-ದಸರಾಕ್ಕೆ ಕಳಂಕ ತಂದಿದ್ದ ಬಾಲಕಿಯ ರೇಪ್ ಅಂಡ್ ಮರ್ಡರ್ ಕೇಸ್.. ನ್ಯಾಯಾಧೀಶ ಆನಂದ ವಾಘಡೆ ಅವರ ಐತಿಹಾಸಿಕ ತೀರ್ಪು
-ಕೇವಲ ವರ್ಷದೊಳಗೆ ಪ್ರಕರಣಕ್ಕೆ ಇತಿಶ್ರೀ ಹಾಡಿದ ಮೈಸೂರು ಪೊಲೀಸರು – ತೀರ್ಪಿನಿಂದ ನೆಮ್ಮದಿಯ ಮಗ್ಗಲು ಬದಲಿಸಿದ ಬಾಲಕಿಯ ಆತ್ಮ

ಮೈಸೂರು-ಬೆಂಗಳೂರು: ಇಡೀ ರಾಜ್ಯವೇ ಕತೂಹಲದಿಂದ ನಿರೀಕ್ಷೆ ಮಾಡುತ್ತಿದ್ದ ಆ ತೀರ್ಪು ಇಂದು ಹೊರಬಿದ್ದಿದೆ. ನ್ಯಾಯಾಂಗದ ಬಗ್ಗೆ ನಂಬಿಕೆ ಮೇಲೆ ಜನರ ನಂಬಿಕೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಮೈಸೂರಿನ ನ್ಯಾಯಾಲಯ ನೀಡಿದ ತೀರ್ಪು.ಏನೂ ತಿಳಿಯದ ಮುಗ್ದ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೇ ಸಾಕ್ಷ್ಯ ಉಳಿಯಬಾರದೆನ್ನುವ ಕಾರಣಕ್ಕೆ ೧೯ ಬಾರಿ ಇರಿದು ಕೊಂದ ವಿಕ್ಷಿಪ್ತ ಹಾಗೂ ಸೈಕಿಕ್ ಮನಸ್ಥಿತಿಯ ಕಾರ್ತಿಕ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ಎನ್ನುವಂತ ತೀರ್ಪು ನೀಡಿದೆ.
ಇಡೀ ರಾಜ್ಯದ ಚಿತ್ತ ಇವತ್ತು ಮೈಸೂರಿನ ಕೋರ್ಟ್ ಮೇಲೆ ಇತ್ತು.ಇದಕ್ಕೆ ಕಾರಣ ಇಡೀ ಮೈಸೂರನ್ನು ಬೆಚ್ಚಿಬೀಳಿಸಿದ್ದ ಆ ಪೈಶಾಚಿಕ ಕೃತ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಬಹುದಾದ ತೀರ್ಪು. ಏಕೆಂದರೆ ಈ ತೀರ್ಪು, ಕೇವಲ ಒಂದು ತೀರ್ಪು ಆಗಿರಲೇ ಇಲ್ಲ,ಬದಲಿಗೆ ಅದು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರ ನಂಬಿಕೆಯ ಪಲ್ಲಟವನ್ನೇ ಉಂಟು ಮಾಡಬಹುದಾ ಗಿತ್ತು.ಕೋರ್ಟ್ ಕೂಡ ಜನರ ನಂಬಿಕೆ-ನಿರೀಕ್ಷೆ ಹುಸಿ ಮಾಡಲಿಲ್ಲ..ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಂದಾಕಿದ ಆ ಕಾಮುಕನಿಗೆ ಗಲ್ಲು ಶಿಕ್ಷೆಯನ್ನೇ ಪ್ರಕಟಿಸಿ ಆದೇಶ ಹೊರಡಿಸಿದೆ.


