BMTCಯಲ್ಲೊಬ್ಬ ಪರೋಪಕಾರಿ ಡ್ರೈವರ್‌ ವೆಂಕಟರಾಮಯ್ಯ….


ಪರೋಪಕಾರಿ ಡ್ರೈವರ್‌ ವೆಂಕಟರಾಮಯ್ಯ
ಪರೋಪಕಾರಿ ಡ್ರೈವರ್‌ ವೆಂಕಟರಾಮಯ್ಯ

ಪರೋಪಕಾರಾರ್ಥ ಇದ ಮಿತ್ತಂ ಶರೀರಂ…ಸಹಾಯ ದೊಡ್ಡ ಮಟ್ಟದಲ್ಲಿ ಮಾಡಬೇಕೆಂದೇನಿಲ್ಲ..ಅದರ ಪ್ರಯೋಜನ ತಲುಪಬೇಕಾದವರಿಗೆ ತಲುಪಬೇಕಷ್ಟೆ..ಇಂತದ್ದೊಂದು ಕೆಲಸವನ್ನು ಮಾಡುತ್ತಿರುವ ಬಿಎಂಟಿಸಿ ಡ್ರೈವರ್‌ ಎಲ್ಲರಿಗೂ ಮಾದರಿಯಾಗಿದ್ದಾರೆ.ಅವರ ಅಳಿಲು ಸೇವೆ ಬಿಎಂಟಿಸಿ ಸಿಬ್ಬಂದಿಗೆ ಸಹಕಾರವಾಗುತ್ತಿದೆ ಎನ್ನುವುದು ಸ್ವಾಗತಾರ್ಹ.ಅಂದ್ಹಾಗೆ ತಮ್ಮ ಸಂಬಳದಲ್ಲಿ ಉಳಿತಾಯ ಮಾಡಿದ ಹಣವನ್ನು ಕೂಡಿಟ್ಟು ವರ್ಷಕ್ಕೊಮ್ಮೆ ಅದನ್ನೆಲ್ಲಾ ಸೇರಿಸಿ ಡಿಪೋಗೆ ಅನುಕೂಲವಾಗುವ ವಸ್ತುವನ್ನು ಖರೀದಿಸಿ ನೀಡುವುದು ಈ ಚಾಲಕನ ಸ್ಪೆಷಾಲಿಟಿ.ಅಂದ್ಹಾಗೆ ಈ ಬಾರಿ ಅವರು ಎರಡು ದೊಡ್ಡ ಸಿಂಟೆಕ್ಸ್‌ ಗಳನ್ನು ಡಿಪೋಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂದ್ಹಾಗೆ ಬಿಎಂಟಿಸಿಯ ಈ ಮಹಾ ಉಪಕಾರಿ ಡ್ರೈವರ್‌ ಹೆಸರು  ಶ್ರೀ ವೆಂಕಟರಾಮಯ್ಯ ಡಿಪೋ 2ರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.ಈ ಬಾರಿ ಅವರು ತಾವು ಕೆಲಸ ಮಾಡುವ ಡಿಪೋ 2ಕ್ಕೆ ಸಿಂಟೆಕ್ಸ್‌ ಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ತಮಗೆ ಬರುವುದೇ ಕಡಿಮೆ ಸಂಬಳ.ಅದರಲ್ಲಿ ಜೀವನ ನಡೆಸೋದೇ ಕಷ್ಟ ನಿಜ,ಆದರೆ ಸಮಾಜಕ್ಕೊಂದು ಏನಾದರು ಕೊಡುಗೆ ನೀಡಬೇಕೆನ್ನುವ ಔದಾರ್ಯದ ಮನಸ್ಥಿತಿ ಅವರದು.ಹಾಗಾಗಿಯೇ ಪ್ರತಿ ವರ್ಷವೂ ಒಂದಲ್ಲಾ ಒಂದು ಸಾಮಾಗ್ರಿಯನ್ನು ಖರೀದಿಸಿ ತನ್ನ ಸಂಸ್ಥೆಗೆ ಕೊಡುವುದು ಅವರ ಅಭ್ಯಾಸ.

