ಇದೆಲ್ಲಾ ಹೇಗೆ ಸಾಧ್ಯ ಸಾರ್…ವೈದ್ಯಕೀಯ ರಜೆ ಮಂಜೂರು ಮಾಡಿದ್ದು ನಾಗರಾಜ್ ಮೂರ್ತಿನೇ..! ಗೈರಾದ್ರು 3 ತಿಂಗಳು ವೇತನ ಕೊಡಿಸಿದ್ದೂ ಅವರೇ..! ವಿಚಾರಣೆ ನಡೆಸದೆ ಚಾಲಕನಿಗೆ ಶಿಕ್ಷೆಯ ತೀರ್ಮಾನ ಕೈಗೊಂಡಿದ್ದು ಅವರೇ..!
ಬೆಂಗಳೂರು;ಮೊದಲಿಗೆ,ಬಿಎಂಟಿಸಿ ನೂತನ ಎಂಡಿಯಾಗಿ ಅಧಿಕಾರ ಸ್ವೀಕರಿಸಿರುವ ರಾಮಚಂದ್ರನ್ ಅವರಿಗೆ ಶುಭಾಷಯಗಳು.ಕೆಲವೇ ಕೆಲವರ ಹಿತಾಸಕ್ತಿಗೆ ಈಡಾಗಿ ನಷ್ಟದ ಅಂಚಿಗೆ ತಲುಪಿರುವ ಸಂಸ್ಥೆಯನ್ನು ಲಾಭದ ಹಳಿಗೆ ತಂದು ಗಮನಾರ್ಹ ಬದಲಾವಣೆಗೆ ಕಾರಣವಾಗಬೇಕೆನ್ನುವ ಉಮೇದು-ಹುಮ್ಮಸ್ಸಿ ನಲ್ಲಿರುವ ನೂತನ ಎಂಡಿ ಅವರ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದು ನಮ್ಮ ಶುಭ ಹಾರೈಕೆ.
ನೂತನ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ರಾಮಚಂದ್ರನ್ ಅವರ ಗಮನಕ್ಕೆ ದೂರುಗಳು ಬಂದಿರಬೇಕು.ಅದರಲ್ಲಿ ಬಹುತೇಕ ಸಾರಿಗೆ ಸಿಬ್ಬಂದಿಯದ್ದೇ ಆಗಿದ್ದರೂ ಆಶ್ಚರ್ಯವಿಲ್ಲ. ತರೇವಾರಿ ದೂರುಗಳನ್ನು ಗಮನಿಸಿದಾಗ ಅವರಿಗೆ ಒಂದ್ ಕ್ಷಣ ಅಚ್ಚರಿ-ವಿಚಿತ್ರ-ಹಾಸ್ಯಾಸ್ಪದ ಎನ್ನುವಂತ ಭಾವನೆ ಮೂಡಿದರೂ ಆಶ್ಚರ್ಯವಿಲ್ಲ.ನಮ್ಮ ಗಮನಕ್ಕೆ ಬಂದ ಇಂತದ್ದೇ ಒಂದು ದೂರನ್ನು ರಾಮಚಂದ್ರನ್ ಅವರ ಗಮನಕ್ಕೆ ತರಲು ಬಯಸುತ್ತಿದ್ದೇವೆ.
ಅಂದ್ಹಾಗೆ ಈ ಪ್ರಕರಣ ಮೇಲ್ನೋಟಕ್ಕೆ ಅಧಿಕಾರಿಯೊಬ್ಬರ ಯಡವಟ್ಟಿನ ಪರಿಣಾಮ ಉಂಟಾಗಿರುವ ಸಮಸ್ಯೆ ಎನಿಸುತ್ತೆ.ಬಿಎಂಟಿಸಿ ಕೇಂದ್ರ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರು ಮಾಡಿದ ಯಡವಟ್ಟು ಅವರ ಬುಡವನ್ನೇ ಕಾಯಿಸುವ ಸಾಧ್ಯತೆಗಳನ್ನು ಸೃಷ್ಟಿಸಿದೆ. ತಾಯಿಯ ಅನಾರೋಗ್ಯಕ್ಕೆ ವೈದ್ಯಕೀಯ ರಜೆಯನ್ನು ಮಂಜೂರು ಮಾಡುವ ಅವರೇ ಅದನ್ನು ಗೈರು ಎಂದು ಪರಿವರ್ತಿಸಿ ಆತನ ಖಾತೆಗೆ ಜಮೆ ಆದ ಸಂಬಳವನ್ನೀಗ ವಾಪಸ್ ಮಾಡುವಂತೆ ಒತ್ತಡ ಹೇರಿ ಗೊಂದಲ ಮಾಡಿಕೊಂಡಿದ್ದಾರೆ.ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಆತನಿಂದ ಕರ್ತವ್ಯ ಲೋಪವಾಗಿದೆ ಎಂದು ಒಂದು ಇಂಕ್ರಿಮೆಂಟ್ ನ್ನು ಕಟ್ ಮಾಡಿರುವುದು ಅಭಾಸಪೂರ್ಣವಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ದೀರ್ಘ ಗೈರು ಹಾಜರಾದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸದೆ ತಪ್ಪಿತಸ್ಥನಲ್ಲ ಎಂದು ಕ್ಲೀನ್ ಚಿಟ್ ನೀಡಿರುವುದು ಕೂಡ ಸಾಕಷ್ಟು ಗುಮಾನಿಗೆ ಕಾರಣವಾಗಿದೆ.