ಅಂದ್ಹಾಗೆ ಕಳೆದ ವರ್ಷ ಇದೇ ದಸರಾದಂದು ಇಡೀ ಮೈಸೂರಿಗೆ ಮೈಸೂರೇ, ದಸರಾದ ಸಂಭ್ರಮದಲ್ಲಿ ಮೈಮರೆತಿತ್ತು.ದಸರಾದ ಪಾವಿತ್ರ್ಯತೆಗೆ ಕಳಂಕ ತರುವಂತ ಅಂತದ್ದೊಂದು ಕೃತ್ಯ ನಡೆದೀತು ಎನ್ನುವ ಸಣ್ಣ ಕಲ್ಪನೆಯೂ ಮೈಸೂರಿಗೆ ಇರಲಿಲ್ಲ.ಆದರೆ ಮೈಸೂರಿನ ಜನರ ನಂಬಿಕೆಯನ್ನು ಬುಡಮೇಲು ಮಾಡಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಕೃತ್ಯವೊಂದನ್ನು ಎಸಗಿಬಿಟ್ಟಿದ್ದ ಸಿದ್ಲಿಪುರದ ವಿಕೃತ ಕಾರ್ತಿಕ್.ಆತನ ವಯಸ್ಸು ೩೨. ತನ್ನ ಕಾಮತೃಷೆ ತೀರಿಸಿಕೊಳ್ಳೊಕ್ಕೆ ಬಳಸಿಕೊಂಡ ಮಗುವಿನ ವಯಸ್ಸು ಕೇವಲ ೯. ಉತ್ತರ ಕರ್ನಾಟಕದ ಗುಲ್ಬರ್ಗಾ ಮೂಲದಿಂದ ಬದುಕನ್ನು ಅರಸಿಕೊಂಡು ಮೈಸೂರಿಗೆ ಬಂದ ಶ್ರಮಿಕ ಕುಟುಂಬದ ಕುಡಿ ಅದು.ಬಲೂನು ಮಾರುವ ಅಪ್ಪ ಅಮ್ಮನೊಂದಿಗೆ ವಲಸೆ ಬಂದು ಮೈಸೂರಿನ ವಸ್ತು ಪ್ರದರ್ಶನ ಕೇಂದ್ರದ ಬಳಿ ಟೆಂಟ್ ಹಾಕ್ಕೊಂಡಿದ್ದ ಕುಟುಂಬದೊಂದಿಗೆ ವಾಸ ಮಾಡ್ತಾ ಸಣ್ಣಪುಟ್ಟ ಸಹಾಯ ಮಾಡ್ತಿದ್ದ ಬಾಲಕಿ ಆಕೆ..
ದಸರಾಕ್ಕೆ ಬಂದಿದ್ದ ಕಾಮುಕ ಕಾರ್ತಿಕ್ ನ ಕಣ್ಣಿಗೆ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಈ ಮಗು ಬಿತ್ತೋ ಗೊತ್ತಿಲ್ಲ ಕಣ್ರಿ. ಆ ಮಗುವನ್ನು ಅನುಭವಿಸಿಯೇ ತೀರುವ ಕೆಟ್ಟ ನಿರ್ದಾರ ಮಾಡಿಕೊಂಡ.ಒಬ್ಬನೇ ಅಲೆಯುತ್ತಾ ಟೆಂಟ್ ನ ಬಳಿ ಅಲೆದಾಡಿದ್ದಾನೆ.ಆ ಮಗುವಿನ ಚಲನವಲನ ಗಮನಿಸಿದ್ದಾನೆ.ಮಗು ಯಾವಾಗ ಗುಂಪಲ್ಲಿ ಇರುತ್ತೆ..ಒಂಟಿಯಾಗಿ ಇರುತ್ತೆ ಎನ್ನುವುದನ್ನ ಗಮನಿಸಿ ಕನ್ಫರ್ಮ್ ಮಾಡಿಕೊಂಡಿದ್ದಾನೆ.ಹಾಗೊಂದು ದಿನ ಬೇಟೆಯಾಡಲಿಕ್ಕೆಂದೇ ಪ್ಲ್ಯಾನ್ ಮಾಡಿಕೊಂಡು ಬಂದಿದ್ದಾನೆ.ಟೆಂಟ್ ನ ಬಳಿ ಮಗುವನ್ನು ಬಿಟ್ಟು ಪೋಷಕರು ಬಲೂನ್ ಮಾರಲು ಹೋಗಿದ್ದಾರೆ.ಅದನ್ನು ಗೊತ್ತು ಮಾಡಿಕೊಂಡ ಕಾರ್ತಿಕ್ ಟೆಂಟ್ ನ ಒಳ ನುಗ್ಗಿ, ಮಗುವಿನ ಬಾಯಿ ಮುಚ್ಚಿಕೊಂಡು ಪರಾರಿಯಾಗಿದ್ದಾನೆ.

