ಶಿವಮೊಗ್ಗ:ರಾಜಕಾರಣದಲ್ಲಿ ಎಲ್ಲವೂ ಸಹ್ಯ..ಸಾಧ್ಯ ಎನ್ನುವ ಮಾತಿದೆ..ಜತೆಗಿದ್ದವರು ದೂರವಾಗ್ತಾರೆ..ಶತೃಗಳು ಮಿತ್ರರಾಗ್ತಾರೆ..ಹಾಗೆಯೇ ಮಿತ್ರರ ನಡುವೆ ವೈರತ್ವ ಬೆಳೆದುಬಿಡುತ್ತೆ..ಆದರೆ ಇದು ಶಾಶ್ವತವಲ್ಲ ಎನ್ನೋದು ಮಾತ್ರ ಸತ್ಯ.ಪಕ್ಷ-ನಾಯಕರು ಎಂದುಕೊಂಡು ಕಾರ್ಯಕರ್ತರು ಕಚ್ಚಾಡಿಕೊಳ್ತಿದ್ರೆ ನಾಯಕರು ಮಾತ್ರ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ತಿರ್ತಾರೆ..ಇದು ರಾಜಕೀಯದ ಭಾಗ ಬಿಡಿ.. ಇದಕ್ಕೆ ಶಿವಮೊಗ್ಗದ ರಾಜಕಾರಣವೂ ಹೊರತಲ್ಲ..ಏಕಂದ್ರೆ, ಯಾವ ಶಿಷ್ಯನಿಗೆ ಯಾರು, ರಾಜಕೀಯ ಗುರು ಅಂಥ ಕರೆಸಿಕೊಂಡಿದ್ರೋ ಅದೇ ಗುರುವನ್ನು ಇವತ್ತು ಅವರ ಶಿಷ್ಯೋತ್ತಮ ಎನಿಸಿಕೊಂಡಿದ್ದವರೇ ಸಾರ್ವಜನಿಕವಾಗಿ ವಾಚಾಮಗೋಚರವಾಗಿ ಟೀಕಿಸುವ,ಎಚ್ಚರಿಸುವ ಮಾತನ್ನಾಡಿದ್ದಾರೆ.ಇದು ಶಿವಮೊಗ್ಗ ರಾಜಕಾರಣದ ಮಟ್ಟಿಗೆ ಮಾತ್ರ ಅತ್ಯಂತ ಗಂಭೀರ ಹಾಗೂ ರೋಚಕವಾದ ವಿಷಯ ಎಂದೇ ಬಿಂಬಿಸಿಕೊಳ್ಳುತ್ತಿದೆ.

ಅಂದ್ಹಾಗೆ ಶಿವಮೊಗ್ಗದ್ದು, ರಾಜ್ಯ ರಾಜಕಾರಣಕ್ಕೆ ರಾಜಕೀಯ ಮುತ್ಸದ್ದಿಗಳನ್ನು ನೀಡಿದ ಹೆಗ್ಗಳಿಕೆ.ಐವರು ಮುಖ್ಯಮಂತ್ರಿಗಳನ್ನು ನೀಡಿರುವ ಏಕೈಕ ಜಿಲ್ಲೆ ಎನ್ನುವ ಕೀರ್ತಿ ಬೇರೆ ಇದಕ್ಕಿದೆ.ಈ ನೆಲದಲ್ಲಿನ ರಾಜಕೀಯ-ರಾಜಕಾರಣಕ್ಕೆ ವೈಚಾರಿಕ ಹಿನ್ನಲೆಯಿದೆ. ಹೋರಾಟ-ಚಳುವಳಿಗಳ ಸ್ಪರ್ಷವಿದೆ.ಹಾಗಾಗಿನೇ ಇವತ್ತಿಗೂ ಶಿವಮೊಗ್ಗ ಜಿಲ್ಲೆಯನ್ನು ರಾಜಕಾರಣದ ವಿಚಾರದಲ್ಲಿ ನೋಡುವ ದೃಷ್ಟಿಕೋನವೇ ವಿಭಿನ್ನ..ಇಂಥಾ ವೈಚಾರಿಕಾ-ತಾತ್ವಿಕ-ತಾರ್ಕಿಕ-ಸೈದ್ಧಾಂತಿಕ ಹಿನ್ನಲೆಯುಳ್ಳ ಶಿವಮೊಗ್ಗ ರಾಜಕಾರಣ ಇತ್ತೀಚಿನ ವರ್ಷಗಳಲ್ಲಿ ಆ ಎಲ್ಲಾ ಛಾಪು-ಒಣಪು ಎಲ್ಲವನ್ನು ಕಳೆದುಕೊಂಡು ಕೇವಲ ಕೋಮು ಆಧಾರಿತವಾಗುತ್ತಾ ಬಂದಿರುವುದು ನಿಜಕ್ಕೂ ತಲೆ ತಗ್ಗಿಸುವಂತ ವಿಚಾರ.