ಬೆಂಗಳೂರು: ನಾನು ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅಲಿಯಾಸ್ ಡಿಕೆಶಿವಕುಮಾರ್ ..ರಾಜ್ಯದ ಉಪಮುಖ್ಯಮಂತ್ರಿಯಾಗಿ ದೇಶದ ಉಪಮುಖ್ಯ ಮಂತ್ರಿ..ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ..ಹೀಗೆಂದು ಪ್ರತಿಜ್ಞಾವಿದಿ ಸ್ವೀಕರಿಸುವ  ಸನ್ನಿವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.ಕರ್ನಾಟಕ ರಾಜಕೀಯದಲ್ಲಿ ವರ್ಣರಂಜಿತ ಮತ್ತು ವಿವಾದಾಸ್ಪದ ರಾಜಕಾರಣಿ ಎಂದೇ ಜನಜನಿತವಾದ ರಾಜಕಾರಣಿ ಡಿಕೆ ಶಿವಕುಮಾರ್  61 ವರ್ಷದಲ್ಲಿ ಬಹುಮತ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಅಂದ್ಹಾಗೆ ಇಂತದ್ದೊಂದು ಸ್ಥಾನಕ್ಕೇರುವ ಹಂತಗಳಲ್ಲಿ ಡಿ.ಕೆ ಶಿವಕುಮಾರ್ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.ಅದೊಂದು ತಪಸ್ಸು..ಅಗ್ನಿಪರೀಕ್ಷೆ.

ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ,ಪ್ರಸ್ತುತ ಕೆಪಿಸಿಸಿ  ಅಧ್ಯಕ್ಷ. ಕನಕಪುರದ ಶಾಸಕ. ಸಾತನೂರು ಹಾಗೂ ಕನಕಪುರದಿಂದ 8  ಬಾರಿ ಶಾಸಕರಾಗಿ ಆಯ್ಕೆಯಾದವರು( 1989,1994,1999,2004,2008,2013,2018,2023) ಈ ಬಾರಿಯ ಚುನಾವಣಾ ಇತಿಹಾಸದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ವಿಜಯಿಯಾಗಿ ದಾಖಲೆ ನಿರ್ಮಿಸಿದ ರಾಜಕಾರಣಿ.1999 ರಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ.2013 ರಲ್ಲಿ ಪಿಜಿ ಆರ್ ಸಿಂದ್ಯಾ ಮತ್ತು 2023 ರಲ್ಲಿ ಆರ್.ಅಶೋಕ್ ಅವರಂಥ ಘಟಾನುಘಟಿಗಳನ್ನು ಮಣಿಸಿದ ಹೆಗ್ಗಳಿಕೆ ಅವರದು.

ರಾಜ್ಯದ ಸಿಎಂ ಯಾರು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಗೆ ಪರ್ಯಾಯವಾಗಿ ಪ್ರಬಲವಾಗಿ ಕೇಳಿಬರುವ ಮಟ್ಟಿಗೆ ಬೆಳೆದ ಅನುಭವಿ ರಾಜಕಾರಣಿ,ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎರಡನೇ ಅವಧಿಗೆ ಸಿಎಂ ಆಗುವ ಅವಕಾಶವನ್ನು ಪಡೆದಿರುವ ಭಾವಿ ಮುಖ್ಯಮಂತ್ರಿ.

ಡಿಕೆ ಶಿವಕುಮಾರ್ ಕನಕಪುರದಲ್ಲಿ ಕೆಂಪೇಗೌಡ ಮತ್ತು ಗೌರಮ್ಮ, ದಂಪತಿ ಮಗನಾಗಿ  ಜನಿಸಿದರು .ಬೆಂಗಳೂರು ಗ್ರಾಮಾಂತರ ಸಂಸದ ಡಿಕೆಶಿವಕುಮಾರ್‌ ಇವರ ಸಹೋದರ. 1993 ರಲ್ಲಿ ಉಷಾ ರೊಂದಿಗೆ  ವಿವಾಹ. ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು,ಮಗ ಆಕಾಶ್ ಅವರನ್ನೊಳಗೊಂಡ ಸುಖೀ ಕುಟುಂಬ.ಹಿರಿಯ ಮಗಳು ಐಶ್ಚರ್ಯ ಕೆಫೆ ಕಾಫಿ ಡೇ ಸಂಸ್ಥಾಪಕ  ವಿ,ಜೆ ಸಿದ್ದಾರ್ಥ ಅವರ ಮಗ ಅಮರ್ತ್ಯ ಅವರ ಪತ್ನಿ.

1980 ರ ದಶಕದ ಆರಂಭದಲ್ಲಿ ರಾಜಕೀಯ ಆರಂಭಿಸಿದ್ದು ವಿದ್ಯಾರ್ಥಿ ನಾಯಕನ ಮೂಲಕ. ನಂತರ ಕಾಂಗ್ರೆಸ್ ನ ನಂಬಿಗಸ್ಥ ನಾಯಕನಾಗಿ ಬೆಳೆದರು. ಮೊದಲ ಬಾರಿಗೆ 1989 ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಡಿಕೆ ವಯಸ್ಸು ಕೇವಲ 27.ಗೆಲುವಿನ ಓಟವನ್ನು ನಿರಂತರವಾಗಿ ಮುಂದುವರೆಸಿದ ಶಿವಕುಮಾರ್ 1994, 1999 ಮತ್ತು 2004 ರ ನಂತರದ ವಿಧಾನಸಭಾ ಚುನಾವಣೆಗಳಲ್ಲಿ ವಿಜಯಿಯಾದರು, ಕ್ಷೇತ್ರ ಬದಲಾದಾಗ ಕನಕಪುರದಿಂದ 2008, 2013, 2018 ಮತ್ತು  2023 ರಲ್ಲಿ ವಿಜಯಿಯಾದರು.

