ಹಾಸಿಗೆ ಹಿಡಿದ ಅಪ್ಪ-ಒಬ್ಬಂಟಿಯಾಗಿ ಸಂಸಾರನೌಕೆ ನಡೆಸುತ್ತಿರುವ ಅಮ್ಮ- ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಚಂದನಾ ಅದ್ವಿತೀಯ ಸಾಧನೆ- ವೈದ್ಯೆಯಾಗಬೇಕೆನ್ನುವ ಆಸೆ
ಬೆಂಗಳೂರು: ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿ ತೋರಿಸಿವೆ ನಮ್ಮ ಬಿಬಿಎಂಪಿ ಶಾಲೆಗಳು.ಗುಣಮಟ್ಟದ ಶಿಕ್ಷಣ-ನುರಿತ ಶಿಕ್ಷಕರಿಲ್ಲದ ಬಿಬಿಎಂಪಿ ಶಾಲೆಗಳನ್ನು ಉಳಿಸಿಕೊಳ್ಳೋದಕ್ಕಿಂತ ಮುಚ್ಚಿ ಬಿಡೋದು ಅಥವಾ ಸರ್ಕಾರಕ್ಕೆ ಒಪ್ಪಿಸಿಬಿಡೋದೇ ಸೂಕ್ತ ಎಂದು ಮೂದಲಿಸಿ ಮಾತನಾಡುತ್ತಿದ್ದ ಜನರಿಗೆ ಬಿಬಿಎಂಪಿ ಶಾಲೆ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ. ಓರ್ವ ವಿದ್ಯಾರ್ಥಿನಿ ರಾಜ್ಯಕ್ಕೆ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದರೆ ಇನ್ನುಳಿದ ಸಾಕಷ್ಟು ವಿದ್ಯಾರ್ತಿಗಳು ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂದು ರಾಜ್ಯಾದ್ಯಂತ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಬಿಬಿಎಂಪಿ ಶಾಲಾ ಮಕ್ಕಳು ಗಮನಾರ್ಹ ಎನ್ನುವಂತ ಸಾಧನೆ ಮಾಡಿದ್ದಾರೆ.ಶ್ರೀರಾಮಪುರದ ಬಿಬಿಎಂಪಿ ಶಾಲೆಯ ವಿದ್ಯಾರ್ಥಿನಿ ಚಂದನ 625 ಅಂಕಗಳಿಗೆ 619ನ ಅಂಕಗಳನ್ನು ಪಡೆದು ಗಣನೀಯ ಎನ್ನುವಂತ ಸಾಧನೆ ಮಾಡಿದ್ದಾಳೆ.ಕೌಟ1ಂಬಿಕವಾಗಿ ಸಾಕಷ್ಟು ಆರ್ಥಿಕ ಸಂಕಷ್ಟಿದಲ್ಲೇ ಜೀವನ ನಡೆಸುತ್ತಿರುವ ಮನೆಯ ಮಗಳಾಗಿ ಆಕೆ ಮಾಡಿರುವ ಸಾಧನೆ ಗಮನಾರ್ಹ ಎನಿಸುತ್ತದೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಂದೆಯ ಆರೈಕೆ ಜತೆಗೆ ವಿದ್ಯಾಬ್ಯಾಸ ಮಾಡುವ ಹೊಣೆಗಾರಿಕೆಗೆ ಸಿಲುಕಿದ್ದ ಚಂದನಾ ಆ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತಿದ್ದಾಳೆ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ತಾಯಿಯೇ ಕುಟುಂಬದ ಜೀವನಾಧಾರ.ತುಂಬು ಕುಟುಂಬದಲ್ಲಿ ಜೀವನ ನಡೆಸುತ್ತಿರುವ ಚಂದನಾಳನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಮಾತನಾಡಿಸಿತು.ಕೆಲವು ಕಾರಣಗಳಿಂದ ಬೆಂಗಳೂರಿನಿಂದ ಹೊರಭಾಗದಲ್ಲಿರುವುದಾಗಿ ತಿಳಿಸಿದ ಚಂದನಾ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನೇ ಚೆನ್ನಾಗಿ ಶೃದ್ಧೆಯಿಂದ ಓದುತ್ತಿದ್ದುದಾಗಿ ತಿಳಿಸಿದ್ಲು.ದಿನಕ್ಕೆ 2-3 ಗಂಟೆಯಷ್ಟೇ ಓದುತ್ತಿದ್ದೆ ಎಂದಿದ್ದಾಳೆ.ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿದು ಮಾತನಾಡುವ ಅನೇಕರಿಗೆ ತನ್ನ ಸಾಧನೆ ಮೂಲಕ ಸರಿಯಾದ ಪಾಠ ಕಲಿಸಿದ್ದಾಳೆ ಚಂದನಾ.
ಬಿಬಿಎಂಪಿ ಶಾಲೆಗಳಲ್ಲೂ ಒಳ್ಳೆಯ ಶಿಕ್ಷಣ ದೊರೆಯುತ್ತದೆ.ಗುಣಮಟ್ಟದ ಶಿಕ್ಷಕರಿದ್ದಾರೆ.ಅವರು ಕಲಿಸುವ ಪಾಠವನ್ನು ಶೃದ್ಧೆಯಿಂದ ಓದಬೇಕಷ್ಟೇ.ಅದಕ್ಕೆ ನಾನು ಸೇರಿದಂತೆ ಅನೇಕ ಮಕ್ಕಳು ಸಾಕ್ಷಿಯಾಗಿದ್ದಾರೆ.ನನ್ನಂತೆ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನನ್ನ ಸಾಧನೆ ಮಾದರಿಯಾದರೆ ಸಾಕು ಎನ್ನುತ್ತಾಳೆ ಚಂದನಾ. ಮನೆಯಲ್ಲಿ ಕಷ್ಟವಿದ್ದರೂ ಶೈಕ್ಷಣಿಕವಾಗಿ ಒಳ್ಳೆಯ ವಾತಾವರಣವಿತ್ತು.ಹಾಸಿಗೆ ಹಿಡಿದಿರುವ ಅಪ್ಪ, ಕುಟುಂಬಕ್ಕೆ ಆಧಾರವಾಗಿರುವ ಅಮ್ಮನ ಪರಿಶ್ರಮ ಹಾಗು ಒಡಹುಟ್ಟಿದವರ ಸಹಕಾರದ ಕಾರಣದಿಂದ ಸಾಧನೆ ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ಮುಂದುವರೆದು 625ಕ್ಕೆ 621 ಅಂಕಗಳನ್ನು ನಿರೀಕ್ಷಿಸಿದ್ದೆ.2 ಅಂಕ ಕಡಿಮೆ ಬಂದಿದೆ.ಆದ್ರೂ ಬೇಸರವಿಲ್ಲ.ಹಾಗಂತ ಮರುಮೌಲ್ಯಮಾಪನಕ್ಕೆ ಅಪ್ಲೈ ಮಾಡೊಲ್ಲ.ಮುಂದೆ ಡಾಕ್ಟರ್ ಆಗಬೇಕು ಎಂದುಕೊಂಡಿರುವೆ.ವೈದ್ಯವೃತ್ತಿ ಬಗ್ಗೆ ಮೊದಲಿಂದಲೂ ನನಗೆ ಅಪಾರ ಹೆಮ್ಮೆ-ಗೌರವ.ವೈದ್ಯೆ ಆಗಬೇಕೆಂಬ ಕನಸು ಕಂಡಿರುವೆ.ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ.ಇನ್ನೂ ಹೆಚ್ಚು ಚೆನ್ನಾಗಿ ಓದುತ್ತೇನೆ.ಮನೆಗೆ ಆದರ್ಶ ಮಗಳಾಗಿ ಸಮಾಜಕ್ಕೆ ಒಳ್ಳೆಯ ವೈದ್ಯೆಯಾಗಬೇಕೆನ್ನುವುದು ನನ್ನ ಆಸೆ.ನನ್ನ ಬದುಕು ಸಮಾಜಕ್ಕೆ ಮುಡಿಪಾಗಿರಬೇಕೆನ್ನುವುದು ನನ್ನ ಆಸೆ ಎಂದು ತನ್ನ ಮುಂದಿನ ಕನಸನ್ನು ಬಿಚ್ಚಿಡುತ್ತಾಳೆ. ಅಂದ್ಹಾಗೆ ಚಂದನಾ ಸಾಧನೆ ಬಿಬಿಎಂಪಿ ಮಕ್ಕಳಿಗೆ ಮಾದರಿಯಾಗಲಿ.ಆಕೆ ಅಂದುಕೊಂಡ ಎಲ್ಲಾ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರುವಂತಾಗಲಿ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ ಹಾಗೆಯೇ ಆಶಿಸುತ್ತದೆ.