ಇದಕ್ಕೆ ರಾಜಕೀಯದ ಅಧಿಕಾರ-ಸ್ಥಾನಮಾನಗಳಲ್ಲಿರುವ ರಾಜಕಾರಣಿಗಳೇ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಶಿಷ್ಯನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಗುರು ಈಶ್ವರಪ್ಪ: ಶಿವಮೊಗ್ಗ ರಾಜಕಾರಣದಲ್ಲಿ ಸಧ್ಯಕ್ಕೆ ಚರ್ಚ ಆಗುತ್ತಿರೋದೇ ಎಮ್ಮೆಲ್ಲೆ ಚನ್ನಬಸಪ್ಪ( ಚೆನ್ನಿ) ಮತ್ತು ಮಾಜಿ ಶಾಸಕ ಕೆ.ಎಸ್ ಈಶ್ವರಪ್ಪ ನಡುವಿನ ವಿವಾದ.ಹಾಗೆ ನೋಡಿದರೆ ಈಶ್ವರಪ್ಪ ಹಾಲಿ ಶಾಸಕರಾಗಿರುವ ಚನ್ನಬಸಪ್ಪ ಅವರ ಶಿಷ್ಯ. ತನ್ನ ರಾಜಕೀಯ ಗುರು ಎಂದು ಚನ್ನಬಸಪ್ಪ ಅವರೇ ಹೇಳಿಕೊಂಡಿರುವುದುಂಟು. ಚನ್ನಬಸಪ್ಪಗೆ ಟಿಕೆಟ್ ಸಿಕ್ಕು, ಅವರು ಗೆಲ್ಲುವವರೆಗೂ ಇದೇ ಈಶ್ವರಪ್ಪ ಗೆಲುವಿಗೆ ತನ್ನದೇ ಆದ ರೀತಿಯಲ್ಲಿ ಸಹಕಾರ-ಮಾರ್ಗದರ್ಶನ ನೀಡಿದ್ದರೆನ್ನುವ ಮಾತಿದೆ.ಹಿಂದುಗಳ ಮತವನ್ನು ತನ್ನ ಶಿಷ್ಯ ಚೆನ್ನಿಗೇ ಹಾಕಬೇಕೆಂದು ಅವರು ಗೌಪ್ಯವಾಗಿ ಕ್ಯಾಂಪೇನ್ ಕೂಡ ಮಾಡಿದ್ರು. ಚೆನ್ನಿ ಗೆಲುವಲ್ಲಿ ಈಶ್ವರಪ್ಪ ಅವರ ಪಾತ್ರ ನಿರ್ಣಾಯಕವಾಗಿಯೇ ಇತ್ತು.ಹಾಗೆಂದು ಚೆನ್ನಿ ಬದಲಾಗಿರಲಿಲ್ಲ.ತನ್ನ ಗೆಲುವಿಗೆ ಕಾರಣರಾದ ಈಶ್ವರಪ್ಪ ಅವರ ಬಗ್ಗೆ ಗೌರವ-ಆದರ-ಸೌಜನ್ಯಪೂರ್ವಕವಾದ ಭಾವನೆಯನ್ನೇ ಹೊಂದಿದ್ರು. ಮೊನ್ನೆ ಮೊನ್ನೆಯವರೆಗೂ ಅವರಿಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು.ಯಾರದೇ ಬಳಿಯಾಗಲಿ, ಯಾವುದೇ ವೇದಿಕೆಗಳಲ್ಲಾಗಲಿ, ಇಬ್ಬರು ಪರಸ್ಪರ ನಿಂದನಾಪೂರ್ವಕವಾಗಿ ಮಾತನಾಡಿ ಮುಜುಗರ ಹುಟ್ಟಿಸುತ್ತಿರಲಿಲ್ಲ.ಇಬ್ಬರ ನಡುವೆ ರಾಜಕೀಯ ವೈರುದ್ದ್ಯಗಳಿದ್ದಾಗ್ಯೂ ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳುತ್ತಿರಲಿಲ್ಲ.
