EXCLUSIVE: 3.9 ಕೋಟಿ ಬಿಎಂಟಿಸಿ “ಬಿಡಿಭಾಗ ಹಗರಣ”ಕ್ಕೆ ಇವ್ರೂ ನೈತಿಕ ಹೊಣೆಯಲ್ಲವೇ,..!? ಇವರ ವಿರುದ್ದ ಕ್ರಮ ಏಕಿಲ್ಲ..!?


ಬೆಂಗಳೂರು: ಒಂದಲ್ಲಾ ಎರಡಲ್ಲ ಬರೋಬ್ಬರಿ 3.97 ಕೋಟಿ ಮೊತ್ತದ ಬಿಡಿಭಾಗಗಳ ಹಗರಣ ದೊಡ್ಡ ಸಂಚಲನ ಮೂಡಿಸಿರು ವಾಗಲೇ ಬಹುದೊಡ್ಡ ಚರ್ಚೆ ಹುಟ್ಟುಹಾಕಿರುವ ವಿಷಯದ ಮೇಲೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬೆಳಕು ಚೆಲ್ಲುತ್ತಿದೆ… ಮೊದಲೇ ಮುಳುಗುವ ಹಡಗಿನಂತಾಗಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(BENGALURU METROPOLITAN TRANSPORT)BMTC)ವನ್ನು ಸಂಪೂರ್ಣ ಮುಳುಗಡೆ ಮಾಡುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಂಸ್ಥೆಯೊಳಗೆ ಇಲ್ಲದಾಗಿರುವ ಶಿಸ್ತು-ದಕ್ಷತೆ-ಪ್ರಾಮಾಣಿಕತೆ,ಕರ್ತವ್ಯನಿಷ್ಟೆ ಹಾಗೂ ಪಾರದರ್ಶಕತೆ ಕೊರತೆಯಿಂದ ಪರಿಸ್ಥಿತಿ ಮತ್ತಷ್ಟು ಆದ್ವಾನವಾಗುತ್ತಿದೆ. ಆಡಳಿತ ನಡೆಸೋರ, ಶಿಸ್ತನ್ನು ಅನುಷ್ಟಾನಗೊಳಿಸಬೇಕಾದವರ ಜಡತ್ವ-ಉದಾಸೀನತೆ ಮತ್ತು ನಿರ್ಲಕ್ಷ್ಯದಿಂದಲೇ ಅಕ್ರಮ-ಅವ್ಯವಹಾರ ನಡೆಸೋ ಸಿಬ್ಬಂದಿಗೆ ಬಿಎಂಟಿಸಿ ಎನ್ನೋದು ಹುಲುಸಾದ ಹುಲ್ಲುಗಾವಲಾಗಿ ಪರಿಣಮಿಸಿದೆ ಅನ್ನಿಸುತ್ತೆ..ಇದೆಲ್ಲಕ್ಕೂ ನೇರವಾಗಿ ಹಾಗೂ ಪ್ರಶ್ನಾತೀತವಾಗಿ ನಿಗಮದಲ್ಲಿ ಶಿಸ್ತು ಪರಿಪಾಲನೆ ಮಾಡಬೇಕಾದ “ಭದ್ರತಾ ಮತ್ತು  ಜಾಗೃತ ವಿಭಾಗ”ವನ್ನೇ ನೈತಿಕ ಹೊಣೆಯನ್ನಾಗಿಸುವುದು ಸೂಕ್ತ ಎನಿಸುತ್ತದೇನೋ..? ಹಗರಣ ನಡೆದ ನಂತರ ಇಂತದ್ದೊಂದು ವಿಶ್ಲೇಷಣೆ ಬಿಎಂಟಿಸಿ ಅಂಗಳದಲ್ಲೇ ಕೇಳಿಬರಲಾರಂಭಿಸಿದೆ.

