EXCLUSIVE..ಅಮಾಯಕನನ್ನು “ಅಕ್ರಮ ಬಂಧನ”ದಲ್ಲಿಟ್ಟು ದೌರ್ಜನ್ಯ ನಡೆಸಿದ್ದು ಸತ್ಯನಾ..!? ಕಮಿಷನರ್ ದಯಾನಂದ್ ತನಿಖೆಗೆ ಆದೇಶಿಸಿದ್ರೆ ಬಯಲಾಗ್ತದಾ ಪೊಲೀಸ್  “ವ್ಯಾಘ್ರ”ತ್ವ..?!

EXCLUSIVE..ಅಮಾಯಕನನ್ನು “ಅಕ್ರಮ ಬಂಧನ”ದಲ್ಲಿಟ್ಟು ದೌರ್ಜನ್ಯ ನಡೆಸಿದ್ದು ಸತ್ಯನಾ..!? ಕಮಿಷನರ್ ದಯಾನಂದ್ ತನಿಖೆಗೆ ಆದೇಶಿಸಿದ್ರೆ ಬಯಲಾಗ್ತದಾ ಪೊಲೀಸ್ “ವ್ಯಾಘ್ರ”ತ್ವ..?!

ಹರ್ಯಾಣ ಮೂಲದ ಯೋಗೇಶ್ ಶರ್ಮಾ ರನ್ನು 3 ದಿನ  ಸ್ಟೇಷನ್ ನಲ್ಲಿಟ್ಟುಕೊಂಡಿದ್ದಾರೆನ್ನುವುದು ಎಷ್ಟು ಸರಿ.. ..?

ಕಾನೂನು ಅದಕ್ಕೆ ಸಮ್ಮತಿಸುತ್ತಾ..? ಸಿಸಿ ಟಿವಿ ದೃಶ್ಯಗಳಲ್ಲಿ ಅಡಗಿದೆಯಾ “ದೌರ್ಜನ್ಯ”ದ ಸಂಪೂರ್ಣ ಚಿತ್ರಣ..!?

ಹರ್ಯಾಣ ಮೂಲದ ಯೋಗೇಶ್ ಶರ್ಮಾ
ಹರ್ಯಾಣ ಮೂಲದ ಯೋಗೇಶ್ ಶರ್ಮಾ

ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ನಾಗರಿಕರಿಗೆ ರಕ್ಷಣೆ ನೀಡೋದು ನಮ್ಮ ಬೆಂಗಳೂರು ಪೊಲೀಸರ ಬಾಧ್ಯಸ್ಥಿಕೆ ಮತ್ತು ಹೊಣೆಗಾರಿಕೆ. ಅದನ್ನು ನಮ್ಮ ಪೊಲೀಸರು ಮಾಡುತ್ತಲೂ ಬಂದಿದ್ದಾರೆ. ಆದರೆ ಕೆಲವು ಬೆಳವಣಿಗೆಗಳು ಮಾತ್ರ ಅದೇಕೋ ಪೊಲೀಸ್ ವ್ಯವಸ್ಥೆ ಬಗೆಗಿರೋ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದಾಕುವಂತೆ ಮಾಡ್ತಿವೆ ಎನ್ನುವುದು ದುರಾದೃಷ್ಟಕರ. ಇಂತದ್ದೇ ಒಂದು ಸುದ್ದಿಯ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲುತ್ತಿದೆ. ಸಾಕಷ್ಟು ಗೊಂದಲ-ತಾಕಲಾಟಗಳಿಂದ ಕೂಡಿರುವ ಈ ಒಂದು ಪ್ರಕರಣ ದ ಬಗ್ಗೆ ಪೊಲೀಸ್ ಕಮಿಷನರ್ ದಯಾನಂದ್ ಅವರು  ಬೆಳಕು ಚೆಲ್ಲಿ  ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಆದೇಶಿಸಿದ್ದೇ ಆದಲ್ಲಿ… ಅದರಿಂದ ಸತ್ಯಾಂಶ ಬಯಲಾಗಿದ್ದೇ ಆದಲ್ಲಿ ಖುದ್ದು ಪೊಲೀಸ್ ಕಮಿಷನರ್ ಸಾಹೇಬ್ರೇ ಬೆಚ್ಚಿ ಬೀಳಬಹುದೇನೋ..?ತಮ್ಮ ಇಲಾಖೆಯಲ್ಲಿರುವವರೇ ಅಕ್ರಮಗಳ ಸೂತ್ರದಾರರಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಗಾಬರಿಯಾಗಬಹುದೇನೋ..?

ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಪತ್ರಕರ್ತ ದುರ್ಗೇಶ್ ಕುಮಾರ್ ಎನ್ನುವವರು 06-05-2024  ರಂದು  ಒಂದು ದೂರನ್ನು ನೀಡಿ ಅದರ ಮೇಲೆ ಬೆಳಕು ಚೆಲ್ಲುವಂತೆ ಮನವಿ ಮಾಡಿದ್ರು.ಅಷ್ಟೇ ಅಲ್ಲ ಪೊಲೀಸ್ ಕಮಿಷನರ್ ದಯಾನಂದ್ ಅವರಿಗೂ ಕೂಡ ಪತ್ರ ಬರೆದು ಮಡಿವಾಳ ಠಾಣೆಯಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ಮೇಲೆ ಬೆಳಕು ಚೆಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ.ಈ ಎರಡೂ ಪತ್ರಗಳನ್ನು ಕನ್ನಡ ಪ್ಲ್ಯಾಶ್ ನ್ಯೂಸ್ ವರದಿಯಲ್ಲಿ ಪ್ರಕಟಿಸಿದೆ.

