“B” ಖಾತೆಗಳಿಗೆ “A” ಖಾತೆ ಭಾಗ್ಯ ನೀಡಿ “ಕೋಟಿ”ಗಳಲ್ಲಿ ದುಂಡಗಾಗುತ್ತಿದ್ದಾರಾ ಕೆಲವು ಭ್ರಷ್ಟ “ಕಂದಾಯಾಧಿಕಾರಿಗಳು”
ಬೆಂಗಳೂರು: ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ IAS ಮನಿಷ್ ಮೌದ್ಗಿಲ್(MANISH MAUDGIL) ಬಿಬಿಎಂಪಿ ಬೊಕ್ಕಸ ಹೇಗೆ ತುಂಬಿಸೋದು ಎಂದು ತಲೆಕೆಡೆಸಿಕೊಂಡು ಕೆಲಸ ಮಾಡ್ತಿದ್ರೆ ಅವರದೇ, ಕಂದಾಯ ವಿಭಾಗದ ಕೆಲವು ಭ್ರಷ್ಟ ಅಧಿಕಾರಿ ಸಿಬ್ಬಂದಿ ಸಾಹೇಬ್ರರು ಹೊರಡಿಸಿರುವ ಆ ಆದೇಶವನ್ನೇ ಲೂಟಿಕೋರತನಕ್ಕೆ ಮಿಸ್ಯೂಸ್ ಮಾಡಿಕೊಂಡಿರುವುದು ದುರಂತ.ಬಹುಷಃ ಮನಿಷ್ ಸಾಹೇಬ್ರು ಕಚೇರಿ ಬಿಟ್ಟು ವಲಯಗಳ ವ್ಯಾಪ್ತಿಯಲ್ಲಿರುವ ಕಂದಾಯ ಕಚೇರಿಗಳನ್ನು ತಲಾಶ್ ಮಾಡಿ ಅಧಿಕಾರಿಗಳ ಬಂಡವಾಳ ಪರಿಶೀಲಿಸಿದ್ದೇ ಆದಲ್ಲಿ ಅವರ ಹಣೇಬರಹ ಬಯಲಾಗ್ಬೋದು.ಬಹುತೇಕರು ಕೋಟಿಗಳಲ್ಲಿ ಬಿಬಿಎಂಪಿ ಸೇರಬೇಕಾದ ಹಣವನ್ನು ಲೂಟಿ ಮಾಡಿರುವ ಕಥೆಯೂ ಬಯಲಾಗಬಹುದೇನೋ…ಕನ್ನಡ ಫ್ಲ್ಯಾಶ್ ನ್ಯೂಸ್(KANNADAFLASHNEWS) ಕಂದಾಯ ವಿಭಾಗದ ಕೆಲವು ಭ್ರಷ್ಟರು ಕಡಿಮೆ ಅವಧಿಯಲ್ಲೇ ಹೇಗೆ ಕೋಟಿ ಕುಳಗಳಾಗಿ ಬೆಳೆದಿದ್ದಾರೆನ್ನುವುದರ ಇಂಟರೆಸ್ಟಿಂಗ್ ಹಾಗೂ ಸ್ಪೋಟಕ ಸ್ಟೋರಿಯನ್ನು ಇವತ್ತು ಬಹಿರಂಗಮಾಡ್ಲಿಕ್ಕೆ ಹೊರಟಿದೆ
ಪ್ರಾಮಾಣಿಕ-ದಕ್ಷ-ಭ್ರಷ್ಟಾಚಾರ ಸಹಿಸದ ಮನಿಷ್ ಮೌದ್ಗಿಲ್: ಮನಿಷ್ ಮೌದ್ಗಿಲ್ ಪ್ರಾಮಾಣಿಕ,ದಕ್ಷ,ಭ್ರಷ್ಟಾಚಾರವನ್ನು ಸಹಿಸದ ಅಧಿಕಾರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಅವರು ಯಾವ್ದೇ ಇಲಾಖೆಗೆ ಹೋದ್ರೂ ಅಲ್ಲಿರುವ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿ ಸಿಬ್ಬಂದಿಯಲ್ಲೊಂದು ಅಸಹನೆ-ಆಕ್ರೋಶ-ಅಸಮಾಧಾನ ಮೂಡ್ಲಿಕ್ಕೆ ಕಾರಣವೇ ಮೌದ್ಗಿಲ್ ಅವರ “ಭ್ರಷ್ಟಾಚಾರ ವಿರೋಧಿ ನಿಲುವು”.ಬಿಬಿಎಂಪಿಯಲ್ಲಿ ಆಗಿರೋದು ಕೂಡ ಅದೇ. ಪಾಲಿಕೆ ಬೊಕ್ಕಸಕ್ಕೆ ಸೇರಬೇಕಾದ ಸಂಪನ್ಮೂಲಕ್ಕೆ ಭ್ರಷ್ಟರು ಅಣೆಕಟ್ಟನ್ನು ನಿರ್ಮಿಸಿ ತಮಗೆ ಬೇಕಾದಂತೆ ಅವರ ಹರಿವನ್ನು ತಮ್ಮ ಕಡೆಗೆ ತಿರುಗಿಸಿಕೊಂಡಿರುವುದಕ್ಕೆ ಬ್ರೇಕ್ ಹಾಕಿದ್ದೇ ಮೌದ್ಗಿಲ್ ವಿರುದ್ಧ ಅಸಹನೆ ಮೂಡ್ಲಿಕ್ಕೆ ಕಾರಣ.ಆಡಳಿತ ವ್ಯವಸ್ಥೆಯನ್ನು ಪಾಲಿಕೆ ಹಿತದೃಷ್ಟಿಗೆ ಬಳಸಿಕೊಳ್ಳೊಕ್ಕೆ ಯತ್ನಿಸಿರುವ ಅವರ ಪ್ರಯತ್ನಗಳೆಲ್ಲಾ ವಿಫಲವಾಗಿವೆ.ಈ ಕ್ಷಣಕ್ಕೂ ವಿಫಲವಾಗುತ್ತಿವೆ.ಇದನ್ನು ಮೌದ್ಗಿಲ್ ಕೂಡ ಅಲ್ಲಗೆಳೆಯೊಕ್ಕಾಗೊಲ್ಲ.
ಮೌದ್ಗಿಲ್ ಅವರು ಕಚೇರಿಯಲ್ಲಿ ಕುತ್ಕೊಂಡು ಪಾಲಿಕೆ ಹಿತದೃಷ್ಟಿಯಿಂದ ಹೊಸ ವ್ಯವಸ್ಥೆ, ತಂತ್ರಜ್ನಾನ, ಆದಾಯ ಕ್ರೋಢೀಕರಣಕ್ಕೆ ಪರಿಣಾಮಕಾರಿ ಪ್ಲ್ಯಾನ್ ಮಾಡುತ್ತಿದ್ದರೆ ಅದಕ್ಕೆ ಕಂದಾಯ ವಿಭಾಗದ ಕೆಲವು ಅಪ್ರಾಮಾಣಿಕ ಅಧಿಕಾರಿಗಳು ಅಸಹಕಾರ ಕೊಡುವ ಕೆಲಸ ಮಾಡುತ್ತಿದ್ದಾರೆ. ಆರ್ ಆರ್ ನಗರ,ಕೆಂಗೇರಿ,ಯಶವಂತಪುರ,ಹೇರೋಹಳ್ಳಿ ವ್ಯಾಪ್ತಿಯಲ್ಲಂತೂ ಕಂದಾಯ ವಿಭಾಗದ ಬಹುತೇಕ ಭ್ರಷ್ಟ ಅಧಿಕಾರಿಗಳು ಮನಿಷ್ ಮೌದ್ಗಿಲ್ ಅವರ ಆದೇಶವನ್ನೇ ಜನರನ್ನು ಹೆದರಿಸಿ ಹಣ ಮಾಡುವ ತಂತ್ರಗಾರಿಕೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಗಳು ಬಂದಿವೆ.