ಬಿಎಂಟಿಸಿಯ  ವಾಸ್ತುನೇ ಹಾಗಿದೆಯೋ ಅಥವಾ ಯಾರೇ ಬಂದರೂ ಸರಿಪಡಿಸಲಿಕ್ಕಾಗದಷ್ಟು ಹದಗೆಟ್ಟು ಹೋಗಿದೆಯೋ ಗೊತ್ತಿಲ್ಲ..ಎಷ್ಟೇ ಖಡಕ್‌ ಅಧಿಕಾರಿ ಬಂದ್ರೂ ಅಲ್ಲಿ ನಡೆಯೋ ಅಕ್ರಮ-ಅವ್ಯವಹಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿಕ್ಕೆ ಸಾಧ್ಯವಿಲ್ಲ ಎನಿಸುತ್ತದೆ.ವಿಭಾಗದ ಮುಖ್ಯಸ್ಥರಾಗಿ ಬರುವ ಐಪಿಎಸ್‌ ಅಧಿಕಾರಿಗಳಿಗೂ ಮಂಕು ಬಡಿದುಬಿಡುತ್ತದೆ.ಅವರಿಗೆ ಮಾಹಿತಿ ಕೊಡಬೇಕಾದ ಅವರ ಕೆಳಹಂತದ ಕೆಲ ಅಧಿಕಾರಿಗಳೂ ಸರಿಯಾದ ಸಹಕಾರ ನೀಡದಂತಾಗಿಬಿಡುತ್ತಿದ್ದಾರೆ.ಇದೆಲ್ಲದರ ಕಾರಣದಿಂದಲೇನೋ ಈ ವಿಭಾಗ ಇದ್ದರೂ ನಿಷ್ಪ್ರಯೋಜಕದಂತಿದೆ ಎನ್ನುವುದು ನಾವಲ್ಲ,ಈ ವಿಭಾಗದ ಕಾರ್ಯವೈಖರಿಗೆ ಬೇಸತ್ತಿರುವವರೇ ಹೇಳುವ ಬೇಸರದಾಯಕ ಮಾತು.( ನಿಗಮವನ್ನು ಕೊಳ್ಳೆ ಹೊಡೆಯುವವರನ್ನು ಮೇಯಲಿಕ್ಕೆ ಬಿಟ್ಟು, ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಯನ್ನು ಟಾರ್ಗೆಟ್‌ ಮಾಡಿ ಅವರ ಕೆಲಸ ಹಾಗೂ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಕೆಲವರ ಧೋರಣೆ ಸಿಬ್ಬಂದಿಯನ್ನು ಅಕ್ಷರಶಃ ಕಂಗೆಡಿಸಿದೆ).ಹಾಗಾಗಿ ಈ ವಿಭಾಗದ ಬಗ್ಗೆ ವ್ಯಾಪಕವಾದ ಆಕ್ರೋಶ ಬಹುತೇಕ ಸಿಬ್ಬಂದಿಯಲ್ಲಿದೆ ಎನ್ನುವುದು ಕೂಡ ಒಪ್ಪಬೇಕಾದ ವಿಷಯ.

ಅಬ್ದುಲ್ ಅಹದ್-ನಿರ್ದೇಶಕರು,ಭದ್ರತಾ ಹಾಗೂ ಜಾಗೃತಾ ವಿಭಾಗ
ಅಬ್ದುಲ್ ಅಹದ್-ನಿರ್ದೇಶಕರು,ಭದ್ರತಾ ಹಾಗೂ ಜಾಗೃತಾ ವಿಭಾಗ

ಭದ್ರತಾ ಮತ್ತು  ಜಾಗೃತ ವಿಭಾಗ ಮನಸು ಮಾಡಿದ್ರೆ, ಇಡೀ ಬಿಎಂಟಿಸಿಯ ಆಡಳಿತವನ್ನೇ ಕ್ಲೀನ್‌ ಮಾಡಿ, ಅಧಿಕಾರಿ ಸಿಬ್ಬಂದಿಯಲ್ಲಿ ದಕ್ಷತೆ-ಪ್ರಾಮಾಣಿಕತೆ ತರಬಹುದೆನ್ನುವ ಮಾತಿದೆ.ಅನೇಕ ವರ್ಷಗಳ ಹಿಂದೆ ಇಂಥ ಕೆಲಸ ನಿಜವಾಗಿಯೂ ನಡೆಯುತ್ತಿತ್ತಂತೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿರುವ ಕೆಲವರನ್ನು ಅಡ್ಜೆಸ್ಟ್‌ ಮೆಂಟ್‌ ಮಾಡಿಕೊಂಡರೆ,ಅವರ ಕೈ ಬೆಚ್ಚಗೆ ಮಾಡಿದ್ರೆ, ಅವರಿಗೆ ಬಕೆಟ್ ಹಿಡಿಯುವ ಕೆಲಸ ಮಾಡಿದ್ರೆ ಎಂಥಾ ಅಕ್ರಮವನ್ನು ಬೇಕಾದ್ರೂ ಮುಚ್ಚಾಕಿಬಿಡಬಹುದೆನ್ನುವ ಬಹುದೊಡ್ಡ ಆಪಾದನೆಗೆ ಅದು ತುತ್ತಾಗಿದೆ.ಅದೆಷ್ಟೋ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಕೈ ಬಿಟ್ಟು ಕ್ಷಮಿಸಬಹುದಾದ ಅವಕಾಶಗಳಿರುವ ಪ್ರಕರಣಗಳಲ್ಲಿ ಸಿಬ್ಬಂದಿಯನ್ನು ಅಮಾನತು-ವಜಾದಂಥ ಶಿಕ್ಷೆಗೆ ಒಳಪಡಿಸುವ ಕೆಲಸ ಮಾಡಲಾಗುತ್ತಿದೆಯಂತೆ.ಬಹುತೇಕ ಸಿಬ್ಬಂದಿಗೆ ಈ ವಿಭಾಗದಲ್ಲಿರುವ ಕೆಲವರ ಬಗ್ಗೆ ಅತ್ಯಂತ ಅಸಹನೆ-ಆಕ್ರೋಶ-ಅಸಮಾಧಾನದಂಥ ಬೇಸರದ ಭಾವನೆಗಳಿವೆ.

