಎಮರ್ಜೆನ್ಸಿ ಫೈರ್ ವಾಲ್’
ನಿಮ್ಮ ಮನೆಗೆ ಬೆಂಕಿ ಬೀಳುತ್ತೆ ಅಂತ ಯಾವತ್ತೂ ಅಂದುಕೊಂಡಿರಲ್ಲ ಅಲ್ಲವೇ!? ಆದ್ರೂ ಫೈರ್ ಇನ್ಶುರೆನ್ಸ್ ತಗೊಳ್ತೀರಾ. ನಿಮ್ಮ ಕಾರು ಆಕ್ಸಿಡೆಂಟ್ ಆಗುತ್ತೆ ಅಂತ ಗೊತ್ತಿರುವುದಿಲ್ಲ. ಆದ್ರೂ ಕಾರ್ ಇನ್ಶುರೆನ್ಸ್ ಮಾಡಿಸಿರ್ತೀರಾ!
ಹಾಗಾದ್ರೆ 70-80 ವರ್ಷ ಬದುಕೋ ಈ ದೇಹಕ್ಕೆ, ಈ ಜೀವಕ್ಕೆ ಇನ್ಶುರೆನ್ಸ್ ಯಾಕೆ ಬೇಡ?
ತಿಂಗಳಿಗೆ 1,500 ರೂಪಾಯಿ. ಅಂದ್ರೆ ದಿನಕ್ಕೆ 60 ರೂಪಾಯಿ. ಅದು ಒಂದು ಪ್ಲೇಟ್ ಮಸಾಲಾಪುರಿ, ಒಂದು ಕಪ್ ಕಾಫಿಯ ಬೆಲೆ. ಈ 60 ರೂಪಾಯಿ ನಿಮ್ಮ ಮತ್ತು ನಿಮ್ಮ ಕುಟುಂಬದ ನಡುವೆ, ಆ 10 ಲಕ್ಷ ರೂಪಾಯಿಯ ಆಸ್ಪತ್ರೆ ಬಿಲ್‌ನ ನಡುವೆ ಒಂದು ದೊಡ್ಡ ಗೋಡೆ ಕಟ್ಟುತ್ತದೆ. ಅದರ ಹೆಸರೇ ಆರೋಗ್ಯ ವಿಮೆ.
ಆ ಗೋಡೆ ಇದ್ದಾಗ, ಡಾಕ್ಟರ್ “ಆಪರೇಷನ್ ಮಾಡಬೇಕು” ಅಂದಾಗ ನೀವು “ಹೂಂ ಮಾಡಿ” ಅಂತ ಧೈರ್ಯವಾಗಿ ಹೇಳ್ತೀರಾ. “ದುಡ್ಡು ಎಲ್ಲಿ ತರೋದು?” ಅನ್ನೋ ಟೆನ್ಷನ್ ಇರಲ್ಲ. ನಿಮ್ಮ ಸಂಪೂರ್ಣ ಗಮನ ರೋಗಿ ಗುಣಮುಖ ಆಗೋ ಕಡೆ ಇರುತ್ತೆ. ಇದಕ್ಕೆ ಬೆಲೆ ಕಟ್ಟೋಕೆ ಆಗುತ್ತಾ?
ಇವತ್ತೇ ಒಂದು ನಿರ್ಧಾರ ಮಾಡಿ:
ಲಕ್ಷ್ಮಿ-ರವಿ ದಂಪತಿಯ ತರಹ ಆಗೋದು ಬೇಡ. “ನಾಳೆ ಮಾಡೋಣ, ನಾಡಿದ್ದು ನೋಡೋಣ” ಅನ್ನೋದು ಬೇಡ. ಕಾಯಿಲೆ ನಾಳೆ-ನಾಡಿದ್ದು ಅಂತ ಕಾಯಲ್ಲ.
ನಿಮ್ಮ ವಯಸ್ಸು, ನಿಮ್ಮ ಕುಟುಂಬದ ಸದಸ್ಯರು, ನಿಮ್ಮ ಬಜೆಟ್ ನೋಡಿಕೊಂಡು ಒಳ್ಳೆ ಫ್ಯಾಮಿಲಿ ಹೆಲ್ತ್ ಇನ್ಶುರೆನ್ಸ್ ತಗೊಳ್ಳಿ. 5 ಲಕ್ಷ ರೂಪಾಯಿಯಿಂದ ಶುರು ಮಾಡಿ, ಆದಷ್ಟೂ 10-15 ಲಕ್ಷ ರೂ ಕವರ್ ಆಗುವಷ್ಟು ಇರಲಿ.
ನೆನಪಿಡಿ: ನೀವು ಕಟ್ಟೋ ಪ್ರತಿ ರೂಪಾಯಿ ಪ್ರೀಮಿಯಂ, ನಿಮ್ಮ ಮಕ್ಕಳ ವಿದ್ಯಾಭ್ಯಾಸವನ್ನ, ನಿಮ್ಮ ಹೆಂಡತಿಯ ತಾಳಿಯನ್ನ, ನಿಮ್ಮ ಹೆಂಡತಿಯ ತಾಳ್ಮೆಯನ್ನ, ನಿಮ್ಮ ಅಪ್ಪ-ಅಮ್ಮನ ನೆಮ್ಮದಿಯನ್ನ, ನಿಮ್ಮ ಮನೆಯ ಆಸ್ತಿ ಪತ್ರವನ್ನ ಕಾಪಾಡುತ್ತದೆ.
ಆರೋಗ್ಯ ವಿಮೆ ಖರ್ಚಿನ ಬಾಬತ್ತು ಅಲ್ಲ. ಅದು ಆಸ್ಪತ್ರೆಯ ಬಿಲ್ಲಿನ ಬೆಂಕಿಯಿಂದ ನಿಮ್ಮ ಸಂಸಾರವನ್ನ ಕಾಪಾಡೋ ಅಗ್ನಿಶಾಮಕ. ಅದು ಕಾಯಿಲೆಯ ಯಾತನೆ ಮತ್ತು ಸಾಲದ ಯಾತನೆಯ ನಡುವೆ ನೀವು ಕಟ್ಟಿಕೊಳ್ಳೋ ರಕ್ಷಣಾ ಗೋಡೆ.
ಆ ಗೋಡೆ ಇವತ್ತೇ ಕಟ್ಟಿಕೊಳ್ಳಿ. ಯಾಕಂದ್ರೆ ನಾಳೆ ಗೋಡೆ ಕಟ್ಟೋಕೆ ಸಮಯ/ ಚೈತನ್ಯ ಇಲ್ಲದಿರಬಹುದು.
(ಲೇಖಕರು: ಡಾ. ಭಾಸ್ಕರ್ ಅಧ್ವೆಂತ)
