Vat Guarantee: ಡೀಸೆಲ್ ಬೆಲೆ ಏರಿಕೆ ರಾಜ್ಯಕ್ಕೆ ಜಾಕ್‌ಪಾಟ್ ಆಗಿದ್ದರೂ, ಬಸ್ ಪ್ರಯಾಣ ದರ ಏರಿಕೆ ಗ್ಯಾರಂಟಿ! ಇಲ್ಲಿದೆ ಕಾರಣಗಳು



ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ದಿನನಿತ್ಯ ಲಕ್ಷಾಂತರ ಜನರು ತಮ್ಮ ತಮ್ಮ ಬದುಕು ಅರಸಿ ಸಂಚರಿಸುತ್ತಿರುತ್ತಾರೆ. ಅದು ಗಾರ್ಮೆಂಟ್ಸ್‌ಗೆ ಹೋಗುವ ಲಕ್ಷ್ಮಿ, ಕಾಲೇಜು ವಿದ್ಯಾರ್ಥಿ ರಾಹುಲ್, ಆಫೀಸ್‌ಗೆ ಹೋಗೋ ಶಿವಣ್ಣ ಹೀಗೆ ಎಲ್ಲರಿಗೂ ಬಸ್ ಅಂದ್ರೆ ಜೀವನಾಡಿ. ಆದ್ರೆ ಈಗ ಅದೇ ಬಸ್ ಪ್ರಯಾಣದ ಟಿಕೆಟ್ ಮೇಲೆ ಆರ್ಥಿಕ ಬರೆ ಬೀಳೋ ಸೂಚನೆ ಸಿಕ್ಕಿದೆ. ಕಾರಣ? ಕೇಂದ್ರ ಸರ್ಕಾರದಿಂದ ಡೀಸೆಲ್ ಬೆಲೆ ಏರಿಕೆ.

ವಿಪರ್ಯಾಸ ನೋಡಿ: ಒಂದು ಕಡೆ ಇಂಧನ ಬೆಲೆ ಏರಿಕೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬ್ಬಬ್ಬಾ ಲಾಟರಿ ಎಂಬಂ’ತಾಗಿದೆʼ. ಇನ್ನೊಂದು ಕಡೆ ಅದೇ ಏರಿಕೆ ನೆಪದಲ್ಲಿ ನಿಮ್ಮ ನಿಮ್ಮ ಬಸ್ ಪ್ರಯಾಣದ ದರ ಜಾಸ್ತಿ ಆಗೋದು ಗ್ಯಾರಂಟಿ ಆಗ್ತಿದೆ. ಈ ವಿರೋಧಾಭಾಸದ ಹಿಂದಿನ ಅಸಲಿ ಕಥೆ ಏನು?

  1. ಸರ್ಕಾರಕ್ಕೆ ಜಾಕ್‌ಪಾಟ್: ರಾಜ್ಯ ಸರ್ಕಾರಕ್ಕೆ VAT ನಿಂದ ಸುಖಾಸುಮ್ಮನೆ 4,000 ಕೋಟಿ ರೂ ಆದಾಯ ಹೆಚ್ಚಳ!

ಕರ್ನಾಟಕ ಸರ್ಕಾರ ಪೆಟ್ರೋಲ್ ಮೇಲೆ 29.84% ಮತ್ತು ಡೀಸೆಲ್ ಮೇಲೆ 21.17% ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸುತ್ತೆ. ಇದು “Ad valorem” ಮಾದರಿ. ಅಂದ್ರೆ ಇಂಧನದ ಮೂಲ ಬೆಲೆ ಜಾಸ್ತಿ ಆದಂತೆ ಸರ್ಕಾರಕ್ಕೆ ಬರೋ ತೆರಿಗೆ ಆದಾಯವೂ ಆಟೋಮ್ಯಾಟಿಕ್ ಜಾಸ್ತಿ ಆಗುತ್ತದೆ.

ಕಳೆದ ಎರಡು ವಾರದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 7-8 ರೂಪಾಯಿ ಏರಿಕೆಯಾಗಿದೆ. ಈ ಒಂದೇ ಏರಿಕೆಯಿಂದ ರಾಜ್ಯದ ಖಜಾನೆಗೆ ವರ್ಷಕ್ಕೆ 3,000 ದಿಂದ 4,000 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಹರಿದು ಬರುತ್ತೆ. ಕಚ್ಚಾ ತೈಲ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ 65 ರಿಂದ 100 ಡಾಲರ್‌ ಕಡೆಗೆ ಏರಿದಂತೆ, ನಮ್ಮ ರಾಜ್ಯದ ಆದಾಯ ಸ್ವಯಂಗತಿಯಲ್ಲಿ ಮೇಲೇರುತ್ತೆ. ಅಂದ್ರೆ ಅಧಿಕ ಮಾಸದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸುಖಾಸುಮ್ಮನೆ ಆದಾಯದ ಹರಿವು ಹೆಚ್ಚಾಗುತ್ತದೆ.