ಅಂದ್ಹಾಗೆ ದುರ್ಗೇಶ್ ಕುಮಾರ್ ಅವರು ಆ ಪತ್ರದಲ್ಲಿ ಉಲ್ಲೇಖಿಸಿರುವ ಕೆಲವೊಂದು ಸಂಗತಿಗಳು ಪೊಲೀಸ್ ಇಲಾಖೆಯಲ್ಲಿ ಹೀಗೂ ನಡೆಯೊಕ್ಕೆ ಸಾಧ್ಯನಾ ಎಂಬ ಅಚ್ಚರಿ-ಅನುಮಾನ ಮೂಡುವಂತೆ ಮಾಡಿದ್ದು ಸುಳ್ಳಲ್ಲ.ಏಕೆಂದರೆ ಅದರಲ್ಲಿ ಉಲ್ಲೇಖವಾಗಿದ್ದ ಸಂಗತಿಗಳೇ ಹಾಗಿದ್ದವು.ಏಕೆಂದರೆ ನಾಗರಿಕರಿಗೆ ರಕ್ಷಣೆ ನೀಡಬೇಕಿರುವ,ಅವರಿಗೆ ನ್ಯಾಯ ದೊರಕಿಸಿಕೊಡಬೇಕಾದ,ಹಾಗೆಯೇ ಅತ್ಯಂತ ಸುರಕ್ಷಿತ ತಾಣಗಳಾಗ ಬೇಕಿರುವ ಪೊಲೀಸ್ ಠಾಣೆಗಳೇ  ಅಮಾಯಕರನ್ನು ಅಕ್ರಮ ಬಂಧನದಲ್ಲಿಟ್ಟು ಪೀಡಿಸುವ, ಅವರನ್ನು ಸೋ ಕಾಲ್ಡ್ ಅಪರಾಧಿಗಳನ್ನಾಗಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತ.ಇದು ನಡೆದಿದೆ ಎನ್ನಲಾಗುತ್ತಿರುವುದು ಮಡಿವಾಳ ಠಾಣೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದಿದೆ ಎನ್ನಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಇರೋದು ಸಿಸಿ ಟಿವಿಯಲ್ಲಿ ಮಾತ್ರ. ಫೆಬ್ರವರಿ ತಿಂಗಳ ಸಿಸಿ ಟಿವಿ ಫುಟೇಜಸನ್ನು ಹಾಗೆಯೇ ಉಳಿಸಿಟ್ಟಿದ್ದರೆ ನಿಜಕ್ಕೂ ಮಡಿವಾಳ ಠಾಣೆ ದೌರ್ಜನ್ಯ ಬೆಳಕಿಗೆ ಬಂದೇ ಬರುತ್ತದೆ.ಇದರ ಬಗ್ಗೆ ನಮಗೆ ನಂಬಿಕೆ ಇದೆ.ಆ ದಿನ ಸ್ಟೇಷನ್ ನಲ್ಲಿ ನಡೆದ  ಆ ಘಟನೆಗಳು ಸೆರೆ ಹಿಡಿಯಲ್ಪಟ್ಟಿರುವ ಸಿಸಿಟಿವಿ ದೃಶ್ಯಗಳನ್ನು ಕಾಮನ್ ಮ್ಯಾನ್ ಕಮಿಷನರ್ ದಯಾನಂದ್ ಅವರು ಪರಿಶೀಲಿಸಬೇಕು.ಸತ್ಯ ತನ್ನಿಂತಾನೇ ಹೊರಬರುತ್ತದೆ ಎನ್ನುವುದು ದೂರುದಾರರ ಮನವಿ.

“ಕಾಮನ್ ಮ್ಯಾನ್ ಕಮಿಷನರ್” ಬಗ್ಗೆ “ಕ್ರಮ”ದ ನಂಬಿಕೆಯಿದೆ

“ಸಮಸ್ಯೆ-ಕಷ್ಟ ಎಂದರೆ ಆಪತ್ಕಾಲದ ಬಂಧುಗಳಂತೆ ಕೆಲಸ ಮಾಡುವ ಪೊಲೀಸರಿದ್ದಾರೆ.ಪೊಲೀಸ್ ವ್ಯವಸ್ಥೆ ಬಗ್ಗೆ ಇನ್ನೂ ನಂಬಿಕೆ ಕಳೆದುಕೊಳ್ಳುವಂಥ ಸ್ಥಿತಿಯೇನು ನಮ್ಮ ಬೆಂಗಳೂರಿಗರಿಗೆ ಬಂದಿಲ್ಲ .ಅದರಲ್ಲೂ ಕಾಮನ್ ಮ್ಯಾನ್ ಪೊಲೀಸ್ ಕಮಿಷನರ್ ಎಂದೇ ಕರೆಯಿಸಿಕೊಂಡಿರುವ ದಯಾನಂದ್ ಪೊಲೀಸ್ ವ್ಯವಸ್ಥೆ ಜನಸ್ನೇಹಿಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ.ಏಕೆಂದರೆ ಯಾರೇ ಜನಸಾಮಾನ್ಯ ಅವರ ಮೊಬೈಲ್ ಗೆ ಕಾಲ್ ಮಾಡಿದ್ರೂ ತಾವೇ ಖುದ್ದು ಅಟೆಂಡ್ ಮಾಡುವ ಬಗ್ಗೆ ನಾವು ಕೇಳಿದ್ದೇವೆ.ಇದು ಅವರ ಬಗ್ಗೆ ಬೆಂಗಳೂರಿಗರು ಮತ್ತಷ್ಟು ಗೌರವ-ನಂಬಿಕೆ-ನಿರೀಕ್ಷೆ ಇಟ್ಟುಕೊಳ್ಳಲು ಕಾರಣವಾಗಿದೆ.

ಇಂಥಾ ಕಾಮನ್ ಮ್ಯಾನ್ ಪೊಲೀಸ್ ಕಮಿಷನರ್ ಅವರಿಗೆ ನಾವು ಹೇಳಿರುವ ಈ ಸ್ಟೋರಿ ಬಗ್ಗೆ ಆಶ್ಚರ್ಯದೊಂದಿಗೆ ಆತಂಕ ಉಂಟುಮಾಡಿದ್ರೂ ಆಶ್ಚರ್ಯಪಡಬೇಕಾಗಿಲ್ಲ.ಏಕೆಂದರೆ ಪೊಲೀಸ್ ವ್ಯವಸ್ಥೆಯ ಹುಳುಕುಗಳನ್ನು ಸರಿಪಡಿಸಿ ಜನಸ್ನೇಹಿಗೊಳಿಸುವ ಪ್ರಯತ್ನದಲ್ಲಿ ಅವರಿದ್ದರೆ ಅವರ ಪ್ರಯತ್ನಗಳಿಗೆ ತಣ್ಣೀರೆರಚುವಂಥ ಕೆಲಸವನ್ನು ಮಡಿವಾಳ ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂದಿಯೋರ್ವರು ಮಾಡುತ್ತಾರೆಂದರೆ ಇದಕ್ಕೆ ಏನನ್ನಬೇಕೋ ಗೊತ್ತಿಲ್ಲ. ದಯಾನಂದ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರು ಯಾರಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲೇಬೇಕಿದೆ. ಇಲ್ಲವಾದಲ್ಲಿ ಅವರಿಷ್ಟೇ ಅಲ್ಲ, ಡಿಪಾರ್ಟ್ಮೆಂಟ್ ಗೂ ಕೆಟ್ಟ ಹೆಸರು ಬರೋದು ಗ್ಯಾರಂಟಿ. ದಯಾನಂದ್ ಸರ್ ಅವರ ಬಗ್ಗೆ ಕಾರ್ಯಕ್ಷಮತೆ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ.”

