ಕಿರುಕುಳ-ನಿಂದನೆ-ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ದ ಎಫ್ ಐಆರ್

ಬೆಂಗಳೂರು: ಆರ್ಥಿಕ ನೆರವಿನ ನೆವದಲ್ಲಿ ಮೀಟರ್ ಬಡ್ಡಿ ಮಾಫಿಯಾ ನಡೆಸಲಾಗುತ್ತಿದೆ ಎಂಬ ಆಪಾದನೆ ಹೊತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಅಧ್ಯಕ್ಷರ ವಿರುದ್ದ ಎಫ್ ಐಆರ್ ದಾಖಲಾ ಗಿದೆ. ಸಾಲ ಪಡೆದ ಮಹಿಳೆ ಸಾಲದ ಕಂತು ಪಾವತಿಸಲು ಕೊಂಚ ವಿಳಂಬವಾಗಿದ್ದಕ್ಕೆ ಸಂಘದ ಪದಾಧಿಕಾರಿಗಳು ಸಂತ್ರಸ್ಥೆ ಮನೆಗೆ ತೆರಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ ಸಂತ್ರಸ್ಥೆಯ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಹಿನ್ನಲೆಯಲ್ಲಿ ಸಂಘದ ಇನ್ನಿತರೆ ನಾಲ್ವರ ವಿರುದ್ಧವೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದ್ಯಾ ಎನ್ನುವವರು ದಾಖಲಿಸಿರುವ ದೂರಿನ ಅನ್ವಯ ಮಾಡಲಾಗಿರುವ ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿರುವ ಸಂಗತಿಗಳು ಇಂತಿವೆ.ಸಂಧ್ಯಾ ಅವರ ಸಂಬಂಧಿ ಇಂದಿರಾ ಎನ್ನುವವರು ಧರ್ಮಸ್ಥಳ ಸಂಘದ ಸದಸ್ಯರಾಗಿದ್ದು ಕೆಲ ತಿಂಗಳ ಹಿಂದೆ ಕಷ್ಟವಿದೆ ಎಂದು 65 ಸಾವಿರ ಸಾಲ ಪಡೆದಿದ್ದರಂತೆ.ಪ್ರತಿ ವಾರ ಸಾಲದ ಕಂತಿನ ರೂಪದಲ್ಲಿ 1 ಸಾವಿರ ಕಟ್ಟುತ್ತಿದ್ದರಂತೆ.ಇದರ ನಡುವೆ ಇಂದಿರಾ ಅವರ ಮಗ ಮೃತಪಟ್ಟಿದ್ದರಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಉಳಿದಿದ್ದರಂತೆ.ದುಡಿಮೆ ಇಲ್ಲದಿದ್ದರಿಂದ ಇದರಿಂದ ಸಾಲದ ಕಂತನ್ನು ಕೂಡ ಪಾವತಿಸಿರಲಿಲ್ಲ.ಸಮಸ್ಯೆಯನ್ನು ಕೂಡ ಸಂಘದವರ ಬಳಿ ಹೇಳಿಕೊಳ್ಳಲಾಗಿತ್ತಂತೆ.