ಬಿಬಿಎಂಪಿಯಲ್ಲಿ ಸಕ್ರೀಯವಾಗಿದೆ ಬಿ ಖಾತೆ್ಗಳಿಗೆ ಅಕ್ರಮವಾಗಿ ಎ ಖಾತೆ ನೀಡುವ ದಂಧೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತೆಗಳ ಸ್ವತ್ತಿಗೆ ಎ ಖಾತಾವನ್ನು ನೀಡಿ ಅದನ್ನ ಸಕ್ರಮೀಕರಣಗೊಳಿಸುವು ದು ಮೊದಲಿಂದಲೂ ದೊಡ್ಡ ದಂಧೆಯಾಗಿಬಿಟ್ಟಿದೆ.ಅಕ್ರಮ-ಸಕ್ರಮ ಬರುವವರೆಗೂ ಯಾವುದೇ ಕಾರಣಕ್ಕೂ ಈ ಸಮಸ್ಯೆ ಬಗೆಹರಿಯೊಲ್ಲ ಎನ್ನೋದು ಜನರಿಗೆ ಗೊತ್ತಿದ್ದರೂ ದುಡ್ಡಿನಾಸೆಗೆ ಸ್ವತ್ತುದಾರರ ತಲೆಕೆಡಿಸಿ ಬಿ ಖಾತೆಯ ಸ್ವತ್ತುಗಳಿಗೆ ಎ ಖಾತಾಗಳನ್ನು ನೀಡಿ ಅದನ್ನು ರಿಜಿಸ್ಟರ್ ನಲ್ಲಿ ದಾಖಲಿಸುವ ಕೆಲಸ ಇತ್ತಿಚೆಗೆ ವ್ಯಾಪಕವಾಗಿ ನಡೆಯುತ್ತಿದೆ.ಅಪಾರ್ಟ್ಮೆಂಟ್ ಗಳಿಂದ ಹಿಡಿದು ಕಟ್ಟಡದ ವ್ಯಾಪ್ತಿ-ವಿಸ್ತಾರಕ್ಕೆ ಇಂತಿಷ್ಟು ಹಣವನ್ನು ಫಿಕ್ಸ್ ಮಾಡಿ ಬಿ ಖಾತೆಗಳ ಸ್ವತ್ತುಗಳಿಗೂ ಎ ಖಾತೆ ಭಾಗ್ಯವನ್ನು ದಯಪಾಲಿಸುತ್ತಿದ್ದಾರೆ ಕಂದಾಯಾಧಿಕಾರಿಗಳು.
ಮೌದ್ಗಿಲ್ ಆದೇಶವನ್ನೇ ಹಣ ಊಟಿಗೆ ಬಳಸಿಕೊಳ್ತಿರುವ ಭ್ರಷ್ಟ ಅಧಿಕಾರಿಗಳು. ಸಾರ್ವಜನಿಕ ಹಿತಾಸಕ್ತಿ ಹಾಗೂ ಸದುದ್ದೇಶದ ಹಿನ್ನಲೆಯಲ್ಲಿ ಸರ್ಕಾರ ಹೊರಡಿಸುವ ಕೆಲವೊಂದು ಆದೇಶಗಳು ಸರ್ಕಾರಿ ಅಧಿಕಾರಿಗಳಿಗೆ ತಿಂದು ದುಂಡಗಾಗಲು ಅಸ್ತ್ರವಾಗಿಬಿಡ್ತವೆ ಎನ್ನುವುದಕ್ಕೆ ಬಿಬಿಎಂಪಿಯಲ್ಲಿ ಕಂದಾಯ ವಿಭಾಗದ ಬಹುತೇಕ ಅಧಿಕಾರಿಗಳು ನಡೆಸುತ್ತಿರುವ ಹಗಲುದರೊಡೆಯೇ ಕೆಟ್ಟ ನಿದರ್ಶನವಾಗಬಹುದು.ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಸೇರಬೇಕಾದ ಹಣ ಪೋಲಾಗುತ್ತಿರುವುದನ್ನು ತಡೆಯೊಕ್ಕೆ ಸರ್ಕಾರ ಹೊರಡಿಸಿದ್ದ ಆದೇಶವನ್ನೇ ಕೆಲವು ಅಧಿಕಾರಿಗಳು ಮಿಸ್ಯೂಸ್ ಮಾಡಿಕೊಂಡು ಹಣವನ್ನು ಲೂಟಿ ಮಾಡುತ್ತಿದ್ದಾರೆ.ಅವರು ಲೂಟಿ ಮಾಡಿರುವ ಹಣವೇ ಅದೆಷ್ಟೋ ಕೋಟಿಗಳೆನ್ನುವುದು ಅಘಾತಕಾರಿ.ಇವತ್ತಿಗೆ ಕಂದಾಯ ವಿಭಾಗದಲ್ಲಿರುವ ಕೆಲವು ಅಧಿಕಾರಿಗಳು ಕೋಟಿ ಕುಟಗಳಾಗಿರುವುದೇ ಈ ಸರ್ಕಾರಿ ಆದೇಶದಿಂದ ಎನ್ನುವುದು ಮತ್ತಷ್ಟು ಸ್ಪೋಟಕ.