ನಡೆದಿದ್ದೇನು: ನಮಗೆ ಸಿಕ್ಕಿರುವ ದಾಖಲೆಗಳೇ ಹೇಳುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯ ವಲಯದ ಡಿಪೋ 13 ರಲ್ಲಿ ಬಸಪ್ಪ.ಎಂ.( ಬಸಪ್ಪ ಮುಗುದಮ್ ) ಚಾಲಕ -ಕಂ-ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ(ಬಿಲ್ಲೆ ಸಂಖ್ಯೆ 6298) ತಾಯಿಗೆ ಕ್ಯಾನ್ಸರ್ ಇದೆ ಎಂದು ಕಾರಣವೊಡ್ಡಿ ಜೂನ್ 2023 ರಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರಲ್ಲಿ ವೈದ್ಯಕೀಯ ರಜೆ ಕೋರಿ ಅರ್ಜಿ ಸಲ್ಲಿಸಿದ್ದರಂತೆ. ವಿಷಯದ ಗಹನತೆ ಗಮನಿಸಿ ನಾಗರಾಜಮೂರ್ತಿ ವೈದ್ಯಕೀಯ ರಜೆಯನ್ನೂ ಮಂಜೂರು ಮಾಡಿದ್ದಾರೆ.ಆ ತಿಂಗಳು ಬಸಪ್ಪ ಸಂಬಳ ಪಡೆದಿದ್ದಾರೆ.
ಆದರೆ ಇದ್ದಕ್ಕಿದ್ದಂತೆ ನಾಗರಾಜಮೂರ್ತಿ ಅವರಿಗೆ ಅದೇನ್ ಅನ್ನಿಸಿತೋ ಗೊತ್ತಿಲ್ಲ. ವೈದ್ಯಕೀಯ ರಜೆ ಮಂಜೂರಾದ ಕಾಲಮ್ ನಲ್ಲೆಲ್ಲಾ ಗೈರು ಎಂದು ನಮೂದಿಸಿದ್ದಾರೆ.ಇದರಿಂದ ಆತಂಕಗೊಂಡ ಬಸಪ್ಪ ಏಕೆ ಎಂದು ಪ್ರಶ್ನಿಸಿದ್ದಾರೆ.ಆದರೆ ಸಮರ್ಪಕ ಉತ್ತರ ಬಂದಿಲ್ಲ.ಮೊದಲೇ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಾಯಿಯನ್ನು ಉಳಿಸಿಕೊಳ್ಳೋ ಹೋರಾಟದಲ್ಲಿದ್ದ ಬಸಪ್ಪ ಈ ವಿಷಯ ಕೇಳಿದ ಮೇಲಂತೂ ಜಿಗಪ್ಸೆಗೊಂಡು ಇನ್ನೊಂದಷ್ಟು ದಿನ ರಜೆ ಮೇಲೆ ತೆರಳುತ್ತಾನೆ.
ಏನನ್ನುತ್ತದೆ ಇಲಾಖೆ ನಿಯಮ… ಬಸಪ್ಪ ಅಷ್ಟೇ ಅಲ್ಲ.ನಿಗಮದಲ್ಲಿ ಯಾರೇ ತಪ್ಪು ಮಾಡಿದರೂ ಅವರಿಗೆ ಮೊದಲು ಕಾರಣ ಕೇಳಿ ನೊಟೀಸ್ ಹೊರಡಿಸಬೇಕಾಗುತ್ತದೆ.ಈ ವಿಷಯದಲ್ಲಿ ಬಸಪ್ಪನಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಯಬೇಕಿತ್ತು.ತನಿಖೆ ಮಾಡಬೇಕಾಗಿತ್ತು.ಆತನಿಗೆ ಹೇಳಿಕೆ ನೀಡಲು ಅವಕಾಶ ಕೊಡಬೇಕಿತ್ತು.ಆತನ ಹೇಳಿಕೆ ಸಮಂಜಸವಲ್ಲ ಎಂದು ದೃಢಪಟ್ಟ ಮೇಲೆಯೇ ಆತನನ್ನು ದೋಷಿ ಎಂದು ತೀರ್ಮಾನಿಸಿ ಸಂಸ್ಥೆಯ ನಿಯಾಮವಳಿ ಪ್ರಕಾರ (ಸಿ ಅಂಡ್ ಡಿ ನಿಯಾಮವಳಿ) ಶಿಕ್ಷೆನೋ ದಂಡನೋ ವಿಧಿಸಬೇಕಿತ್ತು.ಅದ್ಯಾವುದನ್ನೂ ಮಾಡದೆ ತನಿಖೆಯ ಅವಶ್ಯಕತೆ ಇಲ್ಲ ಎಂದು ತಾನೇ ತೀರ್ಮಾನಿಸಿ ಏಕಪಕ್ಷೀಯವಾಗಿ ಶಿಕ್ಷೆ ಪ್ರಕಟಿಸಿರುವುದು ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ.