ಆದರೆ ಸರ್ಕಾರ ಹೇಳೋದು “ನಮ್ಮ ಬೊಕ್ಕಸದಲ್ಲಿ ದುಡ್ಡಿಲ್ಲ” ಅಂತ. ಯಾಕೆ? ಯಾಕಂದ್ರೆ 5 ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚವೇ 51,000 ಕೋಟಿ ರೂ. ಈ ಮಧ್ಯೆ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪರಿಹಾರ ಅಲ್ಪ ಪ್ರಮಾಣದ್ದಾಗಿದೆ. ಆರ್ಥಿಕ ಪರಿಸ್ಥಿತಿ ಹೀಗಿರುವಾಗ ಇಂಧನ ಮತ್ತು ಮದ್ಯದ ಮೇಲಿನ ತೆರಿಗೆಯೇ ಈಗ ಸರ್ಕಾರಕ್ಕೆ ದೊಡ್ಡ ಆಧಾರವಾಗಿದೆ. VAT ಕಡಿಮೆ ಮಾಡಿ ಅಂತ ವಿರೋಧ ಪಕ್ಷ, ಜನ ಸಾಮಾನ್ಯರು ಕೂಗಾಡಿದ್ರೂ, ಹಣಕಾಸು ಇಲಾಖೆ “ಅಸಾಧ್ಯ” ಅಂತಿದೆ.

  1. ಸಾರಿಗೆ ನಿಗಮಗಳಿಗೆ 480 ಕೋಟಿ ರೂ ಹೊರೆ: ದರ ಏರಿಕೆ ಯಾಕೆ ಅನಿವಾರ್ಯ?

ಕೇಂದ್ರದಿಂದ ಇಂಧನ ದರ ಏರಿಕೆ ರಾಜ್ಯ ಸರ್ಕಾರಕ್ಕೆ ಜಾಕ್‌ಪಾಟ್ ಆದ್ರೆ, ರಾಜ್ಯ ಸರ್ಕಾರಿ ಸ್ವಾಮ್ಯದ KSRTC, BMTC, NWKRTC, KKRTC ನಿಗಮಗಳಿಗೆ ಇದು “ಡೆತ್‌ವಾರಂಟ್” ಥರ ಆಗಿದೆ.

ಈ ನಾಲ್ಕು ನಿಗಮಗಳು ಪ್ರತಿದಿನ 16.4 ಲಕ್ಷ ಲೀಟರ್ ಡೀಸೆಲ್ ಬಳಸುತ್ತವೆ. ಇತ್ತೀಚಿನ 7-8 ರೂಪಾಯಿ ಏರಿಕೆಯಿಂದ ಬಲ್ಕ್ ಡೀಸೆಲ್ ಬೆಲೆ 87.04 ರಿಂದ 94 ರೂಪಾಯಿಗೆ ಜಿಗಿದಿದೆ.

ALSO READ :  ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

ಲೆಕ್ಕಾಚಾರ: ದಿನಕ್ಕೆ 16.4 ಲಕ್ಷ ಲೀಟರ್ × 7-8 ರೂಪಾಯಿ ಏರಿಕೆ = ದಿನಕ್ಕೆ 1.27 ಕೋಟಿ ರೂ ಹೆಚ್ಚುವರಿ ಖರ್ಚು. ವರ್ಷಕ್ಕೆ 480 ಕೋಟಿ ರೂಪಾಯಿ ಹೊಸ ಹೊರೆ.

BMTC ಅಧಿಕಾರಿಗಳ ಪ್ರಕಾರ: “ಇಂಧನ ಖರ್ಚು ದಿನಕ್ಕೆ 21 ಲಕ್ಷ ರೂಪಾಯಿ ಜಾಸ್ತಿ ಆಗಿದೆ. ಈ ಆರ್ಥಿಕ ಒತ್ತಡದಲ್ಲಿ ಬಸ್ ದರ ಪರಿಷ್ಕರಣೆ ಅನಿವಾರ್ಯವಾಗಿದೆ.

  1. ಈಗಾಗಲೇ ಸಾಲದ ಸುಳಿಯಲ್ಲಿ ನಿಗಮಗಳು:

ಈ ನಾಲ್ಕು ಸಾರಿಗೆ ನಿಗಮಗಳು ಈಗಾಗಲೇ 2,288 ಕೋಟಿ ರೂಪಾಯಿ ಪಿ.ಎಫ್. ಬಾಕಿ ಉಳಿಸಿಕೊಂಡಿವೆ. ಇಂಧನ ಬಿಲ್‌ನದ್ದೇ 822 ಕೋಟಿ ರೂ ಬಾಕಿ ಇದೆ. ಒಟ್ಟು ಖರ್ಚಿನಲ್ಲಿ 46.1% ನೌಕರರ ಸಂಬಳಕ್ಕೆ ಹೋದ್ರೆ, 32.5% ಇಂಧನ ಬಾಬತ್ತಿಗೆ ಹೋಗುತ್ತೆ.