ಮನಿಷ್ ಮೌದ್ಗಿಲ್ ಬಂದ ಮೇಲೆ ಬಿ ಖಾತೆಗಳಿಗೆ ಎ ಖಾತೆಗಳ ಸೌಭಾಗ್ಯ ಕಲ್ಪಿಸಿ ಮಾಲೀಕರಿಂದ ಲಕ್ಷಾಂತರ ಹಣ ಪೀಕುವ ವ್ಯವಸ್ಥೆಗೆ ಬ್ರೇಕ್ ಹಾಕೊಕ್ಕೆ ಪರಿಣಾಮಕಾರಿ ವ್ಯವಸ್ಥೆ ಮಾಡಿದರಾದ್ರೂ ಅದು ಪರಿಣಾಮಕಾರಿಯಾಗಲೇ ಇಲ್ಲ.ಬಿ ಸ್ವತ್ತುಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವುದನ್ನು 8 ವಲಯಗಳಲ್ಲೂ ಪತ್ತೆ ಮಾಡಿದ ನಂತರ ಅದನ್ನು ತತ್ ಕ್ಷಣಕ್ಕೆ ಸರಿಪಡಿಸಬೇಕು.ಎ ಖಾತೆ ನೀಡಿರುವುದನ್ನು ರದ್ದು ಮಾಡಬೇಕೆಂದು ಆದೇಶಿಸಿದರಾದ್ರೂ ಮೌದ್ಗಿಲ್ ಆದೇಶ ಪಾಲಿಸಿದವರಿಗಿಂತ ಗಾಳಿಗೆ ತೂರಿದವರೇ ಹೆಚ್ಚು.
ಕೆಂಗೇರಿ ವಿಭಾಗದಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಖಾತೆ ದಂಧೆ: ಕೆಂಗೇರಿ ವಿಭಾಗದಲ್ಲಿ ಅಧಿಕಾರಿಯೊಬ್ಬರು ಬಂದ ಆರಂಭದಲ್ಲಿ ಬಿ ಖಾತೆಗೆ ಅಕ್ರಮವಾಗಿ ಎ ಖಾತೆ ನೀಡಿರುವುದನ್ನು ತಾನೇ ಪತ್ತೆ ಮಾಡಿ ದೊಡ್ಡ ಮಟ್ಟದ ಪ್ರಚಾರ ಪಡೆದಿದ್ದರು.ಅವರು ಕೊಟ್ಟಿದ್ದ ಬಿಲ್ಡಪ್ ಗಮನಿಸಿದ್ರೆ ಎಲ್ಲಾ ಎ ಖಾತಾಗಳು ದಿಢೀರ್ ರದ್ದಾಗಿಬಿಡ್ತವೆ ಎಂದೇ ಭಾವಿಸಲಾಗಿತ್ತು.