ನಿಗಮದಲ್ಲಿ ಸ್ಯಾಲರಿ ಹೇಗೆ ಬಟಾವಡೆ ಆಗುತ್ತೆ: ಯಾವುದೇ ಅಧಿಕಾರಿ ಸಿಬ್ಬಂದಿ ಇರಲಿ ಅವರ ತಿಂಗಳ ಹಾಜರಾತಿ ಮೇಲೆ ಅವರ ಸ್ಯಾಲರಿ ನಿರ್ದಾರವಾಗುತ್ತದೆ. ಕಿರಿಯ ಸಹಾಯಕರು (ಜ್ಯೂನಿಯರ್ ಅಸಿಸ್ಟೆಂಟ್ ) ಹಾಜರಾತಿ ಮೇಲೆ ಬಿಲ್ ಪ್ರಿಪೇರ್ ಮಾಡ್ತಾರೆ.ಅದನ್ನು ಸೂಪರ್ ವೈಸೆರ್( ಮೇಲ್ವಿಚಾರಕರು )ಚೆಕ್ ಮಾಡಿ ಅದೀಕೃತ ಮಾಡುತ್ತಾರೆ. ಲೆಕ್ಕಪತ್ರ ಶಾಖೆಯಲ್ಲಿರುವ ಸೂಪರಿಡೆಂಟ್ ( ಅಧೀಕ್ಷಕ) ಅದನ್ನು ಪರಿಶೀಲಿಸುತ್ತಾರೆ. ಅದನ್ನು ಮಾಡಿದ ಮೇಲೆ ವಿಭಾಗದ ಲೆಕ್ಕಾಧಿಕಾರಿ ಪರಿಶೀಲನೆ ಮಾಡಿ ಸಹಿ ಮಾಡುತ್ತಾರೆ.ಅಂತಿಮವಾಗಿ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಸಹಿ ಮಾಡುತ್ತಾರೆ.ಆಮೇಲೆನೇ ಸ್ಯಾಲರಿ ಸಿಬ್ಬಂದಿ ಬ್ಯಾಂಕ್ ಖಾತೆಗೆ ಡೆಪಾಸಿಟ್ ಆಗುತ್ತದೆ.
ಇನ್ನು ರಜೆ ಮಂಜೂರು ಮಾಡುವ ಅವಕಾಶ ಡಿಪೋ ಮ್ಯಾನೇಜರ್ ಗಿರುತ್ತದೆ, ದೀರ್ಘಾವಧಿ ಅಥವಾ ತುರ್ತು ಉದ್ದೇಶದ ರಜೆಯನ್ನು ಡಿಸಿ ಮಂಜೂರು ಮಾಡುತ್ತಾರೆ. ಬಸಪ್ಪ ಡಿಪೋ ಮ್ಯಾನೇಜರ್ ಗೆ ಪ್ರಸ್ತಾವನೆ ಸಲ್ಲಿಸಿದ್ರೂ ಧೀರ್ಘಾವಧಿ ರಜೆ ಇದ್ದುದ್ದರಿಂದ ಅವರು ಡಿಸಿಗೆ ರವಾನೆ ಮಾಡಿದ್ರು. ಸಂದರ್ಭ ವನ್ನು ಪರಿಗಣಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಬಸಪ್ಪನಿಗೆ ರಜೆ ಮಂಜೂರು ಮಾಡಿರುವುದು ದಾಖಲೆಗಳಲ್ಲೇ ಗೊತ್ತಾಗುತ್ತೆ.