ಹಾಗೆ ಓಡಿ ಹೋಗುವಾಗ ಅಪ್ಪಿ ತಪ್ಪಿ ಯಾರಾದ್ರೂ ನೋಡಿದ್ರೂನೂ ಮಗು ಬದುಕುಳಿಯುತ್ತಿತ್ತೇನೋ..ಯಾರೂ ಇಲ್ಲದ ವೇಳೆಯೇ ಟಾರ್ಗೆಟ್ ಮಾಡಿದ್ದರಿಂದ ಕಾಮುಕನ ಪ್ಲ್ಯಾನ್ ನಂತೆಯೇ ಎಲ್ಲಾ ನಡೆದಿದೆ.ಮಗು ಆತನಿಂದ ಬಿಡಿಸಿಕೊಳ್ಳಲು ಒದ್ದಾಡಿದೆ.ಆದರೆ ಆತ ಬಿಟ್ಟಿಲ್ಲ..ಆಮೇಲೆ ನಡೆದಿದ್ದೆಲ್ಲಾ ಘನಘೋರ.ಆ ಕೋಮಲ ದೇಹವನ್ನು ಆತ ಹುರಿದು ಮುಕ್ಕಿ ತಿಂದಿದ್ದಾನೆ.ಮಗು ನೋವಿನಿಂದ ಕಿರುಚಿಕೊಂಡರೂ ಬಿಟ್ಟಿಲ್ಲ.ಆತನ ಕಬಂದ ಬಾಹುಗಳಿಂದ ಬಿಡಿಸಿಕೊಳ್ಳಲಾರದೆ ಅಸ್ವಸ್ಥಗೊಂಡು ಬಿದ್ದಿದೆ.ಅಷ್ಟಕ್ಕೆ ಆ ಮಗುವನ್ನು ಬಿಟ್ಟು ಹೋಗಬಹುದಿತ್ತೇನೋ..ಆದರೆ ಅಲ್ಲಿ ಮತ್ತೊಮ್ಮೆ ಆತನ ಮೃಗೀಯ ವರ್ತನೆ ಜಾಗೃತವಾಗಿದೆ.ನನ್ನ ಬಗ್ಗೆ ಸಾಕ್ಷಿ ಹೇಳಿದ್ರೆ ಸಂಕಷ್ಟ ತಪ್ಪಿದ್ದಲ್ಲ ಎಂದುಕೊಂಡು ತಕ್ಷಣಕ್ಕೆ ತನ್ನ ಬಳಿಯಿದ್ದ ಚಾಕುವಿನಿಂದ ೧೯ ಬಾರಿ ಹಲ್ಲೆ ಮಾಡಿ ಕೊಂದಿದ್ದಾನೆ.