ಆದ್ರೆ ಆಮೇಲೇನೆ ಅವರ ಬಂಡವಾಳ ಗೊತ್ತಾಗಿದ್ದು ಅವರು ಬರುವುದಕ್ಕೆ ಮುನ್ನದಿಂದ ಈವರಗೂ ಅಕ್ರಮವಾಗಿ ಎ ಖಾತಾ ನೀಡಿರುವ ಪ್ರಕರಣಗಳು ಅವರು ನೀಡಿದ್ದ ಸಂಖ್ಯೆಗೂ ವಾಸ್ತವದ ಅಂಕಿಅಂಶಕ್ಕೂ ಅಜಗಜಾಂತರ ವ್ಯತ್ಯಾಸವಿತ್ತೆನ್ನುವುದು.ಸಾಹೇಬ್ರು ಕೊಟ್ಟ ಸಂಖ್ಯೆಗಿಂತ ಹಲವಾರು ಪಟ್ಟಿನಷ್ಟು ಅಕ್ರಮ ಎ ಖಾತೆಗಳು ರಿಜಿಸ್ಟರ್ ನಲ್ಲಿ ದಾಖಲಾಗಿರುವುದನ್ನು ಅಲ್ಲಿರುವ ಕೆಲವರೇ ಬಹಿರಂಗಪಡಿಸಿದ್ದರು.ಅಂದರೆ ಇವರು ಬಂದ ಮೇಲೆಯೂ ಅಕ್ರಮವಾಗಿ ಎ ಖಾತೆಗಳು ನೀಡಿದ್ದಾರೆನ್ನುವುದು ಸ್ಷಷ್ಟವಾಗಿತ್ತು.
ಮೌದ್ಗಿಲ್ ಸಾಹೇಬರ ಆದೇಶದಂತೆ ಅಕ್ರಮ ಎ ಖಾತೆಗಳನ್ನು ರದ್ದು ಮಾಡಬೇಕಿತ್ತಲ್ವಾ..ಆದರೆ ಯಾಕೆ ಹಾಗೆ ಅಧಿಕಾರಿಗಳು ಮಾಡಲಿಲ್ಲ.ಇವತ್ತಿಗು ಎಷ್ಟು ಸಂಖ್ಯೆಯ ಅಕ್ರಮ ಎ ಖಾತೆಗಳನ್ನು ರದ್ದು ಮಾಡಲಾಗಿದೆ ಎನ್ನುವುದಕ್ಕೆ ವಲಯ/ವಿಭಾಗ ಕಚೇರಿಯಲ್ಲು ಮಾಹಿತಿಯಿಲ್ಲ.ಮೌದ್ಗಿಲ್ ಅವರ ಬಳಿ ಅದನ್ನು ತಲುಪಿಸಿರುವುದು ಕೂಡ ಅನುಮಾನವೆ.ಇದನ್ನು ಗಮನಿಸಿದರೆ ಬಿ ಖಾತೆಗಳಿಗೆ ಎ ಖಾತೆಗಳನ್ನು ನೀಡುವ ಅಕ್ರಮ ಇವತ್ತಿಗೂ ಮುಂದುವರೆದಿದೆ.ಕಟ್ಟಡದ ಅಳತೆ ಮೇಲೆ ಅಧಿಕಾರಿಗಳು ಹಣ ಲೂಟಿ ಮಾಡುತ್ತಿರುವುದು ಕೂಡ ಮುಂದುವರೆದಿದೆ ಎಂದೇ ಹೇಳಲಾಗ್ತಿದೆ.ಇದನ್ನು ಪರಿಶೀಲಿಸುವ ಕೆಲಸ ಮನಿಷ್ ಸಾಹೇಬ್ರು ಮಾಡಿದ್ರೆ ಖದೀಮರೆಲ್ಲರೂ ಸಿಕ್ಕಿ ಬೀಳ್ತಾರೆ.
ಮೌದ್ಗಿಲ್ ಎತ್ತಂಗಡಿಗೆ ವ್ಯವಸ್ಥಿತ ಷಡ್ಯಂತ್ರ..?! ಮನಿಷ್ ಮೌದ್ಗಿಲ್ ಸಾಹೇಬ್ರು ಪಾಲಿಕೆ ಬೊಕ್ಕಸ ತುಂಬಿಸ್ಲಿಕ್ಕೆ ಏನೇನೋ ಹರಸಾಹಸ ಮಾಡ್ತಿದಾರೆ.ಆದರೆ ಅವರಿಗೆ ಬಿಬಿಎಂಪಿ ಆಡಳಿತ ಸಾಥ್ ಕೊಡ್ತಿಲ್ಲ ಎನ್ನುವುದೇ ದುರಂತ.ಇದರ ಬಗ್ಗೆ ಅವರಿಗೆ ವೈಯುಕ್ತಿಕವಾಗಿ ಬೇಸರವಿದೆ.ಹಾಗೆಂದು ನನ್ನ ಕೆಲಸ ಮುಗಿಸದೆ ಬಿಡೊಲ್ಲ ಎನ್ನುವ ಛಲ ಅವರದು. ಆದರೆ ಅವರಿಗೆ ಎದುರಾಗುತ್ತಿರುವ ವಿರೋಧ,ಅವರ ಬಗ್ಗೆ ಬಿಬಿಎಂಪಿಯಲ್ಲಿ ವ್ಯಕ್ತವಾಗುತ್ತಿರುವ ಅಸಮಾಧಾನ, ಅಸಹನೆ, ತನ್ನ ವಿರೋಧಿಗಳಿಗೆ ರಿಯಾಕ್ಟ್ ಮಾಡುತ್ತಿರುವ ರೀತಿಯನ್ನೆಲ್ಲಾ ಗಮನಿಸಿದ್ರೆ ಮೌದ್ಗಿಲ್ ಹೆಚ್ಚು ದಿನ ಬಿಬಿಎಂಪಿಯಲ್ಲಿ ಉಳಿಯುವಂಗೆ ಕಾಣ್ತಿಲ್ಲ ಎನ್ನಿಸುತ್ತೆ.
ಬಿಬಿಎಂಪಿಯಲ್ಲಿರುವ ಭ್ರಷ್ಟ ಆಡಳಿತ ವ್ಯವಸ್ಥೆ ಸರ್ಕಾರದ ಮಟ್ಟದಲ್ಲಿ ಅವರ ಎತ್ತಂಗಡಿಗೆ ಲಾಭಿ ನಡೆಸುತ್ತಿದೆ ಎನ್ನುವ ಮಾತಿದೆ.ಹಾಗಂತ ಮನಿಷ್ ಕೂಡ ಸುಮ್ಮನಾಗಿಲ್ಲ. ನಾನು ಇಲ್ಲಿಂದ ಹೋದ್ರೂ ಪರ್ವಾಗಿಲ್ಲ.ಆದ್ರೆ ಬಿಬಿಎಂಪಿಯಲ್ಲಿರುವ ಭ್ರಷ್ಟ ವ್ಯವಸ್ಥೆ ಮುಂದುವರೆಯೊಕ್ಕೆ ಬಿಡೊಲ್ಲ ಎನ್ತಿದಾರೆ.ಮನಿಷ್ ಅವರು ತೆಗೆದುಕೊಳ್ಳುತ್ತಿರುವ ಕೆಲವು ನಿರ್ದಾರ-ನಿಲುವುಗಳು ಸರ್ಕಾರಕ್ಕೂ ಮಾರಕವಾಗಬಹುದೆನ್ನುವ ಇಂಟಲಿಜೆನ್ಸ್ ರಿಪೋರ್ಟನ್ನು ಕೆಲವರು ಸರ್ಕಾರಕ್ಕೂ ನೀಡಿದ್ದಾರೆನ್ನುವ ಮಾತುಗಳಿವೆ. ಸಧ್ಯ ಸರ್ಕಾರದ ಅಂಗಳದಲ್ಲಿ ಚೆಂಡಿದೆ.ಸರ್ಕಾರ ಯಾವ್ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೋ ಕಾದುನೋಡಬೇಕಿದೆ.