ಎ.ಆರ್‌ ಕೃಷ್ಣಮೂರ್ತಿ-ಬಿಎಂಟಿಸಿ ನೂತನ ಅಧ್ಯಕ್ಷ
ಎ.ಆರ್‌ ಕೃಷ್ಣಮೂರ್ತಿ-ಬಿಎಂಟಿಸಿ ನೂತನ ಅಧ್ಯಕ್ಷ

ಐಪಿಎಸ್‌ ಗಳ ಪೈಕಿ ಬೆರಳೆಣಿಕೆಯ ದಕ್ಷ ಅಧಿಕಾರಿಗಳಲ್ಲಿ ಒಬ್ಬರೆನಿಸಿಕೊಂಡಿರುವ  ಅಬ್ದುಲ್ ಅಹದ್( ABDUL AHAAD-IPS) ಈ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.ಇಲಾಖೆಯಲ್ಲಿ ಖಡಕ್‌ ಹಾಗೂ ಪ್ರಾಮಾಣಿಕ ಎನ್ನುವ ಖ್ಯಾತಿ ಪಡೆದಿದ್ದರೂ ಪಾಪ,ಅವರಿಗೆ ಆ ಗಟ್ಟಿತನದಲ್ಲಿ ಕೆಲಸ ಮಾಡುವ ಅವಕಾಶವೇ ಇಲ್ಲಿ ಸಿಗುತ್ತಿಲ್ಲ ಎನ್ನುವ ಮಾತಿದೆ.ದಕ್ಷರಾಗಿರುವುದೇ ಅವರಿಗೆ ದೊಡ್ಡ ಕಂಟಕವಾದಂತಿದೆಯಂತೆ.ಏನೇ ಒಳ್ಳೆಯ ಕೆಲಸ ಮಾಡಲು ಯೋಜನೆ ರೂಪಿಸಿದರೂ ಅದನ್ನು ಕಾರ್ಯಗತಗೊಳಿಸುವುದಕ್ಕೆ ಹತ್ತಲವು ಅಡೆತಡೆಗಳು ಎದುರಾಗುತ್ತಿವೆಯಂತೆ.ಈ ವಿಭಾಗದಲ್ಲಿ ಅವರಿಗೆ ಅಸಹನೆಯಾಗುತ್ತಿದ್ದರೂ ಅದನ್ನು ವ್ಯಕ್ತಪಡಿಸಲಾಗುತ್ತಿಲ್ಲವಂತೆ.ಅವರ ಸುತ್ತ ದಕ್ಷವಾಗಿ ಕೆಲಸ ಮಾಡಲಿಕ್ಕಾಗದಂಥ ಬ್ಯಾರಿಕೇಡ್‌ ಗಳನ್ನು ನಿರ್ಮಿಸಲಾಗಿದೆಯೇನೋ ಎನ್ನುವಂತ ಅನುಮಾನ ಬರುವಂತ ವಾತಾವರಣ ನಿರ್ಮಾಣವಾಗಿದೆ.

ಅಬ್ಸುಲ್‌ ಅಹಾದ್‌ ಅವರದು ಇದೊಂದು ರೀತಿಯ ಸಮಸ್ಯೆಯಾದ್ರೆ ಅವರ ಕೆಳಹಂತದಲ್ಲಿರುವ ಕೆಲವು ಅಧಿಕಾರಿಗಳು ಅವರ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಿ ಲ್ಲವೇನೋ ಎನಿಸುತ್ತದೆ.ಅಹಾದ್‌ ಅವರಿಗೆ ಎಲ್ಲವನ್ನು ಹೇಳಿಬಿಟ್ಟರೆ ತಮ್ಮ ಬೇಳೆ  ಎಲ್ಲಿ ಬೇಯುವುದಿಲ್ಲವೋ ಎನ್ನುವ ಕಾರಣಕ್ಕೆ ಅವರಿಗೆ ಬೇಕಾದಂಥ ಸಹಕಾರವನ್ನು ಕೊಡುತ್ತಲೇ ಇಲ್ಲವಂತೆ.ಅಹಾದ್‌ ಅವರು ಎಷ್ಟೇ  ಖಡಕ್‌ ಅಧಿಕಾರಿಯಾದ್ರೂ ಕೆಲಸ ಮಾಡುವುದಕ್ಕೆ ಬೇಕಾದ ಸಹಕಾರ  ಇಡೀ ಬಿಎಂಟಿಸಿ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲಂತ ಕೆಳಹಂತದವರಿಂದ  ಅತ್ಯಗತ್ಯವಾಗಿರುತ್ತದೆ.ಆದರೆ ಅಹಾದ್‌ ಅವರಿಗೆ ಹೆಸರು ಬಂದು ಬಿಡುತ್ತೆ,ಅವರನ್ನೇ ಹಾಡಿ ಹೊಗಳಲಾಗುತ್ತೆ ಎನ್ನುವ ದುರಾಲೋಚನೆಯಿಂದ ಅವರಿಗೆ ನೀಡಬೇಕಾದ ಸಹಕಾರವನ್ನೂ ನೀಡುತ್ತಿಲ್ಲ ಎನ್ನುವುದು ಅಹಾದ್‌ ಅವರ ಪರಿಸ್ತಿತಿ ಬಗ್ಗೆ ಚೆನ್ನಾಗಿ ಅರಿತಿರುವ ಅಧಿಕಾರಿಯೊಬ್ಬರ ನೋವಿನ ಅನಿಸಿಕೆ..ಹಾಗಾಗಿ ಬಿಎಂಟಿಸಿಯಲ್ಲಿ ಎಂತದ್ದೇ ಅಕ್ರಮ-ಶಿಸ್ತು ಉಲ್ಲಂಘನೆ ಸಿಬ್ಬಂದಿ ಕಡೆಯಿಂದ ಆದ್ರೂ ಅದಕ್ಕೆ ಅಹಾದ್‌ ಅವರ ಮುಂದಾಳತ್ವವನ್ನೇ ದೂಷಿಸುವ ಕೆಲಸ ಆಗುತ್ತಿದೆ.ಅಹಾದ್‌ ಅವರ ಬಗ್ಗೆ ಭಯ-ಆತಂಕ-ಗೌರವವಿದ್ದರೆ ಭ್ರಷ್ಟರು ರಾಜಾರೋಷವಾಗಿ ಹೀಗೆ ಮಾಡುತ್ತಿದ್ದರಾ ಎಂದು ಪ್ರಶ್ನೆ ಮಾಡುವವರೂ ಇದ್ದಾರೆ.