ಏನಿದು ಪ್ರಕರಣ:ಅಂದ್ಹಾಗೆ ಈ ಪ್ರಕರಣ ನಡೆದಿರುವುದು ಎಚ್ ಎಸ್ ಆರ್ ಲೇ ಔಟ್ ವ್ಯಾಪ್ತಿಯ ಲ್ಲಿ.ಹಾಗೆ ನೋಡಿದರೆ ಇದು ಮಡಿವಾಳ ಪೊಲೀಸ್ ಠಾಣೆಯ ಲಿಮಿಟ್ಸ್ ಗೂ ಬರೊಲ್ಲ.ಆದಾಗ್ಯೂ ಈ ಪ್ರಕರಣವನ್ನು ಏಕೆ ಮಡಿವಾಳ ಪೊಲೀಸರು ಹ್ಯಾಂಡಲ್ ಮಾಡಿದರೋ ಗೊತ್ತಾಗ್ತಿಲ್ಲ.ಇನ್ನು ಘಟನೆ ಬಗ್ಗೆ ಹೇಳೋದಾದ್ರೆ ಹರ್ಯಾಣ ಮೂಲದ ಯೋಗೇಶ್ ಶರ್ಮಾ ಎನ್ನುವವರು ಎಚ್ ಎಸ್ ಆರ್ ಲೇ ಔಟ್ ನಲ್ಲಿರುವ ಲೀಡಿಂಗ್ ರಿಯಲ್ ಎಸ್ಟೇಟ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಕಂಪೆನಿಯೊಂದರಲ್ಲಿ ಫೈನಾನ್ಷಿಯಲ್ ಹೆಡ್ ಆಗಿ ಕೆಲಸ ಮಾಡುತ್ತಿರುತ್ತಾರೆ.

19-02-2024 ರಂದು ನಡೆದ ಘಟನೆಯೊಂದರಲ್ಲಿ ಯೋಗೇಶ್ ಶರ್ಮಾ S/O ದಕ್ಷಕುಮಾರ್ ಶರ್ಮಾ( 50 ವರ್ಷ) ಅವರನ್ನು ಎಚ್ ಎಸ್ ಆರ್ ಲೇ ಔಟ್ ನ ಎಂಪೈರ್ ಹೊಟೇಲ್ ಬಳಿ ಅವರು ವಾಸವಿದ್ದ ಗ್ರಾಸಿಟರ್ ಲೈಯರ್  ಪಿಜಿಯಿಂದ ಮಡಿವಾಳ ಠಾಣೆಯ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದು ಠಾಣೆಗೆ ಕರೆ ತಂದಿರುತ್ತಾರೆ.ಅಂದ್ಹಾಗೆ ಯೋಗೇಶ್ ಶರ್ಮಾ ಅವರನ್ನು ಯಾವ ಕಾರಣಕ್ಕಾಗಿ ಸ್ಟೇಷನ್ ಗೆ ಕರೆ ತರಲಾಯಿತು ಎನ್ನುವುದರ ಬಗ್ಗೆ ಮೂಲಗಳನ್ನು ವಿಚಾರಿಸಿ( ಬೇಗೂರು ಠಾಣೆಯ MOB  ಎನ್ನಲಾಗಿದೆ-MOB: ,modus operand bureau)   ಯೋಗೇಶ್ ಶರ್ಮಾ ಪಿಜಿಗೆ ತೆರಳಿ ಆತ ವಾಸವಿದ್ದ ರೂಮ್ ನಂಬರ್ 103 ಬಾಗಿಲು ಬಡಿದಿದ್ದಾನೆ.ಆಗ ಹೊರಗೆ ಬಂದ ಯೋಗೇಶ್ ಶರ್ಮಾಗೆ ಅಚ್ಚರಿಯಾಗುತ್ತದೆ.ಏಕೆಂದರೆ ಅಸಲಿಗೆ ಯೋಗೇಶ್ ಶರ್ಮಾ ಯಾವುದೇ ಪಾರ್ಸಲ್ ಆರ್ಡರ್ ಮಾಡಿರುವುದಿಲ್ಲವಂತೆ.