ಲೀವ್ ಕೊಟ್ಟವರು ಅವರೇ ಆಬ್ಸೆಂಟ್ ಹಾಕಿದವರು ಅವ್ರೇ.ನಾನೇಕೆ ನನ್ನ ಸಂಬಳ ವಾಪಸ್ ಕೊಡ್ಲಿ: ನಾಗರಾಜಮೂರ್ತಿ ಅವರಿಂದ ವಿವಾದಕ್ಕೆ ಸಿಲುಕಿರುವ ಬಸಪ್ಪ ಅವರನ್ನೇ ಸಂಪರ್ಕಿಸಲಾಯಿತು.ಆ ವೇಳೆ ರಜೆ ಕೊಟ್ಟು ಅದನ್ನೇಕೆ ಗೈರು ಎಂದು ನಮೂದು ಮಾಡಿದ್ರೋ ನನಗೆ ಗೊತ್ತಾಗುತ್ತಿಲ್ಲ.ನಮ್ಮಮ್ಮ ಕ್ಯಾನ್ಸರ್ ಗೆ ಒಳಗಾಗಿದ್ದರಿಂದ ಶುಶ್ರೂಷೆಗೆ ರಜೆಯನ್ನು ಕೇಳಿದ್ದೆ.ಅದನ್ನು ಅವರೇ ಸ್ಯಾಂಕ್ಷನ್ ಮಾಡಿದ್ದರು.ಆದರೆ ಆಮೇಲೆ ನೋಡುದ್ರೆ ರಜೆಯನ್ನು ಕ್ಯಾನ್ಸಲ್ ಮಾಡಿ ಗೈರು ಎಂದು ನಮೂದಿಸಿದ್ದಾರೆ.ಕೇಳಿದ್ದಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ.ನಾನು ಬೇಸರದ ಜತೆಗೆ ಅಮ್ಮನ ಆರೋಗ್ಯಮುಖ್ಯವಾಗಿದ್ದರಿಂದ ಅನಿರ್ದಿಷ್ಟಾವಧಿಗೆ ರಜೆ ಹೋದೆ.ಈ ವೇಳೆ ನನ್ನ 108 ದಿನಗಳ ಸಂಬಳವನ್ನು ಹಾಕಿದ್ರು.ನನಗೆ ತುರ್ತಿದ್ದರಿಂದ ಅದನ್ನು ಬಳಸಿಕೊಂಡೆ.ಆದರೆ ಆ ಮೇಲೆ ಅವರೇ ಕರೆ ಮಾಡಿ ಸಂಬಳ ವಾಪಸ್ ಮಾಡು ಎಂದು ಕೇಳಿದ್ರೆ ನಾನೇಕೆ ಕೊಡಲಿ.ನನ್ನ ಮೇಲೆ ಎನ್ ಕ್ವೈಯರಿ ಬೇಕಾದ್ರೆ ರೆಡಿ ಮಾಡಿ ಎದುರಿಸಲಿಕ್ಕೆ ಸಿದ್ದ ಎಂದೂ ಹೇಳಿದೆ.ಆದರೆ ವಿಚಾರಣೆಯನ್ನೇ ಮಾಡದೆ ನನ್ನ ಒಂದು ಇನ್ ಕ್ರಿಮೆಂಟ್ ಕಟ್ ಮಾಡಿದ್ದಾರೆ. ನಾನು ಇದನ್ನು ವಿರೋಧಿಸಿದ್ದೇನೆ.ನನಗೆ ನೊಟೀಸ್ ಕೊಡದೆ ಅವರು ತಪ್ಪು ಮಾಡಿದ್ದರೆ ಅದಕ್ಕೆ ನಾನೇಕೆ ಶಿಕ್ಷೆ ಅನುಭವಿಸಬೇಕು.ನಾನು ಅವರ ಆದೇಶದಂತೆ ಕೆಲಸಕ್ಕೆ ನಿಯೋಜನೆಗೊಂಡು ಕೆಲಸ ಮಾಡಿದ್ದೇನೆ ಎನ್ತಾರೆ.
ಸ್ಪಷ್ಟನೆ ನೀಡಬೇಕಿರುವ ನಾಗರಾಜಮೂರ್ತಿ ನಾಟ್ ರೀಚಬಲ್: ಈ ಬಗ್ಗೆ ಸ್ಪಷ್ಟನೆ ಕೇಳೊಕ್ಕೆ ನಾಗರಾಜ ಮೂರ್ತಿ ಅವರನ್ನು ಅವರ ಮೊಬೈಲ್ 9036882278 ಗೆ ಕರೆ ಮಾಡಿದ್ರೂ ಸನ್ಮಾನ್ಯರಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ.ಮಾದ್ಯಮಸ್ನೇಹಿತರೇನಕರು ಮೆಸೇಜ್ ಮಾಡಿ ಸ್ಪಷ್ಟನೆ ಕೇಳಿದ್ರೂ ಸಾಹೇಬರಿಂದ ನೋ ರೆಸ್ಪಾನ್ಸ್..ಆಗಲೇ ಅವರ ಬಗ್ಗೆ ಕೇಳಿಬಂದಿರುವ ಕರ್ತವ್ಯಲೋಪ-ಅಧಿಕಾರ ದುರ್ಬಳಕೆ ಆರೋಪದಲ್ಲಿ ಹುರುಳಿರಬಹುದೆನ್ನಿಸಿತು.