ಜನವರಿ 2025 ರಲ್ಲಿ ಒಮ್ಮೆ ದರ ಏರಿಕೆ ಮಾಡಿದ್ರೂ, ಈಗ ಮತ್ತೆ ಏರಿಕೆ ಮಾಡದೆ ಇದ್ದರೆ ರಾಜ್ಯ ಸಾರಿಗೆ ನಿಗಮಗಳು ಸರಾಗವಾಗಿ ಸಂಚರಿಸೋದು ದುಃಸ್ಥಿತಿಯಾಗುತ್ತದೆ ಅನ್ನೋ ಸ್ಥಿತಿ!

  1. ಆಮ್ ಆದ್ಮಿಗೆ ಮಾತ್ರ ಡಬಲ್ ಹೊಡೆತ:

ಒಂದ್ಕಡೆ ಪೆಟ್ರೋಲ್-ಡೀಸೆಲ್ ಬೆಲೆ ಏರಿ ಜನಸಾಮಾನ್ಯರ ಬೈಕ್, ಕಾರ್ ಓಡಾಟ ದುಬಾರಿ ಆಗಿದೆ. ಅದರಿಂದ ತಪ್ಪಿಸಿಕೊಳ್ಳೋಕೆ ಜನ ಬಸ್ ಹತ್ತಿದ್ರೆ, ಇಲ್ಲಿ ಟಿಕೆಟ್ ದರ ಜಾಸ್ತಿ! ಈಗ 30 ರೂಪಾಯಿ ಇರೋ ಟಿಕೆಟ್ 38- 40 ರೂಪಾಯಿ ಆದ್ರೆ, ತಿಂಗಳಿಗೆ 26 ದಿನ ಓಡಾಡೋ ವ್ಯಕ್ತಿಗೆ 260 ರೂಪಾಯಿ ಹೆಚ್ಚುʼವರಿʼ ಖರ್ಚು.

  1. ಪರಿಹಾರ ಇದ್ಯಾ? ಆದರೆ, ರೆಗ್ಯುಲೇಟರಿ ಕಮಿಟಿ ನೆನೆಗುದಿಗೆ

ಅಕ್ಟೋಬರ್ 2025 ರಲ್ಲಿ ಸರ್ಕಾರ ‘Public Transport Fare Regulatory Committee’ ರಚನೆಗೆ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ಇವತ್ತಿನವರೆಗೂ ಅಧ್ಯಕ್ಷ ಮತ್ತು ಸದಸ್ಯರ ನೇಮಕವೇ ಆಗಿಲ್ಲ.

ಗಮನಿಸಿ “ದರ ಏರಿಕೆ ಬಗ್ಗೆ ನಿಗಮಗಳ ಮಂಡಳಿಗಳೇ ಪ್ರಸ್ತಾವನೆ ಸಲ್ಲಿಸಬೇಕು” ಎಂದು ಅದಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ.

ಕೊನೆಯ ಮಾತು: ಇಂಧನ ದರ ಏರಿಕೆ ಎಂಬ ಜ್ವಾಲೆಯಲ್ಲಿ ಮೈ ಕಾಯಿಸಿಕೊಳೋ ರಾಜ್ಯ ಸರ್ಕಾರ!

ಬೇಸಿಗೆ ಬಿಸಿಗೆ ಇಡೀ ರಾಜ್ಯ ಧಗಧಗ ಉರಿಯುತ್ತಿರುವಾಗ ಕೂಲ್‌ ಕೂಲ್‌ ಆಗಿ ಸರ್ಕಾರಕ್ಕೆ ಇಂಧನ ಬೆಲೆ ಏರಿಕೆ ಜಾಕ್‌ಪಾಟ್ ಹೊಡೆದಿದೆ. ಆದರೆ ಗಮನಿಸಿ, ಅದೇ ಸರ್ಕಾರದ ಸಾರಿಗೆ ನಿಗಮಗಳಿಗೆ ಈ ಬೆಲೆಏರಿಕೆ ಎಂಬುದು ನಷ್ಟದ ಬಾಬತ್ತು. ಆ ನಷ್ಟ ತುಂಬಿಕೊಳ್ಳೋಕೆ ಅವು ಜನರ ಜೇಬಿಗೆ ಕೈ ಹಾಕುವುದು ಇದೇ ಸರ್ಕಾರದ ಮತ್ತೊಂದು ಗ್ಯಾರಂಟಿ ಗಿಫ್ಟ್‌!

480 ಕೋಟಿ ರೂಪಾಯಿ ಹೊರೆ ತುಂಬಿಸೋಕೆ ಬಸ್ ದರ ಏರಿಕೆ “ಅನಿವಾರ್ಯ” ಅಂತ ಅಧಿಕಾರಿಗಳು ಹೇಳ್ತಿದ್ದಾರೆ. ಅಂದ್ರೆ ಸದ್ಯದ ಪ್ರಶ್ನೆ “ಏರಿಕೆ ಆಗುತ್ತಾ?” ಅಂತ ಅಲ್ಲ. ಬದಲಿಗೆ “ಎಷ್ಟಾಗುತ್ತೆ, ಯಾವಾಗ ಆಗುತ್ತೆ?” ಅಂತ ಮಾತ್ರ. ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಜಾಕ್‌ಪಾಟ್, ಜನರಿಗೆ ಜೇಬಿಗೆ ಕತ್ತರಿ – ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ.


Leave a Comment