ಆದರೆ ಶಿವಮೊಗ್ಗದಲ್ಲಿ ಇದ್ದಕ್ಕಿದ್ದಂತೆ ಸುದ್ದಿಗೋಷ್ಟಿಯಲ್ಲಿ ತನ್ನ ಗುರು ಈಶ್ವರಪ್ಪ ವಿರುದ್ಧ ಅವರ ರಾಷ್ಟ್ರಭಕ್ತ ಬಳಗ ಸಂಘಟನೆಯನ್ನು ಗುರಿಯಾಗಿಸಿಕೊಂಡು ಎಮ್ಮಲ್ಲೆ ಚೆನ್ನಿ ಹರಿಹಾಯುವ ಮೂಲಕ ಶಿವಮೊಗ್ಗ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ.ಯಾವತ್ತೂ.ಯಾವ ಸನ್ನಿವೇಶದಲ್ಲೂ ತನ್ನ ರಾಜಕೀಯ ಗುರುವನ್ನು ನೆಪಮಾತ್ರಕ್ಕೂ ಟೀಕಿಸುವ ಧೈರ್ಯ ತೋರದಿದ್ದ ಚನ್ನಬಸಪ್ಪ ಇದೇ ಮೊದಲ ಬಾರಿಗೆ ಈಶ್ವರಪ್ಪ ವಿರುದ್ದ ರಾಜಕೀಯವಾಗಿ ತೊಡೆತಟ್ಟಿದಂತ ಭಾವನೆ ಸುದ್ದಿಗೋಷ್ಟಿಯಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಗಮನಿಸಿದಾಗ ಮೂಡಿದ್ದು ಸುಳ್ಳಲ್ಲ.. ಇಷ್ಟು ವರ್ಷ ಸುಮ್ಮನಿದ್ದ ಚನ್ನಬಸಪ್ಪ ಇದ್ದಕ್ಕಿದ್ದಂತೆ ರಾಷ್ಟ್ರಭಕ್ತ ಸಂಘಟನೆಯಿಂದ ತನ್ನ ರಾಜಕೀಯ ಬೆಳವಣಿಗೆ ಹಾಗೂ ಭವಿಷ್ಯಕ್ಕೆ ಮುಳುವಾಗ್ತದೆನ್ನುವ ಲಹರಿಯಲ್ಲಿ ಮಾತನಾಡಿದ್ದು ಇಡೀ ಬಿಜೆಪಿ ವಲಯದಲ್ಲಿ ಅಚ್ಚರಿ ಜತೆಗೆ ಹತ್ತಾರು ಪ್ರಶ್ನೆಗಳ ಸೃಷ್ಟಿಗೆ ಕಾರಣವಾಗಿದೆ.