ರಜೆ ಕೊಟ್ಟು ಅದನ್ನು ಗೈರು ಎಂದು ಡಿಕ್ಲೇರ್ ಮಾಡಲು ಕಾರಣವೇನು..? ಮೂಲ ಪ್ರಶ್ನೆ ಇರೋದೇ ಇಲ್ಲಿ.ವೈದ್ಯಕೀಯ ರಜೆಗೆ ಬಸಪ್ಪ ನಿಯಮಗಳ ಪ್ರಕಾರವೇ ಅರ್ಜಿ ಹಾಕಿದಾಗ ಅದನ್ನು ಡಿಪೋ ಮ್ಯಾನೇಜರ್ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರು ಅನುಮೋದಿಸಿದ್ದಾರೆ.ವೈದ್ಯಕೀಯ ರಜೆ ಮೇಲೆ ಬಸಪ್ಪ ತೆರಳಿದ್ದಾನೆ.ಆದ್ರೆ ಅದೇಕೆ ದಿಢೀರ್ ಆ ರಜೆಯನ್ನು ಕ್ಯಾನ್ಸಲ್ ಮಾಡಿದ್ದೇಕೆ..? ಎನ್ನುವುದೇ ಪ್ರಶ್ನೆ.ನಿಯಮಗಳ ಪ್ರಕಾರ ಹಾಗೆ ಮಾಡೊಕ್ಕೆ ಬರುತ್ತಾ.? ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಲ್ಲ..ಹಾಗಿದ್ದಾಗ್ಯೂ ಏಕೆ ಹಾಗೆ ಮಾಡಿದ್ರು ಎಂದ್ರೆ ಬೇರೆಯದೇ ಕಾರಣಗಳಿಗೆ ಹಾಗೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ರಜೆ ಕ್ಯಾನ್ಸಲ್ ಮಾಡಿ ಗೈರು ಎಂದು ದೃಢೀಕರಿಸಿದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರೇಕೆ ವೇತನಕ್ಕೆ ಮಂಜೂರಾತಿ ಕೊಟ್ಟರು..ಹಾಗೆ ಮಾಡುವುದು ತಪ್ಪಲ್ವಾ..?108 ದಿನಗಳ ವೇತನವನ್ನು ಧೀರ್ಘಕಾಲದ ಗೈರಿನ ವೇಳೆ ಏಕೆ ಬಿಡುಗಡೆ ಮಾಡಿದ್ರು.ಸರಿಸುಮಾರು 1 ಲಕ್ಷದ 20 ಸಾವಿರದಷ್ಟು ಹಣಕ್ಕೆ ಬೆಲೆ ಇಲ್ಲವೇ.? ಅದಕ್ಕೆ ಲೆಕ್ಕ ಇಲ್ಲವೇ..? ಹಾಗೆ ಬಿಡುಗಡೆ ಮಾಡಿಸಿದ್ದರ ಹಿಂದೆ ಬೇರೆಯ ಡಿಮ್ಯಾಂಡ್ ಇತ್ತಾ..?
ಇದರ ನಡುವೆಯೇ ತಾನೇನಾದ್ರೂ ಪ್ರಾಬ್ಲಂಗೆ ಸಿಲುಕಬಹುದು ಎಂಬ ಆಲೋಚನೆಯಲ್ಲಿ ಆತನಿಗೆ ತಾವೇ ಕರೆ ಮಾಡಿ ಡ್ಯೂಟಿ ರಿಪೋರ್ಟ್ ಮಾಡಿಕೋ ಎಂದು ಬಲವಂತ ಮಾಡಿದ್ದೇಕೆ..? ಡ್ಯೂಟಿ ಮಾಡುವಾಗ ಡ್ರಾ ಮಾಡಿಕೊಂಡ ವೇತನವನ್ನು ವಾಪಸ್ ಪಾವತಿಸುವಂತೆ ಸೂಚಿಸಿದ್ದೇಕೆ..? ತನ್ನ ವಿರುದ್ಧ ವಿಚಾರಣೆ ನಡೆಸಿ ಎಂದುಕೇಳಿಕೊಂಡ ಹೊರತಾಗ್ಯೂ ಅದಕ್ಕೆ ಒಪ್ಪದೇ ಏಕಾಏಕಿ ವಿಚಾರಣೆ ಅಗತ್ಯವಿಲ್ಲ
.ಆದ್ರೆ ಧೀರ್ಘ ಗೈರಾಗಿರುವುದು ತಪ್ಪೆಂದು ಘೋಷಿಸಿ,ಅದಕ್ಕಾಗಿ ದೋಷಿ ಎಂದು ತೀರ್ಮಾನಿಸಿ ಒಂದು ವರ್ಷದವರೆಗೆ ಕರ್ನಾಟಕ ರಾಜ್ಯ ರಸ್ತೆ ನೌಕರರ ( ನಡತೆ ಮತ್ತು ಶಿಸ್ತು)ನಿಯಾಮವಳಿ 1971 ಹಾಗೂ ಆನಂತರದ ತಿದ್ದುಪಡಿ ಅನುಸೂಚಿಯ 3ನೇ ಭಾಗದ ನಿಯಮ 19(2) ರ ಪ್ರದತ್ತವಾದ ಅಧಿಕಾರ ಬಳಸಿಕೊಂಡು ಉಪದಾನ ಕಾಯ್ದೆ1972 ರ ಸೆಕ್ಷನ್ 2(ಎ) ಅನ್ವಯ ಉಪದಾನಕ್ಕೆ ಕೊಕ್ಕೆ ಹಾಕಿದ್ದು ಎಷ್ಟು ಸರಿ..?