ರಾಜ್ಯ ರಾಜಕಾರಣದಲ್ಲಷ್ಟೇ  ಅಲ್ಲ ಕೇಂದ್ರ ರಾಜಕಾರಣದಲ್ಲೂ ತಮ್ಮ ತಾಕತ್ತನ್ನು ಪ್ರದರ್ಶಿಸಿ ಪ್ರೂವ್ ಮಾಡಿದ ಹೆಗ್ಗಳಿಕೆ ಡಿಕೆಶಿವಕುಮಾರ್ ಅವರದು.ಮಾಜಿ ಕೆಂದ್ರ ಸಚಿವ ವಿಲಾಸರಾವ್‌ ದೇಶಮುಖ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು 2002 ರಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಡಿಕೆ ಶಿವಕುಮಾರ್ ಅವರು ಮತದಾನದ ದಿನಾಂಕದವರೆಗೆ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ಮಹಾರಾಷ್ಟ್ರದ ಶಾಸಕರಿಗೆ ಆತಿಥ್ಯ ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದರು.ಕಾಂಗ್ರೆಸ್ ಹೈಕಮಾಂಡ್ ದೃಷ್ಟಿಯಲ್ಲಿ ಆ ವೇಳೆ ಡಿಕೆಶಿ ಆಪದ್ಭಾಂಧವರಂತೆ ಗೋಚರಿಸಿದ್ದರು.

ಅಷ್ಟೇ ಅಲ್ಲ,2017 ರಲ್ಲಿ  ಗುಜರಾತ್‌ ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮೊದಲು , ಅವರು ಮತ್ತೊಂದು ರಾಜಕೀಯ ಪಕ್ಷಕ್ಕೆ ಹೋಗುವುದನ್ನು ತಪ್ಪಿಸಲು 42 ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ತಮ್ಮ ಪಕ್ಷದ ನಾಯಕತ್ವಕ್ಕೆ ಸಹಾಯ ಮಾಡಿದರು. ತರುವಾಯ, ಇದು ಅಹಮದ್‌ ಪಟೇಲ್‌ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು. 2018ರ ಚುನಾವಣೆ ನಂತರ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ  ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಇದೇ ಡಿಕೆ ಶಿವಕುಮಾರ್.

ಡಿಕೆಶಿವಕುಮಾರ್ ಕೇವಲ ಯಶಸ್ವಿ ರಾಜಕಾರಣಿ ಮಾತ್ರವಲ್ಲ ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. 2018 ರಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು ಒಟ್ಟು  840 ಕೋಟಿ ಆಸ್ತಿಯನ್ನು ಘೋಷಿಸಿದ್ದರು.ಈ ಬಾರಿಯ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ ರಾಜಕಾರಣಿ ಕೂಡ ಇವರೇ..

ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಚುಕ್ಕಾಣಿ ಹಿಡಿದವರು ಡಿಕೆಶಿವಕುಮಾರ್.ದಿನೇಶ್ ‍ಗುಂಡೂರಾವ್ ಅವರ ಉತ್ತರಾಧಿಕಾರಿಯಾಗಿ 2020 ರಂದು ಅಧಿಕಾರ ಸ್ವೀಕರಿಸಿದರು.  ಈ ಅವದಿಯಲ್ಲಿ ಕಾಲಿಗೆ ಚಕ್ರ ಹಾಕ್ಕೊಂಡು ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಸೃಷ್ಟಿಸಿ ಆಕ್ಸಿಜನ್ ಆದವರು ಡಿಕೆಶಿವಕುಮಾರ್.ಅಂದಿನಿಂದ ಅವರ ಪರಿಶ್ರಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಯಿತು.

ಡಿಕೆಶಿ ತಮ್ಮ  ರಾಜಕೀಯ ಜೀವನದಲ್ಲಿ ನಿರ್ವಹಿಸಿದ ಹುದ್ದೆ- ಸ್ಥಾನಮಾನಗಳನ್ನು ಗಮನಿಸಿದಾಗ  1989 – 1994- ಕಾರಾಗೃಹಗಳು ಮತ್ತು ಗೃಹರಕ್ಷಕರ ಸಚಿವರು ( 17 ಅಕ್ಟೋಬರ್ 1990 – 19 ನವೆಂಬರ್ 1992 ),1994 – 1999- ನಗರಾಭಿವೃದ್ಧಿ ಸಚಿವರು ( 11 ಅಕ್ಟೋಬರ್ 1999 – 20 ಮೇ 2004 ),2008 – 2013, ಕೆಪಿಸಿಸಿ ಕಾರ್ಯಾಧ್ಯಕ್ಷ ( 2008-2010 ),2013 – 2018- ಇಂಧನ ಸಚಿವರು ( 11 ಜುಲೈ 2014 – 19 ಮೇ 2018 ),2018 – 2023- ಪ್ರಮುಖ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ( 23 ಮೇ 2018 – 23 ಜುಲೈ 2019 ) ಕೆಲಸ ಮಾಡಿದ್ದಾರೆ.ಜುಲೈ 2,2020 ರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *

You missed

Flash News