ಈಶ್ವರಪ್ಪ-ಕಾಂತೇಶ್ ಅಸ್ಥಿತ್ವಕ್ಕೆ ಸಂಘಟನೆ ಅನಿವಾರ್ಯ: ಅಂದ್ಹಾಗೆ ಬಿಜೆಪಿ ತೊರೆದ ಮೇಲೆ ಈಶ್ವರಪ್ಪ ತಮ್ಮ ಉಳಿವು-ಅಸ್ಥಿತ್ವಕ್ಕಾಗಿ ಕಟ್ಟಿಕೊಂಡ ಸಂಘಟನೆಯೇ ರಾಷ್ಟ್ರಭಕ್ತರ ಸಂಘಟನೆ.ರಾಜಕೀಯವಾಗಿ ಏನೂ ಆಗದ..ಎಲ್ಲಿಯೂ ಸಲ್ಲದಂತೆ ಆಗಿರುವ ತನ್ನ ಮಗ ಕಾಂತೇಶ್ ಗೆ ರಾಜಕೀಯ ನೆಲೆ ಕಲ್ಪಿಸಿಕೊಡುವುದು ಕೂಡ ಇದರ ಉದ್ದೇಶ ಎನ್ನುವುದೂ ಸ್ಪಷ್ಟ.ತನ್ನ ಉತ್ತರಾಧಿಕಾರಿಯಾಗಿ ತನ್ನ ಮಗನನ್ನು ಪ್ರತಿಷ್ಟಾಪಿಸಬೇಕೆನ್ನುವ ಉಮೇದನ್ನು ಈಗಲ್ಲ ಈ ಹಿಂದೆಯೇ ಈಶ್ವರಪ್ಪ ವ್ಯಕ್ತಪಡಿಸುತ್ತಾ ಬಂದಿದ್ದರು.ಇದು ಚೆನ್ನಬಸಪ್ಪ ಅವರಿಗೂ ಗೊತ್ತಿದೆ.ಆದರೆ ಇದ್ದಕ್ಕಿದ್ದಂತೆ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿದ್ದು ಯಾಕೆ ಎನ್ನುವುದು ಎಲ್ಲರ ಪ್ರಶ್ನೆ.ರಾಷ್ಟ್ರಭಕ್ತ ಸಂಘಟನೆ ಹಿಂದೂತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ,ಅದರ ನೈಜ ಉದ್ದೇಶ ಮಗನಿಗೆ ರಾಜಕೀಯವಾಗಿ ಅಸ್ಥಿತ್ವ ಕಲ್ಪಿಸಬೇಕೆನ್ನುವುದಾಗಿದೆ ಎನ್ನುವುದನ್ನು ತನ್ನ ಅತ್ಯಾಪ್ತ ಚೆನ್ನಬಸಪ್ಪ ಅವರ ಬಳಿ ಈಶ್ವರಪ್ಪ ಹೇಳಿಕೊಂಡಿರಲೇ ಇಲ್ಲ ಎನ್ನುವ ರೀತಿಯಲ್ಲಿ ಈ ವಿಷಯ ತನಗೆ ಇದೇ ಮೊದಲ ಬಾರಿಗೆ ಗೊತ್ತಾಗಿದೆ ಎನ್ನುವಂತೆ ಚೆನ್ನಿ ಕೆಂಡಾಮಂಡಲವಾಗಿದ್ದು ಯಾಕೋ,ಸ್ವಲ್ಪ ಅತಿರೇಕ ಹಾಗೂ ಅಭಾಸವೆನಿಸಿದೆ.
ಸುಮ್ಮನಿದ್ದ ಎಮ್ಮೆಲ್ಲೆ ದಿಢೀರ್ ಹರಿಹಾಯ್ದಿದ್ದೇಕೆ..? ಆದರೆ ಇಷ್ಟು ವರ್ಷ ಸುಮ್ಮನಿದ್ದ ಚೆನ್ನಬಸಪ್ಪ ಯಾಕೆ ಇದ್ದಕ್ಕಿದ್ದಂತೆ ಈಶ್ವರಪ್ಪ ಅವರನ್ನು ಟೀಕಿಸುವ,ಅವರ ಮೇಲೆ ವಾಕ್ಸಮರ ನಡೆಸುವ ಮಟ್ಟಕ್ಕೆ ತಲುಪಿದ್ರು ಎನ್ನುವುದೇ ಎಲ್ಲರಲ್ಲೂ ತಲೆಗೆ ಹುಳು ಬಿಟ್ಟುಕೊಳ್ಳುವಂತೆ ಮಾಡಿದೆ.ರಾಷ್ಟ್ರಭಕ್ತ ಸಂಘಟನೆಯಿಂದ ತನ್ನ ರಾಜಕೀಯ ಭವಿಷ್ಯಕ್ಕೆ ತೊಂದರೆ ಇದೆ ಎನ್ನುವುದು ಬಹುಷಃ ಅವರಿಗೆ ಮನದಟ್ಟಾಗಿಯೇ ಈ ರೀತಿ ಹರಿಹಾಯ್ದರಾ..? ಗುರು ಎನಿಸಿಕೊಂಡವನು ಶಿಷ್ಯನ ಬೆಳವಣಿಗೆಗೆ ಕಂಟಕವಾಗುತ್ತಿದ್ದಾರಲ್ಲಾ ಎನ್ನುವ ಹತಾಷೆಗೆ ಈ ರೀತಿ ಮಾತನಾಡಿದ್ರಾ ಗೊತ್ತಾಗ್ತಿಲ್ಲ.ಯಾಕಂದ್ರೆ ಬಿಜೆಪಿ ತೊರೆದರೂ ಈಶ್ವರಪ್ಪ ಅವರ ಈ ಕ್ಷಣದ ತುಡಿತ ಬಿಜೆಪಿ ಹಾಗೂ ಹಿಂದುತ್ವವೇ ಆಗಿದೆ.ಯಡಿಯೂರಪ್ಪ, ವಿಜಯೇಂದ್ರರ ವಿಷಯದಲ್ಲಿ ವ್ಯಕ್ತಿಗತ ಕಾರಣಕ್ಕೆ ವೈರತ್ವ ಇದ್ದರೂ ಬಿಜೆಪಿ ಮತ್ತು ಮೋದಿ ಎಂದು ಬಂದಾಗ ಎದೆಯುಬ್ಬಿಸಿ ಬೆಂಬಲಿಸಲು ಮುಂದಾಗ್ತಾರೆ ಈಶ್ವರಪ್ಪ..