ಪೊಲೀಸ್‌ ಇಲಾಖೆಯಲ್ಲಿದ್ದಾಗ ಖಡಕ್‌ ಆಗಿದ್ದ ಅಬ್ದುಲ್‌ ಅಹಾದ್‌ ಬಿಎಂಟಿಸಿಗೆ ಬಂದ ಮೇಲೆ ಮಂಕು ಕವಿದಂತಾಗಿದ್ದಾರೆನ್ನುವುದು ಏಕೆ..?.. ಅಬ್ದುಲ್‌ ಅಹಾದ್‌ಒಬ್ಬ ದಕ್ಷ,ಖಡಕ್‌ ಅಧಿಕಾರಿ ಎನ್ನುವುದರಲ್ಲಿ ಅನುಮಾನವಿಲ್ಲ.ಅವರು ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವಾಗ ಮಾಡಿದ ಹೆಸರೇ ಇದಕ್ಕೆ ನಿದರ್ಶನ. ತಮ್ಮ ಅಧಿಕಾರವಧಿಯಲ್ಲಿ ನಯಾಪೈಸೆ ಭ್ರಷ್ಟಾಚಾರ ಮಾಡದೆ, ತಪ್ಪಿತಸ್ಥರ ಹೆಡೆಮುರಿ ಕಟ್ಟಿದ ಹಿನ್ನೆಲೆ ಅವರದು.ಡಿಪಾರ್ಟ್ಮೆಂಟ್‌ ನಲ್ಲಿ ಕ್ಲೀನ್‌ ಇಮೇಜ್‌ ಹೊಂದಿರುವ ಅಧಿಕಾರಿ ಅವರು.ಬಹುಷಃ ಅವರು ಹಾಗೆ ಮಾಡಲು ಅವರಿಗೆ ಅಲ್ಲಿ ನೀಡಲಾಗುತ್ತಿದ್ದ ಸ್ವಾತಂತ್ರ್ಯ ಕಾರಣವಾಗಿತ್ತೇನೋ..ಆದರೆ.. ಆದರೆ ಅದ್ಹೇಕೋ ಗೊತ್ತಿಲ್ಲ, ಭದ್ರತಾ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರಾಗಿ ಬಂದ ಮೇಲೆ ಮಂಕು ಕವಿದಂತಾಗಿಬಿಟ್ಟಿದ್ದಾರೆ.ಪಾಪ, ಕೆಲಸ ಮಾಡಲು ಅವರು ಅತ್ಯುತ್ಸಾಹದಿಂದ ಇದ್ದರೂ ಅದಕ್ಕೆ ಅಲ್ಲಿರುವವರೆ ಅವಕಾಶ ನೀಡುತ್ತಿಲ್ಲವಂತೆ.ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇ ಅಗಿದ್ದರೆ ನಿಗಮದಲ್ಲಿ ನಡೆದಿದೆ ಎನ್ನಲಾದ 4 ಕೋಟಿ ಅಕ್ರಮಕ್ಕೆ ಆಸ್ಪದವೇ ಕೊಡುತ್ತಿರಲಿಲ್ಲವಂತೆ.ಸ್ವಾತಂತ್ರ್ಯವನ್ನೇ ಕೊಡದೆ ಬದಲಾವಣೆ ತನ್ನಿ ಎಂದರೆ ಹೇಗೆ ಸಾಧ್ಯ ಎನ್ನುವುದು ಅವರ ಮೂಲಭೂತ ಪ್ರಶ್ನೆ..ಆದರೆ ಅಹಾದ್‌ ಸಾಹೇಬ್ರು ತಮ್ಮ ಕೆಳಹಂತದ ಅಧಿಕಾರಿ ಸಿಬ್ಬಂದಿಗೆ ಬೆಲ್ಟ್‌ ನ್ನು ಟೈಟ್‌ ಮಾಡಿಕೊಂಡು ಕೆಲಸ ಮಾಡಲಿಕ್ಕೆ ಹೇಳಿ, ಬದಲಾವಣೆ ಏಕೆ ಬರೊಲ್ಲ ಆಮೇಲೆ, ಕೇಳಿ..ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕೆನ್ನುವುದೇ ಎಲ್ಲರ ಆಶಯ ಮತ್ತು ಹಾರೈಕೆ.