ಮೂರ್ನಾಲ್ಕು ಬಾರಿ ಹಲ್ಲೆ ಮಾಡಿದಾಗಲೇ ಆ ಮಗು ಕೊನೆಯುಸಿರೆಳೆದಿದೆ.ಆದರೆ ಆತ ಎಷ್ಟು ವಿಕೃತನಾಗಿದ್ದನೆಂದರೆ ಅದರ ದೇಹದ ಮೇಲೆ ಮನಸೋಇಚ್ಛೆ ಇರಿದಿದ್ದಾನೆ.ಸತ್ತಿರುವುದನ್ನು ಕನ್ಫರ್ಮ್ ಮಾಡಿಕೊಂಡ ಮೇಲೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ದಸರಾದ ವೇಳೆ ಸಂಭವಿಸಿದ ಈ ಕೃತ್ಯದ ಬಗ್ಗೆ ಮೈಸೂರಿಗೆ ಮೈಸೂರೇ ಬೆಚ್ಚಿಬಿದ್ದಿತ್ತು. ಕಾನೂನು ಸುವ್ಯಸವ್ಥೆ ಬಗ್ಗೆ ದೊಡ್ಡ ವಿವಾದ ಸೃಷ್ಟಿಯಾಗಿತ್ತು.ಮೈಸೂರಿನಲ್ಲಷ್ಟೇ ಅಲ್ಲ ರಾಜ್ಯಾದ್ಯಂತ ಜನ ಬೀದಿಗೆ ಇಳಿದು ಕಾಮುಕನ ವಿರುದ್ದ ಪ್ರತಿಭಟನೆ ಮಾಡಿದ್ವು…ಕಾಮುಕನನ್ನು ಗಲ್ಲಿಗೇರಿಸಬೇಕೆನ್ನುವ ಕೂಗು ಕೇಳಿಬಂತು.
ಮೈಸೂರಿನ ಪೊಲೀಸರು ಪಾತಾಳ ಗರಡಿ ಹಾಕಿ ಕಾರ್ತಿಕ್ ನನ್ನು ಬಂಧಿಸಿದ್ರು.ಬಂಧನ ವೇಳೆ ಪಾತಕ ಹಿನ್ನಲೆ ಹೊಂದಿದ್ದ ಕಾರ್ತಿಕ್ ಪೊಲೀಸರ ಮೇಲೆ ಹಲ್ಲಗೆ ಯತ್ನಿಸಿದ್ದನಂತೆ.ಆತನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ರು.ತನಿಖೆ ಯಾವುದೇ ಲೋಪವಿಲ್ಲದೆ ನಡೆಯಿತು.ಈತನೇ ಸೈಕಿಕ್ ರೇಪಿಸ್ಟ್ ಅಂಡ್ ಕಿಲ್ಲರ್ ಎನ್ನುವುದನ್ನು ಪ್ರೂವ್ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ರು, ನ್ಯಾಯಪೀ ಠದಲ್ಲಿ ಕುಳಿತಿದ್ದ ಆನಂದ್ ಪಿ ವಾಘಡೆ ನ್ಯಾಯಾಧೀಶರ ಸ್ಥಾನಕ್ಕೆ ಘನತೆ ತರುವಂತ ರೀತಿಯ ತೀರ್ಪು ನೀಡಿ ಮೈಸೂರಿನವರ ಆಕ್ರೋಶವನ್ನು ತಣ್ಣಗೆ ಮಾಡುವಲ್ಲಿ ಯಶಸ್ವಿಯಾ ಗಿದ್ದಾರೆ.ಅದು ಕೂಡ ಪ್ರಕರಣ ನಡೆದ ಒಂದು ವರ್ಷದೊಳಗೆ. ನ್ಯಾಯಾಧೀಶರ ತೀರ್ಪಿಗಷ್ಟೇ ಅಲ್ಲ, ಮೈಸೂರು ಪೊಲೀಸರ ಸಮಯಪ್ರಜ್ಞೆ, ಕಾರ್ಯಕ್ಷಮತೆ ಬಗ್ಗೆಯೂ ಜನ ಕೊಂಡಾಡುವಂತಾಗಿದೆ.ಅದೇನೇ ಆಗಲಿ ಮೈಸೂರಿನ ನ್ಯಾಯಾಲಯದ ತೀರ್ಪು ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆಯನ್ನು ವೃದ್ದಿ ಮಾಡಿರುವುದಷ್ಟೇ ಅಲ್ಲ, ನ್ಯಾಯಾಂಗದ ಘನತೆಯನ್ನೂ ಹೆಚ್ಚಿಸಿದೆ.