ಸರ್ ನೀವು ಆರ್ಡರ್ ಮಾಡಿದ ಐಸ್ ಕ್ರೀಂ  ಎಂದು ಲುಲ್ಲು ಕೇಳಿದಾಗ ನಾನ್ಯಾವುದೇ ಬುಕ್ ಮಾಡಿರಲಿಲ್ಲ ಎಂದು ಯೋಗೇಶ್ ಶರ್ಮಾ ಹೇಳಿದ್ರೂ ಬಲವಂತವಾಗಿ ಅವರ ಕೈಗೆ ಇಡುತ್ತಾನಂತೆ.ಹೀಗೆ ನಡೆಯುತ್ತಿರುವಾಗಲೇ ದಿಢೀರ್ ಪ್ರತ್ಯಕ್ಷವಾದ ಮಡಿವಾಳ ಠಾಣೆಯ ಪೊಲೀಸ್ ಸಿಬ್ಬಂದಿ ಗಾಂಜಾ ಕೇಸ್ ನಲ್ಲಿ ಯೋಗೇಶ್ ಶರ್ಮಾರನ್ನು ಠಾಣೆಗೆ ಕರೆದೊಯ್ದಿದ್ದಾರೆ.ಜತೆಗೆ ಗಾಂಜಾ ಸಪ್ಲೈ ಮಾಡಿದ ಲುಲ್ಲು ಎಂಬಾತನನ್ನು ಕೂಡ ಕರೆದೊಯ್ಯುತ್ತಾರೆ.( ಪೊಲೀಸರು ದಿಡೀರ್ ಪ್ರತ್ಯಕ್ಷವಾಗಿದ್ದರ ಬಗ್ಗೆಯೂ ಅನುಮಾನಗಳಿವೆ)ಅಂದ್ಹಾಗೆ ಯೋಗೇಶ್ ಶರ್ಮಾ ಹಾಗೂ ಲುಲ್ಲು ಅವರನ್ನು ವಶಕ್ಕೆ ಪಡೆದು ತರುತ್ತಿರುವ ವಿಷಯವನ್ನು ಮೇಲಾಧಿಕಾರಿಗಳಿಗೂ ಪೊಲೀಸ್ ಪೇದೆಗಳು ತಿಳಿಸಿರಲಿಲ್ಲವಂತೆ.ಅವರನ್ನು ವಶಕ್ಕೆ ಪಡೆದು ಬನ್ನಿ ಎಂದು ಮೇಲಾಧಿಕಾರಿಗಳಿಂದಲೂ ಯಾವುದೇ ಆದೇಶವಾಗಿರಲಿಲ್ಲವಂತೆ.ಈ ವಿಷಯ ಇನ್ಸ್ ಪೆಕ್ಟರ್ ಗಮನಕ್ಕೆ ಬಂದಿದ್ದೇ ಎರಡು ದಿನಗಳ ನಂತರವಂತೆ.ಮೇಲಾಧಿಕಾರಿಗಳ ಆದೇಶವಿಲ್ಲದೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಕರ್ತವ್ಯಲೋಪಕ್ಕೆ ಸಾಕ್ಷಿಯಲ್ಲವೇ..?

ಹಾಗೆ ಕರೆದುಕೊಂಡು ಬಂದ   ಲುಲ್ಲು ಹಾಗೂ ಯೋಗೀಶ್ ಶರ್ಮಾ  ಮೇಲೆ  NDPS ಕೇಸ್ BOOK ಮಾಡಲು ರೆಡಿ ಮಾಡುತ್ತಾರೆ.ಮಾಹಿತಿಗಳು ಸೋರಿಕೆಯಾಗಬಹುದೆನ್ನುವ ಕಾರಣಕ್ಕೆ ಯೋಗೇಶ್ ಶರ್ಮಾರ ಮೊಬೈಲ್ (ಮೊಬೈಲ್ ನಂಬರ್,8800391500) ನ್ನು ಕಸಿದುಕೊಂಡು ರೆಟ್ರಿವ್ಡ್(RETRIVED) ಮಾಡಿದ್ದಾರಂತೆ.ಮೊಬೈಲನ್ನು ಹೀಗೆ ಕಸಿದುಕೊಳ್ಳುವುದು ಅಕ್ಷಮ್ಯ ಅಪರಾಧವಲ್ಲವೇ..? ವಿಚಿತ್ರ ಎಂದರೆ ಈ ಕ್ಷಣಕ್ಕೂ ಯೋಗೇಶ್ ಶರ್ಮಾಗೆ ಆ ಮೊಬೈಲನ್ನು ಹಿಂದುರಿಗಿಸಿಲ್ಲವಂತೆ.ಮಡಿವಾಳ ಠಾಣೆಗೆ ಯೋಗೇಶ್ ಶರ್ಮಾರನ್ನು ಕರೆದುಕೊಂಡು ಬಂದ ಮೇಲೆ ಯಾವುದೇ ದೂರನ್ನಾಗಲಿ ಅದರ ಮೇಲೆ ಎಫ್ ಐ ಆರ್ ನ್ನೂ ಹಾಕಿಲ್ವಂತೆ.21-02-2024 ರಂದು ಸೆಕ್ಷನ್ 49/2024, 20(ಬಿ),22(ಬಿ),8ಸಿ ಎನ್ ಡಿಪಿಎಸ್ ಆಕ್ಟ್ 1985 ಅಡಿ   ಲುಲು ನನ್ನು ಅರೆಸ್ಟ್ ಮಾಡಿದ್ದನ್ನು ಬಿಟ್ಟರೆ  ಯೋಗೇಶ್ ಶರ್ಮಾ ವಿರುದ್ದ ಯಾವುದೇ ಕ್ರಮ ಜಾರಿ ಮಾಡಿಲ್ಲ..ಒಬ್ಬರ ವಿರುದ್ದ ಕ್ರಮ ಕೈಗೊಂಡು ಇನ್ನೊಬ್ಬರನ್ನು ಹಾಗೆ ಬಿಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಹಜವಾಗೇ ಕಾಡುವ ಪ್ರಶ್ನೆ.

ಅಂದ್ಹಾಗೆ ಆತ ಯಾರು..?