ಶ್ರೀಮತಿ ರಮ್ಯ , ಸಹಾಯಕ ಭದ್ರತಾ ಅಧಿಕಾರಿ
ರಮ್ಯ ,ಸಹಾಯಕ ಭದ್ರತಾ ಅಧಿಕಾರಿ

ಭದ್ರತಾ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರಾಗಿರುವ ಅವರು ಬಿಎಂಟಿಸಿಗೆ ಬಂದಾಗಿನಿಂದ ಇಲ್ಲಿಯವರೆಗೆ ಎಷ್ಟು ಡಿಪೋಗಳಿಗೆ ಭೇಟಿ ಮಾಡಿ, ಎಷ್ಟು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ಕೇಂದ್ರಿಯ ಉಗ್ರಾಣವನ್ನು ಎಷ್ಟು ಬಾರಿ ಪರಿಶೀಲನೆ ಮಾಡಿ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ ಎಂದು ಸಾರಿಗೆ ಸಿಬ್ಬಂದಿಯೇ ಪ್ರಶ್ನೆ ಮಾಡುತ್ತಿದ್ದಾರೆ. ಬಿಎಂಟಿಸಿಯಲ್ಲಿ 4 ಕೋಟಿ ಅಕ್ರಮ ನಡೆಯೊಕ್ಕೆ,ವಿಭಾಗದ ಮೇಲಿರದ ಹಿಡಿತ ಹಾಗೆಯೇ ಅವರ ನಿರ್ಲಕ್ಷ್ಯವೂ ಕಾರಣ ಇರಬಹುದಲ್ಲವೇ ಎಂದು ಅದೇ ಸಿಬ್ಬಂದಿ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾರೆ.ಅಹಾದ್‌ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಸೂಕ್ತ ವಾತಾವರಣ ಕಲ್ಪಿಸಲಾಗಿದೆಯಾ..? ಅವರಿಗೆ ಒಂದಷ್ಟು ಸ್ವಾತಂತ್ರ್ಯ ಕೊಟ್ಟಿದ್ದರೆ ಇಂಥದ್ದೆಲ್ಲಕ್ಕೂ ಅವಕಾಶ ಕೊಡುತ್ತಿರಲಿಲ್ಲವೇನೋ ಎಂದು ಅನೇಕರು ಹೇಳುತ್ತಿರುವುದುಂಟು.

ALSO READ :  ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್...

ಹಾಗೆಯೇ  ಭದ್ರತಾ ಮತ್ತು ಜಾಗೃತ ವಿಭಾಗದ  ಮುಖ್ಯ ಭದ್ರತಾ ಅಧಿಕಾರಿ ಆಗಿರುವ ಶಿವಪ್ರಕಾಶ್ ವಿರುದ್ಧವೂ ಆರೋಪಗಳಿವೆ.ಬಿಎಂಟಿಸಿಗೆ ಬಂದಾಗಿನಿಂದಲೂ ಇವರಿಂದ ಸಂಸ್ಥೆಗೆ ಆದ ಪ್ರಯೋಜನ ಶೂನ್ಯವಂತೆ.ಅವರಿಗೆ ಇದೆ ಎನ್ನಲಾಗುತ್ತಿರುವ ಆರೋಗ್ಯ ಸಮಸ್ಯೆಯನ್ನೇ ಅವರು ನೆವವಾಗಿ ಮಾಡಿಕೊಂಡಿದ್ದಾರಂತೆ.ಅದೇ ಕಾರಣವನ್ನಿಟ್ಟುಕೊಂಡು ಕೆಲಸ ಮಾಡದೆ ಕೇವಲ ಕಾಲಹರಣ ಮಾಡುತ್ತಿದ್ದಾರಂತೆ.ತಮ್ಮ ಗಮನಕ್ಕೆ ಯಾವುದೇ ಪ್ರಕರಣ ಬಂದರೂ ಅವರ ಕೆಳ ಹಂತದ ಅಧಿಕಾರಿಗೆ ಅದನ್ನು ವರ್ಗಾಯಿಸಿ ಕೈ ತೊಳೆದುಕೊಂಡು ಬಿಡುತ್ತಿದ್ದಾರಂತೆ. ಇಲ್ಲಿಯವರೆಗೆ ಎಷ್ಟು ಡಿಪೋಗಳಿಗೆ ಭೇಟಿ ಮಾಡಿ, ಎಷ್ಟು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ಕೇಂದ್ರಿಯ ಉಗ್ರಾಣವನ್ನು ಎಷ್ಟು ಬಾರಿ ಪರಿಶೀಲನೆ ಮಾಡಿ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ ತಿಳಿಸಿಬಿಡಲಿ ಎಂದು ಸವಾಲು ಹಾಕಿರುವ ಸಾರಿಗೆ ಸಿಬ್ಬಂದಿ ಬಿಎಂಟಿಸಿಯಲ್ಲಿ 4 ಕೋಟಿ ಅಕ್ರಮ ನಡೆಯೊಕ್ಕೆ ಇವರ ನಿರ್ಲಕ್ಷ್ಯವೂ ಕಾರಣ ಇರಬಹುದು..ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕೆನ್ನುವುದು ಸಾರಿಗೆ ಮುಖಂಡರ ಆಗ್ರಹ.

ಇದೇ ವಿಭಾಗದಲ್ಲಿ ಶ್ರೀಮತಿ ರಮ್ಯ  ಎನ್ನುವವರು ಸಹಾಯಕ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.ಅವರ ಕಾರ್ಯವೈಖರಿ ಬಗ್ಗೆ ಸಾರಿಗೆ ಸಿಬ್ಬಂದಿಗೆ ಗಂಭೀರ ಸ್ವರೂಪದಲ್ಲಿ ಆಕ್ರೋಶ ವಿದೆ. ಇವರ ಬಗ್ಗೆ ಸಾರಿಗೆ ಸಚಿವರು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಂಡಿ ಮಟ್ಟದಲ್ಲೂ ಅನೇಕ ದೂರುಗಳು ನೀಡಲ್ಪಟ್ಟಿವೆ ಎನ್ನುವ ಮಾತಿದೆ. ಸಾರಿಗೆ ಸಿಬ್ಬಂದಿಯನ್ನು ತಪ್ಪಿತ‍್ಥರನ್ನಾಗಿಸುವು ದರಿಂದ  ಹಿಡಿದು ಅವರಿಗೆ ಶಿಕ್ಷೆ ಆಗಬೇಕೋ..ಅಥವಾ ತಪ್ಪು ನಡೆದೇ ಇಲ್ಲ ಎನ್ನುವಂತೆ ತಿಪ್ಪೆ ಸಾರಿಸಬೇಕೋ  ಎನ್ನುವುದರಲ್ಲಿ ನಿಸ್ಸೀಮರಂತೆ ಎನ್ನುವ ಗಂಭೀರ ಆಪಾದನೆಗಳಿವೆ. ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುವ ಸನ್ನಿವೇಶದಲ್ಲಿ    ಅವರು ಅನೇಕ ಅಕ್ರಮಗಳನ್ನು ಬಯಲಿಗೆಳೆದಿದ್ದರು.ಅದಕ್ಕೆ ಶಹಬ್ಬಾಸ್‌ ಗಿರಿಯನ್ನೂ ಪಡೆದುಕೊಂಡಿದ್ದರು.ಕನ್ನಡ  ಫ್ಲ್ಯಾಶ್‌ ನ್ಯೂಸ್‌ ಕೂಡ ಈ ಬಗ್ಗೆ ಸುದ್ದಿ ಮಾಡಿತ್ತು.ಆದರೆ ಸಹಾಯಕ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುವ ಸನ್ನಿವೇಶದಲ್ಲಿ ಅವರಲ್ಲಿ ಮೊದಲಿದ್ದ ವರ್ಚಸ್ಸು-ಛಾಪು-ಪ್ರಾಮಾಣಿಕತೆ-ಪಾರದರ್ಶಕತೆ  ಕಂಡುಬರುತ್ತಿಲ್ಲ ಎನ್ನುವುದು ಅನೇಕರ ಆಪಾದನೆ.

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಅಬ್ದುಲ್‌ ಅಹಾದ್‌ ಅವರ ಸ್ಪೀಡ್‌ ಗೆ ತಕ್ಕಂತೆ ಅವರ ಕೆಳ ಹಂತದಲ್ಲಿರುವ ಅಧಿಕಾರಿಗಳು ಕೆಲಸ ಮಾಡಿದ್ದರೆ ಬಿಎಂಟಿಸಿ ಉಗ್ರಾಣದಿಂದ ಇಷ್ಟೊಂದು ಬಿಡಿಭಾಗಗಳ ಹಗರಣ ನಡೆಯುತ್ತಿರಲಿಲ್ಲವೇನೋ..? ಆಗಾಗ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಒಂದು ಹೆದರಿಕೆ ಸೃಷ್ಟಿಸಿಬಿಟ್ಟಿದ್ದರೆ ಭ್ರಷ್ಟರು ಅನಾಯಾಸವಾಗಿ ಇಷ್ಟೊಂದು ದೊಡ್ಡ ಅಕ್ರಮ ಎಸಗುವ ಧೈರ್ಯ ಮಾಡುತ್ತಿರಲಿಲ್ಲವೇನೋ..? ಎನ್ನುವುದಷ್ಟೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ಕಾಳಜಿ.ಬಿಎಂಟಿಸಿ ಸಿಬ್ಬಂದಿ ಹೇಳೋದು ಕೂಡ ಇದನ್ನೇ ರಮ್ಯ,ಶಿವಪ್ರಕಾಶ್‌ ತಮ್ಮ ಕಚೇರಿಗಳಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ನಿಯತವಾಗಿ ಡಿಪೋ ಹಾಗೂ ವರ್ಕ್‌ ಶಾಪ್‌ ಹಾಗೂ ಸ್ಟೋರ್‌ ಗಳಿಗೆ ಭೇಟಿ ಕೊಟ್ಟಿದ್ದರೆ ಖಂಡಿತಾಹೀಗೆ ಆಗುತ್ತಿರಲಿಲ್ಲವಂತೆ..ಈ ಪ್ರಕರಣದಲ್ಲಿ ಇವರೂ ನೈತಿಕವಾಗಿ ತಪ್ಪಿತಸ್ಥರಲ್ಲವೇ..? ಇವರಿಬ್ಬರ ವಿರುದ್ಧವೂ ತನಿಖೆ ಮತ್ತು ಶಿಸ್ತುಕ್ರಮ ಏಕೆ ಜರುಗಿಸಬಾರದು ಎನ್ನುವುದು  ಇವರ ಕಾರ್ಯವೈಖರಿ ಹಾಗೂ ಧೋರಣೆಗೆ ನೊಂದಿದ್ದಾರೆನ್ನಲಾಗುತ್ತಿರುವ ಅನೇಕರ ಒತ್ತಾಯ.ಸಿಬ್ಬಂದಿ ತಪ್ಪು ಮಾಡಿದಾಗ ಅವರನ್ನು ಇವರು ಕೊಡುವ ವರದಿ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಆಡಳಿತ, ಈ ಪ್ರಕರಣದಲ್ಲಿ ಇವರಿಬ್ಬರ ಮೇಲೆ ಕ್ರಮ ಕೈಗೊಳ್ಳಲೇಬೇಕೆನ್ನುವ ಒತ್ತಾಯ ಕೂಡ ಕೇಳಿಬರುತ್ತಿದೆ.