ಬಿಜೆಪಿ ತೊರೆದು ರಾಷ್ಟ್ರಭಕ್ತರ ಸಂಘಟನೆ ಮಾಡಿಕೊಂಡಿದ್ದರೂ ಅದರಿಂದ ರಾಜಕೀಯವಾಗಿ ಏನೂ ವರ್ಕೌಟ್ ಆಗುವುದಿಲ್ಲ ಎನ್ನುವ ಸತ್ಯವೂ ಈಶ್ವರಪ್ಪ ಅವರಿಗೆ ಗೊತ್ತಿದೆ.ಹಾಗಾಗಿನೇ ಯಾರಾದ್ರೂ ಬಿಜೆಪಿಗೆ ಬರುವಂತೆ ಆಹ್ವಾನ ನೀಡುತ್ತಾರಾ ಎಂದು ಕಾದು ಕುಂತಿದ್ದಾರೆ.ಮುಂಚೂಣಿ ನಾಯಕರು ಕರೆದ್ರೆ ಸಾಕು, ಬೇಷರತ್ತಾಗಿ ಬಿಜೆಪಿ ಸೇರಲು ಈಶ್ವರಪ್ಪ ತುದಿಗಾಲಲ್ಲಿ ನಿಂತಿದ್ದಾರೆನ್ನುವುದು ಸತ್ಯ.ಬಹುಷಃ ಈಶ್ವರಪ್ಪ ಕೂಡ ಇದನ್ನು ಅಲ್ಲಗೆಳೆಯೊಕ್ಕೆ ಸಾಧ್ಯವಿಲ್ಲವೇನೋ..?ಹಾಗಾಗಿ ಆಗಾಗ ಅನೇಕ ನಾಯಕರ ಮೂಲಕ ಈಶ್ವರಪ್ಪ ಪಕ್ಷಕ್ಕೆ ಬರಬೇಕೆನ್ನುವ ಮಾತನ್ನು ಆಡಿಸುತ್ತಿರುತ್ತಾರೆ.ಬಿಜೆಪಿ ಸೇರಿದ ಮೇಲೆ ತನ್ನ ಮಗನ ರಾಜಕೀಯ ಭವಿಷ್ಯ ನೋಡಿದರಾಯ್ತು ಎನ್ನುವುದು ಈಶ್ವರಪ್ಪ ಅವರ ಮನಸಿನಲ್ಲಿದೆ ಎನ್ನುವುದು ಅವರ ಅತ್ಯಾಪ್ತರ ಮಾತು.