“ಮೇಲಾಧಿಕಾರಿಗಳ ಗಮನಕ್ಕೆ ಬಾರದೆ( ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಹೊರತುಪಡಿಸಿ) ಒಟ್ಟಾರೆ ಪ್ರಕರಣವನ್ನು ಹ್ಯಾಂಡಲ್ ಮಾಡಿ ಜನಸಾಮಾನ್ಯನನ್ನು ಅಕ್ರಮವಾಗಿ ಠಾಣೆಯಲ್ಲಿಟ್ಟು ಹಿಂಸಿಸಿದ, ಇಲಾಖೆ ನಿಯಮಗಳಿಗೆ ವ್ಯತಿರಿಕ್ತವಾಗಿ ಕೆಲಸ ಮಾಡಿದ,ಹಾಗೆ ಮಾಡೋದು ತಪ್ಪು, ಕಾನೂನುಬಾಹಿರ, ಅಕ್ಷಮ್ಯ ಎನ್ನೋದು ಗೊತ್ತಿದ್ರೂ ತಲೆಕೆಡಿಸಿಕೊಳ್ಳದೆ ನಡೆಸಿದಂಥ ಕೃತ್ಯದ ರೂವಾರಿ ಯಾರೆನ್ನುವ ಪ್ರಶ್ನೆ ಸಹಜವಾಗಿ ಇಲಾಖೆಯನ್ನು ಕಾಡಬಹುದೇನೋ..? ದೂರುದಾರರ ಮೂಲಕ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ,ಮಡಿವಾಳ ಠಾಣೆಯ ಬಹುತೇಕ ಸಿಬ್ಬಂದಿ 28-04-2024 ರಂದು ಪೊಲೀಸ್ ಕಮಿಷನರ್ ಕಚೇರಿಗೆ ಬರೆದಿದ್ದಾರೆನ್ನುವ ದೂರಿನಲ್ಲಿಯೇ ಆ ಸಿಬ್ಬಂದಿಯ ಹೆಸರಿದೆ. ಹಾಗೆಯೇ ಅವರಿಂದ ಆಗುತ್ತಿರುವ ಸಮಸ್ಯೆ-ತೊಂದರೆ-ಕಿರುಕುಳ-ಉಪಟಳದ ಬಗ್ಗೆ ಉಲ್ಲೇಖವಿ ದೆಯಂತೆ.ಆ ಸಿಬ್ಬಂದಿಯನ್ನು ವಿಚಾರಿಸಿಕೊಂಡರೆ ಘಟನೆಯ ಸಂಪೂರ್ಣ ಮಾಹಿತಿ ಸಿಗಬಹುದೇನೋ..? ಪೊಲೀಸ್ ಕಮಿಷನರ್ ಕಚೇರಿಗೆ ಈಗಾಗಲೇ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಯಾವುದೇ ಕ್ರಮಗಳಾಗದ ಹಿನ್ನಲೆಯಲ್ಲಿ ಅದೇ ಸಿಬ್ಬಂದಿ ಮತ್ತೊಂದು ದೂರನ್ನು ಸಲ್ಲಿಸಲಿದ್ದಾರೆ ಎನ್ನುವ ಪಕ್ಕಾ ಮಾಹಿತಿ ಕನ್ನಡ  ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.ಠಾಣೆಯ ಸಿಬ್ಬಂದಿ ಸೇರಿ ಓರ್ವ ಸಿಬ್ಬಂದಿ ವಿರುದ್ದ ಸಾಮೂಹಿಕವಾಗಿ ದೂರು ಕೊಡ್ತಾರೆಂದ್ರೆ ಆತನಿಂದ ಸಿಬ್ಬಂದಿಗೆ ಆಗುತ್ತಿರಬಹುದಾಗ ತೊಂದರೆ-ಕಿರುಕುಳ-ಮಾನಸಿಕ ಯಾತನೆ ಎಂತದ್ದಿರಬಹುದೆಂದು ಅಂದಾಜಿಸಬಹುದು..ವಿ ಹೋಪ್ ಕಮಿಷನರ್ ವಿಲ್ ಟೇಕ್ ಅಪ್ರಾಪರಿಯೇಟ್ ಆಕ್ಷನ್..”

ಅಕ್ರಮವಾಗಿ ಸ್ಟೇಷನ್ ನಲ್ಲಿಟ್ಟುಕೊಂಡಿದ್ದು ಸರಿನಾ..? ಕಾನೂನು ಇದನ್ನು ಸಮ್ಮತಿಸುತ್ತದಾ..?ಯಾವುದೇ ಆಪಾದಿತನನ್ನು ಠಾಣೆಗೆ ಕರೆತಂದ ಮೇಲೆ ಆತನ ಮೇಲೆ ಎಫ್ ಐ ಆರ್ ಹಾಕಿ 24 ಗಂಟೆಯೊಳಗೆ ಜಡ್ಜ್ ಮುಂದೆ ಹಾಜರುಪಡಿಸಬೇಕೆನ್ನುವ ನಿಯಮವಿದ್ದರೂ 19-02-2024 ರಿಂದ 21-02-2024 ರವರೆಗೆ ಸ್ಟೇಷನ್ ನಲ್ಲೇ ಇಟ್ಟುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ..?!ಕಾನೂನಿನ ಬಗ್ಗೆ ಸ್ವಲ್ಪ ತಿಳಿವು ಇರೋ ಯೋಗೀಶ್ ಶರ್ಮಾ ತನ್ನೊಂದಿಗೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಯಾರ ಹತ್ತಿರನು ಗಾಂಜಾ ಖರೀದಿ ಮಾಡಿಲ್ಲ. ಇದು ನನ್ನ ಮೇಲೆ  ನೀವು ಹೊರಿಸುತ್ತಿರುವ ಸುಳ್ಳು ಆಪಾದನೆ. ನೀವು ನನ್ನ ಮೇಲೆ ಸುಳ್ಳು ಕೇಸು ದಾಖಲು ಮಾಡುತ್ತಿದ್ದೀರ.. ನಾನು ಇದನ್ನು ಒಪ್ಪುವುದಿಲ್ಲ. ನನಗೆ ಈತ ಯಾರೆಂದು ಗೊತ್ತಿಲ್ಲ. ನಿಮಗೆ ನನ್ನ ಮೇಲೆ ಸಂದೇಹವಿದ್ದಲ್ಲಿ, ಈತನು ತಂದಿರುವ ಪಾರ್ಸಲ್ ನಲ್ಲಿ ನನ್ನ ಮೊಬೈಲ್ ಸಂಖ್ಯೆ ಆಗಲಿ, ನನ್ನ ಹೆಸರಾಗಲಿ ಯಾವುದಾದರೂ ಇದ್ದಲ್ಲಿ ಪರಿಶೀಲಿಸಿ. ಇದು ನೀವು ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಲು ನಡೆಸುತ್ತಿರುವ ಹುನ್ನಾರ ಎಂದು ಪ್ರಶ್ನೆ ಮಾಡಿದ್ದಾನಲ್ಲದೆ ಕಾನೂನಾತ್ಮಕವಾಗಿ ನನಗೂ ಏನ್ ಮಾಡಬೇಕೆಂದು ಗೊತ್ತಿದೆ ಎಂದು ಮಾತನಾಡಿದ್ದಾನೆ.