ಒಂದಷ್ಟು ದಿನ ಸುಮ್ಮನಿದ್ದ ಸಂಘದ ಪದಾಧಿಕಾರಿಗಳು ಸಾವಿನ ಮನೆಯ ಸೂತಕ ಇನ್ನೂ ಕರಗಿರದ ಹೊತ್ತಿನಲ್ಲಿ ಅವರ ಮನೆಗಳಿಗೆ ತೆರಳಿ, ಸಿಕ್ಕಲ್ಲೆಲ್ಲಾ ಸಾಲ ತೀರಿಸುವಂತೆ ಪೀಡಿಸುತ್ತಿದ್ದರಂತೆ.ಸಾಲ ಮಾಡಿದ ತಪ್ಪಿಗೆ ಏನೇ ಹಿಂಸೆಯಾದರೂ ಸಹಿಸಿಕೊಳ್ಳುತ್ತಿದ್ದರಂತೆ. ಇದರ ನಡುವೆ 22-03-2025 ರ ಸಂಜೆ 6 ಕ್ಕೆ ಸಂಧ್ಯಾ ಕೆಲಸ ಮುಗಿಸಿ ಮನೆಗೆ ಬರುವಾಗ ಸಂಘದ ಸದಸ್ಯರು ಸಂದ್ಯಾಳನ್ನು ನಿಲ್ಲಿಸಿ, ಬೇ..ಸಿ.. ರಂ…., ಮುಂ.. ಎಂದು ಅವಮಾನಿಸಿದ್ದರಂತೆ. ಸಾಲದ್ದಕ್ಕೆ ವೀರೇಂದ್ರ ಹೆಗ್ಗಡೆ ಅವರ ಹೆಸರನ್ನು ಪ್ರಸ್ತಾಪಿಸಿ ಅವರ ದುಡ್ಡು ತಿನ್ನೊಕ್ಕೆ ಆಗುತ್ತೆ…ತೀರಿಸಲು ಆಗೊಲ್ವ.. ಎಂದು ಅವಮಾನ ಮಾಡಿದ್ದಾರೆ.

ಸಾಲದ್ದಕ್ಕೆ ಉಡುಪಿಯ ಬೊಮ್ಮರವೆಟ್ಟು ಗ್ರಾಮದ ಮಂಜೊತ್ತಿ ಮನೆ ಮುಂದೆ ಕೂತು ಬಾಯಿಗೆ ಬಂದಂತೆ ಬೈಯ್ದು ಅಪಮಾನಿಸಿದ್ದಾರೆ. ಇದನ್ನೆಲ್ಲಾ ನೆರೆಹೊರೆಯವರು ಸಹಜವಾಗಿಯೇ ಗಮನಿಸಿರಬೇಕು ಎನ್ನಿಸುತ್ತೆ ,ನೊಂದ ಸಂದ್ಯಾ. ಸಂಘದ ಸದಸ್ಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತತ್ ಕ್ಷಣಕ್ಕೆ ಸ್ಥಳೀಯರೇ ರಕ್ಷಣೆ ಮಾಡಿದ್ದಾರೆಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ತಮಗಾದ ಅಪಮಾನದಿಂದ ಪೊಲೀಸ್ ಠಾಣೆಗೆ ಘಟನೆ ನಡೆದ ಮಾರನೆ ದಿನ ಅಂದರೆ 23 ರಂದು ಸಂದ್ಯಾ ಸಂಘದ ಅಧ್ಯಕ್ಷರು ಮತ್ತು ಇತರೆ ನಾಲ್ವರ ವಿರುದ್ದ ದೂರು ದಾಖಲಿಸಿದ್ದಾರೆ.ಇದರ ಅನ್ವಯ ಎಫ್ ಐಆರ್ ಮಾಡಲಾಗಿದೆ.
ಶ್ರೀ ವೀರೇಂದ್ರ ಹೆಗ್ಗಡೆ ಅವರ ಹೆಸರನ್ನು ಅಧೀಕೃತವಾಗಿ ಎಲ್ಲೂ ಎಫ್ ಐಆರ್ ನಲ್ಲಿ ಉಲ್ಲೇಖಿಸಿಲ್ಲ.ಆದರೆ ಸಂಘದ ಅಧ್ಯಕ್ಷರು ಅವರೇ ಎನ್ನುವುದು ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ವೆಬ್ ಸೈಟ್ ನಲ್ಲೇ ಬಿಂಬಿತವಾಗಿದೆ( ಈ ನಡುವೆ ಅಧ್ಯಕ್ಷರಾಗಿ ಬೇರೆ ಯಾರನ್ನಾದ್ರೂ ನೇಮಿಸಿರಬಹುದಾ ಗೊತ್ತಿಲ್ಲ..!?) .ಈ ಹಿನ್ನಲೆಯಲ್ಲಿ ಅವರ ಹೆಸರನ್ನೇಕೆ ಉಲ್ಲೇಖಿಸಿಲ್ಲ ಎನ್ನುವುದು ಶಂಕೆ ಮೂಡಿಸಿದೆ. ಅವರ ಜತೆಗೆ ಸಂಘದ ಉಡುಪಿ ಘಟಕದ ಅಧ್ಯಕ್ಷೆ ನಳಿನಿ, ಸಂಘದ ಅಧಿಕಾರಿ ಪ್ರಭಾಕರ ಆಚಾರಿ, ಸಂಘದ ಸೇವಾ ಪ್ರತಿನಿಧಿಗಳಾದ ವಿಜಯಾ,ಸವಿತಾ ಆಚಾರಿ ವಿರುದ್ದ ಕೂಡ ಎಫ್ ಐಆರ್ ದಾಖಲಾಗಿದೆ.ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ-2025 ರ ಅನ್ವಯ ಪ್ರಕರಣ ದಾಖಲಿಸಿಕೊಂಡು BNSS 2023 ನ ಸೆಕ್ಷನ್ 329(4),351(2),(3)(5) ಅಡಿಯಲ್ಲಿ ಎಫ್ ಐ ಆರ್ ಹಾಕಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವುದರಿಂದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಭಾರೀ ಮುಖಭಂಗವಾಗಿದೆ ಎನ್ನಲಾಗುತ್ತಿದೆ. ಸಂಘದ ಜನಪ್ರಿಯತೆ ಕುಂದಲು ಕೂಡ ಇದು ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.ಅದೇನೇ ಅದಕ್ಕೆ ಹೇಳೋದಲ್ವಾ ಮಾಡಿದ್ದುಣ್ಣೋ ಮಹಾರಾಯ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಯು ಯಾವ್ ಉದ್ದೇಶದಲ್ಲಿ ಅಸ್ತಿತ್ವಕ್ಕೆ ಬಂತು, ಅದರ ಆಶಯಗಳೇನಿತ್ತು..? ಆರಂಭದಲ್ಲಿ ಅದರ ಜನಪ್ರಿಯತೆ ಹೇಗಿತ್ತು.? ಎಷ್ಟಿತ್ತು..? ಜನಮನವನ್ನು ಹೇಗೆಲ್ಲಾ ಸೆಳೆದಿತ್ತು..? ಜನರು ನಿಜಕ್ಕೂ ಇದರ ಪ್ರಯೋಜನ ಹೇಗೆಲ್ಲಾ ಪಡೆಯುತ್ತಿದ್ದರು ಎನ್ನುವುದರಿಂದ ಹಿಡಿದು ಯಾವುದೇ ಮೀಟರ್ ಬಡ್ಡಿ ಮಾಫಿಯಾಕ್ಕು ಕಡಿಮೆ ಇಲ್ಲ ಎನ್ನುವ ಕುಖ್ಯಾತಿ ಪಡೆಯುವವರೆಗಿನ ಅದರ ಇತಿಹಾಸ ಸಾಗಿ ಬಂದಿರುವ ಮೇಲೊಂದು ದೃಷ್ಟಿ ಬೀರೋದು ಒಳ್ಳೇದೆನಿಸುತ್ತದೆ.ಇದರಿಂದ ಅದರ ಅಸಲಿಯತ್ತು-ಬಂಡವಾಳ ಎರಡೂ ಜನರಿಗೆ ಗೊತ್ತಾಗಬಹುದೇನೊ..?

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP ಆರ್ಥಿಕವಾಗಿ ಹಿಂದುಳಿದವರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡುವ ಉದ್ದೇಶದಲ್ಲಿ ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಸ್ಥೆ.ಇದು ವೀರೇಂದ್ರಹೆಗ್ಗಡೆ ಅವರ ಕನಸಿನ ಕೂಸು..ಅತಿಯಾದ ಆಸೆ-ಲಾಭಗಡುಕತನ ಸುಳಿಯುವವರೆಗೂ ಸಂಘದ ಯೋಜನೆ ನಿರ್ದಿಷ್ಟ ಗುರಿಯಲ್ಲೇ ಮುಂದುವರೆದಿತ್ತು. ಸಾವಿರಾರು ಜನರಿಗೆ ಆರ್ಥಿಕವಾಗಿ ಸಹಾಯವಾಗಿತ್ತು. ಕಡಿಮೆ ಅವಧಿಯಲ್ಲೇ ಜನಮಾನಸ ಸೂರೆಗೊಳ್ಳುವಲ್ಲಿ ಸಹಕಾರಿಯಾಗಿತ್ತು.
ಆದರೆ ಸಂಘಕ್ಕೆ ಕೋಟಿಗಳಲ್ಲಿ ಆದಾಯ ಯಾವಾಗ ಹರಿದುಬರಲಿಕ್ಕೆ ಶುರುವಾಯ್ತೋ ಸೇವಾ ಮನೋಭಾವ ಸತ್ತೋಯ್ತು..ಕಡಿಮೆ ಬಡ್ಡಿ ಎನ್ನೋದೆಲ್ಲಾ ಸುಳ್ಳಾಯ್ತು..ಹಣದಾಸೆಗೆ ಸಂಘ ಸಂತ್ರಸ್ಥರನ್ನು ಸುಲಿಗೆ ಮಾಡಲಿಕ್ಕೆ ಶುರುಮಾಡಿತು. ಯಾವ್ ಮೀಟರ್ ಬಡ್ಡಿ ಮಾಫಿಯನೂ ಇದರ ಮುಂದೆ ಶೂನ್ಯ ಎನ್ನುವಷ್ಟರ ಮಟ್ಟಿಗೆ ಅಪಾಯಕಾರಿಯಾಯ್ತು. ಸಾಲ ವಸೂಲಾತಿಗೆ ಬಾಡಿಗೆ ಬಂಟರನ್ನು ನೇಮಿಸಿಕೊಳ್ಳಲಾಯ್ತು.ಇದು ನಿಜಕ್ಕೂ ಧರ್ಮಸ್ಥಳದ ಯೋಜನೆನಾ ಎಂದು ಜನ ಆಶ್ಚರ್ಯ-ಆತಂಕದಿಂದ ಮಾತನಾಡುವಂತಾಯ್ತು.ಇದರ ವಿರುದ್ಧ ಒಂದು ಜನಾಂದೋಲನವನ್ನು ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣನವರ್ ಶುರುಮಾಡುವವರೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಯ ಬಡ್ಡಿ ಮಾಫಿಯಾಕ್ಕೆ ನಲುಗಿದವರು, ಪ್ರಾಣ ಕಳೆದುಕೊಂಡವರ ಮಾಹಿತಿನೇ ಜಗಜ್ಜಾಹೀರಾಗಿರಲಿಲ್ಲ ಎನ್ನಲಾಗುತ್ತದೆ.

ಇದರ ಜತೆಗೇನೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ದಂಧೆಯ ಕ್ರೌರ್ಯಕ್ಕೆ ಸಾಕಷ್ಟು ಸಂತ್ರಸ್ಥರು ಬಲಿಯಾಗಲು ಆರಂಭಿಸಿದ ಮೇಲೆ ಸರ್ಕಾರದ ಮಟ್ಟದಲ್ಲಿ ಇದಕ್ಕೊಂದು ಬ್ರೇಕ್ ಹಾಕಬೇಕೆನ್ನುವ ಕೂಗು ಕೇಳಿಬಂತು.ಸರ್ಕಾರ ಜನಪರವಾಗಿ ಕೆಲಸ ಮಾಡಲು ಮುಂದಾದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಆದಿಯಾಗಿ ಅನೇಕ ಮೈಕ್ರೋ ಫೈನಾನ್ಸ್ ಸಂಘಗಳು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವಷ್ಟರ ಮಟ್ಟಿಗೆ ಪ್ರಭಾವ ಬೀರಿದ್ವು ಎನ್ನುವ ಮಾತು ಕೇಳಿಬಂದಿದ್ದು ಸುಳ್ಳಲ್ಲ. ಒಂದ್ ಹಂತದಲ್ಲಿ ಸರ್ಕಾರ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸುಗ್ರೀವಾಜ್ನೆ ಜಾರಿಗೆ ತರಲು ಮೀನಾಮೇಷ ಎಣಿಸುವ ರೀತಿಯಲ್ಲಿ ವಿಳಂಬ ಮಾಡಿದಾಗ ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಯ ರೂವಾರಿಗಳ ಒತ್ತಡವೇ ಕಾರಣ ಎಂಬ ಮಾತು ಕೇಳಿಬಂದಿತ್ತು.
ಗಿರೀಶ್ ಮಟ್ಟಣ್ಣನವರ್ ಇದರ ವಿರುದ್ಧ ತೀವ್ರತರವಾದ ಹೋರಾಟ ಸಂಘಟಿಸಿದ್ದು ಇವತ್ತಿಗೆ ಇತಿಹಾಸ. ಎಷ್ಟೇ ಕ್ರೌರ್ಯಗಳಾದ್ರು ಅದನ್ನು ಬಾಯಿಬಿಟ್ಟು ಹೇಳದೆ ಒಳಗೊಳಗೆ ನೋವು ತಿಂದ ಸಂತ್ರಸ್ಥರ ಮನವೊಲಿಸಿ ಅವರನ್ನು ಸಂಘಟಿಸಿ ಹೋರಾಟ ನಡೆಸೋದು ಅಷ್ಟು ಸಲೀಸಾಗಿರಲಿಲ್ಲ.ಆ ಪ್ರಯತ್ನಕ್ಕೆ ಆರಂಭದಲ್ಲಿ ಸಿಕ್ಕ ಪ್ರತಿಕ್ರಿಯೆ ಅಷ್ಟಕ್ಕಷ್ಟೇಯಾದ್ರೂ ಹೋರಾಟದ ಹಿಂದಿನ ಉದ್ದೇಶ ಅರಿತ ಸಂತ್ರಸ್ಥರು ದೊಡ್ಡ ಮಟ್ಟದ ಬೆಂಬಲ ಕೊಟ್ರು.ಕಾನೂನಾತ್ಮಕ ಹೋರಾಟದಲ್ಲಿ ಮಟ್ಟಣ್ಣನವರ್ ಸಾಥ್ ಕೊಟ್ರು.ಸಣ್ಣ ತೊರೆಯಂತಿದ್ದ ಹೋರಾಟ ನಂತರ ಸಾಗರದ ಸ್ವರೂಪ ಪಡೆದಿದ್ದು ಇತಿಹಾಸ ಬಿಡಿ..

ಇದೀಗ ಸಂತ್ರಸ್ಥೆ ನೀಡಿದ ದೂರು ಹಾಗೂ ಅದರ ಅನ್ವಯ ದಾಖಲಾದ ಎಫ್ ಐ ಆರ್ ನಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಮರ್ಮಾಘಾತವಾಗಿದ್ದರೆ ಅದರ ಅಧ್ಯಕ್ಷರಾದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಭಾರೀ ಮುಖಭಂಗವಾದಂತಾಗಿದೆ.ಏಕೆಂದರೆ ಎಫ್ ಐಆರ್ ನಲ್ಲಿ ಅಧ್ಯಕ್ಷರನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಸಂಸ್ಥೆಯ ವೆಬ್ ಸೈಟ್ ಮತ್ತು ಗೂಗಲ್ ಹಾಗೂ ಸಂಸ್ಥೆಯ ಅನೇಕ ಕಾರ್ಯಕ್ರಮಗಳ ವರದಿಯಲ್ಲೂ ಶ್ರೀ ವೀರೇಂದ್ರ ಹೆಗ್ಗಡೆ ಅವರೇ ಅಧ್ಯಕ್ಷರೆಂದು ಉಲ್ಲೇಖವಾಗಿರುವ ಹಿನ್ನಲೆಯಲ್ಲಿ ಅವರ ಹೆಸರನ್ನು ಬಳಸಲಾಗುತ್ತಿದೆ.( ಇದರ ಸಾಕ್ಷ್ಯಗಳನ್ನು ವರದಿಯಲ್ಲಿ ಪ್ರದರ್ಶಿಸಲಾಗಿದೆ).