ಚೆನ್ನಿ- ಈಶ್ವರಪ್ಪರ ಪ್ರೀ ಪ್ಲ್ಯಾನ್ ಗೇಮಾ..? ಚಿತ್ರಣವನ್ನುಸೂಕ್ಷ್ಮವಾಗಿ ಗಮನಿಸಿದಾಗ ಇಂತದ್ದೊಂದು ಅನುಮಾನವೂ ಕಾಡಬಹುದು. ತನಗೆ ರಾಜಕೀಯ ಭವಿಷ್ಯ ಕಲ್ಪಿಸಿ, ಕಳೆದ ಬಾರಿಯ ತನ್ನ ಚುನಾವಣೆಯ ವೆಚ್ಚವನ್ನೆಲ್ಲಾ ಭರಿಸಿದ ಗುರುವಿಗೆ ಋಣ ತೀರಿಸ್ಲಿಕ್ಕೇನಾದ್ರೂ ಚೆನ್ನಿ ಹೀಗೆ ಮಾಡಿದ್ರಾ.. ಗೊತ್ತಾಗ್ತಿಲ್ಲ.ಆದರೆ ಹೀಗೊಂದು ಟಾಕ್ ಮಾತ್ರ ಶಿವಮೊಗ್ಗದಲ್ಲಿದೆ.2028ರ ವಿಧಾನಸಭಾ ಚುನಾವಣೆಯಲ್ಲಿ ತನಗೆ ಮತ್ತೆ ಟಿಕೆಟ್ ಸಿಗುವುದರ ಬಗ್ಗೆ ಚೆನ್ನಿ ಅವರಲ್ಲೇ ಅನುಮಾನ ಇದ್ದಿರಬಹುದೇನೋ..? ಇಂಥದ್ದೊಂದು ಅವಕಾಶ ತನ್ನ ಗುರುವಿಗೆ ಬಿಟ್ಟರೆ ಇನ್ನ್ಯಾರಿಗೂ ಸಿಗಬಾರದೆನ್ನುವ ಕಾರಣಕ್ಕೆ ರಾಷ್ಟ್ರಭಕ್ತ ಸಂಘಟನೆ, ಕಾಂತೇಶ್ ಸ್ಪರ್ದೆಯ ಬಗ್ಗೆ ಈಶ್ವರಪ್ಪ ಅವರ ಸುಳಿವಿನ ಚರ್ಚೆಯನ್ನು ಪ್ರಜ್ಞಾಪೂರ್ವಕವಾಗಿ ಚೆನ್ನಬಸಪ್ಪ ಮಾಡಿದ್ದಿರಬಹುದು..? ಬಿಜೆಪಿಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ಈಶ್ವರಪ್ಪ ಪ್ರಯತ್ನ ಮಾಡ್ತಿದ್ದಾರೆನ್ನುವ ಸುದ್ದಿ ಹೈಕಮಾಂಡ್ ವರೆಗೆ ತಲುಪಿದ್ರೆ ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ವಾಪಸ್ ಬರುವಂಥ ಆಹ್ವಾನ ದೊರೆಯಬಹುದೇ..?
ಹಾಗೆ ಬಂದಲ್ಲಿ ಅವರೋ ಅಥವಾ ಅವರ ಮಗನನ್ನೋ ನಿಲ್ಲಿಸಿ ಗೆಲ್ಲಿಸಿ ತನ್ನ ಋಣ ಸಂದಾಯ ಮಾಡಲಿಕ್ಕೇನಾದ್ರೂ ಇಂತದ್ದೊಂದು ಗೇಮ್ ಪ್ಲ್ಯಾನ್ ಮಾಡಿದ್ರಾ ಚೆನ್ನಬಸಪ್ಪ ಎನ್ನುವುದರ ಚರ್ಚೆ ಬೇರೆ ಪಕ್ಷಗಳಲ್ಲಲ್ಲ…ಸ್ವತಃ ಬಿಜೆಪಿ ಪಕ್ಷದೊಳಗೇ ನಡೆಯುತ್ತಿದೆ.ಆದರೆ ಬಿಜೆಪಿ ತೊರೆದ ಮೇಲೆ ಬಿಜೆಪಿ ಬಗ್ಗೆನೇ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಈಶ್ವರಪ್ಪ ಬಗ್ಗೆ ಪಕ್ಷದ ಹೈಕಮಾಂಡ್ ಗೆ ಒಲವಿಲ್ಲ ಎನ್ನುವ ಮಾತಿಲ್ಲ..ಅಂತದ್ದರೊಳಗೆ ಚೆನ್ನಬಸಪ್ಪ ಮಾಡಿರುವುದು ಗೇಮ್ ಪ್ಲ್ಯಾನ್ ಎನ್ನುವುದೇನಾದ್ರೂ ಹೈಕಮಾಂಡ್ ಗೆ ಗೊತ್ತಾದಲ್ಲಿ ಚೆನ್ನಬಸಪ್ಪ ಅವರ ರಾಜಕೀಯ ಭವಿಷ್ಯಕ್ಕೂ ಕಲ್ಲು ಬೀಳುವುದರಲ್ಲಿ ಅನುಮಾನವಿಲ್ಲ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.