ಕಾನೂನಿನ ಬಗ್ಗೆ ಮಾತನಾಡುತ್ತಿದ್ದಂತೆ ಶಾಕ್ ಆದ ಪೊಲೀಸ್ರು..!? ಕಾನೂನಿನ ಬಗ್ಗೆ ಇಷ್ಟೆಲ್ಲಾ ಮಾತನಾಡಲು ಶುರುಮಾಡುತ್ತಿದ್ದಂತೆ ಪೊಲೀಸ್ ಪೇದೆಗಳು  ಭಯದಿಂದ ಯೋಗೀಶ್ ಶರ್ಮನ ಮೇಲೆ ಕೇಸು ದಾಖಲು ಮಾಡದೆ ಲುಲ್ಲು MOB ಮೇಲೆ ಕೇಸ್ ದಾಖಲು ಮಾಡಿ ತರಾತುರಿಯಲ್ಲಿ ಜಡ್ಜ್ ಮುಂದೆ ಪ್ರೊಡ್ಯೂಸ್ ಮಾಡಿ ಜೈಲಿಗೆ ಕಳುಹಿಸುತ್ತಾರೆ.ತನ್ನ ಗಂಡನನ್ನು ಅಕ್ರಮವಾಗಿ ಬಂಧಿಸಿಟ್ಟಿರುವ ವಿಚಾರ ತಿಳಿದು ಹರ್ಯಾಣದಲ್ಲಿ ವಾಸವಿದ್ದ ಆತನ ಪತ್ನಿ ಸೋಂಕಿ ಶರ್ಮಾ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಹದ್ಯೋಗಿ ಶ್ರೀನಿವಾಸ ಹುನ್ಸಿಕಟ್ಟಿ ಅವರೊಂದಿಗೆ ಸ್ಟೇಷನ್ ಗೆ ಬಂದು ಯೋಗೇಶ್ ಶರ್ಮಾರನ್ನು ಬಿಡಿಸಿಕೊಂಡು ಹೋಗುತ್ತಾರೆ.

21-02-2024 ರ 8-9 ಗಂಟೆ ಹೊತ್ತಿಗೆ ಸ್ಟೇಷನ್ ನಿಂದ ಬಿಡುಗಡೆಯಾಗುತ್ತಿದ್ದಂತೆ ಅಲ್ಲಿಂದ ಹೋಗುವ ಮುನ್ನ ನಾನು ಒಂದು ಪಕ್ಷ ತಪ್ಪು ಮಾಡಿದ್ದೆ ಆದಲ್ಲಿ ನನ್ನನ್ನು ಏತಕ್ಕೆ ತಾವು ಅರೆಸ್ಟ್ ಮಾಡಲಿಲ್ಲ, ಏಕೆ ಮೂರು ದಿನಗಳವರೆಗೆ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದಿರಿ ಎಂದು ಪ್ರಶ್ನಿಸಿದ್ದಾನೆ.ತನಗಾದ ಅವಮಾನದಿಂದ ಕುಗ್ಗಿ ಹೋಗಿದ್ದ ಯೋಗೇಶ್ ಶರ್ಮಾ ಪತ್ನಿ ಜತೆ ಪಿಜಿಯಲ್ಲಿ ಉಳಿದುಕೊಂಡು 24-02-2024 ರಂದು ತಾನು ಕೆಲಸ ಮಾಡುತ್ತಿದ್ದ ಕಂಪೆನಿಗೆ ತೆರಳಿ ಕೆಲ ಕಾಲ ಅಲ್ಲಿದ್ದು ತನ್ನೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೊರಟು ಹೋಗುತ್ತಾರೆ.ಹಾಗೆ ಹೋದವರು ನಂತರ ಕಂಪೆನಿಗೆ ಕೆಲಸಕ್ಕೆ ಬರಲೇ ಇಲ್ಲ. ಹರ್ಯಾಣಕ್ಕೆ ಹೋದರೆನ್ನುವ ಸುದ್ದಿಯಿದೆ.

“ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಳಕಳಿ ಇಷ್ಟೆ..  ಪೊಲೀಸರೆಂದರೆ ಇವತ್ತಿಗೂ ಜನರಲ್ಲಿ ನಂಬಿಕೆ-ವಿಶ್ವಾಸವಿದೆ.ಅವರಿಂದ ನ್ಯಾಯ ದೊರೆಯುತ್ತೆ ಎನ್ನುವ ನಿರೀಕ್ಷೆ ಸತ್ತಿಲ್ಲ.ನಮ್ಮ ಪೊಲೀಸ್ ವ್ಯವಸ್ಥೆಯೂ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.ಪರಿಸ್ತಿತಿ ಹೀಗಿರುವಾಗ ಮಡಿವಾಳ ಠಾಣೆಯಲ್ಲಿ ಅಗಿದೆ ಎನ್ನಲಾಗುತ್ತಿರುವ ಈ ಪ್ರಕರಣ ಪೊಲೀಸ್ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಹಾಳು ಮಾಡುವಂತಿದೆ.ಅದು ಅಪಾಯಕಾರಿ.ಭವಿಷ್ಯದಲ್ಲಿ ಯಾರಿಗೂ ಹಾಗೆ ಆಗಬಾರದು.ಆ ಒಂದು ಸಾಮಾಜಿಕ ಕಳಕಳಿ ಹಾಗೂ ಪೊಲೀಸ್ ವ್ಯವಸ್ಥೆ ಮೇಲೆ ಗೌರವ ಇಟ್ಟುಕೊಂಡೇ ಈ ವರದಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡ್ತಿದೆ ಕನ್ನಡ ಫ್ಲ್ಯಾಶ್ ನ್ಯೂಸ್.ಅದರಾಚೆಗೆ ನಮಗೆ ಯಾವುದೇ ಹಿತಾಸಕ್ತಿಯಿಲ್ಲ.ಇಂಥಾ ಪ್ರಕರಣಗಳಲ್ಲಿ ಭಾಗಿಯಾಗಿರಬಹುದಾದ ಕೆಲವು ಅಪ್ರಮಾಣಿಕ ಪೊಲೀಸರ ಹೆಡೆಮುರಿ ಕಟ್ಟುವ ಕೆಲಸ ನಡೆದರೆ ಇಡೀ ವ್ಯವಸ್ಥೆ ಸರಿಯಾಗಬಹುದು..ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚಲಿದೆ ಎನ್ನುವುದು ನಮ್ಮ ಆಶಯ.-ಸಂಪಾದಕೀಯ ಮಂಡಳಿ”