ವಿಚಾರಣೆಗೆ ಆತನಿಗೆ ನೊಟೀಸ್ ಕೊಡದೆ, ಭೌತಿಕವಾಗಿ ಆತನನ್ನು ಕರೆಯಿಸಿ ಆತನಿಂದ ಹೇಳಿಕೆ ಪಡೆದ ನಂತರವೇ ಆತನದು ತಪ್ಪೆಂದು ಸಾಬೀತಾದ ಮೇಲೆಯೇ ಕ್ರಮ ಕೈಗೊಳ್ಳಬೇಕೆನ್ನುವ ನಿಯಮವಿದ್ದರೂ ಅದ್ಯಾವುದನ್ನು ಮಾಡದೆ ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳೊಕ್ಕೆ ಬಸಪ್ಪ ಅವರನ್ನು ಬಲಿಪಶು ಮಾಡಲು ಯತ್ನಿಸಿದ್ದು ಸರಿನಾ..? ಆದರೆ ಅದೃಷ್ಟ ಚೆನ್ನಾಗಿತ್ತು.ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ರೂ ಅದಕ್ಕೆ ಕ್ಯಾರೆ ಎನ್ನದೆ ತನ್ನ ನಿರ್ದಾರದಲ್ಲಿ ಅಚಲವಾಗಿದ್ದರಿಂದಾಗಿ ನಾಗರಾಜಮೂರ್ತಿ ಅವರ ನಿಜ ಬಣ್ಣ ಬಯಲಾಗಿದೆ.
ನಾಗರಾಜಮೂರ್ತಿ ಮಾಡಿಕೊಂಡ ಯಡವಟ್ಟುಗಳು: ಬಸಪ್ಪನ ವಿಚಾರವನ್ನು ಅವಲೋಕಿಸಿದಾಗ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರಿಂದ ಕೆಳಕಂಡ ಯಡವಟ್ಟುಗಳು ನಡುದ್ವಾ ಎನಿಸುತ್ತದೆ.ಅದರ ಕೆಲವೊಂದು ಅಂಶಗಳು ಇಂತಿವೆ.
-ವೈದ್ಯಕೀಯ ರಜೆ ತಾವೇ ಮಂಜೂರು ಮಾಡಿ ತಾವೇ ಅದನ್ನು ಗೈರು ಎಂದು ತಿದ್ದುಪಡಿ ಮಾಡಿದ್ದು.
-108 ದಿನ ಗೈರಾದರೂ ಆತನ ಸಂಬಳದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು
-ತಾನು ಮಾಡಿದ ಯಡವಟ್ಟಿನಿಂದ ತೊಂದರೆಯಾಗುತ್ತದೆ ಎಂದು ಗೌಪ್ಯವಾಗಿ ಕರೆ ಮಾಡಿ ಡ್ಯೂಟಿಗೆ ಕರೆಯಿಸಿಕೊಂಡಿದ್ದು.
-ತನ್ನಿಂದಾದ ಯಡವಟ್ಟನ್ನು ಸರಿಪಡಿಸಿಕೊಳ್ಳೊಕ್ಕೆ ಬಸಪ್ಪನಿಗೆ ಡ್ರಾ ಮಾಡಿಕೊಂಡ ವೇತನದ ಹಣ ವಾಪಸ್ ಜಮೆ ಮಾಡು ಎಂದಿದ್ದು.
-ನಾನೇಕೆ ಕೊಡಲಿ ಎಂದು ನ್ಯಾಯಯುತವಾಗಿ ಕೇಳಿದ್ದಕ್ಕೆ ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದು
-ನನ್ನ ವಿರುದ್ಧ ಬೇಕಾದರೆ ವಿಚಾರಣೆ ನಡೆಸಿ ಎಂದು ಮನವಿ ಮಾಡಿಕೊಂಡರೂ ಅದಕ್ಕೆ ಕ್ಯಾರೆ ಎನ್ನದಿದ್ದುದು.
-ಯಾವುದೇ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಆತನನ್ನು ದೋಷಿ ಎಂದು ಪರಿಗಣಿಸಿದ್ದು
-ದೋಷಿ ಎಂದು ಪರಿಗಣಿಸಿದ್ದಷ್ಟೇ ಅಲ್ಲ,ಆತನ 1 ವರ್ಷದ ಭಡ್ತಿ ವೇತನವನ್ನು ಸಂಚಿತರಹಿತವಾಗಿ ತಡೆಹಿಡಿಯುವ ಆದೇಶ ಹೊರಡಿಸಿದ್ದು.
ಕೆಲವೊಮ್ಮೆ ಹೀಗಾದ್ರೆ ಏನ್ ಮಾಡಲಾಗುತ್ತೆ: ಕಣ್ತಪ್ಪಿನಿಂದಲೋ , ಕೈತಪ್ಪಿನಿಂದಲೋ ಅಥವಾ ಬೇರೆ ಕಾರಣಗಳಿಂದಲೋ ಕೆಲವೊಮ್ಮೆ ಇಂಥಾ ತಪ್ಪುಗಳಾಗುವುದು ಸಹಜ..ಆಗೋದೇ ಇಲ್ಲವೆಂದೇನಲ್ಲ..ಹಾಗಾದಲ್ಲಿ ಬಸಪ್ಪನಿಗೆ ಸಂದರ್ಭ-ಹಿನ್ನಲೆ ಹೇಳಿ ನೊಟೀಸನ್ನೋ, ಮೆಸೇಜನ್ನೋ ನೀಡಬಹುದಿತ್ತು. ಅದಕ್ಕೆ ಒಪ್ಪದಿದ್ದಾಗ ಆತನ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವಿತ್ತು.ಹೇಗೆ ಎಂದರೆ ಆತ ಹಣ ಕೊಡಲು ನಿರಾಕರಿಸಿದಾಗ ಆತನ ಅಕೌಂಟ್ ನಿಂದ ಪ್ರತಿ ತಿಂಗಳು 500 ರೂ ನಿಂದ ಹಿಡಿದು ಹೆಚ್ಚೆಂದರೆ 1000 ರೂವರೆಗಿನ ಹಣ ಕಟ್ ಮಾಡುವ ಅವಕಾಶವಿರುತ್ತದೆ. ಅದರೆ ಇಲ್ಲಿ ಅಂಥಹಾ ಯಾವುದೇ ನಿಯಮ ಪಾಲನೆಯಾಗಿಲ್ಲ.ಏಕೆಂದರೆ ಇಲ್ಲಿ ತಪ್ಪು ನಡೆದಿರುವುದು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಅವರಿಂದ.ಅವರು ನೊಟೀಸ್ ಜಾರಿ ಮಾಡುವ ಅಧಿಕಾರವನ್ನಾಗಲಿ,ನೈತಿಕತೆಯನ್ನಾಗಲಿ ಹೊಂದಿಯೇ ಇಲ್ಲ.ತಮ್ಮಿಂದಾದ ತಪ್ಪನ್ನು ಮರೆಮಾಚಿಕೊಳ್ಳೊದಷ್ಟೇ ಅವರ ಉದ್ದೇಶವಾಗಿತ್ತು.ಬಸಪ್ಪನಿಂದ ಹಣವನ್ನು ವಾಪಸ್ ಜಮೆ ಮಾಡಿಸಿಕೊಂಡು ಅದನ್ನು ಆತನ ತಲೆಗೆ ಕಟ್ಟುವುದಷ್ಟೇ ಉದ್ದೇಶವಾಗಿತ್ತಾ ಎನ್ನುವುದು ಪರಿಸ್ತಿತಿ ಅವಲೋಕಿಸಿದಾಗ ಗೊತ್ತಾಗುತ್ತೆ.
ನಿರ್ದಾಕ್ಷಿಣ್ಯ ಕ್ರಮ ಜಾರಿಯಾಗಬೇಕಿದೆ.:ಅಂದ್ಹಾಗೆ ನಮಗೆ ದೊರೆತ ಫೀಡ್ ಬ್ಯಾಕ್ ಅನ್ವಯ, ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ಅವರ ಬಗ್ಗೆ ಇಲಾಖೆಯಲ್ಲಿ ಹೇಳಿಕೊಳ್ಳುವಂತ ಒಳ್ಳೆಯ ಅಭಿಪ್ರಾಯಗಳಿಲ್ಲ. ಕೇಂದ್ರ ವಲಯದಲ್ಲೇ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರಂತೆ. ಸಿಬ್ಬಂದಿಯನ್ನು ಸತಾಯಿಸುವುದು,ಗೋಳೋಯ್ದುಕೊಳ್ಳುವುದು ಅವರ ಅಭ್ಯಾಸವಂತೆ. ಸಿಬ್ಬಂದಿ ಜತೆ ಒಳ್ಳೆಯ ಸಂಬಂಧವಿಲ್ಲ.ಎಲ್ಲರೂ ತನ್ನನ್ನು ನೋಡಿ ನಡುಗಬೇಕೆನ್ನುವ ವಾತಾವರಣ ಸೃಷ್ಟಿಸಿಕೊಂಡಿದ್ದಾರಂತೆ.ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿಅವರಿಗೆ ಸಂಬಳ-ಭತ್ಯೆ ನೀಡುವ ವಿಚಾರದಲ್ಲಿ ತಮ್ಮದೇ ಒಂದು ನಿಯಮ ರೂಪಿಸಿಕೊಂಡಿದ್ದಾರಂತೆ.ಆ ನಿಯಮದ ಪ್ರಕಾರವೇ ಎಲ್ಲವೂ ನಡೆಯಬೇಕಂತೆ.ತನ್ನ ಜತೆ ಸರಿಯಾದ ನಡುವಳಿಕೆ ಇಟ್ಟುಕೊಳ್ಳದವರು ಬಸಪ್ಪನಂತೆ ಶಿಕ್ಷೆಗೆ ಗುರಿಯಾಗುವುದು ಅವರ ವಿಭಾಗದ ವ್ಯಾಪ್ತಿಯಲ್ಲಿ ಮಾಮೂಲಂತೆ.
ಆದರೆ ಅಧಿಕಾರಿಯಾಗಿದ್ದುಕೊಂಡು ಸಿಬ್ಬಂದಿಯನ್ನು ಕ್ಷುಲ್ಲಕ ಕಾರಣಕ್ಕೆ ಗೋಳೋಯ್ದುಕೊಂಡು ಅವರನ್ನು ಅಯ್ಯಯ್ಯೋ ಎನ್ನುವಷ್ಟು ಸತಾಯಿಸುತ್ತಿದ್ದ ನಾಗರಾಜಮೂರ್ತಿ ಕೈ ಚಳಕದಿಂದ ವಿನಾಕಾರಣ ಸಸ್ಪೆಂಡ್-ಡಿಸ್ಮಿಸ್ ಆದವರು ಅದೆಷ್ಟೋ ಸಿಬ್ಬಂದಿಯಂತೆ.ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಹಾಕುತ್ತಿರುವ ಹಿಡಿಶಾಪ ಅಷ್ಟಿಷ್ಟವಲ್ಲವಂತೆ.ಎಲ್ಲರಿಗೂ ಒಂದು ಟೈಮ್ ಬರುತ್ತೆ ಎನ್ನುವಂತೆ ಇವತ್ತು ನಾಗರಾಜಮೂರ್ತಿ ತಾನು ಮಾಡಿಕೊಂಡ ಯಡವಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ್ದಾರಂತೆ.ಅವರಿಗೂ ಕೂಡ ತಮ್ಮಂತೆಯೇ ಶಿಕ್ಷೆ ಆಗಬೇಕು.ನಾವು ನರಳಿದಂತೆ ಅವರೂ ನರಳಬೇಕು.ನಮ್ಮ ಕಷ್ಟ ಅವರಿಗೂ ಗೊತ್ತಾಗಬೇಕು ಎಂದು ಹೇಳುತ್ತಿರುವವರೇ ಹೆಚ್ಚಂತೆ.
ನೂತನ ಎಂಡಿ ಸಾಹೇಬ್ರು ನಾಗರಾಜಮೂರ್ತಿ ಅವರನ್ನು ಅಧಿಕಾರಿ ಎಂದು ಮನ್ನಿಸದಿರಲಿ: ಹೊಸದಾಗಿ ಎಂಡಿಯಾಗಿ ಅಧಿಕಾರ ವಹಿಸಿಕೊಂಡಿರುವ ರಾಮಚಂದ್ರನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.ನಾಗರಾಜಮೂರ್ತಿ ಒಬ್ಬ ಅಧಿಕಾರಿ ಎನ್ನುವ ಕಾರಣಕ್ಕೆ ಅವರನ್ನು ಮನ್ನಿಸುವ ಕೆಲಸಕ್ಕೆ ಕೈ ಹಾಕದಿರಲಿ. ಒಬ್ಬ ಅಧಿಕಾರಿಗೆ ಅವರು ಮಾಡಿದ ತಪ್ಪಿಗೆ ಶಿಕ್ಷೆ ಆದರೇನೆ ಸಂಸ್ಥೆಯಲ್ಲಿರುವ ಕೆಲ ಭ್ರಷ್ಟರು ಕೂಡ ಎಚ್ಚೆತ್ತುಕೊಳ್ಳುತ್ತಾರೆ.ಎಲ್ಲಕ್ಕಿಂತ ಹೆಚ್ಚಾಗಿ ಸಿಬ್ಬಂದಿ ಮಾಡಿದ್ರೆ ಮಾತ್ರ ಶಿಕ್ಷೆ ಅಧಿಕಾರಿ ಮಾಡಿದ್ರೆ ಮಾಫಿ ಎನ್ನುವಂತ ತಾರತಮ್ಯ ಧೋರಣೆಯ ಸಂದೇಶಕ್ಕೆ ಬ್ರೇಕ್ ಬಿದ್ದಂತಾಗುತ್ತದೆ..