ಅಬ್ದುಲ್‌ ಅಹಾದ್‌ ಅವರಂಥ ದಕ್ಷ-ಪ್ರಾಮಾಣಿಕ ಅಧಿಕಾರಿಗೆ ಸಹಕಾರ ನೀಡುವುದನ್ನು ಬಿಟ್ಟು ಮೂಗಿನ ನೇರಕ್ಕೆ ಮಾಹಿತಿ-ವರದಿಗಳನ್ನು ನೀಡುವ ನೀಚತನವನ್ನು ಕೆಲವರು ಮಾಡುತ್ತಿದ್ದಾರೆನ್ನುವ ಮಾತುಗಳಿವೆ. ಇದು ಅಬ್ಸುಲ್‌ ಅಹಾದ್‌ ಅವರಿಗೆ ಗೊತ್ತಿದೆಯೋ..ಗೊತ್ತಿಲ್ವೋ ನಮಗೆ ತಿಳಿದಿಲ್ಲ. ತಿಳಿದಿದ್ದೂ ಸುಮ್ಮನಾದ್ರೆ ಅವರೆಲ್ಲಾ ಭವಿಷ್ಯದಲ್ಲಿ ಅವರಿಗೆ ಖೆಡ್ಡಾ ತೋಡುವ ಅಪಾಯಗಳಿವೆ. ಮುಲಾಜೂ ಇಲ್ಲದೆ ಇಡೀ ವಿಭಾಗವನ್ನು ಬಿಎಂಟಿಸಿ ಆಡಳಿತ ಕ್ಲೀನ್‌ ಮಾಡಲಿಕ್ಕೆ ಮುಲಾಜಿಲ್ಲದೆ ಬಳಸಿಕೊಳ್ಳಬೇಕಿದೆ.ಇಲ್ಲವಾದಲ್ಲಿ ಮಂಗ ತಿಂದು ಮೇಕೆ ಬಾಯಿಗೆ ಒರೆಸಿತಂತೆ ಎನ್ನುವ ಗಾಧೆಯನ್ನು ಅಹಾದ್‌ ಅವರ ವೃತ್ತಿಜೀವನಕ್ಕೂ ಅನ್ವಯಿಸಿಬಿಡುತ್ತಾರೋ ಗೊತ್ತಿಲ್ಲ..ಈ ಅಪಾಯವನ್ನು ಅರಿತು ವಿಭಾಗವನ್ನೇ ಕ್ಲೀನ್‌ ಮಾಡಿ ಆಪರೇಷನ್‌ ಗಿಳಿಯುವ ಅಗತ್ಯ ಹೆಚ್ಚಾಗಿದೆ ಅನ್ನಿಸುತ್ತೆ.


Leave a Comment