ಇಷ್ಟೆಲ್ಲಾ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗೆ ಯೋಗೇಶ್ ಶರ್ಮಾರ ಪತ್ನಿ ಸೋಂಕಿ ಶರ್ಮಾ ಅವರ ಮೊಬೈಲ್ ನಂಬರ್ 8800391507 ಗೆ ಕರೆ ಮಾಡಿದ್ರೆ ಬೇಸರದಿಂದ ಮಾತನಾಡಲು ಇಚ್ಚಿಸದೆ ರಾಂಗ್ ನಂಬರ್ ಎಂದು ಕರೆ ಕಟ್ ಮಾಡಿದರು.ಘಟನೆ ಬಗ್ಗೆ ಮಾಹಿತಿ ಇರುವ ಶ್ರೀನಿವಾಸ ಹುನ್ಸಿಕಟ್ಟಿ ಅವರ ಮೊಬೈಲ್ ನಂಬರ್ 8050093963ಗೆ ಕರೆ ಮಾಡಿ ಮಾಹಿತಿ ಕೇಳಿದ್ರೆ ಕಹಿ ಘಟನೆ ಮರೆಯೊಕ್ಕೆ ಯತ್ನಿಸುತ್ತಿದ್ದೇನೆ.ಆ ಘಟನೆ ನೆನಪು ಮಾಡಿಕೊಳ್ಳಲು ಇಚ್ಚಿಸುವುದಿಲ್ಲ ಎಂದು ಕರೆ ಕಟ್ ಮಾಡಿದ್ದಾರೆ( ಆ ಮೊಬೈಲ್ ಕರೆಗಳ ರೆಕಾರ್ಡಿಂಗ್ ಕೂಡ ನನ್ನ  ಬಳಿ ಇದೆ)

ಪ್ರತಿಭಾವಂತ-ಬುದ್ದಿವಂತ-ಕಾರ್ಯಕ್ಷಮತೆಯಲ್ಲಿ ಎತ್ತಿದ ಕೈ ಆಗಿದ್ದ ಯೋಗೇಶ್ ಶರ್ಮಾ : ಬಲ್ಲ ಮೂಲಗಳ ಪ್ರಕಾರ ಯೋಗೇಶ್ ಶರ್ಮಾ ಒಬ್ಬ ಪ್ರತಿಭಾವಂತನಾಗಿದ್ದು ಹೌಸಿಂಗ್ ಪ್ರಾಜಕ್ಟ್  ಗೆ ಸಂಬಂಧಿಸಿದ ಹಣಕಾಸು ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೆನ್ನುವ ಮಾಹಿತಿಯಿದೆ.ಆದರೆ ಇದು ಕೆಲವರಿಗೆ ಸಹಿಸಲಾಗುತ್ತಿರಲಿಲ್ಲವಂತೆ.ಅವರ ಮೇಲೆ ಸೇಡು ತೀರಿಸಿಕೊಳ್ಳಲು ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಕಾಯುತ್ತಿದ್ದರಂತೆ.ವೃತ್ತಿ ಮಾತ್ಸರ್ಯಕ್ಕೆ ಅವರನ್ನು ಪೊಲೀಸರ ಮೂಲಕ ಟ್ರ್ಯಾಪ್ ಮಾಡಿಸಿರಬಹುದೆನ್ನುವುದು ನನಗೆ ಬಂದಿರುವ  ಮಾಹಿತಿ.

ಮಡಿವಾಳ ಠಾಣೆಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೂ ನಡದೇ ಇಲ್ಲ ಎನ್ನುವಂತೆ ಇದರಲ್ಲಿ ಭಾಗಿಯಾದವರು ನಾಟಕ ಆಡುತ್ತಿದ್ದಾರೆ.ಆದರೆ ಸತ್ಯಾಂಶ ತಿಳಿಯಬೇಕಾದರೆ ದಿನಾಂಕ 19-02-2024 ರಿಂದ 25-02-2024 ರವೆರಗಿನ ಠಾಣೆಯ ಸಿಸಿಟಿವಿ ಪುಟೇಜಸ್ ನ್ನು ಪರಿಶೀಲಿಸಬೇಕಾಗುತ್ತದೆ.ಈ ಬಗ್ಗೆ ಮಾಹಿತಿ ಹಾಗೂ ಸಾಕ್ಷ್ಯ ಕೋರಿ ಪೊಲೀಸ್ ಕಮಿಷನರ್ ಗೂ ದೂರು ಹಾಗೂ ಮನವಿ ಕೊಡಲಾಗಿದೆ.

21ನೇ ತಾರೀಕು ರಾತ್ರಿ 9:00ಗೆ ಯೋಗೇಶ್ ಶರ್ಮಾರನ್ನು ಮನೆಗೆ  ಕಳುಹಿಸುವಾಗ ಅವರ  ಮೊಬೈಲನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಕೇಳಿದ್ರೆ 24ರಂದು ಬರಲು ಹೇಳಿದ್ದಾರೆ. ಆ ವೇಳೆ ಒಂದು ನೋಟಿಸ್ ಅನ್ನು ಕೊಟ್ಟಿರುತ್ತಾರೆ. ಮಾರನೇ ದಿನ ಅಂದರೆ 22ನೇ ತಾರೀಖಿನಂದು ಕೂಡ ಠಾಣೆಗೆ ಕರೆಯಿಸಿ ಸಮಾಧಾನ ಮಾಡಲು ಪ್ರಯತ್ನಿಸಿರುತ್ತಾರಂತೆ. ನಿಮ್ಮ ಮೇಲೆ ಕೇಸ್ ದಾಖಲು ಮಾಡಿ ಜೈಲಿಗೆ ಕಳುಹಿಸುತ್ತಿದ್ದೆವು. ಹೋಗಲಿ ಪಾಪ ಎಂದು ನಿಮ್ಮ ಮೇಲೆ ಕೇಸನ್ನು ದಾಖಲು ಮಾಡುತ್ತಿಲ್ಲ ಎಂದು ಹೇಳಿದ್ದಾರಂತೆ.ನೀವು ಕೆಲಸ ಮಾಡುತ್ತಿರುವ ಕಂಪನಿ ಕೆಲಸವನ್ನು ಬಿಟ್ಟು ಬೇರೆಡೆಗೆ ಹೋಗಬೇಕೆಂದು ಭಯಪಡಿಸಿರುತ್ತಾರಂತೆ.ಇದಕ್ಕೆ ಹೆದರಿಯೇ ಉತ್ತಮ ಸಂಬಳ ಹಾಗೂ ಒಳ್ಳೆಯ ಕೆಲಸ ಬಿಟ್ಟು ಹರ್ಯಾಣಕ್ಕೆ ತೆರಳಿದ್ದಾರೆ.