ಬಿಎಂಟಿಸಿ ಸಂಸ್ಥೆಯಿಂದ ಅನ್ನ ತಿನ್ನುತ್ತಿದ್ದೇನೆ.ನನಗೆ ಬದುಕನ್ನು ನೀಡಿರುವ ಸಂಸ್ಥೆಗೆ ಪ್ರತಿಯಾಗಿ ಏನಾದರೊಂದು ಮಾಡಬೇಕಲ್ವಾ..ಹಾಗಾಗಿ ಇಂತದ್ದೊಂದು ಕೆಲಸವನ್ನು ಪ್ರತಿ ವರ್ಷವೂ ಅವರು ಮಾಡುತ್ತಾ ಬಂದಿದ್ದಾರಂತೆ. ಪ್ರಚಾರ ಪಡೆಯಬೇಕು.ನಾಲ್ಕೈದು ಜನ ನನ್ನನ್ನು ಮೆಚ್ಚಬೇಕು..ಹಾಡಿ ಹೊಗಳಬೇಕು ಎನ್ನುವ ಉದ್ದೇಶ ಖಂಡಿತಾ ನನ್ನದಲ್ಲ.ನಾನು ಮಾಡುವ ಕೆಲಸ ಸಮಾಜದಲ್ಲಿ ಯಾರಿಗೂ ಗೊತ್ತಾಗಬಾರದೆನ್ನುವ ನಿಸ್ವಾರ್ಥದಲ್ಲೇ ಅವರು ಪ್ರತಿ  ವರ್ಷ ಇಂತದ್ದೊಂದು ಕೆಲಸ ಮಾಡುತ್ತಾ ಬಂದಿದ್ದಾರಂತೆ.ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪಸ್ವಲ್ಪ ಹಣವನ್ನು ತೆಗೆದಿಟ್ಟು ಅದೊಂದು ದೊಡ್ಡ ಮೊತ್ತವಾದಾಗ ಸಿಬ್ಬಂದಿಗೆ ಅಥವಾ ಡಿಪೋಗೆ ಅನುಕೂಲವಾಗುವಂತ ವಸ್ತುವನ್ನ ಖರೀದಿಸುತ್ತಾರಂತೆ.ಅದರ ಭಾಗವಾಗಿ ಈ ಬಾರಿ ಸಾವಿರಾರು ಮೌಲ್ಯದ ಸಿಂಟೆಕ್ಸ್‌ ಗಳನ್ನು ನೀಡಿದ್ದಾರೆ.ಇದು ಎಲ್ಲರಿಗೂ ಮಾದರಿಯಾಗುವಂತ ವಿಷಯ ಎನ್ನುತ್ತಾರೆ ಸಹಸಿಬ್ಬಂದಿ ಯೋಗೇಶ್‌ ಗೌಡ.ಇವರ ನಿಸ್ವಾರ್ಥದ ಮುಂದೆ ನಾವೆಲ್ಲಾ ಮೂಕವಿಸ್ಮಿತರಾಗಿದ್ದೇವೆ ಎನ್ನುತ್ತಾರೆ.

ALSO READ :  "ಅಧಿಕಾರಿ"ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ "ಇವ್ರು" ಬಸ್ ಓಡಿಸೊಲ್ಲವಂತೆ!

ವೆಂಕಟರಾಮಯ್ಯ ಅವರ ಕೆಲಸಕ್ಕೆ ನಿಗಮದ ಅಧಿಕಾರಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.ಒಬ್ಬ ಡ್ರೈವರ್‌ ಗೆ ಬರೋ ಸಂಬಳದಲ್ಲಿ ಆತನ ಜೀವನ ನಿರ್ವಹಣೆಯೇ ಕಷ್ಟವಾಗಿರುತ್ತದೆ.ಅಂತದ್ದರಲ್ಲಿ ಬರುವ ಸಂಬಳದಲ್ಲೇ ಇಷ್ಟಿಷ್ಟನ್ನು ತೆಗೆದಿಟ್ಟು ಕೂಡಿಸಿ ಅದೊಂದು ಹಿಡಿಗಂಟಾಗುತ್ತಿದ್ದಂತೆ ತಾನು ಕೆಲಸ ಮಾಡುವ ಸಂಸ್ಥೆಗೆ ಅನುಕೂಲವಾಗುವ ವಸ್ತುವನ್ನು ಖರೀದಿಸಿ ಅದನ್ನು ಋಣ ಸಂದಾಯದ ರೂಪದಲ್ಲಿ  ನೀಡುತ್ತಾ ಬಂದಿರುವುದು ನಮ್ಮನ್ನೇ ಮಾತಿಲ್ಲದಂತೆ ಮಾಡಿದೆ.ಅವರಿಗೇನು ಇದು ಮಾಡಬೇಕಿರಲಿಲ್ಲ.ಆದರ ಅನ್ನ ಕೊಟ್ಟ ಸಂಸ್ಥೆ ಎನ್ನುವ ಕಾರಣಕ್ಕೆ ಮಾಡುತ್ತಾ ಬಂದಿರುವುದು ಹೆಮ್ಮೆ ತರುವಂತ ವಿಷಯ.ಅವರ ಉಪಕಾರದ ಈ ಕಾರ್ಯ ನಿರಂತರವಾಗಿರಲಿ ಎನ್ನುವುದು ಅಧಿಕಾರಿಗಳ ಆಶಯ.

ಅದೇನೇ ಇರಲಿ, ಬರುವ ಸಂಬಳದಲ್ಲಿ ತಾನಾಯಿತು ತನ್ನ ಜೀವನವಾಯಿತು ಎಂದುಕೊಂಡು ಇರಬಹುದಾದ ವೆಂಕಟರಾಮಯ್ಯ ಏನಾದರೊಂದು ಸೇವೆ ಕೊಡಬೇಕೆನ್ನುವ ಸದುದ್ದೇಶದಲ್ಲಿ ದುಡಿಮೆ ಹಣದಲ್ಲೇ ಉಳಿತಾಯ ಮಾಡಿದ ನಿಧಿಯಿಂದ ಒಂದೊಳ್ಳೆ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ.ಸ್ವಾರ್ಥಪರವಾಗುತ್ತಿರುವ ಬಹುತೇಕರ ಮನಸನ್ನು ಬದಲಿಸುವ ಮಾದರಿ ಕೆಲಸವೂ  ಹೌದು.ಇಂತದ್ದೊಂದು ಅಂತಃಕರಣಪೂರಿತ ಕೆಲಸ ಮಾಡುತ್ತಿರುವ ವೆಂಕಟರಾಮಯ್ಯರಿಗೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಕೂಡ ಅಭಿನಂದನೆ ಸಲ್ಲಿಸುತ್ತದೆ..ಕೀಪ್‌ ಇಟ್‌ ಅಪ್‌ ಸರ್..


Leave a Comment