ಹೈಕಮಾಂಡ್ ವಿವರಣೆ ಕೇಳಿದೆಯಾ..? ತನ್ನ ರಾಜಕೀಯ ಗುರುವಾದ ಈಶ್ವರಪ್ಪ ಅವರನ್ನು ಎಮ್ಮೆಲ್ಲೆ ಚೆನ್ನಬಸಪ್ಪ ತರಾಟೆಗೆ ತೆಗೆದುಕೊಂಡಿರುವ ವಿಚಾರದ ಬಗ್ಗೆ ಸಾಕಷ್ಟು ರೀತಿಯ ಚರ್ಚೆ-ವಿಶ್ಲೇಷಣೆಗಳು ನಡೆಯುತ್ತಿರುವ ನಡುವೆಯೇ ಈ ಒಂದು ವಿಷಯವನ್ನು ರಾಜ್ಯದ ಹೈಕಮಾಂಡ್ ಕೂಡ ಗಂಭೀರವಾಗಿ ಪರಿಗಣಿಸಿದಂತಿದೆ.ಹಾಗಾಗಿ ವಿಷಯ ಮಾದ್ಯಮಗಳಲ್ಲಿ ಗೊತ್ತಾಗುತ್ತಿದ್ದಂತೆ ಚೆನ್ನಿ ಅವರಿಂದ ವಿವರಣೆ ಕೇಳಿದೆ ಎನ್ನುವ ಮಾತುಗಳಿವೆ.ಚೆನ್ನಬಸಪ್ಪ ಏನ್ ಸ್ಪಷ್ಟನೆ ಕೊಟ್ಟಿರಬಹುದೆನ್ನುವುದು ತಿಳಿದುಬಂದಿಲ್ಲ..ಚುನಾವಣೆ ಹೊಸ್ತಿಲಲ್ಲಿ ಹೀಗೆ ಮಾತನಾಡಬಾರದೆನ್ನುವ ಕಿವಿಮಾತು..ಎಚ್ಚರಿಕೆ ಸಿಕ್ಕಿರಬಹುದೇನೋ ಗೊತ್ತಾಗ್ತಿಲ್ಲ.ಈಶ್ಪರಪ್ಪ ಅಥವಾ ಅವರ ಮಗ ಸ್ಪರ್ದಿಸ್ತಾರೆನ್ನುವ ವಿಚಾರ ಅವರ ವ್ಯಕ್ತಿಗತವಾದದ್ದು..ಅದನ್ನು ನಾವು ಕೂಡ ನೋಡುತ್ತಿದ್ದೇವೆ.ಅದಕ್ಕೆ ಪ್ರತಿಯಾಗಿ ಹೇಗೆ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕೆನ್ನುವುದರ ಬಗ್ಗೆ ಆಲೋಚನೆ ಮಾಡಿಯೇ ಹೊರತು, ಅವರಿಂದ ನನಗೆ ತೊಂದರೆ ಆಗುತ್ತದೆ ಎಂದು ಬಹಿರಂಗವಾಗಿ ಹರಿಹಾಯುವ ಕೆಲಸವನ್ನೇಕೆ ಮಾಡುತ್ತೀರಿ ಎಂದು ಕಿವಿ ಹಿಂಡಿರಬಹುದೇನೋ ಗೊತ್ತಿಲ್ಲ..ಅದೇನೇ ಆಗಲಿ ಗುರುವಿನ ಬಗ್ಗೆ ಶಿಷ್ಯನ ವಾಕ್ಸಮರ-ತೊಡೆತಟ್ಟುವಿಕೆ-ಸವಾಲ್ ನಂಥ ಸಂಗತಿಗಳು ಸಾಕಷ್ಟು ಕುತೂಹಲ ಮೂಡಿಸಿರುವುದಂತೂ ಸತ್ಯ..ಆದರೆ ಇದರ ಹಿಂದೆ ಏನ್ ನಡೆದಿದೆ ಎನ್ನುವುದು ಮಾತ್ರ ಈಶ್ಚರಪ್ಪ ಮತ್ತು ಚೆನ್ನಬಸಪ್ಪ ಅವರಿಗೆ ಮಾತ್ರ ಗೊತ್ತಿದೆ…ಅಷ್ಟೆ…