ಆದರೆ ಪ್ರಕರಣದಲ್ಲಿಕಾಡುವ  ಸಾಕಷ್ಟು ಪ್ರಶ್ನೆಗಳು  ಹೀಗಿವೆ..

1-ಯೋಗೇಶ್ ಶರ್ಮಾರನ್ನು ಮಡಿವಾಳ ಠಾಣೆ ಪೊಲೀಸರು ಟ್ರ್ಯಾಪ್ ಮಾಡೊಕ್ಕೆಅಸಲಿ ಕಾರಣವೇನು..?

2-ತಮ್ಮ ಲಿಮಿಟ್ಸ್ ಮೀರಿ ಬೇರೆ ಠಾಣೆ ಲಿಮಿಟ್ಸ್ ಪ್ರಕರಣ ಹ್ಯಾಂಡಲ್ ಮಾಡಿದ್ದೇಗೆ..?

ಯೋಗೇಶ್ ಶರ್ಮಾರ ಟ್ರ್ಯಾಪ್ ಹಿಂದೆ ಬೇರೆಯವರ ಮಸಲತ್ತು ಇತ್ತಾ..?

3-ಒಳ್ಳೆಯ ಹುದ್ದೆಯಲ್ಲಿದ್ದ ಯೋಗೇಶ್ ಶರ್ಮಾರನ್ನು ಹಣಿಯೊಕ್ಕೆ ಅವರ ಸಹದ್ಯೋಗಿಗಳು ಕಾಯುತ್ತಿದ್ದರೆನ್ನುವ ಅನುಮಾನವಿದ್ದು ಅವರಲ್ಲಿ ಯಾರಾದ್ರೂ ಕೃತ್ಯ ಮಾಡಿಸಿದ್ರಾ..?

4-ಯೋಗೇಶ್ ಶರ್ಮಾರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ರೆ ಅವರಿಗೆ ಬರುವ ಲಾಭವಾದ್ರೂ ಏನಿತ್ತು..?

5-ಅಷ್ಟಕ್ಕೂ ಮಡಿವಾಳ ಠಾಣೆ ಪೊಲೀಸರನ್ನು ಸಂಪರ್ಕಿಸಿದವರು ಯಾರು..?

6-ಈ ಕೆಲಸ ಮಾಡಲಿಕ್ಕೆ ಸುಪಾರಿ ಕೊಟ್ಟಿದ್ದೇ ಆದಲ್ಲಿ ಅದು ಎಷ್ಟರ ಮೊತ್ತದ್ದು

7-ಈ ಕೆಲಸ ಮಾಡಿ ಮುಗಿಸಲಿಕ್ಕೆ ಪೊಲೀಸರಿಗೆ ಸಂದಾಯವಾದ ಹಣ ಎಷ್ಟು..?

8-ಮಡಿವಾಳ ಪೊಲೀಸರ ಕೃತ್ಯಕ್ಕೆ ಸಾಥ್ ನೀಡಿದ ಬೇರೆ ಠಾಣೆಯ ಮತ್ತೋರ್ವ ಪೇದೆ ಯಾರು.?

9-ಮಡಿವಾಳ ಪೊಲೀಸ್ ಠಾಣೆಗೆ ಕರೆತಂದಾಗ ಏಕೆ ಕಾನೂನಾತ್ಮಕ ಪ್ರಕ್ರಿಯೆ ಪಾಲಿಸಲಿಲ್ಲ.ಎಫ್ ಐಆರ್ ಏಕೆ ದಾಖಲಿಸಲಿಲ್ಲ..?

10- ಯೋಗೇಶ್ ಶರ್ಮಾರ ಮೊಬೈಲ್ ಕಸಿದುಕೊಂಡು ಬಿಡುಗಡೆ ನಂತರವೂ ಕೊಡಲಿಲ್ಲವೇಕೆ..?

ತಮ್ಮ ಪೇದೆಗಳ ಕೃತ್ಯ ಮೇಲಾಧಿಕಾರಿಗಳ ಗಮನಕ್ಕೆ ಬರಲೇ ಇಲ್ಲವೇಕೆ..? ಗೊತ್ತಿದ್ದರೂ ಅವರೇನಾದ್ರೂ ಸುಮ್ಮನಾದ್ರಾ..? ಸುಮ್ಮನಾಗೊಕ್ಕೆ ಕಾರಣವೇನು..?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.ಅಮಾಯಕನಾದ ಯೋಗೇಶ್ ಶರ್ಮಾ ಭಯದಿಂದ ಊರು ತೊರೆದಿದ್ದಾರೆ.ಪ್ರಕರಣದ ಬಗ್ಗೆ ಮಾತನಾಡದಿರಲು ನಿರ್ದರಿಸಿದ್ದಾರೆ.ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಕಟ್ಟು ಕಥೆ ಸೃಷ್ಟಿಸಿ ಸುಳ್ಳು ಪ್ರಕರಣದಲ್ಲಿ ಅಮಾಯಕರನ್ನು ಟ್ರ್ಯಾಪ್ ಮಾಡಿ ಠಾಣೆಗೆ ಕರೆತಂದು ಮೂರ್ನಾಲ್ಕು ದಿನ ಅಕ್ರಮವಾಗಿ ಇಟ್ಟುಕೊಳ್ಳುವುದು..ಮೊಬೈಲ್ ಕಸಿದುಕೊಳ್ಳುವುದು..ಹೆದರಿಸಿ ಬೆದರಿಸಿ ಬಾಯಿ ಮುಚ್ಚಿಸುವಂಥ ಕೆಲಸ ಮಾಡುತ್ತಾರೆಂದರೆ ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ ಮೂಡುವುದಾದ್ರೂ ಹೇಗೆ..? ಮುಚ್ಚಿ ಹೋಗಿರುವ ಪ್ರಕರಣ ಹೊರಗೆ ಬರಬೇಕು..ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು..ಅಮಾಯಕರಿಗೆ ನ್ಯಾಯ ಸಿಗಬೇಕು..ಎಲ್ಲಕ್ಕಿಂತ ಹೆಚ್ಚಾಗಿ ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗೆ ನಂಬಿಕೆ ಕಳೆದು ಹೋಗಬಾರದು ಹಾಗಾಗಿ ಈ ಪ್ರಕರಣದ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *